Home Blog Page 186

ಕಾಂಗ್ರೆಸ್ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ, ಏಳನೇ ಗ್ಯಾರಂಟಿ ನೀರಿನ ಗ್ಯಾರಂಟಿ: ಡಿ.ಕೆ. ಶಿವಕುಮಾರ್

0

ಹಾವೇರಿ: ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಹಾವೇರಿಯಲ್ಲಿ ಶನಿವಾರ ನಡೆದ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ನಾನು ಚುನಾವಣೆಗೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ,

ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರುವ ಕಾರಣಕ್ಕೆ ಪಂಚ ಗ್ಯಾರಂಟಿ ನೀಡಿ, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ. ಭೂ ದಾಖಲೆ ಇಲ್ಲದ 1,11,111 ಜನರಿಗೆ ಪೋಡಿ ಮಾಡಿ, ಖಾತಾ ಮಾಡಿ ದಾಖಲೆ ನೀಡಲಾಗಿದೆ. ಆಮೂಲಕ ನಿಮ್ಮ ಮುಂದಿನ ಪೀಳಿಗೆಗೆ ಆಸ್ತಿ ದಾಖಲೆ ಕೊಟ್ಟ ಏಕೈಕ ಸರ್ಕಾರ ಈ ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.

“ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ 35-40 ಲಕ್ಷ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಕಾವೇರಿ ನದಿಗೆ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ಮಾರ್ಗದರ್ಶನದಲ್ಲಿ ಕಾನೂನು ತಜ್ಞರ ತಂಡ ವಾದ ಮಂಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಈ ಯೋಜನೆ ಪರವಾಗಿ ತೀರ್ಪು ಬಂದಿದೆ. ಆಮೂಲಕ ತಮಿಳುನಾಡು ಹಾಕಿದ್ದ ಆಕ್ಷೇಪಣಾ ಅರ್ಜಿ ವಜಾಗೊಳಿಸಲಾಗಿದೆ. ಈಗ ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ.

ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಇನ್ನು ಕುಡಿಯುವ ನೀರು ಪೂರೈಕೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ 3 ತಿಂಗಳಲ್ಲಿ ಅನುಮತಿ ಕೊಟ್ಟರೆ ಸಾಕು. ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹರಿಸುವ ಕೆಲಸವನ್ನು ಈ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಮಾಡಲಿದ್ದಾರೆ.

ಕೃಷ್ಣಾ, ಕಾವೇರಿ, ಮಹದಾಯಿ ಯೋಜನೆಗಳ ಮೂಲಕ ರೈತರ ಬದುಕು ಹಸನ ಮಾಡಲು ನಮ್ಮ ಸರ್ಕಾರ 7ನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಿದೆ. ಪ್ರತಿಯೊಬ್ಬರಿಗೆ ಕುಡಿಯಲು ನೀರು, ವ್ಯವಸಾಯಕ್ಕೆ ನೀರು, ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಘೋಷಿಸಿದರು.

ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರಲಿವೆ, ಬರೆದಿಟ್ಟುಕೊಳ್ಳಿ

“ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು ಇಂಧನ ಇಲಾಖೆಯಿಂದ ವರ್ಷಕ್ಕೆ 20 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಇಂತಹ ಐಸಿಹಾಸಿಕ ಕಾರ್ಯಕ್ರಮಗಳನ್ನು ನಾವು ನೀಡುತ್ತಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ನಮಗೆ 136 ಸೀಟುಗಳು ಬಂದಿದ್ದವು, ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟುಗಳು ಬರಲಿವೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ.

ನನಗೆ ನಮ್ಮ ಶಾಸಕರಿಗೆ ಆತ್ಮವಿಶ್ವಾಸವಿದೆ. 3 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಎರಡು ಕಡೆ ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧೆ ಮಾಡಿದ್ದರು. ಆ ಕ್ಷೇತ್ರಗಳು ನಮ್ಮ ಬಳಿ ಇರಲಿಲ್ಲ. ಆ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡಿ ನಮ್ಮ ಸಂಖ್ಯಾಬಲವನ್ನು 139ಕ್ಕೆ ಏರಿಕೆ ಮಾಡಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದ. ನಿಮ್ಮ ಈ ಋಣ ತೀರಿಸಲು ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದೇವೆ” ಎಂದು ತಿಳಿಸಿದರು.

ಬಿಜೆಪಿ, ದಳದ ಸರ್ಕಾರ ಇಂತಹ ಒಂದೇ ಒಂದು ಜನಪರ ಕಾರ್ಯಕ್ರಮ ನೀಡಿದೆಯೇ?

“ಜನರು ನೆಮ್ಮದಿಯಿಂದ ಬದುಕುತ್ತಿರುವ ದಿನಗಳು, ಮಹಿಳೆಯರು ಸಂತೋಷದಿಂದ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ದಿನಗಳು, ಗೃಹಿಣಿಯರ ಬದುಕಿನಲ್ಲಿ ಬದಲಾವಣೆ ಕಂಡ ದಿನಗಳು, ಯುವಕರು ಉದ್ಯೋಗ ಸೃಷ್ಟಿಮಾಡಿಕೊಳ್ಳುತ್ತಿರುವ ದಿನಗಳನ್ನು ನಾವು ನೀವು ನೋಡುತ್ತಿದ್ದೇವೆ. ಯಡಿಯೂರಪ್ಪನವರೇ, ಮಿಸ್ಟರ್ ಕುಮಾರಸ್ವಾಮಿ,

ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನಿಮ್ಮ ಆಡಳಿತ ಅವಧಿಯಲ್ಲಿ ಇಂತಹ ಒಂದು ಕೆಲಸವನ್ನು ನೀವು ಮಾಡಿದ್ದರೆ, ಜನರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಜನತಾ ದಳದವರು ಕೊಟ್ಟಿದ್ದರೆ, ರಾಜಕೀಯದಲ್ಲಿ ನಿಮಗೆ ಮಾತನಾಡುವ ಶಕ್ತಿ ಇರುತ್ತಿತ್ತು. ಆದರೆ ನೀವು ಅದನ್ನು ಕಳೆದುಕೊಂಡಿದ್ದೀರಿ” ಎಂದು ವಾಗ್ದಾಳಿ ನಡೆಸಿದರು.

ಕೊಲ್ಕತ್ತದಿಂದ ಶಿಲ್ಲಾಂಗ್‌ʼಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ!

0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟಕ ಇರುವ ಬಗ್ಗೆ ಬೆದರಿಕೆ ಪತ್ರ ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ಭಾರೀ ಆತಂಕ ಉಂಟಾಗಿದೆ.

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಘಾಲಯದ ಶಿಲ್ಲಾಂಗ್ ನಗರಕ್ಕೆ ತೆರಳಬೇಕಿದ್ದ ಇಂಡಿಗೋ ಸಂಸ್ಥೆಯ ವಿಮಾನ ಸಂಖ್ಯೆ 6ಇ–7304 ಬೆಳಿಗ್ಗೆ 9 ಗಂಟೆ 15 ನಿಮಿಷಕ್ಕೆ ಹೊರಡಲು ಸಿದ್ಧವಾಗಿತ್ತು.

ಈ ವೇಳೆ ಪ್ರಯಾಣಿಕರು ವಿಮಾನಕ್ಕೆ ಹತ್ತುತ್ತಿದ್ದ ಸಂದರ್ಭದಲ್ಲಿ, ವಿಮಾನದ ಶೌಚಾಲಯದಲ್ಲಿ ಒಂದು ಕಾಗದದ ಚೂರು ಪತ್ತೆಯಾಗಿದೆ. ಅದರಲ್ಲಿ ವಿಮಾನದೊಳಗೆ ಸ್ಫೋಟಕ ಇಡಲಾಗಿದೆ ಎಂದು ಬರೆಯಲಾಗಿತ್ತು.  ಘಟನೆ ತಿಳಿಯುತ್ತಿದ್ದಂತೆಯೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಬಳಿಕ ವಿಮಾನವನ್ನು ಪ್ರತ್ಯೇಕ ನಿಲುಗಡೆ ಪ್ರದೇಶಕ್ಕೆ ಸ್ಥಳಾಂತರಿಸಿ ಸಂಪೂರ್ಣ ತಪಾಸಣೆ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ್ ಸಿಂಗ್ ಅವರ ಮಾಹಿತಿಯಂತೆ, ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದ್ದು ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಪ್ರಕರಣ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಯಶ್​ಗೆ ವ್ಯಾಲೆಂಟೈನ್ಸ್​ ಡೇ ವಿಶ್ ಮಾಡಿದ ರಾಧಿಕಾ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕನ್ನಡದ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಧಿಕಾ ಪಂಡಿತ್ ಅವರು ಯಶ್ ಕುರಿತು ಹಂಚಿಕೊಂಡಿರುವ ಭಾವನಾತ್ಮಕ ಬರಹ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ ಈ ಜೋಡಿ, ನಂತರ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದರು. ತೆರೆ ಮೇಲಿನ ಸ್ನೇಹ, ನಂತರ ಪ್ರೀತಿಯಾಗಿ ಬೆಳೆದು, ಈಗ ಕುಟುಂಬ ಜೀವನದಲ್ಲಿ ಸಂತೋಷವಾಗಿ ಸಾಗುತ್ತಿದೆ. ಯಾವುದೇ ಅಡಚಣೆಗಳಿಲ್ಲದೆ ಇವರ ಪ್ರೀತಿಯ ನೌಕೆ ಮುನ್ನಡೆಯುತ್ತಿರುವುದು ಅಭಿಮಾನಿಗಳಿಗೆ ಪ್ರೇರಣೆಯಾಗಿದೆ.

“ನಿನ್ನ ಕಣ್ಣುಗಳಲ್ಲಿ ಕಾಣುವ ದಣಿವು ಮತ್ತು ಮೌನ ತ್ಯಾಗ ನನಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ನಮ್ಮಗಾಗಿ ಎಂಬುದು ನನಗೆ ಗೊತ್ತು. ನನ್ನನ್ನು ಪ್ರತಿದಿನ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ,” ಎಂಬ ಸಾಲುಗಳು ರಾಧಿಕಾ ಸಂದೇಶದ ಹೃದಯವಾಗಿವೆ.

ಇದೀಗ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಅಭಿಮಾನಿಗಳಲ್ಲಿ ಅಪಾರ ಕುತೂಹಲ ಹುಟ್ಟಿಸಿದೆ. ಅದರ ಬಳಿಕ ರಾಮಾಯಣ ಸಿನಿಮಾದಲ್ಲಿನ ಅವರ ಪಾತ್ರದ ಕುರಿತು ಸಹ ನಿರೀಕ್ಷೆಗಳು ಹೆಚ್ಚಿವೆ.

ವೈಯಕ್ತಿಕ ಜೀವನದಲ್ಲೂ, ವೃತ್ತಿಜೀವನದಲ್ಲೂ ಪರಸ್ಪರ ಬೆಂಬಲವಾಗಿ ನಿಂತಿರುವ ಈ ಜೋಡಿ, ಕನ್ನಡ ಚಿತ್ರರಂಗದ ಮಾದರಿ ದಂಪತಿಗಳಾಗಿ ಮತ್ತೊಮ್ಮೆ ಪ್ರೀತಿ ಮತ್ತು ಬದ್ಧತೆಯ ಉದಾಹರಣೆಯಾಗಿದೆ.

ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ: ಸಿಎಂ ಸಿದ್ದರಾಮಯ್ಯ

0

ಹಾವೇರಿ: ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿ, ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ ಎಂದರು.‌

ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದಸರ್ಕರದ ಸಹಸ್ರ ದಿನಾಚರಣೆ ಮತ್ತು ಒಂದು ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಂದಾಯ ಇಲಾಖೆಗೆ ಕೃಷ್ಣಬೈರೇಗೌಡರು ಸಚಿವರಾದ ಮೇಲೆ ಸರ್ಕಾರದಲ್ಲಿ ಕ್ರಾಂತಿಕಾರಿ ಪ್ರಗತಿ ಆಗಿದೆ ಎಂದು ಸಚಿವರ ಸಾಧನೆಗೆ ಸಿಎಂ ವೇದಿಕೆಯಲ್ಲೇ ಮೆಚ್ಚುಗೆ ವ್ಯಕ್ತಪಡಿಸಿದರು.‌ ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ. GST ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ ಎಂದು ದಾಖಲೆಗಳನ್ನು ಮಂಡಿಸಿದರು.

ಈ ಎಲ್ಲಾ ಸಾಧನೆ ಮತ್ತು ದಾಖಲೆಗಳನ್ನು ಕೇಂದ್ರ ಸರ್ಕಾರದ ಅನ್ಯಾಯದ ನಡುವೆಯೂ ಮಾಡಿ ತೋರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರೂ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಕೂಡ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಬಾಯಿ ಬಿಡುತ್ತಿಲ್ಲ‌ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಯ್ತು. ನಾವು ಕೊಟ್ಟ ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಅವಧಿಯಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. 2023-18 ರಲ್ಲೂ ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸಿ, ಪ್ರಣಾಳಿಕೆಯಲ್ಲಿ ಇಲ್ಲದ 30 ಭರವಸೆಗಳನ್ನು ಈಡೇರಿಸಿ “ನುಡಿದಂತೆ ನಡೆದು” ದಾಖಲೆ ಮಾಡಿದ್ದೇವೆ ಎಂದರು.

ಅಧಿಕಾರ ಇದ್ದಾಗ ಕೊಟ್ಟ ಭರವಸೆ ಈಡೇರಿಸದ ಬಿಜೆಪಿ ಈಗ ನಮ್ಮ ಖಜಾನೆ ಖಾಲಿ ಆಗಿದೆ ಎನ್ನುವ ಸುಳ್ಳು ಪ್ರಚಾರದಲ್ಲಿ ನಿರತವಾಗಿದೆ. ಇಲ್ಲಿಯವರೆಗೂ ಗ್ಯಾರಂಟಿಗಳ ಮೂಲಕ 118000 ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಖಾತೆಗೆ ಹಾಕಿದ್ದೇವೆ ಎಂದರು.

ಅಮಾರ್ತ್ಯಸೇನ್, ಅಭಿಜಿತ್ ಬ್ಯಾನರ್ಜಿ ಮುಂತಾದ ಆರ್ಥಿಕ ತಜ್ಞರ ಜೊತೆಗೆ ದಿನ ಪತ್ರಿಕೆಗಳು ಮತ್ತು ವಿಶ್ವ ವಿದ್ಯಾಲಯಗಳ ಅಧ್ಯಯನಗಳು ವ್ಯಕ್ತಪಡಿಸಿದ್ದ ಸದಾಭಿಪ್ರಾಯಗಳನ್ನು ಮುಖ್ಯಮಂತ್ರಿಗಳು ಓದಿ ವಿವರಿಸಿ,
ಬಿಜೆಪಿಯವರು ಜನರನ್ನು ತಪ್ಪು ದಾರಿಗೆಳೆಯುವುದು ಖಂಡನೀಯ ಎಂದರು.

ಕೇಂದ್ರಸರ್ಕಾರ ರಾಜ್ಯಕ್ಕೆ ಅನುದಾನ ನೀಡದೇ ಅನ್ಯಾಯ ಮಾಡುತ್ತಿದೆ. 1000 ದಿನಗಳ ಯಶಸ್ವೀ ಆಡಳಿತ ನಮ್ಮ ಜನಪರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. ನಮ್ಮ ಸರ್ಕಾರ 1000 ದಿನಗಳನ್ನು ಯಶಸ್ವಿಯಾಗಿ ಆಡಳಿತ ನಡೆಸಿದ್ದು, ನುಡಿದಂತೆ ನಡೆಯುವುದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಾವು ಎಲ್ಲ ಜಾತಿ ಧರ್ಮ ಭಾಷೆಯ ಜನರಿಗೆ ಸೇರಿದಂತಹ ಎಲ್ಲರನ್ನೊಳಗೊಂಡ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ನಂಬಿಕೆಯಿರಿಸಿದೆ. ನಾವು ಅಸಮಾನತೆ ನೀಗಿಸುವ ಕಾಯಕದಲ್ಲಿ ತೊಡಗಿದ್ದೇವೆ. ಬಿಜೆಪಿಯವರು 4 ವರ್ಷ ಏನು ಮಾಡಿಲ್ಲ. ಅವರು ಜನರನ್ನು ತಪ್ಪು ದಾರಿಗೆಳೆಯುವುದು ಖಂಡನೀಯ. ಬಿಜೆಪಿಯವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.

ಸರ್ಕಾರ ನಿನ್ನೆಗೆ ಒಂದು ಸಾವಿರ ದಿನ ಪೂರೈಸಿದ್ದು, ಈ ಸಾವಿರ ದಿನಗಳಲ್ಲಿ ನಮ್ಮ ಸಾಧನಾ ಸಮಾವೇಶ ನಮ್ಮ ಬದ್ಧತೆಯಾಗಿದೆ. ಬಡವರು, ದಲಿತರು, ಹಿಂದುಳಿದ ವರ್ಗದವರು,ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಮತ್ತೊಮ್ಮೆ ತಿಳಿಸುತ್ತೇನೆ ಎಂದು ಪುನರುಚ್ಚರಿಸಿದರು.

ಕೇಂದ್ರ ಸರ್ಕಾರ, ರಾಜ್ಯಕ್ಕೆ ಅನ್ಯಾಯ ಮಾಡಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ ಕೊರತೆಯಾಗಿದ್ದು, ರಾಜ್ಯಕ್ಕೆ 12 – 15 ಸಾವಿರ ಕೋಟಿ ನಷ್ಟವಾಗಿದೆ. ನಮಗೆ ಬರುವ ನ್ಯಾಯಯುತ ಪಾಲು ಸಿಗುತ್ತಿಲ್ಲ. ಜೆಜೆಎಂ ನಲ್ಲಿ 15 ಸಾವಿರ ಕೋಟಿ ಇನ್ನೂ ಕೊಟ್ಟಿಲ್ಲ. ಈ ಅನುದಾನ ನೀಡಿದರೆ, ರಾಜ್ಯದ ಬಹಳಷ್ಟು ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ ಎಂದರು.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ಆಟೋ, ಕಾರು ನಜ್ಜುಗುಜ್ಜು

0

ಮುಂಬೈ: ಮುಲುಂಡ್ ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ನ ಒಂದು ಭಾಗ ಕುಸಿದು ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾನ್ಸನ್ & ಜಾನ್ಸನ್ ಕಂಪನಿಯ ಸಮೀಪದ ಎಲ್‌ಬಿಎಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಮೆಟ್ರೋ ಕಂಬದ ಸಿಮೆಂಟ್ ಭಾಗವು ಏಕಾಏಕಿ ಕುಸಿದು ಕೆಳಗೆ ಸಂಚರಿಸುತ್ತಿದ್ದ ಆಟೋರಿಕ್ಷಾ ಹಾಗೂ ಕಾರಿನ ಮೇಲೆ ಬಿದ್ದಿದೆ. ಸಿಮೆಂಟ್ ಗೋಡೆ ಬಿದ್ದ ಪರಿಣಾಮ ಎರಡು ವಾಹನಗಳು ಹಾನಿಗೊಳಗಾಗಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 12:20ರ ವೇಳೆಗೆ ಘಟನೆ ಸಂಭವಿಸಿದೆ. ಸಿಮೆಂಟ್ ಭಾಗ ಕುಸಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ಪಡೆದ ನಂತರ, ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು, ಮೆಟ್ರೋ ಪ್ರಾಧಿಕಾರದ ಸಿಬ್ಬಂದಿ, ವಾರ್ಡ್ ಸಿಬ್ಬಂದಿ ಹಾಗೂ 108 ಅಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಸಂಚಾರ ದಟ್ಟನೆ ನಿಯಂತ್ರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಸ್ಥಳದಿಂದ ಮೆಟ್ರೋ ಪಿಲ್ಲರ್ ಅವಶೇಷಗಳನ್ನ ತೆರವುಗೊಳಿಸಲಾಯಿತು.

ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ: CM ಸಿದ್ದರಾಮಯ್ಯ

0

ಹಾವೇರಿ: ಸಮಾವೇಶ ಮಾಡುತ್ತಿರುವುದು ಸಾವಿರ ದಿನಾಚರಣೆ ಮೈಲಿಗಲ್ಲು ಅಲ್ಲ. ದೇಶದ ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದೇವೆ.

ಇಲ್ಲಿಯವರೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದು, ಮುಂದೆಯೂ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಹಾವೇರಿಯ ಸರ್ಕಾರಿ ಮೆಡಿಕಲ್ ಕಾಲೇಜು ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.

ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ವಿರೋಧಿಸುತ್ತಿದ್ದಾರೆ

ಬಿಜೆಪಿಯವರು ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ವಿರೋಧಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳ ಕಾಲ ಏನೂ ಮಾಡಿರಲಿಲ್ಲ ಎಂದರು.

ಬಿಜೆಪಿಗೆ ನೈತಿಕ ಹಕ್ಕಿಲ್ಲ

ನಮ್ಮನ್ನು ಟೀಕಿಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ನಾಲ್ಕು ವರ್ಷಗಳಲ್ಲಿ ಅವರು ಏನು ಮಾಡಿದ್ದಾರೆ. 2018 ರಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇ.10% ರಷ್ಟು ಈಡೇರಿಸಿಲ್ಲ. ನಾವು ನೀಡಿದ್ದ 592 ಭರವಸೆಗಳಲ್ಲಿ 243 ಭರವಸೆಗಳನ್ನು ಎರಡೂವರೆ ವರ್ಷಗಳಲ್ಲಿ ಈಡೇರಿಸಿದ್ದೇವೆ. ಉಳಿದವನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದರು. ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಸರ್ಕಾರ ಎಂದು ಸಂಸದ ಬಿ. ವೈ.ರಾಘವೇಂದ್ರ ಹೇಳಿರುವುದು ಮಾಡಿರುವುದು ಸುಳ್ಳು ಆರೋಪ ಎಂದರು.

ಅಧಿಕಾರ ಹಂಚಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ. ವರಿಷ್ಠರು ಹೇಳಿದ್ದನ್ನು ಪಕ್ಷದ ಎಲ್ಲರೂ ಕೇಳಬೇಕು ಎಂದರು. ಶಾಸಕರು ಈ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಪಕ್ಷದ ವರಿಷ್ಠರು ಮಾಡಿದ್ದರೆ ಮಾಡಿದ್ದಾರೆಯೇ? ಎಂದರು.

ಹೈ ಕಮಾಂಡ್ ಶಿವರಾತ್ರಿಯ ನಂತರ ಬದಲಾವಣೆ ಎಂದು ಹೇಳಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ದೆಹಲಿಗೆ ಕರೆದಾಗ ಹೋಗುವುದಾಗಿ ತಿಳಿಸಿ, ಅಧಿಕಾರ ಹಂಚಿಕೆಯ ಬಗ್ಗೆ ಈಗಾಗಲೇ ಉತ್ತರಿಸಿದ್ದು, ಈ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಬೇಡಿ ಎಂದರು.

ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

0

ಬೀದರ್: ಮನೆಯ ಮುಂದೆ ಆಟ ಆಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬೀದರ್ ತಾಲೂಕಿನ ಮಲ್ಲಿಕ್‌ಮರ್ಜಾಪುರ ಗ್ರಾಮದಲ್ಲಿ ಸಂಭವಿಸಿದೆ.

5 ವರ್ಷದ ಅವಿನಾಶ್ ಮೃತ ಬಾಲಕ. ಆಟವಾಡುವ ವೇಳೆ ಮನೆಯ ಮುಂದಿನ ಚರಂಡಿ ಕಾಲುವೆಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಎಂದಿನಂತೆ ಶಾಲೆ ಮುಗಿಸಿಕೊಂಡು ಬಂದಿದ್ದ ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದ. ಆದರೆ ಶುಕ್ರವಾರ ಸಂಜೆ 6 ಗಂಟೆಯಿಂದ ಬಾಲಕ ಕಾಣೆಯಾಗಿದ್ದು ಆತನಿಗಾಗಿ ಕುಟುಂಬಸ್ಥರು ಹುಡುಕಾಡುತ್ತಿದ್ದರು. ಆದರೆ ಎಲ್ಲೂ ಬಾಲಕನ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಮನೆಯ ಮುಂದಿನ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿರುವುದು ಗೊತ್ತಾಗಿದೆ. ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

“ಪಂಚ ಗ್ಯಾರಂಟಿ ಯೋಜನೆ”ಗಳು ಸಂಪೂರ್ಣ ವಿಫಲ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

0

ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶವನ್ನು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ “ಕಾಯಕವೇ ಕೈಲಾಸ” ಎಂಬ ನೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ “ಜನರನ್ನು ಕಾಯಿಸುವುದೇ ಕೈಲಾಸ” ಎಂಬ ಸ್ಥಿತಿಗೆ ತಳ್ಳಿದೆ ಎಂದು ವ್ಯಂಗ್ಯವಾಡಿದರು. ಸರ್ಕಾರದ ಯೋಜನೆಗಳಿಂದ ಜನರಿಗೆ ತೊಂದರೆ ಉಂಟಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿಸಲಾಗುತ್ತಿದೆ. ಅಬಕಾರಿ ಇಲಾಖೆಯಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಸಾವಿರ ಸುಳ್ಳು ಹೇಳಿ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು. ಅಹಿಂದ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.

“ರಾಮರಾಜ್ಯ ತರುತ್ತೇವೆ” ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಜನರನ್ನು ಮೋಸಗೊಳಿಸಿದೆ. ವಾಲ್ಮೀಕಿ ನಿಗಮ, ಅಬಕಾರಿ, ಸ್ಮಾರ್ಟ್ ಮೀಟರ್, ಗೃಹಲಕ್ಷ್ಮಿ ಹಾಗೂ ಮುಡಾ ಹಗರಣಗಳು ನಡೆದಿವೆ ಎಂದು ಆರೋಪಿಸಿದರು. ಗೃಹಲಕ್ಷ್ಮಿ ಯೋಜನೆಯ ಐದು ಸಾವಿರ ಕೋಟಿ ರೂಪಾಯಿ ಎಲ್ಲಿಗೆ ಹೋಗಿದೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಇನ್ನೂ ಉತ್ತರ ನೀಡಿಲ್ಲ ಎಂದು ಹೇಳಿದರು. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದ್ದು, ಕಾಂಗ್ರೆಸ್ ಮೇಲ್ದರ್ಜೆಯ ನಾಯಕರಿಗೆ ರಾಜ್ಯವನ್ನು ಅಡ ಇಟ್ಟಂತಾಗಿದೆ ಎಂದು ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು | ಪೆಟ್ರೋಲ್ ಬಂಕ್‌ಗೆ ನುಗ್ಗಿ ಐವರಿಂದ ದರೋಡೆ: ₹15,300 ಲೂಟಿ- ವಿಡಿಯೋ ವೈರಲ್

0

ಮೈಸೂರು: ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿಯ ಸ್ವಾಮಿ ಸರ್ವಿಸ್ ಸ್ಟೇಷನ್ದಲ್ಲಿ ಭೀಕರ ದರೋಡೆ ನಡೆದಿದೆ. ಫೆಬ್ರವರಿ 12ರ ರಾತ್ರಿ 10:30 ಗಂಟೆ ಸುಮಾರಿಗೆ ಐವರಿಂದ ಕೂಡಿದ ಗ್ಯಾಂಗ್ ಸಿಬ್ಬಂದಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ₹15,300 ರೂಪಾಯಿ ಲೂಟಿ ಮಾಡಿದ್ದಾರೆ.

ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದ್ದು, ಗ್ಯಾಂಗ್ ಸದಸ್ಯರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ಮೊದಲಿಗೆ ಪೆಟ್ರೋಲ್ ಹಾಕಿಸಿಕೊಂಡು ತೋರಣ ಮಾಡಿದ ಬಳಿಕ ಕಚೇರಿಯೊಳಗೆ ಪ್ರವೇಶಿಸಿ ಹಣ ಕಸಿದುಕೊಂಡು ತಲೆಗೆ ಹೊಗಿದ್ದಾರೆ.

ಬಿಳಿಕೆರೆ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು, ಗ್ಯಾಂಗ್ ಸದಸ್ಯರನ್ನು ಹಿಡಿಯಲು ತಕ್ಷಣದ ತನಿಖೆ ನಡೆಸುತ್ತಿದೆ. ಪೊಲೀಸರು ಸಾರ್ವಜನಿಕರಿಂದ ಮಾಹಿತಿಯನ್ನು ವಿನಂತಿಸುತ್ತಿದ್ದಾರೆ.

ಸ್ವಾಮೀಜಿಗೂ ಸಿಕ್ತು ಸರ್ಕಾರದಲ್ಲಿ ಪ್ರಮೋಷನ್..! ಸರ್ಕಾರಿ ಅಧಿಕಾರಿಗಳ ಮಹಾ ಎಡವಟ್ಟು

0

ಮಂಡ್ಯ: ಸ್ವಯಂ ನಿವೃತ್ತಿ ಪಡೆದು ಆಧ್ಯಾತ್ಮದ ಹಾದಿ ಹಿಡಿದು ಪೀಠಾಧಿಪತಿಯಾಗಿರುವ ಸ್ವಾಮೀಜಿಯೊಬ್ಬರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿರುವ ಕುರಿತು ವಿವಾದ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಬಡ್ತಿ ನೀಡಿರುವ ಈ ಪಟ್ಟಿಯಲ್ಲಿ ಅಚ್ಚರಿಯ ಸಂಗತಿಯಾಗಿ, ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್. ನಾಗರಾಜ ಅವರ ಹೆಸರೂ ಸೇರಿದೆ ಎಂಬ ಆರೋಪ ಕೇಳಿಬಂದಿದೆ.

ಹೆಚ್.ಎಲ್. ನಾಗರಾಜ ಅವರು ಈ ಹಿಂದೆ ಕೆಎಎಸ್ ಅಧಿಕಾರಿಯಾಗಿ ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಗೂ ಮುನ್ನವೇ ಅವರು ಸರ್ಕಾರಿ ಸೇವೆಯನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಸದ್ಯ ಅವರು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.

ಆದರೆ ಸರ್ಕಾರದ ಆದೇಶದಲ್ಲಿ ಅವರನ್ನು ‘ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ’ ಎಂದು ಉಲ್ಲೇಖಿಸಿರುವುದು ಆಡಳಿತಾತ್ಮಕ ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

error: Content is protected !!