Home Blog Page 207

ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಂಗನವಾಡಿಗಳು ಮಗುವಿನ ಶಿಕ್ಷಣದ ಮೊದಲ ಮೆಟ್ಟಿಲುಗಳಾಗಿದ್ದು, ಶಿಕ್ಷಣದ ಜೊತೆಗೆ ಆರೋಗ್ಯ ಸೇವೆ ನೀಡುವ ಮೈಲಿಗಲ್ಲುಗಳಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಸಮೀಪದ ಗೊಜನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರ ಸಂಖ್ಯೆ-43ರ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆನ್ನುವದು ಪಾಲಕರ ಇಚ್ಛೆಯಾಗಿರುತ್ತದೆ. ಅದಕ್ಕಾಗಿ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಎಲ್ಲ ಕಡೆಗಳಲ್ಲಿ ಸ್ಥಾಪಿಸಿದ್ದು, ಸಾವಿರಾರು ಮಕ್ಕಳು ಇದರಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಊಟ, ಉಪಹಾರ ಉಚಿತವಾಗಿ ನೀಡುವದರ ಜೊತೆಗೆ ಸಾಮಾನ್ಯವಾಗಿ ಮುಂದೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ವಿದ್ಯೆಯನ್ನು ನೀಡಲಾಗುತ್ತದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅಂಗನವಾಡಿ ಶಿಕ್ಷಕಿಯರು, ಸಹಾಯಕರು ನಿರಂತರ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಆರೋಗ್ಯ, ಉತ್ತಮ ಆಹಾರ ಒದಗಿಸುವತ್ತ ಅಂಗನವಾಡಿ ಶಿಕ್ಷಕರು, ಸಹಾಯಕರು ವಿಶೇಷ ಆದ್ಯತೆ ನೀಡಬೇಕು.

ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಗೊಜನೂರು ಗ್ರಾಮದಲ್ಲಿ ಬಹುದಿನಗಳಿಂದ ಬೇಡಿಕೆಯಲ್ಲಿದ್ದ ಅಂಗನವಾಡಿ ಕೇಂದ್ರ ಸಂಖ್ಯೆ 43ರ ನೂತನ ಕಟ್ಟಡ ಇದೀಗ ಪ್ರಾರಂಭವಾಗಿದ್ದು, ಕಟ್ಟಡದಲ್ಲಿ ಸ್ವಚ್ಛತೆ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಕರೆನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಕಾಳೆ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ, ಶಿರಹಟ್ಟಿ ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ರಮೇಶ ದನದಮನಿ, ಚಂದ್ರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಮಂಜುನಾಥ ಕಣವಿ, ವೀರಭದ್ರಪ್ಪ ವಡಕಣ್ಣವರ, ಗಂಗಾಧರ ಮೆಣಸಿನಕಾಯಿ, ಶಕ್ತಿ ಕತ್ತಿ, ಭೀಮಣ್ಣ ಯಂಗಾಡಿ, ಅಂಗನವಾಡಿ ಮೇಲ್ವಿಚಾರಕಿ ಗೀತಾ ಮುಳುಗುಂದ, ಎನ್‌ಪಿಎಸ್ ನೌಕರ ಸಂಘದ ತಾಲೂಕಾಧ್ಯಕ್ಷ ಎಫ್.ಎಸ್. ತಳವಾರ, ಅಂಗನವಾಡಿ ಕಾರ್ಯಕರ್ತೆಯರಾದ ಬಸವಣೆವ್ವ ಪಾಟೀಲ, ಸುಧಾ ಗುಂಡೆನಹಳ್ಳಿ, ಗಿರಿಜಾ ಪೂಜಾರ, ನಾಗಮ್ಮ ಮುದಗಲ್, ಮಕ್ಕಳ ಜಾಗೃತಿ ಸಂಸ್ಥೆ ಸಿಬ್ಬಂದಿಗಳಾದ ಸಂಜೀವ ರೆಡ್ಡಿ, ಕಾತುನಬಿ ಮಸೂದಿ, ಸಂಜೀವ, ಸಾವಿತ್ರಿ ಕಾಮತ ಮುಂತಾದವರಿದ್ದರು.

ಶಾಲೆ ಬಿಟ್ಟ ಮಕ್ಕಳ ಬಗ್ಗೆ ಗಮನವಿರಲಿ: ಶೇಖರಗೌಡ ರಾಮತ್ನಾಳ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕ್ಕಳು ನಿಯಮಿತವಾಗಿ ಶಾಲೆಗೆ ಬರುವುದನ್ನು ರೂಢಿಸಬೇಕು. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಎಲ್ಲರೂ ನಿಗಾ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಮಕ್ಕಳೊಂದಿಗೆ ಸಂವಾದ ಮತ್ತು ಅಹವಾಲು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

6ರಿಂದ 14 ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲೂ ತಾಲೂಕಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ನೀಡಬೇಕು. ಶಾಲೆ ಬಿಟ್ಟ ಮಕ್ಕಳ ಹಾಜರಾತಿ ಹಾಕುತ್ತ ನಡೆದರೆ ವರ್ಗ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರೇ ಹೊಣೆಯಾಗುತ್ತಾರೆ. ಭಾರತ ದೇಶದಲ್ಲಿ ಬಾಲ್ಯ ವಿವಾಹಗಳಿಲ್ಲದಂತೆ ಮಾಡುವುದಕ್ಕಾಗಿ ಈ ಅರಿವು ಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳಲ್ಲಿ ಮಕ್ಕಳು ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಲು ಕಡ್ಡಾಯವಾಗಿ ಸಲಹಾ ಪೆಟ್ಟಿಗೆಯನ್ನು ಇಡಬೇಕೆಂದರು.

ವಸತಿ ನಿಲಯಗಳಲ್ಲಿ, ಅದರಲ್ಲೂ ಬಾಲಿಕೆಯರ ವಸತಿ ನಿಲಯಗಳಲ್ಲಿ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಜಾರಿಗೆ ತರಬೇಕು. ಏನಾದರೂ ಅಹಿತಕರ ಘಟನೆ ನಡೆದರೆ ಅಲ್ಲಿನ ಮೇಲ್ವಿಚಾರಕರೇ ಜವಾಬ್ದಾರರಾಗುತ್ತಾರೆ ಎಂದರು.

ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಮಾತನಾಡಿ, ಮಕ್ಕಳ ಆಯೋಗವು ಮಕ್ಕಳ ಹಿತದೃಷ್ಟಿಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಿಮಗೆ ಏನೇ ತೊಂದರೆಯಾದರೂ ಅವರ ಗಮನಕ್ಕೆ ತನ್ನಿ. ಇಲ್ಲವಾದರೆ ತಾಲೂಕಾಡಳಿತದ ಗಮನಕ್ಕೂ ತರಬಹುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಸುಪರ್ಣಾ ಬ್ಯಾಹಟ್ಟಿ ವೇದಿಕೆಯ ಮೇಲಿದ್ದರು. ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಆರ್.ಎಸ್. ನರೇಗಲ್ಲ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕ ಡಿ.ಎಸ್. ಬಡಿಗೇರ ನಿರೂಪಿಸಿದರೆ, ಶಿಕ್ಷಕ ಬಿ.ಟಿ. ತಾಳಿ ವಂದಿಸಿದರು.

ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಕಂದಕೂರ ಮಾತನಾಡಿ, ಸರ್ಕಾರಿ ಪ್ರೌಢಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ತೊಂದರೆ ನಿವಾರಿಸಲು ಬಿಇಒ ಅವರಿಂದ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು. ಮನೆಗೊಂದು ಶೌಚಾಲಯ ಇರುವಂತೆ, ಶೌಚಾಲಯ ಇರುವ ಮನೆಯ ವರನನ್ನೇ ನೀವು ಮದುವೆಯಾಗಬೇಕೆಂದು ಬಾಲಿಕೆಯರಿಗೆ ಸಲಹೆ ನೀಡಿದರಲ್ಲದೆ, ಮನೆಯಲ್ಲಿ ಪಾಲಕರು ಗಂಡು-ಹೆಣ್ಣು ಮಕ್ಕಳನ್ನು ಒಂದೇ ರೀತಿ ಬೆಳೆಸಬೇಕೆಂದರು.

ಸಿಎಂ ಸಿದ್ದರಾಮಯ್ಯರ ದೀರ್ಘಾವಧಿ ಆಡಳಿತ: ಅಭಿಮಾನಿಗಳಿಂದ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಪ್ರಸಾದ ಸೇವೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ರಾಜಕೀಯದ ಏಳು-ಬೀಳಿನ ಮೇಲಾಟದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಏಳೂವರೆ ವರ್ಷಗಳಷ್ಟು ದೀರ್ಘಾವಧಿಗೆ ಕೇವಲ ಇಬ್ಬರು ಪೂರ್ಣಾವಧಿ ಮುಖ್ಯಮಂತ್ರಿಗಳು ಆಡಳಿತ ನಡೆಸಲು ಅವಕಾಶ ನೀಡಿದೆ. ಅವರಲ್ಲಿ ಒಬ್ಬರು ಹಿಂದುಳಿದ ಸಮುದಾಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಡಿ.ದೇವರಾಜ ಅರಸುರವರಾದರೆ, ಇನ್ನೊಬ್ಬರು ಪ್ರಸ್ತುತ ಮುಖ್ಯಮಂತ್ರಿಗಳಾಗಿ 2792 ದಿನಗಳನ್ನು ದಾಟಿ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲಾರ್ಹ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರಾಗಿದ್ದಾರೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೆ.ಬಿ. ಕಂಬಳಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ದೀರ್ಘಾವಧಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ನಗರದ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ 1755ನೇ ದಿನದ ಪ್ರಸಾದ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ನೇಹ-ಸಂಬಂಧಗಳಿಗೆ, ಪ್ರೀತಿ ವಾತ್ಸಲ್ಯಗಳಿಗೆ ಸೋಲುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವರ ದೃಷ್ಟಿಯಲ್ಲಿ ಹಠಮಾರಿ, ಒರಟರಂತೆ ಕಂಡರೂ ಕೂಡ ಅವರನ್ನು ಹತ್ತಿರದಿಂದ ಬಲ್ಲವರು ಅವರ ನಿಷ್ಕಲ್ಮಷ, ನಿಷ್ಕಪಟ ನುಡಿಗಳನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದಾಗಿ ಅವರ ಸ್ನೇಹ ಬಳಗ ಮತ್ತು ಅಭಿಮಾನಿ ಸಂಘಟನೆಗಳು ಅವರ ಬೆನ್ನಿಗೆ ಗಟ್ಟಿಯಾಗಿ ನಿಂತಿವೆ. ರಾಜಕೀಯವಾಗಿ ಅವರನ್ನು ಟೀಕಿಸುವ ವಿರೋಧಿಗಳು ಕೂಡ ವ್ಯಕ್ತಿಗತವಾಗಿ ಅವರನ್ನು ಗೌರವಿಸುತ್ತಾರೆ ಎಂದು ಹೇಳಿದರು.

ಪ್ರೊ. ಮಾರುತಿ ಮಡ್ಡಿ ಮಾತನಾಡಿ, ಸಿದ್ದರಾಮಯ್ಯನವರು ಆರ್ಥಿಕವಾಗಿಯೂ ಸದೃಢವಿಲ್ಲದ, ಸಾಂಪ್ರದಾಯಿಕ ಶಿಕ್ಷಣವನ್ನು ಪ್ರಾರಂಭದಲ್ಲಿ ಸರಿಯಾಗಿ ಪಡೆಯಲಾಗದ, ಹಿಂದುಳಿದ ಸಮುದಾಯದ, ಸೌಲಭ್ಯಗಳಿಲ್ಲದ ಕುಗ್ರಾಮದಲ್ಲಿ ಜನಿಸಿ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ರಾಜಕೀಯದಲ್ಲಿ ಬೆಳೆದುಬಂದ ರೀತಿ ಅತ್ಯಂತ ರೋಚಕ ಮತ್ತು ರೋಮಾಂಚನಕಾರಿಯಾಗಿದೆ. ಅಂದಿನ ರಾಮಕೃಷ್ಣ ಹೆಗಡೆಯವರ ಸರಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ನಂತರ ರೇಷ್ಮೆ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಮತ್ತೆ 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಎಸ್.ಆರ್. ಬೊಮ್ಮಾಯಿ ಸರಕಾರದಲ್ಲಿ ಸಾರಿಗೆ ಮಂತ್ರಿಗಳಾದರು ಎಂದರು.

ಈ ಸಂದರ್ಭದಲ್ಲಿ ಎಸ್.ಆರ್. ರೊಳ್ಳಿ, ನಿವೃತ್ತ ಶಿಕ್ಷಕ ಎಸ್.ಎಸ್. ಕರಡಿ, ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ಗೌರವಾಧ್ಯಕ್ಷರಾದ ಎಸ್.ಎಸ್. ಕಳಸಾಪೂರಶೆಟ್ಟರ್, ಉಪಾಧ್ಯಕ್ಷರಾದ ಉಮೇಶ ಪೂಜಾರ, ಸದಸ್ಯರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಹಿರಿಯರಾದ ಗುರುಮೂರ್ತಿ ಮರಿಗುದ್ದಿ, ಸಿದ್ದರಾಮಯ್ಯ ಅಭಿಮಾನಿ ಬಳಗದವರಾದ ವಿ.ವೈ. ಮಕ್ಕಣ್ಣವರ, ನಾಗಪ್ಪ ಗುಗ್ಗರಿ, ಡಾ. ಎಸ್.ಎ. ಜಕಬಾಳ, ಡಾ. ಶರಣಬಸವ ವೆಂಕಟಾಪೂರ, ಪ್ರೊ. ಬಿ.ಎಸ್. ಕಂಠಿ, ಪ್ರೊ. ಎಂ.ಸಿ. ವಗ್ಗಿ, ಚೆನ್ನಮ್ಮ ಹುಳಕಣ್ಣವರ, ಹುಚ್ಚಣ್ಣ ಶಹಪೂರ, ಬಿ.ಬಿ. ಭಾವಿಕಟ್ಟಿ, ಎಸ್.ಎಸ್. ಕರಡಿ, ಉಮೇಶ ಹಡಪದ, ಸುಭಾಷ ಪರಸನಾಯ್ಕರ್, ಶಿವಣ್ಣ ಶಿಂಗಟಾಲಕೇರಿ, ಯಲ್ಲಪ್ಪ ಗುರಿಕಾರ, ಬಸವರಾಜ ಮಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕ ಸಚಿವ ಸಂಪುಟ ನಡೆಸಿ ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿ ಭಾಗ್ಯದಂತಹ ಜನಪರ ಯೋಜನೆಗಳನ್ನು ಘೋಷಣೆ ಮಾಡಿದರು. ಮುಖ್ಯವಾಗಿ ಹಿಂದುಳಿದವರ, ಅಲ್ಪಸಂಖ್ಯಾತರ, ರೈತರ ಸಾಲ ಮನ್ನಾ ಮಾಡಿದರು. ರಾಜ್ಯದ 22ನೇ ಮುಖ್ಯಮಂತ್ರಿಯಾದ ನಂತರ ಪಂಚ ಗ್ಯಾರಂಟಿ ಯೋಜನೆಗಳಿಂದ ವಿಶ್ವದಾದ್ಯಂತ ಪ್ರಸಿದ್ಧಿಯಾದರು. ಬಡವರ ಪರ ಯೋಚಿಸುವ ಅವರೊಬ್ಬ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಪ್ರೊ. ಮಾರುತಿ ಮಡ್ಡಿ ಮಾತನಾಡಿ ಹೇಳಿದರು.

ರಾಜಕಾರಣ ಬದಿಗಿಟ್ಟು ನೀರಾವರಿ ಯೋಜನೆಗಳಿಗೆ ಒಗ್ಗಟ್ಟು ಅಗತ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

0

ಹಾವೇರಿ: ರಾಜ್ಯದ ಜನರು ಹಾಗೂ ರೈತರ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಗ್ಗಟ್ಟಾಗಿ ಒತ್ತಡ ಹೇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಹಾವೇರಿಯಲ್ಲಿ ಬುಧವಾರ ನಡೆದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ, ಮಹದಾಯಿ, ಕಾವೇರಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು ರಾಜ್ಯದ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದಾಗಿವೆ ಎಂದರು.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿಸಿದ ಡಿಸಿಎಂ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದರು. ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪಿನಂತೆ ಕೇಂದ್ರ ಅರಣ್ಯ ಇಲಾಖೆಯಿಂದ ಅನುಮೋದನೆ ದೊರೆತರೆ ರೈತರ ಹೋರಾಟಕ್ಕೆ ಅಂತ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಲಾಭಕ್ಕಾಗಿ ರಾಜ್ಯದ ಹಿತಾಸಕ್ತಿಯನ್ನು ಮರೆತರೆ ಸರಿಯಲ್ಲ ಎಂದು ಹೇಳಿದ ಅವರು, ಗೋವಾ ಸೇರಿದಂತೆ ಪಕ್ಕದ ರಾಜ್ಯಗಳ ರಾಜಕಾರಣವನ್ನು ಬದಿಗಿಟ್ಟು ಕರ್ನಾಟಕದ ರೈತರ ಬದುಕಿನ ಬಗ್ಗೆ ಆಲೋಚಿಸಬೇಕಾದ ಸಮಯ ಇದು ಎಂದರು. ಮುಂದಿನ ಎರಡು-ಮೂರು ವರ್ಷ ರಾಜಕಾರಣ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಒಂದಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.

ವಿರಾಟ್ ಮುತ್ತಿದ ಫ್ಯಾನ್ಸ್, ಹೊರಬರಲಾಗದೆ ಒದ್ದಾಡಿದ ಕಿಂಗ್ ಕೊಹ್ಲಿ!

0

ಭಾರತ–ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೆ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬುಧವಾರ ಸಂಜೆ ವಡೋದರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಕೊಹ್ಲಿ ಬರುವ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಜಮಾಯಿಸಿದರು. ಹೊರಬಂದ ಕ್ಷಣದಲ್ಲೇ ‘ಕೊಹ್ಲಿ.. ಕೊಹ್ಲಿ..’ ಎಂಬ ಘೋಷಣೆಗಳ ನಡುವೆ ಅಭಿಮಾನಿಗಳು ಅವರನ್ನು ಸುತ್ತುವರೆದರು. ವಿಮಾನ ನಿಲ್ದಾಣದಿಂದ ಕಾರಿನತ್ತ ಸಾಗುವ ವೇಳೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದು, ಭದ್ರತಾ ಸಿಬ್ಬಂದಿಗೆ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟವಾಯಿತು.

ಕೆಲ ಹೊತ್ತು ಅಸ್ತವ್ಯಸ್ತತೆ ಉಂಟಾದರೂ, ವಿರಾಟ್ ತಾಳ್ಮೆಯಿಂದ ನಡೆದುಕೊಂಡು ಕೆಲವು ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡಿ ಬಳಿಕ ಕಾರಿನಲ್ಲಿ ಹೊರಟರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನನ್ನ ಆಡಳಿತ ಜನತೆಗೆ ತೃಪ್ತಿ ತಂದಿದೆ; ಮುಖ್ಯಮಂತ್ರಿ ಸಿದ್ದರಾಮಯ್ಯ

0

ಹಾವೇರಿ:- ರಾಜಕಾರಣದಲ್ಲಿ ಮುಂದುವರಿಯಲು ಜನರ ಆಶೀರ್ವಾದವೇ ಮುಖ್ಯ. ಜನರ ಆಶೀರ್ವಾದದಿಂದಲೇ ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ಆಡಳಿತ ಜನತೆಗೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಹಾವೇರಿಯ ಕೊಳ್ಳಿ ಪಾಲಿಟೆಕ್ನಿಕ್ ಆವರಣದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾವೇರಿ ವೈದ್ಯಕೀಯ ಕಾಲೇಜು ಪೂರ್ಣಗೊಂಡಿದ್ದು, ಇದಕ್ಕೆ ಸುಮಾರು ₹500 ಕೋಟಿ ವೆಚ್ಚವಾಗಿದೆ. ಈ ಕಾಲೇಜಿನ ಘೋಷಣೆಯನ್ನೂ ನಾನೇ ಮಾಡಿದ್ದೆ, ಉದ್ಘಾಟನೆಯನ್ನೂ ನಾನೇ ಮಾಡುತ್ತಿದ್ದೇನೆ. ಈಗಾಗಲೇ ಮೂರನೇ ಬ್ಯಾಚ್ ಆರಂಭವಾಗಿದೆ ಎಂದು ತಿಳಿಸಿದರು. ಸರ್ಕಾರ ಬೊಕ್ಕಸ ಖಾಲಿ ಮಾಡಿದೆ ಎಂಬ ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರು.

ಜಿಎಸ್‌ಟಿ ಜಾರಿಯಿಂದ ರಾಜ್ಯಕ್ಕೆ ಭಾರೀ ನಷ್ಟ:-

ಜಿಎಸ್‌ಟಿ ಜಾರಿಗೆ ತಂದ ನಂತರ ಕಳೆದ ಎಂಟು ವರ್ಷಗಳಲ್ಲಿ 24% ತೆರಿಗೆ ಸಂಗ್ರಹಿಸಿ ಈಗ ತೆರಿಗೆ ಕಡಿಮೆ ಮಾಡಿದ್ದೇವೆ ಎನ್ನಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ವರ್ಷಕ್ಕೆ ₹10–12 ಸಾವಿರ ಕೋಟಿ ನಷ್ಟವಾಗುತ್ತಿದೆ. ಈ ವರ್ಷ ಮಾತ್ರವೇ ₹5–6 ಸಾವಿರ ಕೋಟಿ ನಷ್ಟವಾಗಲಿದೆ.

ನಾವು ಕೇಂದ್ರಕ್ಕೆ ₹4.5 ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಪ್ರತಿಯಾಗಿ ನಮಗೆ ₹60–70 ಸಾವಿರ ಕೋಟಿ ಮಾತ್ರ ಬರುತ್ತದೆ. ಒಂದು ರೂ ಕೊಟ್ಟರೆ 14 ಪೈಸೆ ಮಾತ್ರ ವಾಪಸ್ಸು ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜನ್ನು ಏಕೆ ಪೂರ್ಣಗೊಳಿಸಲಿಲ್ಲ? ನಾವು ಅಧಿಕಾರಕ್ಕೆ ಬಂದ ಬಳಿಕವೇ ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.

ಬಳ್ಳಾರಿ ಪ್ರಕರಣ: ಬ್ಯಾನರ್ ಬಿಚ್ಚಿದ್ದು ಪ್ರಚೋದನೆ:-

ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯಲ್ಲಿ ನಡೆದ ಗಲಾಟೆಗೆ ಬ್ಯಾನರ್ ಬಿಚ್ಚಿ ಹಾಕಿದ ಪ್ರಚೋದನೆಯೇ ಕಾರಣ. ಬಿಜೆಪಿಯವರಿಗೆ ಅಸೂಯೆ ತಡೆಯಲು ಆಗುತ್ತಿಲ್ಲ ಎಂದರು.

ಕಾನೂನು ಕೈಗೆತ್ತಿಕೊಂಡರೆ ಕ್ರಮ ಅನಿವಾರ್ಯ:-

ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರ ಪ್ರಕರಣದ ಕುರಿತು ಮಾತನಾಡಿದ ಅವರು, ಪೊಲೀಸರು ಕರ್ತವ್ಯ ನಿರ್ವಹಿಸುವ ವೇಳೆ ಮಹಿಳೆಯೇ ಸ್ವಯಂ ವಿವಸ್ತ್ರಗೊಂಡು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

108 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಜಿಲ್ಲೆಗೆ ಪ್ರಥಮ: ರಾಜ್ಯಮಟ್ಟಕ್ಕೆ ಜಗದೀಶಚಂದ್ರ ಆಯ್ಕೆ

0

ಗದಗ: ಇತ್ತೀಚೆಗೆ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರೋಣ ತಾಲೂಕು ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಜಗದೀಶಚಂದ್ರ ಆಲದಕಟ್ಟಿ ಅವರು 108 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರು, ಅಧೀಕ್ಷಕರು ಹಾಗೂ ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಜಗದೀಶಚಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪಿಡಿಪಿಎಸ್ ಯೋಜನೆಯಡಿ ಮೆಕ್ಕೆಜೋಳ ಖರೀದಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (ಪಿಡಿಪಿಎಸ್) ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಲ್‌ಗೆ 2150ರಂತೆ ಸರ್ಕಾರ ಜನವರಿ 4ರಿಂದ ಆದೇಶ ಹೊರಡಿಸಿದೆ. ಮೆಕ್ಕೆಜೋಳವನ್ನು ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿಯಮಿತ ಇವರ ಮುಖಾಂತರ ಖರೀದಿಸಲು ತಿಳಿಸಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಪ್ರತಿ ಕ್ವಿಂಟಲ್‌ಗೆ 1,900ರಲ್ಲಿ ವಹಿವಾಟಾಗುತ್ತಿದ್ದು, ವ್ಯತ್ಯಾಸದ ಮೊತ್ತ ರೂ. 250ನ್ನು ಸರ್ಕಾರದ ನಿಯಮಾನುಸಾರ ಅರ್ಹ ರೈತರಿಗೆ ತಲುಪಿಸುವ ಕ್ರಮ ಸಮರ್ಪಕವಾಗಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶಿಸಿದರು.

ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮೆಕ್ಕೆಜೋಳ ಉತ್ಪನ್ನವನ್ನು ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ /ಉಪ ಮಾರುಕಟ್ಟೆಗಳಲ್ಲಿ ಯುಎಂಪಿ ವೇದಿಕೆ ಮೂಲಕ 3.86 ಲಕ್ಷ ಕ್ವಿಂಟಲ್ ಪ್ರಮಾಣದಲ್ಲಿ ಸರ್ಕಾರದ ಆದೇಶದನ್ವಯ ವಹಿವಾಟು ಮಾಡಲು ತೀರ್ಮಾನಿಸಲಾಗಿದ್ದು, ಅದರಂತೆ ಕ್ರಮ ವಹಿಸುವಂತೆ ಸೂಚಿಸಿದರು.

ಈ ಯೋಜನೆಯಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ನತೆ, ಫ್ರುಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಲ್‌ಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ನೀಡಬೇಕು. ಮೆಕ್ಕೆಜೋಳದ ಎಫ್.ಎ.ಕ್ಯೂ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಲು ತಾಂತ್ರಿಕ ಅಧಿಕಾರಿಗಳನ್ನು ನೇಮಿಸಬೇಕು. ಈಗಾಗಲೇ ರಾಜ್ಯ ಸರ್ಕಾರದ ವತಿಯಿಂದ ಎಥೆನಾಲ್ ಉತ್ಪಾದನೆಗಾಗಿ, ಕುಕ್ಕುಟ ಮತ್ತು ಪಶು ಆಹಾರ ತಯಾರಿಕಾ ಘಟಕಗಳಿಗೆ ಹಾಗೂ ಕೆಎಂಎಫ್‌ಗಳಿಗೆ ಅವಶ್ಯವಿರುವ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಸದರಿ ಯೋಜನೆಯು ಅನ್ವಯಿಸದಂತೆ ತಂತ್ರಾಂಶದಲ್ಲಿ ಇಂದೀಕರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸರ್ಕಾರದಿಂದ ಮೆಕ್ಕೆಜೋಳದ ಬೆಲೆ ವ್ಯತ್ಯಾಸ ಮೊತ್ತ ಪಾವತಿಯನ್ನು ಡಿಬಿಟಿ ಮೂಲಕ ರೈತರಿಗೆ ಪಾವತಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಸದರಿ ಯೋಜನೆಯಡಿ ರೈತರ ನೋಂದಣಿ ಕಾರ್ಯವನ್ನು ಯೋಜನಾ ಅನುಷ್ಟಾನದ ಏಜೆನ್ಸಿ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯುವ ಕೇಂದ್ರಗಳಲ್ಲಿ ಮಾತ್ರ ನೋಂದಾಯಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಬಂಡಿ ಮಾತನಾಡಿ, ಸದರಿ ಯೋಜನೆಯ ಮೆಕ್ಕೆಜೋಳ ಖರೀದಿಗೆ ಜಿಲ್ಲೆಯ ಗದಗ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡ ಎಪಿಎಂಸಿ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಹಕಾರ ಸಂಘಗಳ ಇಲಾಖೆ ಅಧಿಕಾರಿಗಳು, ಮಾರ್ಕೆಟಿಂಗ್ ಫೆಡರೇಷನ್ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಇತರರು ಹಾಜರಿದ್ದರು.

ಮೆಕ್ಕೆಜೋಳ ಉತ್ಪನ್ನದ ಮೊದಲ ವಹಿವಾಟು ಯುಎಂಪಿ ತಂತ್ರಾಂಶದಲ್ಲಿ ಆಗುವ ದಿನಾಂಕದಿಂದ ರಾಜ್ಯಾದ್ಯಂತ ಒಂದು ತಿಂಗಳ ಅವಧಿಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿಯೇ ಅರ್ಹ ರೈತರಿಗೆ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ರಾಜ್ಯ ಸಹಕಾರ ಮಾರಾಟ ಮಂಡಳ ಮತ್ತು ಎಪಿಎಂಸಿ ಸಮಿತಿಯ ಕಾರ್ಯದರ್ಶಿಗಳು ದಿನಂಪ್ರತಿ ಆವಕವಾಗುವ ಮೆಕ್ಕೆಜೋಳದ ಉತ್ಪನ್ನದ ಪ್ರಮಾಣ, ವಹಿವಾಟಾದ ಪ್ರಮಾಣ ಮತ್ತು ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಅಂದಿನ ದಿನವೇ ಯುಎಂಪಿ ವೇದಿಕೆಯಲ್ಲಿ ತಪ್ಪದೇ ಇಂದೀಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ರಾಜ್ಯ ಸರ್ಕಾರದ ಪಾಲಿನ ಹಣ ಬಿಡುಗಡೆ ಮಾಡಿಸಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಬೈಪಾಸ್ ಮೂಲಕ ಸಂಚರಿಸುವ ವಿಶೇಷ ರೈಲುಗಳು ಗದಗ ಮೇನ್ ಜಂಕ್ಷನ್ ಮೂಲಕ ಸಂಚಾರ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪುರ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನೂತನ ರೈಲು ಮಾರ್ಗದ ಗದಗ-ಯಲವಗಿ, ಗದಗ ಬಿಂಕದಕಟ್ಟಿ, ಹರ್ತಿ-ಮಾಗಡಿ-ಶಿರಹಟ್ಟಿ ಮಾರ್ಗದ ಮೂಲಕ ಲಕ್ಷ್ಮೇಶ್ವರ ಮೂಲಕ ಯಲವಗಿ ತಲುಪುವ ಈ ಮಾರ್ಗ 58 ಕಿಲೋಮೀಟರ್ ದೂರದಲ್ಲಿದೆ. ಈ ಮಾರ್ಗದಲ್ಲಿ ಭೂಸ್ವಾಧೀನದ ಜಮೀನುಗಳಲ್ಲಿ ಯಾವುದೇ ಬೆಳೆಗಳನ್ನು ಬೆಳೆಯುತ್ತಿಲ್ಲ. ಭೂಮಿ ಸ್ವಾಧೀನಪಡಿಸಲು ಉಳಿದ ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲು ವಿನಂತಿಸಿಕೊಂಡರು.

ಈ ಮಾರ್ಗ ಪೂರ್ಣ ಆದರೆ ಶಿರಹಟ್ಟಿ, ಲಕ್ಷೇಶ್ವರ ಭಾಗದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಆಗಲಿದೆ. ಮುಂಬರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ಈ ಯೋಜನೆಗಳ ಸಲುವಾಗಿ ಹಣವನ್ನು ಮೀಸಲು ಇಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಿ: ಅರುಣ ಕಟ್ಟಿಮನಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯನ ಜೀವ ಅತ್ಯಮೂಲ್ಯವಾಗಿದ್ದು, ವಾಹನ ಚಲಾಯಿಸುವ ಪ್ರತಿಯೊಬ್ಬರೂ ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತ, ಸಾವು-ನೋವು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಅರುಣ ಕಟ್ಟಿಮನಿ ಹೇಳಿದರು.

ಅವರು ಬುಧವಾರ ಲಕ್ಷ್ಮೇಶ್ವರದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ ಕಾರ್ಯಕ್ರಮದಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಷ್ಕಾಳಜಿ ಮತ್ತು ಬೇಜಾವಾಬ್ದಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ. ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಿ, ಏಕಚಿತ್ತದಿಂದ ವಾಹನ ಚಲಾಯಿಸಬೇಕು. ಹೆಲ್ಮೆಟ್, ಸೀಟ್‌ಬೆಲ್ಟ್ ತಪ್ಪದೇ ಧರಿಸಬೇಕು. ರಸ್ತೆ ನಿಯಮ, ಸಂಜ್ಞೆ/ಸನ್ನೆಗಳನ್ನು ಪಾಲಿಸಬೇಕು. ವಾಹನ ಚಲಾಯಿಸುವಾಗ ಮದ್ಯಪಾನ ಮಾಡಲೇಬಾರದು. ಫೋನ್, ಸೌಂಡ್ ಸಿಸ್ಟಂ ಬಳಸಬೇಡಿ, ವಾಹನದ ಹಿಂದುಗಡೆ ರೇಡಿಯಂ ಸ್ಟಿಕ್ಕರ್ ಹಚ್ಚಿ. ಅಲಂಕಾರಿಕ ವಸ್ತುಗಳನ್ನು ಬಳಸಬೇಡಿ. ಪರಿಪೂರ್ಣ ದಾಖಲಾತಿಗಳು ಇರಲಿ. ಓವರ್ ಸ್ಪೀಡ್, ಓವರ್ ಕಾನ್ಫಿಡೆನ್ಸ್ ಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದು, ವಾಹನ ಸವಾರರು ಇದನ್ನು ಪಾಲಿಸಬೇಕು.

ರಸ್ತೆ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್, ಶಿಕ್ಷಣ ಇತರೇ ಇಲಾಖೆಗಳ ಸಹಯೋಗದಲ್ಲಿ ಈ ತಿಂಗಳು ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಮತ್ತು ಸ್ವಯಂ ಪಾಲನೆ ಮಾಡಬೇಕು ಎಂದರು.

ಈ ವೇಳೆ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಹಿರಿಯ ಪತ್ರಕರ್ತರಾದ ರಮೇಶ ನಾಡಗೇರ, ದಿಗಂಬರ ಪೂಜಾರ, ರೈತರು, ವಾಹನ ಚಾಲಕರು, ಸಿಬ್ಬಂದಿ ಇದ್ದರು.

error: Content is protected !!