Home Blog Page 4

ಶಿವಮೊಗ್ಗ: ಮಂಗನ ಕಾಯಿಲೆಗೆ ಬಲಿಯಾದ 29 ವರ್ಷದ ಯುವಕ!

0

ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೃತನನ್ನು ಸಸಿ ತೋಟದ ನಿವಾಸಿ ಕಿಶೋರ್ (29) ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ಜ್ವರದ ತೀವ್ರತೆ ಹೆಚ್ಚಾಗಿತ್ತು.

ರೋಗಲಕ್ಷಣಗಳು ಗಂಭೀರಗೊಂಡ ಹಿನ್ನೆಲೆಯಲ್ಲಿ, ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಜ್ಞ ವೈದ್ಯರ ತಂಡ ಸತತ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆಯಿಂದಾಗಿ ಕಿಶೋರ್ ಪ್ರಾಣ ಕಳೆದುಕೊಂಡಿದ್ದಾರೆ.

ಅಧಿಕಾರಿ ಮೇಲೆ ಸಿಎಂ ಶಿಸ್ತು ಕ್ರಮದ ಎಚ್ಚರಿಕೆ: ರಾಜೀನಾಮೆಗೆ ಮುಂದಾಗಿದ್ದ ಸಚಿವ ಕೆ.ಜೆ. ಜಾರ್ಜ್?

0

ಬೆಂಗಳೂರು: ಇಂಧನ ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸುಮಾರು ಒಂದು ವಾರದ ಹಿಂದೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕೆಜೆ ಜಾರ್ಜ್, ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಕ್ರಮ ಕೈಗೊಳ್ಳುವುದಾದರೆ, ನಾನೇ ರಾಜೀನಾಮೆ ನೀಡುತ್ತೇನೆ ಎಂದು ಜಾರ್ಜ್ ಅವರು ಸಿಎಂ ಮುಂದೆ ಹೇಳಿದ್ದರು ಎಂದು ತಿಳಿದುಬಂದಿದೆ. ಜಾರ್ಜ್ ರಾಜೀನಾಮೆ ಮಾತು ಆಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಧಾನ ಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಕೆಪಿಟಿಸಿಎಲ್ ಎಂಡಿ ಜೊತೆಗೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಇ-ಆಡಳಿತ) ಹುದ್ದೆಯನ್ನೂ ಹೊಂದಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಹಲವು ದೂರುಗಳು ಸರ್ಕಾರಕ್ಕೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿ ಕಚೇರಿಯಿಂದ ಅವರನ್ನು ಭೇಟಿಗೆ ಆಹ್ವಾನಿಸಲಾಗಿತ್ತು.

ಆದರೆ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ತಲುಪಿದ್ದರೂ ಸಹ ಪಂಕಜ್ ಕುಮಾರ್ ಪಾಂಡೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು. ಹಿರಿಯ ಅಧಿಕಾರಿಯ ಈ ನಡೆಗೆ ಮುಖ್ಯಮಂತ್ರಿ ಕಚೇರಿ ಗಂಭೀರವಾಗಿ ಪ್ರತಿಕ್ರಿಯಿಸಿ,

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಪಾಂಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ‘ನೋಟಿಸ್ ನೀಡಿದ ದಿನವೇ ಲಿಖಿತ ವಿವರಣೆ ನೀಡಬೇಕು’ ಎಂಬ ಕಟ್ಟುನಿಟ್ಟಿನ ಆದೇಶವನ್ನೂ ನೀಡಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವೆಂದರೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ಬದಲಾವಣೆ: ಪ್ರಧಾನಿ ಮೋದಿ

0

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವೇ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪರಿವರ್ತನೆ ಎಂದು ಹೇಳಿದ ಪ್ರಧಾನಿ, ಈಗ ದೇಶವು “ಸುಧಾರಣಾ ಎಕ್ಸ್‌ಪ್ರೆಸ್‌”ನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಪತಿ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಆ ಭಾಷಣವು 140 ಕೋಟಿ ಭಾರತೀಯರ ವಿಶ್ವಾಸದ ಪ್ರತಿಬಿಂಬವಾಗಿದ್ದು, ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳ ಸ್ಪಷ್ಟ ಚಿತ್ರಣವಾಗಿದೆ ಎಂದು ಹೇಳಿದರು. ವಿಶೇಷವಾಗಿ ಯುವಜನತೆಯ ಆಶಯಗಳಿಗೆ ಭಾಷಣದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿ ಸಂಸದರಿಗೆ ಮಾರ್ಗದರ್ಶನ ನೀಡುವಂತೆ ಹಲವಾರು ಪ್ರಮುಖ ವಿಷಯಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಎಲ್ಲಾ ಸಂಸದರು ಈ ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದರ ನಡುವೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಈ ಸಮೀಕ್ಷೆ ದೇಶದ ಆರ್ಥಿಕ ಸ್ಥಿತಿಯ ಸಮಗ್ರ ಅವಲೋಕನವನ್ನು ನೀಡುವ ಜೊತೆಗೆ, ಕೇಂದ್ರ ಬಜೆಟ್‌ಗೂ ಮುನ್ನ ಪ್ರಮುಖ ಮಾಹಿತಿಯನ್ನು ಒದಗಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಲೋಕಸಭೆಯಲ್ಲಿ 2026ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಬರ್ಬರ ಹತ್ಯೆ

0

ಹಾಸನ, ಜ.29: ಹಾಸನದಲ್ಲಿ ಅನೈತಿಕ ಸಂಬಂಧ ವಿಚಾರವಾಗಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಅಡುಗೆ ಗುತ್ತಿಗೆದಾರ ಆನಂದ್ (48) ಅವರನ್ನು ಧರ್ಮೇಂದ್ರ ಎಂಬ ವ್ಯಕ್ತಿ ಐದಾರು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಜ.28ರ ತಡರಾತ್ರಿ ನಡೆದ ಈ ಘಟನೆ ಹಾಸನ ನಗರವನ್ನು ಬೆಚ್ಚಿಬೀಳಿಸಿದೆ. ಆನಂದ್ ಮತ್ತು ಧರ್ಮೇಂದ್ರ ಇಬ್ಬರೂ ಒಂದೇ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಘಟನೆ ನಡೆದ ದಿನ ಇಬ್ಬರೂ ಬಾರ್‌ನಲ್ಲಿ ಭೇಟಿಯಾಗಿ ಮಹಿಳೆಯ ವಿಷಯವಾಗಿ ಮಾತಿನ ಚಕಮಕಿ ನಡೆದಿದೆ. ನಂತರ ಆನಂದ್ ಮನೆಗೆ ತೆರಳಿದ್ದರೂ, ಧರ್ಮೇಂದ್ರ ಮತ್ತೆ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಆನಂದ್ ಬಂದ ಕೂಡಲೇ ಇಬ್ಬರ ನಡುವೆ ಮತ್ತೆ ಗಲಾಟೆ ಉಂಟಾಗಿದ್ದು, ಕುಡಿದ ಅಮಲಿನಲ್ಲಿ ಧರ್ಮೇಂದ್ರ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಧರ್ಮೇಂದ್ರ ಆ ಮಹಿಳೆಯೊಂದಿಗೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಆನಂದ್ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಅವರ ನಡುವೆ ವೈಷಮ್ಯ ತೀವ್ರಗೊಂಡಿತ್ತು. ಕೊನೆಗೆ ಆ ವೈಷಮ್ಯ ಕೊಲೆಯಲ್ಲಿ ಅಂತ್ಯಗೊಂಡಿದೆ.

ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ನಂತರ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹಾಸನ ನಗರ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೊಟ್ಟಿಲ್ಲವೆಂದು ಕೊಲೆ: ಆರೋಪಿಗಳು ಅರೆಸ್ಟ್‌..!

0

ಬೆಂಗಳೂರು ಗ್ರಾಮಾಂತರ: ಸಿಗರೇಟ್ ಸೇದಲು ಬೆಂಕಿಪಟ್ಟಣ ನೀಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬನನ್ನು ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದ ಸುಶಾಂತ್ ಎಂಬ ಯುವಕನ ಬಳಿ ಆರೋಪಿಗಳು ಬೆಂಕಿಪಟ್ಟಣ ಕೇಳಿದ್ದಾರೆ. ಸುಶಾಂತ್ “ಇಲ್ಲ” ಎಂದು ಹೇಳಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ, ತಂದುಕೊಡು ಎಂದು ಕೂಗುತ್ತಾ ಅವನ ಮೇಲೆ ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಸುಶಾಂತ್‌ನನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿ, ಎರಡನೇ ಮಹಡಿಯ ಮೇಲಿಂದ ಕೆಳಕ್ಕೆ ತಳ್ಳಿದ್ದು, ಪರಿಣಾಮವಾಗಿ ಸುಶಾಂತ್ ಮೃತಪಟ್ಟಿದ್ದಾನೆ. ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಅಪ್ರಾಪ್ತ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಉಜ್ಬಲ್ ಪ್ರಸಾದ್, ಪ್ರಿನ್ಸ್ ಹಾಗೂ ಸೂರಜ್ ರಾಮ್ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ಬೆಟಗೇರಿ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಸಿಲುಕಿದ ಓವರ್‌ಲೋಡ್ ಲಾರಿ: ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್‌

0

ಗದಗ: ಸಮೀಪದ ಬೆಟಗೇರಿ ರೈಲ್ವೆ ಬ್ರಿಡ್ಜ್ ಬಳಿ ಓವರ್‌ಲೋಡ್ ಲಾರಿ ಸಿಲುಕಿಕೊಂಡ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಪಿವಿಸಿ ಪೈಪ್‌ಗಳನ್ನು ಹೊತ್ತು ಗದಗನತ್ತ ಸಾಗುತ್ತಿದ್ದ ಲಾರಿ, ಕಡಿಮೆ ಎತ್ತರದ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಅಡಕವಾಗಿದೆ. ಬ್ರಿಡ್ಜ್ ಎತ್ತರ ಕಡಿಮೆ ಇರುವುದರಿಂದ ಲಾರಿ ಮುಂದೆ ಸಾಗಲು ಸಾಧ್ಯವಾಗದೆ ಮಧ್ಯ ರಸ್ತೆಯಲ್ಲೇ ನಿಂತುಕೊಂಡಿದೆ.

ಈ ಪರಿಣಾಮವಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಎರಡು ದಿಕ್ಕುಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಎರಡೂ ಬದಿಗಳಲ್ಲೂ ವಾಹನಗಳ ದೀರ್ಘ ಸಾಲುಗಳು ನಿರ್ಮಾಣವಾಗಿದ್ದು, ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸಿದರು.

ಘಟನೆಯ ಮಾಹಿತಿ ಪಡೆದ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಲಾರಿಯನ್ನು ತೆರವುಗೊಳಿಸುವವರೆಗೆ ಕೆಲಕಾಲ ಟ್ರಾಫಿಕ್ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

ಈ ರೀತಿ ಘಟನೆ ತಿಂಗಳಲ್ಲಿ ಒಂದಾದರೂ ನಡೆಯುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ: ವಿಶೇಷ ಅತಿಥಿಗಳಾಗಿ ಪ್ರಕಾಶ್‌ ರಾಜ್‌, ರುಕ್ಮಿಣಿ ವಸಂತ್‌

ಬೆಂಗಳೂರು ಮತ್ತೆ ಸಿನಿಮಾ ಸಂಸ್ಕೃತಿಯ ಜಾಗತಿಕ ವೇದಿಕೆಯಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಇಂದು ವಿಧಾನಸೌಧದ ಭವ್ಯ ವೇದಿಕೆಯಲ್ಲಿ ಚಾಲನೆ ಸಿಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ಉದ್ಘಾಟನೆ ಮಾಡಲಿದ್ದು, ಚಿತ್ರರಸಿಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವ ಈ ಕಾರ್ಯಕ್ರಮಕ್ಕೆ, ಚಿತ್ರೋತ್ಸವದ ರಾಯಭಾರಿ ನಟ ಪ್ರಕಾಶ್ ರಾಜ್ ಹಾಗೂ ನಟಿ ರುಕ್ಮಿಣಿ ವಸಂತ್ ವಿಶೇಷ ಮೆರುಗು ನೀಡಲಿದ್ದಾರೆ.

ಸಂಜೆ 5.30ಕ್ಕೆ ನಡೆಯುವ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮವು ವಿಭಿನ್ನ ಸಂಸ್ಕೃತಿಗಳ ಸಂಗೀತ ಸಂವಾದವನ್ನು ಉಂಟುಮಾಡಲಿದೆ. ರಾತ್ರಿ ಉದ್ಘಾಟನಾ ಚಿತ್ರವಾಗಿ ನೆದರ್‌ಲ್ಯಾಂಡ್‌ನ ‘ಪೋರ್ಟ್ ಬ್ಯಾಗೇಜ್’ ಪ್ರದರ್ಶನಗೊಳ್ಳಲಿದೆ.

ಈ ಬಾರಿ BIFFES ನ ವೈಶಿಷ್ಟ್ಯವೆಂದರೆ, 65 ದೇಶಗಳ 225 ಚಿತ್ರಗಳ ಪ್ರದರ್ಶನ. ಪ್ರೇಕ್ಷಕರು ಒಂದೇ ನಗರದಲ್ಲಿ ಕುಳಿತು ವಿಶ್ವದ ಸಂಸ್ಕೃತಿ, ಜೀವನ ಶೈಲಿ ಮತ್ತು ಸಾಮಾಜಿಕ ವಾಸ್ತವತೆಯನ್ನು ಅನುಭವಿಸಬಹುದು. ಅದಕ್ಕಾಗಿಯೇ ಥೀಮ್ ಆಗಿ ‘ಬೆಂಗಳೂರಿನಲ್ಲಿ ಜಗತ್ತು’ ಆಯ್ಕೆ ಮಾಡಲಾಗಿದೆ.

ಇನ್ನೂ, ಈ ವರ್ಷದ ಧ್ಯೇಯವಾಕ್ಯ ವ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’
ಚಿತ್ರೋತ್ಸವಕ್ಕೆ ಸಾಮಾಜಿಕ ಆಳವನ್ನು ನೀಡಿದೆ. ಮಹಿಳಾ ದೃಷ್ಟಿಕೋನ, ಸಮಾನತೆ, ಮಾನವೀಯತೆ ಕುರಿತ ಚಿತ್ರಗಳಿಗೆ ಈ ಬಾರಿ ವಿಶೇಷ ಒತ್ತು ನೀಡಲಾಗಿದೆ.

ಡಾ. ರಾಜಕುಮಾರ್ ಅವರ ಚಲನಚಿತ್ರಗಳು, ಸ್ಮಿತಾ ಪಾಟೀಲ್ ಅವರ ಆಯ್ದ ಚಿತ್ರಗಳು, ಪೋಲೆಂಡ್ ಮತ್ತು ಥಾಯ್ಲೆಂಡ್ ದೇಶದ ಖ್ಯಾತ ನಿರ್ದೇಶಕರ ಚಿತ್ರಗಳು, ಸಮಕಾಲೀನ ಭಾರತೀಯ ಸಿನಿಮಾಗಳು – ಎಲ್ಲವೂ ಈ ಚಿತ್ರೋತ್ಸವವನ್ನು ನಿಜಾರ್ಥದಲ್ಲಿ ಒಂದು ಸಿನಿಮಾ ಮಹೋತ್ಸವವಾಗಿಸಿದೆ.

ಜನವರಿ 29ರಿಂದ ಫೆಬ್ರವರಿ 6ರವರೆಗೆ, ಲುಲು ಮಾಲ್ ಸಿನಿಪೊಲಿಸ್, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ – ಈ ಮೂರು ಕೇಂದ್ರಗಳಲ್ಲಿ ಪ್ರೇಕ್ಷಕರು ಜಾಗತಿಕ ಸಿನಿಮಾ ಸಂಭ್ರಮವನ್ನು ಅನುಭವಿಸಬಹುದು.

ಮಹಾರಾಷ್ಟ್ರದ ‘ದಾದಾ’ಗೆ ಅಂತಿಮ ವಿದಾಯ: ಇಂದು ಸರ್ಕಾರಿ ಗೌರವಗಳೊಂದಿಗೆ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ

0

ಮುಂಬೈ: ಪುಣೆಯ ಬಾರಾಮತಿಯಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ‘ದಾದಾ’ಗೆ ಬೆಳಗ್ಗೆ 11 ಗಂಟೆಗೆ ಅಂತಿಮ ವಿದಾಯ ಹೇಳಲಾಗುತ್ತದೆ.

ಅಂತ್ಯಕ್ರಿಯೆ ಅಜಿತ್ ಪವಾರ್ ಅವರ ರಾಜಕೀಯ ಭದ್ರಕೋಟೆಯಾದ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇರಿಸಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ವಿದ್ಯಾ ಪ್ರತಿಷ್ಠಾನ ಕ್ಯಾಂಪಸ್ (ಗಡಿಮಾ) ನಿಂದ ಅಂತಿಮ ಯಾತ್ರೆ ಆರಂಭಗೊಂಡಿದ್ದು, ನಗರವಿಡೀ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಅವಕಾಶ ನೀಡುತ್ತಾ ಸಾಗುತ್ತಿದೆ.

ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಲಕ್ಷಾಂತರ ಬೆಂಬಲಿಗರು ಸೇರಿರುವ ದೃಶ್ಯ ಭಾವನಾತ್ಮಕ ವಾತಾವರಣ ನಿರ್ಮಿಸಿದೆ.

ಉಪಮುಖ್ಯಮಂತ್ರಿ ಅಹಲ್ಯಾಬಾಯಿ ಹೋಳ್ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೊರಗಡೆ ಅಜಿತ್ ಪವಾರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಹರಿದುಬರುತ್ತಿದೆ.

ಈ ದುರಂತದಲ್ಲಿ ಮೃತಪಟ್ಟ ಅಜಿತ್ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ದಿಲೀಪ್ ಜಾಧವ್ ಅವರ ಅಂತ್ಯಕ್ರಿಯೆ ನಿನ್ನೆ ಸತಾರಾದಲ್ಲಿ ನೆರವೇರಿಸಲಾಯಿತು. ಅವರ ಪುಟ್ಟ ಮಗನೇ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದು, ಈ ದೃಶ್ಯ ಹಲವರ ಕಣ್ಣೀರನ್ನು ತರಿಸಿದೆ.

ಪತನಗೊಂಡ ಚಾರ್ಟರ್ ವಿಮಾನದಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಡಿಸಿಎಂ ಅಜಿತ್ ಪವಾರ್, ಪಿಎಸ್‌ಒ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್, ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ದುರಂತದಲ್ಲಿ ಮೃತಪಟ್ಟಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ತಕ್ಷಣ ಘೋಷಿಸಿ; ರಾಜ್ಯ ಸರ್ಕಾರಕ್ಕೆ ಆರ್.ಬಿ. ಪಾಟೀಲ ಆಗ್ರಹ

0

ಹಾವೇರಿ:- ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅವಧಿ ಮುಗಿಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಘೋಷಿಸಬೇಕು. ಇಲ್ಲವೇ ಚುನಾವಣೆ ನಡೆಯುವವರೆಗೆ ಈಗಿರುವ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರೆಸಿ ಆದೇಶ ಹೊರಡಿಸಬೇಕು ಎಂದು ಹಾನಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ ಆಗ್ರಹಿಸಿದರು.

ಬುಧವಾರ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಗಳು ಇಲ್ಲದೆ ರಾಜ್ಯದಲ್ಲಿ ಪ್ರಜಾಪ್ರತಿನಿಧಿ ವ್ಯವಸ್ಥೆ ಸಂಪೂರ್ಣ ಕುಸಿತದ ಹಾದಿಯಲ್ಲಿದೆ. ವರ್ಷಗಳ ಕಾಲ ತಾಪಂ–ಜಿಪಂ ಚುನಾವಣೆ ನಡೆಸದೆ ನಿರ್ಲಕ್ಷ್ಯ ತೋರಿರುವ ರಾಜ್ಯ ಸರ್ಕಾರ, ಇದೀಗ ಗ್ರಾಮ ಪಂಚಾಯತಿಗಳನ್ನೂ ಅದೇ ಸ್ಥಿತಿಗೆ ತಳ್ಳಲು ಹೊರಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.

ತಾಪಂ ಹಾಗೂ ಜಿಪಂ ಆಡಳಿತ ಇಲ್ಲದ ಪರಿಣಾಮವಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯೇ ದುರ್ಬಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಕೇವಲ ಅಧಿಕಾರಿಗಳ ಮೂಲಕ ಜನಪರ ಆಡಳಿತ ಸಾಧ್ಯವಿಲ್ಲ. ಜನಪ್ರತಿನಿಧಿಗಳ ಮಾರ್ಗದರ್ಶನವಿಲ್ಲದೆ ನಡೆಯುವ ಆಡಳಿತವನ್ನು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಲಾರದು ಎಂದು ಹೇಳಿದರು.

ಗ್ರಾಮ ಪಂಚಾಯತಿಗಳ ಚುನಾವಣೆ ಘೋಷಿಸದೇ, ಅಥವಾ ಈಗಿರುವ ಸದಸ್ಯರು ಹಾಗೂ ಅಧ್ಯಕ್ಷರ ಅವಧಿಯನ್ನು ಮುಂದುವರೆಸದಿದ್ದರೆ, ಜೆಡಿಎಸ್ ಪಕ್ಷ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಆರ್.ಬಿ. ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

 

ಸಿಗ್ನಲ್ ತಪ್ಪಿಸಲು ಹೋಗಿ ದುರಂತ; ಶಾಲಾ ಬಸ್‌ಗೆ ಕಾರು ಡಿಕ್ಕಿ, ತಪ್ಪಿದ ದುರಂತ!

0

ಬೆಂಗಳೂರು:- ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿ ಸಿಗ್ನಲ್ ತಪ್ಪಿಸಲು ಹೋಗಿ ಶಾಲಾ ಬಸ್‌ಗೆ ಕಾರೊಂದು ಡಿಕ್ಕಿಯಾದ ಘಟನೆ ಜರುಗಿದೆ.

ಕಾರಿನ ಚಾಲಕ ಸಿಗ್ನಲ್ ತಪ್ಪಿಸಲು ವೇಗವಾಗಿ ನುಗ್ಗಿದ್ದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಬಸ್‍ನ ಮಧ್ಯೆ ಭಾಗಕ್ಕೆ ಕಾರು ಡಿಕ್ಕಿಯಾಗಿದ್ದು, ಕಾರಿನ ಮುಂಭಾಗ ಜಖಂ ಆಗಿದೆ. ಅಲ್ಲದೇ ಬಸ್‍ಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!