Home Blog Page 2168

ಮುಂಡರಗಿ ಪೊಲೀಸರ ಕಾರ್ಯಚರಣೆ: ಭಾರೀ ಪ್ರಮಾಣದ ಸ್ಫೋಟಕ ವಶ, ಇಬ್ಬರ ಬಂಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಕ್ರಮವಾಗಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಒಟ್ಟು 50 ಕೆಜಿ ತೂಕದ 135 ಚೀಲಗಳಂತೆ ಒಟ್ಟು 6750 ಕೆಜಿ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಸ್ಫೋಟಕ ಸಂಗ್ರಹಿಸಿಟ್ಟ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಬಸವರಾಜ ಅಂಗಡಿ ಅವರಿಗೆ ಸೇರಿದ ಗೋದಾಮಿನಿಂದ ಡಂಬಳ ಗ್ರಾಮದ ಚಾಲಕ ಅಶೋಕ ಕೊಂಪಿಕಲ್, ಸೋಮವಾರ ರಾತ್ರಿ 8.45ರ ಸುಮಾರಿಗೆ ಕಲಕೇರಿ ಮಾರ್ಗವಾಗಿ ಬೀಡನಾಳ ಹೊರಟಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಸುಧೀರಕುಮಾರ್ ಬೆಂಕಿ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವನ್ಯಜೀವಿ ಧಾಮಕ್ಕೆ ಕುತ್ತು!

ಕಪ್ಪತಗುಡ್ಡ ಸುತ್ತಮುತ್ತಲಿನಲ್ಲಿ ನೂರಾರು ಜಲ್ಲಿ ಕ್ರಶರ್ ಗಳಿದ್ದು, ಭಾರೀ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡಸಲಾಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಸೋಮವಾರ ಮುಂಡರಗಿ ಪೊಲೀಸರು ನಡೆಸಿದ ದಾಳಿಯಿಂದ ಅದು ಮತ್ತಷ್ಟು ಖಚಿತವಾಗಿದೆ. ಆ ಮೂಲಕ ಕಪ್ಪತಗುಡ್ಡ ವನ್ಯಜೀವಿ ಧಾಮ ವಲಯ ಅಪಾಯಕ್ಕೆ ಸಿಲುಕಿದಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಅಕ್ರಮವಾಗಿ ಸ್ಫೋಟಕ ರಾಸಾಯನಿಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ, ಯಾರಿಗೆ ಸರಬರಾಜು ಆಗುತ್ತಿತ್ತು ಎನ್ನುವ ಮಾಹಿತಿ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

ಕೊಪ್ಪಳ ನೂತನ ಎಸ್ಪಿಯಾಗಿ ಟಿ.ಶ್ರೀಧರ್ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಿ.ಶ್ರೀಧರ್ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಮೊನ್ನೆಯಷ್ಟೆ ಕೊಪ್ಪಳ ಎಸ್ಪಿ ಜಿ.ಸಂಗೀತಾರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸರಕಾರ ಕೊಪ್ಪಳಕ್ಕೆ ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ ಟಿ.ಶ್ರೀಧರರನ್ನು ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು.

ಮೂಲತಃ ಬಳ್ಳಾರಿ ಜಿಲ್ಲೆಯ ಟಿ.ಶ್ರೀಧರ, ಅಧಿಕಾರ ಸ್ವೀಕರಿಸಿದ ನಂತರ ಕೊಪ್ಪಳ ಜಿಲ್ಲೆಯ ವಿವಿಧ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಹನಿ/ತುಂತುರು ನೀರಾವರಿ ವಿತರಕರ ಬದುಕು ಬೀದಿಗೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದ ಸೂಕ್ಷ್ಮ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಏಕಾಏಕಿ ವಿತರಕರ ಬಿಲ್‌‌ಗಳನ್ನು ರದ್ದುಪಡಿಸಿದ್ದರಿಂದ ವಿತರಕರ ಬದುಕು‌ ಬೀದಿಗೆ ಬಿದ್ದಂತಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೆಂಕನಗೌಡ ಮೇಟಿ ಅಳಲು ತೋಡಿಕೊಂಡರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1991ರಿಂದ ರೈತರಿಗಾಗಿ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೆ ಬಂದಾಗಿನಿಂದ ವಿತರಕರಾಗಿರುವ ನಾವು, ಕಾರ್ಯಕ್ರಮವನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಹಗಲಿರುಳು ಎನ್ನದೆ ಇಲಾಖೆಯ ಜೊತೆ ಕೈ ಜೋಡಿಸಿ ಶ್ರಮಿಸಿದ್ದೇವೆ. ಜೊತೆಗೆ ಇದರಲ್ಲೇ ಭವಿಷ್ಯ‌ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ ನಮ್ಮ ಬಿಲ್‌ಗಳು ಬೇಕಿಲ್ಲ ಎಂದು ಸರಕಾರ ಹೇಳಿರುವುದರಿಂದ ಮುಂದೇನು ಎನ್ನುವ ಪ್ರಶ್ನೆ ಕಣ್ಮುಂದೆ ಬಂದು ತೀವ್ರ ಆತಂಕಕ್ಕೊಳಗಾಗಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 4 ಸಾವಿರ ವಿತರಕರಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಂಪನಿಗಳ 50 ಜನ ವಿತರಕರಿದ್ದೇವೆ. ಇದುವರೆಗೂ ಸರಕಾರದಿಂದ ಬರಬೇಕಾದ 14-15 ಕೋಟಿ ರೂಪಾಯಿ ಬಾಕಿ ಇದೆ. ಈಗ ನಮ್ಮ ಬಿಲ್‌ಗಳನ್ನೇ ರದ್ದುಗೊಳಿಸಿರುವುದರಿಂದ ಚಿಂತಿತರಾಗಿದ್ದೇವೆ ಎಂದು ದುಃಖ ತೋಡಿಕೊಂಡರು.

ಈ ವೇಳೆ ಸಂಘದ ಬಸವರಾಜ ಅಳವಂಡಿ, ಮಂಜುನಾಥ ಮಾಳೆಕೊಪ್ಪ ಇತರರು ಇದ್ದರು.

ಭಾರೀ ಮಳೆಗೆ ಕೊಚ್ಚಿ ಹೋದ ಬಂಡರಗಲ್-ಹೂಲಗೇರಿ ಸೇತುವೆ!

0

ಸುಮಾರು 50 ಗ್ರಾಮಗಳ ಸಂಪರ್ಕ ಕಡಿತ; ನೀರಿನಲ್ಲಿ ತೇಲಿ ಹೋಗುತ್ತಿದ್ದ ಬೈಕ್ ಸವಾರರನ್ನು ರಕ್ಷಿಸಿದ ಸ್ಥಳೀಯರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ಮೂರು ದಿನಗಳಿಂದ ಮಳೆ ಅವಾಂತರ ಅಷ್ಟಿಷ್ಟಲ್ಲ. ಕೆಲವು ಕಡೆ ಅಪಾರ ಪ್ರಮಾಣದ ವಿವಿಧ ಬೆಳೆ ಹಾನಿಯಾದರೆ, ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಜಿಲ್ಲೆಯ ವಿವಿಧೆಡೆ ಸೇತುವೆ, ಬ್ರಿಡ್ಜ್ ಕಮ್ ಬ್ಯಾರೇಜ್ ಕಾಲ ಕೊಚ್ಚಿ ಹೋಗಿವೆ.

ಕೊಪ್ಪಳ ತಾಲೂಕಿನ ಕೊಳೂರು ಬ್ರಿಡ್ಜ್ ಕಮ್ ಬ್ಯಾರೇಜ್‌ನ ತಡೆಗೋಡೆ ಕುಸಿದು ಅಕ್ಕ ಪಕ್ಕದ ಸುಮಾರು 9 ಎಕರೆ ಜಮೀನು ಕುಸಿದು ರೈತರು ಕಣ್ಣೀರು ಹಾಕಿರುವ ಘಟನೆ ಮಾಸುವ ಮುನ್ನವೇ ಕುಷ್ಟಗಿ ತಾಲೂಕಿನ ಬಂಡರಗಲ್ ಮತ್ತು ಹೂಲಗೇರಿ ನಡುವಿನ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು ಕೊಪ್ಪಳ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಸುಮಾರು 50 ಹಳ್ಳಿಗಳ ಜನಸಂಚಾರ ಕಡಿತಗೊಂಡಂತಾಗಿದೆ.

ಇದೇ ಸೇತುವೆ ಮೇಲೆ ಮಂಗಳವಾರ ನಸುಕಿನ ವೇಳೆ ವಿಜಯಪುರದಿಂದ ಬರುತ್ತಿದ್ದ ಬೈಕ್ ಸವಾರರು ಬೈಕ್ ಸಮೇತ ತೇಲಿಕೊಂಡು ಹೋದ ಘಟನೆ ನಡೆದಿದೆ. ಇದನ್ನು ನೋಡಿದ ಸ್ಥಳೀಯರು ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಬೈಕ್ ಸವಾರರನ್ನು ರಕ್ಷಿಸಿದ್ದಾರೆ. ಆದರೆ ಬೈಕ್, ಮೊಬೈಲ್ ನೀರಿನಲ್ಲಿ ತೇಲಿ ಹೋಗಿವೆ.

ದೋಟಿಹಾಳ ಸಮೀಪದ ಬನ್ನಟ್ಟಿ ಗ್ರಾಮದ ಬಳಿ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮರಂ ಕೊಚ್ಚಿ ಹೋಗಿದ್ದು , 50 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ .

ಕ್ಯಾದಿಗುಂಪಾ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ಮಾರ್ಗವಾಗಿ ತಾವರಗೇರಾ ಮೂಲಕ ಗಂಗಾವತಿ , ಸಿಂಧನೂರು , ರಾಯಚೂರು , ಲಿಂಗಸಗೂರು ಸೇರಿ ಇನ್ನಿತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದೆ . ಹಳ್ಳದ ಸೇತುವೆ ಕೊಚ್ಚಿ ಹೋಗುವುದರಿಂದ ಈ ಭಾಗದ ಜನರಿಗೆ ಕಿರಿಕಿರಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪ್ರಯಾಣಿಕರ ಪರದಾಟ:
ಬಂಡರಗಲ್ ಮತ್ತು ಹೂಲಗೇರಿ ನಡುವಿನ ಸೇತುವೆ ಕುಸಿತದಿಂದ ಸಿಂಧನೂರು , ಗಂಗಾವತಿ , ಅಂಗಸಗೂರು , ರಾಯಚೂರು , ಕಂದಗಲ್ , ಹುನಗುಂದ , ಹನುಮಸಾಗರ , ಉಮಲಾಪೂರ , ರಾಮತ್ನಾಳ , ವಂದಾಲ , ಮುದ್ದಲಗುಂದಿ , ಕುದ್ದೂರು , ತೆಲ್ಲಿಹಾಳ , ಬಳೂಟಗಿ , ಶಿರಗುಂಪಿ , ಬನ್ನಣ , ಮೇಗೂರು ರಾವಣಕಿ , ಮಾಲೂರು , ಇಲಕಲ್ , ಕುಷ್ಟಗಿ ಸೇರಿದಂತೆ 50 ಕ್ಕೂ ಹೆಚ್ಚು ಗ್ರಾಮಗಳ ಜನರು 20 ಕಿ.ಮೀ, ಸುತ್ತು ಹೊಡೆದು ಸ್ವ ಗ್ರಾಮಗಳನ್ನು ಸೇರಬೇಕಿದೆ.

ಸೇತುವೆ ಕಿತ್ತಿದ್ದರಿಂದ ಕಳೆದ 2-3 ದಿನಗಳಿಂದ ಸರಕಾರಿ ಬಸ್ ಸಂಚಾರ ಇಲ್ಲವಾಗಿದೆ. ಆಸ್ಪತ್ರೆಗೆ ತೆರಳಲು ರಸ್ತೆ ಇಲ್ಲವಾಗಿದ್ದರಿಂದ ವಯೋವೃದ್ಧರು , ಅಂಗವಿಕಲರು ಗರ್ಭಿಣಿ , ಬಾಣಂತಿಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ . ಕ್ರಮಕ್ಕೆ ಮುಂದಾಗಬೇಕಾದ ಶಾಸಕರು , ಜಿ.ಪಂ.ಸದಸ್ಯರು , ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಗೆ ಜನರು , ಪ್ರಯಾಣಿಕರು ಛೀಮಾರಿ ಹಾಕುತ್ತಿದ್ದಾರೆ .

ಬೈಕ್ ಸವಾರರಿಗೆ ಮತ್ತು ಕೃಷಿ ಚಟುವಟಿಕೆಗೆ ತೆರಳುವ ರೈತರಿಗೆ ಬೇರೆ ರಸ್ತೆ ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ. 2016-17ನೇ ಸಾಲಿನ ಆ‌ರ್‌ಕೆಡಿಬಿ ಯೋಜನೆಯ ಅಂದಾಜು ಮೊತ್ತ 6 ಕೋಟಿ ) ರೂ . ವೆಚ್ಚದಲ್ಲಿ ಹೊಸ ವಿನ್ಯಾಸದೊಂದಿಗೆ ಸೇತುವೆ ಕಟ್ಟಡ ನಿರ್ಮಿಸಲು ಸುಮಾರು 3 ವರ್ಷದ ಹಿಂದೆಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕೆಸರುಗದ್ದೆಯಾದ ಹೊಳೆ ಆಲೂರು ರಸ್ತೆ; ಗ್ರಾಮದ ತುಂಬೆಲ್ಲಾ ಕೆಸರ ಮಜ್ಜನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹೊಳೆ ಆಲೂರು: ಮಳೆ ಬಂದರೆ ಸಾಕು ಹೊಳೆ ಆಲೂರು ಗ್ರಾಮದ ಒಳಗಿನ ರಸ್ತೆಗಳೆಲ್ಲಾ ಕೆಸರುಗದ್ದೆಯಾಗುತ್ತವೆ.

ಗ್ರಾಮದ ಪ್ರಮುಖ ರಸ್ತೆಗಳಾದ ಬದಾಮಿ ಕ್ರಾಸ್, ರೈಲ್ವೇ ಅಂಡರ್ ಪಾಸ್, ಆಲೂರು ವೆಂಕಟರಾಯರ ವೃತ್ತವೆಲ್ಲವೂ ಕೆಸರುಮಯವಾಗುತ್ತವೆ.

ಒಂದೆಡೆ ಮಳೆನೀರಿನಿಂದ ಈ ಪರಿಸ್ಥಿತಿಯಾದರೆ, ಮತ್ತೊಂದೆಡೆ ರೈಲ್ವೇ ಸ್ಟೇಷನ್ ನಿಂದ ರಸ್ತೆಗೆ ಹರಿದುಬರುವ ನೀರಿನಿಂದ ಅಂಡರ್ ಪಾಸ್ ಸೇರಿದಂತೆ ಸುತ್ತಮುತ್ತಲ ಪ್ರದೇಶ ಕೆರೆಯಾಗಿ ಮಾರ್ಪಡುತ್ತದೆ.

ಸಣ್ಣ ಮಳೆಗೆ ಈ ಪರಿಸ್ಥಿತಿಯಾದರೆ, ಇನ್ನು ಪ್ರವಾಹ ಬಂದಾಗಲೆಲ್ಲಾ ಗ್ರಾಮಕ್ಕೆ ನೀರ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಸ್ಥಳೀಯ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಏನೂ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ.

ಅಂತರಾಜ್ಯ ಡಕಾಯಿತರ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಸೋಮವಾರ ಶಿರಹಟ್ಟಿ ಪೋಲೀಸರಿಂದ ಶಿರಹಟ್ಟಿ ತಾಲೂಕು ಸೇರಿದಂತೆ ಅಂತರಾಜ್ಯದ ಕಳ್ಳತನದಲ್ಲಿ ಭಾಗಿಯಾಗಿದ್ದಂತಹ ಆರು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಮರೇಶ ಮೋಡಕೇರ, ಉಪೇಂದ್ರ ಮೋಡಕೇರ, ಪರಶುರಾಮ ಮೋಡಕೇರ, ಲಕ್ಷ್ಮಣ ಮೋಡಕೇರ, ಮಾರುತಿ ಮೋಡಕೇರ, ರಾಜಾಭಕ್ಷಿ ಮಕಾನದಾರ ಈ ಆರು ಜನ ಬಂಧಿತ ಆರೋಪಿತರಾಗಿದ್ದಾರೆ.
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕುರಿ ಕಳ್ಳತನ, ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ವೆಂಕಟಾಪೂರದಲ್ಲಿ ದರೋಡೆ, ಸಿಂಧನೂರಿನಲ್ಲಿ ದರೋಡೆ, ರಾತ್ರಿ ವೇಳೆ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು, ಆಂಧ್ರಪ್ರದೇಶದ ಕರ್ನೂಲ ಜಿಲ್ಲಾ ಕವತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿರುವಂತಹ ಸಂದರ್ಭದಲ್ಲಿ ಬೋಲೆರೋ ವಾಹನ ಬಿಟ್ಟು ಪರಾರಿಯಾಗಿದ್ದ ಖಚಿತ ಸುಳಿವಿನ ಮೇರೆಗೆ ಇವರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಅವರ ನಿರ್ದೇಶನದ ಮೇರೆಗೆ ಡಿಎಸ್‌ಪಿ ಪ್ರಹ್ಲಾದ ಎಸ್.ಕೆ ನೇತೃತ್ವದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಶಿರಹಟ್ಟಿ ಪಿಎಸ್‌ಐ ಸುನೀಲಕುಮಾರ ನಾಯ್ಕ, ಲಕ್ಷ್ಮೇಶ್ವರ ಪಿಎಸ್‌ಐ ಶಿವಕುಮಾರ ಲೋಹಾರ ಮತ್ತು ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಸನ್ನ ರಂಗ್ರೇಜ, ದಾದಾಖಲಂದರ ನದಾಫ್, ಗಣೇಶ ಗ್ರಾಮಪುರೋಹಿತ, ಎಂ.ಬಿ.ವಡ್ಡಟ್ಟಿ, ಯರಗಟ್ಟಿ, ಥೋರಾತ, ಯಕಾಸಿ, ಇನಾಮತಿ, ಬೂದಿಹಾಳ, ದೊಡ್ಡಮನಿ, ಹೊಸಮನಿ, ಯಳವತ್ತಿ, ಮಹದೇವ ಮುಂತಾದವರು ಭಾಗಿಯಾಗಿದ್ದರು.
 

ರಾಜ್ಯಸ್ವ ಹೆಚ್ಚಿಸಲು ಕ್ರಮ ವಹಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ರಾಜ್ಯಸ್ವ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ತಿಳಿಸಿದರು.
ನರಗುಂದದ ಗೃಹ ಕಚೇರಿಯಿಂದ ಜರುಗಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಸಚಿವರು ಮಾತನಾಡಿದರು. ಇಲಾಖೆಯಿಂದ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ನೂತನ ಮರಳು ನೀತಿ ಜಾರಿಗೆ ತರುವ ಕುರಿತು ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಖನಿಜ ರಕ್ಷಣಾ ಪಡೆ ರಚಿಸಲು ಅಗತ್ಯದ ಕ್ರಮ ಜರುಗಿಸಲು ಸಚಿವರು ಸೂಚಿಸಿದರು. ಅಂತರಾಜ್ಯಗಳಿಂದ ಬರುವ ಉಪ ಖನಿಜಕ್ಕೆ ನಿಯಂತ್ರಣ ಶುಲ್ಕ ಸಂಗ್ರಹಿಸಲು ಸ್ಥಾಪಿಸಲಾದ ಚೆಕ್ ಪೋಸ್ಟ್‌ಗಳನ್ನು ಬಲಪಡಿಸಿ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ಕೈಗೊಳ್ಳಲು ತಿಳಿಸಿದರು.
ಕಾರ್ಯಾನುಮತಿ ಪಡೆದು ಪಟ್ಟಾ ಜಮೀನಿನಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸುತ್ತಿರುವವರು ಕಡ್ಡಾಯವಾಗಿ ಲೈಸನ್ಸ್ ಪಡೆದು ಸರಕಾರಕ್ಕೆ ನಿಯಮಾನುಸಾರ ರಾಜಸ್ವ ಪಾವತಿಸಲು ಸ್ಥಳೀಯ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಲು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ, ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ, ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ. ವಿರೂಪಾಕ್ಷ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮಾಸ್ಕ್ ಧರಿಸದವರಿಗೆ ದಂಡ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಕೊರೋನಾ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕರು ಮುಂಜಾಗ್ರತೆ ಕ್ರಮವಾಗಿ ಕಡ್ಡಾಯವಾಗಿ ಪಟ್ಟಣದ ಪ್ರತಿಯೊಬ್ಬ ನಾಗರಿಕರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಪಟ್ಟಣ ಪೊಲೀಸ್ ಠಾಣೆಯ ಹತ್ತಿರದ ಗಜೇಂದ್ರಗಡ-ಗದಗ ಮುಖ್ಯ ರಸ್ತೆಯಲ್ಲಿ ಸೋಮವಾರ ಪೊಲೀಸ್ ಇಲಾಖೆ ಹಾಗೂ ಪ.ಪಂ ವತಿಯಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಬಳಿಕೆ ಅವರು ಮಾತನಾಡಿದರು.
ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಕೊರೊನಾ ಹರಡಂತೆ ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ಮಾರ್ಗಸೂಚಿಯನ್ನು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸದವರಿಗೆ ನಿಯಮದಂತೆ ದಂಡ ವಿಧಿಸಲಾಗುವುದು. ಪಟ್ಟಣದ ವಿವಿಧ ಅಂಗಡಿ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಸವಾರರು ಸೇರಿದಂತೆ ಜನರು ಕೂಡ ಮಾಸ್ಕ್ ಧರಿಸದೆ ಮನೆಯಿಂದ ಬಂದ ಕಾರಣ ದಂಡ ವಿಧಿಸಲಾಗುತ್ತಿದೆ. ನಿಮ್ಮೆಲ್ಲರ ಸುರಕ್ಷೆತೆಗಾಗಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಗಡೆ ಬರುವ ಮುಂಚೆ ಮಾಸ್ಕ್ ಧರಿಸಿಕೊಂಡು ಬರುವುದು ರೂಢಿಸಿಕೊಳ್ಳಬೇಕು ಎಂದರು.
ಪಿಎಸ್‌ಐ ಬಸವರಾಜ ಕೊಳ್ಳಿ, ಎಎಸ್‌ಐ ಎಂ.ಎಸ್. ಭೂಸಗತ್ತಿ, ಶೇಖರ ಹೊಸಳ್ಳಿ, ಪ.ಪಂ ಸಿಬ್ಬಂದ ಶಂಕ್ರಪ್ಪ ದೊಡ್ಡಣ್ಣವರ, ಎಂ.ಎಚ್. ಕಾತರಕಿ, ರಾಮಚಂದ್ರ ಕಜ್ಜಿ, ಮಲ್ಲಪ್ಪ ಮಾರನಬಸರಿ, ಆರೀಫ್ ಮಿರ್ಜಾ ಸೇರಿದಂತೆ ಇತರರಿದ್ದರು

ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಗೊಲ್ಲ ಜನಾಂಗದಲ್ಲಿ ಸುಮಾರು 34 ಒಳಪಂಗಡಗಳು ಇದ್ದುದ್ದನ್ನು ಒಡೆಯದೇ ಒಂದೇ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದು ಸೂಕ್ತ ಎಂದು ಗಂಗಾವತಿ ತಾಲೂಕು ಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಪ್ರಣವಾನಂದ ಯಾದವ ಇವರು ಅಭಿಪ್ರಾಯಪಟ್ಟಿದ್ದಾರೆ.
ಅವರು ‘ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆಗಾಗಿ ಒತ್ತಾಯಿಸಿ ಜಿಲ್ಲೆಯ ಗಂಗಾವತಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಈ ಹಿಂದಿನ ಸಿದ್ದರಾಮಯ್ಯನವರ ಸರ್ಕಾರವು ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆ ಮಾಡ್ತೀನಿ ಅಂದಾಗ ವೀರಶೈವ ಸಮಾಜದವರು, ಹಿರಿಯ ಮುಂಖಡರು, ರಾಜಕೀಯ ಮುಖಂಡರು ಸೇರಿದಂತೆ ಈಗಿನ ಸಿಎಂ ಯಡಿಯೂರಪ್ಪರವರು ಸಮಾಜವನ್ನು ಒಡೆಯುತ್ತಿರುವುದು ಎಷ್ಟು ಸಮಂಜಸ ಎಂದು ಧ್ವನಿಯೆತ್ತಿದ್ದರು.
ಆದರೆ ಇದೀಗ ಕರ್ನಾಟಕದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇರುವ ನಮ್ಮ ಗೊಲ್ಲ ಸಮಾಜವನ್ನು ತಮ್ಮ ಉಪಚುನಾವಣೆಗೋಸ್ಕರ ಸುಮಾರು 6 ಲಕ್ಷ ಜನಸಂಖ್ಯೆ ಇರುವ 3 ಜಿಲ್ಲೆಗಳನ್ನು ಮಾತ್ರ ಪರಿಗಣಿಸುವುದ ಎಷ್ಟು ಸೂಕ್ತ? ಬೇರೆ ಬೇರೆ ಜಿಲ್ಲೆಗಳಲ್ಲಿ ಮುಂಬರುವ ಚುನಾವಣೆಗಳಿಗೆ ಉಳಿದ ಸುಮಾರು 34 ಲಕ್ಷ ಜನಸಂಖ್ಯೆಯ ಮತಗಳು ಬೇಡವೆಂದು ಅಥವಾ ಅವರ ಅಭಿವೃದ್ಧಿಯನ್ನು ಕಡೆಗಣಿಸುವುದು ಸರಿಯಲ್ಲ. ಇದು ನಮ್ಮ ಮೇಲೆ ಮಲತಾಯಿ ಧೋರಣೆ ಮಾಡಿದಂತಾಗುತ್ತದೆ.
ಕಾರಣ ಗೊಲ್ಲ ಸಮಾಜದ ಕ್ಷೇಮಾಭಿವೃದ್ಧಿಗಾಗಿ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ದ ಬದಲಾಗಿ ‘ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಸಮಾಜದ ಹಿರಿಯೂರು ಕ್ಷೇತ್ರದ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ ಅವರೊಂದಿಗೆ ಸಮಸ್ತ ಕರ್ನಾಟಕ ಗೊಲ್ಲ ಸಮಾಜದವರು ಸೇರಿ ಗೊಲ್ಲ ಸಮಾಜವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೊಲ್ಲಾರಿ ದುರುಗಪ್ಪ, ಕತ್ತಿ ಹನುಮಂತ, ಕೃಷ್ಣ ವಡ್ಡರಹಟ್ಟಿ, ಮಾಮಳಿ ಹನುಮಂತ ಮುಕ್ಕುಂಪಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ.ಎಂ. ವೆಂಕಟೇಶ ಆನೆಗೊಂದಿ, ಗೋವಿಂದಪ್ಪ ಸಾಯಿನಗರ, ಯಮನೂರ ಪಾಟೀಲ್, ಪರಶುರಾಮ ಮಲ್ಲಾಪುರ, ಪಾಮಣ್ಣ ಹಾಗೂ ಯಂಕಪ್ಪ ಹೆಚ್.ಆರ್.ಜಿ ನಗರ, ಯಡೆಹಳ್ಳಿ ಬಸಣ್ಣ, ಸಣ್ಣ ಕರಡೆಪ್ಪ ಗುರುವಿನ್, ಹನುಮಂತ ಹಾಗೂ ನಾಗರಾಜ ಹಣವಾಳ, ರಾಮಣ್ಣ ವೆಂಕಟಗಿರಿ ಸೇರಿದಂತೆ ಯಾದವ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಗರಿಗೆದರಿದ ಮುಂಡರಗಿ ಪುರಸಭೆ ಚುನಾವಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಧಿಕಾರದ ಗದ್ದುಗೆ ಏರಲು ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.
ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನವು (ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಾಗಿದ್ದು) ಉಪಾಧ್ಯಕ್ಷ ಸ್ಥಾನವು (ಹಿಂದುಳಿದ ಅ ವರ್ಗಕ್ಕೆ ) ಮೀಸಲಾಗಿದೆ. ಈವರೆಗೂ ತಟಸ್ಥವಾಗಿದ್ದ ಪುರಸಭೆ ರಾಜಕೀಯ ಈಗ ಗರಿಗೆದರಿದೆ. ಮುಂಡರಗಿ ಪಟ್ಟಣದಲ್ಲಿ ಎಲ್ಲಾ ಸದಸ್ಯರು ಮುಖಂಡರುಗಳ ಮನೆಗಳತ್ತ ದೌಡಾಯಿಸುತ್ತಿದ್ದಾರೆ
2019 ಮೇ 29ರಂದು ಪಟ್ಟಣದ ಪುರಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮೇ.31 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಹದಿನೇಳು ತಿಂಗಳು ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿರಲಿಲ್ಲ. ಸರ್ಕಾರ ಈಗ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ.
ಪುರಸಭೆಯು ಒಟ್ಟು 23 ವಾರ್ಡ್‌ಗಳ ಪೈಕಿ 12 ಬಿಜೆಪಿ, 6 ಕಾಂಗ್ರೆಸ್, 1 ಜೆಡಿಎಸ್ ಹಾಗೂ 4 ಸ್ಥಾನಗಳಿಗೆ ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಿಜೆಪಿ ಬಹುಮತ ಇರುವ ಹಿನ್ನೆಲೆ ಬಿಜೆಪಿ ಅಧಿಕಾರ ಗದ್ದುಗೆ ಏರುವುದು ಪಕ್ಕಾ ಆಗಿದೆ. ಬಿಜೆಪಿ ಸದಸ್ಯರ ಜೊತೆಗೆ ಓರ್ವ ಶಾಸಕ ಮತ್ತು ಓರ್ವ ಸಂಸದ ಸೇರಿ ಎರಡು ಮತಗಳು ಬಿಜೆಪಿಗೆ ಬರಲಿವೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸುಲಭವಾಗಲಿದೆ.
ಹಿಂದುಳಿದ ಬ ವರ್ಗ ಮಹಿಳೆ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಸಧ್ಯ ಬಿಜೆಪಿಯಲ್ಲಿ 7ನೇ ವಾರ್ಡ್‌ನ ಸದಸ್ಯೆ ಕವಿತಾ ಅಂದಪ್ಪ ಉಳ್ಳಾಗಡ್ಡಿ ಇವರು ಒಬ್ಬರೇ ಇದ್ದಾರೆ. ಹೀಗಾಗಿ ಕವಿತಾ ಅವರು ಅಧ್ಯಕ್ಷೆ ಆಗುವುದಕ್ಕೆ ಯಾವುದೇ ಪೈಪೋಟಿ ಇಲ್ಲದೆ ಅಧಿಕಾರದ ಚುಕ್ಕಾಣಿ ಕಮಲದ ಪರವಾಗಿದೆ .
ಹಿಂದುಳಿದ ಅ ವರ್ಗ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪ್ರಥಮ ಬಾರಿಗೆ ಪುರಸಭೇಗೆ ಆಯ್ಕೆಯಾದ ಸದಸ್ಯರು ಟಿ.ಬಿ.ದಂಡಿನ, ಶಿವಪ್ಪ ಚಿಕ್ಕಣ್ಣವರ, ಗಂಗಿಮಾಳವ್ವ ಮೋರನಾಳ, ನಿರ್ಮಲಾ ಕೊರ್ಲಹಳ್ಳಿ, ವೀಣಾದೇವಿ ಸೋನಿ ಹಾಗೂ ಶಿವಾನಂದ ಬಾರಕೇರ ಇದ್ದಾರೆ. ಇವರಲ್ಲಿ ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದು ಕಾದು ನೋಡಬೇಕಿದೆ.

error: Content is protected !!