Home Blog Page 179

16.8 ಲಕ್ಷ ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

0

ರಾಮನಗರ: ಜಿಲ್ಲೆಯಲ್ಲಿ ನಡೆದ ಸರಣಿ ಚಿನ್ನದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 16.8 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗಲ್ ದೇವಸ್ಥಾನದ ಬಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ತಕ್ಷಣವೇ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.

ತನಿಖೆಯಲ್ಲಿ ಆರೋಪಿಗಳು ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಕೆಂಗಲ್ ದೇವಾಲಯದ ಬಳಿಯ ಕೃತ್ಯವೂ ಇದೇ ಸರಣಿಯ ಭಾಗವಾಗಿದ್ದು, ಆರೋಪಿಗಳು ಕಳ್ಳತನ ನಡೆಸಿ ಎಸ್ಕೇಪ್ ಆಗಿದ್ದರು.

ಬಂಧಿತರಿಂದ 120 ಗ್ರಾಂ ಚಿನ್ನದ ಗಟ್ಟಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯೊಂದಿಗೆ ನಾಲ್ಕು ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ.

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್: ಹತ್ತು ಮಂದಿ ವಿರುದ್ಧ ದೂರು

0

ಹಾಸನ: ಜಿಲ್ಲೆಯಲ್ಲಿ ಆಸ್ತಿ ವಿವಾದದ ಹಿನ್ನೆಲೆ ಸಾರಿಗೆ ಇಲಾಖೆ ನೌಕರ ವೀರಪ್ಪರನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹತ್ತು ಮಂದಿಗೆ ವಿರುದ್ಧ ಪ್ರಕರಣ ದಾಖಲಾಗಿದೆ.

ವೀರಪ್ಪ ಅವರ ಪುತ್ರ ವಿವೇಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರನ್ವಯ ಮಲ್ಲಮ್ಮ, ಮಹದೇವಮ್ಮ, ಹರೀಶ, ಲೋಕೇಶ, ಮಹದೇವ, ಬಾಗಲಯ್ಯ, ಸತೀಶ, ಜಯರಾಮ, ಧರ್ಮ ಮತ್ತು ಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ಆಸ್ತಿ ವಿಚಾರವಾಗಿ ನಡೆದ ತೀವ್ರ ಕಲಹವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ವೀರಪ್ಪ ಅವರ ಮೃತದೇಹ ಸಂಪೂರ್ಣವಾಗಿ ಸುಟ್ಟು ಹೋಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆಯನ್ನು ನೀಡಿದೆ.

ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದು, ಪ್ರಕರಣದ ನಿಖರ ಹಿನ್ನೆಲೆಯನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

ಹಲ್ಲಿನ ಚಿಕಿತ್ಸೆಗೆ ಹೋಗಿದ್ದ ಮಹಿಳೆ ಕೋಮಾಗೆ: ಕಲಬುರಗಿಯಲ್ಲಿ ಜೀವನ್ಮರಣ ಹೋರಾಟ

0

ಕಲಬುರ್ಗಿ: ಹಲ್ಲಿನ ಸಾಮಾನ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದ ಮಹಿಳೆ ಕೋಮಾಗೆ ಜಾರಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಜೇವರ್ಗಿ ಪಟ್ಟಣದ ಖಾಜಾ ಕಾಲೋನಿ ನಿವಾಸಿ ನಾಜಿಯಾ ಬೇಗಂ ಇದೀಗ ಒಂದೂವರೆ ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿ ಒಂದರಂದು ಹಲ್ಲಿನ ನೋವಿನಿಂದ ಖಾಸಗಿ ಆಸ್ಪತ್ರೆಗೆ ಬಂದಿದ್ದ ನಾಜಿಯಾ, ಮುಂದಿನ ದಿನ ದವಡೆ ಹಲ್ಲು ತೆಗೆಯಲು ಅನಸ್ತೇಶಿಯಾ ಇಂಜೆಕ್ಷನ್ ಪಡೆದರು. ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಕೋಮಾಗೆ ಜಾರಿದರೆಂದು ಕುಟುಂಬ ಆರೋಪಿಸಿದೆ.

ಪತಿ ನಿಧನದ ನಂತರ ಇಬ್ಬರು ಮಕ್ಕಳನ್ನು ಸಾಕುತ್ತ ಬದುಕು ಕಟ್ಟಿಕೊಂಡಿದ್ದ ನಾಜಿಯಾ, ಇದೀಗ ಆಸ್ಪತ್ರೆ ಹಾಸಿಗೆಯಲ್ಲಿ ಜೀವದ ಹೋರಾಟ ನಡೆಸುತ್ತಿದ್ದಾರೆ. ಘಟನೆಯ ಬಳಿಕ ಆಸ್ಪತ್ರೆ ಆಡಳಿತ ಕುಟುಂಬದಿಂದ ಯಾವುದೇ ಶುಲ್ಕ ವಸೂಲಿಸದೇ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿದೆ. ಸುಮಾರು ನಲವತ್ತೈದು ದಿನಗಳಲ್ಲಿ ಎಂಟು ಲಕ್ಷ ರೂಪಾಯಿಗೂ ಅಧಿಕ ವೆಚ್ಚವನ್ನು ಸಂಸ್ಥೆಯೇ ಭರಿಸಿದೆ ಎನ್ನಲಾಗಿದೆ.

ಆದರೂ, ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿಲ್ಲ. ಫಿಜಿಯೋಥೆರಪಿ ಚಿಕಿತ್ಸೆಯ ಅಗತ್ಯವಿರುವುದರಿಂದ ಅವರನ್ನು ಬೆಂಗಳೂರು ಅಥವಾ ಹೈದ್ರಾಬಾದ್‌ನ ಉನ್ನತ ಮಟ್ಟದ ಆಸ್ಪತ್ರೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದ್ದಾರೆ.

ವೈದ್ಯರ ಯಡವಟ್ಟು ಕಾರಣದಿಂದ ಈ ಸ್ಥಿತಿ ಉಂಟಾಗಿದೆ ಎಂದು ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೆ ಚಿಕಿತ್ಸೆ ಕ್ರಮದಲ್ಲಿ ಯಾವುದೇ ತಪ್ಪಿಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆರೋಪ–ಪ್ರತಿಆರೋಪಗಳ ನಡುವೆ ನಾಜಿಯಾ ಬೇಗಂ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದು, ಮಕ್ಕಳ ಭವಿಷ್ಯ ಪ್ರಶ್ನಾರ್ಥಕವಾಗಿದೆ.

ಹುಟ್ಟುಹಬ್ಬದ ದಿನವೇ ಯುವಕ ಅಪಘಾತದಲ್ಲಿ ಸಾವು: ಗೂಡ್ಸ್ ವಾಹನಕ್ಕೆ ಬೈಕ್ ಸವಾರ ಬಲಿ

0

ಬೆಂಗಳೂರು: ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡು ಮರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರು ಉತ್ತರದಲ್ಲಿ ನಡೆದಿದೆ. ಪವನ್ ಎಂಬ ಇಪ್ಪತ್ತ್ನಾಲ್ಕು ವರ್ಷದ ಯುವಕ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಐವರಕಂಡಪುರ ಸಮೀಪ, ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ಐದು ಗಂಟೆ ನಾಲ್ವತ್ತೈದು ನಿಮಿಷದ ವೇಳೆಗೆ ಬೈಕ್ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅತಿವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಗೂಡ್ಸ್ ವಾಹನದ ವೇಗ ಹಾಗೂ ಬೈಕ್ ಸವಾರನ ನಿರ್ಲಕ್ಷ್ಯ ಎರಡೂ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮವೇ ಜೀವಹಾನಿಯಾಗಿ ಮಾರ್ಪಟ್ಟಿರುವುದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ರಸ್ತೆಗಳಲ್ಲಿ ಅತಿವೇಗ ನಿಯಂತ್ರಣದ ಅಗತ್ಯ ಮತ್ತೊಮ್ಮೆ ಮೆರೆಯುತ್ತಿದೆ.

ಅಸಹಜ ಲೈಂಗಿಕ ದೌರ್ಜನ್ಯ ಕೇಸ್: MLC ಸೂರಜ್​ ರೇವಣ್ಣಗೆ ಮತ್ತೊಂದು ಶಾಕ್!

0

ಬೆಂಗಳೂರು: ಜೆಡಿಎಸ್‌ ಎಂಎಲ್‌ಸಿ ಡಾ. ಸೂರಜ್‌ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಿಂದ ವಿನಾಯಿತಿ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣದಲ್ಲಿ ಜೆಡಿಎಸ್‌ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಡಾ. ಸೂರಜ್‌ ರೇವಣ್ಣ ಅವರನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇದರಿಂದಾಗಿ ಸುಮಾರು ಒಂದು ತಿಂಗಳ ಬಳಿಕ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

ಪ್ರಕರಣದ ಹಿನ್ನೆಲೆ

2024ರ ಜೂನ್‌ 22ರಂದು ಸಂತ್ರಸ್ತರು ಡಾ. ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪಿಸಿ ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ವಿಧಿಗಳಡಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಹಾಸನ ಜಿಲ್ಲಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ, ನಂತರ ಪ್ರಕರಣವನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಯಿತು. ಜೂನ್‌ 23ರಂದು ಸೂರಜ್‌ ರೇವಣ್ಣರನ್ನು ಬಂಧಿಸಲಾಗಿತ್ತು.

ಇದರ ಮಧ್ಯೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್‌ ರೇವಣ್ಣ ಅವರ ಆಪ್ತ ಶಿವಕುಮಾರ್ ಸಂತ್ರಸ್ತನ ವಿರುದ್ಧ ಪ್ರತಿದೂರು ನೀಡಿದ್ದರು. ಲೈಂಗಿಕ ಕಿರುಕುಳದ ದೂರು ನೀಡುವುದಾಗಿ ಬೆದರಿಸಿ ಐದು ಕೋಟಿ ರೂ. ಹಣ ನೀಡದಿದ್ದರೆ ಪ್ರಕರಣ ದಾಖಲಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.

ಹಗರಿಬೊಮ್ಮನಹಳ್ಳಿಯಲ್ಲಿ ಪೊಲೀಸರ ಸೋಗಿನಲ್ಲಿ ಚಿನ್ನದ ಉಂಗುರ ದೋಚಿದ ಖದೀಮರು!

0

ಹಗರಿಬೊಮ್ಮನಹಳ್ಳಿ: ಪಟ್ಟಣದ ಎಪಿಎಂಸಿ ಬಳಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಖದೀಮರು 1.5 ಗ್ರಾಂ ತೂಕದ ಚಿನ್ನದ ಉಂಗುರ ಲಪಟಾಯಿಸಿರುವ ಘಟನೆ ನಡೆದಿದೆ.

ಚಿಂತ್ರಪಳ್ಳಿ ಗ್ರಾಮದ ನಿವಾಸಿ ಕೆ.ಎಂ. ಗಂಗಾಧರ ಅವರು ಭಾನುವಾರ ತಮ್ಮ ಅಮ್ಮನ ಮನೆಯಲ್ಲಿ ಎರಡು ಸೈಕಲ್ ರಿಪೇರಿ ಮಾಡಿಸಿಕೊಂಡು ಮಕ್ಕಳಿಗೆ ನೀಡಿ ಮನೆಗೆ ಬರಲು ಸೂಚಿಸಿ, ಚಿಂತ್ರಪಳ್ಳಿಯಿಂದ ಹಗರಿಬೊಮ್ಮನಹಳ್ಳಿಗೆ ಬಂದಿದ್ದರು.

ಈ ವೇಳೆ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿರುವುದನ್ನು ಗಮನಿಸಿದ ಇಬ್ಬರು ಖದೀಮರು ಅವರನ್ನು ನಿಲ್ಲಿಸಿ, “ನಾವು ಪೊಲೀಸರು, ತ್ರಿಬಲ್ ರೈಡ್ ಮಾಡುವುದು ತಪ್ಪು” ಎಂದು ಹೇಳಿ ಮಾತಿನಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಗಂಗಾಧರ ಅವರು “ನಮ್ಮ ಊರು ಹತ್ತಿರವೇ ಇದೆ, ಸೈಕಲ್ ರಿಪೇರಿಗಾಗಿ ಬಂದಿದ್ದೇವೆ” ಎಂದು ತಿಳಿಸಿದರೂ, ಖದೀಮರು ಮಾತಿನ ಚತುರತೆಯಿಂದ ಮಂಕುಬೂದಿ ಎರಚಿದ್ದಾರೆ.

ಗಂಗಾಧರ ಅವರ ಕೈಯಲ್ಲಿದ್ದ 1.5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಗಮನಿಸಿದ ಖದೀಮರು, “ಇಂತಹ ಬಂಗಾರವನ್ನು ಕಾಣುವಂತೆ ಹಾಕಿಕೊಳ್ಳಬಾರದು, ಜೇಬಿನಲ್ಲಿ ಇಟ್ಟುಕೊಳ್ಳಿ” ಎಂದು ಸಲಹೆ ನೀಡಿದ್ದಾರೆ. ಅವರು ಉಂಗುರವನ್ನು ತೆಗೆದು ಜೇಬಿನಲ್ಲಿ ಇಡಲು ಮುಂದಾದಾಗ, “ಹೀಗೆ ಇಟ್ಟರೆ ಬೀಳಬಹುದು, ಪೇಪರ್‌ನಲ್ಲಿ ಸುತ್ತಿ ಕೊಡುತ್ತೇವೆ” ಎಂದು ಹೇಳಿ, ಪೇಪರ್‌ನಲ್ಲಿ ಸುತ್ತಿದಂತೆ ಮಾಡಿ ಕಲ್ಲನ್ನು ಇಟ್ಟು ಹಿಂತಿರುಗಿಸಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಪೇಪರ್ ತೆರೆಯುತ್ತಿದ್ದಂತೆ ಕಲ್ಲು ಕಾಣಿಸಿಕೊಂಡಿದ್ದು, ಗಂಗಾಧರ ಅವರು ಬೆಚ್ಚಿಬಿದ್ದು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇದೇ ರೀತಿಯ ಮೋಸದ ಘಟನೆಗಳು ಬಸವೇಶ್ವರ ಬಜಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಗುರಿಯಾಗಿಸಿಕೊಂಡು ಹಾಗೂ ಗಾಳೆಮ್ಮನ ಗುಡಿ ಸಮೀಪ ಮಡಿವಾಳರ ಅಂಬಣ್ಣ ಎಂಬುವರಿಗೆ ನಡೆದಿರುವುದು ತಿಳಿದು ಬಂದಿದೆ. ಪಟ್ಟಣದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಸಾರ್ವಜನಿಕರೂ ಜಾಗೃತರಾಗಿರಬೇಕೆಂದು ಮನವಿ ಮಾಡಲಾಗಿದೆ.

ಅಪರಿಚಿತರನ್ನು ಪೊಲೀಸರಂತೆ ನಂಬಬೇಡಿ; ಅವರ ಗುರುತಿನ ಚೀಟಿ ಪರಿಶೀಲಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಚಿನ್ನಾಭರಣಗಳನ್ನು ಪ್ರದರ್ಶನದಂತೆ ಧರಿಸುವುದನ್ನು ತಪ್ಪಿಸಿ. ಶಂಕಾಸ್ಪದ ವರ್ತನೆ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

 

ಕೊಟ್ಟೂರಿನಲ್ಲಿ ಮಹಾಶಿವರಾತ್ರಿ ಸಡಗರ-ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಕೊಟ್ಟೂರು: ಮಹಾಶಿವರಾತ್ರಿ ಅಂಗವಾಗಿ ಕೊಟ್ಟೂರಿನಲ್ಲಿ ಭಕ್ತಿ, ಭಾವನೆ ಮತ್ತು ಭಕ್ತರ ಹರಿವಿನ ನಡುವೆ ಧಾರ್ಮಿಕ ಸಡಗರ ಮನೆಮಾಡಿತು. ಬುಧವಾರದ ಮಹಾಶಿವರಾತ್ರಿಯಂದು ಮಹಿಳೆಯರು ಮತ್ತು ಪುರುಷರು ಸೇರಿ ಗದ್ದಿಕಲ್ಲೇಶ್ವರ ಈಶ್ವರ ಲಿಂಗಮೂರ್ತಿಗೆ ಪೂಜಾ–ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಮಹಾಶಿವರಾತ್ರಿ ಹಬ್ಬವು ಕೊಟ್ಟೂರಿನಲ್ಲಿ ನಡೆಯುತ್ತಿರುವ ಕೊಟ್ಟೂರೇಶ್ವರ ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಪಟ್ಟಣದಾದ್ಯಂತ “ಓಂ ನಮಃ ಶಿವಾಯ” ಮಂತ್ರಘೋಷ, ಶಿವನಾಮ ಜಪ, ಭಕ್ತಿಗೀತೆಗಳ ನಾದ ಮೊಳಗುತ್ತಾ ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಮುದ ನೀಡಿತು.

ಬೆಳಗಿನ ಜಾವವೇ ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿಸಿ ಶಿವರಾತ್ರಿ ಆಚರಣೆ ಆರಂಭವಾಯಿತು. ಸಾವಿರಾರು ಭಕ್ತರು ಉದ್ದನೆಯ ಸಾಲಿನಲ್ಲಿ ನಿಂತು ದರ್ಶನ ಪಡೆದು ಹರಕೆ ತೀರಿಸಿದರು. ಶ್ರೀಸ್ವಾಮಿಯ ಮೂರು ಪ್ರಮುಖ ಮಠಗಳಾದ ಹಿರೇಮಠ, ತೊಟ್ಟಿಲು ಮಠ ಹಾಗೂ ಗಚ್ಚಿನಮಠಗಳಿಗೆ ಭಕ್ತರು ದಂಡು ದಂಡಾಗಿ ತೆರಳಿ ಪೂಜೆ ಸಲ್ಲಿಸಿದರು.

ಪಟ್ಟಣದ ಪ್ರಮುಖ ಶಿವಕ್ಷೇತ್ರಗಳಾದ ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠಲಿಂಗೇಶ್ವರ, ಚಂದ್ರಮೌಳೇಶ್ವರ, ಮಾರ್ಕಂಡೇಶ್ವರ, ೧೦೮ ಶಿವಲಿಂಗಗಳ ದೇವಸ್ಥಾನ, ಸೋಮಲಿಂಗೇಶ್ವರ, ರಾಮಲಿಂಗೇಶ್ವರ, ಹ್ಯಾಳ್ಯಾ ಸಮೀಪದ ಪಂಪಾಪತೇಶ್ವರ ಹಾಗೂ ಅಂಬಳಿಯ ಕಲ್ಲೇಶ್ವರ ಗುಡಿಗಳಿಗೆ ಬೆಳಗ್ಗಿನಿಂದಲೇ ಭಕ್ತರು ಭೇಟಿ ನೀಡಿ ರುದ್ರಾಭಿಷೇಕ, ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಹಾಲು, ಬಿಲ್ವಪತ್ರೆ, ಫಲ–ಪುಷ್ಪ ಸಮರ್ಪಿಸಿ ಶಿವನ ಆರಾಧನೆ ನಡೆಸಿದರು.

ಗದ್ದಿಕಲ್ಲೇಶ್ವರ ದೇವಸ್ಥಾನದಲ್ಲಿ ರಾತ್ರಿಯಿಡೀ ಮಹಾರುದ್ರಾಭಿಷೇಕ ಕೈಂಕರ್ಯಗಳ ಸಿದ್ಧತೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಭಜನೆ, ಶಿವಕೀರ್ತನೆಗಳ ಮೂಲಕ ಭಕ್ತರಲ್ಲಿಯ ಆಧ್ಯಾತ್ಮಿಕ ಉತ್ಸಾಹ ಇನ್ನಷ್ಟು ಹೆಚ್ಚಿತು.

ತಾಲೂಕಿನ ಉಜ್ಜಯಿನಿ ಸದ್ದರ್ಮ ಪೀಠದಲ್ಲೂ ಮಹಾಶಿವರಾತ್ರಿ ಸಂಭ್ರಮ ವಿಶೇಷವಾಗಿ ಕಂಡುಬಂತು. ಸದ್ದರ್ಮ ಪೀಠದ ಒಡೆಯ ಮಹಾಮರುಳಸಿದ್ದ ಸ್ವಾಮಿಯ ಲಿಂಗಮೂರ್ತಿಗೆ ವಿಶೇಷ ಪೂಜಾ–ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮರುಳಸಿದ್ದೇಶ್ವರ ಸ್ವಾಮಿಯ ಮೂಲಮೂರ್ತಿಗೆ ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಿದರು.

ಒಟ್ಟಾರೆ, ಕೊಟ್ಟೂರಿನಲ್ಲಿ ಮಹಾಶಿವರಾತ್ರಿ ಹಬ್ಬ ಭಕ್ತರ ನಂಬಿಕೆ, ಭಕ್ತಿ ಹಾಗೂ ಧಾರ್ಮಿಕ ಏಕತೆಯ ಸಂಕೇತವಾಗಿ ಅದ್ಧೂರಿಯಾಗಿ ಜರುಗಿತು.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ನಡೆ ಖಂಡನೀಯ: ದುರಗಪ್ಪ ಆರೋಪ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದ ಲಕ್ಷ್ಮೇಶ್ವರ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ೨೦೨೩ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ದಲಿತ ಸಮುದಾಯದ ಯುವ ನಾಯಕಿ ಶ್ರೀಮತಿ ಸುಜಾತ ಎನ್. ದೊಡ್ಡಮನಿ ಅವರ ಹೆಸರನ್ನು ಸೇರಿಸದಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದುರಗಪ್ಪ ಎಲ್ ಹರಿಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಸಮಾಜಸೇವಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಹೆಸರನ್ನು ಸೇರಿಸಲಾಗಿದೆ. ಆದರೆ ಸುಜಾತ ದೊಡ್ಡಮನಿ ಅವರ ಹೆಸರನ್ನು ಕೈಬಿಟ್ಟಿರುವುದು ಏಕೆ ಎಂಬುದನ್ನು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಈಶ್ವರ ಎಸ್. ಮಡ್ಲೇರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಹಿತ್ಯ ಸಮ್ಮೇಳನಗಳು ಜಾತ್ಯಾತೀತ ಮತ್ತು ವ್ಯಕ್ತಿರಹಿತವಾಗಿರಬೇಕು. ಸುಜಾತ ದೊಡ್ಡಮನಿ ಅವರು ಶಿರಹಟ್ಟಿ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭಾವಿ ನಾಯಕಿಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸದಿರುವುದಕ್ಕೆ ಪ್ರಮುಖ ಕಾರಣವೇನು ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜಾತ್ಯಾತೀತ ನಾಯಕಿ ಸುಜಾತ ದೊಡ್ಡಮನಿ ಅವರ ಹೆಸರನ್ನು ಕೈಬಿಟ್ಟು ಅವಮಾನ ಮಾಡಿರುವುದು ಅವರ ಅಭಿಮಾನಿಗಳು ಹಾಗೂ ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ. ಸುಜಾತ ದೊಡ್ಡಮನಿ ಅವರ ಅಭಿಮಾನಿಗಳ ಬಳಗ ಮತ್ತು ದಲಿತ ಸಮುದಾಯದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಲಕ್ಷ್ಮೇಶ್ವರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮಡ್ಲೇರಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ದುರಗಪ್ಪ ಎಲ್ ಹರಿಜನ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಬಾಂಧವರು ಕಾರ್ಯಕ್ರಮ ಯಶಸ್ವಿಗೊಳಿಸಿ

0
  • ವಿಜಯಸಾಕ್ಷಿ ಸುದ್ದಿ, ಗದಗ: ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಭವ್ಯವಾಗಿ ನಡೆಯಲಿದೆ ಎಂದು ಜಯಂತ್ಯುತ್ಸವ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಎಸ್.ಪಿ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ನಾರಾಯಣ ಹೊನ್ನಾಳ ಹಾಗೂ ಯಲ್ಲಪ್ಪ ಕಾಂಬ್ಳೇಕರ ಅವರ ಭಾವಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು ಎಂದರು.

    ಮೆರವಣಿಗೆಯಲ್ಲಿ 17 ಅಡಿ ಎತ್ತರದ ಪ್ರಭು ಶ್ರೀರಾಮ, ಸಹಸ್ರಾರ್ಜುನ, ಮಹರ್ಷಿ ವಾಲ್ಮೀಕಿ, ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮ, ಪಾಂಡುರಂಗ ವಿಠ್ಠಲ ಸೇರಿದಂತೆ ಅನೇಕ ಮಹಾನ್ ಪುರುಷರ ಹಾಗೂ ದಾರ್ಶನಿಕರ ಮೂರ್ತಿಗಳು ಭಾಗವಹಿಸಲಿವೆ. ಜಿಲ್ಲೆಯ ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಮುಖಂಡ ಅನಿಲ ಅಬ್ಬಿಗೇರಿ ಮಾತನಾಡಿ, ಕಳೆದ 10 ವರ್ಷಗಳಿಂದ ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಸೇವಾಲಾಲ್ ಜಯಂತಿಯನ್ನೂ ಜೊತೆಯಾಗಿ ಆಚರಿಸಲಾಗುತ್ತಿದೆ. ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿ ಆಗಮಿಸಲಿದ್ದು, ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಅವರು ಸೇವಾಲಾಲ್ ಹಾಗೂ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

    ಕರ್ನಾಟಕ ರಾಜ್ಯ ವಿವಿಧ ಹಿಂದೂ ಸಂಘಟನೆಗಳ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ಹಿಂದೂ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶದಿಂದ ಹೋರಾಟ ಮತ್ತು ಭಕ್ತಿಯೊಂದಿಗೆ ಜಯಂತಿ ಆಚರಿಸಲಾಗುತ್ತಿದೆ. ಮೆರವಣಿಗೆ ಆರಂಭಕ್ಕೂ ಮುನ್ನ ಗಜಾನನ ಸಮಿತಿಯಿಂದ 1,500 ಜನರಿಗೆ ಪ್ರಸಾದ, 10ರಿಂದ 12 ಸಾವಿರ ಜನರಿಗೆ ಊಟ, 10 ಸಾವಿರ ಜನರಿಗೆ ಪ್ರಸಾದ ಹಾಗೂ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮರಾಠ ಹಾಗೂ ಲಂಬಾಣಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. 30ರಿಂದ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರೂ ಕುಟುಂಬ ಸಮೇತವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

    ಈ ಸಂದರ್ಭದಲ್ಲಿ ಅಜ್ಜಣ್ಣ ಮಲ್ಲಾಡದ, ಕಿಸನ್ ಮೇರವಾಡೆ, ಮಹೇಶ್ ರೋಖಡೆ, ಕೃಷ್ಣಪ್ಪ ಲಮಾಣಿ, ರಾಜು ಗದ್ದಿ, ಸುನಿಲ್ ಮುಳ್ಳಾಳ, ವಿರೂಪಾಕ್ಷಪ್ಪ ಹೆಬ್ಬಳ್ಳಿ, ರಾಜು ಮುಧೋಳ, ಕುಮಾರ ನಡಗೇರಿ, ಕಿರಣ್ ಹಿರೇಮಠ, ಕೃಷ್ಣ ಪವಾರ್, ತುಕಾರಾಮ್ ಲಮಾಣಿ, ವಿಶಾಲ್ ಗೋಕಾವಿ ಮುಂತಾದವರು ಉಪಸ್ಥಿತರಿದ್ದರು.

    ಸಂತ ಶ್ರೀ ಸೇವಾಲಾಲ್ ಮಹಾರಾಜರು ಕೇವಲ ಲಂಬಾಣಿ ಸಮುದಾಯಕ್ಕೆ ಸೀಮಿತವಾಗಿರದೆ ಹಿಂದೂತ್ವಕ್ಕಾಗಿ ಹೋರಾಟ ಮಾಡಿ ಜಾಗೃತಿ ಮೂಡಿಸಿದವರು. ಈ ಬಾರಿ ಶಿವಾಜಿ ಜಯಂತಿಯ ಜೊತೆಗೆ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ.

    ಪರಮೇಶ ನಾಯಕ್.
    ಅಧ್ಯಕ್ಷರು, ಸೇವಾಲಾಲ್ ಹಾಗೂ ಶಿವಾಜಿ ಜಯಂತ್ಯುತ್ಸವ ಸಮಿತಿ.

ಅಧಿಕಾರಿಗಳು ಜನ ಮಿತ್ರರಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯವನ್ನು ಗ್ರಾಮ ಸಭೆಗಳ ಮೂಲಕ ಮೇಲಿನ ಹಂತಕ್ಕೆ ಕೊಂಡೊಯ್ಯಬೇಕು. ಗ್ರಾಮ ಸಭೆಗಳಲ್ಲಿನ ಅಭಿಪ್ರಾಯಗಳನ್ನು ಯೋಜನೆ ರೂಪದಲ್ಲಿ ಜಾರಿಗೆ ತರುವ ಕಾರ್ಯವಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್ ಕಾನೂನು ಜಾರಿಗೆ ತರುವುದರಲ್ಲಿ ಗದಗ ಜಿಲ್ಲೆಯ ಪಾತ್ರ ಬಹುಮುಖ್ಯವಾಗಿದೆ. ಗ್ರಾಮ ಮಟ್ಟದಿಂದಲೇ ಯೋಜನೆಗಳನ್ನು ರೂಪಿಸುವ ಕಾನೂನಿದೆ. ಈ ಕಾನೂನು ಸಮರ್ಪಕವಾಗಿ ಅನುಷ್ಠಾನವಾದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಕೆಳಹಂತದಿಂದ ಮೇಲಿನ ಹಂತದವರೆಗೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರುವ ಕಾರ್ಯದಲ್ಲಿ ಜಿಲ್ಲೆ ಯಾವುದೇ ಕಾರಣಕ್ಕೂ ಹಿಂದುಳಿಯಬಾರದು. ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಡುವೆ ಸಂಘರ್ಷವಿದ್ದು, ದೇಶದಲ್ಲಿ ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ.

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಶೇಂಗಾ, ಮಾವು ಸೇರಿದಂತೆ ಇತರೆ ಬೆಳೆಗಳ ಇಳುವರಿ ಕಡಿಮೆಯಾಗುತ್ತಿರುವ ಕುರಿತು ಕಾರಣ ತಿಳಿದುಕೊಂಡು ಮಾಹಿತಿ ನೀಡುವುದರ ಜೊತೆಗೆ ಜಿಲ್ಲೆಯ ಮೂಲಭೂತ ಅವಶ್ಯಕತೆಗಳು, ಶಾಲೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿವರವಾದ ಮಾಹಿತಿ ಕ್ರೋಢೀಕರಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ಸಚಿವರಾದ ಎಚ್.ಕೆ. ಪಾಟೀಲ ಸೂಚಿಸಿದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಜನರ ಭಾವನೆಗಳು ಯೋಜನೆಯ ರೂಪದಲ್ಲಿ ಜಾರಿಯಾಗಬೇಕು. ಜನರ ಮಾತಿಗೆ ಗೌರವ ದೊರಕುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯ ನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯ ಪಡೆದು ಯೋಜನೆ ರೂಪಿಸುವ ಕಾನೂನು ಗದಗ ಜಿಲ್ಲೆಯಿಂದಲೇ ಪ್ರಾರಂಭಿಸಲಾಗಿದ್ದು, ಈ ಕಾನೂನನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕಾಗಿದೆ ಎಂದರು.

ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡುವ ಯೋಜನೆಗಳನ್ನು ಆದ್ಯತೆ ಮೂಲಕ ಅನುಷ್ಠಾನಕ್ಕೆ ಕ್ರಮ ವಹಿಸಿ, ಆಯಾ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮೂಲಕವೇ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಯೋಜನೆಗಳ ತಯಾರಿಕೆಯಲ್ಲಿ ಗ್ರಾಮೀಣ ವಾರ್ಡ್ ಸಭೆ, ಗ್ರಾಮ ಸಭೆ, ಗ್ರಾಮ ಅಭಿವೃದ್ಧಿ ಯೋಜನೆ ಮೂಲಕ ಕೆಳಮಟ್ಟದಿಂದಲೇ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳಾದ ಕೃಷ್ಣಾ ಪರಾಪೂರ, ಬರಕತ್ ಅಲಿಮುಲ್ಲಾ ಅಬ್ದುಲ್, ಚಂದ್ರಶೇಖರಗೌಡ ಕರಿಸೋಮನಗೌಡ, ವಿಜಯಕುಮಾರ ನೀಲಗುಂದ, ರಾಚಯ್ಯ ಮಾಲಗಿತ್ತಿ, ರಾಜೇಸಾಬ ಸಾಂಗ್ಲಿಕರ, ರಾಜಶೇಖರ ಮಾಲಗಿತ್ತಿ, ಸುರೇಶ ಕಟ್ಟಿಮನಿ, ರಾಜೇಸಾಬ ಬೆಟಗೇರಿ, ರಾಜೇಶ್ವರಿ ವೀರನಗೌಡ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಮಣದೀಪ ಚೌದರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಯೋಜನೆಯನ್ನು ಮಂಡಿಸಿದರು.

ಅಧಿಕಾರಿಗಳು ಜನ ಮಿತ್ರರಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಗ್ರಾಮಸಭೆ, ಜನಪ್ರತಿನಿಧಿಗಳ ಸಲಹೆಗಳನ್ನು ಪಡೆಯಬೇಕಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಆದ್ಯತೆ ಪ್ರಕಾರ ಯೋಜನೆಗಳ ಪಟ್ಟಿಯನ್ನು ತಯಾರಿಸಬೇಕು. ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಮಸಭೆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಮಾದರಿ ಕಾರ್ಯವನ್ನು ಮಾಡಿದಲ್ಲಿ ಗ್ರಾಮಸಭೆಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ.

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

error: Content is protected !!