Home Blog Page 182

ಬೆಂಗಳೂರಿನಲ್ಲಿ ಆಸ್ತಿಗಾಗಿ ತಂದೆಯನ್ನೇ ಇರಿದು ಕೊಂದ ಪಾಪಿ ಪುತ್ರ!

0

ಬೆಂಗಳೂರು: ಆಸ್ತಿ ವಿಚಾರವಾಗಿ ವೃದ್ಧ ತಂದೆಯನ್ನು ಮಗನೇ ಇರಿದು ಕೊಂದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮುನಿಕೃಷ್ಣ (70) ಎಂದು ಗುರುತಿಸಲಾಗಿದೆ.

ಹತ್ಯೆಗೈದ ಆರೋಪಿ ಮೋಹನ್ ಕುಮಾರ್ ಎಂದು ತಿಳಿದುಬಂದಿದೆ. ಆಸ್ತಿ ವಿಚಾರವಾಗಿ ಈ ಹಿಂದೆ ಹಲವು ಬಾರಿ ತಂದೆ-ಮಗನ ನಡುವೆ ಗಲಾಟೆಗಳು ನಡೆದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ದಿನಗಳ ಹಿಂದೆ ಆರೋಪಿ ಮೋಹನ್ ಕುಮಾರ್ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮುನಿಕೃಷ್ಣರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಮೃತ ಮುನಿಕೃಷ್ಣ ಅವರು ಬಿಎಂಟಿಸಿ ನಿವೃತ್ತ ಕಂಡಕ್ಟರ್ ಆಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಕೆಲ ಆಸ್ತಿಗಳನ್ನು ಮೊಮ್ಮಕ್ಕಳ ಹೆಸರಿಗೆ ವಿಲ್ ಮಾಡಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈ ಸಂಬಂಧ ಇಂದಿರಾನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌: ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌!

0

ಬೆಂಗಳೂರು: ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯ ವೇಳೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ಎರಡನೇ ದಿನ ವಾಶ್ ರೂಂಗೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಫೋಟೋ ತೆಗೆದಿದ್ದಾನೆ ಎನ್ನಲಾಗಿದೆ. ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ವಿಡಿಯೋವನ್ನು ನೇರವಾಗಿ ಸಂತ್ರಸ್ತೆಗೆ ಕಳುಹಿಸಿ ಹಣದ ಬೇಡಿಕೆ ಇಡುವುದು ಕಾಣಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿ ‘Swan.3704722’ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿಯ ಆಪ್ತ ಸ್ನೇಹಿತೆಗೆ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

‘ವಿಡಿಯೋ ವೈರಲ್ ಮಾಡಬಾರದೆಂದರೆ ಹಣ ನೀಡಬೇಕು’ ಎಂದು ಆರೋಪಿಯು ಬೆದರಿಕೆ ಹಾಕಿದ್ದು, ವೀಡಿಯೋ ಕಾಲ್ ಮೂಲಕವೂ ಹಲವು ಬಾರಿ ಹಣದ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿಯು ಕಳುಹಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಕ್ಷಿಯಾಗಿ ನೀಡಿ ನಟಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಡಿವೈಡರ್‌ʼಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

0

ಕೋಲಾರ: ಡಿವೈಡರ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಹೊರವಲಯದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಪವನ್ ಕಾಲೇಜು ಸಮೀಪ ಈ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ನಲ್ಲೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 40 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್‌ನ ಗಾಜುಗಳನ್ನು ಒಡೆದು ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದರು.

ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕೋಲಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಒಣ ಹವೆಯ ವಾತಾವರಣ: ಹವಾಮಾನ ಇಲಾಖೆ

0

ಬೆಂಗಳೂರು: ಕರಾವಳಿ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಒಣ ಹವಾಮಾನ ಇಂದೂ ಮುಂದುವರಿ ಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹತ್ತಾರು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಬೆಳಗ್ಗಿನ ವೇಳೆಯಲ್ಲಿ ಚಳಿ ಹೆಚ್ಚಾಗಿದ್ದರೂ, ಇಂದು ತಾಪಮಾನದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಬಂದಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚಿಸಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣ ಮುಂದುವರಿದಿದ್ದು, ಇಂದೂ ಅದೇ ಸ್ಥಿತಿ ಇರಲಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳಿಲ್ಲದೇ ಒಣಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಶುಷ್ಕ ವಾತಾವರಣ ಮುಂದುವರಿಯಲಿದೆ.

ಇಂದು ಬೆಂಗಳೂರಿನ ಕನಿಷ್ಠ ತಾಪಮಾನ 17°C ಮತ್ತು ಗರಿಷ್ಠ 31°C ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಚಳಿಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಬೆಚ್ಚಗಿನ ಉಡುಪು ಧರಿಸುವುದು, ಹೊದಿಕೆ ಬಳಸುವುದು ಹಾಗೂ ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳು ಮತ್ತು ವೃದ್ಧರು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕಾಪಿರೈಟ್ ಕದನದಲ್ಲಿ ಇಳಯರಾಜಾಗೆ ಹಿನ್ನಡೆ: 134 ಹಾಡುಗಳಿಗೆ ದೆಹಲಿ ಹೈಕೋರ್ಟ್ ತಡೆ

ಸಂಗೀತ ಲೋಕದಲ್ಲಿ ದೊಡ್ಡ ಕಾನೂನು ತಿರುವು ಕಂಡಿದೆ. ಇಳಯರಾಜಾ ಅವರಿಗೆ ವಿರುದ್ಧವಾಗಿ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸರಿಗಮ ಸಲ್ಲಿಸಿದ್ದ ಅರ್ಜಿಯಲ್ಲಿ, 1976 ರಿಂದ 2001ರ ನಡುವೆ ಇಳಯರಾಜಾ ಸಂಗೀತ ನೀಡಿದ ಸುಮಾರು 134 ಚಲನಚಿತ್ರಗಳ ಸಂಗೀತ ಹಾಗೂ ಧ್ವನಿ ಮುದ್ರಣ ಹಕ್ಕುಗಳು ತಮ್ಮ ವಶದಲ್ಲಿವೆ ಎಂದು ವಾದಿಸಿತ್ತು. ಚಿತ್ರ ನಿರ್ಮಾಪಕರೊಂದಿಗೆ ಮಾಡಿಕೊಂಡ ಔಪಚಾರಿಕ ಒಪ್ಪಂದಗಳ ಮೂಲಕ ವಿಶ್ವಾದ್ಯಂತ ಮತ್ತು ಶಾಶ್ವತ ಹಕ್ಕುಸ್ವಾಮ್ಯ ಪಡೆದಿದ್ದೇವೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿತು.

ಆದರೆ ಇಳಯರಾಜಾ ಈ ಹಾಡುಗಳನ್ನು Amazon Music, iTunes ಹಾಗೂ JioSaavn ಮೊದಲಾದ ಡಿಜಿಟಲ್ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿ ತಮ್ಮದೇ ಎಂದು ಹೇಳಿಕೊಳ್ಳುತ್ತಿರುವುದು ಕಾನೂನುಬಾಹಿರ ಎಂದು ಸರಿಗಮ ವಾದಿಸಿತು.

1957ರ ಹಕ್ಕುಸ್ವಾಮ್ಯ ಕಾಯಿದೆಯ ಪ್ರಕಾರ, ಚಿತ್ರಕ್ಕಾಗಿ ರಚಿಸಲಾದ ಸಂಗೀತದ ಮೊದಲ ಮಾಲೀಕರು ನಿರ್ಮಾಪಕರೇ ಎಂಬುದನ್ನು ಸರಿಗಮ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಕೆಟೇಲಾ ಸರಿಗಮದ ವಾದ ಒಪ್ಪಿಕೊಂಡು ಮಧ್ಯಂತರ ತಡೆಯಾಜ್ಞೆ ನೀಡಿದರು.

ಈ ಆದೇಶದ ಪ್ರಕಾರ, ಇಳಯರಾಜಾ ಅಥವಾ ಅವರ ಪ್ರತಿನಿಧಿಗಳು ಸರಿಗಮ ವಶದಲ್ಲಿರುವ 134 ಚಿತ್ರಗಳ ಹಾಡುಗಳನ್ನು ಬಳಸಬಾರದು, ಹಕ್ಕು ಸಾಧಿಸಬಾರದು ಅಥವಾ ಪರವಾನಗಿ ನೀಡಬಾರದು. ತಡೆಯಾಜ್ಞೆ ವಿಧಿಸದಿದ್ದರೆ ಸರಿಗಮಕ್ಕೆ ತುಂಬಲಾಗದ ನಷ್ಟವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘ಪಾಕೆಟ್ ನಾವೆಲ್’‌ ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ನಟ ರಾಜ್‌ ಬಿ ಶೆಟ್ಟೆ

ಸ್ಯಾಂಡಲ್‌ವುಡ್ ಮತ್ತು ಮಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಇದೀಗ ಕಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ‘ಪಾಕೆಟ್ ನಾವೆಲ್’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿ ಅವರ ಪಾತ್ರದ ಸ್ವರೂಪ ಬಹಿರಂಗವಾಗಿದೆ – ಈ ಬಾರಿ ಅವರು ಖಳನಾಯಕ.

ಚಿತ್ರದ ನಾಯಕ ವಿಜಯ್ ಸೇತುಪತಿ ಆಗಿದ್ದರೆ, ನಾಯಕಿಯಾಗಿ ಮಾಳವಿಕಾ ಮೋಹನನ್ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ನಟ ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ಅರಣ್ಯ ಕಾಂಡಂ ಹಾಗೂ ಸೂಪರ್ ಡಿಲಕ್ಸ್ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿರಲಿದೆ ಎನ್ನಲಾಗುತ್ತಿದೆ.

ಈಗಾಗಲೇ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ರಾಜ್ ಬಿ ಶೆಟ್ಟಿ, ಲ್ಯಾಂಡ್‌ಲಾರ್ಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಾಯಕ ಛಾಯೆ ತೋರಿಸಿದ್ದರು. ಆದರೆ ಈ ಬಾರಿ ತಮಿಳು ಚಿತ್ರರಂಗದಲ್ಲೇ ಅವರ ಹೊಸ ಇಮೇಜ್ ನಿರ್ಮಾಣವಾಗುವ ನಿರೀಕ್ಷೆ ಮೂಡಿದೆ.

ಅಭಿಮಾನಿಗಳ ಮಧ್ಯೆ ಲಾಂಗ್ ಹಿಡಿದು ಪೋಸ್: ಜೆಸಿ ಸಿನಿಮಾದ ನಟನ ವಿರುದ್ಧ ಸುಮೋಟೊ ಕೇಸ್

ಸಿನಿಮಾ ಸಂಭ್ರಮ ಮಧ್ಯೆ ನಡೆದ ಘಟನೆಯೊಂದು ಇದೀಗ ಕಾನೂನು ವಿವಾದಕ್ಕೆ ತಿರುಗಿದೆ. ಜೆಸಿ ಸಿನಿಮಾ ಬಿಡುಗಡೆಯ ದಿನ ಥಿಯೇಟರ್‌ನಲ್ಲಿ ಅಭಿಮಾನಿಗಳ ನಡುವೆ ಲಾಂಗ್ ಹಿಡಿದು ಪೋಸ್ ನೀಡಿದ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಘಟನೆ ವೇಳೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಪಾಯಕಾರಿ ಆಯುಧದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗೋವಿಂದರಾಜ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಪೊಲೀಸರು ನಟರಿಗೆ ನೋಟಿಸ್ ನೀಡಿದ್ದು, ಲಾಂಗ್ ಎಲ್ಲಿಂದ ಬಂದಿತು ಮತ್ತು ಏಕೆ ಹಿಡಿದಿದ್ದರು ಎಂಬ ಬಗ್ಗೆ ವಿವರಣೆ ಕೇಳಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

ನಟಿ ತ್ರಿಶಾ ಬಗ್ಗೆ ಹೇಳಿಕೆ: ವಿವಾದದ ಬಳಿಕ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್

ವಿಜಯ್ ವಿರುದ್ಧ ರಾಜಕೀಯ ಟೀಕೆ ಮಾಡುವ ವೇಳೆ ತ್ರಿಷಾ ಹೆಸರನ್ನು ಬಳಸಿದ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ನೀಡಿದ ಹೇಳಿಕೆ ಕ್ಷಣಾರ್ಧದಲ್ಲೇ ವೈರಲ್ ಆಗಿ ರಾಜಕೀಯ-ಸಿನಿಮಾ ವಲಯದಲ್ಲಿ ಕಿಚ್ಚು ಹಚ್ಚಿತು.

ನಟಿ ತ್ರಿಷಾ ಕೃಷ್ಣನ್ ನೇರವಾಗಿ ಪ್ರತಿಕ್ರಿಯಿಸಿ ಉನ್ನತ ಹುದ್ದೆಯ ವ್ಯಕ್ತಿಯಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು. ನಂತರ ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ಟೀಕೆ ನಡೆಸಿದರು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಎಂದು ಆರೋಪಿಸಿ ರಾಜಕೀಯ ಒತ್ತಡ ಹೆಚ್ಚಾಯಿತು.

ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ಹಿನ್ನೆಲೆ ಬಿಜೆಪಿ ಒಳಗೂ ಅಸಮಾಧಾನ ಮೂಡಿತು. ಅಂತಿಮವಾಗಿ ಕೆ. ಅಣ್ಣಾಮಲೈ ಮತ್ತು ವಾನತಿ ಶ್ರೀನಿವಾಸನ್ ಸೂಚನೆ ಮೇರೆಗೆ ನೈನಾರ್ ನಾಗೇಂದ್ರನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದರು.

ತಮ್ಮ ಹೇಳಿಕೆ ತಪ್ಪಾಗಿದೆ ಎಂದು ಒಪ್ಪಿಕೊಂಡ ಅವರು, “ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ” ಎಂದು ಸಾರ್ವಜನಿಕವಾಗಿ ಕ್ಷಮೆ ಕೇಳಿದರು. ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದರೂ, ರಾಜಕೀಯ ಟೀಕೆಯಲ್ಲಿ ವೈಯಕ್ತಿಕ ಉಲ್ಲೇಖ ಎಷ್ಟು ದೊಡ್ಡ ಪರಿಣಾಮ ಉಂಟುಮಾಡಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.

ಕುಷ್ಟಗಿಯಲ್ಲಿ ಪಂಚಾಯತ್ ನೌಕರ ಆತ್ಮಹತ್ಯೆ: ಆಸ್ತಿ ವಿವಾದ ಹಿನ್ನೆಲೆ ಐವರ ವಿರುದ್ಧ ದೂರು

0

ಕೊಪ್ಪಳ: ಕುಷ್ಟಗಿ ತಾಲೂಕಿನ ಜಮಲಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನೌಕರ ರಮೇಶ್ ದಂಡಿನ ನೇಣುಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಆಘಾತ ಮೂಡಿಸಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕುಟುಂಬ ಗಲಾಟೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ತಾವರಗೇರಾ ಪೊಲೀಸ್ ಠಾಣೆ ದಾಖಲಿಸಿಕೊಂಡಿದ್ದು, ಐವರ ವಿರುದ್ಧ ದೂರು ದಾಖಲಾಗಿದೆ.

ಇದೇ ವೇಳೆ ಜಮಖಂಡಿನಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಹಿನ್ನೆಲೆಯಲ್ಲಿ ನಾಲ್ವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೆಟ್ರೋಲ್ ಬಾಯಿಗೆ ಸೇರಿದ ಕಾರಣ ನಾಲ್ವರೂ ಅಸ್ವಸ್ಥಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಡಿಹೆಚ್ಒ ಮಂಜುನಾಥ ಹಳೆಯ ನೌಕರರನ್ನು ಮುಂದುವರಿಸುವ ಭರವಸೆ ನೀಡಿದ ವೇಳೆ ದಲಿತ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸಿದರು.

ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ: ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆ ಆಗಬೇಕು. ಈ ಅನುದಾನಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರುವಂತೆ ನಿಗಾವಹಿಸಬೇಕೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಡಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಸೂಚಿಸಿದರು. ನಗರೋತ್ಥಾನದಡಿ ಬಿಡುಗಡೆಯಾದ ಅನುದಾನ ಹಾಗೂ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಮಾಹಿತಿ ಪಡೆದ ಸಚಿವರು, ನಗರೋತ್ಥಾನದಡಿ ಕೈಗೊಳ್ಳಲಾಗುವ ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಗದಗ ವಿಧಾನಸಭಾ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಅಪೂರ್ಣವಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಸೂಚಿಸಿದರು.

error: Content is protected !!