ವಿಜಯಸಾಕ್ಷಿ ಸುದ್ದಿ, ನವಲಗುಂದ: ವಿಜ್ಞಾನ ಪ್ರದರ್ಶನ ಎಂದರೆ ಕೇವಲ ಮಾದರಿಗಳ ಪ್ರದರ್ಶನವಲ್ಲ. ಇದು ಸೃಜನಶೀಲತೆ ಮತ್ತು ಕುತೂಹಲದ ಹಬ್ಬ. ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು, ಪರಿಶ್ರಮವನ್ನು ಮತ್ತು ವೈಜ್ಞಾನಿಕ ಚಿಂತನೆಯುಳ್ಳ ನವೀನ ಆಲೋಚನೆಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಪ್ರತಿ ಯೋಜನೆಯ ಹಿಂದೆ ಇರುವ ಶ್ರಮ, ಪರಿಶೀಲನೆ, ಪ್ರಯೋಗ ಹಾಗೂ ಅರಿವು ಅಮೂಲ್ಯವಾದದ್ದು. ಪ್ರಶ್ನಿಸುವಿಕೆಯೇ ವಿಜ್ಞಾನದ ತಳಹದಿಯಾಗಿದ್ದು, ಪ್ರಶ್ನಿಸುವ ಮಗುವೇ ಭವಿಷ್ಯದ ವಿಜ್ಞಾನಿ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ರಾಯಾಪುರದ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದು ಮಾಡುತ್ತಿರುವುದು ನಿಜವಾದ ವಿಜ್ಞಾನಿಯ ಕೆಲಸವೇ ಆಗಿದೆ. ವಸ್ತುಪ್ರದರ್ಶನದಲ್ಲಿ ನೀವು ಗಮನಿಸುತ್ತೀರಿ, ಪ್ರಶ್ನಿಸುತ್ತೀರಿ, ಊಹಿಸುತ್ತೀರಿ, ಪ್ರಯೋಗ ಮಾಡುತ್ತೀರಿ ಮತ್ತು ಕಂಡುಹಿಡಿಯುತ್ತೀರಿ. ಈ ಪ್ರಕ್ರಿಯೆಯೇ ನಿಮಗೆ ಆತ್ಮವಿಶ್ವಾಸ ನೀಡುತ್ತದೆ ಮತ್ತು ಸಮಸ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಶಕ್ತಿಯನ್ನು ನೀಡುತ್ತದೆ ಎಂದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ವಿಜ್ಞಾನ ವಿಷಯವು ಪಾಠ-ಪುಸ್ತಕಗಳಲ್ಲಿ ಮಾತ್ರ ಸೀಮಿತವಾಗಿಲ್ಲ. ನಮ್ಮ ದಿನನಿತ್ಯದ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ವಿಜ್ಞಾನ ಇದೆ. ನಾವು ಬಳಸುವ ಮೊಬೈಲ್ ಫೋನ್‌ಗಳಿಂದ ಹಿಡಿದು ವಿದ್ಯುತ್, ವೈದ್ಯಕೀಯ ಚಿಕಿತ್ಸೆಗಳು, ಸಂಚಾರ ಸೌಲಭ್ಯಗಳು, ಬಾಹ್ಯಾಕಾಶ ಸಂಶೋಧನೆಗಳವರೆಗೆ ಎಲ್ಲವೂ ವಿಜ್ಞಾನದ ಕೊಡುಗೆ. ಪಾಲಕರೂ ಕೂಡ ತಮ್ಮ ಮಕ್ಕಳ ಕುತೂಹಲವನ್ನು ಪ್ರೋತ್ಸಾಹಿಸಬೇಕು. ಅವರಿಗೆ ಪ್ರಯೋಗ ಮಾಡಲು ಅವಕಾಶ ನೀಡಬೇಕು. ಇಂದಿನ ಪ್ರಯೋಗ ಮಾಡುವ ಮಗು ನಾಳೆಯ ವಿಜ್ಞಾನಿಯಾಗಬಲ್ಲದು ಎಂದರು.
ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಸತತವಾಗಿ ಕಲಿಯಿರಿ, ಕಲ್ಪನೆ ಮಾಡಿ ಮತ್ತು ಪ್ರಯೋಗಗಳನ್ನು ಮುಂದುವರಿಸಿ. ಶಿಕ್ಷಕರು ಮಕ್ಕಳನ್ನು ವೈಜ್ಞಾನಿಕ ಮನೋಭಾವದತ್ತ ದಾರಿ ತೋರುತ್ತಿರುವ ಕಾರ್ಯವು ಅವರನ್ನು ಭವಿಷ್ಯದ ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಪರಿಸರ ಕ್ಷೇತ್ರದ ತಜ್ಞರನ್ನಾಗಿ ರೂಪಿಸಬಲ್ಲದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕರು(ಅ) ಹಾಗೂ ಡಯಟ್ ಪ್ರಾಂಶುಪಾಲ ಬಸವರಾಜ ನಾಲತವಾಡ ಮಾತನಾಡಿ, ಇಂದು ನಾವು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿರುವುದು ವಿಜ್ಞಾನ, ಸೃಜನಶೀಲತೆ ಮತ್ತು ಸಂಶೋಧನೆಯ ಸಂಭ್ರಮ ಆಚರಿಸಲು. ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತದೆ. ಪ್ರಶ್ನಿಸಲು ಮತ್ತು ಉತ್ತರ ಕಂಡುಹಿಡಿಯಲು ಧೈರ್ಯ ನೀಡುತ್ತದೆ. ಕಲ್ಪನೆ ಮತ್ತು ಜ್ಞಾನವನ್ನು ನೈಜ ಜೀವನಕ್ಕೆ ಸಂಪರ್ಕಿಸುತ್ತದೆ. ಟೀಮ್ ವರ್ಕ್ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುತ್ತದೆ. ಹೊಸ ಆವಿಷ್ಕಾರಗಳತ್ತ ವಿದ್ಯಾರ್ಥಿಗಳನ್ನು ತೆಗೆದುಕೊಂಡು ಹೋಗುತ್ತದೆ ಎಂದರು.
ಡಾ. ಗಾಯತ್ರಿ ಜೋಶಿ ಪ್ರಾರ್ಥಿಸಿದರು. ಉಪನಿರ್ದೇಶಕ (ಆಡಳಿತ) ಎಸ್.ಎಸ್. ಕೆಳದಿಮಠ ಸ್ವಾಗತಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ದೀಪಕ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಎನ್ ಶೆಟ್ಟಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕರಾದ ಕುಮಾರ ಹುಲಗೂರ, ಗೀತಾ ಚುಳುಕಿ ಹಾಗೂ ಈರಯ್ಯ ವೆಂಕಟಾಪೂರಮಠ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪುಟ್ಟಪ್ಪ ಭಜಂತ್ರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕರಾದ ಗಿರೀಶ ಪದಕಿ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ರವಿಕುಮಾರ ಹೊಸಮನಿ, ಶ್ಯಾಮ್ ಮಲ್ಲನಗೌಡ್ರ, ನಾರಾಯಣ ಭಜಂತ್ರಿ, ಎಸ್.ಎಫ್. ಸಿದ್ದನಗೌಡರ, ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಓ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಶಿಕ್ಷಣಾಧಿಕಾರಿಗಳಾದ ಪಿ.ಕೆ. ಚಿಕ್ಕಮಠ, ನಫೀಸಾ ದಾವಲಸಾಬನವರ, ಹೊನ್ನಪ್ಪನವರ, ವಿ.ಎಫ್. ಚುಳುಕಿ, ಲಗಮಣ್ಣವರ, ಜಯಶ್ರೀ ವರೂರ, ರೂಪಾ ಪೂರಂಕರ, ಬಶೆಟ್ಟಿ, ಹೇಮರಾಜ ಅರ್ಜುನವರ, ಶ್ರೀಧರಪಾಟೀಲ ಕುಲಕರ್ಣಿ, ಹುದ್ದಾರ, ಜ್ಞಾನ ವಿಕಾಸ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀನಿವಾಸ, ಡಯಟ್‌ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಒಟ್ಟು ವಿದ್ಯಾರ್ಥಿಗಳ 15 ವೈಯಕ್ತಿಕ ಮತ್ತು 10 ಗುಂಪು ವಿಭಾಗದಿಂದ, 10 ಶಿಕ್ಷಕರ ವಿಭಾಗದಿಂದ ಮಾದರಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ತೆಲಂಗಾಣದಲ್ಲಿ ನಡೆಯುವ ದಕ್ಷಿಣ ಭಾರತ ವಲಯಮಟ್ಟದ ವಸ್ತುಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.