Home Blog Page 186

“ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ಇರಲಿ”: ರಶ್ಮಿಕಾ ಮಂದಣ್ಣ

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ. ಇಂದು ವಿಜಯ್ ದೇವರಕೊಂಡ ತಮ್ಮ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ರಶ್ಮಿಕಾ ಮಂದಣ್ಣ ಅವರ ಹಳೆಯ ಭಾವನಾತ್ಮಕ ಹೇಳಿಕೆಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ, ತಮ್ಮ ಜೀವನದ ಕಷ್ಟದ ಹಂತದಲ್ಲಿ ತಮಗೆ ನಿಜವಾದ ಬೆಂಬಲ ನೀಡಿದ್ದು ವಿಜಯ್ ದೇವರಕೊಂಡ ಎಂದು ಹೇಳಿಕೊಂಡಿದ್ದರು. “ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೀಡುವ ವ್ಯಕ್ತಿಯೊಂದಿಗೆ ಇರೋದು ಎಷ್ಟು ಮುಖ್ಯ ಅನ್ನೋದು ಈಗ ಅರ್ಥವಾಗಿದೆ” ಎಂದು ಅವರು ಹೇಳಿದ್ದರು.

ಇದೇ ವೇಳೆ ‘ಗರ್ಲ್‌ಫ್ರೆಂಡ್’ ಸಿನಿಮಾದ ಕಾರ್ಯಕ್ರಮದಲ್ಲಿ ವಿಜಯ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ರಶ್ಮಿಕಾ, “ಈ ಸಿನಿಮಾದ ಆರಂಭದಿಂದಲೂ ನೀನು ನನ್ನ ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ದೇವರಕೊಂಡ ಇರಲಿ ಎಂದು ನಾನು ಬಯಸುತ್ತೇನೆ. ಅಂಥ ವ್ಯಕ್ತಿ ಸಿಗೋದು ನಿಜಕ್ಕೂ ಆಶೀರ್ವಾದ” ಎಂದು ಭಾವುಕರಾಗಿದ್ದರು.

‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ಈ ಜೋಡಿ, ಬಳಿಕ ರಿಯಲ್ ಲೈಫ್‌ನಲ್ಲೂ ಆಪ್ತರಾಗಿದ್ದರು. ಡೇಟಿಂಗ್ ವದಂತಿಗಳನ್ನು ಹಲವು ಬಾರಿ ಎದುರಿಸಿದ್ದರೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಈಗ ವಿವಾಹದ ಬಳಿಕ ವಿಜಯ್ ದೇವರಕೊಂಡ ಮೊದಲ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು, ಸಿನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಮಹತ್ವದ ಬೆಳವಣಿಗೆ; ಪ್ರಮುಖ ಆರೋಪಿ ಶ್ರೀಕಿ ಸೇರಿ ಇಬ್ಬರ ಬಂಧನ

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್ಕಾಯಿನ್ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದ್ದು, ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.

ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ‘ಶ್ರೀಕಿ’, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಅವರನ್ನು ಇಡಿ ಅಧಿಕಾರಿಗಳು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಇಡಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಆದೇಶದ ಮೇರೆಗೆ ಮೂವರನ್ನೂ 10 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಲಾಗಿದೆ.

ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆದಿರುವ ಈ ಬಿಟ್ಕಾಯಿನ್ ಹಗರಣದಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದಾನೆ. ಹ್ಯಾಕಿಂಗ್, ಡಿಜಿಟಲ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಆರೋಪಗಳು ಆತನ ವಿರುದ್ಧ ದಾಖಲಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುನೀಶ್ ಹೆಗ್ಡೆ ಹಾಗೂ ಪ್ರಸಿದ್ಧ ಶೆಟ್ಟಿ ಸೇರಿದಂತೆ ಇತರರು, ತಮ್ಮ ವಿರುದ್ಧ ದಾಖಲಾಗಿರುವ ಹ್ಯಾಕಿಂಗ್ ಮತ್ತು ವಂಚನೆ ಪ್ರಕರಣಗಳನ್ನು ರದ್ದುಪಡಿಸುವಂತೆ ಈ ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಏಪ್ರಿಲ್ ತಿಂಗಳಲ್ಲಿ ಸಲ್ಲಿಸಿದ್ದ ಆ ಅರ್ಜಿಗಳ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಲಿವ್ ಇನ್ ರಿಲೇಶನ್ʼಶಿಪ್ ನಲ್ಲಿದ್ದ ಯುವಕ ಆತ್ಮಹತ್ಯೆ! ಜೊತೆಯಲ್ಲಿದ್ದ ಮಹಿಳೆ ಪರಾರಿ

ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಎಂದು ಗುರುತಿಸಲಾಗಿದೆ.

ಮೃತ ತಿಪ್ಪೇಸ್ವಾಮಿ ಹಾಗೂ ದಾವಣಗೆರೆ ಮೂಲದ ಮಹಿಳೆ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ತಿಳಿದುಬಂದಿದೆ.

ಆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ತಿಪ್ಪೇಸ್ವಾಮಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿಕೊಂಡು ತಿಂಗಳಿಗೆ ಮೂರು ಸಾವಿರ ರೂಪಾಯಿ ಬಾಡಿಗೆ ನೀಡಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಮಹಿಳೆ ನನ್ನನ್ನು ಮೆಂಟೇನ್ ಮಾಡಲಾಗುವುದಿಲ್ಲ, ಬಿಟ್ಟುಬಿಡು” ಎಂದು ಯುವಕನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಯುವಕನ ಸಾವಿಗೆ ಮಹಿಳೆಯೇ ಕಾರಣ ಎಂದು ಆರೋಪಿಸಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ಪೊಲೀಸರು ಆಕೆಯ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕೆಲಸ ಮಾಡಿಸಿದರೂ ಕೂಲಿ ಇಲ್ಲ: ಉದ್ಯೋಗ ಖಾತ್ರಿ ಯೋಜನೆ ಅವ್ಯವಸ್ಥೆಗೆ ಕಾರ್ಮಿಕರ ಆಕ್ರೋಶ – ಪೇಸ್ ಲಾಕ್: NMR ಗೊಂದಲಕ್ಕೆ ಮುತ್ತಿಗೆ

ಲಕ್ಷ್ಮೇಶ್ವರ; ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳದೇ ಅವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನೂರಾರು ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಯಿಂದ ಪ್ರತಿ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಬಡ ಕೂಲಿಕಾರ್ಮಿಕರಿಗೆ ನೀಡಬೇಕಾದ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ವನಿಯೋಜಿತ ಮಾಡದೇ ಇರುವುದರಿಂದ ಕೆಲಸ ನಿರ್ವಹಣೆ ಗೊಂದಲದ ನಡುವೆ ಸಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದರು.

ಮುಖ್ಯವಾಗಿ ಪೇಸ್‌ಲಾಕ್ ತಾಂತ್ರಿಕ ಸಮಸ್ಯೆಯನ್ನು ನೆಪವೊಡ್ಡಿ ಹಲವಾರು ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಆಡಳಿತ ಮುಂಚಿತವಾಗಿ ಕಾಮಗಾರಿಗಳನ್ನು ಯೋಜಿಸಿ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷವೂ ಮಳೆ ಆರಂಭವಾದ ಬಳಿಕ ಕಾಮಗಾರಿ ನಡೆಸಲು ಪ್ರಯತ್ನಿಸಿದ್ದು, 20 ದಿನ ಕೆಲಸ ಮಾಡಿದರೂ ಕೆಲವೇ ದಿನಗಳ ಅರ್ಧ ಕೂಲಿ ಮಾತ್ರ ಪಾವತಿಸಲಾಗಿದೆ. ಇದಕ್ಕೂ ತಾಂತ್ರಿಕ ದೋಷವನ್ನೇ ಕಾರಣವಾಗಿ ಹೇಳಲಾಗಿದೆ ಎಂದು ಕಾರ್ಮಿಕರು ದೂರಿದರು.

ಈ ವರ್ಷವೂ ಪೂರ್ವಯೋಜನೆ ಇಲ್ಲದೇ ಏಕಾಏಕಿ ಕಾಮಗಾರಿ ಆರಂಭಿಸಲಾಗಿದೆ. ಕಾರ್ಮಿಕರು ಸ್ಥಳಕ್ಕೆ ತೆರಳಿ ಕೆಲಸ ಆರಂಭಿಸಿದರೂ, ಪೇಸ್‌ಲಾಕ್ ತೆಗೆಯದ ಕಾರಣ ಎನ್‌ಎಂಆರ್ ದಾಖಲಾಗದೇ ಹಲವರು ಕೂಲಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ ಸೂರಣಗಿ ಮಾತನಾಡಿ, ಪ್ರತಿವರ್ಷ ಕಾರ್ಮಿಕರು ಜಾಬ್ ಕಾರ್ಡ್ ಸಲ್ಲಿಸಿದರೂ ಸಿಬ್ಬಂದಿ ಸರಿಯಾಗಿ ಎನ್‌ಎಂಆರ್ ಹಾಕುವುದಿಲ್ಲ. ಪೂರ್ವಯೋಜನೆ ಇಲ್ಲದೇ ಕಾಮಗಾರಿ ನಡೆಸುತ್ತಿರುವುದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಕೃಷಿ ಚಟುವಟಿಕೆ ಆರಂಭವಾಗುವ ಮೊದಲು ಸಮಸ್ಯೆ ಪರಿಹರಿಸಿ ಕೂಲಿಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

“ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಮಾಹಿತಿ ನೀಡಲಾಗಿದೆ. ಪೇಸ್‌ಲಾಕ್ ಸೇರಿ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಕಾರ್ಮಿಕರ ನೋಂದಣಿ ವಿಳಂಬವಾಗುತ್ತಿದೆ. ಇದು ಜಿಲ್ಲೆಯ ಹಲವೆಡೆ ಕಂಡುಬಂದಿರುವ ಸಮಸ್ಯೆಯಾಗಿದ್ದು, ಶೀಘ್ರ ಪರಿಹರಿಸಿ ಕಾಮಗಾರಿ ಸುಗಮಗೊಳಿಸಲಾಗುವುದು.” ಎಂದು ರೋಣದ, ಪಿಡಿಓ ಜಿ.ಎಂ ಹೇಳಿದರು.

ಮನೆಯಲ್ಲಿ ಮಲಗಿದ್ದ 5 ತಿಂಗಳ ಮಗು ಮೇಲೆ ಬೀದಿ ನಾಯಿ ದಾಳಿ: ಚಿಕಿತ್ಸೆ ಫಲಿಸದೆ ಸಾವು

ಬೀದರ್: ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಬೀದಿ ನಾಯಿಯ ದಾಳಿಗೆ ಐದು ತಿಂಗಳ ಹೆಣ್ಣು ಮಗು ಬಲಿಯಾದ ದುರ್ಘಟನೆ ನಡೆದಿದೆ.

ಶಿವಾನಿ ಎಂಬ ಹಸುಗೂಸನ್ನು ತಾಯಿ ಮನೆಯ ಪಡಸಾಲೆಯಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದಾಗ, ಮನೆಗೆ ನುಗ್ಗಿದ ಬೀದಿ ನಾಯಿ ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮೃತ ಶಿವಾನಿ ಕುಟುಂಬದ ನಾಲ್ಕನೇ ಹೆಣ್ಣು ಮಗು ಎಂದು ತಿಳಿದುಬಂದಿದೆ.

ಘಟನೆ ಬಳಿಕ ಸ್ಥಳೀಯರು ಹಾಗೂ ಕುಟುಂಬಸ್ಥರು ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ ಭೇಟಿ: ನಗರ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಹಲವು ಕಡೆ ಸಂಚಾರ ಮಾರ್ಪಾಡು ಹಾಗೂ ವಾಹನ ನಿಲುಗಡೆ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಈ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನವೂ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ.

ವಾಹನ ನಿಲುಗಡೆ ನಿರ್ಬಂಧ

ಭಾನುವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೆಚ್ಎಎಲ್ ಗೇಟ್ ನಂ.30 ಮುಂಭಾಗದಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.

ಇದೇ ವೇಳೆ ಕೆಳಕಂಡ ಪ್ರದೇಶಗಳಲ್ಲೂ ಪಾರ್ಕಿಂಗ್ ನಿರ್ಬಂಧ ಜಾರಿಯಲ್ಲಿರಲಿದೆ:

  • ಹೆಚ್ಎಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆ – ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿವರೆಗೆ (ಎರಡೂ ಬದಿಯಲ್ಲಿ)
  • ಹೆಚ್ಎಎಲ್ ಗೇಟ್ ನಂ.30 ರಸ್ತೆ – ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30ರವರೆಗೆ
  • ಹಳೆ ವಿಮಾನ ನಿಲ್ದಾಣ ರಸ್ತೆ – ಎಸ್.ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ

ಗಣ್ಯರು ಹಾಗೂ ಹಿರಿಯ ಅಧಿಕಾರಿಗಳಿಗೆ ಎಸ್.ಡಿ ರಸ್ತೆ ಜಂಕ್ಷನ್‌ನಲ್ಲಿರುವ ಹೆಚ್ಎಎಲ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್ ಹಾಗೂ ಸುರಂಜನ್ ದಾಸ್ ರಸ್ತೆಯ ಹೆಚ್ಎಎಲ್ ಬಸ್ ಯಾರ್ಡ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ನೈಸ್ ರಸ್ತೆ ಸಂಚಾರ ಬದಲಾವಣೆ

ಪ್ರಧಾನಿ ಭೇಟಿ ಹಿನ್ನೆಲೆ ನೈಸ್ ರಸ್ತೆಯಲ್ಲೂ ಕೆಲ ಮಾರ್ಗಗಳಲ್ಲಿ ಸಂಚಾರ ನಿಯಂತ್ರಣ ಜಾರಿಗೊಳಿಸಲಾಗಿದೆ.

  • ತುಮಕೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ತಿರುವು ಪಡೆದು ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಂಚರಿಸಬೇಕು.
  • ಮಾಗಡಿ ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವವರು ಸುಮ್ಮನಹಳ್ಳಿ ಜಂಕ್ಷನ್ ಬಳಿ ಪರ್ಯಾಯ ಮಾರ್ಗ ಬಳಸಬೇಕು.
  • ಮೈಸೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ ಮೂಲಕ ಔಟರ್ ರಿಂಗ್ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ಕನಕಪುರ ಕಡೆಗೆ ಪರ್ಯಾಯ ಮಾರ್ಗಗಳು

ಮಾರ್ಗ-1:
ಕೋಣನಕುಂಟೆ ಕ್ರಾಸ್ → ವಸಂತಪುರ → ಕೆಂಗೇರಿ → ಮೈಸೂರು ರಸ್ತೆ → ಅಗರ → ಬಂಜಾರಪಾಳ್ಯ → ಕಗ್ಗಲಿಪುರ

ಮಾರ್ಗ-2:
ಎ2ಬಿ ಜಂಕ್ಷನ್ → ನಾರಾಯಣನಗರ ಜೋಡಿ ರಸ್ತೆ → ಅಂಜನಾಪುರ 80 ಅಡಿ ರಸ್ತೆ → ಬನ್ನೇರುಘಟ್ಟ ಮುಖ್ಯರಸ್ತೆ → ಕಗ್ಗಲಿಪುರ

ಪ್ರಯಾಣಿಕರು ಸಂಚಾರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಪ್ರಯಾಣ ಯೋಜನೆ ಮಾಡಿಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಬಂಗಾಳದಲ್ಲಿ ಬಿಜೆಪಿ ಯುಗಾರಂಭ; ಸುವೇಂದು ಅಧಿಕಾರಿ ನೂತನ ಸಿಎಂ ಆಗಿ ಪ್ರಮಾಣ ಸ್ವೀಕಾರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆ ಸಂಭವಿಸಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಎನ್‌ಡಿಎ ಆಡಳಿತದ 20 ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ಸರ್ಕಾರಕ್ಕೆ ಶುಭ ಹಾರೈಸಿದರು.

ಸುವೇಂದು ಅಧಿಕಾರಿ ಅವರೊಂದಿಗೆ ದಿಲೀಪ್ ಘೋಷ್, ಅಗ್ನಿಮಿತ್ರಾ ಪೌಲ್, ಅಶೋಕ್ ಕಿರ್ತನ್ಯ, ಕ್ಷುದಿರಂ ತಡು ಮತ್ತು ನಿಶಿತ್ ಪ್ರಾಮಾಣಿಕ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತೆರೆದ ವಾಹನ ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸಿ, ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂದಿಗ್ರಾಮ ಚಳವಳಿಯಿಂದ ಹೊರಹೊಮ್ಮಿದ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ವಿರುದ್ಧದ ರಾಜಕೀಯ ಹೋರಾಟದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯೊಂದಿಗೆ ‘ಸೋನಾರ್ ಬಾಂಗ್ಲಾ’ ಕನಸನ್ನು ನನಸಾಗಿಸುವ ಸವಾಲು ಅವರ ಮುಂದಿದೆ.

ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ: ವದಂತಿಗಳಿಗೆ ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮಿಳುನಾಡು ಕಾಂಗ್ರೆಸ್ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ಬಂದಿದ್ದಾರೆ ಎನ್ನುವ ಮಾಹಿತಿ ಸಂಪೂರ್ಣ ತಪ್ಪು ಎಂದು ಹೇಳಿದರು.

ಈಗಲ್ಟನ್ ರೆಸಾರ್ಟ್‌ಗೆ ಯಾರೂ ಬಂದಿಲ್ಲ. ಆ ರೆಸಾರ್ಟ್ ಸದ್ಯ ದುರಸ್ತಿ ಕಾಮಗಾರಿಗಾಗಿ ಮುಚ್ಚಲಾಗಿದೆ. ಶಾಸಕರು ಹೈದರಾಬಾದ್‌ಗೆ ಹೋಗಿದ್ದಾರೆ ಎಂದು ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಹೈಕಮಾಂಡ್‌ನವರೂ ಸಹ ನನ್ನೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರು.

ಪಕ್ಷದ ಹೈಕಮಾಂಡ್ ಮಾತನಾಡಿದ್ದರೆ ಅದು ಬೇರೆ ವಿಚಾರವಾಗುತ್ತಿತ್ತು. ಆಗ ನಾನು ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತಿದ್ದೆ. ಆದರೆ ಈ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಪ್ರಚಾರಕ್ಕೆ ಹೋಗಲು ಹೇಳಿದ್ದರು, ಹೋಗಿದ್ದೆ. ಪ್ರಣಾಳಿಕೆ ಬಿಡುಗಡೆಗೆ ಕರೆದಿದ್ದರು, ಅದಕ್ಕೂ ಹೋಗಿದ್ದೆ. ಇದನ್ನು ಬಿಟ್ಟರೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಜನ್ಮದಿನ ಇದ್ದರೆ ಒಳ್ಳೆಯದಾಗಲಿ. ಭಗವಂತ ಅವರಿಗೆ ಆರೋಗ್ಯ ಮತ್ತು ಸುಖ ನೀಡಲಿ ಎಂದು ಹಾರೈಸಿದರು.

ಆದರೆ ರಾಜಕೀಯವಾಗಿ ಅವರ ವಿಚಾರಧಾರೆ ಬೇರೆ, ನಮ್ಮ ವಿಚಾರಧಾರೆ ಬೇರೆ ಎಂದು ಡಿಸಿಎಂ ಹೇಳಿದರು. ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ನಾಯಕರನ್ನು ಕರೆದು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧಕ್ಕೆ ತಾತ್ಕಾಲಿಕ ವಿರಾಮ: 3 ದಿನಗಳ ಕದನ ವಿರಾಮ ಘೋಷಣೆ

ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ತಾತ್ಕಾಲಿಕ ವಿರಾಮ ನೀಡುವ ಉದ್ದೇಶದಿಂದ ಮೇ 9ರಿಂದ 11ರವರೆಗೆ ಮೂರು ದಿನಗಳ ಕದನವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ದ್ವಿತೀಯ ಮಹಾಯುದ್ಧದ ವಿಜಯ ದಿನವನ್ನು ರಷ್ಯಾದಲ್ಲಿ ಆಚರಿಸಲಾಗುತ್ತಿದೆ. ಯುದ್ಧದಲ್ಲಿ ಭಾಗಿಯಾಗಿದ್ದ ಉಕ್ರೇನ್‌ನಲ್ಲಿಯೂ ಈ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆ ನನ್ನ ಮನವಿಯ ಮೇರೆಗೆ ಎರಡೂ ದೇಶಗಳ ನಾಯಕರು ಮೂರು ದಿನಗಳ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕದನವಿರಾಮ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಎಲ್ಲಾ ರೀತಿಯ ಸೈನಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಜೊತೆಗೆ ಯುದ್ಧದಲ್ಲಿ ಬಂಧಿತರಾಗಿರುವ ಕೈದಿಗಳ ಪೈಕಿ ಪ್ರತಿ ದೇಶದಿಂದ 1,000 ಕೈದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಹ ಒಪ್ಪಂದವಾಗಿದೆಯೆಂದು ಟ್ರಂಪ್ ಹೇಳಿದ್ದಾರೆ.

ಇದೇ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.

ಮೇ 9ರಿಂದ 11ರವರೆಗೆ ರಷ್ಯಾ ಜೊತೆ ತಾತ್ಕಾಲಿಕ ಕದನವಿರಾಮ ಜಾರಿಗೆ ಬರಲಿದ್ದು, ಅದರ ಭಾಗವಾಗಿ 1,000 ಯುದ್ಧ ಕೈದಿಗಳ ವಿನಿಮಯಕ್ಕೂ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.

ಈ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಲು ಸಹಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇನ್ನೊಂದೆಡೆ ರಷ್ಯಾ ಕೂಡ ಮೂರು ದಿನಗಳ ಕದನವಿರಾಮ ಘೋಷಣೆಯನ್ನು ಅಧಿಕೃತವಾಗಿ ದೃಢಪಡಿಸಿದೆ.

ಸರ್ಕಾರಿ ಆಸ್ಪತ್ರೆಯಲ್ಲೇ ಅಪ್ರಾಪ್ತೆಯ ಮೇಲೆ ದೌರ್ಜನ್ಯ: ಡಿ-ಗ್ರೂಪ್ ನೌಕರ ವಿರುದ್ಧ ಪೋಕ್ಸೋ ಕೇಸ್ ದಾಖಲು

0

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಡಿ-ಗ್ರೂಪ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಜಯ್ ಮದಕರಿ (37) ಎಂದು ಗುರುತಿಸಲಾಗಿದೆ. ತಾಯಿಯ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಬಾಲಕಿಯನ್ನು ಆರೋಪಿ ತನ್ನ ನಿವಾಸಕ್ಕೆ ಕರೆದೊಯ್ದು ಮತ್ತು ಬರುವ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಹೊಸಪೇಟೆ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

error: Content is protected !!