ವಿಜಯಸಾಕ್ಷಿ ಸುದ್ದಿ, ಗದಗ: ವಿಕಲಚೇತನ ಮಕ್ಕಳ ಆರೈಕೆಯು ಒಂದು ಸವಾಲಿನ ಹಾಗೂ ಜವಾಬ್ದಾರಿಯುತ ಕೆಲಸವಾಗಿದ್ದು, ಉತ್ತಮ ಆರೈಕೆ, ಪ್ರೋತ್ಸಾಹ ಹಾಗೂ ಬೆಂಬಲದಿಂದ ಇಂತಹ ಮಕ್ಕಳು ತಮ್ಮ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಿ ಸಾಧಕರ ಸಾಲಿನಲ್ಲಿರಬಹುದು. ಇವರ ಪೋಷಕರಿಗೆ ಸಮುದಾಯವು ಬೆಂಬಲವಾಗಿ ನಿಲ್ಲಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಸೋಮುವಾರ ಗದಗ ಶಹರದ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ನಂ.4ರ ಎಸ್.ಆರ್.ಪಿ ಕೇಂದ್ರದಲ್ಲಿ ವಿಶೇಷಚೇತನ ಮಕ್ಕಳಿಗೆ ದಾನಿಗಳಾದ ನಿತ್ಯಾ ವಸ್ತ್ರದ ಅವರು ನೀಡಿದ ಫುಡ್ ಕಿಟ್ ಹಾಗೂ ವಿಶೇಷಚೇತನ ಮಕ್ಕಳ ತಾಯಂದಿರಿಗೆ ಸೀರೆ ವಿತರಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳ ಆರೈಕೆಯಲ್ಲಿ ಸಮುದಾಯದ ಪಾತ್ರವೂ ಮಹತ್ವವಾಗಿದೆ. ಈ ಕುರಿತು ಸಮಾಜದಲ್ಲಿ ಅರಿವು, ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ವ್ಯಕ್ತಿ ಶ್ಯಾಮ ಲಾಂಡೆ ಮಾತನಾಡಿ, ವಿಶೇಷ ಚೇತನ ಮಕ್ಕಳ ಪೋಷಕರಿಗೆ ಬೆಂಬಲ ನೀಡುವುದು ಅವಶ್ಯಕವಾಗಿದ್ದು, ಪೋಷಕರು ಇಂತಹ ಮಕ್ಕಳನ್ನು ಹೇಗೆ ಆರೈಕೆ ಮಾಡಬೇಕು, ಮಗುವಿನ ಅಗತ್ಯತೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಹೇಳುವ ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು ಅವಶ್ಯ ಎಂದರು.
ಸಿ.ಆರ್.ಪಿ ಸಿದ್ಧಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಮಕ್ಕಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಇದಕ್ಕೆ ಸಮುದಾಯ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇನ್ನರ್‌ವ್ಹೀಲ್ ಕ್ಲಬ್‌ನ ಸದಸ್ಯರಾದ ಸುಮಾ ಪಾಟೀಲ, ಮೀನಾಕ್ಷಿ ಕೊರವನವರ, ವೀಣಾ ಕೋಟಿ, ಶಿಲ್ಪಾ ಅಕ್ಕಿ ಮಾತನಾಡಿ, ಅಂಗವಿಕಲತೆ ಬಗೆಗೆ ಇರುವ ತಪ್ಪು ತಿಳುವಳಿಕೆ ಹೋಗಲಾಡಿಸಲು ನಾವು ಶ್ರಮಿಸಬೇಕು. ಇವರ ಆರೋಗ್ಯ ಜಾಗೃತಿಗಾಗಿ ಮೇಲಿಂದ ಮೇಲೆ ವೈದ್ಯರ ಭೇಟಿ, ಚಿಕಿತ್ಸೆ ಜೊತೆಗೆ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ನಾವೆಲ್ಲರೂ ಶ್ರಮಿಸಿ ಪ್ರೋತ್ಸಾಹ ನೀಡಬೇಕೆಂದರು.
ಕಾರ್ಯದರ್ಶಿ ಶಿವಲೀಲಾ ಅಕ್ಕಿ ಮಾತನಾಡಿ, ಸಾಧಿಸಲು ಅಸಾಧ್ಯವೆಂಬುದು ಯಾವುದೂ ಇಲ್ಲ. ಇಂತಹ ಮಕ್ಕಳ ಬೆಳವಣಿಗೆಯಲ್ಲಿ ಎಲ್ಲರೂ ಸಹಾಯ ಹಸ್ತ ಚಾಚುವ ಗುಣ ಬೆಳೆಸಿಕೊಂಡಾಗ ಇವರೂ ಸಹಿತ ಎಲ್ಲರಂತೆ ಆಗಿ ಸಾಧಕರಾಗಿ ಮಾದರಿಯಾಗಬಲ್ಲರು ಎಂದರು.
ವೇದಿಕೆಯ ಮೇಲೆ ನೀಲಮ್ಮ ಮುರಗೇಂದ್ರ ವಸ್ತ್ರದ ಉಪಸ್ಥಿತರಿದ್ದರು. ಸುನೀತಾ ತಿಮ್ಮನಗೌಡ್ರ ಸ್ವಾಗತಿಸಿದರು. ಶ್ರೀಮತಿ ಕಟಗಿ ನಿರೂಪಿಸಿದರು. ಮಾಲನ್‌ಬಿ ಹೊಸಳ್ಳಿ ವಂದಿಸಿದರು. ವಿಶೇಷಚೇತನ ಮಕ್ಕಳು, ಪಾಲಕರಾದ ಆಯೀಶಾ ಬಾನು ನದಾಫ್, ನೀಲವ್ವ ಕಳಸಿ, ಪೀತಂ ಕೊಪ್ಪಳ, ಈರವ್ವ ಪಡಸಾಲಿ, ಗಂಗಾ ಸೋನಕರ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಕ್ಲಬ್‌ನ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿ, ವಿಶೇಷ ಚೇತನ ಮಕ್ಕಳ ಪಾಲಕರು ಎಂದೂ ಧೈರ್ಯಗುಂದದೇ ಇರಬೇಕು. ಈಗಾಗಲೇ ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವುದನ್ನು ಮಾದರಿಯಾಗಿಸಿಕೊಂಡು ಮಕ್ಕಳನ್ನು ಪೋಷಿಸಬೇಕು. ಅವರಲ್ಲಿರುವ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.