Home Blog Page 213

WPL 2026: ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ RCB: ಸಿಂಹಿಣಿಯರಿಗೆ ಹಣದ ಸುರಿಮಳೆ! ಡೆಲ್ಲಿಗೂ ಭರ್ಜರಿ ಬಹುಮಾನ

0

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸತತ ನಾಲ್ಕನೇ ಬಾರಿ ಫೈನಲ್ ತಲುಪಿದ್ದ ಡೆಲ್ಲಿ ತಂಡಕ್ಕೆ ಈ ಬಾರಿ ಕೂಡ ಟ್ರೋಫಿ ಕೈ ತಪ್ಪಿದ್ದು, ರನ್ನರ್‌-ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ RCB ತಂಡ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಸ್ಫೋಟಕ ಇನ್ನಿಂಗ್ಸ್‌ಗಳ ನೆರವಿನಿಂದ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು.

ಈ ಜಯದೊಂದಿಗೆ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಋತುವಿನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಶ್ರೇಷ್ಠ ಸಾಧನೆ ಮಾಡಿದ ತಂಡವಾಗಿ ಹೊರಹೊಮ್ಮಿತು.

ಜೆಮಿಮಾ ರೋಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಂಟು ಪಂದ್ಯಗಳಲ್ಲಿ ನಾಲ್ಕು ಜಯ ಹಾಗೂ ನಾಲ್ಕು ಸೋಲುಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಡೆಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರೂ, ಅಂತಿಮ ಪಂದ್ಯದಲ್ಲಿ ಸೋಲು ಕಂಡಿತು.

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿ 2023ರಲ್ಲಿ ನಡೆದಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಅಂದು ನೀಡಿದಂತೆ ಈ ಬಾರಿಯೂ ವಿಜೇತ ತಂಡಕ್ಕೆ ₹6 ಕೋಟಿ ಬಹುಮಾನ ನಿಗದಿಪಡಿಸಲಾಗಿತ್ತು. ಚಾಂಪಿಯನ್ RCB ತಂಡವು ₹6 ಕೋಟಿ ಮೊತ್ತವನ್ನು ಪಡೆದುಕೊಂಡಿತು. ರನ್ನರ್‌-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ₹3 ಕೋಟಿ ಬಹುಮಾನ ಲಭಿಸಿತು.

ಪಂದ್ಯಾವಳಿಯ ಅತ್ಯುತ್ತಮ ಆಟಗಾರಿಗೆ ₹5 ಲಕ್ಷ ಬಹುಮಾನ ನೀಡಲಾಯಿತು. ಆರೆಂಜ್ ಕ್ಯಾಪ್‌, ಪರ್ಪಲ್ ಕ್ಯಾಪ್‌, ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಆಟಗಾರ್ತಿ ಹಾಗೂ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ್ತಿಗೂ ತಲಾ ₹5 ಲಕ್ಷ ಬಹುಮಾನ ನೀಡಲಾಯಿತು. ಫೈನಲ್ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್‌ ಆಡಿದ ಸ್ಮೃತಿ ಮಂಧಾನ ಅವರಿಗೆ ₹2.5 ಲಕ್ಷ ವಿಶೇಷ ಬಹುಮಾನ ಲಭಿಸಿತು.

Power Cut Bengaluru; ಬೆಂಗಳೂರಿನ ಹಲವೆಡೆ ಶನಿವಾರ ಪವರ್ ಕಟ್; ಇಲ್ಲಿದೆ ಕರೆಂಟ್ ಇಲ್ಲದ ಏರಿಯಾಗಳ ಪಟ್ಟಿ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಫೆಬ್ರವರಿ 7ರ ಶನಿವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಅದರಂತೆ ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ, ತಿಮ್ಮೇನಹಳ್ಳಿ, ಎಂ.ಸಿ. ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಮಾದಪ್ಪನ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗುವಂತಿಲ್ಲ: ಅರಣ್ಯ ಸಿಬ್ಬಂದಿ ಆದೇಶ

0

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಹೈಅಲರ್ಟ್ ಘೋಷಿಸಿ ಭದ್ರತಾ ವಲಯವನ್ನು ಸಕ್ರಿಯಗೊಳಿಸಿದೆ. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಭಕ್ತರ ಜೀವ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರವೀಣ್ ಎಂಬ ಭಕ್ತ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆ ಮಾರ್ಗದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಗೆ ಆದೇಶ ನೀಡಿದೆ.

ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪ್ರತಿ ಕಿಲೋಮೀಟರ್‌ಗೆ ಒಂದೊಂದು ಭದ್ರತಾ ತಂಡವನ್ನು ನಿಯೋಜಿಸಲಾಗಿದ್ದು, ಒಟ್ಟು 8 ತಂಡಗಳು ಹೈಅಲರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ತಂಡಗಳಿಗೆ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ನೀಡಲಾಗಿದ್ದು, ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ಅರಣ್ಯ ವಾಚರ್‌ಗಳು ಮತ್ತು ಎಪಿಸಿ ಕ್ಯಾಂಪ್ ಸಿಬ್ಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ.

ಭಕ್ತರು ಒಬ್ಬೊಬ್ಬರಾಗಿ ಅಥವಾ ಒಂಟಿಯಾಗಿ ಕಾಡಿನೊಳಗೆ ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪಾದಯಾತ್ರೆ ಗುಂಪು ಗುಂಪಾಗಿ ಮಾತ್ರ ನಡೆಯಬೇಕು. ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಡ್ರೋನ್ ಕ್ಯಾಮರಾಗಳ ಮೂಲಕವೂ ನಿರಂತರ ನಿಗಾವಹಿಸಲಾಗುತ್ತಿದೆ.

ಫೆಬ್ರವರಿ 14ರಿಂದ 18ರವರೆಗೆ ನಡೆಯುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಯಾವುದೇ ಅನಾಹುತ ಮರುಕಳಿಸದಂತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಮನ್ವಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.

ಜನವರಿ 21ರಂದು ಮುಂಜಾನೆ ಮಂಡ್ಯದ ಚೀರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 150ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ವೇಳೆ ತೆರಳುತ್ತಿದ್ದಾಗ ಚಿರತೆ ಪ್ರವೀಣ್ ಕುಮಾರ್ ಮೇಲೆ ದಾಳಿ ನಡೆಸಿ ಕತ್ತು ಸೀಳಿ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ನಡೆದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.

ಡ್ರಗ್ಸ್ ಜಾಲದೊಳಗೆ ತಮಿಳು ಸಿನಿಮಾ ಲೋಕ: ನಟಿ, ಸಹಾಯಕ ನಿರ್ದೇಶಕಿ ಸೇರಿ ಎಂಟು ಮಂದಿ ಅರೆಸ್ಟ್

ಚಿತ್ರರಂಗ ಮತ್ತು ಮಾದಕ ವಸ್ತುಗಳ ನಡುವಿನ ಕಪ್ಪು ನಂಟು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್‌ನಲ್ಲಿ ಆಗಾಗ ಕೇಳಿಬರುವ ಡ್ರಗ್ಸ್ ಪ್ರಕರಣಗಳು ಇದೀಗ ತಮಿಳು ಚಿತ್ರರಂಗಕ್ಕೂ ತಲುಪಿದ್ದು, ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಬಂಧನಕ್ಕೊಳಗಾಗಿದ್ದಾರೆ. ಜಾನಿ ಚೆಲ್ಲಪ್ಪ ನೇತೃತ್ವದ ತಂಡ ಈ ಡ್ರಗ್ಸ್ ಜಾಲವನ್ನು ಭೇದಿಸಿದೆ.

ವಲಸರವಕ್ಕಂ ಪ್ರದೇಶದಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಬಂಧಿಸಿದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿತು. ವಿಚಾರಣೆ ವೇಳೆ ಆತ ವೆಂಕಟೇಶ್ ಎಂಬ ವ್ಯಕ್ತಿಯಿಂದ ಡ್ರಗ್ಸ್ ಖರೀದಿಸುತ್ತಿದ್ದುದನ್ನು ಬಾಯ್ಬಿಟ್ಟಿದ್ದಾನೆ.

ಈ ಸುಳಿವು ಆಧರಿಸಿ ಪೊಲೀಸರು ಗ್ರಾಹಕರಂತೆ ವರ್ತಿಸಿ ವೆಂಕಟೇಶ್ ಅನ್ನು ಸಂಪರ್ಕಿಸಿದರು. ಡ್ರಗ್ಸ್ ಪೂರೈಕೆಗೆ ನಿಗದಿತ ಸ್ಥಳಕ್ಕೆ ಬಂದಾಗ ಆತನನ್ನು ಬಂಧಿಸಲಾಯಿತು. ಆತನಿಂದ ಮೆಥಾಫೆಟಮೈನ್, ಓಜಿ ಗಾಂಜಾ, ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಹಾಗೂ ಒಂಬತ್ತು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆತನ ಸಂಪರ್ಕಗಳ ಪರಿಶೀಲನೆ ವೇಳೆ ಇನ್ನಷ್ಟು ಹೆಸರುಗಳು ಹೊರಬಂದಿದ್ದು, ಇದರೊಂದಿಗೆ ನಟಿ ಅಂಜು ಕೃಷ್ಣ ಮತ್ತು ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಬಂಧನಕ್ಕೆ ಒಳಗಾದರು. ಅಂಜು ಕೃಷ್ಣ ತಮಿಳಿನ ‘ವೆಲ್ಲಿಮಲೈ’ ಹಾಗೂ ಮಲಯಾಳಂನ ‘ಆರೊ’, ‘ಆಕಾಶಂ ಕದನ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿತ್ರರಂಗದಲ್ಲಿ ಮಾದಕ ವಸ್ತು ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.

ರಕ್ಷಣಾ ತಂತ್ರಜ್ಞಾನ ಸಹಯೋಗ ಬಲಪಡಿಸಲು ಭಾರತ–ಅಮೆರಿಕ ಮಹತ್ವದ ಮಾತುಕತೆ

0

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ತಂತ್ರಜ್ಞಾನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆಗಳು ನಡೆದಿವೆ. ಈಗಾಗಲೇ ಇರುವ ಮತ್ತು ಮುಂದಿನ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ರಕ್ಷಣಾ ತಂತ್ರಜ್ಞಾನಗಳಲ್ಲಿ ಪರಸ್ಪರ ಸಹಯೋಗವನ್ನು ವಿಸ್ತರಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಫೆಬ್ರವರಿ 3 ಮತ್ತು 4ರಂದು ನವದೆಹಲಿಯಲ್ಲಿ 24ನೇ ಇಂಡೋ–ಯುಎಸ್ ಜಂಟಿ ತಾಂತ್ರಿಕ ಗುಂಪಿನ ಸಮಗ್ರ ಸಭೆಯನ್ನು ಆಯೋಜಿಸಿತ್ತು. ಈ ಸಭೆಗೆ ಡಿಆರ್‌ಡಿಒ ಮಹಾನಿರ್ದೇಶಕಿ ಚಂದ್ರಿಕಾ ಕೌಶಿಕ್ ಹಾಗೂ ಅಮೆರಿಕದ ಸಂಶೋಧನೆ ಮತ್ತು ಎಂಜಿನಿಯರಿಂಗ್ ವಿಭಾಗದ ಅಧೀನ ಕಾರ್ಯದರ್ಶಿ ಮೈಕೆಲ್ ಫ್ರಾನ್ಸಿಸ್ ಡಾಡ್ ಅವರ ಕಚೇರಿಯ ತಂತ್ರಜ್ಞಾನ ಸಹಾಯಕ ಕಾರ್ಯದರ್ಶಿ ಸಹ-ಅಧ್ಯಕ್ಷತೆ ವಹಿಸಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 2025ರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸಹಿ ಮಾಡಿದ ಭಾರತ–ಅಮೆರಿಕ ಪ್ರಮುಖ ರಕ್ಷಣಾ ಪಾಲುದಾರಿಕೆ ಚೌಕಟ್ಟಿನ ದೃಷ್ಟಿಕೋನ ಮತ್ತು ನೀತಿ ಮಾರ್ಗದರ್ಶನಕ್ಕೆ ಅನುಗುಣವಾಗಿ ಈ ಸಮಗ್ರ ಸಭೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರದ ಪ್ರಗತಿಯನ್ನು ನಿಯೋಗಗಳು ಪರಿಶೀಲಿಸಿವೆ. ಈ ಸಂಬಂಧ ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚಿಸಲಾಗಿದೆ. ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ನಿರ್ಣಾಯಕ ಹಾಗೂ ಉದಯೋನ್ಮುಖ ರಕ್ಷಣಾ ತಂತ್ರಜ್ಞಾನಗಳಲ್ಲಿ ಸಹಯೋಗವನ್ನು ಇನ್ನಷ್ಟು ಬಲಪಡಿಸುವ ಪ್ರಸ್ತಾಪಗಳ ಮೇಲೂ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳಲ್ಲಿ ವಿಶ್ವವಿದ್ಯಾಲಯ–ಸಂಯೋಜಿತ ಸಂಶೋಧನಾ ಕೇಂದ್ರಗಳು, ರಕ್ಷಣಾ ಪ್ರಯೋಗಾಲಯಗಳು ಮತ್ತು ಕೈಗಾರಿಕೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕುರಿತು ವಿಶೇಷ ಗಮನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಊಟ ಮಾಡುವಾಗ ಬೆವರು ಬರುವುದು ಮಧುಮೇಹದ ಲಕ್ಷಣವೇ? ಇಲ್ಲಿದೆ ಉತ್ತರ

0

ಊಟ ಮಾಡುವ ವೇಳೆ ಕೆಲವರಿಗೆ ಹಣೆಯ ಮೇಲೆ ಹೆಚ್ಚು ಬೆವರು ಬರುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಮಸಾಲೆಯುಕ್ತ ಅಥವಾ ಬಿಸಿ ಆಹಾರ ಸೇವಿಸುವಾಗ ಈ ರೀತಿ ಆಗುವುದು ಸಹಜವಾದರೂ, ಪ್ರತೀ ಬಾರಿ ಊಟ ಮಾಡುವಾಗಲೇ ಅಥವಾ ತಣಿದ ಆಹಾರ ಸೇವಿಸುವಾಗಲೂ, ಚಳಿಯ ವಾತಾವರಣದಲ್ಲಿಯೂ ಬೆವರುವುದು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ವೈದ್ಯಕೀಯ ಭಾಷೆಯಲ್ಲಿ ಊಟ ಮಾಡುವಾಗ ಬೆವರು ಬರುವ ಸಮಸ್ಯೆಯನ್ನು ಗಸ್ಟೇಟರಿ ಸ್ವೆಟಿಂಗ್ (Gustatory Sweating) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗಿರುವವರು ಅಥವಾ ತುಂಬಾ ಮಸಾಲೆಯುಕ್ತ ಆಹಾರ ಸೇವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅಡಗಿರುವ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.

ಮಧುಮೇಹದ ಲಕ್ಷಣವೇ?
ಡಾ. ಹಿಮಾಂಶು ಅವರ ಪ್ರಕಾರ, ಊಟ ಮಾಡುವಾಗ ಹೆಚ್ಚು ಬೆವರುವುದು ಕೆಲವರಲ್ಲಿ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಮಧುಮೇಹದಿಂದ ನರಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಊಟ ಸಮಯದಲ್ಲಿ ಬೆವರುವುದು ಕಾಣಿಸಿಕೊಳ್ಳಬಹುದು. ಆದರೆ ಇದು ಎಲ್ಲ ಮಧುಮೇಹ ರೋಗಿಗಳಲ್ಲಿಯೂ ಕಂಡುಬರುವುದಿಲ್ಲ. ಜೊತೆಗೆ ಥೈರಾಯ್ಡ್ ಸಮಸ್ಯೆ ಅಥವಾ ಹಾರ್ಮೋನುಗಳ ಅಸಮತೋಲನದಿಂದಲೂ ಈ ರೀತಿ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆಯೇ?
ಹೌದು. ಮಕ್ಕಳು ಮಸಾಲೆಯುಕ್ತ ಆಹಾರ ಸೇವಿಸಿದಾಗ ಜೀರ್ಣಕ್ರಿಯೆ ವೇಳೆ ದೇಹದ ಉಷ್ಣತೆ ಹೆಚ್ಚಾಗಿ ಬೆವರುವುದು ಸಹಜ. ಆದರೆ ಸಾಮಾನ್ಯ ಆಹಾರ ಸೇವಿಸುವಾಗಲೂ ಮಗು ಹೆಚ್ಚು ಬೆವರುತ್ತಿದ್ದರೆ, ತೂಕ ವೇಗವಾಗಿ ಇಳಿಕೆಯಾಗುತ್ತಿದ್ದರೆ ಅಥವಾ ಊಟ ಸಮಯದಲ್ಲಿ ಹೃದಯ ಬಡಿತ ಅಸಹಜವಾಗಿ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.

ಊಟ ಮಾಡುವಾಗ ಬೆವರುವುದನ್ನು ಕಡಿಮೆ ಮಾಡಲು ಸಲಹೆಗಳು:

  • ತುಂಬಾ ಮಸಾಲೆಯುಕ್ತ ಆಹಾರ ಸೇವನೆ ಕಡಿಮೆ ಮಾಡಬೇಕು
  • ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಡಬೇಕು
  • ದಿನಕ್ಕೆ ಕನಿಷ್ಠ 7–8 ಗ್ಲಾಸ್ ನೀರು ಕುಡಿಯಬೇಕು

ಊಟ ಮಾಡುವಾಗ ಸ್ವಲ್ಪ ಪ್ರಮಾಣದಲ್ಲಿ ಬೆವರುವುದು ಸಾಮಾನ್ಯವಾದರೂ, ಅದು ನಿಯಮಿತವಾಗಿ ಹೆಚ್ಚಾಗಿ ಕಾಣಿಸಿದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಚೆಕ್ ಬೌನ್ಸ್ ಪ್ರಕರಣ: ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಕಠಿಣ ಸಂದೇಶ ನೀಡಿದೆ. ಯಾವುದೇ ರಿಲೀಫ್ ನೀಡಲು ನಿರಾಕರಿಸಿರುವ ನ್ಯಾಯಾಲಯದ ಆದೇಶದಂತೆ, ನಟ ಗುರುವಾರ ಸಂಜೆ ತಿಹಾರ್ ಜೈಲಿನ ಮುಂದೆ ಶರಣಾಗಿದ್ದಾರೆ.

ಜನವರಿ 5ರಂದು ಸಂಜೆ ನಾಲ್ಕು ಗಂಟೆಗೆ ರಾಜ್ಪಾಲ್ ಯಾದವ್ ಜೈಲಿಗೆ ಆಗಮಿಸಿದ್ದು, ನಂತರ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಅವರನ್ನು ಬಂಧನದಲ್ಲಿಟ್ಟಿದ್ದಾರೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದಾಖಲಿಸಿದ್ದ ಈ ಪ್ರಕರಣದಲ್ಲಿ, ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿಗಳೆಂದು ಘೋಷಿಸಿತ್ತು. 2019ರಲ್ಲಿ ಸೆಷನ್ ಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿತ್ತು.

ನಂತರ, ರಾಜ್ಪಾಲ್ ಯಾದವ್ ಈ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು ಸೆಟಲ್ ಮಾಡಲು ಯತ್ನಿಸುತ್ತಿದ್ದೇವೆ ಎಂಬ ವಾದದ ಮೇರೆಗೆ 2024ರಲ್ಲಿ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಹಲವು ಅವಕಾಶಗಳಿದ್ದರೂ ಹಣವನ್ನು ಪಾವತಿಸದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ಇನ್ನೂ ಕೆಲವು ವಾರಗಳ ಕಾಲಾವಕಾಶ ನೀಡುವಂತೆ ರಾಜ್ಪಾಲ್ ಪರ ವಕೀಲರು ಮನವಿ ಮಾಡಿದ್ದರೂ, ಹೈಕೋರ್ಟ್ ಅದನ್ನು ತಿರಸ್ಕರಿಸಿತು. ಬುಧವಾರ ನಾಲ್ಕು ಗಂಟೆಗಳ ಒಳಗೆ ಶರಣಾಗುವಂತೆ ಕೋರ್ಟ್ ನಿರ್ದೇಶನ ನೀಡಿತ್ತು.

ಈ ವೇಳೆ ನ್ಯಾಯಾಲಯ ನೀಡಿದ ಟಿಪ್ಪಣಿ ಗಮನ ಸೆಳೆದಿದೆ. “ಯಾವುದೇ ವ್ಯಕ್ತಿ ನಟನಾಗಿದ್ದಾನೆ, ಪ್ರಸಿದ್ಧನಾಗಿದ್ದಾನೆ ಅಥವಾ ನಿರ್ದಿಷ್ಟ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ವಿಶೇಷ ಸೌಲಭ್ಯ ನೀಡುವುದಿಲ್ಲ. ಒಂದೇ ತಪ್ಪು ಮರುಮರು ನಡೆದರೆ ಅದನ್ನು ಸಹಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಪ್ರಕರಣವು ಸೆಲೆಬ್ರಿಟಿಗಳಿಗೂ ಕಾನೂನು ಒಂದೇ ಎಂಬ ಸಂದೇಶವನ್ನು ಮತ್ತೊಮ್ಮೆ ಬಲವಾಗಿ ನೀಡಿದೆ.

ನೆಟ್ಫ್ಲಿಕ್ಸ್ ‘ಧುರಂಧರ್’ ಕ್ರೆಡಿಟ್ಸ್‌ನಲ್ಲಿ ರಾಹುಲ್ ಗಾಂಧಿ! ರಾಜಕೀಯದ ಎಂಟ್ರಿಯೇ?

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಒಟಿಟಿಗೆ ಬಂದ ಬೆನ್ನಲ್ಲೇ ನೆಟ್ಫ್ಲಿಕ್ಸ್‌ನಲ್ಲಿ ಧೂಳೆಬ್ಬಿಸಿದೆ. ಲಕ್ಷಾಂತರ ಮಂದಿ ಸಿನಿಮಾ ವೀಕ್ಷಿಸುತ್ತಿದ್ದು, ಕಥೆ, ಅಭಿನಯದ ಜೊತೆಗೆ ಈಗ ಕ್ರೆಡಿಟ್ಸ್ ಲಿಸ್ಟ್ ಕೂಡ ವೈರಲ್ ಆಗಿದೆ.

ಸಿನಿಮಾದ ಅಂತಿಮ ಕ್ರೆಡಿಟ್ಸ್‌ನಲ್ಲಿ ‘Executive Producer – Rahul Gandhi’ ಎಂಬ ಹೆಸರು ಕಾಣಿಸಿಕೊಂಡಿರುವುದೇ ಈ ವೈರಲ್ ಗೊಂದಲಕ್ಕೆ ಕಾರಣ. ಇದನ್ನು ಕಂಡ ನೆಟ್ಟಿಗರು, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿನಿಮಾ ನಿರ್ಮಾಪಕರಾಗಿದ್ದಾರಾ?”, “ರಾಜಕೀಯ ಬಿಟ್ಟು ಬಾಲಿವುಡ್‌ಗೆ ಎಂಟ್ರಿಯೇ?” ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಕೆಲವರು ಈ ವಿಷಯವನ್ನು ಹಿಡಿದು ರಾಜಕೀಯ ಮೀಮ್‌ಗಳು, ವ್ಯಂಗ್ಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಆದರೆ, ಇಲ್ಲಿ ತಿಳಿಯಬೇಕಾದ ಮಹತ್ವದ ವಿಚಾರವೇನೆಂದರೆ — ಈ ರಾಹುಲ್ ಗಾಂಧಿಗೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ. ‘ಧುರಂಧರ್’ ಸಿನಿಮಾದಲ್ಲಿ ಉಲ್ಲೇಖಗೊಂಡಿರುವ ರಾಹುಲ್ ಗಾಂಧಿ ಬಾಲಿವುಡ್‌ನಲ್ಲೇ ಕೆಲಸ ಮಾಡುತ್ತಿರುವ ಅನುಭವೀ ಕಾರ್ಯಕಾರಿ ನಿರ್ಮಾಪಕ.

ಈ ರಾಹುಲ್ ಗಾಂಧಿ ಈ ಹಿಂದೆಯೂ ‘ರುಸ್ತುಂ’, ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ರಾಕೆಟ್ ಬಾಯ್ಸ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಸರು ಒಂದೇ ಇರುವುದರಿಂದ ಈ ಗೊಂದಲ ಉಂಟಾಗಿದೆ.

‘ಧುರಂಧರ್’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ನಿರ್ಮಿಸಿದ್ದು, ಆದಿತ್ಯ ಧಾರ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಗೂಢಚಾರನ ಕಥೆ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1500 ಕೋಟಿ ರೂಪಾಯಿಯ ಸಮೀಪದ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಸಾರಾಂಶವಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಗೊಂದಲಕ್ಕೆ ಯಾವುದೇ ರಾಜಕೀಯ ಅರ್ಥವಿಲ್ಲ. ಇದು ಕೇವಲ ಹೆಸರಿನ ಸಾಮ್ಯದಿಂದ ಉಂಟಾದ ತಪ್ಪು ಕಲ್ಪನೆ.

ವಿದೇಶಿ ರಾಯಭಾರಿ ಕಚೇರಿಗಳಿಗೆ ಮತ್ತೆ ಬಾಂಬ್ ಬೆದರಿಕೆ; ಬೆಂಗಳೂರಿನಲ್ಲಿ ಹೆಚ್ಚಿದ ಆತಂಕ

0

ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ ಕಚೇರಿಗಳ ಮೇಲೆ ಮತ್ತೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.

ಇಟಲಿ ಮತ್ತು ಜಪಾನ್ ಕಾನ್ಸುಲೇಟ್ ನಂತರ, ಈಗ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಆರ್‍ಟಿ ನಗರದ ಗಂಗಾನಗರದಲ್ಲಿ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿ ಜನವರಿ 29ರಂದು ಕಿಡಿಗೇಡಿಗಳಿಂದ ಇ-ಮೇಲ್ ಪಡೆದಿದ್ದು, ಅವರು “5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.

ರಾಯಭಾರಿ ಕಚೇರಿಯ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಈ ಕುರಿತು ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ, ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಹಲಸೂರಿನ ಇಟಾಲಿಯನ್ ಕಾನ್ಸುಲೇಟ್‌ಗೆ ಕೂಡ gaina_ramesh@outlook.com ವಿಳಾಸದಿಂದ bangalore.visa@esteri.it ಗೆ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂಬ ಸಂದೇಶ ಕಳುಹಿಸಲಾಗಿತ್ತು. ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದಲ್ಲದೆ, ಕಬ್ಬನ್ ರಸ್ತೆಯಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಕಚೇರಿಗೆ ಅಪರಿಚಿತ ಸಂಖ್ಯೆಯಿಂದ “Please be careful, someone will kill you” ಎಂದು ಕೊಲೆ ಬೆದರಿಕೆ ಕರೆ ಬಂದಿತ್ತು. ಈ ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಸದ್ಯ, ಇಟಲಿ, ಜಪಾನ್ ಮತ್ತು ನೆದರ್‌ಲ್ಯಾಂಡ್ ಕಚೇರಿಗಳಿಗೆ ಬಂದ ಬೆದರಿಕೆಗಳ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ಇ-ಮೇಲ್ ಐಡಿ ಮತ್ತು ಕರೆಗಳ ಜಾಡು ಬೆನ್ನತ್ತಿದ್ದು, ರಾಯಭಾರಿ ಕಚೇರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರಚಾರ ವೇದಿಕೆಯಲ್ಲಿ ಅಶ್ಲೀಲ ಹಾಡು, ಪತ್ರಕರ್ತರಿಗೆ ಬೆದರಿಕೆ: ತೆಲುಗು ನಟ ಚಂದ್ರಹಾಸ್ ವಿರುದ್ಧ ದೂರು

ತೆಲುಗಿನ ಉದಯೋನ್ಮುಖ ನಟ ಚಂದ್ರಹಾಸ್ ವಿರುದ್ಧ ಪ್ರಚಾರ ಕಾರ್ಯಕ್ರಮದ ವೇಳೆ ನಡೆದ ಘಟನೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಹಿರಿಯ ನಟ ಇಟಿವಿ ಪ್ರಭಾಕರ್ ಅವರ ಪುತ್ರರಾಗಿರುವ ಚಂದ್ರಹಾಸ್, ತಮ್ಮ ಮುಂದಿನ ಸಿನಿಮಾ ‘ಬರಾಬರ್ ಪ್ರೇಮಿಸ್ತ’ ಪ್ರಚಾರ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಕಾರ್ಯಕ್ರಮದ ವೇಳೆ ವೇದಿಕೆ ಏರಿದ ಚಂದ್ರಹಾಸ್, ಅಶ್ಲೀಲ ಅರ್ಥ ಹೊಂದಿರುವ ಹಾಡೊಂದನ್ನು ಹಾಡಿದ್ದಾರೆ. ವೇದಿಕೆಯ ಎದುರು ಸಿನಿಮಾದ ನಾಯಕಿ ಸೇರಿದಂತೆ ಹಲವು ಮಹಿಳೆಯರು, ಹಿರಿಯ ನಟ ಜೆಡಿ ಚಕ್ರವರ್ತಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರೂ, ಸಂಯಮ ತೋರದೇ ಹಾಡಿನಲ್ಲಿ ಅಸಭ್ಯ ಪದಗಳ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಡಿನ ಬಳಿಕ, ಅಲ್ಲೇ ಇದ್ದ ಕೆಲ ಪತ್ರಕರ್ತರು ಅದರ ಔಚಿತ್ವದ ಬಗ್ಗೆ ಪ್ರಶ್ನೆ ಮಾಡಿದಾಗ, ಚಂದ್ರಹಾಸ್ ಕೋಪಗೊಂಡು ಒಬ್ಬ ಪತ್ರಕರ್ತನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ, ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಟ ಚಂದ್ರಹಾಸ್ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ.

ವಿವಾದ ಹೆಚ್ಚಾಗುತ್ತಿದ್ದಂತೆ, ಚಿತ್ರದ ನಿರ್ದೇಶಕ ಸಂಪತ್ ರುದ್ರಾ ಹಾಗೂ ನಿರ್ಮಾಪಕರು ಮಾಧ್ಯಮಗಳ ಮುಂದೆ ಬಂದು ಕ್ಷಮೆಯಾಚಿಸಿದ್ದು, “ಆ ಹಾಡು ನಮ್ಮ ಸಿನಿಮಾದ ಭಾಗವಲ್ಲ. ಇದು ಹೀರೋ ಅವರ ವೈಯಕ್ತಿಕ ನಡೆ. ಈ ಘಟನೆಯಿಂದ ನಮಗೂ ಆಘಾತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ನಟ ಚಂದ್ರಹಾಸ್ ತಮ್ಮ ಮೇಲೆ ಬಂದ ಆರೋಪಗಳನ್ನು ತಳ್ಳಿಹಾಕಿದ್ದು, “ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ನನ್ನ ಹಾಡಿನ ಕೆಲವೇ ಭಾಗಗಳನ್ನು ಕಟ್ ಮಾಡಿ ತಪ್ಪಾಗಿ ಪ್ರದರ್ಶಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಈ ಘಟನೆ, ಸಿನಿಮಾದ ನಾಯಕರ ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ತೋರಬೇಕಾದ ಸಂಯಮದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

error: Content is protected !!