Home Blog Page 20

ಚಾಮರಾಜನಗರ| ಗಡಿ ರಸ್ತೆಯಲ್ಲಿ ಒಂಟಿ ಸಲಗದ ಅಟ್ಟಹಾಸ: ಕಾರನ್ನು ಅಟ್ಟಾಡಿಸಿದ ಕಾಡಾನೆ!

0

ಚಾಮರಾಜನಗರ: ಕರ್ನಾಟಕ–ತಮಿಳುನಾಡು ಗಡಿ ಪ್ರದೇಶದಲ್ಲಿ ಒಂಟಿ ಸಲಗದ ಉಪಟಳ ಮತ್ತೆ ಆತಂಕ ಮೂಡಿಸಿದೆ.

ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನ ಜಾವ ನಡೆದ ಘಟನೆಯಲ್ಲಿ, ಒಂಟಿ ಸಲಗವು ಸಂಚರಿಸುತ್ತಿದ್ದ ಕಾರನ್ನು ಅಟ್ಟಾಡಿಸಿರುವ ಘಟನೆ ವರದಿಯಾಗಿದೆ.

ಕಾಡಿನೊಳಗಿಂದ ಹೊರಬಂದ ಸಲಗವು ರಸ್ತೆ ಮೇಲೆ ಸಾಗುತ್ತಿದ್ದ ವಾಹನಗಳತ್ತ ದಾಳಿ ಮಾಡಲು ಯತ್ನಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯವು ಕರ್ನಾಟಕದ ಬಿಳಿಗಿರಿ ಟೈಗರ್ ರಿಸರ್ವ್‌ಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಈ ಗಡಿ ಭಾಗದಲ್ಲಿ ಒಂಟಿ ಸಲಗದ ಸಂಚಾರ ಆಗಾಗ ಕಂಡುಬರುತ್ತಿದೆ. ಇತ್ತೀಚಿನ ಘಟನೆಗಳಿಂದ ಸ್ಥಳೀಯರು ಹಾಗೂ ದೂರ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಒಂಟಿ ಸಲಗವು ಯಾವುದೇ ಕ್ಷಣದಲ್ಲಿ ಕರ್ನಾಟಕ ಗಡಿ ದಾಟಿ ಪ್ರವೇಶಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಗಡಿ ಪ್ರದೇಶದಲ್ಲಿ ಹೆಚ್ಚುವರಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ಬೆಂಗಳೂರು| ಕೋಟಿ ರೂ. ಎಟಿಎಂ ನಗದು ದೋಚಿದ ಸಿಬ್ಬಂದಿ: ಹಿಟಾಚಿ ಪೇಮೆಂಟ್ ಸರ್ವಿಸ್ ಕಂಪನಿಯಲ್ಲಿ ಭಾರೀ ವಂಚನೆ!

0

ಬೆಂಗಳೂರು: ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಂಪನಿಯ ಸಿಬ್ಬಂದಿಯೇ ದೋಚಿ ಪರಾರಿಯಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ 400 ಕೋಟಿ ರೂ. ಹಣ ದರೋಡೆ ಪ್ರಕರಣದ ಕುರಿತ ಚರ್ಚೆ ನಡೆಯುತ್ತಿರುವ ನಡುವೆಯೇ ಈ ದೊಡ್ಡ ಪ್ರಮಾಣದ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿಗಳು ಈ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಂಪನಿ ಅಧಿಕಾರಿ ಮಿಥುನ್ ಅವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಸ್, ಜನವರಿ 19ರಂದು ಕೋರಮಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ ಒಂದು ಕೋಟಿಗೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಗೆ ಡೆಪಾಸಿಟ್ ಮಾಡುವಂತೆ ಮಿಥುನ್ ಅವರು ಸೂಚನೆ ನೀಡಿದ್ದರು. ಈ ಉದ್ದೇಶಕ್ಕಾಗಿ ಕಂಪನಿಯ ಎರಡು ಪ್ರತ್ಯೇಕ ತಂಡಗಳಿಗೆ ನಗದು ಹಂಚಿಕೆ ಮಾಡಲಾಗಿತ್ತು.
ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಸಿಬ್ಬಂದಿಗಳಿಗೆ ಎಟಿಎಂಗಳಿಗೆ ಹಣ ಜಮಾ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಅವರು ಎಟಿಎಂಗಳಿಗೆ ಹಣ ಹಾಕದೇ ನಗದಿನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಂದು ತಂಡವು ಸುಮಾರು 57 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರೆ, ಮತ್ತೊಂದು ತಂಡವು ಸುಮಾರು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ಬಳಿಕ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಭೀಕರ ಅಗ್ನಿ ಅವಘಡ; ಧಗಧಗನೆ ಹೊತ್ತಿ ಉರಿದ 10 ಲಕ್ಷ ರೂ. ಮೌಲ್ಯದ ಪೈಪ್‌ಗಳು!

0

ಯಾದಗಿರಿ:- ಯಾದಗಿರಿಯ ವೀರಭದ್ರೇಶ್ವರ ಕಾಲೋನಿಯಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಪೈಪ್‌ಗಳು ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ಎಸ್, ಸದಾಶಿವರಡ್ಡಿ ರೊಟ್ನಡಗಿ ಅವರಿಗೆ ಸೇರಿದ ಶರಣಬಸವೇಶ್ವರ ಟ್ರೇಡಿಂಗ್ ಶಾಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಪೈಪ್‌ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಅವಘಡದಿಂದ ಸುಮಾರು 10 ಲಕ್ಷ ರೂ.ಗೂ ಅಧಿಕ ವೆಚ್ಚದ ಪೈಪ್‌ಗಳು ಭಸ್ಮವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.

ರಾಯಚೂರು| ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ!

0

ರಾಯಚೂರು:- ರಾಯಚೂರಿನ ಲಿಂಗಸೂಗೂರು ತಾಲೂಕಿನ ಜಕ್ಕೇರುಮಡು ತಾಂಡದಲ್ಲಿ ಆಸ್ತಿಗಾಗಿ ತಾಯಿಯನ್ನೇ ಮಗ ಕೊಂದು ಪರಾರಿಯಾಗಿರುವ ಘಟನೆ ಜರುಗಿದೆ.

55 ವರ್ಷದ ಚಂದವ್ವ ಕೊಲೆಯಾದ ಮಹಿಳೆ. ಕುಮಾರ ತಾಯಿಯನ್ನೇ ಕೊಲೆಗೈದ ಪಾಪಿ ಮಗ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ಗ್ರಾಮಕ್ಕೆ ಬಂದಿದ್ದ. ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣತಮ್ಮಂದಿರರಿಬ್ಬರಿಗೆ ಪಾಲು ಮಾಡುವಂತೆ ಕುಮಾರ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ತಾಯಿ ಆಸ್ತಿ ಭಾಗಮಾಡಲು ಒಪ್ಪಿರಲಿಲ್ಲ, ಇದರಿಂದ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮದ್ಯದ ನಶೆಯಲ್ಲಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಶವಾಗಾರಕ್ಕೆ ರವಾನಿಸಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಲಕ್ಕುಂಡಿ ಪಾರಂಪರಿಕ ಪ್ರದೇಶವನ್ನು ಯುನೆಸ್ಕೋ ಪಟ್ಟಿ ಸೇರಿಸಲು ಪ್ರಸ್ತಾವನೆ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವಪರಂಪರೆ ತಾತ್ಕಾಲಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮನಿರ್ದೇಶನ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಸರ್ಕಾರದ ಅನುಮೋದನೆಯೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಖಾಂತರ ಸ್ಮಾರಕಗಳು ಮತ್ತು ಸೈಟ್‌ಗಳ ಇಂಟರ್‌ನ್ಯಾಷನಲ್ ಕೌನ್ಸಿಲ್‌ಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರದಂದು ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ, ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯವರ ಸ್ಥಳವಾದ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು, ಈ ಪಾರಂಪರಿಕ ಗ್ರಾಮದಲ್ಲಿರುವ ಸ್ಮಾರಕಗಳು, ದೇವಾಲಯಗಳು, ಬಾವಿಗಳು, ಶಾಸನಗಳ ಸಂರಕ್ಷಣೆಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಈ ಪ್ರಾಧಿಕಾರದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ದೊರೆತ ಬೆಲೆಬಾಳುವ ಚಿನ್ನಾಭರಣಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ಬಾಲಕನ ಪ್ರಾಮಾಣಿಕತೆಯನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮೆಚ್ಚಿಕೊಂಡಿದ್ದು, ಅವರ ಕುಟುಂಬಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಲಕ್ಕುಂಡಿ ಪಾರಂಪರಿಕ ಶ್ರೀ ವಿರೂಪಾಕ್ಷ ದೇವಾಲಯ ಸಂರಕ್ಷಣೆ, ಶ್ರೀ ಮಲ್ಲಿಕಾರ್ಜುನ ದೇವಾಲಯ ಹಾಗೂ ಗದ್ದುಗೆ ಸಂರಕ್ಷಣೆ, ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಂರಕ್ಷಣೆ, ಶ್ರೀ ಹಾಲಗುಂಡಿ ಬಸವಣ್ಣ ದೇವಾಲಯ ಸಂರಕ್ಷಣೆ ಕಾಮಗಾರಿ, ಶ್ರೀ ಕಣ್ಣರ ಭಾವಿ ಸಂರಕ್ಷಣೆ ಕಾಮಗಾರಿ, ಶ್ರೀ ಕಲ್ಮಠ ಭಾವಿ ಹಾಗೂ ಕಂಪೌಂಡ್ ಗೋಡೆ ಕಾಮಗಾರಿಗಳಿಗೆ ರೂ.10.16 ಕೋಟಿ ವೆಚ್ಚದಲ್ಲಿ ಸಂರಕ್ಷಣೆ ಕಾಮಗಾರಿ ಕೈಗೊಂಡು ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.

ಶಿರಹಟ್ಟಿ ತಾಲೂಕಿನ ಶ್ರೀ ಹೊಳಲಮ್ಮ ದೇವಿ ದೇವಸ್ಥಾನ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗೆ ರೂ.6 ಕೋಟಿ 47 ಲಕ್ಷ, ಗದಗ ನಗರದ ಶ್ರೀ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ಲಕ್ಕುಂಡಿ ಸೇರಿದಂತೆ ಗದಗ ಜಿಲ್ಲೆಯ 22 ಧಾರ್ಮಿಕ ಕೇಂದ್ರಗಳ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ.13 ಕೋಟಿ 5 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಕಪ್ಪತ್ತಗುಡ್ಡ ಗದಗ ಮೃಗಾಲಯ ವಿಸ್ತರಣೆ, ಮಾಗಡಿ ಕೆರೆ ಅಭಿವೃದ್ಧಿಗಾಗಿ ರೂ.22 ಕೋಟಿ 50 ಲಕ್ಷಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ವಾಣಿಜ್ಯ ವಹಿವಾಟು ನಿರ್ವಹಣೆಯಲ್ಲಿ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿರುವುದಕ್ಕೆ ಮಹಿಳೆಯರು ಬ್ಯಾಂಕಿನ ಒಂದಿಗೆ ವ್ಯವಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯೇ ಪ್ರಮುಖ ಕಾರಣವಾಗಿದ್ದು, 2022ರಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆ ಶೇ. 9 ಇದ್ದದ್ದು ಪ್ರಸ್ತುತ ಶೇ. 73ರಷ್ಟು ಆಗಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಗೊಂಡು ರಾಜ್ಯದ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಸಾಧನೆ ನಮ್ಮ ಸರ್ಕಾರದ್ದಾಗಿದೆ. ಕ್ರಾಂತಿಕಾರಕವಾದ ಈ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಗದಗ ಜಿಲ್ಲೆಯಲ್ಲಿ ಒಟ್ಟು 1,41,981 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿದ್ದಾರೆ. 2025-26ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಗದಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆಯಡಿ ರೂ.85 ಕೋಟಿ ಬಿಡುಗಡೆಯಾಗಿದ್ದು, ರೂ.73 ಕೋಟಿ ಖರ್ಚು ಮಾಡಲಾಗಿದೆ. ಗಿರಿಜನ ಉಪಯೋಜನೆಯಡಿಯಲ್ಲಿ ರೂ.12 ಕೋಟಿ ಬಿಡುಗಡೆಯಾಗಿದ್ದು ರೂ.7 ಕೋಟಿ ಖರ್ಚು ಮಾಡುವುದರ ಮೂಲಕ ಶೇ.62ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ, 2021-22ನೇ ಸಾಲಿನ ಕರ್ನಾಟಕ ನೀರಾವರಿ ನಿಗಮ ಹಾಗೂ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಾರ್ಡ್ ನಂ.17 ಮತ್ತು 18ರ ಮಧ್ಯದಲ್ಲಿ ಹರಿಯುವ ರಾಜ ಕಾಲುವೆಯ ಮೇಲೆ ಇಂದಿರಾ ವನ ನಿರ್ಮಾಣ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಎ.ಎಚ್.ಪಿ ಯೋಜನೆಯಡಿಯಲ್ಲಿ ಒಟ್ಟು 71 ಎಕರೆ ಜಮೀನಿನಲ್ಲಿ 3630 ಮನೆಗಳಲ್ಲಿ 205 ಮನೆಗಳು ಹಂಚಿಕೆ ಮಾಡಲಾಗಿದೆ. ಪ್ರಸ್ತುತ 774 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2606 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಪರಿಪೂರ್ಣವಾದ ಸಂವಿಧಾನದ ಪಾಲನೆಗೆ ಮುಂದಾಗಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ಮೌಲ್ಯಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢಸಂಕಲ್ಪ ಮಾಡಿ, ನಮ್ಮ ಸಂವಿಧಾನ ಸಭೆಯಲ್ಲಿ 1949ರ ನವೆಂಬರ್ 26ರಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನುಡಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನದ ರಕ್ಷಕರಾಗಿರುವ, ಉನ್ನತ ಹುದ್ದೆ ಅಲಂಕರಿಸಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಮ್ಮ ದೇಶದ ಜವಾಬ್ದಾರಿಯುತರು ತಮ್ಮ ಮನಸೋ ಇಚ್ಛೆಯಂತೆ ಅದನ್ನು ಅರ್ಥೈಸಿ ಅಗೌರವಿಸುವ, ಸಂವಿಧಾನವನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಷಯಗಳನ್ನು ಶಾಸನಸಭೆಗಳಲ್ಲೂ ಸಹ ಗಮನಿಸದೇ ಕೇವಲ ತಮ್ಮ ರಾಜಕೀಯ ನಿಲುವುಗಳಿಗೆ ಪೂರಕವಾಗಿ ವ್ಯಾಖ್ಯಾನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ರಾಜ್ಯದಿಂದ ಹೆಚ್ಚಿನ ತೆರಿಗೆ ಕೊಡುಗೆಯನ್ನು ಕೇಂದ್ರಕ್ಕೆ ನೀಡುತ್ತಿದ್ದರೂ ಅತ್ಯಂತ ಕನಿಷ್ಠ ನೆರವು ನಮಗೆ ಹರಿದುಬರುತ್ತಿದೆ. ಇದರ ಹೊರತಾಗಿಯೂ ಕರ್ನಾಟಕವು ತನ್ನ ಸ್ವಂತ ಸಂಪನ್ಮೂಲಗಳದಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ 1.25 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಕರ್ನಾಟಕದ ತಲಾ ಆದಾಯವು ಜಿಲ್ಲಾವಾರು ಲೆಕ್ಕ ಹಾಕಿದಾಗ ಗಣನೀಯವಾಗಿ ಹೆಚ್ಚಾಗಿರುವುದು ನೆಮ್ಮದಿ ತಂದಿದೆ. ಗದಗಿನಂಥ ಜಿಲ್ಲೆಯಲ್ಲಿ ಅರ್ಥ ವ್ಯವಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದು, ತಲಾ ಆದಾಯವು ಕನಿಷ್ಠ ರೂ.22000 ಪ್ರತಿ ತಿಂಗಳಿಗೆ ತಲುಪಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದದ್ದು ನಮ್ಮ ಕರ್ತವ್ಯ. ಸಂವಿಧಾನದ ಆಣತಿಗಳನ್ನು ಮತ್ತು ನಿರ್ದೇಶನಗಳನ್ನು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಚಲನಶೀಲಗೊಳಿಸುವ ಸದುದ್ದೇಶದಿಂದ ಪಾಲನೆ ಮಾಡಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸಂವಿಧಾನವನ್ನು ಉಲ್ಲಂಘಿಸುವ ಸಣ್ಣ ಕ್ರಿಯೆಯನ್ನು ಸಹ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಮತ್ತು ಜವಾಬ್ದಾರಿ ಭಾರತೀಯ ನಾಗರಿಕನದ್ದಾಗಿದ್ದು, ಈ ಜವಾಬ್ದಾರಿಯನ್ನು ನಾಗರಿಕರು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುವ ಗುತ್ತಿಗೆದಾರರ ಕೇಂದ್ರೀಕೃತ ವಿಬಿಜಿ ಗ್ರಾಮಜಿ ಯೋಜನೆ ಹೆಸರಿನಲ್ಲಿ ಗ್ರಾಮೀಣ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ. ಇದರಿಂದಾಗಿ ಗ್ರಾಮೀಣ ಆಸ್ತಿ ಸೃಜನೆಯ ಮೇಲೆ ಮತ್ತು ಕೂಲಿಕಾರರು ಅವರು ಇರುವ ಸ್ಥಳಗಳಲ್ಲಿಯೇ ಉದ್ಯೋಗ ಒದಗಿಸಬೇಕೆಂಬ ಘನವಾದ ಉದಾತ್ತ ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನು ಪುನಃ ಸ್ಥಾಪನೆ ಮಾಡುವಂತೆ ಕರ್ನಾಟಕ ರಾಜ್ಯ ಒತ್ತಾಯಿಸುತ್ತಿದೆ. ಬಡವರ, ಕೃಷಿ ಕಾರ್ಮಿಕರ ಪರವಾದ ಗ್ರಾಮೀಣ ಆಸ್ತಿ ಸೃಜನೆಗೆ ಬಹುದೊಡ್ಡ ಅವಕಾಶ ಕಲ್ಪಿಸುವ, ನಿರುದ್ಯೋಗಿ ಭತ್ಯೆ ಒದಗಿಸುವ, ಕಾರ್ಮಿಕರು ಅವರಿರುವ ಸ್ಥಳದಲ್ಲಿಯೇ ಕೆಲಸ ಒದಗಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನುನ್ನು ಮರು ಸ್ಥಾಪಿಸಬೇಕೆಂದು ನಮ್ಮ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಆಕರ್ಷಕ ಪಥಸಂಚಲನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕಾನೂನು, ಸಂಸದೀಯ, ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ 77ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ನಂತರ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌಧರಿ ವಹಿಸಿದ್ದರು. ಜಿಲ್ಲಾ ಪೊಲೀಸ್ ಬ್ಯಾಂಡ್‌ನ ಮೇರೆಗೆ ದೇಶ ಕಿ ಧರತಿ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ಪಡೆ, ಹೋಮ್‌ಗಾರ್ಡ್, ಅಬಕಾರಿ, ಅರಣ್ಯ ರಕ್ಷಕ ಪಡೆ, ಅಗ್ನಿಶಾಮಕ ದಳ, ಎನ್.ಸಿ.ಸಿ ಬಾಯ್ಸ್ ಹಾಗೂ ಗರ್ಲ್ಸ್, ಮಾಜಿ ಸೈನಿಕರ ಸಂಘ, ಸ್ಕೌಟ್ಸ್, ಗೈಡ್ಸ್, ಜನರಲ್ ಹಾಗೂ ಸೇವಾ ದಳಗಳು ಸಚಿವರಿಗೆ ಗೌರವವಂದನೆ ನೀಡಿದವು.

ಸಾರ್ವಜನಿಕ ವಲಯದಲ್ಲಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ, ಕಸ್ತೂರೆವ್ವ ರಿತ್ತಿ, ಗಂಗವ್ವ ರಿತ್ತಿ, ರಜೀಯಾಬೇಗಂ ತಹಸೀಲ್ದಾರ, ಕಿಡ್ನಿ ಕಸಿ ಮಾಡುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಡಾ. ಪವನ ಕೋಳಿವಾಡ, ಡಾ. ಭುವನೇಶ ಆರಾಧ್ಯ, ಡಾ. ದೀಪಕ ಕುರಹಟ್ಟಿ, ಮುಖ್ಯಮಂತ್ರಿಯವರ ಪದಕ ಪುರಸ್ಕೃತರಾದ ಶಿದ್ದಾರೆಡ್ಡಿ ಕಪ್ಪತ್ತನವರ, ಅಂಗಾಂಗ ದಾನ ಮಾಡಿದ ನಾರಾಯಣ ವನ್ನಾಲ ಕುಟುಂಬಸ್ಥರಿಗೆ, ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಡಾ. ಹೇಮರಡ್ಡಿ ಕಿಲಬನವರ, ಎನ್.ಸಿ.ಸಿ ವಿಭಾಗದಲ್ಲಿ ಪದನ್ನೋತಿ ಹೊಂದಿದ ಮೇಜರ್ ಡಾ. ಬಿ.ಎಸ್. ರಾಠೋಡ, ರಾಜ್ಯ ಮಟ್ಟದ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ರಾಘವೇಂದ್ರ ಗೆಜ್ಜಿ, ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಜಾತಾ ಗೊಬ್ಬರಗುಂಪಿ, ರವಿ ಎಲ್.ಗುಂಜೀಕರ, ಗುರುರಾಜ್ ಚವ್ಹಾಣ್, ಅಕ್ಕಮಹಾದೇವಿ ತಳವಾರ, ಬಿ.ಎಸ್. ಚಕಾರಿ, ದಾವಲಸಾಬ ಗುಬ್ಬಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿದ ಪ್ರೇಮನಗೌಡ ಪವಾಡಿಗೌಡ್ರ, ಶಿವನಗೌಡ್ರ ಪವಾಡಿಗೌಡ್ರ, ರಾಮನಗೌಡ ಬೋಜಪ್ಪಗೌಡ, ಈಶ್ವರಪ್ಪ ಕುಂಬಾರ, ಪ್ರಕಾಶ ತೋಪಿನ ಇವರನ್ನು ಸನ್ಮಾನಿಸಲಾಯಿತು.

ಪತ್ರಿಕೋದ್ಯಮ/ಮಾಧ್ಯಮ ವಿಭಾಗದಲ್ಲಿ ರಮೇಶ ಭಜಂತ್ರಿ, ಮಾಲಿಂಗಯ್ಯ ಹಿರೇಮಠ, ರಮೇಶ ನಾಡಿಗೇರ, ಎಂ.ಎ. ಸ್ವಾಮಿ, ಸಿ.ಎಸ್. ಅರಸನಾಳ, ಪ್ರಾಣೇಶ ಕೊಡಗಾನೂರ, ಮೆಹಬೂಬ ಮೋತೆಖಾನ್, ಶಿದ್ದಲಿಂಗಯ್ಯ ಮಣ್ಣೂರಮಠ, ಲೋಕೇಶ ಮಲ್ಲಿಗವಾಡ, ಚಂದ್ರು ಭಜಂತ್ರಿ, ಸುನೀಲಸಿಂಗ್ ಲದ್ದಿಗೇರಿ ಅವರನ್ನು ಗೌರವಿಸಲಾಯಿತು.

ಎಲ್.ಎಲ್.ಎಂ ಉನ್ನತ ಶಿಕ್ಷಣ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಹನಾ ಕಾರ್ಕಳ, ಬಾಲ ಗೌರವ ಪ್ರಶಸ್ತಿ ಪಡೆದ ಸುಪ್ರಿಯಾ ಇಟಗಿ, ರಾಜ್ಯಮಟ್ಟದ ಸಂಸತ್ ಅಣಕು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಿಯಾಂಕಾ ಮಾನೆ, ರಾಜ್ಯಮಟ್ಟದ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದ ನಿಧಿ ತೋಟದ, ಏಕಲವ್ಯ ಪ್ರಶಸ್ತಿ ಪಡೆದ ಐಶ್ವರ್ಯ ಕರಿಗಾರ, ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಮಲ್ಲಪ್ಪ ಬೋಳನವರ, ಲಕ್ಷ್ಮೀ ಹಿರೇಮಠ, ಗಾಯತ್ರಿ ಹಳ್ಳಿ, ವರ್ಷಾ ಗುಂಜ್ಯಾಳ, ಸ್ಪೂರ್ತಿ ಉಡಚಗೊಂಡ, ಲಕ್ಷ್ಮೀ ನಲುಡಿ, ಕ್ರೀಡಾ ಕ್ಷೇತ್ರದಲ್ಲಿ ಮಾಲತಿ ಇನಾಮದಾರ, ವೈಭವ ಸಂಗನಬಶೆಟ್ಟರ್, ಸಿ.ಸಿ. ಮಂಜುನಾಥ ಕುರಿ, ಮಂಜುನಾಥ ಹಳೆರಿತ್ತಿ, ಸಾಕ್ಷಿ ಬಾಗಡೆ, ಅಮೃತಾ ಮೇಟಿ, ಪ್ರಿಯಾಂಕಾ ಲಮಾಣಿ, ಸೃಷ್ಟಿ ಪಾಟೀಲ, ಯಶವಂತಗೌಡ ನಾಡಗೌಡ್ರ, ಸಹನಾ ಹರ್ತಿ, ಆನಂದ ಬೇಂದ್ರೆ, ಮಹಾಂತೇಶ ಬೇಂದ್ರೆ, ಮಹಾಂತೇಶ ಬೇವೂರ, ಮೇಘಾ ಮುನವಳ್ಳಿಮಠ ಇವರುಗಳನ್ನು ಸಚಿವ ಎಚ್.ಕೆ. ಪಾಟೀಲ ಹಾಗೂ ಗಣ್ಯರು ಸನ್ಮಾನಿಸಿದರು.

ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಚಿವ ಎಚ್.ಕೆ. ಪಾಟೀಲರು ಅಕ್ಕ ಪಡೆ ಯೋಜನೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಹೊಲಿಗೆ ಯಂತ್ರ ಕಿಟ್, ಇಲೆಕ್ಟ್ರಿಷಿಯನ್ ಕಿಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರಿಗೆ, ಸಾಹಿತಿಗಳಿಗೆ ಮಾಸಾಶನ ಮಂಜೂರಾತಿ ಪತ್ರ, ಕಾರ್ಮಿಕ ಇಲಾಖೆ ವತಿಯಿಂದ ಸೇಪ್ಟಿ ಕಿಟ್, ಗೌಂಡಿ ಕಿಟ್, ಪ್ಲಂಬರ್ ಕಿಟ್, ಕಾರ್ಪೆಂಟರ್, ವೆಲ್ಡರ್ ಕಿಟ್, ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಿದರು.

ಸಂವಿಧಾನ ಉಳಿದರಷ್ಟೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಕುರಿತು ಕೆಲವರು ಮಾತನಾಡುತ್ತಾರೆ. ಆದರೆ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆ ಎಂಬ ಸತ್ಯವನ್ನು ಅವರು ಮರೆತಿದ್ದಾರೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಅವರು ಸೋಮವಾರ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನ ಭಾರತ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಇಡೀ ವಿಶ್ವದಲ್ಲಿ ಭಾರತ ದೇಶದ ಸಂವಿಧಾನ ಮಾದರಿಯಾಗಿದೆ. ಇಂದಿನ ಯುವ ಪೀಳಿಗೆ ಡಾ. ಬಿ.ಆರ್. ಅಂಬೇಡ್ಕರರು ದೇಶದ ಬಗ್ಗೆ ಇಟ್ಟುಕೊಂಡ ಚಿಂತನೆಗಳನ್ನು ಮೆಲುಕು ಹಾಕಬೇಕು. ಮುಖ್ಯವಾಗಿ, ದೇಶದ ಹಿತಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹನೀಯರ ಬಗ್ಗೆ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಸಂವಿಧಾನದ ಮಹತ್ವ ತಿಳಿಯಲಿದೆ ಎಂದರು.

ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಉತ್ತಮ ರಸ್ತೆ ಸಂಪರ್ಕ, ಕುಡಿಯುವ ನೀರು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನವನ್ನು ನೀಡಲಾಗಿದ್ದು, ರೋಣ ಪಟ್ಟಣಕ್ಕೆ ಡಿಪ್ಲೋಮಾ ಕಾಲೇಜನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ತಹಸೀಲ್ದಾರ ನಾಗರಾಜ ಕೆ ಧ್ವಜಾರೋಹಣ ನೆರವೇರಿಸಿದರು. ತಾ.ಪಂ ಇಒ ಚಂದ್ರಶೇಖರ ಕಂದಕೂರ, ಸಿಪಿಐ ವಿಜಯಕುಮಾರ, ಕೃಷಿ ಇಲಾಖೆಯ ಎಸ್.ಎಫ್. ತಹಸೀಲ್ದಾರ, ಪಿಎಸ್‌ಐ ಪ್ರಕಾಶ ಬಣಕಾರ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಮಲ್ಲಿಕಾರ್ಜುನ ಹುಣಸಿ, ಬಿಇಒ ಅರ್ಜುನ ಕಂಬೋಗಿ, ಅಕ್ಷರದಾಸೋಹಾಧಿಕಾರಿ ಕೆ.ಎಲ್. ನಾಯಕ, ಸಂಜಯ ದೊಡ್ಡಮನಿ ಸೇರಿದಂತೆ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ರೋಣ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. 50 ಕೋಟಿ ರೂಗಳ ವೆಚ್ಚದಲ್ಲಿ ಜೆಟಿಟಿಸಿ ಕಾಲೇಜನ್ನು ಆರಂಭಿಸಲಾಗಿದ್ದು, ಬೃಹತ್ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ರೋಣ ತಾಲೂಕು ಅನ್ನದಾತ ರೈತರನ್ನು ಹೆಚ್ಚಾಗಿ ಹೊಂದಿದೆ. ಇದನ್ನು ಮನಗಂಡು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿದ್ದು, ಜಿಗಳೂರ ಕೆರೆಗೆ ನೀರನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಯ ಅಂದವನ್ನು ಹೆಚ್ಚಿಸಲು 5 ಕೋಟಿ ರೂ ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಹುತಾತ್ಮ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಹುತಾತ್ಮ ದಿನಾಚರಣೆ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್, ಶರಣು ಗೋಗೇರಿ ಸೇರಿದಂತೆ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜರೋಹಣ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜರೋಹಣವನ್ನು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಜಿಲ್ಲಾ ಉಪಾಧ್ಯಕ್ಷೆ ಜಯಶ್ರೀ ಉಗಲಾಟದ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಮಾಜಿ ಅಧ್ಯಕ್ಷೆ ಅಶ್ವಿನಿ ಜಗತಾಪ್, ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಸಿದ್ದು ಪಲ್ಲೇದ, ಮಂಜುನಾಥ ಶಾಂತಗೇರಿ, ಗದಗ ನಗರ ಮಂಡಲ ಉಪಾಧ್ಯಕ್ಷೆ ಚನ್ನಮ್ಮ ಹುಳಕಣ್ಣವರ, ಪದ್ಮಿನಿ ಮುತ್ತಲದಿನ್ನಿ, ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮಿ ಮಾನ್ವಿ, ಪ್ರಧಾನ ಕಾರ್ಯದರ್ಶಿ ಸ್ವಾತಿ ಅಕ್ಕಿ, ಪುಷ್ಪಾ ಪೂಜಾರ, ರೇಖಾ ಗೌಳಿ, ಅಪ್ಪಣ್ಣ ಟೆಂಗಿನಕಾಯಿ, ಕೆ.ಪಿ. ಕೋಟಿಗೌಡ್ರ, ಮೇಘನಾ ಕೊಟ್ಟೂರ, ದೇವೇಂದ್ರಪ್ಪ ಹೂಗಾರ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.

error: Content is protected !!