Home Blog Page 2171

ಕರಪತ್ರದಲ್ಲಿ ಮುದ್ರಕರ ಹೆಸರು, ವಿಳಾಸ ಕಡ್ಡಾಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಜಾಹೀರಾತು, ಮಾಹಿತಿ ಪ್ರಕಟಿಸುವವರು ಪ್ರತಿಯ ಮೇಲೆ ಪ್ರಕಾಶಕರು, ಮುದ್ರಕರ ಹೆಸರು, ವಿಳಾಸ ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುದ್ರಣ ಸಂಸ್ಥೆ, ಕೇಬಲ್ ಆಪರೇಟರ್ ಹಾಗೂ ಚಲನಚಿತ್ರ ಮಂದಿರಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಸ್ಲಿಪ್, ಅಭ್ಯರ್ಥಿಯ ಹೆಸರು ಮತಹಾಕಿ ಎನ್ನುವ ಮಾಹಿತಿ ವಿಷಯದ ಮುದ್ರಣಕ್ಕೆ ಜಿಲ್ಲಾ ಎಂಸಿಎಂಸಿ ಸಮಿತಿಯ ಪೂರ್ವಾನುಮತಿ ಅವಶ್ಯಕವಿಲ್ಲ. ಆದರೆ ಮುದ್ರಿಸಿದ ವಿಷಯದ ಪ್ರತಿ ಹಾಗೂ ವೆಚ್ಚದ ವಿವರವನ್ನು ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಅಭ್ಯರ್ಥಿಯ ಸಾಧನೆಯ ಕುರಿತು ಕಿರುಹೊತ್ತಿಗೆ, ಕರಪತ್ರ ಮುದ್ರಣದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗವುಂತಹ ವಿಷಯಗಳನ್ನು ಮುದ್ರಿಸಬಾರದು. ನಿಯಮ ಉಲ್ಲಂಘನೆಯಾದಲ್ಲಿ ಅಂತಹ ಮುದ್ರಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಟಿ.ವಿ., ಕೇಬಲ್ ನೆಟ್‌ವರ್ಕ್, ರೇಡಿಯೋ, ಸಾಮಾಜಿಕ ಜಾಲತಾಣ, ಇ-ಪೇಪರ್ ಮೂಲಕ ಚುನಾವಣಾ ಜಾಹೀರಾತು ನೀಡುವವರು ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳಾಗಿದ್ದಲ್ಲಿ ಕನಿಷ್ಟ ಮೂರು ದಿನ ಮುಂಚಿತವಾಗಿ, ಸಂಘ ಸಂಸ್ಥೆಗಳಿದ್ದಲ್ಲಿ ಕನಿಷ್ಠ ೭ ದಿನಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು ಎಂದರು.
ಅರ್ಜಿ ನಮೂನೆಯಲ್ಲಿ ಎಲ್ಲ ಅವಶ್ಯಕ ವಿವರ ಮತ್ತು ಜಾಹೀರಾತು ವಿಷಯದ ಎಲೆಕ್ಟ್ರಾನಿಕ್ ಟ್ರಾನ್ಸ್‌ಸ್ಕ್ರಿಪ್ಷನ್ ಹಾಗೂ ಆ ವಿಷಯದ ಸಂಪೂರ್ಣ ವಿವರದ ಧೃಡೀಕೃರಿಸಿದ ಸ್ಕ್ರಿಪ್ಟ (ಬರವಣಿಗೆ ರೂಪದಲ್ಲಿ) ತಲಾ ಎರಡು ಪ್ರತಿಗಳನ್ನು ಸಲ್ಲಿಸಬೇಕು. ಈ ಜಾಹೀರಾತಿನ ತಯಾರಿಕಾ ವೆಚ್ಚ ತಿಳಿಸಬೇಕು.
ಟಿ.ವಿ. ಕೇಬಲ್, ಸಾಮಾಜಿಕ ಜಾಲತಾಣ, ರೇಡಿಯೋ, ಇ-ಪೇಪರ್‌ಗಳ ಪ್ರದರ್ಶನ ವೆಚ್ಚ ಹಾಗೂ ವೇಳಾಪಟ್ಟಿಯನ್ನು ವಿವರವಾಗಿ ನೀಡಬೇಕು. ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯು ಪ್ರಯೋಜನಕ್ಕೆ ಜಾಹೀರಾತನ್ನು ಬಳಸಿಕೊಳ್ಳುತ್ತಿರುವ ಪ್ರಮಾಣಪತ್ರ ಸಲ್ಲಿಸಬೇಕು. ಜಾಹೀರಾತುಗಳ ವೆಚ್ಚವನ್ನು ಚೆಕ್ ಅಥವಾ ಡಿಡಿ ಮೂಲಕ ಪಾವತಿಸುವುದಾಗಿ ಅರ್ಜಿದಾರರು ಪ್ರಮಾಣೀಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಆನಂದ್ ಕೆ. ಮಾತನಾಡಿ, ಮುದ್ರಕರು ಪ್ರಚಾರ ಸಾಮಗ್ರಿ ಮುದ್ರಣದಲ್ಲಿ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಮುದ್ರಣ ಸಂಸ್ಥೆಗಳ ಮಾಲಕರು, ಪ್ರತಿನಿಧಿಗಳು, ಕೇಬಲ್ ಆಪರೇಟರ್‌ಗಳು, ಚಲನಚಿತ್ರ ಮಂದಿರದ ಪ್ರತಿನಿಧಿಗಳು, ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾಧಿಕಾರಿ ಚುನಾವಣಾ ವಿಭಾಗದ ಅಧಿಕಾರಿ ಸಿಬ್ಬಂದಿ ಮತ್ತಿತರರಿದ್ದರು.

ಕೊಪ್ಪಳದಲ್ಲಿ ಮರಳು ದಂಧೆಗಿಲ್ಲ ಕಡಿವಾಣ?

0

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಕೊರೋನಾ ಸಂದರ್ಭದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅಕ್ರಮ ದಂಧೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಆದ್ರೆ ಜಿಲ್ಲೆಯಲ್ಲಿ ಎಲ್ಲಾ ದಂಧೆಗಳಿಗೆ ಬ್ರೇಕ್ ಹಾಕಲಾಗಿದೆ. ಯಾರೆ ಅಕ್ರಮ ದಂಧೆಗಳನ್ನು ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲ ಪುಢಾರಿ ರಾಜಕಾರಣಿಗಳು ಸಹ ಈ ದಂಧೆಯಲ್ಲಿ ತೊಡಗಿರುವುದು ಮರಳು ಅಕ್ರಮ ದಂಧೆ ನಿಂತಿಲ್ಲ ಎಂಬುದನ್ನು ಸಾರಿ ಹೇಳುತ್ತದೆ.
ಜಿಲ್ಲಾಧಿಕಾರಿಗಳ ಖಡಕ್ ಆದೇಶದಲ್ಲಿಯೂ, ದಂಧೆಕೋರರು ಮಾತ್ರ ಮರಳು ಅಕ್ರಮ ಸಾಗಾಟ ಮಾಡುತ್ತಲೇ ಇದ್ದಾರೆ. ಅದು ಅಧಿಕಾರಿಗಳ ಕಣ್ಣುತಪ್ಪಿಸಿಯೋ ಅಥವಾ ಯಾರದ್ದೂ ಕೈವಾಡದಿಂದಲೋ? ಎಂಬುದು ನೈಜ ತನಿಖೆಯಿಂದ ಮಾತ್ರ ಹೇಳಲು ಸಾಧ್ಯ.
ಮರಳು ದಂಧೆಗೆ ಈಗ ಸರ್ಕಾರಿ ಜಮೀನು ಸೂಕ್ತ. ಯಾಕೆಂದರೆ ಒಂದು ವೇಳೆ ದಾಳಿಯಾದರೆ ಯಾರ ಮೇಲೂ ಕೇಸ್ ದಾಖಲಾಗುವುದಿಲ್ಲ ಎಂದು ಅಕ್ರಮ ಮರಳನ್ನು ಸರ್ಕಾರಿ ಜಾಗದಲ್ಲಿ ಸಂಗ್ರಹಿಸಲಾಗುತ್ತಿದೆ. ಹಳ್ಳ, ನದಿಗಳಲ್ಲಿ ಅಗೆದ ಮರಳನ್ನು ನೇರವಾಗಿ ಸರ್ಕಾರಿ ಜಮೀನುಗಳಲ್ಲಿ ಡಂಪ್ ಮಾಡಲಾಗುತ್ತದೆ. ನಂತರ ರಾತ್ರೋ ರಾತ್ರಿ ಸಾಗಿಸಲಾಗುತ್ತದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೂಪಾ ಸಿ.ಎಚ್. ಅವರನ್ನು ಹಲವು ಬಾರಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.


ಹೀಗೆ ಸಂಗ್ರಹಿಸಿದ ಮರಳು ಅಡ್ಡದಾರಿಗಳಿಂದ ನೇರವಾಗಿ ಮುಖ್ಯ ರಸ್ತೆಗಳಿಗೆ ಸೇರುತ್ತದೆ. ಅಲ್ಲಿಂದ ನೇರವಾಗಿ ಗದಗ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಅಕ್ರಮ ಮರಳನ್ನು ಟಿಪ್ಪರ್‌ಗಳ ಮೂಲಕ ಸಾಗಿಸಲಾಗುತ್ತಿದೆ. ಹಲವಡೆ ಅಧಿಕಾರಿಗಳು ದಾಳಿ ಮಾಡಿದ್ರೂ ಮಾಹಿತಿ ಮಾತ್ರ ಹೊರಬರುತ್ತಿಲ್ಲ. ಇನ್ನು ಕೆಲವಡೆ ಅಧಿಕಾರಿಗಳು ದಾಳಿ ಮಾಡಿದ ಸ್ಥಳದಲ್ಲಿ ಮರಳು ಜಪ್ತಿ ಮಾಡಲಾಗುತ್ತಿದೆ. ಆದರೆ ಮಾಹಿತಿ ಮಾತ್ರ ಸಿಗುತ್ತಿಲ್ಲ.
ಕಾರಟಗಿ, ಕನಕಗಿರಿ, ಕಿನ್ನಾಳ ಹಾಗೂ ಮಾದಿನೂರು ಪ್ರದೇಶದಲ್ಲಿ ಅತಿ ಹೆಚ್ಚು ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ದಾಳಿ ಮಾಡಿದ ಮರುದಿನವೇ ಮತ್ತೆ ಮರಳನ್ನು ಸಾಗಾಟ ಮಾಡಲಾಗುತ್ತದೆ. ಕಳೆದ ಎರಡು ದಿನಗಳ ಹಿಂದೆ ಸುಮಾರು 280 ಮೆಟ್ರಿಕ್ ಟನ್ ಮರಳನ್ನು ಸರ್ಕಾರದ ಸ್ಥಳಗಳಲ್ಲಿ ಸ್ಟಾಕ್ ಮಾಡಲಾಗಿತ್ತು. ಕಳೆದ ತಿಂಗಳು ಇದೆ ಸ್ಥಳದಲ್ಲಿ 290 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ ಮಾಹಿತಿ ಹೊರ ಬಂದಿರಲಿಲ್ಲ. ದಾಳಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಜಿ ಬಿ ಮಜ್ಜಿಗಿ ಹಾಗೂ ಭೂವಿಜ್ಞಾನಿ ಅಧಿಕಾರಿ ರೂಪ ಸಿ ಎಚ್ ಅವರು ದಾಳಿ ಮಾಡಿ ಮರಳು ಜಪ್ತಿ ಮಾಡಿದ್ದಾರೆ.

ಆದರೆ ಇಲ್ಲಿ ಅನುಮಾನ ಮೂಡುತ್ತಿರುವುದು, ಮರಳು ಅಕ್ರಮ ದಂಧೆ ಮಾಡುವ ಕಿಲಾಡಿಗಳಿಗೆ ಸರ್ಕಾರಿ ಜಾಗದಲ್ಲಿ ಡಂಪ್ ಮಾಡುವ ಐಡಿಯಾ ಹೇಳಿಕೊಟ್ಟವರು ಯಾರು? ದಾಳಿ ಮಾಡಿದರೂ ಪದೆ ಪದೇ ನದಿ ಹಳ್ಳಗಳನ್ನು ಅಗೆದು ಇದೇ ಜಾಗದಲ್ಲಿ ಮರಳುಗಾರಿಕೆ ಮಾಡುತ್ತಿರುವ ಆ ಪ್ರಭಾವಿಗಳು ಯಾರು? ಪೊಲೀಸರೂ ಕಠಿಣ ಕ್ರಮಗಳಿಗೆ ಮುಂದಾಗದ್ದಕ್ಕೆ ಕಾರಣಗಳೇನು? ಇಂಥ ಹಲವಾರು ಅನುಮಾನದ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದ್ದು, ಕಡಿವಾಣ ಹಾಕಲು ಒತ್ತಾಯಿಸಿದ್ದಾರೆ.

ಭೀಮ್ ಆರ್ಮಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳಿಗೆ ಸನ್ಮಾನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಭೀಮ್ ಆರ್ಮಿ ಗದಗ ಜಿಲ್ಲಾಧ್ಯಕ್ಷರಾದ ನಾಗರಾಜ ಕಾಳೆ ಮತ್ತು ಭೀಮ್ ಆರ್ಮಿಯ ಪದಾಧಿಕಾರಿಗಳನ್ನ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ಮಾತನಾಡಿ ಅಂಬೇಡ್ಕರವರ ತತ್ವ ಸಿದ್ಧಾಂತಗಳ ಮೇಲೆ ಕಾರ್ಯನಿರ್ವಹಿಸಿ ಹಾಗೂ ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಬಡವರಿಗೆ ಅನ್ಯಾಯವಾದರೆ ಹೋರಾಟಕ್ಕೆ ಸದಾ ಸಿದ್ಧರಾಗಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಸಂಗಾಪೂರ, ಮಾದಿಗ ಸಮಾಜದ ಹಿರಿಯರಾದ ಸುರೇಶ ಹೊಸಮನಿ, ಅಶೋಕ ಹಾದಿಮನಿ, ಆಟೋ ಮಾಲಕರ ವ ಚಾಲಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಎಂ. ಕಲ್ಮನಿ, ಉಪಾಧ್ಯಕ್ಷ ಮಂಜುನಾಥ ಅಗಸಿಮನಿ, ಜೈ ಭೀಮ ಸೇನಾ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ವಿ. ಚಳ್ಳಮರದ, ಮಾದಿಗ ಸಮಾಜದ ಹಿರಿಯರಾದ ಉಡಚಪ್ಪ ಹಳ್ಳಿಕೇರಿ, ವಿನಾಯಕ ವೈ. ಪರಾಪೂರ, ನಿಂಗಪ್ಪ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ ವಿಶಾಲ ಗೋಶಲ್ಯನವರ, ಖಜಾಂಚಿ ವಿರುಪಾಕ್ಷಿ ಗೌಡರ, ಸಹ-ಕಾರ್ಯದರ್ಶಿ ಶ್ರೀಧರ ಜಕ್ಕಲಿ, ಭೀಮ ಆರ್ಮಿ ಜಿಲ್ಲಾ ಕಾರ್ಯದರ್ಶಿ ಆಕಾಶ ಕೋಣಿಮನಿ, ಮಂಜುನಾಥ ವೈ. ಪರಾಪೂರ, ಮಲ್ಲು ಪೂಜಾರ, ಪರಸಪ್ಪ ಹುಣಸೀಮರದ, ದೇವಿಂದ್ರಪ್ಪ ಗೊಣೆಮ್ಮನವರ, ಮಲ್ಲಪ್ಪ ಸತ್ಯಪ್ಪ ಪೂಜಾರ, ದವಲಪ್ಪ ನಡಿಗೇರ, ರಮೇಶ ರಾಲದೊಡ್ಡಿ, ವಿಜಯ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

ಧಾರವಾಡ ಜಿಪಂ ಸಿಇಒ ಡಾ.ಸುಶೀಲಾ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಧಾರವಾಡ
ಇಲ್ಲಿನ ಜಿಪಂ ಸಿಇಒ ಆಗಿ ಡಾ.ಸುಶೀಲಾ ಬಿ. ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ.ಬಿ.ಸಿ.ಸತೀಶ್ ಅವರು ಡಾ.ಸುಶೀಲಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹೈದರಾಬಾದ್‌ನ ಗಾಂಧಿ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ.ಸುಶೀಲಾ, ಕೆಲಕಾಲ ವೈದ್ಯಕೀಯ ವೃತ್ತಿ ನಡೆಸಿ ನಂತರ 2013ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ರೇಲ್ವೆ ಸಿಬ್ಬಂದಿ ಸೇವೆಗೆ ಅರ್ಹತೆ ಪಡೆದರು.
ಪುನಃ 2015ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಕರ್ನಾಟಕ ಕೇಡರ್‌ಗೆ ಆಯ್ಕೆಯಾದರು. ರಾಯಚೂರಿನಲ್ಲಿ ಜಿಲ್ಲಾ ತರಬೇತಿ, ಸೇಡಂ ಹಾಗೂ ಕಲಬುರ್ಗಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಪಂಚಸೇನೆ ಹೋರಾಟದ ಎಚ್ಚರಿಕೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಶಾಲೆ ಆರಂಭಿಸುವ ವಿಚಾರದಲ್ಲಿ ರಾಜ್ಯ ಸರಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವುದು ಸಲ್ಲದು. ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಪಂಚಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 109 ಶಿಕ್ಷಕರು ಮರಣ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಬೆಳಗಾವಿಯ ರಾಮದುರ್ಗ ತಾಲೂಕಿನ ಎ.ತಿಮ್ಮಾಪೂರ ಗ್ರಾಮದ ಶಾಲಾ ಮಕ್ಕಳಿಗೆ ರ‍್ಯಾಪಿಡ್ ಟೆಸ್ಟ್ ಮಾಡಲಾಗಿ 130 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳಿಗೆ ಕೊರೋನಾ ಸೋಫಂಖು ಇರುವುದು ಪತ್ತೆಯಾಗಿರುವುದು ಆತಂಕಕಾರಿ ವಿಚಾರ ಎಂದರು.
ಜನಪ್ರತಿನಿಧಿಗಳು ಸುಸಜ್ಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೂ ಮೃತಪಟ್ಟಿದ್ದಾರೆ. ಇನ್ನು ಸಾಮಾನ್ಯ ಜನರು, ಮಕ್ಕಳು, ಶಿಕ್ಷಕರ ಪಾಡೇನು ಎಂದು ಪ್ರಶ್ನಿಸಿರುವ ಅವರು, ಕೂಡಲೇ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ, ಸಚಿವರ ಮನೆಗಳಿಗೆ ಮುತ್ತಿಗೆ ಹಾಕಿ ದಿಗ್ಭಂಧನ ವಿಧಿಸಲಾಗುವುದು ಎಂದು ಪಂಚಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಆರ್. ಬೊಮ್ಮಾಯಿ ಪುಣ್ಯಸ್ಮರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ 13ನೇ ಪುಣ್ಯಸ್ಮರಣೆಯನ್ನು ನಗರದಲ್ಲಿನ ಬೊಮ್ಮಾಯಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ, ವಿಜಯಾನಂದ ಹೊಸಕೊಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ರವಿ ನಾಯಕ, ರಾಮಣ್ಣ ಬಡಿಗೇರ, ಕಿರಣ ಉಪ್ಪಾರ, ಗುರು ಹೂಗಾರ, ನಾಗರಾಜ ಕಟಾವಿ, ಚಂದ್ರು ಕಿರೇಸೂರ, ರಾಮನಗೌಡ್ರ ಶೆಟ್ಟನಗೌಡರ, ದಾವಲ್ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಅಂಚೆ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ
ರಾಷ್ಟ್ರೀಯ ಅಂಚೆ ದಿನದ ಅಂಗವಾಗಿ ಹುಬ್ಬಳ್ಳಿ ಮುಖ್ಯ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಎಲ್ಲ ಅಂಚೆ ಪೇದೆಗಳಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಾಬೂನು, ಮಾಸ್ಕ್ ಹಾಗೂ ಸಸಿ ನೀಡಿ ಸನ್ಮಾನಿಸಲಾಯಿತು.
ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಮಾತನಾಡಿ, ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಇದರ 1,55,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ದೇಶದ ಯಾವುದೇ ಊರಿಗೆ ಹೋದರೂ ಅಂಚೆ ಕಚೇರಿ ಕಾಣಸಿಗುತ್ತವೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಡೆಪ್ಯುಟಿ ಪೋಸ್ಟ್ ಮಾಸ್ಟರ್ ಎಸ್.ಎಸ್. ಸೊರಟುರ, ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಆರ್.ವಿ. ಕುಲಕರ್ಣಿ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿ.ಸಿ. ದೊಡ್ಡಮನಿ, ಪ್ರವೀಣ ಹಟ್ಟಿಹೊಳಿ, ಪ್ರವೀಣ ಪಾಟೀಲ, ಚಂದ್ರಶೇಖರ್ ಏರಿಮನಿ, ರಾಜು ರಾಜೊಳಿ, ವೃಷಭ ಡಂಗನವರ ಮೊದಲಾದವರು ಉಪಸ್ಥಿತರಿದ್ದರು.

ದಿ.ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಮತ್ತಿಕಟ್ಟಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಳಗಾವಿ: ಇತ್ತೀಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಬೆಳಗಾವಿಯ ನಿವಾಸಕ್ಕೆ ಮಾಜಿ ಸಭಾಪತಿ, ಹಿರಿಯ ಕಾಂಗ್ರೆಸ್ ನಾಯಕ ವೀರಣ್ಣ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಗರದ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯ ನಿವಾಸದಲ್ಲಿ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ, ಪತ್ನಿ ಮಂಗಳಾ, ಪುತ್ರಿಯರಾದ ಶ್ರದ್ಧಾ, ಸ್ಫೂರ್ತಿ ಅವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳ ರಾಜ್ಯಾಧ್ಯಕ್ಷ ಡಾ. ಶರಣಪ್ಪ ಕೊಟಗಿ, ಹಿರಿಯ ನ್ಯಾಯವಾದಿ ರಾಜು ಬಾಗೇವಾಡಿ, ಅನಿಲ ಗುರುವ, ಸಂಭ್ರಮ ವಿಭೂತಿ ಸೇರಿದಂತೆ ಮುಂತಾದವರು ಇದ್ದರು.

ಇನ್ನರ್‌ವೀಲ್ ಕ್ಲಬ್‌ನಿಂದ ಶಿಕ್ಷಕರಿಗೆ ಸನ್ಮಾನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ’ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ ಪುರಸ್ಕೃತರಾದ ಎಂ.ಎಂ. ಜೋಗಿನ್, ಪ್ರೊ.ಸುಮಿತ್ರಾ ಎಂ.ಜೋಗಿನ್ ಹಾಗೂ ಪ್ರೊ.ವೀಣಾ ತಿರ್ಲಾಪುರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀ.ಎಂ.ಎಂ.ಜೋಗಿನ ಶಿಕ್ಷಕರ ನಿವಾಸದಲ್ಲಿ ಏರ್ಪಡಿಸಲಾಗಿತ್ತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುಮಾ ಪಾಟೀಲ್ ಅಧ್ಯಕ್ಷತೆ ವಹಿಸಿ ಬದುಕಿಗೆ ಶಿಕ್ಷಣ ತುಂಬಾ ಅವಶ್ಯಕ. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಎಂ.ಎಂ. ಜೋಗಿನ್, ಕ್ಲಬ್‌ನ ಕಾರ್ಯ ಶ್ಲಾಘನೀಯ. ಸಮಾಜಮುಖಿ ಕಾರ್ಯಗಳನ್ನು ಮಾಡುವುದರೊಂದಿಗೆ ಕ್ಲಬ್ ಮೇಲ್ಪಂಕ್ತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಲಬ್‌ನ ಕಾರ್ಯದರ್ಶಿ ಸುಮಾ ವಸ್ತ್ರದ, ಕೋಶಾಧ್ಯಕ್ಷೆ ಅಶ್ವಿನಿ ಜಗತಾಪ, ಐ ಎಸ್‌ಒ ಮಂಜುಳಾ ಅಕ್ಕಿ ಹಾಗೂ ಪ್ರತೀಕ, ಅನುಶ್ರೀ ಉಪಸ್ಥಿತರಿದ್ದರು.

ಮನಿಷಾ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಭೀಕರ ಹತ್ಯೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಕಂಪ್ಲಿಯಲ್ಲಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಶ್ರೀ ಉದ್ಭವಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ಬೃಹತ್ ಪಂಜಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ, ಹಳೇ ಬಸ್ ನಿಲ್ದಾಣ ಹತ್ತಿರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ವಾಲ್ಮೀಕಿ ಸಮುದಾಯದ ಯುವತಿಯ ಅತ್ಯಾಚಾರ ಘಟನೆ ಅತ್ಯಂತ ಅಮಾನವೀಯವಾದದ್ದು. ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಅತ್ಯಾಚಾರ-ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಮೂಲಕ ರಾಮರಾಜ್ಯ ಮಾಡುತ್ತೇವೆ ಎಂದು ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಬಳಿಕ ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ಸದಸ್ಯ ಎಚ್. ಮುಹಮ್ಮದ್ ಗೌಸ್ ಮಾತನಾಡಿ, ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟುತ್ತಿವೆ. ಸಾರ್ವಜನಿಕರನ್ನು ಒಡೆದಾಳುವ ನೀತಿಯನ್ನು ಅನುಸರಿಸುವ ಮೂಲಕ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ತಮ್ಮ ಮಾತನ್ನು ಕೇಳದ ವಿರೋಧ ಪಕ್ಷದವರ ವಿರುದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜ ಗೌಡ ಮಾತನಾಡಿದರು.
ಪಂಜಿನ ಮೆರವಣಿಗೆ ಮತ್ತು ಬೃಹತ್ ಪ್ರತಿಭಟನೆಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ತಾಪಂ ಸದಸ್ಯರು, ಜಿಪಂ ಸದಸ್ಯರು, ಪುರಸಭೆ ಸದಸ್ಯರು, ತಾಲೂಕಿನ ವಿವಿಧ ಗ್ರಾಮಗಳ ಪಕ್ಷದ ಮುಖಂಡರು, ಮಹಿಳೆಯರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

error: Content is protected !!