Home Blog Page 188

ನಾವು ಅಸಮಾನತೆ ನೀಗಿಸುವ ಕಾಯಕದಲ್ಲಿ ತೊಡಗಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ಹಾವೇರಿ: ಕಂದಾಯ ಇಲಾಖೆಯಿಂದ 2ನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದೇವೆ. ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರ್ಕರದ ಸಹಸ್ರ ದಿನಾಚರಣೆ ಮತ್ತು ಒಂದು ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಗೆ ಕೃಷ್ಣಬೈರೇಗೌಡರು ಸಚಿವರಾದ ಮೇಲೆ ಸರ್ಕಾರದಲ್ಲಿ ಕ್ರಾಂತಿಕಾರಿ ಪ್ರಗತಿ ಆಗಿದೆ. ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ. ಒಟ್ಟು ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ. ಈ ಎಲ್ಲಾ ಸಾಧನೆ ಮತ್ತು ದಾಖಲೆಗಳನ್ನು ಕೇಂದ್ರ ಸರ್ಕಾರದ ಅನ್ಯಾಯದ ನಡುವೆಯೂ ಮಾಡಿ ತೋರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರೂ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಕೂಡ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಬಾಯಿ ಬಿಡುತ್ತಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಗಿದೆ. ನಾವು ಕೊಟ್ಟ ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಅವಧಿಯಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಅಧಿಕಾರ ಇದ್ದಾಗ ಕೊಟ್ಟ ಭರವಸೆ ಈಡೇರಿಸದ ಬಿಜೆಪಿ ಈಗ ನಮ್ಮ ಖಜಾನೆ ಖಾಲಿ ಆಗಿದೆ ಎನ್ನುವ ಸುಳ್ಳು ಪ್ರಚಾರದಲ್ಲಿ ನಿರತವಾಗಿದೆ. ಇಲ್ಲಿಯವರೆಗೂ ಗ್ಯಾರಂಟಿಗಳ ಮೂಲಕ 1,18,000 ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಖಾತೆಗೆ ಹಾಕಿದ್ದೇವೆ ಎಂದರು.

ಈ ಸಾವಿರ ದಿನಗಳಲ್ಲಿ ನಮ್ಮ ಸಾಧನಾ ಸಮಾವೇಶ ನಮ್ಮ ಬದ್ಧತೆಯಾಗಿದೆ. ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಪುನರುಚ್ಛರಿಸಿದರು.

ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಹಾಗೂ 20ಕ್ಕೂ ಹೆಚ್ಚು ಮಂದಿ ಶಾಸಕರು, ಮುಖಂಡರು, ನಾಯಕರು ಉಪಸ್ಥಿತರಿದ್ದರು.

ಎಲ್ಲ ಜಾತಿ, ಧರ್ಮ, ಭಾಷೆಯ ಜನರಿಗೆ ಸೇರಿದಂತಹ ಎಲ್ಲರನ್ನೊಳಗೊಂಡ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ನಂಬಿಕೆಯಿರಿಸಿದೆ. ನಾವು ಅಸಮಾನತೆ ನೀಗಿಸುವ ಕಾಯಕದಲ್ಲಿ ತೊಡಗಿದ್ದೇವೆ. ಬಿಜೆಪಿಯವರು 4 ವರ್ಷ ಏನೂ ಮಾಡಿಲ್ಲ. ಬಿಜೆಪಿಯವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಾವಿರ ದಿನಗಳ ಸಾರ್ಥಕ ಸೇವೆಯ ಸಮರ್ಪಣೆ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರವು ಬಡಜನರ ಹಾಗೂ ಸಾಮಾನ್ಯ ಜನರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ಸಾವಿರ ದಿನಗಳ ಸಾರ್ಥಕ ಸೇವೆಯನ್ನು ಜನರಿಗೆ ಸಮರ್ಪಿಸುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜನಸಾಮಾನ್ಯರ ಕೆಲಸ, ಬಡವರ ಕೆಲಸಗಳನ್ನು ಜನಸೇವೆಯೇ ಜನಾರ್ಧನನ ಸೇವೆ ಎಂದು ತಿಳಿದುಕೊಂಡು ಕಂದಾಯ ಇಲಾಖೆಯ ಅಧಿಕಾರಿಗಳೇ ಮನೆ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಮನೆಗಳಿಗೆ ಹಕ್ಕುಪತ್ರ ಇಲ್ಲದೇ ಬದುಕು ಅತಂತ್ರದಿಂದ ಕೂಡಿದ ಜನರಿಗೆ ಶಾಶ್ವತ ಪರಿಹಾರ ಕೊಡಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಿದೆ. 6500 ಕಂದಾಯ ಗ್ರಾಮಗಳ ಘೋಷಣೆಯು ಗುರಿಯನ್ನು ಹೊಂದಿದ್ದು, 2,20,000 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

ಬಡಜನರಿಗೆ ಭೂ ಗ್ಯಾರಂಟಿ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ. ಶನಿವಾರ ಹಾವೇರಿಯಲ್ಲಿ ಜರುಗುವ ಸಾಧನಾ ಸಮಾವೇಶದಲ್ಲಿ 1,06,000 ಹಕ್ಕುಪತ್ರಗಳನ್ನು ಸಮರ್ಪಣೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಇದೊಂದು ವೇದಿಕೆಯಾಗಿದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸ ಮೂರ್ತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬೈರತಿ ಬಂಧನದಲ್ಲಿ ರಾಜಕೀಯವಿಲ್ಲ

ಇದೇ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಶಾಸಕ ಬೈರತಿ ಬಸವರಾಜ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಅಂಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಬೈರತಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗಲಿ. ಕಾನೂನು ರೀತಿಯಲ್ಲಿಯೇ ಎಲ್ಲವೂ ನಡೆಯಲಿ. ಅದರಲ್ಲಿ ನಾವು ರಾಜಕೀಯ ಬೆರೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವ ಕಾಲಕ್ಕೆ ಏನಾಗಬೇಕೋ ಅದೇ ಆಗುತ್ತದೆ. ಇಂತಹ ಚರ್ಚೆಗಳಿಂದ ಸಾರ್ವಜನಿಕರ ಹಿತ ಕಾಯುವ ಕೆಲಸ ಆಗುವುದಿಲ್ಲ. ಕಾಲವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ ಎಂದು ಹೇಳಿದರಲ್ಲದೆ, ನನಗೆ ಕೇಳಿದರೆ ನಾಲ್ಕು ಗೋಡೆಗಳ ಮಧ್ಯೆ ಹೇಳ್ತೀನಿ ಎಂದು ಹೇಳುವ ಮೂಲಕ ಈ ವಿಚಾರದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಚೆನ್ನೈ| 33ನೇ ಈಶ ಮಹಾಶಿವರಾತ್ರಿಗೆ ಈ ಬಾರಿ ರಾಜನಾಥ್ ಸಿಂಗ್ ಮುಖ್ಯ ಅತಿಥಿ!

0

ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಭಾನುವಾರ 33ನೇ ಮಹಾಶಿವರಾತ್ರಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ಇತರ ಪ್ರಮುಖ ಗಣ್ಯರೂ ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷವಾಗಿ, ಸದ್ಗುರು ಯೋಗೇಶ್ವರ ಲಿಂಗ ಮಹಾ ಅಭಿಷೇಕವನ್ನು ಕೈಗೊಳ್ಳಲಿದ್ದಾರೆ.

ಅಭಿಷೇಕದ ನಂತರ ಸಂಗೀತ ಮತ್ತು ಧ್ಯಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಭವ್ಯ ಮೆರವಣಿಗೆಯಾದ ಲಿಂಗ ಭೈರವಿ ಮಹಾಯಾತ್ರೆ ನಡೆಯಲಿದೆ. ಪ್ರಮುಖ ಆಕರ್ಷಣೆ ಎಂದರೆ ಆದಿಯೋಗಿ ದಿವ್ಯ ದರ್ಶನಂ, 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ಬೆಳಕು ಮತ್ತು ಧ್ವನಿ ಪ್ರದರ್ಶನವು ನಡೆಯಲಿದೆ.

ಕಾರ್ಯಕ್ರಮವು 23 ಭಾಷೆಗಳಲ್ಲಿ ಪ್ರಸಾರವಾಗಿದ್ದು, 100ಕ್ಕೂ ಹೆಚ್ಚು ಟಿವಿ ಚಾನೆಲ್ ಮತ್ತು ಡಿಜಿಟಲ್ ಸ್ಟ್ರೀಮ್‌ನಲ್ಲಿ ಲಭ್ಯವಾಗಲಿದೆ. ವಿಶ್ವಾದ್ಯಂತ 1.4 ಕೋಟಿ ವೀಕ್ಷಕರು ಇದನ್ನು ವೀಕ್ಷಿಸಬಹುದು.

ಇ-ಸ್ವತ್ತು ವಿತರಣೆಯಲ್ಲಿ ವೇಗ: ತಾಂತ್ರಿಕ ತೊಡಕುಗಳು ನಿವಾರಣೆ, ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

0

ಬೆಂಗಳೂರು: ಸರ್ಕಾರದ ಇ-ಸ್ವತ್ತು 2.0 ತಂತ್ರಾಂಶದಲ್ಲಿ 2025ರ ಏ.7 ಕ್ಕಿಂತ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳಿಗೆ ಹೊಸ ನಮೂನೆ-11ಬಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದರಿಂದ ಗ್ರಾಮ ಪಂಚಾಯಿತಿಗಳ ಸಮೀಕ್ಷೆಯ ವೇಳೆ ಕೈಬಿಟ್ಟ ಕಟ್ಟಡಗಳಿಂದ ಬಾಧಿತರಾದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನಾಗರಿಕ ಸ್ನೇಹಿ ರೀತಿಯಲ್ಲಿ ಪರಿಷ್ಕೃತ ಈ ತಂತ್ರಾಂಶದ ಸಿಟಿಜನ್ ಇಂಟರ್‌ಫೇಸ್ ಮೂಲಕ ಈಗಾಗಲೇ 27,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 26,000 ಅರ್ಜಿಗಳು ಸಲ್ಲಿಕೆಯಾಗಿವೆ. ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಸಹಾಯಕ ಕಾರ್ಯದರ್ಶಿಗಳ ಮೂಲಕ ಈ ಅರ್ಜಿಗಳನ್ನು ಅನುಮೋದನೆಗಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕಳುಹಿಸಲಾಗುತ್ತಿದೆ.

ಅಧಿಕಾರಿಗಳ ಅನುಮೋದನೆಯ ನಂತರ, ಗ್ರಾಮ ಪಂಚಾಯಿತಿಗಳು 15 ಕೆಲಸದ ದಿನಗಳಲ್ಲಿ ನಮೂನೆ-11ಬಿ ಗಳನ್ನು ವಿತರಿಸಲಿವೆ. ಸರ್ಕಾರವು ತ್ವರಿತ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು; ಸಚಿವ ಜಮೀರ್ ಕಾರ್ಯಕ್ಕೆ ಪೋಷಕರು ಭಾವುಕ!

0

ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲೆ ಮಕ್ಕಳ ಕನಸು ನನಸಾಗಿದೆ.

ಬೈ ಸ್ಕೈ ವೀಕ್ಷಣೆಗೆ ಹಂಪಿಗೆ ಬಂದ 60ಕ್ಕೂ ಹೆಚ್ಚು ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಉಚಿತವಾಗಿ ಹೆಲಿಕಾಪ್ಟರ್ ರೈಡ್ ಮಾಡಿಸಿದರು.

ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಮಕ್ಕಳ ಆಸೆ ಕೇಳಿದ ಸಚಿವರು, “ನೀವು ಎಲ್ಲರೂ ಹಾರ್ಬೇಕೆ?” ಎಂದು ಪ್ರಶ್ನಿಸಿದರು. ಎಲ್ಲಾ ಮಕ್ಕಳು ಒಟ್ಟಿಗೆ ಹೌದು ಎಂದಾಗ, ತಮ್ಮ ಖರ್ಚಿನಲ್ಲಿ ಮಕ್ಕಳಿಗೆ ರೈಡ್ ವ್ಯವಸ್ಥೆ ಮಾಡಿದ್ದಾರೆ.

ಮಕ್ಕಳು ಆಕಾಶಕ್ಕೆ ಹಾರಿದ ಸಂಭ್ರಮವನ್ನು ನೋಡಿದ ಪೋಷಕರು ಹರ್ಷದ ಕಣ್ಣೀರು ಸುರಿಸಿದರು. ಮಕ್ಕಳಿಗೆ ಸಿಕ್ಕ ಈ ವಿಶೇಷ ಅನುಭವ ಉತ್ಸವವನ್ನು ಮತ್ತಷ್ಟು ಸ್ಮರಣೀಯವನ್ನಾಗಿ ಮಾಡಿತು.

ಚಿಕ್ಕಮಗಳೂರು| ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ದುರ್ಮರಣ!

0

ಚಿಕ್ಕಮಗಳೂರು:- ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳೆಹೊಳಿ ಸಮೀಪ ಇರುವ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ಮೃತ ದುರ್ದೈವಿಗಳನ್ನು ಅಭಿಷೇಕ್ (27) ಹಾಗೂ ಯೋಗೀಶ್ (17) ಎಂದು ಗುರುತಿಸಲಾಗಿದೆ. ಮೃತ ಯುವಕರಿಬ್ಬರು ಮೂಲತಃ ಕೊಡಗು ಜಿಲ್ಲೆಯವರು. ಮೃತ ಅಭಿಷೇಕ್ ಅಕ್ಕ ಕಳಸದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಗೆ ಬಂದಿದ್ದ ಇಬ್ಬರು ಭದ್ರಾ ನದಿಯಲ್ಲಿ ಈಜಲು ಹೋದಾಗ ಭದ್ರಾ ನದಿಯ ಆಳದ ಅರಿವಿಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರ ನೆರವಿನಿಂದ ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಈವರೆಗೂ ಮೃತದೇಹ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

0

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ 6 ಪಥಗಳ ಎಕ್ಸ್ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್ಸಿ) ಸೇತುವೆಯಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಸುಮಾರು ₹3,030 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಗುವಾಹಟಿಯನ್ನು ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಇದರ ಮೂಲಕ ಪ್ರಯಾಣದ ಅವಧಿ ಸುಮಾರು 60 ನಿಮಿಷಗಳಿಂದ ಕೇವಲ 7 ನಿಮಿಷಗಳಿಗೆ ಇಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಮೇಲೆ ನಿರ್ಮಿಸಲಾದ ಸೇತುವೆ ಈಶಾನ್ಯ ಭಾರತದಲ್ಲಿ ಮೊದಲ ಎಕ್ಸ್ಟ್ರಾಡೋಸ್ಡ್ ವಿನ್ಯಾಸದ ಸೇತುವೆಯಾಗಿದ್ದು, ತಾಂತ್ರಿಕವಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.

ಸೇತುವೆ ಉದ್ಘಾಟನೆಯ ನಂತರ ಮಾತನಾಡಿದ ಪ್ರಧಾನಿ, ಯೋಜನೆ ಈಶಾನ್ಯ ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದರು. ಸೇತುವೆ ಪ್ರದೇಶದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದರು.

ಶಿವರಾತ್ರಿ ಜಾಗರಣೆಗೆ ತ್ರಿಕೂಟೇಶ್ವರ ಧಾಮ ಸಜ್ಜು: ರಾಜ್ಯದ ನಾನಾಭಾಗಗಳಿಂದ ಭಕ್ತರ ಆಗಮನದ ನಿರೀಕ್ಷೆ

0

ಗದಗ: ಮಹಾ ಶಿವರಾತ್ರಿ ಹಬ್ಬದ ಮಹತ್ವದ ಸಂದರ್ಭದಲ್ಲಿ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನ ಭಕ್ತರ ಮಹಾಪ್ರವಾಹವನ್ನು ಸ್ವಾಗತಿಸಲು ಸಂಪೂರ್ಣ ಸಜ್ಜಾಗಿದೆ. ನಗರವೇ ಹಬ್ಬದ ವಾತಾವರಣಕ್ಕೆ ತೇಲಿಬಿದ್ದಿದ್ದು, ದೇವಾಲಯ ಆವರಣದಲ್ಲಿ ಸಕಲ ಸಿದ್ಧತೆಗಳು ಚುರುಕುಗೊಂಡಿವೆ.

ಭಕ್ತರ ಸುಗಮ ದರ್ಶನಕ್ಕಾಗಿ ವಿಶಾಲ ಪೆಂಡಾಲ್ ನಿರ್ಮಾಣ, ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ಬ್ಯಾರಿಕೇಡ್ ವ್ಯವಸ್ಥೆ, ನೆಲಮಟ್ಟದಲ್ಲಿ ಮ್ಯಾಟ್ ಹಾಸುವ ಕಾರ್ಯ, ಆಕರ್ಷಕ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಗಳು ವೇಗವಾಗಿ ಪೂರ್ಣಗೊಳ್ಳುತ್ತಿವೆ. ದೇವಸ್ಥಾನ ಆವರಣ ಶಿವಭಕ್ತರ ಘೋಷಗಳಿಂದ ಮೆರೆಯುವ ನಿರೀಕ್ಷೆ ಇದೆ.

ನಾಳೆ ಬೆಳಿಗ್ಗೆ 4 ಗಂಟೆಯಿಂದಲೇ ಮಹಾರುದ್ರಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ಅನೇಕ ವೈಭವಮಯ ಪೂಜಾ ವಿಧಿಗಳು ನೆರವೇರಲಿವೆ. ಒಂದೇ ಪಾಣಿ ಬಟ್ಟಲಿನಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತತ್ವಗಳನ್ನು ಒಳಗೊಂಡಿರುವ ಉದ್ಭವ ಲಿಂಗವೇ ಈ ಕ್ಷೇತ್ರದ ಮಹತ್ವ. ಇದೇ ವೈಶಿಷ್ಟ್ಯದಿಂದ “ತ್ರಿಕೂಟೇಶ್ವರ” ಎಂಬ ಹೆಸರಿನಿಂದ ಈ ಧಾಮ ಪ್ರಸಿದ್ಧಿ ಪಡೆದಿದೆ.

ಗದಗ ಮಾತ್ರವಲ್ಲದೆ ಧಾರವಾಡ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ರಾಜ್ಯದ ನಾನಾಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯಲಿದ್ದಾರೆ.

ಶಿವರಾತ್ರಿ ಪ್ರಯುಕ್ತ ರಾತ್ರಿ ಇಡೀ ಪುರಾಣ, ಪ್ರವಚನ ಹಾಗೂ ಭಕ್ತಿಭಾವದ ಜಾಗರಣೆ ನಡೆಯಲಿದ್ದು, ಶಿವನಾಮ ಸ್ಮರಣೆಯೊಂದಿಗೆ ಧಾರ್ಮಿಕ ಉತ್ಸವ ರಂಗೇರಲಿದೆ.

30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಮದುವೆಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ!: ಕೆರೆಯಲ್ಲಿ ಶವಕ್ಕಾಗಿ ಶೋಧ

0

ಹಾಸನ: ಮದುವೆ ಸಮಾರಂಭಕ್ಕೆ ತೆರಳಿದ್ದ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ 29 ವರ್ಷದ ಪ್ರಿಯಾಂಕಾ ನಿಗೂಢವಾಗಿ ಕಾಣೆಯಾಗಿರುವ ಪ್ರಕರಣ ಹಾಸನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಅವರು ಕಣ್ಮರೆಯಾಗಿದ್ದಾರೆ.

ಅದೇ ದಿನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರೊಂದಿಗೆ ಕೊನೆಯ ಬಾರಿ ದೂರವಾಣಿ ಮಾತುಕತೆ ನಡೆಸಿದ್ದ ಅವರು, ಬಳಿಕ ಸಂಪರ್ಕಕ್ಕೆ ಸಿಗದೇ ಹೋದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಕೆರೆಯ ಸಮೀಪ ಇಂದು ಪ್ರಿಯಾಂಕಾ ಅವರ ಉಡುಪುಗಳು, ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿವೆ. ನಿನ್ನೆ ಸ್ಥಳ ಪರಿಶೀಲಿಸಿದಾಗ ಈ ವಸ್ತುಗಳು ಕಾಣಿಸದಿದ್ದುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಿಯಾಂಕಾ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದರು. ಆಭರಣಗಳ ಸಮೇತವೇ ಅವರು ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನಗಳನ್ನೆಬ್ಬಿಸಿದೆ.

ಕಲ್ಕೆರೆ ಗ್ರಾಮದ ಕೆರೆಯ ಪಕ್ಕದಲ್ಲೇ ಉಡುಪುಗಳು ಪತ್ತೆಯಾಗಿರುವ ಹಿನ್ನೆಲೆ, ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದರ ನಡುವೆ, ನಿನ್ನೆ ದೂರು ನೀಡಲು ಕುಟುಂಬಸ್ಥರು ಪರದಾಡಿದರೂ ಅರೇಹಳ್ಳಿ ಹಾಗೂ ಬೇಲೂರು ಪೊಲೀಸರು ಸ್ಪಂದಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. “ತಕ್ಷಣ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಬೇರೆ ಆಗಿರಬಹುದಿತ್ತು,” ಎಂದು ಕುಟುಂಬದವರು ಕಣ್ಣೀರಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಲಾಶ್ ಮುಚ್ಚಲ್‌ಗೆ ಕಾನೂನು ರಕ್ಷಣೆ: ಮಾನಹಾನಿ ಆರೋಪಗಳ ನಡುವೆ ಬಾಂಬೆ ಹೈಕೋರ್ಟ್ ಕಠಿಣ ಸೂಚನೆ

ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರೊಂದಿಗಿನ ವಿವಾಹ ರದ್ದಾದ ಬಳಿಕ ಹುಟ್ಟಿಕೊಂಡ ವಿವಾದ ಗಂಭೀರ ಕಾನೂನು ತಿರುವು ಪಡೆದುಕೊಂಡಿದೆ. ಮ್ಯೂಸಿಕ್ ಕಂಪೋಸರ್ ಪಲಾಶ್ ಮುಚ್ಚಲ್ ವಿರುದ್ಧ ಹರಿದಾಡುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ.

ವಿದ್ನ್ಯಾನ್ ಮಾನೆ ಮಾಡಿದ ಸಾರ್ವಜನಿಕ ಹೇಳಿಕೆಗಳು ಪಲಾಶ್ ಅವರ ಘನತೆ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೆಚ್ಚಿನ ಹಾನಿಯನ್ನು ತಡೆಯುವ ಅಗತ್ಯವಿದೆ ಎಂದು ಹೇಳಿ, ಮುಂದಿನ ವಿಚಾರಣೆವರೆಗೆ ಪಲಾಶ್ ಕುರಿತು ಯಾವುದೇ ಮಾನಹಾನಿಕಾರಕ ಹೇಳಿಕೆಗಳನ್ನು ನೀಡದಂತೆ ಮಾನೆ ಅವರಿಗೆ ತಕ್ಷಣದ ತಡೆ ವಿಧಿಸಲಾಗಿದೆ.

ಮಾನೆ ಅವರ ಆರೋಪದ ಪ್ರಕಾರ, 23 ನವೆಂಬರ್ 2025ರಂದು ನಡೆದ ಮದುವೆ ಸಂಭ್ರಮಾಚರಣೆಯ ವೇಳೆ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ಹೇಳಲಾಗಿದೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದವು.

ಪಲಾಶ್ ಪರ ವಕೀಲ ಶ್ರೇಯಾನ್ಶ್ ಮಿಥಾರೆ, “ನ್ಯಾಯಾಲಯದ ತೀರ್ಪು ನಮ್ಮ ಕಕ್ಷಿದಾರರ ಗೌರವವನ್ನು ಕಾಪಾಡುವ ಮಹತ್ವದ ಹೆಜ್ಜೆ. ಸುಳ್ಳು ಆರೋಪಗಳ ವಿರುದ್ಧ ಕಾನೂನು ರಕ್ಷಣೆ ದೊರೆತಿದೆ,” ಎಂದು ಹೇಳಿದ್ದಾರೆ.

ಪ್ರಕರಣದ ಅಂತಿಮ ತೀರ್ಪು ದೇಶವ್ಯಾಪಿ ಗಮನ ಸೆಳೆಯುವ ಸಾಧ್ಯತೆ ಇದೆ.

error: Content is protected !!