Home Blog Page 193

ಅವ್ವ ಸೇವೆಗೆ ಗೌರವ: ಡಾ. ಬಸವರಾಜ ಧಾರವಾಡರಿಗೆ ಸನ್ಮಾನ

0

ಗದಗ: ಶ್ರೀ ಜಗದ್ಗುರು ತೋಂಟದಾರ್ಯ ಮಠ ಯಡಿಯೂರ-ಗದಗ, ಲಿಂಗಾಯತ ಪ್ರಗತಿಶೀಲ ಸಂಘ ಗದಗ ಹಾಗೂ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅವ್ವನ ಕುರಿತ ವಿಶೇಷ ಶಿವಾನುಭವ, ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ರೂವಾರಿಗಳಾದ ಅವ್ವ ಸೇವಾ ಟ್ರಸ್ಟ್‌ನ ಗದಗಿನ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಅವರನ್ನು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಅವ್ವ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶಶಿ ಸಾಲಿ ಮುಂತಾದವರು ಉಪಸ್ಥಿತರಿದ್ದರು.

ಚಳಿ ಎಫೆಕ್ಟ್: ಚಿಕನ್–ಮೊಟ್ಟೆ ದರ ಏರಿಕೆ! ಕೆಜಿ ಮಾಂಸ ಎಷ್ಟು ಗೊತ್ತಾ?

0

ಬೆಂಗಳೂರು:- ಕರ್ನಾಟಕದಲ್ಲಿ ಚಳಿ ತೀವ್ರವಾಗಿದ್ದು, ಇದರ ಪರಿಣಾಮವಾಗಿ ಕೋಳಿ ಮಾಂಸ ಹಾಗೂ ಮೊಟ್ಟೆಯ ದರದಲ್ಲಿ ಏರಿಕೆ ಕಂಡುಬಂದಿದೆ.

ಶೀತ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿದ್ದು, ಕೋಳಿ ಫಾರಂಗಳಲ್ಲಿ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ 2.2 ಕೆಜಿ ತೂಕ ಬರಬೇಕಾದ ಕೋಳಿ ಸದ್ಯ 1.8 ಕೆಜಿಗೆ ಸೀಮಿತವಾಗುತ್ತಿದ್ದು, ತಿಂಗಳಿಗೆ 28ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಈಗ 22ರಿಂದ 24 ಮೊಟ್ಟೆ ಮಾತ್ರ ಇಡುತ್ತಿವೆ.

ಚಳಿಗಾಲದಲ್ಲಿ ಸೂರ್ಯನ ಬೆಳಕು ಹಾಗೂ ಬಿಸಿಲಿನ ಕೊರತೆಯಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಚಿಕನ್ ಬೆಲೆ ಕೆಜಿಗೆ 280ರಿಂದ 300 ರೂಪಾಯಿಗೆ ಏರಿಕೆಯಾಗಿ, ಮೊಟ್ಟೆಯ ದರದಲ್ಲೂ ಹೆಚ್ಚಳವಾಗಿದೆ. ಬೆಲೆ ಏರಿಕೆಯ ಹೊಡೆತದಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಮಾರುಕಟ್ಟೆಯಲ್ಲಿ ಚಿಕನ್ ಮತ್ತು ಮೊಟ್ಟೆ ಬೇಡಿಕೆ ಕುಸಿತ ಕಂಡುಬಂದಿದೆ.

ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿಗೆ ಪತ್ರಕರ್ತ ನಾಗರಾಜ್ ವೈ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕರ್ನಾಟಕ ಮಾಧ್ಯಮ ಅಕಾಡೆಮಿಯ 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ `ಪ್ರಜಾ ಸಂದೇಶ ದತ್ತಿ ಪ್ರಶಸ್ತಿ’ಗೆ ಟಿವಿ 5 ವಾಹಿನಿ ಕೊಪ್ಪಳ ಜಿಲ್ಲಾ ವರದಿಗಾರ ನಾಗರಾಜ್ ವೈ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಮಾಧ್ಯಮ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗೆ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ದೃಶ್ಯ ಹಾಗೂ ಮುದ್ರಣ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ಯುವಕನೊಬ್ಬ ಅನ್ಯಜಾತಿ ಯುವತಿಯನ್ನು ಮದುವೆಯಾಗಿರುವ ಕಾರಣಕ್ಕೆ 8 ವರ್ಷಗಳ ಕಾಲ ಬಹಿಷ್ಕಾರ ಹಾಕಿದ ಘಟನೆ ಬಗ್ಗೆ ಟಿವಿ 5 ವಾಹಿನಿಯಲ್ಲಿ ವಿಶೇಷ ವರದಿ ಮಾಡಿದ್ದರು.

ಕೊಪ್ಪಳ ಜಿಲ್ಲೆಯ ಪತ್ರಕರ್ತ ಬಳಗ ಹರ್ಷ ವ್ಯಕ್ತಪಡಿಸಿದ್ದು ಅರ್ಹ ಪತ್ರಕರ್ತನಿಗೆ ಪ್ರಶಸ್ತಿ ದೊರಕಲು ಕಾರಣರಾದ ಮಾಧ್ಯಮ ಅಕಾಡೆಮಿ ಅಧ್ಯಕ್ಷರಿಗೂ, ಮಾಧ್ಯಮ ಅಕಾಡೆಮಿ ಸದಸ್ಯರು, ಕೊಪ್ಪಳದ ಹಿರಿಯ ಪತ್ರಕರ್ತರಾದ ನಿಂಗಜ್ಜ ಅವರಿಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು ಅವರಿಗೆ ಕೊಪ್ಪಳ ಜಿಲ್ಲೆಯ ಪತ್ರಕರ್ತರು ಅಭಿನಂದನೆ ತಿಳಿಸಿದ್ದಾರೆ.

ಪ್ರಶಸ್ತಿಯು ಸಾಮಾಜಿಕವಾಗಿ ಹೆಚ್ಚಿನ ಜವಾಬ್ದಾರಿ ನೀಡಿದೆ. ನಾನು ಮಾಡಿದ ವರದಿ ಪರಿಗಣಿಸಿ ಪ್ರಶಸ್ತಿ ನೀಡಿದ್ದಕ್ಕೆ ಸರ್ಕಾರಕ್ಕೆ ಹಾಗೂ ಮಾಧ್ಯಮ ಅಕಾಡೆಮಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರ್ಹರನ್ನು ಗುರುತಿಸುತ್ತಿರುವ ಅಕಾಡೆಮಿ ಸದಸ್ಯರು, ಹಿರಿಯ ಪತ್ರಕರ್ತ ಕೆ. ನಿಂಗಜ್ಜ, ಮಾಧ್ಯಮ ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು, ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ, ಕಾರ್ಯದರ್ಶಿ ಸಹನಾ ಎಂ ಸೇರಿದಂತೆ ಅಕಾಡೆಮಿಯ ಎಲ್ಲಾ ಸದಸ್ಯರಿಗೆ ನಾಗರಾಜ್ ವೈ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಳಸಾಪುರ ರಸ್ತೆಯಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ರಾಷ್ಟ್ರಮಟ್ಟದ 4ನೇ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸ್ಥಳೀಯ ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಪಟುಗಳಾದ ಸಂಪ್ರೀತ್ ಪಿ.ಹೂಗಾರ್ ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ, ವಿರೂಪಾಕ್ಷಿ ಕೆ.ಹೊಂಬಾಳಿ ಕುಮಿಟೆಯಲ್ಲಿ ದ್ವಿತೀಯ, ಕಟಾದಲ್ಲಿ ದ್ವಿತೀಯ, ಅಮೈರಾ ಮುಲ್ಲಾ ಕಟಾದಲ್ಲಿ ಪ್ರಥಮ, ವೇದಸಾಯಿ ವಿ.ಪುಪ್ತಿ ಕಟಾದಲ್ಲಿ ತೃತೀಯ, ಯಜ್ಞ ಸಾಯಿ ವಿ.ಪುಪ್ತಿ ತೃತೀಯ ಸ್ಥಾನ ಹಾಗೂ ಭರತ್ ಇರಾಳ್ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಾದ ಆಸೀಫ್ ಅ.ಕದಡಿ ಅವರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಪಾಲಕರು ಅಭಿನಂದಿಸಿದ್ದಾರೆ.

ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ: ಜ್ಯೋತಿ ಎಂ.ಗೊಡಬಾಳ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಗಲಾಟೆಯ ಘಟನೆಗಳನ್ನು ರಾಜಕೀಯ ಲಾಭಕ್ಕೆ ಜಟಿಲಗೊಳಿಸಿ ಹಲ್ಲೆಯ ಆರೋಪ ಹೇಳುತ್ತಿರುವುದು ಬಿಜೆಪಿಯ ಹತಾಶೆಯ ಮನಸ್ಥಿತಿಯ ಕಾರಣಕ್ಕೆ ಬಂದವುಗಳು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ. ದೇಶದಲ್ಲಿ ಈಗಾಗಲೇ ಸುಳ್ಳು ಹೇಳುವ ಮೂಲಕ, ಜನ ಮತ್ತು ವ್ಯವಸ್ಥೆಯನ್ನು ಕಲುಷಿತಗೊಳಿಸಿ ಅಧಿಕಾರ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಮರ್ಥ ಆಡಳಿತ ಅರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಹತಾಶೆಯಿಂದ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೊಪ್ಪಳದ ರೈಲ್ವೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇದನ್ನು ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಮಾಡಿಸಿದ್ದಾರೆ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಇದೆಲ್ಲಾ ಅತ್ಯಂತ ಕ್ಷುಲ್ಲಕ ಮತ್ತು ಅಧಿಕಾರದ ಹಪಾಹಪಿತನಕ್ಕೆ ಸಾಕ್ಷಿಯಾಗಿದೆ. ಇಂತಹ ಕೆಲಸ ಮಾಡುವುದೇ ಬಿಜೆಪಿಯ ಹಳೆಯ ಚಾಳಿ. ಶಿಷ್ಟಾಚಾರ ಉಲ್ಲಂಘನೆ ಆಗಿದ್ದಕ್ಕೆ ಸಹಜವಾಗಿ ಕಾರ್ಯಕರ್ತರಿಗೆ ನೋವಾಗಿ ಕೂಗಾಡಿದ್ದಕ್ಕೆ ಬಡಿದೇ ಬಿಟ್ಟರು ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

ಇನ್ನು ಬಳ್ಳಾರಿಯಲ್ಲಿ ಜನಾರ್ಧನರಡ್ಡಿ ಅವರು ಕಾಲಿಡುತ್ತಲೇ ಜಗಳ, ಗಲಾಟೆಗಳು ಪ್ರಾರಂಭವಾಗಿದ್ದು, ಸದಾ ತಮಗೆ ಸಂಬಂಧವೇ ಇಲ್ಲದ ಮಾತುಗಳಿಂದ ಪ್ರಚಾರದಲ್ಲಿ ಇರಲು ಪ್ರಯತ್ನ ಮಾಡುವ ಜನಾರ್ಧನ ರಡ್ಡಿಯವರಿಂದಲೇ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಶಾಂತಿ ಭಂಗವಾಗುತ್ತಿದೆ. ಇವರನ್ನು ಕಾನೂನು ಮೂಲಕ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜ್ಯೋತಿ ಒತ್ತಾಯಿಸಿದ್ದಾರೆ.

ಡಾ. ಅಂಬೇಡ್ಕರರ ಪುತ್ಥಳಿ ಅನಾವರಣ ಕಾರ್ಯವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಅನಾವರಣ ಮಾಡಬೇಕು ಎನ್ನುವ ಹಲವು ವರ್ಷಗಳ ದಲಿತ ಸಮುದಾಯದ ಮತ್ತು ಅಂಬೇಡ್ಕರ ಅಭಿಮಾನಿಗಳ ಕನಸು ಶೀಘ್ರದಲ್ಲೇ ನನಸಾಗುವ ಕಾಲ ಕೂಡಿ ಬಂದಿದ್ದು, ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಜನವರಿ ಅಥವಾ ಮುಂದಿನ ತಿಂಗಳ ಫೆಬ್ರುವರಿ ಮೂರನೇ ವಾರದೊಳಗೆ ಅಂಬೇಡ್ಕರ ಪುತ್ಥಳಿ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಣಯದಂತೆ ಎಲ್ಲಾ ಸದಸ್ಯರನ್ನೊಳಗೊಂಡು ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆಗಳು ನಡೆದವು. ವಿಶೇಷವಾಗಿ ಕಾರ್ಯಕ್ರಮ ಮಾಡುವ ಸ್ಥಳ, ಕುಂಭ ಮೆರವಣಿಗೆ, ಊಟದ ವ್ಯವಸ್ಥೆ, ನೀರು ನಿರ್ವಹಣೆ, ವೇದಿಕೆಯ ವ್ಯವಸ್ಥೆ, ಖರ್ಚು-ವೆಚ್ಚ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಮುಖಂಡರಾದ ದೇವಪ್ಪ ತಳಗೇರಿ, ಗ್ರಾ.ಪಂ ಸದಸ್ಯ ರಾಕೇಶ ಅಡವಿ, ಮಾರುತಿ ಬಿಸನಹಳ್ಳಿ, ಮುಖಂಡ ಹನಮಪ್ಪ ಶಿವಪ್ಪ ಹಾದಿಮನಿ, ಕೃಷ್ಣ ಕಟ್ಟೆಣ್ಣವರ, ಉಪನ್ಯಾಸಕರಾದ ಮಂಜುನಾಥ ಬಿಸನಹಳ್ಳಿ, ಗವಿಸಿದ್ದಪ್ಪ ಹಾದಿಮನಿ, ಲಕ್ಷ್ಮಣ ದೊಡ್ಡಮನಿ, ನಾಗಪ್ಪ ಕೊರವರ, ವಿಜಯಕುಮಾರ ಹಾದಿಮನಿ, ವೆಂಕಟೇಶ ತಳವಾರ, ಆದಿತ್ಯ ಗದಗಿನ, ಅಶೋಕ ತಳಗೇರಿ, ದೇವಿಂದ್ರಪ್ಪ ಪೂಜಾರ, ವಿನಾಯಕ ಕಟ್ಟೆಣ್ಣವರ, ಕುಮಾರ ಗೌಡಣ್ಣವರ, ಸುರೇಶ ದೊಡ್ಡಮನಿ, ಹನಮಪ್ಪ ಕೊರವರ, ಷಣ್ಮುಖಪ್ಪ ಒಂಟೆಲಭೋವಿ, ಯಮನಪ್ಪ ಹಾನಿ, ಗೋಪಾಲ ಕದಡಿ, ಫಕ್ಕಿರಪ್ಪ ಆನಿ, ಲೆಂಕೆಪ್ಪ ಕದಡಿ, ಚೇತನ ಸಿದ್ದಣ್ಣವರ, ಶಂಖರಲಿಂಗಪ್ಪ ಪೂಜಾರ ಮುಂತಾದವರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಶೇಷವಾಗಿ ಗ್ರಾ.ಪಂ ಆವರಣದಲ್ಲಿ ಅಂಬೇಡ್ಕರರ ಪುತ್ಥಳಿ ನಿರ್ಮಾಣದ ಕುರಿತು ಒಮ್ಮತದಿಂದ ಠರಾವು ಪಾಸು ಮಾಡಲು ಗಟ್ಟಿ ನಿರ್ಧಾರ ಕೈಗೊಂಡ ಎಲ್ಲಾ ಸದಸ್ಯರಿಗೂ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಮುದಾಯದ ಹಿರಿಯರಾದ ಮರಿತಿಮ್ಮಪ್ಪ ಆದಮ್ಮನವರ, ಕೆ.ಎನ್. ದೊಡ್ಡಮನಿ, ಡಿ. ಪ್ರಸಾದ, ಮರಿಯಪ್ಪ ಸಿದ್ದಣ್ಣವರ, ಗವಿಸಿದ್ದಪ್ಪ ಬಿಸನಹಳ್ಳಿ, ವಿರೂಪಾಕ್ಷಪ್ಪ ಯಲಿಗಾರ, ನಾಗಪ್ಪ ತಳವಾರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಗದಗ| ಲಕ್ಕುಂಡಿಯಲ್ಲಿ ಅಚ್ಚರಿ ಘಟನೆ; 101 ದೇವಸ್ಥಾನಗಳ ಊರಲ್ಲಿ ಪುರಾತನ ನಿಧಿ, ಚಿನ್ನದ ಗಣಿ ನೋಡಲು ಮುಗಿಬಿದ್ದ ಜನ!

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಚ್ಚರಿ ಮೂಡಿಸುವ ಘಟನೆ ನಡೆದಿದೆ.

ಹಳೆಯ ಮನೆಯ ಅಡಿಪಾಯ ತೋಡುವ ವೇಳೆ ಅಪಾರ ಪ್ರಮಾಣದ ಪುರಾತನ ಚಿನ್ನಾಭರಣಗಳಿರುವ ಲೋಹದ ಚೆಂಬು ಪತ್ತೆಯಾಗಿದ್ದು, ಗ್ರಾಮದಲ್ಲಿ ಸಂಚಲನ ಉಂಟಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಅವರ ಮನೆಯಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ಅದರೊಳಗೆ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ.

ನಿಧಿ ಸಿಕ್ಕ ಮನೆಗೆ ಹೊಂದಿಕೊಂಡಂತೆ ಪುರಾತನ ಲಕ್ಷ್ಮೀ ದೇವಸ್ಥಾನ ಇರುವುದರಿಂದ, ಈ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಇತಿಹಾಸಕ್ತರಲ್ಲಿ ಕುತೂಹಲ ಹೆಚ್ಚಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಭರಣಗಳ ಕಾಲಮಾನ ಮತ್ತು ಮೌಲ್ಯ ನಿಗದಿಗಾಗಿ ಸಂಶೋಧನೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಸ್ಥಳವನ್ನು ಹೆಚ್ಚಿನ ಉತ್ಖನನ ನಡೆಸುವ ಸಾಧ್ಯತೆ ಇದೆ. 11–12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾದ ಲಕ್ಕುಂಡಿ ಗ್ರಾಮವು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ‘ಶಿಲ್ಪಕಲೆಯ ತೊಟ್ಟಿಲು’ ಎಂದೇ ಖ್ಯಾತಿ ಪಡೆದಿದೆ. ಇಂದಿನ ನಿಧಿ ಪತ್ತೆ ಕಲ್ಯಾಣ ಚಾಲುಕ್ಯರ ಕಾಲದ ಆರ್ಥಿಕ ಸಮೃದ್ಧಿ ಮತ್ತೊಮ್ಮೆ ನೆನಪಿಸಿದೆ.

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್, ಎಡಿಸಿ‌ ದುರ್ಗೆಶ್ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗಂಗವ್ವ ಬಸವರಾಜ್ ರಿತ್ತಿ ಕುಟುಂಬಸ್ಥರು, ತಮ್ಮ ಮನೆ ತಳಪಾಯ ತೆಗೆಯುವ ವೇಳೆ ಪತ್ತೆಯಾದ ನಿಧಿಯನ್ನ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದು, ಇವರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟು 466 ಗ್ರಾಂ ಹಳೆ ಕಾಲದ ಚಿನ್ನದ ಆಭರಣಗಳು ಸಿಕ್ಕಿವೆ.. ಸದ್ಯ ಇದರ ಮೌಲ್ಯ‌ ಸುಮಾರು 65 ರಿಂದ 70 ಲಕ್ಷ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. `

 

ಹೂವಿನಶಿಗ್ಲಿ ಮಠದಲ್ಲಿ ಜ. 13ರಿಂದ 15ರವರೆಗೆ ಜಾತ್ರಾಮಹೋತ್ಸವ: ಸಾಂಗವಾಗಿ ನೆರವೇರಿದ ಖಡಕ್ ರೊಟ್ಟಿ-ಕರಿಂಡಿ ಸಂಗ್ರಹಿಸುವ ಕಾರ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಜ. 13ರಿಂದ 15ರವರೆಗೆ ನಡೆಯುವ ಖಡಕ್ ರೊಟ್ಟಿ-ಕರಿಂಡಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಜಮಖಂಡಿಯ ಗದಿಗೆಯ್ಯ ದೇವರ ನೇತೃತ್ವದಲ್ಲಿ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ, ಕಡಬು ಇತರೆ ಆಹಾರ ಪದಾರ್ಥ ಸಂಗ್ರಹಿಸುವ ಕಾರ್ಯ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಕಳೆದ 46 ವರ್ಷಗಳಿಂದ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವಕ್ಕೆ ಒಂದು ವಾರ ಮೊದಲು ಗ್ರಾಮದಲ್ಲಿನ ಎಲ್ಲ ಜಾತಿ, ಜನಾಂಗದವರೂ ರೊಟ್ಟಿ, ದವಸ-ಧಾನ್ಯಗಳನ್ನು ಕೈಲಾದ ಮಟ್ಟಿಗೆ ಮಠಕ್ಕೆ ತಂದು ಸಲ್ಲಿಸುವುದು ಸಂಪ್ರದಾಯ. ಕಳೆದ ವರ್ಷದಿಂದ ಶ್ರೀಗಳೇ ಎತ್ತಿನ ಬಂಡಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸ-ಧಾನ್ಯ ಸಂಗ್ರಹಿಸಿ ಮೆರವಣಿಗೆ ಮೂಲಕ ಮಠಕ್ಕೆ ತರುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಶ್ರೀಗಳೇ ಭಕ್ತರ ಮನೆ ಬಾಗಿಲಿನತ್ತ ಬರುತ್ತಾರೆಂಬ ಸಂಭ್ರಮದಿಂದ ಗ್ರಾಮ ಪಂಚಾಯಿತಿಯವರು ಊರೆಲ್ಲ ಸ್ವಚ್ಛತೆ ಮಾಡಿದ್ದರು. ಪ್ರತಿ ಓಣಿಯಲ್ಲೂ ಭಕ್ತರು ತಮ್ಮ ಮನೆಯ ಮುಂದೆ ತಳಿರು-ತೋರಣ ಕಟ್ಟಿ, ರಂಗೋಲಿ ಹಾಕಿದ್ದರು. ಜಾತ್ರೆಯ ಪ್ರಸಾದ ಸೇವೆಗಾಗಿ ಪ್ರತಿ ಮನೆಯಲ್ಲಿ ಮೊದಲೇ ಸಿದ್ಧಪಡಿಸಿದ್ದ ನೂರಾರು ರೊಟ್ಟಿಗಳ ಎಣ್ಣೆಬುಟ್ಟಿಗೆ ಹೊಸ ಬಟ್ಟೆ ಕಟ್ಟಿ ಪೂಜೆ ಮಾಡಿ ತಲೆಯ ಮೇಲೆ ಹೊತ್ತು ಕಾಯುತ್ತಿದ್ದರು. ಶ್ರದ್ಧಾ ಭಕ್ತಿಯಿಂದ ರೊಟ್ಟಿ ಬುಟ್ಟಿ ಹೊತ್ತು ತಂದ ತಾಯಂದಿರ ತಲೆಯ ಮೇಲಿನ ಬುಟ್ಟಿಯನ್ನು ಮುಟ್ಟಿ ಆಶೀರ್ವದಿಸಿದ ಬಳಿಕ ಸಾಲುಗಟ್ಟಿ ಬರುತ್ತಿದ್ದ ಎತ್ತಿನ ಚಕ್ಕಡಿಯಲ್ಲಿ ರೊಟ್ಟಿ ಸಂಗ್ರಹಿಸಲಾಗುತ್ತಿತ್ತು. ಅಲ್ಲದೇ ನೂರಾರು ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತು ಮೆರವಣಿಗೆ ಮೂಲಕ ಮಠದವರೆಗೂ ತಲುಪಿಸಿ ಸಂತೃಪ್ತ ಭಾವ ವ್ಯಕ್ತಪಡಿಸಿದರು.

ಅಲಂಕೃತ ಎತ್ತಿನ ಬಂಡಿ, ಭಜನೆ, ಡೊಳ್ಳು ವಾದ್ಯಮೇಳದ ಮೆರವಣಿಗೆಯಲ್ಲಿ ವೇಳೆ ಎಲ್ಲ ಜಾತಿ, ಜನಾಂಗದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಶ್ರೀಮಠದ ಭಕ್ತ ಮಂಡಳಿಯ ಅಂದಾನಯ್ಯ ಹಿರೇಮಠ, ನೀಲಪ್ಪ ಹೊಸೂರ, ಆರ್.ಎಸ್. ಪಾಟೀಲ, ಮಾದೇವಪ್ಪ ಬಿಷ್ಟಣ್ಣವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಂಜೆಯ ಬಳಿಕ ರತೋತ್ಸವಕ್ಕೆ ಕಲಶಾರೋಹಣ ನೆರವೇರಿಸಲಾಯಿತು.

“ಹೂವಿನಶಿಗ್ಲಿ ಮಠದಲ್ಲಿ ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಜರುಗುವ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಖಡಕ್-ರೊಟ್ಟಿ, ಕರಿಂಡಿ, ಕಡಬು ಪ್ರಸಾದ ಮಾಡುವ ಸಂಪ್ರದಾಯವನ್ನು ಶ್ರೀಮಠದ ಲಿಂ. ನಿರಂಜನ ಮಹಾಸ್ವಾಮಿಗಳು ಹಾಕಿಕೊಟ್ಟಿದ್ದಾರೆ. 5 ದಶಕಗಳಿಂದ ಭಕ್ತರು ಮಠಕ್ಕೆ ರೊಟ್ಟಿ, ಧಾನ್ಯ ತಂದು ಕೊಡುತ್ತಿದ್ದರು. 2 ವರ್ಷದಿಂದ ನಾವೇ ಭಕ್ತರ ಮನೆಯತ್ತ ಹೋಗಿ ಬಂಡಿ ಮೂಲಕ ರೊಟ್ಟಿ ಸಂಗ್ರಹಿಸುವ ಕಾರ್ಯ ಮಾಡಿದ್ದೇವೆ. ಗ್ರಾಮದ ಭಕ್ತರು ಶ್ರೀಮಠದ ಶಕ್ತಿ ಮತ್ತು ಸಂಪತ್ತಾಗಿದ್ದು, ಜಾತ್ರೆಯಷ್ಟೇ ಅಲ್ಲದೇ ವರ್ಷದುದ್ದಕ್ಕೂ ಗುರುಕುಲ ಮತ್ತು ಶಾಲೆಯ ಮಕ್ಕಳ ತ್ರಿವಿಧ ದಾಸೋಹ ಸೇವೆಗೆ ಸೇವೆ ಮಾಡುತ್ತಾ ಬಂದಿದ್ದಾರೆ. ಜಾತ್ರೆಯ 3 ದಿನಗಳ ಕಾಲ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿವೆ. ಎಲ್ಲ ಕಾರ್ಯಗಳಿಗೆ ಭಕ್ತರ ಸೇವೆ- ಸಹಾಯ-ಸಹಕಾರ ಸ್ಮರಣೀಯ”

  • ಶ್ರೀ ಚನ್ನವೀರ ಮಹಾಸ್ವಾಮಿಗಳು.

“ನಮ್ಮೂರಲ್ಲಿನ ಮಠದ ಲಿಂ. ನಿರಂಜನ ಸ್ವಾಮಿಗಳು ಮತ್ತು ಈಗಿನ ಚನ್ನವೀರ ಶ್ರೀಗಳ ಹೂವಿನಶಿಗ್ಲಿ ಎಂಬ ಚಿಕ್ಕ ಗ್ರಾಮ ನಾಡಿನೆಲ್ಲೆಡೆ ಹೆಸರಾಗಿದೆ. ಶ್ರೀಮಠದ ಗುರುಕುಲದ ಮಕ್ಕಳಿಗಾಗಿ, ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವಕ್ಕಾಗಿ ಅನ್ನದಾನದ ಅಳಿಲು ಸೇವೆ ಮಾಡುವ ಅವಕಾಶ ಕಲ್ಪಿಸಿರುವುದು ನಮ್ಮ ಭಾಗ್ಯ. ಶ್ರೀಮಠ ನಮ್ಮೂರ ಜನರಲ್ಲಿ ಮೇಲು-ಕೀಳು, ಬಡವ-ಶ್ರೀಮಂತ ಬೇಧ-ಭಾವ ಹೋಗಲಾಡಿಸಿ ಎಲ್ಲರೂ ಸೌಹಾರ್ದತೆ, ಸಹೋದರತೆಯ ಭಾವದಿಂದ ಬದುಕುವುದಕ್ಕೆ ಪ್ರೇರಣೆಯಾಗಿದೆ”

  • ಗಿರಿಜವ್ವ ಶ್ಯಾಮಸುಂದರ.
    ಶ್ರೀಮಠದ ಭಕ್ತೆ.

ವಿಶೇಷ ರೈಲುಗಳು ಗದಗ ಮೂಲಕವೇ ಸಂಚರಿಸಲಿ: ವಿಶ್ವನಾಥ ಖಾನಾಪೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರು-ವಿಜಯಪುರ ವಿಶೇಷ ರೈಲುಗಳು ಗದಗ ಮೂಲಕವೇ ಸಂಚರಿಸಲು ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಯಶವಂತಪುರ-ವಿಜಯಪುರ ಹಬ್ಬದ ವಿಶೇಷ ರೈಲು ಸಂಕ್ರಾAತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜನವರಿ 13ರಂದು ರೈಲು ಸಂಖ್ಯೆ: 06245 ಮತ್ತು ಜ. 23ರಂದು ರಾತ್ರಿ 7.15ಕ್ಕೆ ಎಸ್.ಎಂ.ವಿ.ಟಿ ರೈಲು ನಿಲ್ದಾಣದಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 7ಕ್ಕೆ ವಿಜಯಪುರ ತಲುಪಲಿದೆ.

ಇಂತಹ ವಿಶೇಷ ಹಬ್ಬದ ಸಂದರ್ಭದಲ್ಲಿ ನಮ್ಮ ಗದಗ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾವುದೇ ವಿಶೇಷ ರೈಲುಗಳು ಇಲ್ಲ. ಹೀಗಾಗಿ ಬೆಂಗಳೂರು-ವಿಜಯಪುರ ವಿಶೇಷ ರೈಲುಗಳಿಗೆ ಗದುಗಿನಲ್ಲಿಯೂ ನಿಲುಗಡೆ ನೀಡುವಂತೆ ಅವರು ವಿನಂತಿಸಿದ್ದಾರೆ.

ಹೆಣ್ಣಿನ ಪಾಲಿನ ಶಾರದೆ ಸಾವಿತ್ರಿಬಾಯಿ ಫುಲೆ: ವಿ.ವಿ. ನಡುವಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರದ ಮಾತೆ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಚರಿತ್ರೆಯಲ್ಲಿ ಬರುವುದಕ್ಕಿಂತ ಪೂರ್ವ ಒಂದು ಕಾಲಘಟ್ಟದಲ್ಲಿ ದೇಶದ ಮಹಿಳೆಯನ್ನು ವಂಚಿಸಿ ಶಿಕ್ಷಣದಿಂದ ದೂರವಿರಿಸಿ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದುದರ ವಿರುದ್ಧ ಧ್ವನಿಯೆತ್ತಿ ಅವರಿಗೂ ಕೂಡಾ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಸಮಾನತೆ ಸಿಗುವಂತೆ ಪ್ರಯತ್ನಿಸಿ, ಹೆಣ್ಣುಮಕ್ಕಳ ಪಾಲಿಗೆ ನಿಜಶಾರದೆಯಾಗಿದ್ದಾರೆ ಎಂದು ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿಮನಿ ಅಭಿಪ್ರಾಯಪಟ್ಟರು.

ಅವರು ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಗದಗ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ ಅಧ್ಯಯನ ಕೇಂದ್ರ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆಯವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ರಾಜ್ಯ ದ.ಸಂ.ಸ ಸಂಘಟನಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎಸ್.ಎನ್. ಬಳ್ಳಾರಿ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರ ಜೀವನ ಪ್ರತಿಯೊಬ್ಬ ಸ್ವಾಭಿಮಾನಿ ಮಹಿಳೆಗೆ ಸ್ಪೂರ್ತಿಯಾಗಿದ್ದು, ಅವರ ಸಾಮಾಜಿಕ ಕಳಕಳಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ ಪರಿ ಕಷ್ಟಕರವಾಗಿದ್ದರೂ ಕೂಡಾ ಎದುರಿಸಿ ಸಾಧನೆ ಮಾಡಿರುವುದು ಅದ್ಭುತವಾದುದಾಗಿದೆ. ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕೆಂದು ಕರೆ ನೀಡಿದರು.

ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರು ಮೇಲಿನಮನಿ, ಕಾರ್ಯದರ್ಶಿಗಳಾದ ಮುತ್ತು ಮಾದರ, ತಾಲೂಕಾ ಸಂಚಾಲಕರಾದ ವಿನಾಯಕ ಬಳ್ಳಾರಿ, ದಲಿತ ನಾಯಕರಾದ ಮಂಜುನಾಥ ಮುಳಗುಂದ ಹಾಗೂ ವಿದ್ಯಾರ್ಥಿ ನಾಯಕರಾದ ವಿಶಾಲ ಗೋಶಲ್ಲನವರ ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ದಲಿತ ಕಲಾಮಂಡಳಿ ಸಂಚಾಲಕ ನಾಗರಾಜ ಗುತ್ತಿ ಕ್ರಾಂತಿಗೀತೆ ಹಾಡಿದರು. ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಕೃಷ್ಣಾ ಪೂಜಾರ ಸ್ವಾಗತಿಸಿದರೆ, ಹರೀಶ ಭಾವಿಮನಿ ವಂದಿಸಿದರು. ವೇದಿಕೆಯ ಮೇಲೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ ಪವಾರ, ನಿಲಯ ಪಾಲಕರಾದ ಸುಜಾತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತವಾದ ಗುರಿ ಹೊಂದಿ ಸಾಧನೆಗೈದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದ ಅವರು, ಸಾಧಿಸುವ ಛಲ ಬೆಳೆಸಿಕೊಳ್ಳಲು ಕರೆ ನೀಡಿದರು.

error: Content is protected !!