Home Blog Page 5

ಆಟೋ ಮ್ಯುಟೇಶನ್ ಜಾರಿ: ಶೇ.98 ಖಾತೆ ಬದಲಾವಣೆ ಈಗ ಸ್ವಯಂ ಚಾಲಿತ – ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಆಸ್ತಿ ನೋಂದಣಿ ಬಳಿಕ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಆಟೋ ಮ್ಯುಟೇಶನ್ ವ್ಯವಸ್ಥೆಯ ಮೂಲಕ ಈಗ ಶೇ.98 ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾಗುತ್ತಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ಬದಲಾವಣೆಯಲ್ಲಿ ಆಗುತ್ತಿದ್ದ ವಿಳಂಬದ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಶೇ.66 ರಷ್ಟು ಖಾತೆಗಳನ್ನು ಸ್ವಯಂ ಚಾಲಿತವಾಗಿ ಬದಲಾಯಿಸಲಾಗುತ್ತಿತ್ತು. ಈಗ ಅದನ್ನು ಮತ್ತಷ್ಟು ವಿಸ್ತರಿಸಿ ಶೇ.98ಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಕೆಲ ಖಾತೆಗಳು ಅರ್ಜಿ ಸಲ್ಲಿಸಿದ 3 ಗಂಟೆಗಳಲ್ಲೇ ಬದಲಾಗುತ್ತಿದ್ದು, ಕೆಲವು 8 ದಿನ ಅಥವಾ 16 ದಿನಗಳ ಒಳಗೆ ಕಾನೂನು ಪ್ರಕಾರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ತಕರಾರು ದಾಖಲಾಗಿದೆಯಾದರೆ ಮಾತ್ರ ವಿಳಂಬವಾಗುತ್ತದೆ ಎಂದು ಹೇಳಿದರು.

ಈ ವ್ಯವಸ್ಥೆಯಿಂದ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ಯಾರನ್ನೂ ಭೇಟಿ ಮಾಡದೇ ಸೇವೆ ಪಡೆಯಬಹುದಾಗಿದೆ. ಇದು ದೇಶದ ಮಟ್ಟದಲ್ಲಿ ಪ್ರಗತಿಪರ ಹೆಜ್ಜೆ ಎಂದು ಸಚಿವರು ತಿಳಿಸಿದ್ದಾರೆ.

ಇದಲ್ಲದೆ, ತಕರಾರು ಸಲ್ಲಿಕೆಯಲ್ಲಿ ದುರುಪಯೋಗ ತಡೆಯಲು ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಒಂದೇ ವ್ಯಕ್ತಿ ಅನೇಕ ತಕರಾರು ಸಲ್ಲಿಸುವುದನ್ನು ನಿಯಂತ್ರಿಸಲು ಸಾಧ್ಯವಾಗಿದೆ.

ಆರ್‌ಐ ಅಧಿಕಾರಿಗಳು ಅನಾವಶ್ಯಕವಾಗಿ ತಕರಾರು ಸಲ್ಲಿಸುವ ವ್ಯವಸ್ಥೆಯನ್ನು ರದ್ದುಪಡಿಸಿದ್ದು, ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.

ಗ್ಯಾಸ್ ವಿತರಣೆಗೆ ಸರ್ಕಾರ ಗೈಡ್ ಲೈನ್: ಆಸ್ಪತ್ರೆಗಳಿಗೆ 100%, ಹೋಟೆಲ್ ಗಳಿಗೆ ಕೇವಲ 10%

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ LPG ಕೊರತೆ ಹಿನ್ನೆಲೆ ಕರ್ನಾಟಕ ಸರ್ಕಾರ ಗ್ಯಾಸ್ ವಿತರಣೆಗೆ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

ನಾಳೆಯಿಂದಲೇ ಈ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು, ಅಗತ್ಯ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.100 ಗ್ಯಾಸ್ ವಿತರಣೆ ಮಾಡಲು ಸೂಚಿಸಲಾಗಿದೆ.

ಇತರ ಪ್ರಮುಖ ವಲಯಗಳಾದ ಸೀಡ್ ಪ್ರೋಸೆಸಿಂಗ್, ಆಯಿಲ್ ಉತ್ಪಾದನಾ ಕಂಪನಿಗಳು, ಏರ್‌ಲೈನ್ಸ್ ಮತ್ತು ರೈಲ್ವೆಗಳಿಗೆ ಶೇ.70 ಗ್ಯಾಸ್ ನೀಡಲಾಗುತ್ತದೆ. ವೃದ್ಧಾಶ್ರಮಗಳಿಗೂ ಇದೇ ಪ್ರಮಾಣದಲ್ಲಿ ಪೂರೈಕೆ ಮಾಡಲು ಸೂಚಿಸಲಾಗಿದೆ.

ಆದರೆ, ಹೋಟೆಲ್‌ಗಳು, ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳು, ಕಾರ್ಪೋರೇಟ್ ಗೆಸ್ಟ್ ಹೌಸ್‌ಗಳು ಮತ್ತು ಫುಡ್ ಪ್ರೋಸೆಸಿಂಗ್ ಕಂಪನಿಗಳಿಗೆ ಕೇವಲ ಶೇ.10 ಗ್ಯಾಸ್ ವಿತರಣೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಈ ಗೈಡ್‌ಲೈನ್ಸ್ ಅನುಸರಿಸಿ ಗ್ಯಾಸ್ ಏಜೆನ್ಸಿಗಳು ವಿತರಣೆ ಮಾಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

LPG ಸಂಕಷ್ಟ: “ಒಂದು ವಾರ ಸಹಿಸಿಕೊಳ್ಳಿ” – ಹೋಟೆಲ್ʼಗಳಿಗೆ ಸಚಿವ ಮುನಿಯಪ್ಪ ಮನವಿ

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ LPG ಕೊರತೆ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಒಂದು ವಾರ ಸಹಕಾರ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಗ್ಯಾಸ್ ಸಮಸ್ಯೆ ಕುರಿತು ಮಾತನಾಡಿದ ಅವರು, ಗೃಹ ಬಳಕೆಯ ಡೊಮೆಸ್ಟಿಕ್ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ. ಅಗತ್ಯವಿರುವಷ್ಟು ಸರಬರಾಜು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರ್ಕಾರ 20% ಮಾತ್ರ ವಿತರಣೆ ಮಾಡಲು ಸೂಚಿಸಿದೆ. ಪ್ರಸ್ತುತ ಸುಮಾರು 9 ಸಾವಿರ ಕಮರ್ಷಿಯಲ್ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಅವುಗಳನ್ನು ಆಸ್ಪತ್ರೆಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ನೀಡಲು ಸಾಧ್ಯವಾಗುತ್ತಿದ್ದು, ಇದರಿಂದ ಸಮಸ್ಯೆ ಎದುರಾಗಿದೆ. ಹೀಗಾಗಿ ಒಂದು ವಾರ ಸಹಿಸಿಕೊಳ್ಳುವಂತೆ ಹೋಟೆಲ್‌ ಮಾಲೀಕರಿಗೆ ಮನವಿ ಮಾಡಿದರು.

ಇರಾನ್‌ನ ಪರಿಸ್ಥಿತಿ ಹಿನ್ನೆಲೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ 16 ಹಡಗುಗಳು ಕ್ಯೂನಲ್ಲಿ ಇದ್ದು, ಅವು ಬಂದ ನಂತರ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಒಂದು ವಾರದ ಬಳಿಕ ಸುಮಾರು 15 ಸಾವಿರ ಸಿಲಿಂಡರ್ ಸಂಗ್ರಹಿಸಿ, ಹೋಟೆಲ್ ಅಸೋಸಿಯೇಷನ್ ಜೊತೆ ಚರ್ಚಿಸಿ ಹಂಚಿಕೆ ಮಾಡುವ ಯೋಜನೆ ಇದೆ ಎಂದು ಸಚಿವರು ಹೇಳಿದರು.

ಶಾರ್ಟ್ ಸರ್ಕ್ಯೂಟ್ ದುರಂತ: EV ಚಾರ್ಜಿಂಗ್ ಪಾಯಿಂಟ್ʼನಲ್ಲಿ ಬೆಂಕಿ, 7 ಮಂದಿ ಸಜೀವ ದಹನ

0

ಭೋಪಾಲ್: ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭೀಕರ ಅಗ್ನಿ ಅವಘಡ ಸಂಭವಿಸಿ 7 ಮಂದಿ ಸಜೀವ ದಹನಗೊಂಡ ಘಟನೆ ಇಂದೋರ್ನಲ್ಲಿ ನಡೆದಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬಂಗಾಳಿ ಸ್ಕ್ವೇರ್ ಸಮೀಪದ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಚಾರ್ಜ್ ಮಾಡಲು ಎಲೆಕ್ಟ್ರಿಕ್ ಕಾರನ್ನು ಪ್ಲಗ್ ಇನ್ ಮಾಡಲಾಗಿದ್ದು, ಈ ವೇಳೆ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಅದರಿಂದ ಬೆಂಕಿ ಮನೆಯೊಳಗೆ ಸಂಗ್ರಹಿಸಿದ್ದ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಬ್ಬಿ, ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಪರಿಣಾಮ ಬೆಂಕಿ ಮೂರು ಅಂತಸ್ತಿನ ಕಟ್ಟಡವನ್ನೇ ಆವರಿಸಿದೆ.

ಈ ದುರ್ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳ ಬರುವ ಮುನ್ನ ಮೂವರನ್ನು ರಕ್ಷಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಸರ್ಕಾರದಿಂದ ವೈಷ್ಣೋದೇವಿ ಯಾತ್ರೆಗೆ ₹5,000 ಸಹಾಯಧನ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಗಳಿಗೆ ತಲಾ ₹5,000 ಸಹಾಯಧನ ನೀಡುವ ಯೋಜನೆ ಜಾರಿಗೆ ತರುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಾಗಿ ಸರ್ಕಾರ ₹5 ಕೋಟಿ ಅನುದಾನ ಮೀಸಲು ಇಟ್ಟಿದ್ದು, 2026-27ನೇ ಸಾಲಿನಿಂದ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.

ಇದಲ್ಲದೆ, ಕೈಲಾಸ ಮಾನಸ ಸರೋವರ ಯಾತ್ರೆಗೆ ₹30,000, ಚಾರ್ ಧಾಮ್ ಯಾತ್ರೆಗೆ ₹20,000 ಹಾಗೂ ಕಾಶಿ ಯಾತ್ರೆಗೆ ₹5,000 ಸಹಾಯಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅರ್ಚಕರಿಗೂ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು, ವರ್ಷಕ್ಕೆ ಸುಮಾರು 2,500 ಅರ್ಚಕರಿಗೆ ಉಚಿತ ಯಾತ್ರೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಯಾತ್ರೆಗೆ ತೆರಳಿದವರು ಫೋಟೋ ಅಪ್ಲೋಡ್ ಮಾಡಿದ ಬಳಿಕ ಸಹಾಯಧನವನ್ನು ನೇರವಾಗಿ ಅವರ ಮನೆಗೆ ನೀಡಲಾಗುತ್ತದೆ. ಈ ಯೋಜನೆ ‘ಫಸ್ಟ್ ಕಮ್, ಫಸ್ಟ್ ಸರ್ವ್’ ಆಧಾರದ ಮೇಲೆ ಜಾರಿಗೆ ಬರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಅಕ್ರಮ ಗನ್ ಸಪ್ಲೈ ಕೇಸ್: ಬೆಂಗಳೂರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಡೀಲರ್ ಅರೆಸ್ಟ್!

0

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟಕ್ಕೆ ಮುಂದಾಗಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಮಧ್ಯಪ್ರದೇಶ ಮೂಲದ ಗನ್ ಡೀಲರ್‌ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸೈಯದ್ ಇರ್ಫಾನ್ ರಿಜ್ವಿಯಿಂದ 3 ಕಂಟ್ರಿಮೇಡ್ ಪಿಸ್ತೂಲ್‌ಗಳು ಹಾಗೂ 2 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಮಸೂದ್ ಮತ್ತು ಜಾವೀದ್ ಎಂಬ ಇಬ್ಬರು ಆರೋಪಿಗಳನ್ನು ಯಶವಂತಪುರ ರೈಲು ನಿಲ್ದಾಣದ ಬಳಿ ಬಂಧಿಸಲಾಗಿತ್ತು. ಅವರಿಂದ ಒಂದು ಪಿಸ್ತೂಲ್ ಹಾಗೂ 52 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು.

ವಿಚಾರಣೆ ವೇಳೆ ಈ ಜಾಲದ ಮಾಸ್ಟರ್ ಮೈಂಡ್ ಸೈಯದ್ ಇರ್ಫಾನ್ ರಿಜ್ವಿ ಎಂಬುದು ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಿ ಅಪರಾಧ ಹಿನ್ನೆಲೆಯುಳ್ಳವರಿಗೆ ಸರಬರಾಜು ಮಾಡುವುದು ಈ ಜಾಲದ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅಗತ್ಯತೆ ಅನುಸಾರ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಕ್ರಮ: ಸಚಿವ ಶಿವರಾಜ್ ಎಸ್. ತಂಗಡಗಿ

ಬೆಂಗಳೂರು: ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 14 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಗಳ ಬೇಡಿಕೆಯನುಸಾರ ಅಗತ್ಯತೆ ಅನುಸಾರ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ತಿಳಿಸಿದರು.

ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನಸಭಾ ಸದಸ್ಯ ದೊಡ್ಡನಗೌಡ ಹನುಮಗೌಡ ಪಾಟೀಲ ಇವರು ಕಳೆದ 3 ವರ್ಷಗಳಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಮಂಜೂರು ಮಾಡಲಾಗಿರುವ ವಸತಿ ನಿಲಯಗಳ ಬಗ್ಗೆ , ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ ಜನರು ವಾಸವಾಗಿದ್ದು, ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವಂತೆ ಕೋರಿದರು.

ಈ ಸಮಯದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 10 ಮೆಟ್ರಿಕ್ ಪೂರ್ವ ಹಾಗೂ ನಾಲ್ಕು ಮೆಟ್ರಿಕ್ ನಂತರದ ಒಟ್ಟು 14 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಕಳೆದ ಮೂರು ವರ್ಷದಲ್ಲಿ ಒಟ್ಟು 250 ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಲಯಗಳ ಬೇಡಿಕೆ ಇದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬೇಡಿಕೆ ಹಾಗೂ ಅಗತ್ಯತೆ ಅನುಸಾರ ವಿದ್ಯಾರ್ಥಿನಿಲಯಗಳನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಹೃದಯಾಘಾತಕ್ಕೆ ಮತ್ತೊಂದು ಬಲಿ: ಕೋಲಾರದಲ್ಲಿ ಹೆಡ್ ಕಾನ್ಸ್ಟೇಬಲ್ ಸಾವು!

ಕೋಲಾರ: ಹೃದಯಾಘಾತದಿಂದ ಪೊಲೀಸ್ ಮುಖ್ಯಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಸೀಸಂದ್ರ ಗ್ರಾಮದ ವೆಂಕಟರಮಣಪ್ಪ (50) ಮೃತ ದುರ್ದೈವಿ. ಅವರು ಕರ್ನಾಟಕ ಪೊಲೀಸ್ ಇಲಾಖೆಯ ಕೆಜಿಎಫ್ ಜಿಲ್ಲಾ ವ್ಯಾಪ್ತಿಯ ಊರಿಗಾಂ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇತ್ತೀಚೆಗೆ ತೂಕ ಕಡಿಮೆ ಮಾಡುವ ಉದ್ದೇಶದಿಂದ ವೆಂಕಟರಮಣಪ್ಪ ಡಯಟ್ ಹಾಗೂ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೊಳಗಾದ ಅವರು, ತಕ್ಷಣ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಅತಿಥಿ ಶಿಕ್ಷಕಿಗೆ ಲೈಂಗಿಕ ದೌರ್ಜನ್ಯ: ಖಾಯಂ ಶಿಕ್ಷಕನ ವಿರುದ್ಧ ಕೇಸ್ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಅತಿಥಿ ಶಿಕ್ಷಕಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಆರೋಪಿ ಲಿಂಗರಾಜು ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿ, ಪ್ರಕರಣದ ಸಂಪೂರ್ಣ ವಿಚಾರಣೆ ನಡೆಯಬೇಕು ಎಂದು ಸೂಚಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದು ಸಮ್ಮತಿಯ ಸಂಬಂಧವಲ್ಲ, ಬಲವಂತದ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಆರೋಪಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಮೊದಲು ನಗ್ನ ಚಿತ್ರಗಳನ್ನು ಪಡೆದು ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೀಠ ಗಮನಿಸಿದೆ.

ಉದ್ಯೋಗ ಕಳೆದುಕೊಳ್ಳುವ ಭಯ ಹಾಗೂ ಸಾರ್ವಜನಿಕ ಅವಮಾನ ಭೀತಿಯಿಂದ ಸಂತ್ರಸ್ತೆಯನ್ನು ಒತ್ತಾಯಿಸಿ ದೌರ್ಜನ್ಯ ನಡೆಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಅವಕಾಶ ಇಲ್ಲ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ:

2023ರಲ್ಲಿ ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ ಮಹಿಳೆಯೊಂದಿಗೆ ಆರೋಪಿ ಪರಿಚಯ ಬೆಳೆಸಿಕೊಂಡಿದ್ದನು. ಬಳಿಕ ಕಚೇರಿಗೆ ಕರೆಯಿಸಿಕೊಂಡು ದೌರ್ಜನ್ಯ ಎಸಗಿದ್ದು, ಕೆಲಸದಿಂದ ತೆಗೆಸುವುದಾಗಿ ಬೆದರಿಸಿ ನಗ್ನ ಚಿತ್ರಗಳನ್ನು ಕಳುಹಿಸಲು ಒತ್ತಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಚಿತ್ರಗಳನ್ನು ಆಧಾರ ಮಾಡಿಕೊಂಡು ಹಲವು ಸ್ಥಳಗಳಲ್ಲಿ ದೌರ್ಜನ್ಯ ಮುಂದುವರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದ ವಿಷಯವನ್ನು ಬಹಿರಂಗಪಡಿಸದಿದ್ದರೂ, ಬಳಿಕ ಪತಿಗೆ ಮಾಹಿತಿ ನೀಡಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು, ಅದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ದೆಹಲಿ ಅಗ್ನಿ ಅವಘಡ: ವಸತಿ ಕಟ್ಟಡದಲ್ಲಿ ಬೆಂಕಿ, 8 ಮಂದಿ ಸಾವು

0

ನವದೆಹಲಿ: ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿರುವ ವಸತಿ ಕಟ್ಟಡವೊಂದರಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 8 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಅಗ್ನಿ ಅವಘಡದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಕಟ್ಟಡದ ಒಳಗೆ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು, ಅವರನ್ನು ರಕ್ಷಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಲು ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಈ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

error: Content is protected !!