Home Blog Page 2

ಅಕ್ರಮ ಆಸ್ತಿ ಗಳಿಕೆ ಆರೋಪ: ಮಾಜಿ ಸಚಿವ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ FIR ದಾಖಲು!

ಶಿವಮೊಗ್ಗ:- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪುತ್ರ ಹಾಗೂ ಸೊಸೆ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ, ಪುತ್ರ ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧ ಭ್ರಷ್ಟಚಾರ ಕಾಯ್ದೆಯಡಿ ಕೇಸ್ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈಶ್ವರಪ್ಪ ಹಾಗೂ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ವಿನೋದ್ ಎಂಬವರು ಖಾಸಗಿ ದೂರು ದಾಖಲಿಸಿದ್ದಾರೆ.

ಖಾಸಗಿ ದೂರಿನ ಅನ್ವಯ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆ ಬಳಿಕ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ಆಗಿದೆ. ಪ್ರಕರಣದ ಬೆನ್ನಲ್ಲೇ ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.

ಏನಿದು ಘಟನೆ:

ಈ ಹಿಂದೆ ಕೆ ಎಸ್ ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದ ಆರೋಪದಡಿ ಪ್ರಕರಣ ದಾಖಲಾಗಿತ್ತು. ವಿನೋದ್ ಅವರು 2016ರಲ್ಲಿ ಸಲ್ಲಿಸಿದ್ದ ಖಾಸಗಿ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿತ್ತು. ವಜಾ ಆದೇಶವನ್ನು ಪ್ರಶ್ನಿಸಿ ವಿನೋದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದೂರಿನ ಮರು ಪರಿಶೀಲನೆಗೆ ಆದೇಶ ಹೊರಡಿಸಿತ್ತು.

ಲೈಂಗಿಕ ಕಿರುಕುಳ: ಚಿಪ್ಸ್ ತರಲು ಅಂಗಡಿಗೆ ತೆರಳಿದ್ದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ!

ಬೆಂಗಳೂರು:- ನಗರದ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಪ್ಸ್ ಖರೀದಿಸಲು ಅಂಗಡಿಗೆ ತೆರಳಿದ್ದ 7 ವರ್ಷದ ಬಾಲಕಿಯ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಜರುಗಿದೆ.

ಕೇರಳ ಮೂಲದ 20 ವರ್ಷದ ಆರೋಪಿ ಕೃತ್ಯ ಎಸಗಿದವ. ಈತ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಅಂಗಡಿಗೆ ಬಾಲಕಿ ಚಿಪ್ಸ್ ಖರೀದಿಸಲು ತೆರಳಿದ್ದಳು. ಈ ವೇಳೆ ಗೋಡೌನ್‌ನಲ್ಲಿ ಚಿಪ್ಸ್ ಕೊಡುವುದಾಗಿ ತಿಳಿಸಿ ಆಕೆಯನ್ನು ಕರೆದುಕೊಂಡು ಹೋಗಿದ್ದ. ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ.

ಸದ್ಯ ಈ ಸಂಬAಧ ಬಾಲಕಿ ಪೋಷಕರು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ತಾಂತ್ರಿಕ ಸಮಸ್ಯೆ: ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್!

ಶಿವಮೊಗ್ಗ:- ತಾಂತ್ರಿಕ ಸಮಸ್ಯೆಯಿಂದ ಶರಾವತಿ ಹಿನ್ನೀರಿನ ನಡುವೆ ಲಾಂಚ್ ಕೆಟ್ಟು ನಿಂತಿರುವ ಘಟನೆ ಶರಾವತಿ ಹಿನ್ನೀರಿನ ಪ್ರದೇಶದ ಹೊಳೆಬಾಗಿಲಿನಲ್ಲಿ ಗುರುವಾರ ಜರುಗಿದೆ.

ನೂರಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಾಹನಗಳನ್ನು ಲಾಂಚಿನಲ್ಲಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಸೇತುವೆ ಕಾಮಗಾರಿಗೆ ಬಂದಿದ್ದ ಲಾಂಚ್ ಮೂಲಕ ಹಗ್ಗ ಕಟ್ಟಿ ಕೆಟ್ಟು ನಿಂತಿದ್ದ ಲಾಂಚ್‍ನ್ನು ದಡಕ್ಕೆ ತರಲಾಯಿತು.

ಮತ್ತೊಂದು ಲಾಂಚ್ ಹೋಗಲು ಸ್ವಲ್ಪ ತಡವಾಗುತ್ತಿದ್ದರು ಸಹ ಕೆಟ್ಟ ನಿಂತಿದ್ದ ಲಾಂಚ್ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಸೇತುವೆಯ ಪಿಲ್ಲರ್‌ಗೆ ಲಾಂಚ್ ಡಿಕ್ಕಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಕೊಟ್ಟ ಸಾಲ ವಾಪಸ್‌ ಕೇಳೋದು ತಪ್ಪಾ? ಮನೆಗೆ ಬೆಂಕಿ ಹಚ್ಚಿದ ಆಸಾಮಿ!

ಬೆಂಗಳೂರು:- ಬೆಂಗಳೂರಿನ ವಿವೇಕ್ ನಗರದಲ್ಲಿ ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮನೆಗೆ ಬೆಂಕಿ ಹಚ್ಚಿದ ಘಟನೆ ಜರುಗಿದೆ.

ಸುಬ್ರಮಣಿ ಬೆಂಕಿ ಹಚ್ಚಿದ ಆರೋಪಿ. ಜು.1 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೆಂಕಟರಮಣಿ ಎಂಬವರ ಬಳಿ ಆರೋಪಿಯ ಸಹೋದರಿ ತನ್ನ ಮಗಳ ಮದುವೆಗಾಗಿ, 5 ಲಕ್ಷ ರೂ. ಹಣ ಪಡೆದಿದ್ದಳು. ಹಣ ಪಡೆದು ಹಲವು ವರ್ಷಗಳಾದರೂ ಹಣ ವಾಪಸ್‌ ನೀಡಿರಲಿಲ್ಲ. ಇದರಿಂದ ವೆಂಕಟರಮಣಿ ಹಣ ವಾಪಸ್‌ ಕೊಡುವಂತೆ ಕೇಳಿದ್ದರು.

ಹಣ ವಾಪಸ್‌ ಕೇಳಿದ್ದಕ್ಕೆ ಪಾರ್ವತಿ ಹಾಗೂ ಆಕೆಯ ಮಗಳು ವೆಂಕಟರಮಣಿಯವರ ಬಳಿ ಗಲಾಟೆ ಮಾಡಿದ್ದಾರೆ. ಇನ್ನೂ ಇದೇ ವಿಚಾರಕ್ಕೆ ಸಿಟ್ಟಾದ ಆರೋಪಿ, ವೆಂಕಟರಮಣಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ವೆಂಕಟರಮಣಿ ಪುತ್ರ ವಿವೇಕ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ರೆಡ್ ಅಲರ್ಟ್ ಘೋಷಣೆ!

ಬೆಂಗಳೂರು:- ಕರ್ನಾಟಕದ ಹಲವೆಡೆ ಇಂದು ಭಾರೀ ಮಳೆ ಆಗಲಿದ್ದು, ಆರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದ್ದು, ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ. ಬೆಳಗಾವಿ,ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಧಾರವಾಡಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಗುರುವಾರ ಅಲ್ಲಲ್ಲಿ ಮಳೆಯಾಗಿದೆ. ಎಚ್​ಎಎಲ್​​ನಲ್ಲಿ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,ನಗರದಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಗುತ್ತಿಗೆದಾರ ಶಿವಾನಂದ್ ಕುನ್ನೂರು ಕೊಲೆಗೆ ಟ್ವಿಸ್ಟ್: ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಜೈಲು ಪಾಲಾದ ಪೊಲೀಸ್!

ಹಾವೇರಿ:- ಇಲ್ಲಿನ ಗಂಗೀಭಾವಿ ಕ್ರಾಸ್ ಬಳಿ ಜೂ. 24ರಂದು ನಡೆದಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಪೊಲೀಸ್ ಪೇದೆ ಜೈಲು ಪಾಲಾಗಿದ್ದಾರೆ. ಪ್ರಕರಣದ A1 ಆರೋಪಿ ನಾಗರಾಜ್ ಮನೆಗೆ ಬೆಂಕಿಯಿಟ್ಟ ಆರೋಪ ಮೇಲೆ ಪೊಲೀಸ್‌ ಪೇದೆಯನ್ನು ಬಂಧಿಸಲಾಗಿದೆ.

ಕೊಲೆಯಾದ ಶಿವಾನಂದ ಅಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಲಿಂಗರಾಜ ಕುನ್ನೂರನ್ನ ಶಿಗ್ಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿ ಲಿಂಗರಾಜ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಿದಂತಾಗಿದೆ. ಲಿಂಗರಾಜ್ ಅವರು, ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹತ್ಯೆ ಬಳಿಕ ಆರೋಪಿ ಮನೆಗೆ ಬೆಂಕಿಯಿಡಲು ಲಿಂಗರಾಜ್ ಪ್ರಚೋದಿಸಿದ್ದರು. ಈ ಹಿನ್ನೆಲೆ ತಡರಾತ್ರಿ ಒಟ್ಟು 9 ಜನರನ್ನ ಶಿಗ್ಗಾವಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಲಿಂಗರಾಜ್ ಕುನ್ನೂರು, ನವೀನ್ ಹೊಸಮನಿ, ಧರ್ಮಪ್ಪ, ಪ್ರಕಾಶ್, ಬಂಧಿತರು. ಒಟ್ಟು 6 ಜನರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ 3 ಜನರಿಗೆ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ: ಶಿಗ್ಗಾಂವಿ ಪಟ್ಟಣದ ಹೊರವಲಯದ ಗಂಗಿಭಾವಿ ಕ್ರಾಸ್ ಬಳಿ ಜೂನ್ 24ರ ಮಂಗಳವಾರ ಗುತ್ತಿಗೆದಾರ ಶಿವಾನಂದ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ವಿಡಿಯೋ ವೈರಲ್​ ಆಗಿತ್ತು. ಅದನ್ನು ಆಧರಿಸಿ ಶಿವಾನಂದ ಅವರ ಪತ್ನಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ‌ ಐವರ ವಿರುದ್ಧ ದೂರು ದಾಖಲಿಸಿದ್ದರು.

ಶಾಲಿನಿ ರಜನೀಶ್ ಬಗ್ಗೆ ಗೌರವ ಇದೆ.. ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ತೇನೆ: ರವಿಕುಮಾರ್‌

ಬೆಂಗಳೂರು:- ಶಾಲಿನಿ ರಜನೀಶ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಎನ್ ರವಿಕುಮಾರ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,  ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ನಾನು ಯಾವುದೇ ಅವಹೇಳನಕಾರಿಯಾಗಿ ಹೇಳಿಕೆ ನೀಡಿಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿದರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಮುಖ್ಯ ಕಾರ್ಯದರ್ಶಿಯವರು ಅವರು 24 ಗಂಟೆ ಬ್ಯುಸಿ ಇದ್ದಾರೆ. ಹಾಗಾಗಿ ಅವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದೆ. ಹಗಲಲ್ಲಿ ಸಿಎಂ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾರೆ, ರಾತ್ರಿಯೆಲ್ಲ ಸರ್ಕಾರದ ಕೆಲಸ ಮಾಡ್ತಾರೆ ಅಂದೆ. ಇದರೊಳಗೆ ಏನು ತಪ್ಪಿದೆ? ನಾನು ಅವಾಚ್ಯ ಶಬ್ಧ ಬಳಸಿಲ್ಲ ಎಂದು ತಿಳಿಸಿದರು.

ಅವಾಚ್ಯ ಶಬ್ಧ ಬಳಸಿದರೆ ಕಾಂಗ್ರೆಸ್‌ನವರು ಬಹಿರಂಗಪಡಿಸಲಿ. ನನಗೂ ನನ್ನ ಮನೆಯಲ್ಲಿ ಸಹೋದರಿಯರು ಇದ್ದಾರೆ. ಯಾರ ಜತೆ ಹೇಗೆ ಮಾತನಾಡಬೇಕೆಂಬ ಪರಿಜ್ಞಾನ ಇದೆ. ಮುಖ್ಯ ಕಾರ್ಯದರ್ಶಿಗೆ ಆ ರೀತಿ ಮಾತನಾಡಲು ಸಾಧ್ಯಾನಾ? ಯಾರಿಗೇ ಆಗಲೀ ಆಥರ ಮಾತಾಡೋದು ಸಾಧ್ಯನಾ? ಅವಾಚ್ಯ ಶಬ್ಧ ಇದ್ದರೆ ನೇಣು ಹಾಕಿಕೊಳ್ತೇನೆ. ನನ್ನ ವಿರುದ್ಧ ದ್ವೇಷದಿಂದ ಕಾಂಗ್ರೆಸ್‌ನವರು ದೂರು ಕೊಟ್ಟಿದ್ದಾರೆ ಎಂದು ರವಿಕುಮಾರ್ ಸ್ಪಷ್ಟ ಪಡಿಸಿದರು.

ಭೂರಮೆಯ ಸ್ವರ್ಗ ಕಪ್ಪತ್ತಗುಡ್ಡ

‘ಎಪ್ಪತ್ತು ಗಿರಿ ಸುತ್ತುವುದಕ್ಕಿಂತ ಕಪ್ಪತ್ತಗಿರಿ ಸುತ್ತುವುದು ಮೇಲು’, ‘ಕಣ್ಣಿದ್ದವನು ಕನಕಗಿರಿ ನೋಡಬೇಕು, ಕಾಲಿದ್ದವನು ಕಪ್ಪತ್ತಗುಡ್ಡ ನೋಡಬೇಕು’ ಎನ್ನುವ ಹಲವಾರು ನುಡಿಗಟ್ಟುಗಳು ಕಪ್ಪತ್ತಗಿರಿ ಕುರಿತು ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿವೆ. ಇಂತಹ ಕಪ್ಪತ್ತಗುಡ್ಡವೀಗ ಮುಂಗಾರು ಮಳೆಯ ಸಿಂಚನದಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದು ಪ್ರವಾಸಿಗರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.

ಬೀಸುವ ತಂಗಾಳಿ ಚದುರುತ್ತಿರುವ ಮೋಡಗಳನ್ನು ಇನ್ನೇನು ಓಡಿಸಿಕೊಂಡು ಹೋಗುವಂತಿದೆ. ಶ್ವೇತಮೋಡಗಳ ನಡುವೆ ಹಚ್ಚಹಸಿರ ಪರ್ವತ ಕಣ್ಮನ ಸೆಳೆಯದೇ ಇರದು. ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿರುವ ಈ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿ. ಹೀಗಾಗಿಯೇ ವಾಯು ವಿಹಾರಕ್ಕೂ ಈ ತಾಣ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ. ಪರಿಶುದ್ಧ ಗಾಳಿ ಬೀಸುವ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಎಲ್ಲ ಕಾರಣಗಳಿಂದ ಕಪ್ಪತ್ತಗಿರಿಯನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲಾಗುತ್ತದೆ.

ಈ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನಜ್ಞಾನ ದಾಸೋಹ ಮಠವಿದೆ. ಈ ಮಠವು ದಕ್ಷಿಣ ಸಸ್ಯಕಾಶಿಯೆಂದು ಪ್ರಖ್ಯಾತ. ಕಪ್ಪತ್ತಗುಡ್ಡವು ಅಪಾರ ಖನಿಜ, ನೈಸರ್ಗಿಕ ಸಂಪತ್ತು ಹೊಂದಿದೆ. ಈ ಪ್ರದೇಶವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ. ಒಟ್ಟಾರೆ 17,872 ಹೆಕ್ಟೇರ್ ಇರುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟೇರ್‌ಗಳಷ್ಟು ಪ್ರದೇಶವನ್ನು ಹಂಚಿಕೊಂಡಿದೆ.

ಕಪ್ಪತಗುಡ್ಡಕ್ಕೆ ಗದಗ ಮಾತ್ರವಲ್ಲದೇ ಕೊಪ್ಪಳ, ಬಳ್ಳಾರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೇರಳ, ಮಡಿಕೇರಿ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುತ್ತಿದ್ದ ಜನ ಈಗೀಗ ಕಪ್ಪತಗುಡ್ಡಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಮಳೆ ಉತ್ತಮವಾಗಿ ಆಗುತ್ತಿರುವ ಕಾರಣ ಕಪ್ಪತಗುಡ್ಡ ಯಾವುದೇ ಗಿರಿಶಿಖರಗಳ ತಾಣಕ್ಕೂ ಕಡಿಮೆ ಇಲ್ಲದಂತೆ ಹಸಿರಿನಿಂದ ಕಂಗೊಳಿಸುತ್ತಿದೆ.

ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಅತೀ ಹೆಚ್ಚು ಆಯುರ್ವೇದಿಕ್ ಗಿಡಗಳನ್ನು ಹೊಂದಿರುವ ಕಾರಣಕ್ಕಾಗಿ ಇಲ್ಲಿಗೆ ಬಂದು ಹೋದರೆ ಸಾಕು, ಯಾವ ದವಾಖಾನೆನೂ ಬೇಡ ಎಂಬ ಪ್ರತೀತಿ ಇದೆ.

`ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲೆ’ ಎಂಬುದು ಸ್ಕಂದ ಪುರಾಣದಲ್ಲಿನ ಉಲ್ಲೇಖ. ಅಂದರೆ ಎಪ್ಪತ್ತು ಗಿರಿಗಳಲ್ಲಿ ಸಿಗದ ಔಷಧಿ ಗಿಡಮೂಲಿಕೆಗಳು ಕಪ್ಪತ್ತಗುಡ್ಡ ಒಂದರಲ್ಲೇ ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು ಹೇಳುತ್ತಾರೆ. ಗಿಡಮೂಲಿಕೆಗಳನ್ನು ಅರಸಿ ವರ್ಷವಿಡೀ ಇಲ್ಲಿಗೆ ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಾರೆ.

ಲಕ್ಷಾಂತರ ಸಸಿಗಳ ಪಾಲನೆ-ಪೋಷಣೆ ಮಾಡುವ ಮೂಲಕ ಸಾವಿರಾರು ಹೆಕ್ಟೇರ್ ಈ ಪ್ರದೇಶದಲ್ಲಿ ದೈವೀವನ, ನೆಡುತೋಪುಗಳು ಮತ್ತು ರಸ್ತೆ ಬದಿ ಮರ ಬೆಳಸುವುದು, ಶಾಲಾವನ, ಮಗುವಿಗೊಂದು ವನ ನಿರ್ಮಾಣ ಮಾಡುವುದು ಸೇರಿದಂತೆ ‘ಹಸಿರು ಹೊನ್ನು- ಹಸಿರು ಉಸಿರು’ ಯೋಜನೆ ಜಾರಿಗೊಳಿಸಿ ಕಪ್ಪತ್ತಗುಡ್ಡದ ಆಪತ್ತುನ್ನು ದೂರಗೊಳಿಸುವ ಕಾಲ ಸನ್ನಿಹಿತವಾಗುತ್ತಿರುವುದು ಸಂತಸದ ಸಂಗತಿ.

ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ಸುಮಾರು 32,346 ಹೆಕ್ಟೇರ್‌ಗಳನ್ನು ಒಳಗೊಂಡಿದೆ ಮತ್ತು ಜಲ ಪ್ರದೇಶಗಳು, ಕಾಡುಗಳು, ಪೊದೆಗಳು ಮತ್ತು ಹುಲ್ಲುಗಾವಲುಗಳು ಸೇರಿದಂತೆ ವಿವಿಧ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ. ಇದು ಲಂಗೂರ್‌ಗಳು, ಜಿಂಕೆಗಳು, ಕಾಡು ಬೆಕ್ಕುಗಳು, ಪಕ್ಷಿಗಳು, ಕೃಷ್ಣಮೃಗಗಳು, ಚುಕ್ಕೆ ಜಿಂಕೆಗಳು, ಬೊಗಳುವ ಜಿಂಕೆಗಳು, ಚಿರತೆಗಳು, ಭಾರತೀಯ ತೋಳಗಳು ಮತ್ತು ಪಟ್ಟೆ ಹೈನಾಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಲಾಗುತ್ತದೆ.

ಕೊನೆಯದಾಗಿ, ಕಪ್ಪತ್ತಗುಡ್ಡವು ಪ್ರವಾಸಿತಾಣ ವ್ಯಾಪ್ತಿಗೆ ಒಳಪಟ್ಟರೆ ಅದು ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯಕ್ಕೆ ರಹದಾರಿ ಮಾಡಿಕೊಟ್ಟಂತಾಗುತ್ತದೆ. ಪರಿಸರ ಸೂಕ್ಷ್ಮ ವಲಯಗಳು ಮಾನವನ ಹಸ್ತಕ್ಷೇಪದಿಂದ ದೂರವಿದ್ದಷ್ಟು ಒಳಿತು. ಕಪ್ಪತ್ತಗುಡ್ಡವನ್ನು ಪ್ರವಾಸಿತಾಣವನ್ನಾಗಿ ಮಾಡಿದರೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿನ ಪ್ರಾಣಿ ಸಂಕುಲ ಭಯದಿಂದ ನಾಡು ಸೇರಿ ಜನರ ಜೀವನದ ಅಸ್ತಿತ್ವಕ್ಕೆ ಧಕ್ಕೆ ಬರಬಹುದು ಹಾಗೂ ಪ್ಲಾಸ್ಟಿಕ್ ಮತ್ತು ಮತ್ತಿತರ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹಾಗೂ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಯಥಾರೀತಿ ಕಾಯ್ದುಕೊಳ್ಳಬೇಕು ಎಂಬುದು ಪರಿಸರ ಪ್ರಿಯರ ಕಾಳಜಿಯಾಗಿದೆ.

– ಬಸವರಾಜ ಎಮ್.ಯರಗುಪ್ಪಿ.

ಲಕ್ಷ್ಮೇಶ್ವರ

(ಮಾಹಿತಿ ಕೃಪೆ: ಅರಣ್ಯ, ಪ್ರವಾಸೋದ್ಯಮ ಇಲಾಖೆ)

ಅತಿಯಾದ ಮೊಬೈಲ್ ಬಳಕೆ ತಪ್ಪಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರ ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಅತಿಯಾದ ಮೊಬೈಲ್ ದುರ್ಬಳಕೆಯಿಂದ ಬದುಕು ಬೀದಿಗೆ ಬೀಳುವುದು ನಿಶ್ಚಿತ. ಇದನ್ನರಿತು ವಿದ್ಯಾರ್ಥಿಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಇಂದು ಅತ್ಯವಶ್ಯವಿದೆ ಎಂದು ಹಿರಿಯ ಶಿಕ್ಷಕ ಎಂ.ಐ. ಶಿವನಗೌಡ್ರ ಅಭಿಪ್ರಾಯಪಟ್ಟರು.

ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಪುಸ್ತಕದ ಮಹತ್ವ ಹಾಗೂ ಮೊಬೈಲ್ ಬಳಕೆ ಮತ್ತು ದುರ್ಬಳಕೆಯ ಬಗ್ಗೆ ಹೊರತಂದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪುಸ್ತಕದೊಂದಿಗೆ ನಿರಂತರ ತಮ್ಮ ಸ್ನೇಹ ಇರಲಿ. ಓದುವ ಹವ್ಯಾಸ ರೂಢಿ ಮಾಡಿಕೊಳ್ಳಿ. ಪುಸ್ತಕ ಹೇಳುತ್ತದೆ-ತಲೆ ತಗ್ಗಿಸಿ ನನ್ನನ್ನು ನೋಡು, ನಾನು ಸದಾ ತಲೆ ಎತ್ತುವಂತೆ ಮಾಡುತ್ತೇನೆ. ಮೊಬೈಲ್ ಹೇಳುತ್ತದೆ-ತಲೆ ತಗ್ಗಿಸಿ ನನ್ನನ್ನು ಒಮ್ಮೆ ನೋಡು, ಮತ್ಯಾವತ್ತೂ ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ. ಇಂತಹ ಸಂದೇಶವುಳ್ಳ ಕಿರುಪತ್ರವನ್ನು ಇಂದು ಶಾಲೆಯಲ್ಲಿ ಪ್ರತಿ ಕೋಣೆಗೆ ಅಂಟಿಸಲಾಗಿದೆ. ದಿನಕ್ಕೆ ಒಂದು ಬಾರಿಯಾದರೂ ಈ ಸಂದೇಶವನ್ನು ಮೆಲುಕು ಹಾಕಿದರೆ ನಿಮ್ಮ ಜೀವನ ಯಶಸ್ವಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಂಕ್ರಮ್ಮ ಆರ್.ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿ ಜೀವನವೆಂದರೆ ಸುವರ್ಣಕಾಲ. ಇದರ ಸದುಪಯೋಗವನ್ನು ಮಾಡಿಕೊಂಡು ಬಂಗಾರದಂತಹ ಬದುಕನ್ನು ಕಟ್ಟಿಕೊಳ್ಳಲು ಇದು ಅತ್ಯಂತ ಮಹತ್ವದ ಕಾಲಘಟ್ಟ. ಈ ಶಾಲೆಯಲ್ಲಿ ನಿಮಗೆ ಉತ್ತಮ ಶೈಕ್ಷಣಿಕ ವಾತಾವರಣನ್ನು ಕಲ್ಪಿಸಲಾಗಿದೆ. ಈ ಕರಪತ್ರಗಳು ತಮ್ಮ ಬದುಕಿನ ಪಥವನ್ನು ಬದಲಿಸಲಿ ಎಂದು ಹೇಳಿದರು.

ಅಣ್ಣಿಗೇರಿ ಆಶ್ರಮದಿಂದ ನಿತ್ಯ ಅಕ್ಷರ ದಾಸೋಹ

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು. ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ನಿತ್ಯ ಅನುಭವಿಕ ಶಿಕ್ಷಕ ತಂಡದಿಂದ ‘ಅಕ್ಷರ ದಾಸೋಹ’ ನಡೆದಿರುವದು ಅಭಿನಂದನೀಯ ಎಂದು ಗದುಗಿನ ಹಿರಿಯ ತೆರಿಗೆ ಸಲಹೆಗಾರರಾದ ಮುಕುಂದ ಪೋತ್ನೀಸ್ ಹೇಳಿದರು.

ಅವರು ಗುರುವಾರ ಗದಗ ತಾಲೂಕಿನ ಅಂತೂರಬೆಂತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ಗದುಗಿನಲ್ಲಿ ತಾವಿದ್ದ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳುವ ಪರಿಪಾಠವಿಟ್ಟುಕೊಂಡವರು. ಈ ಟ್ಯೂಶನ್ ಹೇಳುವ ಸುದ್ದಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕಾಲಕ್ರಮೇಣ ಅದು ಗುರುಕುಲ ಮಾದರಿಯಲ್ಲಿ ಬೆಳೆದು ಬಂತು. ಅವರ ತರುವಾಯ ಅವರ ಶಿಷ್ಯರು ಈ ಗುರುಕುಲವನ್ನು ಪ್ರಗತಿಪಥದಲ್ಲಿ ಮುನ್ನಡೆಸಿಕೊಂಡು ಬಂದಿರುವದು ಶ್ಲಾಘನೀಯ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಆರ್.ಡಿ. ಜೋಶಿ ವಹಿಸಿದ್ದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಸಹಾಯಕರಾದ ನೇಹಾ, ಸುಧಾರಾಣಿ, ಗ್ರಾಮದ ಗಣ್ಯರಾದ ನಿಂಗಪ್ಪ ಮ್ಯಾಗೇರಿ ಉಪಸ್ಥಿತರಿದ್ದರು.

ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಈಶ್ವರಿ ದೊಡ್ಡಗೌಡ್ರ, ಸಂಜನಾ ಗಾಣಿಗೇರ, ಸಾಕ್ಷೀ ಜನಗೊಣ್ಣವರ, ದೀಪಾ ಯಂಗಾಡಿ, ಯಶೋದಾ ಬಾವಿಕಟ್ಟಿ ಅವರುಗಳಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಲಾಯಿತು. ಶಿಕ್ಷಕ ಪಿ.ಸಿ. ಸೊಲಬಣ್ಣವರ ಸ್ವಾಗತಿಸಿ ವಂದಿಸಿದರು.

ಹುಲಕೋಟಿಯಲ್ಲಿ: ಹುಲಕೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ಹಿರೇಮಠ, ಅಪೂರ್ವ ಲಕ್ಷ್ಮೇಶ್ವರ, ಪವಿತ್ರಾ ಅಕ್ಕಿ, ಸಪ್ನಾ ಕಲಾಲ, ಮಧು ಬಳ್ಳಾರಿ ಅವರುಗಳಿಗೆ ಅವರುಗಳಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಎಸ್.ಎ. ಖಾನ್ ವಹಿಸಿದ್ದರು. ಯೋಗೇಶ್‌ಕುಮಾರ ಸ್ವಾಗತಿಸಿದರು, ಪಿ.ಪಿ. ಟಿಕಾರೆ ನಿರೂಪಿಸಿದರು. ಕೊನೆಗೆ ಎಸ್.ಎಚ್. ಮುಲ್ಲಾ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಸಿದ್ದು ಕವಲೂರ, ತೋಂಟೇಶ ವೀರಲಿಂಗಯ್ಯನಮಠ, ಭಾರತಿ ಪಾಟೀಲ ನೇಹಾ, ಸುಧಾರಾಣಿ, ಅನ್ನಪೂರ್ಣ ಹಿತ್ತಲಮನಿ ಮುಂತಾದವರಿದ್ದರು.

ಇಂದಿನ ಕಾರ್ಯಕ್ರಮ

ಜುಲೈ 4ರಂದು ಮುಂಜಾನೆ 10.30 ಗಂಟೆಗೆ ಗದಗ ತಾಲೂಕಿನ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಮಧ್ಯಾಹ್ನ 12 ಗಂಟೆಗೆ ಯಲಿಶಿರೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಮಧ್ಯಾಹ್ನ 1.30 ಗಂಟೆಗೆ ಶಿರುಂಜ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರವಿದೆ.

ನಾಳೆಯ ಕಾರ್ಯಕ್ರಮ

ಜುಲೈ 5ರಂದು ಮುಂಜಾನೆ 10.30 ಗಂಟೆಗೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ 12 ಗಂಟೆಗೆ ಹಾತಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ತಿಳಿಸಿದ್ದಾರೆ.

error: Content is protected !!