Home Blog Page 3

ಬೆಳಗಾವಿಯಲ್ಲಿ ಐಟಿ, ಸೆಮಿಕಂಡಕ್ಟರ್ ಪಾರ್ಕ್ ಯೋಜನೆ: ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಬೆಂಗಳೂರು: ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯನ್ನು ಅಭಿವೃದ್ಧಿಪರ ಕೇಂದ್ರವಾಗಿ ರೂಪಿಸಲು ಐಟಿ ಪಾರ್ಕ್ ಹಾಗೂ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಅಭಯ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ಈ ಯೋಜನೆಗಳನ್ನು ಜಾರಿಗೆ ತಂದು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.

ಐಟಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ, ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ ಪರಿಸರ ಬಲಪಡಿಸುವ ಕಾರ್ಯಕ್ರಮಗಳು, ಸೀಡ್ ಫಂಡ್ ಬೆಂಬಲ, ಟೆಕ್ಸಿಲರೇಷನ್ ಹಾಗೂ ವಿವಿಧ ಉದ್ಯಮಶೀಲತೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ರಾಜೀವ್ ಗಾಂಧಿ ಉದ್ಯಮಶೀಲತೆ ಯೋಜನೆ, ಎಲಿವೇಟ್ ಕಾರ್ಯಕ್ರಮ, ಮಹಿಳಾ ಉದ್ಯಮಶೀಲತೆ ಉತ್ತೇಜನ ಹಾಗೂ ಗ್ರಾಸ್‌ರೂಟ್ ಇನೋವೇಷನ್ ಕಾರ್ಯಕ್ರಮಗಳ ಮೂಲಕ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಬೆಳಗಾವಿಯಲ್ಲಿ ಐಟಿ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆಗೆ ಅಗತ್ಯವಾದ ಜಮೀನು ಹಸ್ತಾಂತರಕ್ಕೆ ಕೇಂದ್ರ ರಕ್ಷಣಾ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದರೂ ಇನ್ನೂ ಜಮೀನು ಹಸ್ತಾಂತರವಾಗಿಲ್ಲ. ಈ ಸಂಬಂಧ ಸರ್ಕಾರ ನಿರಂತರವಾಗಿ ಪ್ರಯತ್ನ ಮುಂದುವರಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಐಸಿಸ್ ಜತೆ ಸಂಪರ್ಕ ಆರೋಪ: 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ

0

ಲಕ್ನೋ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಆನ್‌ಲೈನ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಎಟಿಎಸ್ ಬಂಧಿಸಿದೆ.

ಸಹರಾನ್ಪುರ ಜಿಲ್ಲೆಯ ನಿವಾಸಿ ಹರಿಶ್ ಅಲಿ ಬಂಧಿತ ಆರೋಪಿ. ಮೊರಾದಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಈತನನ್ನು ವಶಕ್ಕೆ ಪಡೆದುಕೊಂಡಿದೆ.

ಭಾರತದಲ್ಲಿ ಐಸಿಸ್ ಸಂಬಂಧಿತ ಆನ್‌ಲೈನ್ ಚಟುವಟಿಕೆಗಳ ಕುರಿತು ನಡೆಯುತ್ತಿದ್ದ ತನಿಖೆಯ ವೇಳೆ ಈತನ ಸಂಪರ್ಕ ಬಹಿರಂಗವಾಗಿದೆ. ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿರುವ ಆರೋಪಿ, ಇನ್‌ಸ್ಟಾಗ್ರಾಮ್ ಹಾಗೂ ಡಿಸ್ಕಾರ್ಡ್‌ನಂತಹ ಎನ್ಕ್ರಿಪ್ಟ್ ಮಾಡಿದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್ ನಿರ್ವಾಹಕರ ಜೊತೆ ಸಂಪರ್ಕದಲ್ಲಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ದೇಶದ ವಿವಿಧ ಭಾಗಗಳಲ್ಲಿ ಷರಿಯಾ ಆಧಾರಿತ ಖಲೀಫತ್ ವ್ಯವಸ್ಥೆ ಸ್ಥಾಪನೆಗೆ ಬೆಂಬಲ ನೀಡುವ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಜೊತೆಗೆ, ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುವುದು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಬಳಸಿಕೊಂಡು ಹಲವಾರು ಗುಂಪುಗಳನ್ನು ರಚಿಸಿ, ಬೇರೆ ಬೇರೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಅನಧಿಕೃತ ಚಟುವಟಿಕೆಗಳ ತಡೆ ಕಾಯ್ದೆ (UAPA) ಮತ್ತು ಬಿಎನ್ಎಸ್‌ನ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಕಾಬೂಲ್ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ: 400ಕ್ಕೂ ಹೆಚ್ಚು ಸಾವು; ರಶೀದ್ ಖಾನ್ ಆಕ್ರೋಶ

0

ಕಾಬೂಲ್: ಕಾಬೂಲ್‌ನಲ್ಲಿರುವ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ ದಾಳಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಆಟಗಾರರು ತೀವ್ರವಾಗಿ ಖಂಡಿಸಿದ್ದಾರೆ.

ಅಫ್ಘಾನಿಸ್ತಾನ ತಂಡದ ಖ್ಯಾತ ಆಟಗಾರ ರಶೀದ್ ಖಾನ್ ಈ ದಾಳಿಗೆ ಕಿಡಿಕಾರಿದ್ದು, ಪಾಕಿಸ್ತಾನ ಸೇನೆಯ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಪವಿತ್ರ ರಂಜಾನ್ ತಿಂಗಳಲ್ಲೇ ನಡೆದ ಈ ದಾಳಿಯಿಂದ ಉಂಟಾದ ಜೀವಹಾನಿಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾಗರಿಕರ ಮನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವೈದ್ಯಕೀಯ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಗಂಭೀರ ತಪ್ಪು ಎಂದು ಹೇಳಿದ್ದಾರೆ. “ಇದು ಯುದ್ಧಾಪರಾಧ” ಎಂದು ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂದುವರಿದು, ಇಂತಹ ಅಮಾನವೀಯ ಕೃತ್ಯಗಳು ದ್ವೇಷ ಮತ್ತು ವಿಭಜನೆಯನ್ನು ಹೆಚ್ಚಿಸುತ್ತವೆ. ಈ ದಾಳಿಯ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ತಮ್ಮ ದೇಶದ ಜನರೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ.

ಈ ಭೀಕರ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 250 ಜನರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭಾರೀ ದಾಳಿಗಳಲ್ಲೊಂದು ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸಮಯದ ಪ್ರಕಾರ ರಾತ್ರಿ ಸುಮಾರು 9 ಗಂಟೆಗೆ, 2,000 ಹಾಸಿಗೆ ಸಾಮರ್ಥ್ಯವಿರುವ ದೊಡ್ಡ ಆಸ್ಪತ್ರೆಯನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಈ ಕುರಿತು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್ ಮಾಹಿತಿ ನೀಡಿದ್ದಾರೆ.

ಸದನದಲ್ಲಿ ಉತ್ತರ ಇಲ್ಲದೆ ಸರ್ಕಾರಕ್ಕೆ ಮುಜುಗರ: 8 ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಬೆಂಗಳೂರು: ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ 8 ಐಎಎಸ್ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಸದನದಲ್ಲಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.

ಈ ವಿಚಾರವಾಗಿ ಸ್ಪೀಕರ್ ಯು.ಟಿ. ಖಾದರ್ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿ ನಿನ್ನೆ ಸಭಾತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ಮುಖ್ಯ ಕಾರ್ಯದರ್ಶಿ ಎಲ್ಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಒಂದು ವಾರದೊಳಗೆ ಉತ್ತರ ಸಲ್ಲಿಸಲು ಸೂಚಿಸಿದ್ದಾರೆ. ಉತ್ತರ ನೀಡಲು ವಿಫಲವಾದಲ್ಲಿ ಕಾರಣ ತಿಳಿಸಿ ಲಿಖಿತ ವಿವರಣೆ ನೀಡಬೇಕು ಎಂದು ತಿಳಿಸಲಾಗಿದೆ.

ನೋಟಿಸ್ ಪಡೆದ ಅಧಿಕಾರಿಗಳು

  • ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ – ಆರ್. ವಿನೋತ್ ಪ್ರಿಯಾ

  • ವಸತಿ ಇಲಾಖೆ ಕಾರ್ಯದರ್ಶಿ – ಮೋಹನ್ ರಾಜ್ ಕೆ.ಪಿ

  • ಸಾರಿಗೆ ಇಲಾಖೆ ಕಾರ್ಯದರ್ಶಿ – ಎನ್.ವಿ. ಪ್ರಸಾದ್

  • ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ – ಆರ್. ಗೀರಿಶ್

  • ಲೋಕಪಯೋಗಿ ಇಲಾಖೆ ಕಾರ್ಯದರ್ಶಿ – ಅಮ್ಲಾನ್ ಆದಿತ್ಯ ಬಿಸ್ವಾಸ್

  • ಕಂದಾಯ ಇಲಾಖೆ ಕಾರ್ಯದರ್ಶಿ – ರಾಜೇಂದರ್ ಕುಮಾರ್ ಕಟಾರಿಯಾ

ಕೂಡಲೇ ಲಿಖಿತ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬಜೆಟ್ ಅಧಿವೇಶನದ ವೇಳೆ ಒಟ್ಟು 230 ಪ್ರಶ್ನೆಗಳ ಪೈಕಿ ಕೇವಲ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರೆತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.

ಇದೇ ವಿಚಾರವಾಗಿ ನಿನ್ನೆ ಸ್ಪೀಕರ್ ಖಾದರ್ ಅವರು “ಸದನ ನಡೆಸುವುದು ಮಂತ್ರಿಗಳಿಗಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಮನವೊಲಿಸಿದ ಬಳಿಕ ಅವರು ಮರುಬಾರಿಗೆ ಅಧಿವೇಶನದಲ್ಲಿ ಭಾಗವಹಿಸಿದ್ದರು.

ಎಲ್‌ಪಿಜಿ ಕೊರತೆಗೆ ಪರಿಹಾರ: ನಂದಾ ದೇವಿ ಹಡಗು ಕಾಂಡ್ಲಾಗೆ ಆಗಮನ, ರಾಜ್ಯಕ್ಕೆ 26,000 ಟನ್ ಅನಿಲ

0

ಗಾಂಧಿನಗರ: ಗುಜರಾತ್ನಲ್ಲಿ ಎಲ್‌ಪಿಜಿ ಕೊರತೆಯ ನಡುವೆಯೇ ಮಹತ್ವದ ಬೆಳವಣಿಗೆಯಾಗಿದ್ದು, 46,000 ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಹಡಗು ಕೆಲವೇ ಗಂಟೆಗಳಲ್ಲಿ ಕಾಂಡ್ಲಾ ಬಂದರು ತಲುಪಲಿದೆ. ಇದರಿಂದ ದೇಶದಲ್ಲಿ ತಲೆದೂರಿದ್ದ ಅಡುಗೆ ಅನಿಲದ ಕೊರತೆ ಸಮಸ್ಯೆಗೆ ಭಾಗಶಃ ಪರಿಹಾರ ಸಿಗಲಿದೆ.

ಇದಕ್ಕೂ ಮೊದಲು, ಸೋಮವಾರ (ಮಾ.16) 46,000 ಟನ್ ಎಲ್‌ಪಿಜಿ ಹೊತ್ತ ಶಿವಾಲಿಕ್ ಹಡಗು ಭಾರತಕ್ಕೆ ಆಗಮಿಸಿತ್ತು. ಈ ಎರಡೂ ಹಡಗುಗಳು ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಸೇರಿವೆ. ಪ್ರತಿಯೊಂದು ಹಡಗು ಕೂಡ ತಲಾ 46,000 ಟನ್ ಎಲ್‌ಪಿಜಿ ಸಾಗಣೆ ಮಾಡುತ್ತಿದೆ. ಇದರ ಜೊತೆಗೆ ಮೂರನೇ ಹಡಗು ಕೂಡ ಇಂದು ಭಾರತ ತಲುಪುವ ನಿರೀಕ್ಷೆಯಿದೆ.

ಇನ್ನೊಂದೆಡೆ, ಯುಎಇಯ ಫುಜೈರಾ ಬಂದರಿನಿಂದ ಹೊರಟಿದ್ದ ಜಗ್ ಲಡ್ಕಿ ಹಡಗು ಇಂದು ಮಧ್ಯಾಹ್ನ ಮುಂದ್ರಾ ಬಂದರು ತಲುಪುವ ಸಾಧ್ಯತೆ ಇದೆ. ಈ ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತು ಬರುತ್ತಿದೆ.

ಶಿವಾಲಿಕ್ ಹಡಗು ಮುಂದ್ರಾ ಬಂದರಿನಲ್ಲಿ 20,000 ಟನ್ ಎಲ್‌ಪಿಜಿಯನ್ನು ಇಳಿಸಲಿದ್ದು, ಉಳಿದ 26,000 ಟನ್ ಅನ್ನು ನವ ಮಂಗಳೂರು ಬಂದರುಗೆ ಸಾಗಿಸಲಾಗುತ್ತದೆ. ಇದರಿಂದ ಕರ್ನಾಟಕಕ್ಕೆ 26,000 ಟನ್ ಎಲ್‌ಪಿಜಿ ಪೂರೈಕೆ ಆಗಲಿದೆ.

ಒಟ್ಟಾರೆ, ಈ ಹಡಗುಗಳ ಆಗಮನದಿಂದ ದೇಶದಲ್ಲಿನ ಎಲ್‌ಪಿಜಿ ಪೂರೈಕೆ ಸ್ಥಿರಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

ಬಾಕಿ ಇರುವ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಬಗ್ಗೆ ಕರ್ನಾಟಕ ಸಂಸದರ ಜತೆ ಚರ್ಚೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ಬಾಕಿ ಉಳಿಸಿಕೊಂಡಿದೆ ಆದ ಕಾರಣ ನಾನು, ಹೆಚ್.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಅವರು ಕರ್ನಾಟಕದ ಎಲ್ಲಾ ಸಂಸದರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

“ಚರ್ಚೆಯ ವಿಚಾರಗಳನ್ನು ಬಂದ ನಂತರ ತಿಳಿಸುತ್ತೇವೆ. ಎಲ್ಲರು ಒಟ್ಟಾಗಿ ನೀರಾವರಿ ವಿಚಾರಗಳ ಬಗ್ಗೆ ತೀರ್ಮಾನ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡುತ್ತೇವೆ” ಎಂದು ಹೇಳಿದರು.

ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್: ವೃದ್ಧೆಯಿಂದ 38 ಲಕ್ಷ ರೂ. ದೋಚಿದ ಖದೀಮರು!

0

ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧೆಯನ್ನು ಬೆದರಿಸಿ 38 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಾರ್ಚ್ 11ರಂದು ವೃದ್ಧೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಮುಂಬೈ ಶಾಖೆಯಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ ಹಾಗೂ ಆ ಖಾತೆಯಿಂದ ಭಯೋತ್ಪಾದಕರಿಗೆ ಹಣ ವರ್ಗಾವಣೆ ಆಗುತ್ತಿದೆ ಎಂದು ಬೆದರಿಕೆ ಹಾಕಲಾಗಿದೆ.

ಇದನ್ನು ತನಿಖೆಯ ಭಾಗವೆಂದು ಹೇಳಿ, ಆರ್‌ಬಿಐ ಪರಿಶೀಲನೆ ನಡೆಯಲಿದೆ. 38 ಲಕ್ಷ ರೂಪಾಯಿ ಜಮಾ ಮಾಡಿದರೆ ಒಂದು ಗಂಟೆಯೊಳಗೆ ಹಣವನ್ನು ಮರಳಿ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ.

ವಂಚಕರ ಮಾತು ನಂಬಿದ ಗೀತಾ ಎಂಬ ವೃದ್ಧೆ ತನ್ನ ಬಳಿ ಇದ್ದ 38 ಲಕ್ಷ ರೂಪಾಯಿಯನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಜೊತೆಗೆ, 72 ಗಂಟೆಗಳ ಕಾಲ ಯಾರನ್ನೂ ಸಂಪರ್ಕಿಸಬಾರದು ಎಂದು ಕೂಡ ಸೂಚಿಸಿದ್ದಾರೆ.

ಎರಡು ದಿನಗಳಾದರೂ ಹಣ ಮರಳಿ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ವೃದ್ಧೆ, ತಾನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಮೋಸ ಹೋಗಿರುವುದನ್ನು ಅರಿತು ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ.

ರಾಯಚೂರು| ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವು!

ರಾಯಚೂರು:- ರಾಯಚೂರಿನ ಸಿಂಧನೂರು ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜರುಗಿದೆ.

ದೊಡ್ಡ ಈರಮ್ಮ (38) ಮೃತ ದುರ್ದೈವಿ. ಇವರು ಕೊಪ್ಪಳದ ಬೆವಿನಹಾಳ ಗ್ರಾಮದ ನಿವಾಸಿ.ಬಸ್ ಚಾಲಕನ ಅಜಾಗರೂಕತೆಯಿಂದ ಮಹಿಳೆ ಸಾವನ್ನಪ್ಪಿದ್ದು, ಅಪಘಾತದ ದೃಶ್ಯ ಪ್ರಯಾಣಿಕರನ್ನ ಬೆಚ್ಚಿಬೀಳಿಸಿದೆ.

ಸಿಂಧನೂರು ಬಸ್ ನಿಲ್ದಾಣದಲ್ಲಿ ಸೋಮವಾರ ಅಪಘಾತ ನಡೆದಿದೆ. ಘಟನೆ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಋತುಚಕ್ರ ರಜೆ: ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್ ಬೇಡ – ಹೈಕೋರ್ಟ್ ಸೂಚನೆ

ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ಹಿನ್ನೆಲೆ, ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್ ನೀಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ ಹಾಗೂ ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಧಿಸೂಚನೆ ಜಾರಿಗೆ ಸಂಬಂಧಿಸಿ ಸರ್ಕಾರ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್ ನೀಡುತ್ತಿದೆ. ಇದರಿಂದ ಉದ್ಯಮಗಳಿಗೆ ತೊಂದರೆಯಾಗುತ್ತಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿರುವ ಸಂದರ್ಭದಲ್ಲಿ ಶೋಕಾಸ್‌ ನೋಟಿಸ್ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಸೂಚನೆ ನೀಡಿತು.

ಇನ್ನೊಂದೆಡೆ, ಮಹಿಳಾ ವಕೀಲರ ಪರ ಹಾಜರಾದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಸರ್ಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ತೊಂದರೆ ಉಂಟು ಮಾಡುವ ಅಂಶಗಳಿಲ್ಲ. ಯಾವುದೇ ಶೋಕಾಸ್‌ ನೋಟಿಸ್ ನೀಡಲಾಗಿದೆ ಎಂಬ ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಹೇಳಿದರು.

ಅರ್ಜಿದಾರರ ಪರ ವಕೀಲರು ಮಹಿಳೆಯರ ರಕ್ಷಣೆ ಕುರಿತು ಆಕ್ಷೇಪವಿಲ್ಲ. ಆದರೆ ಉದ್ಯಮದ ಹಿತಾಸಕ್ತಿಯನ್ನು ಪರಿಗಣಿಸದೇ ಅಧಿಸೂಚನೆ ಜಾರಿಗೊಳಿಸಲಾಗಿದೆ ಎಂದು ವಾದಿಸಿದರು. ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್‌ 24ಕ್ಕೆ ಮುಂದೂಡಿತು.

ಚಾಮರಾಜನಗರ: ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸಾವು!

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಬಳಿ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು ಎರಡು ವರ್ಷದ ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕೇರಳ ಮೂಲದ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸ್, ಅರಣ್ಯ ಮತ್ತು ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಭಾಗದಲ್ಲಿ ಹುಲಿ ಮತ್ತು ಚಿರತೆ ಸಂಚಾರ ಹೆಚ್ಚಾಗಿದ್ದು, ಅಧಿಕಾರಿಗಳು ಥರ್ಮಲ್ ಡ್ರೋನ್ ಮೂಲಕ ಪರಿಶೀಲನೆ ನಡೆಸಿದಾಗ ಹುಲಿ ಸಾವಿಗೀಡಾಗಿದೆ ಎಂಬುದು ದೃಢಪಟ್ಟಿದೆ. ಹಿಂದೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ 6 ಹುಲಿ, ಬಿಆರ್‌ಟಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ 1 ಹುಲಿ ಸಾವನ್ನಪ್ಪಿದ್ದರೆ, ಇದೀಗ ಗುಂಡ್ಲುಪೇಟೆ ಭಾಗದಲ್ಲಿ ಸಹಜವಾಗಿ ಹುಲಿ ಸಾವಿಗೀಡಾಗಿದೆ.

error: Content is protected !!