Home Blog Page 2169

ನೂರು ಕೋಟಿ ದಾಟಿದ ರಾಮಮಂದಿರದ ದೇಣಿಗೆ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಆ.5ರಂದು ರಾಮಮಂದಿರದ ಭೂಮಿಪೂಜೆ ನಡೆದ ಬಳಿಕ ₹100 ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ ಎಂದು ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿದೆ.

ವಿದೇಶಗಳಿಂದಲೂ ದೇಣಿಗೆ ಬಂದಿದ್ದು, ಇವುಗಳನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ. ಜೊತೆಗೆ 200 ಕೆ.ಜಿ ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳು ದೇಣಿಗೆಯಾಗಿ ಬರುತ್ತಿವೆ’ ಎಂದು ಟ್ರಸ್ಟ್‌ನ ಪ್ರಕಾಶ್‌ ಗುಪ್ತಾ ತಿಳಿಸಿದರು.

ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ ನಗರದ ಒಂದು ಭಾಗದಿಂದ ರಾಮಮಂದಿರದ ಆವರಣಕ್ಕೆ ರೋಪ್‌ವೇ ನಿರ್ಮಾಣದ ಚಿಂತನೆಯೂ ಇದ್ದು, ಈ ಕುರಿತು ಯುರೋಪ್‌ ಮೂಲದ ಕಂಪನಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಮಂದಿರ ನಿರ್ಮಾಣ ಚಟುವಟಿಕೆಯೂ ಚುರುಕು ಪಡೆದಿದೆ’ ಎಂದು ಅಯೋಧ್ಯೆ ಮಹಾನಗರ ಪಾಲಿಕೆ ಆಯುಕ್ತ ವಿಶಾಲ್‌ ಸಿಂಗ್‌ ತಿಳಿಸಿದರು.

ದೇವಾಲಯದ ಜಾಗ ಒತ್ತುವರಿ ಪ್ರಶ್ನಿಸಿದ ಅರ್ಚಕನನ್ನೇ ಸುಟ್ಟುಹಾಕಿದ ದುಷ್ಕರ್ಮಿಗಳು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಜೈಪುರ: ಭೂಮಿ ವಿವಾದ ಸಂಬಂಧ ದೇವಾಲಯದ ಅರ್ಚಕನನ್ನು ಜೀವಂತವಾಗಿ ಸುಟ್ಟಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಸುಟ್ಟ ಗಾಯಗಳಿಂಡ ಬಳಲುತ್ತಿದ್ದ ಅರ್ಚಕ ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಕರೌಲಿ ಜಿಲ್ಲೆಯ ಸಪೋತ್ರಾದಲ್ಲಿ ನಡೆದ ಘಟನೆಯಲ್ಲಿ ದೇವಾಲಯದ ಅರ್ಚಕ ಬಾಬುಲಾಲ್ (50) ಸಾವಿಗೀಡಾಗಿದ್ದಾರೆ. ಇವರ ಮೇಲೆ ಒಂದೇ ಕುಟುಂಬದ ಆರು ಮಂದಿ ಸೇರಿ ಬೆಂಕಿ ಹಚ್ಚಿದ್ದಾರೆಂದು ಸಾವಿಗೆ ಮುನ್ನ ನೀಡಿದ ಹೇಳಿಕೆಯಲ್ಲಿ ಬಾಬುಲಾಲ್ ವಿವರಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೈಲಾಶ್ ಮೀನಾನ ಬಂಧನವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಲಾಗಿದೆ. ಇತರೆ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕರೌಲಿಯ ಎಸ್ಪಿ ಮೃದೂಲ್ ಕಚ್ವಾ ಹೇಳಿದ್ದಾರೆ. ಇದೇ ವೇಳೆ ಕೈಲಾಶ್ ಮೀನಾ ಅವರ ಇಡೀ ಕುಟುಂಬ ಈ ಘಟನೆಗೆ ಕಾರಣವಾಗಿದೆ ಎಂದು ಅರ್ಚಕರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಅರ್ಚಕರಿಗೆ ಸುಮಾರು 5.2 ಎಕರೆ ಜಮೀನು ಇದ್ದು ಗ್ರಾಮದ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್‌ಗೆ ಸೇರಿದ ಜಮೀನು ಇದಾಗಿದೆ. ಆದರೆ ಈ ಭೂಮಿಯನ್ನು ಪ್ರಧಾನ ಅರ್ಚಕರ ಕುಟುಂಬಕ್ಕೆ ನೀಡಲಾಗಿತ್ತು.

ಚೆನ್ನೈಗೆ ಸೋಲು: ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಸತತವಾಗಿ ಸೋಲುತ್ತಿದೆ. ಅದಕ್ಕಿಂತ ಆಘಾತಕಾರಿ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ಕೇಳಿಬಂದಿದೆ. ಧೋನಿ ಕಳಪೆಯಾಟವಾಡಿದ್ದಕ್ಕೆ ಅವರ 5 ವರ್ಷದ ಪುಟ್ಟ ಮಗಳು ಜಿವಾರನ್ನು ಅತ್ಯಾಚಾರ ಮಾಡಬೇಕು ಎಂದು ಹೇಳುವ ವಿಕೃತಿಯೂ ಪ್ರಕಟವಾಗಿದೆ. ಇದೆಲ್ಲ ಆಗಿದ್ದು ಬುಧವಾರ ಚೆನ್ನೈ ಕಿಂಗ್ಸ್‌ ತಂಡ ಕೋಲ್ಕತ ವಿರುದ್ಧ ಸೋತ ನಂತರ.

ಬರೀ 5 ವರ್ಷದ, ಪುಟ್ಟ ಕೈ, ಪುಟ್ಟ ಕಾಲುಗಳನ್ನಿಟ್ಟುಕೊಂಡು ಈಗಷ್ಟೇ ಹೆಜ್ಜೆ ಹಾಕುವುದನ್ನು ಕಲಿಯುತ್ತಿರುವ, ತೊದಲು ಮಾತನಾಡುತ್ತಿರುವಆಮಗುವನ್ನು ಅತ್ಯಾ ಚಾರ ಮಾಡಬೇಕು ಎಂಬ ಮಟ್ಟಿಗೆ ಆಕ್ರೋಶ ವ್ಯಕ್ತವಾಗಿದೆ. ಇದು ಕ್ರಿಕೆಟ್‌ ಮೇಲಿನ ಪ್ರೀತಿಯೋ? ನಮ್ಮಲ್ಲಿಡಗಿರುವ ನರರಾಕ್ಷಸ ತನವೋ? ಹೀಗೆಂದು ಸಾಮಾಜಿಕ ತಾ ದಲ್ಲಿಭಾರೀಚರ್ಚೆಗಳು ಶುರುವಾಗಿವೆ.

ಮಿ.ವಿಜಯ್‌ ಎಂಬಾತ ಹೀಗೆಂದು ಕ್ರೂರವಾಗಿ ಹೇಳಿದ್ದರ ಸ್ಕ್ರೀನ್‌ಶಾಟನ್ನು ಆಯುಷ್‌ ವರ್ಮ ಎನ್ನುವವರು ಟ್ವೀಟ್‌ ಮಾಡಿದ್ದಾರೆ. ಮಾಮೂಲಿಯಾಗಿ ತಮ್ಮ ಮೆಚ್ಚಿನ ತಂಡ ಸೋತಾಗ ಅಭಿಮಾನಿಗಳು ಬೈಯುವುದು, ಅಸಹನೆ ವ್ಯಕ್ತಪಡಿಸುವುದು, ವಾಚಾಮಗೋಚರ ಹೀಗಳೆಯುವುದು ಇದ್ದಿದ್ದೇ. ಈ ಮಟ್ಟಕ್ಕೆ ಪ್ರತಿಕ್ರಿಯಿಸಿದ್ದು ಎಂತಹವರಿಗೂ ಬೇಸರ ತರಿಸುತ್ತದೆ.

ಬಹುಶಃ ಇದು ಸಾಮಾಜಿಕ ತಾಣದ ಪರಿಣಾಮ ಎಂದರೂ ಅಚ್ಚರಿಯಿಲ್ಲ. ಯಾವ ರೀತಿಯ ಮಾತುಗಳನ್ನಾದರೂ ಎಗ್ಗಿಲ್ಲದೇ ಆಡುವುದಕ್ಕೆ ಸಾಮಾಜಿಕ ತಾಣಗಳು ಅವಕಾಶ ಮಾಡಿಕೊಡುತ್ತವೆ. ಹಾಗಾಗಿಯೇ ಈ ರೀತಿಯ ಮಾತುಗಳುಕೇಳಿ ಬರುತ್ತಿವೆ.

ಚೆನ್ನೈ ತಂಡದಲ್ಲಿರುವುದೆಂದರೆ ಸರ್ಕಾರಿ ನೌಕರಿ: ಸೆಹ್ವಾಗ್ ವ್ಯಂಗ್ಯ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮದು ‘ಸರ್ಕಾರಿ ನೌಕರಿ’ ಅಂದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವ್ಯಂಗ್ಯ ಮಾಡಿದ್ದಾರೆ.

ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 168 ರನ್‌ಗಳ ಗೆಲುವಿನ ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದ್ದ ಚೆನ್ನೈ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳ ಮೇಲೆ ವೀರೂ ಚಾಟಿ ಬೀಸಿದ್ದಾರೆ.

‘ಸುಲಭವಾಗಿ ಜಯಿಸಬೇಕಾದ ಗುರಿ ಅದಾಗಿತ್ತು. ಆದರೆ ಕೇದಾರ್ ಜಾಧವ್ ಹೆಚ್ಚು ಡಾಟ್ ಬಾಲ್ ಆಡಿದ್ದರು. ಆದ್ದರಿಂದ ರವೀಂದ್ರ ಜಡೇಜಾಗೆ ಹೆಚ್ಚು ಅವಕಾಶ ಸಿಗಲಿಲ್ಲ’ ಎಂದು ಸೆಹ್ವಾಗ್ ಇಂಗ್ಲಿಷ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಆ ಪಂದ್ಯದಲ್ಲಿ ಕೇದಾರ್ 12 ಎಸೆತಗಳಲ್ಲಿ ಏಳು ರನ್ ಗಳಿಸಿದ್ದರು.

‘ಸಿಎಸ್‌ಕೆಯಲ್ಲಿರುವುದು ಸರ್ಕಾರಿ ನೌಕರಿ ಎಂದು ಕೆಲವರು ಭಾವಿಸಿದಂತಿದೆ. ಚೆನ್ನಾಗಿ ಆಡಲಿ ಬಿಡಲಿ ವೇತನವಂತೂ ಸಿಗುತ್ತದೆ ಎಂಬ ಭಾವನೆಯಲ್ಲಿದ್ದಾರೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

ಹೋದ ವಾರ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿಯೂ ಚೆನ್ನೈ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು.

10.10.2020 ಮದುವೆಗೆ ಭಾರೀ ಡಿಮಾಂಡ್‌!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಭಾರತದಲ್ಲಿ ಅಮೃತ ಸಿದ್ಧಿಯೋಗದಂಥ ವಿಶೇಷ ದಿನಗಳಲ್ಲಿ ಹೆಚ್ಚು ಮದುವೆಗಳು, ಗೃಹಪ್ರವೇಶಗಳು ನಡೆಯುವುದು ವಾಡಿಕೆ. ಇಂಥ ಯಾವುದೇ ಧಾರ್ಮಿಕ ಕಾರಣವಿಲ್ಲದಿದ್ದರೂ ಸಿಂಗಾಪುರದಲ್ಲಿ ಅ.10ರಂದು 876 ಮದುವೆಗಳು ಜರಗಲಿದ್ದು, ಈ ವಿಷಯ ಖುದ್ದು ಅಲ್ಲಿನ ಜನರೇ ಹುಬ್ಬೇರಿಸುವಂತೆ ಮಾಡಿದೆ.

ಸಿಂಗಾಪುರದ ರಿಜಿಸ್ಟ್ರಿ ಆಫ್ ಮ್ಯಾರೇಜಸ್‌ (ಆರ್‌ಒಎಂ) ಹಾಗೂ ರಿಜಿಸ್ಟ್ರಿ ಆಫ್ ಮುಸ್ಲಿಂ ಮ್ಯಾರೇಜಸ್‌ (ಆರ್‌ಒಎಂಎಂ) ಕಚೇರಿಗಳಿಗೆ 876 ವಿವಾಹ ನೋಂದಣಿ ಅರ್ಜಿಗಳು ಬಂದಿದ್ದು, ಅ. 10ರಂದು ಅತೀ ಹೆಚ್ಚು ಮದುವೆಗಳು ಜರಗಲಿರುವುದಕ್ಕೆ ಸಾಕ್ಷಿಯಾಗಿದೆ.

ಇದರ ಹಿಂದಿನ ಕಾರಣವನ್ನು ಸಿಂಗಾಪುರದ ವೆಡ್ಡಿಂಗ್‌ ಪ್ಲಾನರ್ಸ್‌ ಹಾಗೂ ಅಲ್ಲಿನ ಸಂಪ್ರದಾಯದ ಪುರೋಹಿತರು ಬಹಿರಂಗಪಡಿಸಿದ್ದಾರೆ.

ಈ ವರ್ಷದ ಅಕ್ಟೋಬರ್‌ 10ನೇ ದಿನಾಂಕ ವಿಶೇಷವಾಗಿದೆ. ಆ ದಿನವನ್ನು “ಟೆನ್‌-ಟೆನ್‌-ಟ್ವೆಂಟಿ ಟ್ವೆಂಟಿ’ (10-10-2020) ಎಂದು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಹಾಗಾಗಿ, ಹೆಚ್ಚಿನ ಜೋಡಿಗಳು ಈ ದಿನಾಂಕವನ್ನೇ ಮದುವೆಗೆ ಆಯ್ಕೆ ಮಾಡಿವೆ ಎಂದು ಅವರು ಹೇಳಿದ್ದಾರೆ.

ಕೊಪ್ಪಳ ಎಸ್ಪಿ ಜಿ.ಸಂಗೀತಾ ವರ್ಗಾವಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಟಿ.ಶ್ರೀಧರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಜಿ.ಸಂಗೀತಾ ಅವರನ್ನು ವರ್ಗಾವಣೆಗೊಳಿಸಿದೆ. ಸಂಗೀತಾ ಅವರ ವರ್ಗಾವಣೆಗೊಳ್ಳುವ ವಿಚಾರ ಕಳೆದೊಂದು ವಾರದಿಂದ ಚಾಲ್ತಿಯಲ್ಲಿತ್ತು. ನೂತನವಾಗಿ ಎಸ್ಪಿಯಾಗಿ ನೇಮಕಗೊಂಡಿರುವ ಟಿ.ಶ್ರೀಧರ್ ಅವರು ಈ ಮೊದಲು ಬೆಂಗಳೂರು ಗುಪ್ತಚರ ವಿಭಾಗದಲ್ಲಿದ್ದ ಕರ್ತವ್ಯ ನಿರ್ವಹಿಸಿದ್ದರು.

ಎಸ್ಪಿ ಜಿ.ಸಂಗೀತಾ ಮತ್ತು ಇತರ ಪೊಲೀಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಕೊನೆಗೂ ಈ ತೆರೆಮರೆಯ ಕಸರತ್ತು ಬಿಜೆಪಿ ಜನಪ್ರತಿನಿಧಿಗಳ ಅಂಗಳಕ್ಕೆ ಹೋಗಿತ್ತು. ಬಳಿಕ ಬಿಜೆಪಿ ನಾಯಕರಲ್ಲೇ ಈ ವಿಷಯವಾಗಿ ಬಣಗಳು ಹುಟ್ಟಿಕೊಂಡಿದ್ದವು. ಕೊನೆಗೂ ಒಂದು ಬಣ ಸಂಗೀತಾ ಅವರನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ರಾಜ್ಯದಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಬೆಳೆಯನ್ನು ರೈತರು ನಾಟಿ ಮಾಡಿದ್ದಾರೆ. ಸರ್ಕಾರ ತಕ್ಷಣ ರೈತರ ಹಿತ ಕಾಪಾಡಿ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ವಿಎಸ್‌ಎಸ್‌ಎನ್ ನಿರ್ದೇಶಕ ವಿಶ್ವನಾಥ ಮಾಲಿಪಾಟೀಲ್ ಒತ್ತಾಯಿಸಿದ್ದಾರೆ.
ಕೊರೋನಾ ಸೋಂಕಿನ ಸಂಕಷ್ಟದಲ್ಲಿಯೂ ಮಾರುಕಟ್ಟೆಯಲ್ಲಿ ಭತ್ತದ ಬೆಳೆಗೆ ಸೂಕ್ತ ಬೆಲೆ ಸಿಗುವ ಬಗ್ಗೆ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಭತ್ತದ ಬೆಳೆಗಳಿಗೆ ನಾನಾ ರೋಗಗಳು ಬರುತ್ತಿವೆ.
ಇದರಿಂದ ಈಗಾಗಲೇ ಅರ್ಧದಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು. ಜೊತೆಗೆ ಸಿಎಂ ತಕ್ಷಣವೇ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿಶ್ವನಾಥ್ ಮಾಲಿಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಗಯ್ಯಸ್ವಾಮಿಯನ್ನು ನಗರಸಭೆ ನಾಮನಿರ್ದೇಶಿತ ಸದಸ್ಯನಾಗಿ ನೇಮಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಬಿಜೆಪಿಯ ನಿಷ್ಠಾವಂತ ಮುಖಂಡ ಸಂಗಯ್ಯಸ್ವಾಮಿ ಸಂಶೀಮಠ ಅವರಿಗೆ ಗಂಗಾವತಿ ನಗರಸಭೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವಂತೆ ಒತ್ತಾಯಿಸಿ ವೀರಶೈವ ಲಿಂಗಾಯತ ಯುವ ವೇದಿಕೆಯ ಪದಾಧಿಕಾರಿಗಳು ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಶರಣಯ್ಯಸ್ವಾಮಿ ಮರಳಿಮಠ ನೇತೃತ್ವದಲ್ಲಿ ಶಾಸಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಶರಣಯ್ಯಸ್ವಾಮಿ ಮರಳಿಮಠ ಮಾತನಾಡಿ, ಸಂಗಯ್ಯಸ್ವಾಮಿ ಅವರು ಸುಮಾರು ೨೦ ವರ್ಷಗಳಿಂದಲೂ ಭಾರತೀಯ ಜನತಾ ಪಾರ್ಟಿಯಲ್ಲಿ ಹಗಲಿರುಳು ಶ್ರಮಿಸುತ್ತಾ ಬಂದಿದ್ದಾರೆ. ಅಲ್ಲದೇ ಹಿಂದೆಯೂ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಪಕ್ಷವನ್ನು ಕಟ್ಟಿದ್ದಾರೆ. ಅಲ್ಲದೆ, ಎರಡು ಬಾರಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡೂ ಬಾರಿಯ ಸೋತರೂ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ ಎಂದರು.
ಸಂಗಯ್ಯಸ್ವಾಮಿ ಸದ್ಯ ವೀರಶೈವ ಲಿಂಗಾಯತ ಯುವ ವೇದಿಕೆಯ ನಗರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ನಾಮನಿರ್ದೇಶನ ಮಾಡುವುದರ ಜೊತೆಗೆ ಜಂಗಮ ಸಮಾಜಕ್ಕೆ ಸ್ಥಾನಮಾನ ನೀಡಬೇಕೆಂದು ಅವರು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಲಿಂಗಯ್ಯಸ್ವಾಮಿ ಹಿರೇಮಠ, ತಾಲೂಕು ಅಧ್ಯಕ್ಷ ಡಾ.ಮಹೇಶ ಹೊಸಮನಿ, ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರಾದ ವೀರಭದ್ರಯ್ಯ ಮೈಲಾಪೂರು ಹಿರೇಮಠ, ವಿ.ಜಿ.ಹಿರೇಮಠ, ವೀರಯ್ಯಸ್ವಾಮಿ ಸಂಶಿಮಠ, ಸೋಮನಾಥ ಸೇರಿದಂತೆ ಇತರರು ಇದ್ದರು.

ಸತ್ಯ, ಪ್ರಾಮಾಣಿಕತೆಯ ವ್ಯಕ್ತಿಗೆ ಹೆಚ್ಚು ಗೌರವ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ಸಂಘ, ಸಂಸ್ಥೆ, ಸರಕಾರಿ ಸೇವೆ, ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಪ್ರಾಮಾಣಿಕತೆ, ಸತ್ಯ, ನಿಷ್ಠೆಯಿಂದ, ದುಡಿದರೇ ಸಮಾಜದಲ್ಲಿ ಹೆಚ್ಚು ಗೌರವ ಸಿಗುವುದು. ಅಂತಹ ಜೀವನವನ್ನು ಸೇವಾ ಅವಧಿಯಲ್ಲಿ ರೂಢಿಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರು, ತಾಲೂಕಾ ಕೃಷಿಕ ಸಮಾಜ ಅಧ್ಯಕ್ಷರು, ಗದಗ ಜಿಲ್ಲಾ ಶ್ರೇಷ್ಠ ವರ್ತಕ ಪ್ರಶಸ್ತಿ ಪುರಸ್ಕೃತರು, ನಂಜನಗೂಡ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳಮಠ ಇಲ್ಲೂರ ತೋಟ ಗೌರವ ವಿಚಾರಣಾಕರ್ತ ನಾರಾಯಣ ಹ ಇಲ್ಲೂರ, ಹೇಳಿದರು.
ಇಲ್ಲಿಯ ರಾಯರ ಮಠದಲ್ಲಿ ಜ ಅನ್ನದಾನೀಶ್ವರ ವಿದ್ಯಾ ಸಮಿತಿಯಲ್ಲಿ 33 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಹಾಜಿ ಹುಸೇನಬಾಷುಸಾಬ ಮುಲ್ಲಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಂತ್ರಾಲಯ ರಾಯರ ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಅನ್ಯೋನ್ಯ ಬಾಂಧವ್ಯವಿದೆ. ಮುಲ್ಲಾ ಮನೆತನಕ್ಕೂ ಇಲ್ಲೂರ ಮನೆತನಕ್ಕೂ ನೂರಾರೂ ವರ್ಷಗಳಿಂದ ಅವಿನಾನುಭಾವ ಸಂಬಂಧವಿದೆ. ಇಲ್ಲೂರ ಮನೆತನಕ್ಕೆ ಮುಲ್ಲಾ ಅವರ ಕೊಡುಗೆ , ಸೇವೆ ಅಮೂಲ್ಯವಾಗಿದೆಂದರು.
ಬೆಲ್ಲದ ಕಾಲೇಜ ಕಮಿಟಿ ಮಾಜಿ ಉಪಕಾರ್ಯಾಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಕಾಂತರಾಜ ಹಿರೇಮಠ ಮಾತನಾಡಿ, ಭಕ್ತಿ, ಶ್ರದ್ಧೆ, ವಿಶ್ವಾಸ, ಸೇವೆಯಲ್ಲಿದ್ದರೇ ಸಮಾಜ ಪ್ರೋತ್ಸಾಹಿಸುವುದು ಎಂದು ತಿಳಿಸಿ, ಮುಲ್ಲಾ ಅವರ ಸೇವೆ ಇಂದಿನ ಸಮಾಜಕ್ಕೆ ಹಾಗೂ ಸೇವಾಕರ್ತರಿಗೆ, ನೌಕರರಿಗೆ ಮಾರ್ಗದರ್ಶನವಾಗಿದೆ ಎಂದರು.
ಅಂಜುಮನ್ ಏ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷರು, ತಾಲೂಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಬಿಸಾಬ ಕೆಲೂರ, ಪುರಸಭಾ ಸದಸ್ಯರು, ಹೋರಾಟಗಾರ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಮುಲ್ಲಾ ಅವರ ಸೇವೆಯನ್ನು ಪ್ರಶಂಸನೆ ಮಾಡಿದರು.
ಸಮಾರಂಭದಲ್ಲಿ ಗೋವಿಂದರಾಜ ಹೆಗ್ಗಡಾಳ, ಪುರಸಭಾ ಸದಸ್ಯ ರಾಜಾಭಕ್ಷಿ ಬೆಟಗೇರಿ, ಶಿವಪ್ಪ ಚಿಕ್ಕಣ್ಣವರ, ಸಂತೋಷ ಹಿರೇಮನಿ, ಧ್ರುವ ಹೂಗಾರ, ಗೌಸ ಮೋದಿನ ಮಕಾಂದಾರ, ಮೌಲಾಸಾಬ ಬಾಗವಾನ, ಮಲ್ಲೇಶ ಹರಿಜನ, ಸಂಗಪ್ಪ ಕಂಬಳ್ಯಾಳ, ಸುರೇಶ ಹಲವಾಗಲಿ, ಹಾಜಿ ಬಾಬುಸಾಬ ನಾಗರಹಳ್ಳಿ, ಎ ಕೆ ಮುಲ್ಲಾನವರ, ಎಂ ಎಚ್ ತಳಗಡೆ, ಶಿವರಾಜ ಅಸುಂಡಿ, ನಾಗರಾಜ ಹಾನಗಲ್ಲ, ಕೃಷ್ಣ ಆರ್ ಸಾವುಕಾರ, ಮಂಜಪ್ಪ ದಂಡಿನ, ಪ್ರವೀಣ ವಡ್ಡಟ್ಟಿ, ನಿಂಗರಾಜ ಮೇಗಲಮನಿ, ಶಿವಾನಂದ ದೊಡ್ಡಮನಿ, ಕಾಸೀಂಮಸಾಬ ಕೊಕ್ಕರಗುಂದಿ, ಗಣೇಶ ಹಾತಲಗೇರಿ, ಮೊದಲಾದವರಿದ್ದರು. ಪತ್ರಕರ್ತ ದಿಲೀಪಕುಮಾರ ಜೋಶಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಶಿಕ್ಷಕರಿಗೂ ಪ್ಯಾಕೇಜ್ ಘೋಷಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಾರ್ಮಿಕ ವಲಯಕ್ಕೆ ಕೊರೋನಾ ಪ್ಯಾಕೇಜ್ ನೀಡಿದಂತೆ ನಮಗೂ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಬಿಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮನೋಜ್ ಸ್ವಾಮಿ ಹಿರೇಮಠ ನೇತೃತ್ವದಲ್ಲಿ ಜಿಲ್ಲೆಯ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿದ ನೂರಾರು ಶಿಕ್ಷಕರು, ಬಿಇಒ ಸೋಮಶೇಖರಗೌಡ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ತಲುಪಿಸುವಂತೆ ತಿಳಿಸಿದರು.
ಈ ಕುರಿತು ಮಾತನಾಡಿದ ಮನೋಜ್ ಸ್ವಾಮಿ, ಕೊವಿಡ್ -19 ಬಂದ ನಂತರ ಅನೇಕ ವರ್ಗಗಳಿಗೆ, ಕಾರ್ಮಿಕರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಿರುವುದು ಶ್ಲಾಘನೀಯ, ಆದರೆ ಕೊವಿಡ್ -19 ಬಂದ ನಂತರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಖಾಸಗಿ ಶಾಲಾ ಶಿಕ್ಷಕರು ಸಂಬಳವಿಲ್ಲದ ಅಕ್ಷರಶಃ ಬೀದಿಗೆ ಬಂದಿರುವುದು ತಮ್ಮ ಗಮನಕ್ಕೂ ಬಂದಿದೆ. ರಾಜ್ಯದಲ್ಲಿ ಅನೇಕ ಕಡೆ ಅಕ್ಷರ ಕಲಿಸುವ ಶಿಕ್ಷಕರು ತಮ್ಮ ಜೀವನ ನಿರ್ವಹಣೆಗಾಗಿ ಬೀದಿ – ಬೀದಿಗಳಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ.
ಮನೆ ಬಾಡಿಗೆಗಾಗಿ ಕೂಲಿ ನಾಲಿ ಮಾಡುವ ಪರಿಸ್ಥಿತಿ ಬಂದಿರುವುದು ದುರಂತವೇ ಸರಿ. ತಮ್ಮ ನೇತೃತ್ವದ ಸರ್ಕಾರ ಬಂದಾಗಲೆಲ್ಲ ನೌಕರರ ಹಿತ ಕಾಪಾಡುತ್ತಿರುವುದು ಹೆಮ್ಮೆಯ ವಿಷಯ. ಆದರೆ ಈ ಕೊವಿಡ್ -19 ಅನುದಾನರಹಿತ ಶಿಕ್ಷಕರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ್ದು, ನಮ್ಮ ಸರ್ಕಾರದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಖಾಸಗಿ ಶಾಲಾ ಶಿಕ್ಷಕರ ಹಿತ ಕಾಪಾಡುತ್ತೀರಿ ಎನ್ನುವ ನಂಬಿಕೆಯಿದ್ದು ಮಾರ್ಚ ತಿಂಗಳಿನಿಂದ ಇಲ್ಲಿಯವರೆಗೆ ಮತ್ತು ಮುಂದೆ ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂದು ಬಕಪಕ್ಷಿಯಂತೆ ಕಾಯುತ್ತಿರುವ ಖಾಸಗಿ ಶಿಕ್ಷಕರಿಗೆ / ಶಿಕ್ಷಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಬೊಗೇಶ್ ದೇಶಪಾಂಡೆ, ಸಹ ಕಾರ್ಯದರ್ಶಿ ವೀರುಪಾಕ್ಷಗೌಡ ಪೊಲೀಸ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಕರುಣಾಕರ್ ಹೂಗಾರ, ಪದಾಧಿಕಾರಿಗಳಾದ ಹುಲಗಪ್ಪ.ಎ, ಬಸವರಾಜ ಕುಂಬಾರ್, ಸಿದ್ದಯ್ಯ ಹಿರೇಮಠ, ಸಿದ್ದಯ್ಯ ತೊಂಡಿಹಾಳ್, ಕೃಷ್ಣ ಜೋಷಿ, ಅನಿಲ್ ಕುಮಾರ್.ಕೆ, ಪ್ರದೀಪ್, ಕೆಂಚಪ್ಪ, ಪ್ರವೀಣಕುಮಾರ್, ಸೋಮಶೇಖರ್, ಕನಕಾಚಲ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು..
 

error: Content is protected !!