Home Blog Page 2105

ಯುವಕರು ಗದಗ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಬೇಕು: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಟ್ಯಾಕ್ಸಿ ಪಡೆದ ಯುವಕರು ಪ್ರಾಮಾಣಿಕವಾಗಿ ದುಡಿದು ಉತ್ತಮ ಜೀವನ ನಡೆಸಿ ಸಮಾಜಕ್ಕೆ ಮಾದರಿ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸಂಭ್ರಮ 50ರ ಅಂಗವಾಗಿ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲೆಯ ಯುವಕರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಂಚಾರಕ್ಕಾಗಿ ಬಳಸುವ ಟ್ಯಾಕ್ಸಿಗಳಲ್ಲಿ ಇಂದು ಟ್ಯಾಕ್ಸಿ ಪಡೆದ ಜಿಲ್ಲೆಯ ಯುವಕರನ್ನು ಪರಿಗಣಿಸಿ ಬಳಸಿಕೊಳ್ಳಬೇಕು ಎಂದು ಮಾನ್ಯನೇಜಿಂಗ್ ಡೈರೆಕ್ಟರ್ ರ‍್ರಾಜೇಂದ್ರ ಅವರಿಗೆ ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯುವಕರು ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ದಾಖಲೆ ರೀತಿಯಲ್ಲಿ ಕಾರುಗಳನ್ನು ವಿತರಣೆ ಮಾಡಿರುವುದು ಸಂತೋಷ ತಂದಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು ಅಭಿನಂದನಾರ್ಹರು ಎಂದರು.

ಟ್ಯಾಕ್ಸಿಗಳನ್ನು ಪಡೆದ ಯುವಕರು ಗದಗ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಬೇಕು. ಟ್ಯಾಕ್ಸಿ ಪಡೆದ ಯುವಕರು ಗದಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯದಲ್ಲಿರುವ ವಿವಿಧ  ದೊಡ್ಡ ದೇವಾಲಯ, ಸ್ಮಾರಕ, ನಿಸರ್ಗಧಾಮ ಅಲ್ಲಿನ ವಸತಿ, ಊಟ ವ್ಯವಸ್ಥೆ, ಐತಿಹಾಸಿಕ ಹಿನ್ನೆಲೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕರಾದ ಜಿ.ಎಸ್. ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಡಿಪಿ ಸದಸ್ಯ ಡಿ.ಆರ್. ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ,  ಐಯ್ಯಸ್ವಾಮಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.


 

ಒಳ ಮೀಸಲಾತಿಯನ್ನು ಜಾತಿ ಜನಗಣತಿ ಆಧಾರದಲ್ಲಿಯೇ ಕೊಡಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನಲ್ಲಿ ನದಾಫ್/ಪಿಂಜಾರ್ ಸಮಾಜಕ್ಕೆ ಈಗಾಗಲೇ 25 ಗುಂಟೆ ಜಾಗವಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಸಮಾಜಕ್ಕೆ ಹಸ್ತಾಂತರಿಸುವದರೊಂದಿಗೆ ಸರಕಾರ ಮತ್ತು ಶಾಸಕರ ಅನುದಾನದಲ್ಲಿ 2025 ಮಾರ್ಚ್ 31ರ ಒಳಗಾಗಿ 1 ಕೋಟಿ ರೂ. ಒದಗಿಸಲಾಗುವುದು. ಸಂಘಟನೆಯ ಮುಖಂಡರು ಸೂಕ್ತ ನೀಲನಕ್ಷೆಯನ್ನು ಸಿದ್ಧಪಡಿಸಿ, ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶನಿವಾರ ನಗರದ ಆಂಗ್ಲೋ ಉರ್ದು ಹೈಸ್ಕೂಲï ಮೈದಾನದಲ್ಲಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದ ಗದಗ ಜಿಲ್ಲಾ ಘಟಕದ ಸಹಯೋಗದಲ್ಲಿ, ಆರ್.ಆರ್. ಸಿದ್ನೆಕೊಪ್ಪ, ಐ.ಡಿ. ನದಾಫ್ ವೇದಿಕೆಯಲ್ಲಿ ನಡೆದ ಸಂಘದ 32ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ರಾಜ್ಯಮಟ್ಟದ ಮಹಿಳಾ ಸಮಾವೇಶ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಸಚಿವರು ಮಾತನಾಡಿದರು.

ನದಾಫ್/ಪಿಂಜಾರ್ ಸಮುದಾಯ ಬಾಂಧವರು ಮುಗ್ಧರು. ಹಳ್ಳಿಗಳಲ್ಲಿಯೇ ಹೆಚ್ಚಾಗಿ ಇರುವ ಜನ. ಆದರೂ ಶಿಕ್ಷಣದಲ್ಲಿ ಮೀಸಲಾತಿ, ನಿಗಮ ಮಂಡಳಿ ಸ್ಥಾಪನೆಯಾಗದಿರುವುದಕ್ಕೆ ಹೋರಾಟದ ಕೊರತೆಯೇ ಕಾರಣ. ನದಾಫ್ ಮತ್ತು ಪಿಂಜಾರ್ ಸಮುದಾಯವು ಶಿಕ್ಷಣಕ್ಕೆ ಆದ್ಯತೆ ಕೊಟ್ಟಿಲ್ಲ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನಂತರ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದಲ್ಲಿ ನದಾಫ್/ಪಿಂಜಾರ್ ಸಹ ಒಂದಾಗಿದೆ. ರಾಜ್ಯ ಸರಕಾರ ಬಡವರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದು ಶಿಕ್ಷಣಕ್ಕೆ ಆದ್ಯತೆ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಮುಸ್ಲಿಂ ಸಮುದಾಯಗಳನ್ನು ಬೇರೆ ಬೇರೆಯಾಗಿ ಭಾವಿಸಿಲ್ಲ. ಆದರೆ ಕೆಲ ಸೌಲಭ್ಯಗಳಿಗಾಗಿ ನದಾಫ್/ಪಿಂಜಾರ್ ಸಮುದಾಯ ಸಮಾವೇಶದ ಮೂಲಕ ಧ್ವನಿ ಎತ್ತಿದೆ. ಆ ಎಲ್ಲ ಬೇಡಿಕೆಗಳನ್ನು ಸಚಿವ ಎಚ್.ಕೆ. ಪಾಟೀಲರು ಸರಕಾರದ ಮೂಲಕ ಈಡೇರಿಸಲಿದ್ದಾರೆ ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಡಿ. ನದಾಫ್ ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಜ್ಯದಲ್ಲಿ ಸುಮಾರು ೩೦ ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್-ಪಿಂಜಾರ್ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದರೂ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ, ನಾವೂ ಒಳಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಒಳಮೀಸಲಾತಿಯನ್ನು ಜಾತಿ ಜನಗಣತಿ ಆಧಾರದಲ್ಲಿಯೇ ಕೊಡಲಿ. ಒಟ್ಟಿನಲ್ಲಿ ನಮಗೂ ಅಲ್ಪ ಪ್ರಮಾಣದ ಮೀಸಲಾತಿ ಸಿಗುವಂತಾಗಲಿ ಎಂದರು.

ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲಸಾಬ ಅಧ್ಯಕ್ಷತೆ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಸಂಘದ ಜಿಲ್ಲಾಧ್ಯಕ್ಷ ರಬ್ಬಾನಿ ಹುಲಕೋಟಿ ಮುಂತಾದವರು ಉಪಸ್ಥಿತರಿದ್ದರು.

ತಾಂತ್ರಿಕ ಕಾರಣದಿಂದ ಅನುದಾನ ಸರಕಾರಕ್ಕೆ ಹೋಗಿದ್ದು ಮತ್ತೆ ಸಮಾಜಕ್ಕೆ ನೀಡಲಾಗುವುದು: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಬರುವ ಡಿಸೆಂಬರ್ 5ರಂದು ಚಳಿಗಾಲದ ಅಧಿವೇಶನ ನಡೆಯಲಿದೆ. ಆ ಸಂದರ್ಭದಲ್ಲಿ ನದಾಫ್/ಪಿಂಜಾರ್ ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಮಾಜದ 15 ಜನ ಪ್ರಮುಖರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಚರ್ಚಿಸಿ, ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಇಲ್ಲಿನ ಆಂಗ್ಲೋ ಉರ್ದು ಶಾಲೆ ಮೈದಾನದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ 32ನೇ ಸಂಸ್ಥಾಪನಾ ದಿನಾಚರಣೆ, ರಾಜ್ಯಮಟ್ಟದ ಮಹಿಳಾ ಸಮಾವೇಶ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಗದಗ-ಬೆಟಗೇರಿಯಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1 ಕೋಟಿ ರೂ. ಅನುದಾನ ಒದಗಿಸಲಾಗುವುದು. ವಿಜಯನಗರ ಜಿಲ್ಲೆಯಲ್ಲಿ ನದಾಫ್/ಪಿಂಜಾರ್ ಸಮುದಾಯ ಭವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ 75 ಲಕ್ಷ ರೂ. ಬಿಡುಗಡೆಯಾಗಿತ್ತು. ತಾಂತ್ರಿಕ ಕಾರಣದಿಂದ ಅನುದಾನ ಮರಳಿ ಸರಕಾರಕ್ಕೆ ಹೋಗಿದ್ದು, ಬರುವ ಡಿಸೆಂಬರ್ ಒಳಗಾಗಿ ಆ ಅನುದಾನವನ್ನು ಮತ್ತೆ ಸಮಾಜಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.

ರೋಣ ಶಾಸಕ ಜಿ.ಎಸ್. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಸಂಘದ ರಾಜ್ಯಾಧ್ಯಕ್ಷ ಎಚ್. ಜಲೀಲಸಾಬ, ಹಿರಿಯ ಸಾಹಿತಿ ಡಾ. ರಜಿಯಾ ಬೇಗಂ, ಸಂಘದ ಜಿಲ್ಲಾಧ್ಯಕ್ಷ ರಬ್ಬಾನಿ ಹುಲಕೋಟಿ ಮುಂತಾದವರು ಉಪಸ್ಥಿತರಿದ್ದರು.

ಲಕ್ಕುಂಡಿಯ ತಿಪ್ಪೆಯಲ್ಲಿಯೂ ಸಹ ಐತಿಹಾಸಿಕ ಶಿಲೆಗಳು ದೊರೆಯುತ್ತವೆ: ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳು ನಡೆಯಲಿ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಕ್ಕುಂಡಿಯ ತಿಪ್ಪೆಯಲ್ಲಿಯೂ ಸಹ ಐತಿಹಾಸಿಕ ಶಿಲೆಗಳು ದೊರೆಯುತ್ತವೆ. ಪ್ರತಿಯೊಬ್ಬರ ಮನೆಯಲ್ಲಿ ಒಂದಿಲ್ಲೊಂದು ಐತಿಹಾಸಿಕ ವಸ್ತು ಸಿಗುತ್ತದೆ. ಲಕ್ಕುಂಡಿಯಲ್ಲಿ ಹೊಸ ದೇವಾಸ್ಥಾನ, ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಬೇಕಾಗಿಲ್ಲ. ಈಗಾಗಲೇ ಇರುವ ಐತಿಹಾಸಿಕ ವಸ್ತುಗಳನ್ನೇ ಸರಿಯಾಗಿ ಹೊಂದಿಸಿ, ಸ್ವಚ್ಛಗೊಳಿಸಿ ಇಡುವ ಕಾರ್ಯ ಆಗಬೇಕಿದೆ ಎಂದರು.

ಐತಿಹಾಸಿಕ ವಸ್ತುವಿನ ಬಗ್ಗೆ ಅರಿವಿಲ್ಲದೆ ತಮ್ಮ ಹಿತ್ತಿಲೊಳಗೆ ಹುಗಿದು ಬಿದ್ದಿರುವ ಶಿಲೆಗಳು, ಗೋಡೆಗಳ ಮೇಲಿರುವ ಶಾಸನಗಳು, ನಾಣ್ಯ, ಮನೆಯ ಕೆಳಗಿರುವ ಗುಡಿ ಅಥವಾ ಬಾವಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಂದಾಗ ಗ್ರಾಮದ ಮೇಲಿನ ಅಭಿಮಾನದಿಂದ, ತ್ಯಾಗ ಮನೋಭಾವದಿಂದ ಸ್ವಯಂ ಪ್ರೇರಣೆಯಿಂದ ಎಲ್ಲರೂ ಸಹಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಈ ವಿಶೇಷ ಅಭಿಯಾನ ಎಲ್ಲಾ ತಂಡಗಳು ಗುರಿ ಹೊಂದಿ ಕೆಲಸ ಮಾಡಿ ಕನಿಷ್ಟ ೩೦-೪೦ ಪ್ರಾಚ್ಯಾವಶೇಷ ವಸ್ತುಗಳನ್ನು ಸಂಗ್ರಹ ಮಾಡುವ ಕೆಲಸ ಆಗಬೇಕು. ಸಂಗ್ರಹವಾದ ಎಲ್ಲಾ ಐತಿಹಾಸಿಕ ವಸ್ತುಗಳನ್ನು ಸುರಕ್ಷಿತವಾಗಿ ಒಂದೆಡೆ ಇರಿಸಬೇಕು. ಮುಂದೆ ನಿಯಮಾನುಸಾರವಾಗಿ ಆಯುಕ್ತರು ಕಾರ್ಯಪ್ರವೃತ್ತರಾಗಬೇಕು. ಐತಿಹಾಸಿಕ ಶಿಲೆ, ಶಾಸನ, ನಾಣ್ಯ ನೀಡಿದವರಿಗೆ ಪತ್ರ ನೀಡಲಾಗುತ್ತದೆ. ಪ್ರಾಚ್ಯ ಅವಶೇಷಗಳಲ್ಲಿ ಅತೀ ಸುಂದರವಾದವುಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಗುತ್ತದೆ  ಎಂದು ಸಚಿವರು ತಿಳಿಸಿದರು.

ಪ್ರವಾಸೋದ್ಯಮ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಮನೆ ಮನೆಗೆ ಪಾಲಿಕೆ ತೆಗೆದುಕೊಂಡು ಹೋಗುವ ಮುನ್ನ ಎನ್‌ಸಿಸಿ, ಸ್ತ್ರೀ ಶಕ್ತಿ ಗುಂಪು, ಸ್ವಯಂ ಸೇವಕರಿಗೆ ಐತಿಹಾಸಿಕ ವಸ್ತುಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಲಕ್ಕುಂಡಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷ ಪೂಜಾರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಸಿಇಓ ಭರತ್ ಎಸ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಶರಣು ಗೋಗೇರಿ, ಎಸಿ ಗಂಗಪ್ಪ, ವೀರಯ್ಯಸ್ವಾಮಿ, ಅದ ಕಟ್ಟಿಮನಿ ಮುಂತಾದವರಿದ್ದರು.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್: ನಿಮ್ಮ ಏರಿಯಾ ಯಾವುದು!?

0

ಬೆಂಗಳೂರು:- ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಅದರಂತೆ ನಗರದ ವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಸೆಂಚುರಿ ಲೇಔಟ್, ಅನಂತಪುರ ಗೇಟ್, ಏರ್‌ಫೋರ್ಸ್, ಮಾರಸಂದ್ರ. ಶ್ರೀರಾಮನಹಳ್ಳಿ, ನೆಲ್ಲಕುಂಟೆ, ಹನಿಯೂರು, ಚಲ್ಲಹಳ್ಳಿ, ಕರ್ಲಾಪುರ, ರಾಮ್ಮಿ ಉತ್ತರ-1. ಪ್ರೆಸ್ಟೀಜ್ ನಗರ, ಮಾರುತಿ ರಾಯಲ್ ಗಾರ್, ಕೋಗಿಲು, ಪೂಜಾ ಮಹಾಶಂ ಲೇಔಟ್, ಸಪ್ತಗಿರಿ ಲೇಔಟ್​, ಪ್ರಕೃತಿ ನಗರ, ಶ್ರೀನಿವಾಸಪುರ, ಅಯ್ಯಪ್ಪ ಎನ್​ ಕ್ಲೇವ್​, ಎನ್​ಎನ್​ ಹಳ್ಳಿ ಸುತ್ತಮುತ್ತಲಿನ ಪ್ರದೇಶಗಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿದೆ. ವಿದ್ಯುತ್​ ಸಮಸ್ಯೆಯನ್ನು ಸುಧಾರಿಸುವ ಮತ್ತು ಈ ಪ್ರದೇಶಗಳಲ್ಲಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಿರ್ವಹಣೆ ಕೆಲಸ ಅತ್ಯಗತ್ಯವಾಗಿದೆ. ಜನರು ಅಗತ್ಯ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಕೊಂಡು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಈ ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ.

ಹೆಣ್ಣು ಮಕ್ಕಳ ಉಳಿವು ಮತ್ತು ರಕ್ಷಣೆಗೆ ಮೊದಲ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಮುಂದಾಗಬೇಕು: ತಹಸೀಲ್ದಾರ ಶ್ರೀಶೈಲ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇವರ ವತಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ನರಗುಂದದ ಸರಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಜಾಗೃತಿ ಜಾಥಾ ವಾಹನಕ್ಕೆ ತಹಸೀಲ್ದಾರ ಶ್ರೀಶೈಲ ತಳವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಶಿಕ್ಷಣ, ಲಿಂಗಾನುಪಾತ ಸುಧಾರಣೆಗೆ ಸರ್ಕಾರ ಬಹುಮುಖ್ಯವಾದ ಹೆಣ್ಣುಮಗಳನ್ನು ರಕ್ಷಿಸಿ ಹೆಣ್ಣು ಮಗಳನ್ನು ಓದಿಸಿ ಎಂಬ ಯೋಜನೆ ಜಾರಿ ಮಾಡಿದ್ದು, ನಾಗರಿಕ ಸಮಾಜದಲ್ಲಿನ ನಾವು ಹೆಣ್ಣು ಮಕ್ಕಳ ಉಳಿವು ಮತ್ತು ರಕ್ಷಣೆಗೆ ಮೊದಲ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕಮಲಾ ಹುಲಕೋಟಿ, ಮೇಲ್ವಿಚಾರಕಿಯರಾದ ಶಕುಂತಲಾ ಗಣಿ, ಪರಿಮಳ ಹೂಗಾರ, ಕಾವೇರಿ ಅತ್ತಿಮರದ, ಮಂಜುನಾಥ ಗುಗ್ಗರಿ, ಪ್ರಶಾಂತ ಹಳೇಮನಿ, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರು ಭಾಗವಹಿಸಿದ್ದರು.

ಡಿಜಿಟಲ್ ಕ್ರಾಂತಿಯಿಂದಾಗಿ ಪತ್ರಿಕೋದ್ಯಮದ ಸ್ವರೂಪ ಸಂಪೂರ್ಣವಾಗಿ ಬದಲಾಗಿದೆ: ಪ್ರೊ. ಎಚ್.ಕೆ. ಯಡಹಳ್ಳಿ

0

ವಿಜಯಸಾಕ್ಷಿ ಸುದ್ದಿ, ವಿಜಯಪುರ: ಡಿಜಿಟಲ್ ಕ್ರಾಂತಿಯಿಂದಾಗಿ ಪತ್ರಿಕೋದ್ಯಮದ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದು,  ಪತ್ರಕರ್ತರು ಕೇವಲ ಪತ್ರಕರ್ತರಾಗಿ ಉಳಿದಿಲ್ಲ. ಹೀಗಾಗಿ ಭವಿಷ್ಯದಲ್ಲಿ ಪತ್ರಕರ್ತರಾಗುವವರು ಹಲವು ಕೌಶಲಗಳನ್ನು ಕರಗತ ಮಾಡಿಕೊಳ್ಳುವುದು ಅಗತ್ಯವಾಗಿದೆ. ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಂಡು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ನಗರದ ಸಿಕ್ಯಾಬ್ ಎ.ಆರ್.ಎಸ್.ಐ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಕೆ. ಯಡಹಳ್ಳಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಪತ್ರಿಕಾ ದಿನಾಚರಣೆ ಪ್ರಯುಕ್ತ ‘ಬದಲಾಗುತ್ತಿರುವ ಪತ್ರಿಕೋದ್ಯಮದ ಸ್ವರೂಪ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ನಡೆದಿದ್ದು, ನಿಜವಾದ ಪ್ರಜಾಪ್ರಭುತ್ವದ ಸಾಧನೆಗೆ ದಾರಿ ಮಾಡಿಕೊಟ್ಟಿವೆ. ಪತ್ರಿಕೆಗಳಲ್ಲಿ ಫ್ಯಾಕ್ಟ್ ಚೆಕಿಂಗ್ ಎಂಬ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಮಾಧ್ಯಮ ಕ್ಷೇತ್ರ ಇನ್ನೂ ಹೆಚ್ಚು ಜನಪ್ರಿಯತೆಯನ್ನು ಪಡೆದು ಜನರ ವಿಶ್ವಾಸವನ್ನು ಗಳಿಸಿಕೊಂಡಿದೆ. ಇಂದು ಪತ್ರಿಕೆಗಳು ಹೆಚ್ಚು ಪ್ರಜಾಪ್ರಭುತ್ವ ಸಾಧಿಸಿದ್ದು, ಪತ್ರಿಕೆಗಳು ಜನರ ಸಮಸ್ಯೆಯನ್ನು ಬಗೆಹರಿಸುವ ಕಾರ್ಯವನ್ನು ಮಾಡಬೇಕಾಗಿದೆೆ. ಮುದ್ರಣ ಮಾಧ್ಯಮದಲ್ಲಿ ಭಾಷಾ ಶುದ್ಧತೆ, ಭಾಷಾ ಸ್ಪಷ್ಟತೆ ಹೊಂದಿರಬೇಕು. ಆದ್ದರಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ನೀವು ಪ್ರತಿ ದಿನ ಒಂದು ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆಯನ್ನು ಓದಬೇಕು ಎಂದು ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಪತ್ರಿಕೋದ್ಯಮ ಕಾಲಘಟ್ಟದಲ್ಲಿ ಬದಲಾವಣೆಯನ್ನು ಕಾಣುತ್ತಾ ಬಂದಿದೆ. ಅದಕ್ಕೆ ಮುಖ್ಯ ಕಾರಣ ತಂತ್ರಜ್ಞಾನ. ಕಾರ್ಪೊರೇಟ್ ಸಂಸ್ಥೆಗಳು ಮಾಧ್ಯಮಗಳನ್ನು ಖರೀದಿ ಮಾಡುವುದರಿಂದ ಈ ಮಾಧ್ಯಮ ಕ್ಷೇತ್ರ ಏಕ ಸ್ವ್ವಾಮ್ಯತೆಯ ಕಡೆ ಸಾಗುತ್ತಿದೆ. ಇದು ಮಾಧ್ಯಮ ಕ್ಷೇತ್ರಕ್ಕೆ ಧಕ್ಕೆಯನ್ನುಂಟುಮಾಡುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮಾಧ್ಯಮ ಸಶಕ್ತವಾಗಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವದ ಉಳಿಯುವಿಕೆ ಸಾಧ್ಯ ಎಂದರು.

ಸಹಾಯಕ ಪ್ರಾಧ್ಯಾಪಕಿ ಡಾ.ತಮೀನಾ ಕೋಲಾರ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಫಿಲೋಮಿನಾ ಅತಿಥಿಗಳ ಪರಿಚಯಿಸಿದರು. ಸುಷ್ಮಾ ಪವಾರ ನಿರೂಪಿಸಿದರು. ಪವಿತ್ರ ಕಂಬಾರ ವಂದಿಸಿದರು.

ಕ್ಷುಲ್ಲಕ ವಿಚಾರಕ್ಕೆ ಕಿರಿಕ್: ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ಥಳಿಸಿದ ಯುವಕರ ಗುಂಪು!

0

ಗದಗ:- ಚಿಲ್ಲರೆ ಇಲ್ಲ ಎಂದ ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ಪುಂಡ ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗದಲ್ಲಿ ಜರುಗಿದೆ.

ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ಘಟನೆ ಜರುಗಿದ್ದು, ಪೆಟ್ರೋಲ್ ಹಾಕಿಸಲು ಬಂಕ್ ಗೆ ಬಂದಿದ್ದ ವೇಳೆ ಗಲಾಟೆ ನಡೆದಿದೆ. ಏಕಾಏಕಿ ಗುಂಪಾಗಿ ಬಂದು ಪುಡಿ ರೌಡಿಗಳಂತೆ ಬಂಕ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

ಯುವಕರ ಅಟ್ಟಹಾಸದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆಗೆ ಒಳಗಾದ ಬಂಕ್ ಸಿಬ್ಬಂದಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ರಾಜಕಾರಣಿಯಂತೆ ಸರ್ಕಾರಿ ಅಧಿಕಾರಿಯ ಬರ್ತಡೇ ಸೆಲೆಬ್ರೇಷನ್! ಗೃಹ ಸಚಿವರ ತವರಲ್ಲೇ ಇದೆಂಥಾ ಅಶಿಸ್ತು!

0

ತುಮಕೂರು:- ಸರ್ಕಾರಿ ಅಧಿಕಾರಿ ಓರ್ವ ರಾಜಕಾರಣಿಯಂತೆ ಆಡಂಬರದ ಜನ್ಮದಿನ ಆಚರಿಸಿಕೊಂಡ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಜರುಗಿದೆ.

ಗೃಹಸಚಿವ ಡಾ.ಜಿ.ಪರಮೇಶ್ವರ್ ರವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ನಾಗಣ್ಣ ಅವರು, ಸರ್ಕಾರಿ ಅಧಿಕಾರಿಯಾಗಿರುವಾಗಲೇ ರಾಜಕಾರಣಿಯಂತೆ ಪೋಸ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರರ ಶಿರಾ ಕ್ಷೇತ್ರದಲ್ಲಿ ಬರ್ತಡೇ ಸೆಲಬ್ರೇಷನ್ ಜೋರಾಗಿ ನಡೆದಿದ್ದು, ಶಿರಾ ನಗರದ ತುಂಬಾ ಡಾ.ಕೆ.ನಾಗಣ್ಣ ಹುಟ್ಟುಹಬ್ಬದ ಫ್ಲಕ್ಸ್ ಗಳು ರಾರಾಜಿಸಿದೆ.

ಇನ್ನೂ ವಿಶೇಷ ಕರ್ತವ್ಯಾಧಿಕಾರಿಯು, ರಾಜಕಾರಣಿಗಳಂತೆ ಆಡಂಬರದ ಜನ್ಮದಿನಾಚರಣೆ ಘೀಳಿಗೆ ಬಿದ್ರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಿರಾದ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಲು ನಾಗಣ್ಣ ಹೊರಟಿದ್ದು, ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಸರ್ಕಾರಿ ಫ್ಲೆಕ್ಸ್ ಹಾಕಿಸಿಕೊಂಡಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಪಶು ಇಲಾಖೆಯಲ್ಲಿ ನಾಗಣ್ಣ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗೆ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಹುಟ್ಟು ಹಬ್ಬದ ಫ್ಲೆಕ್ಸ್ ಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆ ಬಳಕೆ ಮಾಡಿದ್ದಾರೆ.

ಇನ್ನೂ ಸರ್ಕಾರಿ ಅಧಿಕಾರಿಗಳಿಗೆ ಬೆಂಬಲ ಸೂಚಿಸುವ ಫ್ಲೆಕ್ಸ್ ಬ್ಯಾನರ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಷಿದ್ಧ ಮಾಡಲಾಗಿದೆ. ಆದರೂ ಇದಕ್ಕೆ ಡೋಂಟ್ ಕೇರ್ ಎಂದಿರುವ ಅಧಿಕಾರಿ ಆಶಿಸ್ತು ನಡೆ ತೋರಿದ್ದಾರೆ. ಅಭಿಮಾನಿಗಳ ಹೆಸರಲ್ಲಿ ತಾವೇ ಫ್ಲೆಕ್ಸ್ ವೆಚ್ಚ ಬರಿಸಿ ಹಾಕಿಸಿಕೊಂಡ ಆರೋಪ ಕೇಳಿ ಬಂದಿದೆ.

ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಘಟನೆ ಸಂಬಂಧ ಮಧುಗಿರಿ ಮೂಲದ ಆರ್‌ಟಿ‌ಐ ಕಾರ್ಯಕರ್ತ ಶಿವಣ್ಣ ಪತ್ರದ ಮೂಲಕ ರಾಜ್ಯಪಾಲರು, ಸಿಎಂ, ಡಿಸಿಎಂ ಹಾಗೂ ಗೃಹಸಚಿವರಿಗೆ ದೂರು ನೀಡಿದ್ದಾರೆ.

ಅಷ್ಟೇ ಅಲ್ಲದೇ ಸರ್ಕಾರದ ಮುಖ್ಯಕಾರ್ಯದರ್ಶಿ, ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗೆ ದೂರಿನ ಪ್ರತಿ ರವಾನೆ ಮಾಡಿದ್ದಾರೆ. ಹುಟ್ಟು ಹಬ್ಬ ಆಚರಣೆ ಸಂಭ್ರಮಾಚರಣೆಗಳು ಓಕೆ, ರಾಜಕಾರಣಿಗಳ ಪೋಟೋ ಬಳಸಿ ಫ್ಲೆಕ್ಸ್ ಹಾಕಿಸಿ ಕೊಂಡಿದ್ದು ಯಾಕೆ..? ಎಂಬ ಪ್ರಶ್ನೆ ಎಲ್ಲೆಡೆ ಎದ್ದಿದೆ. ಕಳೆದ ನ.9 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಬೆಂಗಳೂರು: 18 ವರ್ಷದ ಯುವತಿ ನೇಣಿಗೆ ಶರಣು: ಪೊಲೀಸರಿಂದ ತನಿಖೆ ಚುರುಕು!

0

ಬೆಂಗಳೂರು:- 18 ವರ್ಷದ ಯುವತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

ಭೀಮವ್ವ ಮೃತ ಯುವತಿ ಎನ್ನಲಾಗಿದೆ. ನಗರದ ಕುರುಬರಹಳ್ಳಿಯ 19 ನೇ ಮೈನ್ ನ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾರೆ. ಭಾಗ್ಯಮ್ಮ , ಮಲ್ಲಣ್ಣ ದಂಪತಿಯ ಪುತ್ರಿ ಯಾಗಿರೊ ಭೀಮವ್ವ, ಮೂಲತಃ ಯಾದಗಿರಿ ಬಳಿಯ ಕ್ಯಾತನಾಳದವರಾಗಿದ್ದಾರೆ.

ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೋಲಿಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಯುವತಿ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡುತ್ತಿದ್ದಳು. ಎಂದಿನಂತೆ ತನ್ನ ತಾಯಿ ಜೊತೆ ಕೆಲಸ ಹೋಗಿ ಬಂದು ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾಳೆ.

ಭಾಗ್ಯಮ್ಮ- ಮಲ್ಲಣ್ಣ ದಂಪತಿಗೆ ಒಟ್ಟು ನಾಲ್ವರು ಹೆಣ್ಣು ಮಕ್ಕಳು. ಈ ಪೈಕಿ ಭೀಮವ್ವ ಹಿರಿಯ ಮಗಳಾಗಿದ್ದಳು. ಭೀಮವ್ವಳ ಕುಟುಂಬ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಭೀಮವ್ವ ಸಹ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಗಾರೆ ಕೆಲಸಕ್ಕೆ ಹೋಗುತ್ತಿದ್ದಳು. ಎಂದಿನಂತೆ ಇಂದು ಬೆಳಗ್ಗೆ ತಂದೆ-ತಾಯಿ ಜೊತೆ ಕೆಲಸಕ್ಕೆ ಹೋಗಿದ್ದ ಭೀಮವ್ವ, ಮಧ್ಯಾಹ್ನ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ.

ಗಾರೇ ಕೆಲಸ ಮುಗಿಸಿಕೊಂಡು ತಾಯಿ ಜೊತೆಗೆ ಭೀಮವ್ವ ಮನೆಗೆ ಬಂದಿದ್ದಾಳೆ. ಬಳಿಕ ತಾಯಿ ಭಾಗ್ಯಮ್ಮ ಬೇರೆಯವರ ಮನೆ ಕೆಲಸಕ್ಕೆಂದು ಹೋಗಿದ್ದರೆ, ಮೂವರು ತಂಗಿಯರು ಮನೆ ಹೊರಗಡೆ ಆಟವಾಡಲು ಹೋಗಿದ್ದರು. ಆಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಭೀಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀಲೇಔಟ್ ಪೊಲೀಸರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

error: Content is protected !!