Home Blog Page 212

ಸಾನಿಯಾ ಚಾಂದೋಕ್ ಜೊತೆ ಹಸೆಮಣೆ ಏರಲು ಸಜ್ಜಾದ ಅರ್ಜುನ್ ತೆಂಡೂಲ್ಕರ್!

0

ಮುಂಬೈ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಶೀಘ್ರದಲ್ಲೇ ತಮ್ಮ ದೀರ್ಘಕಾಲದ ಸಂಗಾತಿ ಸಾನಿಯಾ ಚಾಂದೋಕ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಜೋಡಿ ಮಾರ್ಚ್ 5, 2026 ರಲ್ಲಿ ವಿವಾಹವನ್ನು ಮಾಡಲಿದ್ದಾರೆ. ಮಾರ್ಚ್ 3 ರಿಂದ ವಿವಾಹಪೂರ್ವ ಸಮಾರಂಭಗಳು ಪ್ರಾರಂಭವಾಗಲಿವೆ.

ಅರ್ಜುನ್ ಮತ್ತು ಸಾನಿಯಾ ನಿಶ್ಚಿತಾರ್ಥ ಹಿಂದಿನ ಆಗಸ್ಟ್ನಲ್ಲಿ ಬಹಳ ಖಾಸಗಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲ ಆಪ್ತರೇ ಪಾಲ್ಗೊಂಡಿದ್ದರು. ನಂತರ ಸಚಿನ್ ತೆಂಡೂಲ್ಕರ್ ನಿಶ್ಚಿತಾರ್ಥದ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರು.

ಸಾನಿಯಾ ಮುಂಬೈ ಮೂಲದ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದು, ತೆಂಡೂಲ್ಕರ್ ಕುಟುಂಬದೊಂದಿಗೆ ಹತ್ತಿರ ಸಂಬಂಧ ಹೊಂದಿದ್ದಾರೆ. ವಿವಾಹ ಆಚರಣೆಗಳು ಮುಂಬೈನಲ್ಲಿ ಖಾಸಗಿ ವಾತಾವರಣದಲ್ಲಿ ನಡೆಯಲಿದ್ದು, ಕುಟುಂಬ, ಆಪ್ತ ಸ್ನೇಹಿತರು ಹಾಗೂ ಕ್ರಿಕೆಟ್ ಜಗತ್ತಿನ ಆಯ್ದ ಕೆಲವು ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಇತ್ತೀಚೆಗೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನಿಂದ ಲಕ್ನೋ ಸೂಪರ್ ಜೈಂಟ್ಸ್ಗೆ ವರ್ಗಾಯಿಸಲಾದ ಅರ್ಜುನ್, ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲಿಯೂ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆ. ಪ್ರಸ್ತುತ, ಗೋವಾ ತಂಡದ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. 2026 ವರ್ಷ ಅರ್ಜುನ್ಗೆ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಸ್ಮರಣೀಯವಾಗಲಿರುವುದು ನಿರೀಕ್ಷಿಸಲಾಗಿದೆ.

ಬೆಂಗಳೂರಿನಲ್ಲಿ ತಾಯಿ ಮೇಲಿನ ಸಿಟ್ಟಿಗೆ 6 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ..!

0

ಬೆಂಗಳೂರು: ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಪಶ್ಚಿಮ ಬಂಗಾಳ ಮೂಲದ ಷಹನಾಜ್ ಖಾತುಂ (6) ಕೊಲೆಯಾದ ಬಾಲಕಿಯಾಗಿದ್ದು, ಪ್ಲಾಸ್ಟಿಕ್ ರೋಪ್ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಲ್ಲೂರುಹಳ್ಳಿ ಸಮೀಪದ ದೇವಸ್ಥಾನದ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯ ಪೋಷಕರು ನಲ್ಲೂರುಹಳ್ಳಿ ಬಳಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಬಾಲಕಿಯ ಕುಟುಂಬದ ಸಮೀಪದಲ್ಲೇ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮತ್ತೊಂದು ಕುಟುಂಬದ ವ್ಯಕ್ತಿಯೊಬ್ಬರ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಾಲಕಿಯ ತಾಯಿ ಹಾಗೂ ಆ ಮತ್ತೊಂದು ಕುಟುಂಬದ ನಡುವೆ ಜಗಳ ನಡೆದಿತ್ತು. ಈ ನಡುವೆ ಜನವರಿ 5ರಂದು ಬೆಳಿಗ್ಗೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕಿ ಅಕಸ್ಮಾತ್ತಾಗಿ ನಾಪತ್ತೆಯಾಗಿದ್ದಳು. ಅಕ್ಕಪಕ್ಕದ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಪೋಷಕರು ಜನವರಿ 6ರಂದು ಮಧ್ಯಾಹ್ನ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ತಕ್ಷಣ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದು, ಅದೇ ದಿನ ತಡರಾತ್ರಿ ನಲ್ಲೂರುಹಳ್ಳಿಯ ದೇವಸ್ಥಾನದ ರಸ್ತೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಪ್ಲಾಸ್ಟಿಕ್ ರೋಪ್ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ದೃಢಪಟ್ಟಿದ್ದು, ಮೃತದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ.ಇರೋದು ಹೆಬ್ಬೆಟ್ಟು ಗೃಹ ಸಚಿವರಾ?: ಹೆಚ್.ಡಿ. ಕುಮಾರಸ್ವಾಮಿ ತೀಕ್ಷ್ಣ ಪ್ರಶ್ನೆ

0

ನವದೆಹಲಿ: ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಡಿಸಿಎಂ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತಾಡಿದ ಕೇಂದ್ರ ಸಚಿವರು; ಡಿಸಿಎಂ ಅವರು ಮಂಗಳವಾರ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ? ರಾಜ್ಯದಲ್ಲಿ ಇರುವ ಗೃಹ ಸಚಿವರು ಹೆಬ್ಬೆಟ್ಟು ಸಚಿವರಾ? ಇಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ನನಗೆ ಹಲವು ಮಾಹಿತಿಗಳು, ನೈಜ ಘಟನೆಗಳ ಬಗ್ಗೆ ಮಾಹಿತಿ‌ಕೊಡುವವರು ಇದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲಿಸಿ ಆ ಬಳಿಕ ನಾನು ಮಾಧ್ಯಮಗಳಿಗೆ ವಿವರಿಸಿದ್ದೇನೆ. ಜನತೆಗೆ ಸತ್ಯ ತಿಳಿಯಬೇಕಲ್ಲವೇ? ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿಸಿಎಂ ಅವರು ಯಾವ ಅಧಿಕಾರದ ಮೇಲೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ? ಗೃಹ ಇಲಾಖೆಯಲ್ಲಿ ಇವರ ಹಸ್ತಕ್ಷೇಪ ಯಾಕೆ? ಡಿಸಿಎಂ ಎಂದರೆ ಅವರು ಮಂತ್ರಿ ಅಷ್ಟೇ. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಗೆ ಅಧಿಕಾರಿಗಳು ಯಾವ ಮಾಹಿತಿ ಕೊಡುತ್ತಾರೆ? ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಘಟನೆಗೆ ಕಾರಣರಾದ ಶಾಸಕರ ವಿರುದ್ದವೇ ಸತ್ಯಶೋಧನೆ ಸಮಿತಿಯ ಮುಂದೆ ದೂರು ನೀಡಿದ್ದಾರೆ. ಹಾಗಾದರೆ ನಿಮ್ಮ ತನಿಖೆಯ ಹಣೆಬರಹ ಏನು ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ:

ಬಳ್ಳಾರಿ ನಗರದಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ? ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟು ಹಾಕಿದ್ದು ಯಾಕೆ? ಕುಟುಂಬದವರಿಗೆ ಅಂತಿಮ ವಿಧಿ ವಿಧಾನ ನಡೆಸುವುದಕ್ಕೆ ಅವಕಾಶವನ್ನೂ ನೀಡದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟಿದ್ದು ಯಾಕೆ? ಇದಕ್ಕೆಲ್ಲಾ ಸರ್ಕಾರ ಉತ್ತರ ಕೊಡಬೇಕಲ್ಲವೇ? ಇಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಸತ್ಯಶೋಧನ ಸಮಿತಿ ಸತ್ಯ ಹೇಳಲಿ:

ಬಳ್ಳಾರಿಯಲ್ಲಿ ನಡೆದದ್ದು ಅಹಿತರ ಘಟನೆ, ಸಾವು ಪ್ರಕರಣ ಎಲ್ಲರಿಗೂ ನೋವು ತರುತ್ತದೆ. ಕಳೆದ ಒಂದು ವಾರದಿಂದ ಹಲವು ನಾಯಕರು ಬಳ್ಳಾರಿಗೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಸತ್ಯಶೋಧನೆ ಮಾಡುತ್ತೇವೆ ಎಂದು ಹೋಗಿದ್ದರು! ಅಲ್ಲಿ ಅವರೇನು ಸತ್ಯ ಶೋಧನೆ ಮಾಡಿದರು ಎಂಬುದನ್ನು ಜನರ ಮುಂದೆ ಹೇಳಲಿ. ಯಾಕೆಂದರೆ ಕಾಂಗ್ರೆಸ್ಸಿಗರು ಸತ್ಯ ಬಿಟ್ಟು ಬೇರೇನು ಹೇಳುವುದಿಲ್ಲ. ಹಾಗಿದ್ದ ಮೇಲೆ ಈ ಸಮಿತಿ ಸತ್ಯವನ್ನೇ ಹೇಳಲಿ ಎಂದು ಸಚಿವ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

ನನ್ನ ಮತ್ತು ಜನಾರ್ಧನ ರೆಡ್ಡಿ ನಡುವೆ ನಡೆದ ಗಲಾಟೆ ಹಳೇ ಕಥೆ. ಅದನ್ನು ಈಗ ಮುಂದೆ ತಂದು ಅವರು ಏನು ಮಾಡಲು ಸಾಧ್ಯ? ನಾನು ಯಾವುದೋ ರಾಗದ್ವೇಷ ಇಲ್ಲದೇ ಮಾಧ್ಯಮಗಳ ಮುಂದೆ ಸತ್ಯ ಹೇಳಿದ್ದೇನೆ. ಕಾಂಗ್ರೆಸ್ ಜತೆ ಕೂಡ ಸರ್ಕಾರ ಮಾಡಿದ್ದೇನೆ.. ಆಗ ಬಂಡೆ ತರ ನಿಂತಿದ್ದು ಇವರೇ ತಾನೇ. ಎಲ್ಲರೂ ಜೋಡೆತ್ತು ಎಂದರು. ಆಮೇಲೆ ಆಗಿದ್ದು ಏನು? ಬೆನ್ನಿಗೆ ಚೂರಿ ಹಾಕಿ ವಿಶ್ವಾಸ ದ್ರೋಹ ಎಸಗಿದರು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧೀಜಿಗೆ ಅಪಮಾನ ಮಾಡಿದ ಕಾಂಗ್ರೆಸ್: ಗೋವಿಂದ ಕಾರಜೋಳ

0

ಬೆಂಗಳೂರು: ನರೇಗಾದಡಿ ವಿನೂತನ ತಂತ್ರಜ್ಞಾನ, ಪಾರದರ್ಶಕತೆ ಕಾಂಗ್ರೆಸ್ಸಿಗರಿಗೆ ದೊಡ್ಡ ಸವಾಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡಿ ಖಜಾನೆಯಿಂದ ಹಣ ಎತ್ತಿಕೊಂಡು ಹೋಗುತ್ತಿದ್ದರು. ಅದು ತಪ್ಪಲಿದೆ ಎಂದರು. ಅದಕ್ಕಾಗಿ ಹೊಟ್ಟೆ ಉರಿಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ನುಡಿದರು.

ಗಾಂಧಿ ಹೆಸರನ್ನು ಅಳಿಸಿದವರು ಯಾರು ಎಂಬುದಕ್ಕೆ ಉದಾಹರಣೆಗಳನ್ನು ನೀಡಿದ ಅವರು, ರಾಜ್ಯದಲ್ಲಿ 25 ಯೋಜನೆಗಳು ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರಿನಲ್ಲಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 55 ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರಿನಲ್ಲಿ 21 ಮತ್ತು ನೆಹರೂ ಹೆಸರಿನಲ್ಲಿ 22 ಇವೆ ಎಂದು ತಿಳಿಸಿದರು.

ಪ್ರತಿಯೊಂದು ಕ್ರೀಡಾಕೂಟದಲ್ಲೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಹೆಸರು, ಇಂದಿರಾ ಗಾಂಧಿ ಹೆಸರು ಇಟ್ಟುಕೊಂಡು ಇವರು ಜನರಿಗೆ ಮೋಸ ಮಾಡಿ ನಿಜವಾದ ಗಾಂಧಿಯನ್ನು ಮರೆತುಬಿಟ್ಟವರು ಎಂದು ಟೀಕಿಸಿದರು. ಹೊಸದಾಗಿ ನರೇಗಾದಡಿ ಎಲ್ಲ ವರ್ಗದವರಿಗೂ ಅವಕಾಶ ಇದೆ. ಯಾರು ಬೇಕಾದರೂ ಬರಬಹುದು. ಹಾಗೆಂದು ಶ್ರೀಮಂತ ವರ್ಗದವರು ಕೂಲಿ ಕೆಲಸಕ್ಕೆ ಬರುವುದಿಲ್ಲ ಎಂದು ವಿವರಿಸಿದರು.

ಗಾಂಧೀಜಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಡಾ. ಅಂಬೇಡ್ಕರರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರರು ಮೃತಪಟ್ಟಾಗ ಅವರ ಸಮಾಧಿಗೆ ಆರಡಿ ಮೂರಡಿ ಜಾಗವನ್ನೂ ಕೊಡಲಿಲ್ಲ. ಅಪಾರ ಪಾಂಡಿತ್ಯ, ಜ್ಞಾನವಿದ್ದ ಡಾ. ಅಂಬೇಡ್ಕರರಿಗೆ ಅವರ ಜೀವಿತ ಕಾಲದಲ್ಲಿ ಭಾರತರತ್ನ ಕೊಡಲಿಲ್ಲ. ಅವರ ಮನೆ ಮಂದಿಗೆಲ್ಲ ತೆಗೆದುಕೊಂಡರು. ಈ ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರರಿಗೆ ಕೊಡಲಿಲ್ಲ ಎಂಬುದನ್ನು ನಾವು ಹೇಳಬೇಕು ಎಂದರು.

ಈ ಸರ್ಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುತ್ತೇವೆ: ಬಿ.ಎಸ್.ಯಡಿಯೂರಪ್ಪ

0

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ಬಿಜೆಪಿ ವಿಶೇಷವಾದ ಗಮನ ಕೊಡಲಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಗಳ ಜೊತೆ ಮಾತನಾಡಿದ ಅವರು, ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಇವತ್ತಿನಿಂದ ರಾಜ್ಯಾಧ್ಯಕ್ಷರು ಮತ್ತು ಎಲ್ಲ ಪ್ರಮುಖರು ಸೇರಿ ಪ್ರತಿ ಜಿಲ್ಲಾ ಪ್ರಮುಖರ ಸಮಾವೇಶವನ್ನು ಮಾಡುತ್ತಿದ್ದೇವೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಈ ಸರಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ವಿಶೇಷವಾದ ಗಮನ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನ ಮೇಲೆ ಹತ್ಯೆ ಯತ್ನ: ನಾಲ್ವರು ಆರೋಪಿಗಳು ಅರೆಸ್ಟ್

0

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಅವರ ಕಾರು ಚಾಲಕ ಬಸವಂತ ಕಡೋಲ್ಕರ್ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ನಿನ್ನೆ ನಡೆದ ಚಾಕು ಇರಿತ ಘಟನೆ ಸಂಬಂಧ ಶಿವಯ್ಯ ಪೂಜಾರಿ, ನಿತೇಶ್‌ ಬಡಿಗೇರ, ಮೌನಪ್ಪ ಮತ್ತು ಸಂಪತ್ ಎಂಬವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಹಲ್ಲೆಗೊಳಗಾದ ಬಸವಂತ ಅವರ ಸ್ನೇಹಿತ ಮದನ ನೀಡಿದ ದೂರಿನ ಆಧಾರದ ಮೇಲೆ ಕ್ಯಾಂಪ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್‌ ಬೊರಸೆ ಮಾತನಾಡಿ, “ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ. ಹಲ್ಲೆಗೊಳಗಾದ ಬಸವಂತ ಮತ್ತು ಆರೋಪಿಗಳು ಪರಸ್ಪರ ಸ್ನೇಹಿತರಾಗಿದ್ದರು. ಹಲ್ಲೆಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದ ತಿಳಿಯಲಿದೆ” ಎಂದು ತಿಳಿಸಿದ್ದಾರೆ.

ಘಟನೆ ನಡೆದ ಕೇವಲ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿರುವುದು ಪೊಲೀಸ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 

ಮುರಿದು ಬಿದ್ದ ಹಿಪ್ಪರಗಿ ಬ್ಯಾರೇಜ್ʼನ 22ನೇ ಗೇಟ್: ಭಾರಿ ಪ್ರಮಾಣದಲ್ಲಿ ನೀರು ಪೋಲು

0

ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿಯಂತಿರುವ ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್ ಗೇಟ್ ಸಂಖ್ಯೆ 22 ತಾಂತ್ರಿಕ ದೋಷದಿಂದಾಗಿ ಮುರಿದುಬಿದ್ದಿದ್ದು, ಭಾರಿ ಪ್ರಮಾಣದ ನೀರು ನದಿಗೆ ಪೋಲಾಗುತ್ತಿದೆ. ಬ್ಯಾರೇಜ್‌ನಿಂದ ನೀರು ಕೃಷ್ಣಾ ನದಿಯ ಮೂಲಕ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನತ್ತ ಅತೀವೇಗದಲ್ಲಿ ಹರಿಯುತ್ತಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ತಾತ್ಕಾಲಿಕವಾಗಿ ದುರಸ್ತಿ ಸಾಧ್ಯವಾಗದಷ್ಟು ಹಾನಿಗೊಳಗಾಗಿದೆ. ಪರಿಣಾಮ ಸಾವಿರಾರು ಕ್ಯೂಸೆಕ್ ನೀರು ಪೋಲಾಗುವ ಆತಂಕ ಎದುರಾಗಿದೆ.

ಮುಂಗಾರು ಹಂಗಾಮಿನಲ್ಲಿ ಸಂಗ್ರಹಿಸಿದ ನೀರನ್ನು ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಬೇಕಾದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ. ನೀರಿನ ಮಟ್ಟ ಕುಸಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ನದಿ ತೀರದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳಾದ ನಾಗರಾಜ್ ಹಾಗೂ ಪ್ರವೀಣ್ ಹುಣಸಿಕಟ್ಟಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ತಂಡದ ಸಹಕಾರದೊಂದಿಗೆ ತುರ್ತು ಕಾರ್ಯಾಚರಣೆ ನಡೆಸಿ ನೀರು ಪೋಲಾಗುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ.

‘ಬಂಧನ ವೇಳೆ ವಿವಸ್ತ್ರಳಾಗಿರಲಿಲ್ಲ’ – ಬಿಜೆಪಿ ಮಹಿಳಾ ಕಾರ್ಯಕರ್ತೆ ಪ್ರಕರಣದಲ್ಲಿ ಆಯುಕ್ತ ಶಶಿಕುಮಾರ್ ಸ್ಪಷ್ಟನೆ

0

ಹುಬ್ಬಳ್ಳಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯನ್ನು ಪೊಲೀಸರು ಬಟ್ಟೆ ಬಿಚ್ಚಿ ಥಳಿಸಿದ್ದಾರೆ ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕರಣದ ಹಿನ್ನೆಲೆ ಹಾಗೂ ಸತ್ಯಾಸತ್ಯತೆಯನ್ನು ವಿವರಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದಿತ್ತು. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ, “ನಮ್ಮ ವೋಟ್ ಡಿಲೀಟ್ ಮಾಡಿದ್ದಾರೆ” ಎಂದು ಆರೋಪಿಸಿ ಗಲಾಟೆ ನಡೆಸಿದ್ದರು. ಈ ಘಟನೆ ಬಳಿಕ ಬಿಜೆಪಿ–ಕಾಂಗ್ರೆಸ್ ನಡುವೆ ತಿಕ್ಕಾಟ ಮುಂದುವರಿದಿತ್ತು.

ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು. ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಆಯುಕ್ತರ ಪ್ರಕಾರ, ಬಂಧಿತ ಮಹಿಳೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಮಹಿಳೆಯೊಬ್ಬರ ಕತ್ತು ಹಿಸುಕಲು ಯತ್ನಿಸಿದ್ದು ಹಾಗೂ ಖಾಸಗಿ ಅಂಗಕ್ಕೆ ಹೊಡೆದಿರುವ ಕುರಿತು ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ.

ಬಂಧನದ ವೇಳೆ ಮಹಿಳೆ ವಿವಸ್ತ್ರಳಾಗಿರಲಿಲ್ಲ. ಪೊಲೀಸ್ ವ್ಯಾನ್ ಒಳಗೆ ಹತ್ತಿಸಿದ ಬಳಿಕ ತಾನೇ ಬಟ್ಟೆ ಬಿಚ್ಚಿಕೊಂಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆಯುಕ್ತರು ಹೇಳಿದ್ದಾರೆ. ಮಹಿಳಾ ಹಾಗೂ ಪುರುಷ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ್ದು, ನಾಲ್ವರು ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ.

2020ರಿಂದ ಈ ಮಹಿಳೆಯ ವಿರುದ್ಧ ಧಾರವಾಡ ಮತ್ತು ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಒಟ್ಟು 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲೇ ಹೆಚ್ಚುವರಿ ಮಹಿಳಾ ಸಿಬ್ಬಂದಿ ನಿಯೋಜಿಸಿ ಬಂಧನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಯಾರು ಶೂಟ್ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಡಿಯೋ ವೈರಲ್ ಮಾಡಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅಂಡರ್-19 ಕ್ರಿಕೆಟ್ʼನಲ್ಲಿ ಹೊಸ ಇತಿಹಾಸ: ಪಂತ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

0

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ ಸೇರಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ನಡೆದ ಯೂತ್ ಒಡಿಐ ಪಂದ್ಯದಲ್ಲಿ ವೈಭವ್, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಅವರ ಭರ್ಜರಿ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಯೂತ್ ಒಡಿಐ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ 2016ರಲ್ಲಿ ನೇಪಾಳ ಅಂಡರ್-19 ತಂಡದ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ರಿಷಭ್ ಪಂತ್ ಅವರ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ಮುರಿದು ವೈಭವ್ ಸೂರ್ಯವಂಶಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ 68 ರನ್‌ಗಳು ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 10 ಭರ್ಜರಿ ಸಿಕ್ಸರ್‌ಗಳು ಹಾಗೂ 1 ಫೋರ್ ಸಿಡಿಯಿತು. ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಮಹತ್ವದ ಗೆಲುವು ಸಾಧಿಸಿತು.

ಈ ಅದ್ಭುತ ಇನಿಂಗ್ಸ್ ಮೂಲಕ ವೈಭವ್ ಸೂರ್ಯವಂಶಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಭವಿಷ್ಯದ ಸ್ಟಾರ್ ಆಟಗಾರ ಎಂಬ ಭರವಸೆ ಮೂಡಿಸಿದ್ದಾರೆ.

ಮಂಡ್ಯ: ದೂರುದಾರನ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯ ದರ್ಪ?

0

ಮಂಡ್ಯ: ದೂರು ನೀಡಲು ಬಂದ ವ್ಯಕ್ತಿಯ ಮೇಲೆಯೇ ಮಹಿಳಾ ಪೊಲೀಸ್ ಅಧಿಕಾರಿ ದರ್ಪ ತೋರಿದ್ದಾರೆ ಎಂಬ ಗಂಭೀರ ಆರೋಪ ಕೆ.ಆರ್.ಪೇಟೆ ಪಟ್ಟಣದಲ್ಲಿ ಕೇಳಿಬಂದಿದೆ. ಸರ್ಕಾರ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾತಾಡುತ್ತಿರುವ ನಡುವೆಯೇ, ಅಧಿಕಾರಿಗಳ ದರ್ಪ ಮತ್ತು ದೌರ್ಜನ್ಯ ನಿಲ್ಲುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮರಾಣಿ ವಿರುದ್ಧ ದರ್ಪ ಹಾಗೂ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವೈರಲ್ ವಿಡಿಯೋದಲ್ಲಿ, ನಡು ಬೀದಿಯಲ್ಲೇ ದೂರುದಾರನಿಗೆ ಆವಾಜ್ ಹಾಕಿ ಬೆದರಿಸುತ್ತಿರುವ ದೃಶ್ಯಗಳು ಕಾಣಿಸಿವೆ ಎನ್ನಲಾಗಿದೆ.

ಕೆ.ಆರ್.ಪೇಟೆಯ ಚಂದ್ರಶೇಖರ್ ಎಂಬುವವರು, ತನಗೆ ಇನ್ಸ್ಪೆಕ್ಟರ್ ಸುಮರಾಣಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ನೀಡಲು ಬಂದ ವ್ಯಕ್ತಿಯೊಂದಿಗೆ ಈ ರೀತಿ ಬೇಜಬ್ದಾರಿಯಾಗಿ ವರ್ತಿಸಿದರೆ, ನ್ಯಾಯ ಸಿಗುತ್ತದೆ ಎಂಬ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಹಿಳಾ ಅಧಿಕಾರಿಯ ದರ್ಪ ಮತ್ತು ವರ್ತನೆ ನೋಡಿದರೆ, ಠಾಣೆಗೆ ಬರಲು ನೊಂದವರು ಹೆದರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಚಂದ್ರಶೇಖರ್ ಅವರು ಮಹಿಳಾ ಪೊಲೀಸ್ ಅಧಿಕಾರಿಯ ದರ್ಪದ ವಿರುದ್ಧ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಈ ಬೇಜಬ್ದಾರಿ ಹಾಗೂ ದರ್ಪ ತೋರುವ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

error: Content is protected !!