ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಸನ್ 2023ರಿಂದ ಇಲ್ಲಿಯವರೆಗೆ ಒಟ್ಟು 620 ಮೊಬೈಲ್ ಫೋನ್ಗಳನ್ನು ಸಾರ್ವಜನಿಕರು ಕಳೆದುಕೊಂಡಿದ್ದು, ಅವುಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ 2025ನೇ ವರ್ಷದ ಜುಲೈ ತಿಂಗಳವರೆಗೂ 175 ಫೋನ್ ಮೊಬೈಲ್ಗಳನ್ನು ಪತ್ತೆ ಮಾಡಿ, ಮೂಲ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಆಗಸ್ಟ್ 1, 2025ರಿಂದ ಇಲ್ಲಿಯವರೆಗೆ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿದ ಅಂದಾಜು 7,94,400 ರೂ.ಗಳ ಮೌಲ್ಯದ ಒಟ್ಟು 50 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ನೇತೃತ್ವದಲ್ಲಿ, ಮೊಬೈಲ್ ಫೋನ್ಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಮೊಬೈಲ್ ಫೋನ್ಗಳನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡುವಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶರಣೇಶ ಜಾಲಿಹಾಳ, ಅಭಿಜಿತ್ ಎ, ಎಎಸ್ಐ ಉಲ್ಲಾಸ್ ದುದಾಳಕರ ಹಾಗೂ ಸಿಬ್ಬಂದಿಗಳಾದ ಎಸ್.ಐ. ಜವಳಿ, ಬಸವರಾಜ ಬನ್ನಟ್ಟಿ, ಶಶಿಧರ ಕೊಚ್ಚರಗಿ, ಬಸವರಾಜ ಶಿರಕೋಳ, ಎನ್.ಬಿ. ಕಂಬೋಗಿ, ಎಮ್.ಜಿ. ಕರ್ಲವಾಡ, ಸಂಗೀತಾ ಎಮ್.ಸೋಗಿ, ಎಮ್.ಟಿ. ಗುಡ್ಡಪ್ಪನವರ, ಪರಮೇಶ್ವರ ಬಾಗಲಕೋಟಿ, ಯಲ್ಲಾನಾಯಕ ಪಾಟೀಲ, ಎನ್.ಬಿ. ಕರಜಗಿ, ರಮೇಶ ಕಟ್ಟಿ, ಕೃಷ್ಣ, ಸುಜಾತಾ ಕುರಿ ಅವರು ತನಿಖಾ ತಂಡದಲ್ಲಿದ್ದು ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಈ ಸಂದರ್ಭದಲ್ಲಿ, ಮೊಬೈಲ್ ಕಳುವಾದಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಪೊಲೀಸ್ ಇಲಾಖೆ ವಿವರಿಸಿದೆ. ಕಳುವಾದ ಮೊಬೈಲ್ಗಳನ್ನು ಬಳಸದಂತೆ ಎಚ್ಚರ ವಹಿಸಬೇಕು. ಮೊಬೈಲ್ಗಳನ್ನು ಕಳೆದುಕೊಂಡಾಗ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್ಪಿ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು, ನಂತರ ಅದರಲ್ಲಿ ಲಾಗಿನ್ ಆಗಿ ಕಳೆದುಕೊಂಡವರ ಹೆಸರು, ವಿಳಾಸ ಮತ್ತು ಕಳೆದು ಹೋದ ಫೋನ್ಗೆ ಸಂಬಂಧಿಸಿದ ಅಗತ್ಯ ಮಾಹಿತಿ ಭರ್ತಿ ಮಾಡಿ ದೂರು ಸಲ್ಲಿಸಬೇಕು. ತಕ್ಷಣ ಕಳೆದು ಹೋದ ಫೋನ್ನಲ್ಲಿದ್ದ ಸಿಮ್ನ್ನು ಬ್ಲಾಕ್ ಮಾಡಿಸಿ ಹೊಸ ಸಿಮ್ ಕಾರ್ಡ್ನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.
ನಂತರ ಗೂಗಲ್ನಲ್ಲಿ ceir.gov.in ವೆಬ್ಸೈಟ್ಗೆ ಭೇಟಿ ನೀಡಿ ಅದರಲ್ಲಿರುವ Block/Unblock stolen mobile ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ನಂಬರ್, ಐಎಮ್ಇಐ ನಂಬರ್, ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಬಗೆಗಿನ ಸಂಪೂರ್ಣ ಮಾಹಿತಿ ಭರ್ತಿ ಮಾಡಿದ ನಂತರ ನಿಮ್ಮ ಸಿಮ್ ನಂಬರ್ಗೆ ಬ್ಲಾಕ್ ಮಾಡಲು ಒಂದು OTP ಬರುತ್ತದೆ. ಆಗ ಸದರಿ OTP ಹಾಕಿ ವೆರಿಫೈ ಮಾಡಿ ಸಬ್ಮಿಟ್ ಮಾಡಿದಾಗ ದೂರು ದಾಖಲಾಗಿ ನಿಮಗೆ 18 ಅಂಕಿಗಳ ಬ್ಲಾಕಿಂಗ್ ರಿಕ್ವೆಸ್ಟ್ ಐಡಿ ದೊರೆಯುತ್ತದೆ. ಆಗ ಮಾತ್ರ ನಿಮ್ಮ ದೂರು ಅಧಿಕೃತವಾಗಿ ದಾಖಲಾಗಿರುವುದು ಖಚಿತವಾಗುತ್ತದೆ ಎಂದು ವಿವರಿಸಿದರು.
ಒಂದು ವೇಳೆ ನೀವು ಮೊಬೈಲ್ ಕಳೆದುಕೊಂಡಾಗ ನಿಮ್ಮ ಹತ್ತಿರ ಕಳೆದು ಹೋದ ಮೊಬೈಲ್ನ ಐಎಮ್ಇಐ ನಂಬರ್ ಇಲ್ಲದೆ ಇದ್ದರೆ ನೀವು ನಿಮ್ಮ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಬೇಕು. ಫೋನ್ಗಳನ್ನು ಖರೀದಿಸುವ ಮೊದಲು ಐಎಮ್ಇಐ ಸಂಖ್ಯೆಗಳನ್ನು ಪರಿಶೀಲಿಸಿ ಖರೀದಿಸುವುದು ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ.