Home Blog Page 2

ಸರ್ಕಾರಿ ಕಚೇರಿಯಲ್ಲೇ “ಗುಂಡು-ತುಂಡು ಪಾರ್ಟಿ”: ಎಇಇ ಸೇರಿ ಮೂವರು ಅಮಾನತು!

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಆರ್‌ಡಿಪಿಆರ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ “ಗುಂಡು-ತುಂಡು ಪಾರ್ಟಿ” ನಡೆಸಿದ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಎಇಇ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್‌ಡಿಎ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಅವರು ಕಚೇರಿಯಲ್ಲೇ ಪಾರ್ಟಿ ನಡೆಸಿದ ಆರೋಪ ಕೇಳಿಬಂದಿತ್ತು. ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ಕಚೇರಿಯಲ್ಲಿ ನಿವೃತ್ತ ನೌಕರರು ಹಾಗೂ ಹೊರಗಿನ ವ್ಯಕ್ತಿಗಳನ್ನು ಕರೆಸಿ ಪಾರ್ಟಿ ನಡೆಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ನಂತರ ಇಲಾಖಾ ವಿಚಾರಣೆ ಬಾಕಿ ಇಟ್ಟು, ಮೂವರನ್ನೂ ಅಮಾನತು ಮಾಡಲಾಗಿದೆ ಎಂದು ಆರ್‌ಡಿಪಿಆರ್ ಇಲಾಖೆ ಅಧೀನ ಕಾರ್ಯದರ್ಶಿ ಚೇತನ್ ಎಂ. ಆದೇಶಿಸಿದ್ದಾರೆ.

ಮುಂಗಾರು ಪೂರ್ವ ಅಬ್ಬರ: ಕೊಪ್ಪಳ–ಬೀದರ್‌ನಲ್ಲಿ ಸಿಡಿಲು ಸಹಿತ ಭಾರಿ ಮಳೆ

ಕೊಪ್ಪಳ/ಬೀದರ್: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು, ಸಿಡಿಲು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಬೀದರ್ ಜಿಲ್ಲೆಯಲ್ಲಿ ಹುಮ್ನಾಬಾದ್, ಚಿಟ್ಟಗುಪ್ಪ, ಬಸವಕಲ್ಯಾಣ, ಔರಾದ್ ಸೇರಿದಂತೆ ಹಲವು ಭಾಗಗಳಲ್ಲಿ ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಸಿಡಿಲು ಹಾಗೂ ಬಿರುಗಾಳಿಯ ಅಬ್ಬರದಿಂದ ಜನರು ಕೆಲಕಾಲ ಆತಂಕಗೊಂಡರೂ, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪು ನೀಡಿದೆ.

ಮಳೆಯಿಂದಾಗಿ ಜಿಲ್ಲೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಮುಂಗಾರು ಪೂರ್ವ ಮಳೆಯ ಅಬ್ಬರ ಕಂಡುಬಂದಿದೆ. ಕಾರಟಗಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ತಾತ್ಕಾಲಿಕವಾಗಿ ನೀರಿನಿಂದ ತುಂಬಿರುವ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲಿ ದಾರುಣ ಘಟನೆ: ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ!

ಬೆಂಗಳೂರು: ಕತ್ತು ಕೊಯ್ದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಶೋಕ್ ನಗರದಲ್ಲಿ ನಡೆದಿದೆ.

ಮೃತನನ್ನು ವಿಲ್ಸನ್ ಗಾರ್ಡನ್ ನಿವಾಸಿ ಗೌತಮ್ (28) ಎಂದು ಗುರುತಿಸಲಾಗಿದೆ. ಶುಕ್ರವಾರ ಮುಂಜಾನೆ ಅಶೋಕ್ ನಗರದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಗೌತಮ್ ಪುನರ್ವಸತಿ ಕೇಂದ್ರದಿಂದ ವಾಪಸ್ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಇದು ಕೊಲೆ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ನಂತರದ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂಬುದು ದೃಢಪಟ್ಟಿದೆ.

ಈ ಸಂಬಂಧ ಅಶೋಕ್ ನಗರ ಠಾಣೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಬಿಗ್ ಗಿಫ್ಟ್: ಜೂನ್‌ನಲ್ಲೇ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ!

ಬೆಂಗಳೂರು: 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿಗಳಿಗೆ ಮಹತ್ವದ ಘೋಷಣೆ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಜೂನ್ ತಿಂಗಳಿನಲ್ಲೇ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ತಾತ್ಕಾಲಿಕ ನೇಮಕಾತಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಒಟ್ಟು 51 ಸಾವಿರ ಹುದ್ದೆಗಳಲ್ಲಿ 40 ಸಾವಿರ ಅತಿಥಿ ಶಿಕ್ಷಕರನ್ನು ಪ್ರಾಥಮಿಕ ಶಾಲೆಗಳಿಗೆ ಹಾಗೂ 11 ಸಾವಿರ ಅತಿಥಿ ಶಿಕ್ಷಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಇದೇ ವೇಳೆ, ಜೂನ್ 1ರಂದು ಶಿವಮೊಗ್ಗದಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (KPS) ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ 1,000 ಕೆಪಿಎಸ್ ಶಾಲೆಗಳು ಆರಂಭವಾಗಲಿದ್ದು, ಪ್ರತಿ ಶಾಲೆಯ ಅಭಿವೃದ್ಧಿಗೆ 3.5 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತದೆ.

ಈ ಮಾದರಿಯನ್ನು ಇತರ ರಾಜ್ಯಗಳೂ ಅನುಸರಿಸುತ್ತಿದ್ದು, ತೆಲಂಗಾಣದಲ್ಲಿ ಸಹ ಇದೇ ರೀತಿಯ ಪಬ್ಲಿಕ್ ಸ್ಕೂಲ್ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾವು ಕಚ್ಚಿದಾಗ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು? ಸಂಪೂರ್ಣ ಮಾಹಿತಿ ಇಲ್ಲಿದೆ

ದೇಶದಲ್ಲಿ ಬೇಸಿಗೆ ಹಾಗೂ ಮಳೆಗಾಲದ ವೇಳೆ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹಾವು ಕಚ್ಚಿದ ತಕ್ಷಣ ಸರಿಯಾದ ಪ್ರಥಮ ಚಿಕಿತ್ಸೆ ದೊರೆಯದ ಕಾರಣ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವೈದ್ಯರ ಪ್ರಕಾರ, ಹಾವು ಕಡಿತವಾದಾಗ ಗಾಬರಿಯಾಗದೇ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಹಾವು ಕಚ್ಚಿದ ಕೂಡಲೇ ವ್ಯಕ್ತಿಯನ್ನು ಶಾಂತವಾಗಿರಿಸುವುದು ಮೊದಲ ಆದ್ಯತೆ. ಆತಂಕದಿಂದ ಹೃದಯಬಡಿತ ಹೆಚ್ಚಾಗಿ, ವಿಷ ದೇಹದಾದ್ಯಂತ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗಿಯನ್ನು ಧೈರ್ಯವಾಗಿರಿಸಿ, ಚಲನವಲನವನ್ನು ಕಡಿಮೆ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹಾವು ಕಚ್ಚಿದ ಕೈ ಅಥವಾ ಕಾಲನ್ನು ಹೆಚ್ಚು ಆಡಿಸಬಾರದು. ಆ ಭಾಗವನ್ನು ಕೋಲು ಅಥವಾ ಗಟ್ಟಿಯಾದ ವಸ್ತುವಿನ ಸಹಾಯದಿಂದ ಸಡಿಲವಾಗಿ ಕಟ್ಟಿ ಸ್ಥಿರವಾಗಿಡಬೇಕು. ಜೊತೆಗೆ ಕಚ್ಚಿದ ಭಾಗವು ಹೃದಯದ ಮಟ್ಟಕ್ಕಿಂತ ಕೆಳಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ವಿಷ ವೇಗವಾಗಿ ಹರಡುವುದನ್ನು ತಡೆಯಬಹುದು.

ಊತ ಬರುವ ಸಾಧ್ಯತೆ ಇರುವುದರಿಂದ ಕೈ ಅಥವಾ ಕಾಲಿನಲ್ಲಿರುವ ಉಂಗುರ, ಬಳೆ, ಗಡಿಯಾರ ಹಾಗೂ ಇತರೆ ಆಭರಣಗಳನ್ನು ತಕ್ಷಣ ತೆಗೆದುಹಾಕಬೇಕು. ಗಾಯದ ಮೇಲಿರುವ ಲಾಲಾರಸವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಸೌಮ್ಯವಾಗಿ ಒರೆಸಬೇಕು. ಆದರೆ ಗಾಯವನ್ನು ಉಜ್ಜಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇನ್ನೊಂದೆಡೆ, ಹಾವು ಕಡಿತವಾದಾಗ ಕೆಲವರು ಮಾಡುವ ತಪ್ಪುಗಳು ಜೀವಕ್ಕೆ ಅಪಾಯಕಾರಿಯಾಗಬಹುದು. ಗಾಯವನ್ನು ಬಾಯಿಯಿಂದ ಹೀರಿ ವಿಷ ತೆಗೆಯಲು ಯತ್ನಿಸುವುದು, ಬ್ಲೇಡ್‌ನಿಂದ ಕತ್ತರಿಸುವುದು ಅಥವಾ ಕೈ-ಕಾಲಿಗೆ ಗಟ್ಟಿಯಾಗಿ ಕಟ್ಟು ಕಟ್ಟುವುದು ಮಾಡಬಾರದು ಎಂದು ತಜ್ಞರು ತಿಳಿಸಿದ್ದಾರೆ. ಇದರಿಂದ ರಕ್ತಸಂಚಾರಕ್ಕೆ ತೊಂದರೆ ಉಂಟಾಗಿ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಮಂತ್ರ, ಬೇರು-ಎಲೆಗಳ ಔಷಧಿ ಸೇರಿದಂತೆ ಮೂಢನಂಬಿಕೆಗಳಿಗೆ ಒಳಗಾಗದೆ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹಿಂದೂಗಳ ಮೇಲಿನ ದಾಳಿ ಕೇಸ್ ವಾಪಸ್ ಯಾಕೆ?: ಸಿ.ಟಿ ರವಿ ಪ್ರಶ್ನೆ

ಚಿಕ್ಕಮಗಳೂರು: ಹಿಂದೂಗಳ ಮೇಲಿನ ದಾಳಿ ಪ್ರಕರಣಗಳನ್ನು ಹಿಂಪಡೆದು ರಾಜ್ಯ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಡ್ಲೆ ಮಶಾಕ್ ದರ್ಗಾ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಘವ ಚೈತನ್ಯ ಬೃಂದಾವನದ ಪೂಜೆಗೆ ಹೋದಾಗ ದಾಳಿ ಮಾಡಲಾಗಿತ್ತು. ಬಂದೋಬಸ್ತ್‌ಗೆ ಇದ್ದ ಪೊಲೀಸರು, ಎಸ್‌ಪಿ ಹಾಗೂ ಸಂಸದ ಖೂಬಾ ಅವರ ಕಾರಿನ ಮೇಲೂ ದಾಳಿ ನಡೆದಿತ್ತು ಎಂದು ಹೇಳಿದರು.

ಇಂತಹ ಪ್ರಕರಣಗಳಲ್ಲಿರುವ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆಯುವ ಮೂಲಕ ಸರ್ಕಾರ ಏನು ಸಂದೇಶ ಕೊಡುತ್ತಿದೆ? ಎಂದು ಪ್ರಶ್ನಿಸಿದರು.

ನಿಮ್ಮ ಜೊತೆ ನಾವಿದ್ದೇವೆ ಎಂಬ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಮ್ಯುನಲ್ ಮತ್ತು ಕ್ರಿಮಿನಲ್ ಮನೋಭಾವದವರಿಗೆ ರಕ್ಷಣೆ ನೀಡುವ ಕಾಂಗ್ರೆಸ್‌ನ ನೀತಿ ಸಮಾಜಘಾತುಕ ಮತ್ತು ಅಪಾಯಕಾರಿಯಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ, ರೈತರು ಅಥವಾ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ ಎಂದರು.

ಚಳುವಳಿ ಸಂಬಂಧಿತ ಪ್ರಕರಣಗಳನ್ನು ವಾಪಸ್ ಪಡೆಯುವುದು ಬೇರೆ. ಆದರೆ ಬೆಂಕಿ ಹಚ್ಚಿ, ದೊಣ್ಣೆ ಹಿಡಿದು ಹಿಂಸಾಚಾರ ನಡೆಸಿದ ಪ್ರಕರಣಗಳನ್ನು ಹಿಂಪಡೆಯುವುದು ಸಂಪೂರ್ಣ ಬೇರೆ ವಿಚಾರ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು.

CET ಸೀಟು ಹಂಚಿಕೆ ಮಂಥನಕ್ಕೆ KEA ಸಜ್ಜು: ಮೇ 25ರಿಂದ ರಾಜ್ಯಾದ್ಯಂತ ಕಾರ್ಯಾಗಾರ

ಬೆಂಗಳೂರು: ಸಿಇಟಿ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಶೇಷ ಕಾರ್ಯಾಗಾರ ಆಯೋಜಿಸಿದೆ.

ರಾಜ್ಯದ 65 ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೇ 25ರಿಂದ 30ರವರೆಗೆ “ಸೀಟು ಹಂಚಿಕೆ ಮಂಥನ” ಕಾರ್ಯಕ್ರಮ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಮೇ 28ರಂದು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10ರಿಂದ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4 ಗಂಟೆವರೆಗೆ ಎರಡು ಸೆಷನ್‌ಗಳಲ್ಲಿ ಕಾರ್ಯಾಗಾರ ನಡೆಯಲಿದೆ.

ಕೆಇಎಯಿಂದ ತರಬೇತಿ ಪಡೆದ ನುರಿತ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಕೆಇಎ ವೆಬ್‌ಸೈಟ್‌ನಲ್ಲಿ ಮುಂಚಿತವಾಗಿ ಸ್ಲಾಟ್ ಬುಕ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕ ಸಮಯ ಹಾಗೂ ಕಾರ್ಯಾಗಾರ ನಡೆಯುವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೆಇಎ ತಿಳಿಸಿದೆ.

ಅನೇಕ ಬಾರಿ ಉತ್ತಮ ರ್ಯಾಂಕ್ ಬಂದಿದ್ದರೂ, ಆಪ್ಷನ್ ಎಂಟ್ರಿಯಲ್ಲಿನ ಸಣ್ಣಪುಟ್ಟ ತಪ್ಪುಗಳಿಂದ ವಿದ್ಯಾರ್ಥಿಗಳು ಇಷ್ಟದ ಕಾಲೇಜು ಕಳೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.

ಸೈಬರ್ ಸೆಂಟರ್‌ಗಳ ಎಡವಟ್ಟುಗಳು ಹಾಗೂ ವಿದ್ಯಾರ್ಥಿ-ಪೋಷಕರ ಮಾಹಿತಿ ಕೊರತೆಯಿಂದ ಈ ಸಮಸ್ಯೆಗಳು ಉಂಟಾಗುತ್ತಿದ್ದು, ಅದನ್ನು ತಪ್ಪಿಸಲು ಕಳೆದ ವರ್ಷ “ಸೀಟು ಹಂಚಿಕೆ ಮಂಥನ” ಆರಂಭಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿಯೂ ಇನ್ನಷ್ಟು ಅಚ್ಚುಕಟ್ಟಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಸೀಟು ಹಂಚಿಕೆ ಪ್ರಕ್ರಿಯೆ, ಆಪ್ಷನ್ ಎಂಟ್ರಿ, ಸೀಟ್ ಅಲಾಟ್ಮೆಂಟ್ ನಂತರ ಆಯ್ಕೆ ಮಾಡಬೇಕಾದ ಛಾಯ್ಸ್‌ಗಳು, ಉತ್ತಮ ಕಾಲೇಜಿನ ನಿರೀಕ್ಷೆಯಿದ್ದರೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಶುಲ್ಕ ಪಾವತಿ ವಿಧಾನ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಇನ್ನು ನೀಟ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವ ಅಗತ್ಯವಿಲ್ಲ. ಬೇಕಾದರೆ ಅವರ ಪರವಾಗಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದು ಎಂದು ಕೆಇಎ ಸಲಹೆ ನೀಡಿದೆ.

IPL 2026: ಪಂಜಾಬ್ ಗೆ ಇಂದು ಅಗ್ನಿ ಪರೀಕ್ಷೆ: ಲಕ್ನೋ ವಿರುದ್ಧ ಗೆದ್ದರೆ ಮಾತ್ರ ಪ್ಲೇಆಫ್ ಕನಸು ಜೀವಂತ

ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 68ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಸತತ ಸೋಲಿನಿಂದ ಒತ್ತಡಕ್ಕೆ ಸಿಲುಕಿರುವ ಶ್ರೇಯಸ್ ಅಯ್ಯರ್ ಪಡೆಗೆ ಈ ಪಂದ್ಯ ಮಹತ್ವದ್ದಾಗಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ 13 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಂಜಾಬ್ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ ಪಂಜಾಬ್ 15 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಲಿದೆ.

ಆಗ ರಾಜಸ್ಥಾನ್ ರಾಯಲ್ಸ್ 5ನೇ ಸ್ಥಾನಕ್ಕೆ ಕುಸಿಯಲಿದೆ.ನಂತರ ರಾಜಸ್ಥಾನ್ ತಂಡದ ಕೊನೆಯ ಪಂದ್ಯದ ಫಲಿತಾಂಶದ ಮೇಲೆ ಪಂಜಾಬ್ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ. ರಾಜಸ್ಥಾನ್ ತನ್ನ ಅಂತಿಮ ಪಂದ್ಯದಲ್ಲಿ ಸೋತರೆ ಪಂಜಾಬ್ ನಾಕೌಟ್ ಹಂತಕ್ಕೇರಲಿದೆ.

ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಂಜಾಬ್

ಟೂರ್ನಿಯ ಆರಂಭದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡಿತ್ತು. ಮೊದಲ 7 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಉಭಯ ತಂಡಗಳಿಗೆ ತಲಾ ಒಂದು ಅಂಕ ಲಭಿಸಿತ್ತು.ಆದರೆ ನಂತರ ಪಂಜಾಬ್ ತಂಡದ ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ್ ರಾಯಲ್ಸ್ ಬ್ರೇಕ್ ಹಾಕಿತ್ತು. ಅದಾದ ಬಳಿಕ ಆಡಿದ 6 ಪಂದ್ಯಗಳಲ್ಲೂ ಪಂಜಾಬ್ ಗೆಲುವು ಸಾಧಿಸಲು ವಿಫಲವಾಗಿದೆ.

ಪಿಚ್ ರಿಪೋರ್ಟ್ ಹೇಗಿದೆ?

ಏಕನಾ ಕ್ರಿಕೆಟ್ ಸ್ಟೇಡಿಯಂ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವಾಗುವ ಪಿಚ್ ಆಗಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ 200ಕ್ಕೂ ಹೆಚ್ಚು ರನ್ ಗಳಿಸಿದರೆ ಉತ್ತಮ ಪೈಪೋಟಿ ನೀಡಲು ಸಾಧ್ಯವಾಗುತ್ತದೆ.

ಇಲ್ಲದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗುವ ಸಾಧ್ಯತೆ ಹೆಚ್ಚು. ವೇಗದ ಬೌಲರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಹೆಚ್ಚು ಪ್ರಭಾವ ಬೀರುವ ನಿರೀಕ್ಷೆಯಿದ್ದು, ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ

ಅರ್ಶಿನ್ ಕುಲಕರ್ಣಿ, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್, ದಿಗ್ವೇಶ್ ರಾಠಿ.

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ
ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಸಿಂಗ್, ಬ್ರಾಕ್, ಎಫ್ ಬ್ರಾಕ್, ಯುಜ್ವೇಂದ್ರ ಚಹಲ್.

ರಹಸ್ಯ ಮದುವೆ ಗಾಸಿಪ್‌ಗೆ ಕಂಗನಾ ರಣಾವತ್ ಖಡಕ್ ಉತ್ತರ: ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ

ಮಂಗಳಸೂತ್ರ ಮತ್ತು ಹಸಿರು ಬಳೆ ಧರಿಸಿ ಕಾಣಿಸಿಕೊಂಡ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಸೀಕ್ರೆಟ್ ಮ್ಯಾರೇಜ್ ರೂಮರ್‌ಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ “ಕಂಗನಾ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದಾರೆ” ಎಂಬ ಚರ್ಚೆ ಜೋರಾಗಿದ್ದರೂ, ಈಗ ಅದಕ್ಕೆ ನಟಿಯೇ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮಂಗಳಸೂತ್ರ ಧರಿಸಿ ಕಾರಿನತ್ತ ತೆರಳುತ್ತಿದ್ದ ಕಂಗನಾ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಮದುವೆ ಗಾಸಿಪ್ ಹಬ್ಬಿಸಿದ್ದರು. ಆದರೆ ಕಂಗನಾ ಇದನ್ನೆಲ್ಲಾ ತಳ್ಳಿಹಾಕಿದ್ದು, ಅದು ಸಿನಿಮಾದ ಕ್ಯಾರೆಕ್ಟರ್ ಲುಕ್ ಮಾತ್ರ ಎಂದು ಹೇಳಿದ್ದಾರೆ.

“ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನು ನೋಡಿ ಜನರು ಊಹಾಪೋಹ ಹರಡಿಸುತ್ತಿದ್ದಾರೆ. ನಾನು ನಟಿ. ಪಾತ್ರಕ್ಕಾಗಿ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳಬೇಕು. ಅದನ್ನೇ ಮದುವೆ ಎಂದು ಕಲ್ಪಿಸಿಕೊಳ್ಳುವುದು ವಿಚಿತ್ರ. ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ” ಎಂದು ಕಂಗನಾ ಹೇಳಿದ್ದಾರೆ.

ಇದೇ ವೇಳೆ ಬಿಸಿಲಿನ ನಡುವೆ ನಡೆಯುತ್ತಿರುವ ಔಟ್‌ಡೋರ್ ಶೂಟಿಂಗ್ ಬಗ್ಗೆ ಮಾತನಾಡಿದ ಅವರು, “ಎಸಿ ರೂಮ್‌ನಲ್ಲಿ ಕುಳಿತು ಹವಾಮಾನ ಬಗ್ಗೆ ಮಾತನಾಡುವುದು ಸುಲಭ. ಆದರೆ ನಾವು ಬಿಸಿಲಿನ ಮಧ್ಯೆ ಕೆಲಸ ಮಾಡುತ್ತಿದ್ದೇವೆ. ಜೀವನ ಸವಾಲಿನಿಂದಲೇ ಸುಂದರವಾಗುತ್ತದೆ” ಎಂದು ಹೇಳಿದ್ದಾರೆ.

‘ಎಮರ್ಜೆನ್ಸಿ’ ಚಿತ್ರದ ಬಳಿಕ ಕಂಗನಾ ಇದೀಗ ‘ಭಾರತ್ ಭಾಗ್ಯ ವಿಧಾತ’ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂಬೈ ಉಗ್ರ ದಾಳಿಯ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಚಿತ್ರ ಜೂನ್ 12ರಂದು ತೆರೆಗೆ ಬರಲಿದೆ.

‘ಆ ಸಮಯದಲ್ಲಿ ನಾನು ತುಂಬಾ ಕುಗ್ಗಿದ್ದೆ’: ನಟ ರಾಮ್ ಚರಣ್ ಭಾವುಕ

ರಾಮ್ ಚರಣ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರೂ, ಅವರ ಸಿನಿ ಪಯಣ ಸುಲಭವಾಗಿರಲಿಲ್ಲ. ಆರಂಭದಲ್ಲಿ ‘ಮಗಧೀರ’ ಚಿತ್ರದಿಂದ ಭರ್ಜರಿ ಯಶಸ್ಸು ಕಂಡರೂ, ನಂತರದ ಕೆಲವು ಸಿನಿಮಾಗಳ ಸೋಲುಗಳಿಂದ ಟಾಲಿವುಡ್‌ನಲ್ಲಿ ಅವರ ಸ್ಥಾನವೇ ಪ್ರಶ್ನೆಗೆ ಒಳಗಾಗಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.

ಈ ನಡುವೆ ‘ಆರ್‌ಆರ್‌ಆರ್’ ಚಿತ್ರದ ಚಿತ್ರೀಕರಣ ಆರಂಭವಾದ ವೇಳೆಯಲ್ಲೇ ಕೋವಿಡ್ ಲಾಕ್‌ಡೌನ್ ಘೋಷಣೆಯಾಗಿದ್ದು, ಇಡೀ ಚಿತ್ರರಂಗವೇ ಸ್ಥಗಿತಗೊಂಡಿತ್ತು. ಆ ಸಂದರ್ಭದಲ್ಲಿ ಮಾನಸಿಕವಾಗಿ ತೀವ್ರ ಒತ್ತಡ ಮತ್ತು ಅನಿಶ್ಚಿತತೆ ಎದುರಿಸಿದ್ದೆ ಎಂದು ರಾಮ್ ಚರಣ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಆ ಕಠಿಣ ದಿನಗಳಲ್ಲಿ ತಮಗೆ ಧೈರ್ಯ ನೀಡಿದ್ದು ನಿರ್ದೇಶಕ ಎಸ್ಎಸ್ ರಾಜಮೌಳಿ ಎಂದು ತಿಳಿಸಿದ್ದಾರೆ. “ಭವಿಷ್ಯದ ಬಗ್ಗೆ ಯೋಚಿಸಿ ಆತಂಕಪಡಬೇಡ, ನಿನ್ನನ್ನು ನೀನು ಸಿದ್ಧಪಡಿಸಿಕೋ” ಎಂದು ರಾಜಮೌಳಿ ನೀಡಿದ ಸಲಹೆ ತನ್ನಲ್ಲಿ ಹೊಸ ಶಕ್ತಿ ತುಂಬಿತು ಎಂದು ಚರಣ್ ಹೇಳಿದ್ದಾರೆ.

ಲಾಕ್‌ಡೌನ್ ಬಳಿಕ ‘ಆರ್‌ಆರ್‌ಆರ್’ ಸಿನಿಮಾ ಮತ್ತೆ ಚುರುಕುಗೊಂಡು ಭಾರೀ ಯಶಸ್ಸು ಕಂಡಿದ್ದು, ರಾಮ್ ಚರಣ್ ಅವರನ್ನು ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ನಟನನ್ನಾಗಿ ರೂಪಿಸಿದೆ.

ಇದೀಗ ಅವರು ನಟಿಸಿರುವ ‘ಪೆದ್ದಿ’ ಸಿನಿಮಾ ಜೂನ್ 4ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

error: Content is protected !!