Home Blog Page 2174

ವಿದೇಶಿಗರ ಹಾಟ್ ಸ್ಪಾಟ್: ವಿರುಪಾಪುರ ರೇಸಾರ್ಟ್ ತೆರವು ಕಾರ್ಯಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ವಿದೇಶಿಗರ ಹಾಟ್ ಸ್ಪಾಟ್ ವಿರುಪಾಪುರ ಗಡ್ಡಿಯಲ್ಲಿ ಉಳಿದಿದ್ದ ಏಕೈಕ ರೆಸಾರ್ಟ್ ನೆಲಸಮಗೊಂಡಿದೆ. ಲಕ್ಷ್ಮಿ ಗೋಲ್ಡನ್ ಬೀಚ್ ರೆಸಾರ್ಟ್ ನೆಲಸಮವಾಗಿದ್ದು, ಕೊಪ್ಪಳ ಜಿಲ್ಲಾಡಳಿತದಿಂದ ರೆಸಾರ್ಟ್ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.

ಕಳೆದ 6 ತಿಂಗಳ ಹಿಂದೆ ಇಲ್ಲಿನ ಎಲ್ಲ ರೆಸಾರ್ಟ್‌ಗಳನ್ನು ಜಿಲ್ಲಾಡಳಿತ ತೆರವು ಮಾಡಿತ್ತು. ಲಕ್ಷ್ಮೀ ಗೋಲ್ಡನ್ ಬೀಚ್ ರೆಸಾರ್ಟ್ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ರೆಸಾರ್ಟ್ ಮಾಲೀಕರಿಗೆ ‌ಸೋಲಾಗಿತ್ತು

ಈ ಹಿನ್ನೆಲೆಯಲ್ಲಿ ಗುರುವಾರದಿಂದ ರೆಸಾರ್ಟ್ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ರೇಸಾರ್ಟ್‌ನ ಮಾಲೀಕರು ಈ ರೀತಿ ನೆಲಸಮ ಮಾಡುವುದಾಗಿದ್ದರೆ ಪರವಾನಗಿ ಏಕೆ ಕೊಡಬೇಕಿತ್ತು? ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ ನಾವು ಸಾಯಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಕ್-ಟಾಟಾ ಏಸ್ ಢಿಕ್ಕಿ; ಮೂವರ ಸಾವು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬೈಕ್ ಮತ್ತು ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಶುಕ್ರವಾರ ಯಲಬುರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

ಗುರುವಾರ ಸಂಜೆ ಯಲಬುರ್ಗಾ ತಾಲೂಕಿನ ಬೇವೂರಿನಿಂದ ಚಿಕ್ಕ ಮ್ಯಾಗೇರಿಗೆ ಬೈಕ್ ಮೇಲೆ ಮೂವರು ತೆರಳುತ್ತಿದ್ದು ಅಪಘಾತ ನಡೆದ ತಕ್ಷಣ ಮೂವರಿಗೂ ಗಂಭೀರ ಗಾಯಗಳಾಗಿದ್ದು ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೂವರು ಮೃತಪಟ್ಟರು.

ಮೃತರನ್ನು ಬೈರಾಪುರ ಗ್ರಾಮದ ಈರಣ್ಣ ಸಿಂಧೋಗಿ (26), ಚಿಕ್ಕಮ್ಯಾಗೇರಿ ಗ್ರಾಮದ ಹನುಮಪ್ಪ ಉಪ್ಪಾರ್ (26) ಮತ್ತು ಧರ್ಮಪ್ಪ ಹೊಸಳ್ಳಿ (55) ಎಂದು ಗುರುತಿಸಲಾಗಿದೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯಕರನೊಂದಿಗೆ‌ ಸೇರಿ ಪತಿಯ ಹತ್ಯೆ ಮಾಡಿದ ಪತ್ನಿ: ಶವದೊಂದಿಗೆ ರಾತ್ರಿಯಿಡೀ ಮಲಗಿದ್ದ ಲಲಿತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕಬಲಾಯತಕಟ್ಟಿ ತಾಂಡಾದಲ್ಲಿ ನಡೆದಿದೆ.

ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಕೊಲೆಯಾದ ದುರ್ದೈವಿಯಾಗಿದ್ದು, ಲಕ್ಷ್ಮಣ್ಣನ ಪತ್ನಿ ಲಲಿತಾ, ಆಕೆಯ ಪ್ರಿಯಕರ ಸೋಮಪ್ಪ ಲಮಾಣಿ ಜೊತೆ ಸೇರಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಲಲಿತಾ, ಸೋಮಪ್ಪ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಷಯ ತಿಳಿದ ಪತಿ ಲಕ್ಷ್ಮಣ ಪತ್ನಿ ಲಲಿತಾ ಜೊತೆಗೆ ನಿತ್ಯವೂ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದರಿಂದ ಬೇಸತ್ತು ಲಲಿತಾ ಹಾಗೂ ಪ್ರಿಯಕರ ಸೋಮಪ್ಪ ಲಕ್ಷ್ಮಣನನ್ನು ಕೊಲೆ ಮಾಡಿದ್ದಾರೆ. ಗೋವಾದ ಕಲ್ಲಂಗುಟನಲ್ಲಿ ದಂಪತಿಗಳು ಮೀನು ಮಾರಾಟ ಮಾಡುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ತಾಂಡಾಗೆ ವಾಪಾಸಾಗಿದ್ದರು. ಕೊಲೆಮಾಡಿದ ನಂತರ ಲಲಿತಾ ಎಂದಿನಂತೆ ಇದ್ದು, ಶವದೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ.

ಮುಂಜಾನೆ ಬಾಯಿ ಬಡಿದುಕೊಂಡು, ಜನರನ್ನು ಸೇರಿಸಿದ್ದಾಳೆ. ಬಂದ ಜನ ಕುತ್ತಿಗೆಯ ಮೇಲಿನ ಗುರುತು ನೋಡಿ ಪೊಲೀಸರಿಗೆ ಮಾಹಿತಿ ‌ನೀಡಿದ್ದಾರೆ.

ಕುತ್ತಿಗೆಗೆ ಬಿಗಿದಿದ್ದ ಹಗ್ಗ ವನ್ನು ಲಲಿತಾ ಹಾಗೂ ಸೋಮಪ್ಪ ಸುಟ್ಟು ಹಾಕಿದ್ದು, ಸಾಕ್ಷ್ಯ ನಾಶ ಮಾಡಿದ್ದಾರೆ. ರಾತ್ರಿಯೇ ಲಲಿತಾ ಹಾಗೂ ಸೋಮಪ್ಪರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಂದರ್-ಬಾಹರ್: ಸರಕಾರಿ ನೌಕರ ಸೇರಿ ಆರು ಜನರ ಬಂಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡದ ಶರಣಬಸವೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಬಯಲು ಜಾಗೆಯಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ, ಸಾರಿಗೆ ಸಂಸ್ಥೆಯ ನೌಕರ ಸೇರಿದಂತೆ ಆರು ಜನರನ್ನು ಗಜೇಂದ್ರಗಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಗಜೇಂದ್ರಗಡ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಸಂಸ್ಥೆಯ ಚಾಲಕ ಹನಮಂತಪ್ಪ ಭೀಮಪ್ಪ ಜಿಗಳೂರು ಸೇರಿದಂತೆ ಇವರ ಜೊತೆ ಜೂಜಾಟದಲ್ಲಿ ತೊಡಗಿದ್ದ, ಶಿವಪ್ಪ ಕಳಕಪ್ಪ ತಳವಾರ, ಮಹಾಂತೇಶ್ ಶರಣಪ್ಪ ರೊಟ್ಟಿ, ಶಿವಯೋಗಿ ವೀರಭದ್ರಪ್ಪ ಜಿಗಳೂರು, ಪರಶುರಾಮಪ್ಪ ಭೀಮಪ್ಪ ಆಡಿನ, ಸಿದ್ದಯ್ಯ ಶರಣಯ್ಯ ಕಾರಡಗಿಮಠ ಇವರನ್ನು ಬಂಧಿಸಿದ್ದು, ಬಂಧಿತರಿಂದ ಗಜೇಂದ್ರಗಡ ಪೊಲೀಸರು ಕೇವಲ 2,600 ಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ.

ಇವರೆಲ್ಲರೂ ನಾಗೇಂದ್ರಗಡ ಗ್ರಾಮದವರಾಗಿದ್ದು, ಘಟನೆ ಸೆ.26 ರಂದೇ ನಡೆದಿತ್ತು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಷ ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ವಿದ್ಯುತ್ ಸ್ಪರ್ಷಿಸಿ ಓರ್ವ ಸಾವನ್ನಪ್ಪಿ ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ, ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪೂರ ಬಳಿ ನಡೆದಿದೆ.
ಗಂಗಪ್ಪ ಲಮಾಣಿ(30) ಮೃತ ದುರ್ದೈವಿಯಾಗಿದ್ದು, ರಮೇಶ್ ಲಮಾಣಿ(29)ಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರಮೇಶ್ ನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಲಿ ಕೆಲಸ ಮಾಡಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಷವಾದ ವೇಳೆ ಇವರಿಬ್ಬರೂ ಬೊಲೇರೋ ವಾಹನದ ಮೇಲ್ಭಾಗದಲ್ಲಿ ಕುಳಿತು ಹೋಗುತ್ತಿದ್ದರು. ಈ ವೇಳೆ ತೋಟಕ್ಕೆ ಹಾಕಿದ ವಿದ್ಯುತ್ ವೈರ್ ತಾಗಿ ಈ ದುರ್ಘಟನೆ ನಡೆದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಡೂಪ್ಲಿಕೇಟ್ ಕೀಟನಾಶಕ ಮಾರಾಟ: ವೀರಭದ್ರೇಶ್ವರ ಅಗ್ರೋದ ಪರವಾನಿಗೆ ಸಸ್ಪೆಂಡ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ತಾಲೂಕಿನ ಕಣವಿ ಗ್ರಾಮದ ಶ್ರೀವೀರಭದ್ರೇಶ್ವರ ಅಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆಗೆ ಇಂದು ಸಹಾಯಕ ಕೃಷಿ ನಿರ್ದೇಶಕ(ಜಾರಿದಳ) ಸಂತೋಷ ಪಟ್ಟದಕಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವೇಳೆ ಕೀಟನಾಶಕ ಪರವಾನಿಗೆಯಲ್ಲಿ ಅನುಮತಿಸದೇ ಇರುವ ಕೀಟನಾಶಕಗಳನ್ನು ದಾಸ್ತಾನು ಮತ್ತು ವಿತರಣೆ, ನೋಂದಾಯಿತವಲ್ಲದ ಕೀಟನಾಶಕಗಳನ್ನು ದಾಸ್ತಾನು ಮತ್ತು ವಿತರಣೆ ಹಾಗೂ ಕೀಟನಾಶಕಗಳ ದಾಸ್ತಾನು ಷರತ್ತುಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ.

ಹೀಗಾಗಿ ಕೀಟನಾಟಕ ಕಾಯ್ದೆ 1968 ಹಾಗೂ ಕೀಟನಾಶಕ ನಿಯಮಗಳು 1971 ರನ್ವಯ ಶ್ರೀವೀರಭದ್ರೇಶ್ವರ ಅಗ್ರೋ ಕೇಂದ್ರ ಕಣವಿ ಇವರ ಪರವಾನಿಗೆಯನ್ನು ಅಮಾನತ್ತಿನಲ್ಲಿಟ್ಟು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪಬ್ಜಿಗೆ ಬಾಲಕ ಬಲಿ; ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ: ಪಬ್ಜಿ ಗೇಮ್ ಗೆ ಮಾರುಹೋದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಿರೇಪೇಟೆಯಲ್ಲಿರುವ ಮನೆಯಲ್ಲಿ 17 ವರ್ಷದ ಕಾರ್ತಿಕ್ ಬಬಲಿ ನೇಣಿಗೆ ಕೊರಳೊಡ್ಡಿದ್ದಾನೆ.

ಆನ್ ಲೈನ್ ಕ್ಲಾಸ್ ನೆಪದಲ್ಲಿ ಕಾರ್ತಿಕ್ ಪಬ್ಜಿ ಆಡುತ್ತಿದ್ದ. ಇದನ್ನು ಗಮನಿಸಿದ ಕುಟುಂಬಸ್ಥರು ಗೇಮ್ ಆಡುವುದನ್ನು ಬಿಟ್ಟು ಓದಿನ ಕಡೆ ಗಮನ ನೀಡು ಎಂದು, ಮೊಬೈಲ್ ಕಸಿದುಕೊಂಡಿದ್ದರು.

ಇದರಿಂದ ಬೇಸರಗೊಂಡ ಕಾರ್ತಿಕ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಮ್ಮ-ಮಗುವನ್ನು ಹಳ್ಳದ ನೀರಿನಿಂದ ರಕ್ಷಿಸಿದ ಜನ; ಮೈ ಜುಮ್ಮೆನಿಸುವ ವಿಡಿಯೊ ಮೊಬೈಲ್ ನಲ್ಲಿ ಸೆರೆ!!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನಿನ್ನೆ ರಾತ್ರಿಯಿಂದ ಬೆಳಗಿನವರೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಅವಾಂತರಗಳು ನಡೆದಿರುವ ಬಗ್ಗೆ ವರದಿಯಾಗುತ್ತಿವೆ. ಸತತ ಮಳೆಯಿಂದ ಅಳವಂಡಿ ಮತ್ತು ಕಂಪ್ಲಿ ಮಾರ್ಗ ಸಂಪರ್ಕಿಸುವ ಹಳ್ಳ ತುಂಬಿ ಹರಿಯುತ್ತಿದೆ.

ಎರಡು ಗ್ರಾಮಗಳ ಜನರಿಗೆ ಹಳ್ಳದ ದಾರಿ‌ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಆದರೆ ಸತತ ಮಳೆಯಿಂದ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದು, ಜನರು ಅಪಾಯವನ್ನು ಲೆಕ್ಕಿಸದೇ ಸಂಚರಿಸುತ್ತಿದ್ದಾರೆ. ತಾಯಿಯೊಬ್ಬರು ಮಗುಸಮೇತ ಹಳ್ಳದ ಮತ್ತೊಂದು ಬದಿಗೆ ಹೋಗಬೇಕಿತ್ತು.

ಆದರೆ ಹರಿಯುತ್ತಿರುವ ಹಳ್ಳದ ನೀರನ್ನು‌ ಕಂಡು‌ ದಿಕ್ಕು ತೋಚದಂತಾಗಿ‌ ನಿಂತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಪತಿ ಮಡದಿಯನ್ನು ಎತ್ತಿಕೊಂಡರೆ, ಮಗುವನ್ನು ಎತ್ತಿಕೊಂಡು ದಡಕ್ಕೆ ತಲುಪಿಸಿದ್ದಾರೆ.

ಹಳ್ಳದಲ್ಲಿ ಹೋಗುವಾಗ‌ ಮಗು ಹೊತ್ತಿದ್ದ ವ್ಯಕ್ತಿ ಆಯತಪ್ಪಿದ ಕ್ಷಣದ ವಿಡಿಯೊ ಮೈ‌ ಜುಮ್ಮೆನಿಸುವಂತಿದೆ. ಈ ಸ್ಥಳದಲ್ಲಿ ಎತ್ತರದ ಸೇತುವೆ ಹಾಗೂ ರಸ್ತೆ‌ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಮಳೆಯಿಂದ ರಾತ್ರಿಯಿಡೀ ಗ್ರಾಮಸ್ಥರ ಪರದಾಟ; ಸ್ಥಳಕ್ಕೆ ಬಂದ ತಹಸೀಲ್ದಾರ್ ಗೆ ಮುತ್ತಿಗೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಮಳೆಯಿಂದ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಪರಿಸ್ಥಿತಿ ಅವಲೋಕಿಸಲು ಬಂದ ತಹಸೀಲ್ದಾರ್ ಕಾರ್ ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ತಾಲೂಕಿನ ಹೊಸಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ರಾತ್ರಿಯಿಡೀ ಸುರಿದ ಮಳೆಗೆ ಹೊಸ ಬೂದಿಹಾಳದ ಮನೆಗಳಿಗೆ ನೀರು‌ ನುಗ್ಗಿ ರಾತ್ರಿಯಿಡೀ ಗ್ರಾಮಸ್ಥರು ಒರಡಾಡಿದ್ದಾರೆ‌. ಬೆಳಿಗ್ಗೆ ಪರಿಸ್ಥಿತಿ ಅರಿಯಲು ಬಂದ ನರಗುಂದ ತಹಸೀಲ್ದಾರ್ ಎ ಎಚ್ ಮಹೇಂದ್ರ ಅವರ ಕಾರ್ ಗೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಮುತ್ತಿಗೆ ಹಾಕಿದರು.

ಅಷ್ಟೇ ಅಲ್ಲದೇ ಅಲ್ಲಿಗೆ ಬಂದ ಜಿಪಂ ಅಧ್ಯಕ್ಷ ರಾಜುಗೌಡ ಅವರನ್ನೂ ಸಹ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗಷ್ಟೇ ಹೊಸ ಬೂದಿಹಾಳ ಗ್ರಾಮಕ್ಕೆ ಗ್ರಾಮಸ್ಥರೆಲ್ಲರೂ ಸ್ಥಳಾಂತರವಾಗಿದ್ದರು. ಆದರೆ ಅಲ್ಲಿಗೂ ಮಳೆ ನೀರು ನುಗ್ಗಿ ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು.

ಇನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು, ನೀರು ಬರದಂತೆ ತಡೆಗೋಡೆ ನಿರ್ಮಾಣ ‌ಮಾಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಹಾಗೂ ಜಿಪಂ ಅಧ್ಯಕ್ಷ ರಾಜುಗೌಡರಿಗೆ ಒತ್ತಾಯ ಮಾಡಿದರು. ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ‌ ತಹಸೀಲ್ದರ್ ಅವರ ಕಾರನ್ನು ಗ್ರಾಮಸ್ಥರು ಬಿಟ್ಟರು.

ತಾತ್ಕಾಲಿಕವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತಹಸೀಲ್ದಾರ್ ಅವರ ಸೂಚನೆ ಮೇರೆಗೆ ಆರಂಭ ಮಾಡಲಾಗಿದೆ.

ಮಳೆ ಅವಾಂತರ; ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್-ಕುಸಿದು ಬಿದ್ದ ಮನೆ ಗೋಡೆ, ಕುಟುಂಬ ಪಾರು

ಹೊರತೆಗೆಯಲು ಜೀವದ ಹಂಗು ತೊರೆದ ರೈತರ ಹರಸಾಹಸ!

ಗಾಢನಿದ್ರೆಯಲ್ಲಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬುಧವಾರ ರಾತ್ರಿಯಿಂದಲೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ನಾನಾ ಕಡೆ ಅವಘಡಗಳು ಸಂಭವಿಸಿದ ವರದಿಗಳು ಗೋಚರಿಸಿವೆ.

ಮಳೆ ಆರ್ಭಟಕ್ಕೆ ತತ್ತರಿಸಿರೋ ಜನ ತತ್ತರಿಸಿದ್ದು, ಕೊಪ್ಪಳ ತಾಲೂಕಿನ ಭೈರಾಪುರ ಹಳ್ಳ ತುಂಬಿ ಹರಿಯುತ್ತಿದ್ದು, ನಿಲೋಗಿಪುರದ ರೈತರೊಬ್ಬರ ಟ್ರ್ಯಾಕ್ಟರ್ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್ಟರ್‌ನ್ನು ಜೆಸಿಬಿ ಮೂಲಕ ಮೇಲೆತ್ತಲು ರೈತರು ಜೀವದ ಹಂಗು ತೊರೆದು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಟ್ರ್ಯಾಕ್ಟರ್‌ನ್ನು ಮೇಲೆತ್ತಲಾಗಿದೆ. ಬೈರಾಪುರ ಹಳ್ಳ ತಯಂಬಿ ಹರಿಯುತ್ತಿರುವುದರಿಂದ ಕೊಪ್ಪಳ ತಾಲೂಕು ಬೊಚನಹಳ್ಳಿ- ನಿಲೋಗಿಪುರ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಇದರಿಂದಾಗಿ ರೈತರು ತಮ್ಮ ಹೊಲಗಳಿಗೆ ತೆರಳಲು ಪರದಾಡುತ್ತಿದ್ದಾರೆ.

ಮನೆ ಗೋಡೆ ಕುಸಿತ

ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದು ಇಡೀ ಕುಟುಂಬ ಪ್ರಾಣಾಪಾಯದಿಂದ ಪಾರಾದ‌ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಹಪುರದಲ್ಲಿ ನಡೆದಿದೆ. ಶಹಪುರದ ಕಳಕೇಶ್ ಚೌಡ್ಕಿ ಎಂಬುವವರ ಮನೆ ಗೋಡೆ ಕುಸಿದಿದ್ದು, ರಾತ್ರಿ ಗಾಢನಿದ್ರೆಯಲ್ಲಿದ್ದ ಕುಟುಂಬ ಗೋಡೆ ಕುಸಿವ ಸದ್ದು ಕೇಳಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಮನೆಯ ಪರಿಕರ‌ ಮುಗುಚಿದ್ದನ್ನ ಬಿಟ್ಟರೆ ಅದೃಷ್ಟವಶಾತ್ ಜೀವಹಾನಿ ಇಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವಂತೆ ಕುಟುಂಬಸ್ಥರ ಮನವಿ ಮಾಡಿಕೊಂಡಿದ್ದಾರೆ.

error: Content is protected !!