Home Blog Page 2174

ರಾಮವಿಲಾಸ ಪಾಸ್ವಾನ್‌ಗೆ ಶ್ರದ್ಧಾಂಜಲಿ ಸಭೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ
ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ರಾಮವಿಲಾಸ ಪಾಸ್ವಾನ್ ಅವರ ಶ್ರದ್ಧಾಂಜಲಿ ಸಭೆಯು ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಎಸ್.ಸಿ. ಮೋರ್ಚಾದಿಂದ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಎಸ್.ಸಿ. ಮೋರ್ಚಾದ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ವಿವಿಧ ಮುಖಂಡರು ರಾಮವಿಲಾಸ ಪಾಸ್ವಾನ್ ಅವರನ್ನು ಸ್ಮರಿಸಿದರು.
ಸಭೆಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ರಾಜ್ಯ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಮಹೇಂದ್ರ ಕೌತಾಳ, ರವಿ ನಾಯ್ಕ, ಹನಮಂತಪ್ಪ ಚಲವಾದಿ, ಸುಭಾಷ್ ಅಂಕಲಕೋಟಿ, ಮಂಜುನಾಥ ಬಿಜವಾಡ, ಕಿಟ್ಟು ಬಿಜವಾಡ, ರೇಣುಕಪ್ಪ ಕೇಲೂರ, ಚಂದ್ರಶೇಖರ ಗೋಕಾಕ್, ಶಶಿ ಬಿಜವಾಡ, ಮುರಗೇಶ ಹೊರಡಿ, ಸತೀಶ ಸತ್ಪತಿ, ಗುರುನಾಥ ಉಪ್ಪಲದಡ್ಡಿ ಮತ್ತಿತರರು ಭಾಗವಹಿಸಿದ್ದರು.

ಮನೀಷಾ ಹತ್ಯೆ ಖಂಡಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಉತ್ತರ ಪ್ರದೇಶದ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಬೇಕು. ಪ್ರಕರಣದಲ್ಲಿ ಅಲ್ಲಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಟಗೇರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಡಿಎಸ್‌ಎಸ್ (ಅಂಬೇಡ್ಕರವಾದ) ಮುಖಂಡ ಮುತ್ತಪ್ಪ ಭಜಂತ್ರಿ ಮಾತನಾಡಿ, ಇದೊಂದು ಪೈಶಾಚಿಕ ಕೃತ್ಯವಾಗಿದೆ. ಅತ್ಯಾಚಾರ-ಹತ್ಯೆ ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ. ಈ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಮಂಜುನಾಥ ಹೇಮಣ್ಣ ಮುಳಗುಂದ ಮಾತನಾಡಿ, ಮನೀಷಾಳಂತ ಹೆಣ್ಣು ಮಕ್ಕಳ ಗೋಳು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅವರಿಗೆ ಗೊತ್ತಾಗುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ಅಂತಹ ಸರ್ಕಾರದ ವಿರುದ್ಧ ದಲಿತರ ಪ್ರತಿಭಟನೆ ಇದ್ದೇ ಇರುತ್ತದೆ ಎಂದು ಹೇಳಿದರು.
ದಲಿತ ಮುಖಂಡರಾದ ಕೆಂಚಪ್ಪ ಮ್ಯಾಗೇರಿ, ಡಿಎಸ್‌ಎಸ್ ಮುಖಂಡ ಬಾಲರಾಜ, ಅಬ್ದುಲ್ ಕಲಾಮ್ ಕ್ಷೇಮಾಭಿವೃದ್ದಿ ಟ್ರಸ್ಟ್‌ನ ಮುಖಂಡ ರಾಜೇಸಾಬ ಬಳ್ಳಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶರೀಫ್ ಬಿಳೆಯಲಿ, ಅರುಣ ಹಿರೇಮಠ, ಪರಶುರಾಮ ಕಾಳೆ, ಅನಿಲ ಕಾಳೆ, ಆಂಜನೇಯ ಜಾಲಗಾರ, ಚಿನ್ನುಸ್ವಾಮಿ ಬಳ್ಳಾರಿ, ಅಮೀರ ಸೈಯದ್, ಚಿದಾನಂದ ಶ್ಯಾವಿ, ಮಂಜುನಾಥ ದೊಡ್ಡಮನಿ, ಚಂದ್ರಶೇಖರ ದಾಸರ, ಬಸವರಾಜ ವಡ್ಡರ, ರಫೀಕ್ ತಹಶೀಲ್ದಾರ್, ವೆಂಕಪ್ಪ ದಾಸರ, ಯಶವಂತ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರಿಂದ ರೈತರ ಕಣ್ಣೀರೊರೆಸುವ ತಂತ್ರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹರಪನಹಳ್ಳಿ
ತಾಲೂಕಿನಲ್ಲಿನ ಅತಿವೃಷ್ಠಿ, ವಿವಿಧ ಸಮಸ್ಯೆಗಳಿಂದ ರೈತರು ತತ್ತರಿಸಿದ್ದಾರೆ. ಈ ನಡುವೆ ಶಾಸಕ ಜಿ.ಕರುಣಾಕರರೆಡ್ಡಿ ಪರಿಹಾರಕ್ಕಾಗಿ ಮುಖ್ಯಮಂತ್ರಿ ಭೇಟಿ ಮಾಡಿ, ಚರ್ಚಿಸುತ್ತೇನೆಂದು ಭರವಸೆ ನೀಡುತ್ತಾರೆಯೇ ವಿನಃ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ. ಶಾಸಕರು ಕ್ಷೇತ್ರದ ರೈತರ ಕಣ್ಣೀರು ಒರೆಸುವ ತಂತ್ರ ರೂಪಿಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಇತ್ತೀಚೆಗೆ ರಾಜ್ಯದ 16 ಜಿಲ್ಲೆಗಳಲ್ಲಿನ 43 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ಘೋಷಿಸಿರುವ ಪಟ್ಟಿಯಲ್ಲಿ ಹರಪನಹಳ್ಳಿ ತಾಲೂಕನ್ನು ಕಡೆಗಣಿಸಿರುವು ತೀವ್ರ ಖಂಡನೀಯ. ಅಕಾಲಿಕ ಮಳೆಯಿಂದಾಗ ತಾಲೂಕಿನಾದ್ಯಂತ ರೈತರು ಬೆಳೆದ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಮನೆಗಳು ನೆಲಸಮಗೊಂಡಿವೆ ಎಂದರು.
ಸೈನಿಕ ಹುಳುಬಾಧೆಗೆ ಈರುಳ್ಳಿ ಬೆಳೆದ ರೈತರು ಅಕ್ಷರಶಃ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾರೆ. ಇಂತಹ ಹಿಂದುಳಿದ ಪ್ರದೇಶವನ್ನು ಬರಪೀಡಿತ ತಾಲೂಕು ಎಂದು ಘೋಷಣೆ  ಮಾಡದಿರುವುದು ನಿಜಕ್ಕೂ ವಿಪರ್ಯಾಸ ಸಂಗತಿ ಎಂದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಕೂಡಲೇ ಹರಪನಹಳ್ಳಿ ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಬೇಕು. ತೀವ್ರ ಸಂಕಟದಲ್ಲಿರುವ ತಾಲೂಕಿನ ರೈತರ ನೆರವಿಗೆ ಧಾವಿಸಬೇಕೆಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸೂಚನೆ

0

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಗುರುತಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿಯೊಂದಿಗೆ ಅನುಮತಿ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದರು.
ಇಂದು ಪ್ರವಾಸೋದ್ಯಮ ಇಲಾಖೆ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರವಾಸೋದ್ಯಮ ಕೇಂದ್ರಗಳ ಸಮಗ್ರ ಅಭಿವೃಧ್ಧಿಗೆ ಇರುವ ತೊಡಕುಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿಗಳು ಅನುಮತಿ ನೀಡಿದರು. ಈ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿಯೊಂದಿಗೆ ಪ್ರಸ್ತಾವನೆ ಯನ್ನು ಮಂಡಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯ ಮುಖ್ಯಾಂಶಗಳು:
1. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಜಿಲ್ಲೆಗಳನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇಲಾಖಾ ಸಚಿವ ಸಿ.ಟಿ.ರವಿ ಮುಖ್ಯಮಂತ್ರಿಗಳನ್ನು ಕೋರಿದರು. ಜಿಲ್ಲೆಗಳಲ್ಲಿ ಅಧಿಕಾರಿಗಳಿಲ್ಲದೆ ಪ್ರಗತಿ ಪರಿಶೀಲನೆ ಅಸಾಧ್ಯವಾಗಿದೆ ಎಂಬ ಅಂಶವನ್ನು ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
2. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಜಿಲ್ಲೆಗಳಲ್ಲಿ ಕೆ.ಎ.ಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರವನ್ನು ನೀಡಬಹುದಾಗಿದೆ ಎಂದು ಅವರು ಹೇಳಿದರು.
3. ಪ್ರವಾಸೋದ್ಯಮಕ್ಕೆ ಉತ್ತೇಜನ ಇಲಾಖೆಯ ಮುಖ್ಯ ಧ್ಯೇಯವಾಗಬೇಕಿದ್ದು, ಅಭಿವೃದ್ಧಿ ತಾಣಗಳ ಗುರುತಿಸುವಿಕೆ, ನಿರ್ವಹಣೆ, ಸಂರಕ್ಷಣೆ ಆದ್ಯತೆಯಾಗಬೇಕು.
4. ಯೋಜನೆಯನ್ನು ಪರಿಪೂರ್ಣವಾಗಿ ಕೈಗೊಂಡು ಮುಗಿಸಬೇಕು, ಆಗ ಮಾತ್ರ ರಾಜ್ಯದ ಪ್ರವಾಸೋದ್ಯಮದಲ್ಲಿ ಅಭಿವೃದ್ದಿಯಲ್ಲಿ ಹೊಸ ಶಕೆಯನ್ನು ನಿರೀಕ್ಷಿಸಬಹುದು.
5. ಜೋಗ ಜಲಪಾತ 120 ಕೋಟಿ ರೂ.ಗಳ ಯೋಜನೆ ಕೆ.ಪಿ.ಸಿ.ಎಲ್ ಮೂಲಕ ಅನುಷ್ಠಾನಕ್ಕೆ ತರಲಾಗುವುದು. ಈ ಮಾಹೆಯ ಅಂತ್ಯದೊಳಗೆ ಯೋಜನೆಯ ವೆಚ್ಚವನ್ನು ಅಂತಿಮಗೊಳಿಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾಹಿತಿ ನೀಡಿದರು.
6. ಕೆಮ್ಮಣ್ಣುಗುಂಡಿ ಮತ್ತು ನಂದಿ ಬೆಟ್ಟದ ಸಮಗ್ರ ಅಭಿವೃದ್ಧಿಯ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವಂತೆ ಪ್ರವಾಸೋದ್ಯಮ ಇಲಾಖಾ ಸಚಿವರು ಸಲಹೆ ಮಾಡಿದರು.
8. ಬಾದಾಮಿ ಅಭಿವೃದ್ಧಿ ಆದ್ಯತೆಯ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಅಂತರರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಈ ತಾಣದಲ್ಲಿ ವಿಶ್ವಮಟ್ಟದ ಸೌಲಭ್ಯಗಳನ್ನು ಕಲ್ಪಿಸಲು ಎ.ಪಿ.ಎಂ.ಸಿ ಭೂಮಿಯನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಿ ವಾಹನ ನಿಲ್ದಾಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬಹುದು.
9. ಶ್ರೀರಂಗಪಟ್ಟಣ ಹಾಗೂ ಮೈಸೂರು ಹಾಥ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರಾದ ಶೃತಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರಕಟ

0

ವಿಜಯಸಾಕ್ಷಿ ಸುದ್ದಿ ಗದಗ
ವರ್ಷಗಳ ನಂತರ ದಿಢೀರ್ ಆಗಿ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಗೊಂಡಿದ್ದ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಅಕ್ಟೋಬರ್ 8ರಂದು ರಾಜ್ಯ ಸರಕಾರ ಹೊರಡಿಸಿದ ಅ„ಕೃತ ರಾಜ್ಯಪತ್ರದಲ್ಲಿ ಈ ಮಾಹಿತಿ ಲಭ್ಯವಾಗಿದ್ದು, ಜಿಲ್ಲೆಯ ಇನ್ನುಳಿದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯೂ ಪ್ರಕಟವಾಗಿದೆ.
ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ಬ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ನರಗುಂದ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಅದೇ ರೀತಿ ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ, ರೋಣ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಲಾಗಿದೆ.

ಜಸ್ಟಿಸ್ ವರ್ಮಾ ಸಮಿತಿ ಶಿಫಾರಸು ಜಾರಿಗೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ
ತೆಲಂಗಾಣ ರಾಜ್ಯದಲ್ಲಿ ಬಂಜಾರ ಮಹಿಳೆಯ ಮೇಲೆ ನಡೆದ ಅತ್ಯಾಚಾರ, ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಹಾಗೂ ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ ಇಲ್ಲಿನ ತಹಸೀಲ್ದಾರ್ ಮೂಲಕ ಗುರುವಾರ ಸ್ಥಳೀಯ ಸೇವಾಲಾಲ ಬಂಜಾರ ವೇದಿಕೆಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಲಾಯಿತು.
ತೆಲಂಗಾಣ ಹಾಗೂ ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಅತ್ಯಂತ ಹೇಯ ಹಾಗೂ ಮಾನವಕುಲ ತಲೆ ತಗ್ಗಿಸುವ ಕೃತ್ಯವಾಗಿದೆ. ಹೀಗಾಗಿ ಎರಡು ರಾಜ್ಯದ ಮುಖ್ಯಮಂತ್ರಿಗಳು ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರದ, ರಕ್ಷಣೆ ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ದೇಶದಲ್ಲಿ ದಲಿತ ಮಹಿಳೆಯರ ಮೇಲೆ ಅತಿ ಹೆಚ್ಚು ಕೇಂದ್ರಿತವಾಗಿ ದಾಳಿ, ದಬ್ಬಾಳಿಕೆ, ಅತ್ಯಾಚಾರ ಹಾಗೂ ಕೊಲೆಗಳು ನಡೆಯುತ್ತಿರುವುದು ಆತಂತಕಾರಿ ಬೆಳವಣಿಗೆಯಾಗಿದೆ. ಪರಿಣಾಮ ದಲಿತ ಸಮುದಾಯಗಳ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ನಿಯಂತ್ರಿಸಲು ಎಲ್ಲ ರಾಜ್ಯಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನುಗಳು ಮತ್ತು ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳೀಯ ಸೇವಾಲಾಲ ಬಂಜಾರ ವೇದಿಕೆಯ ಕಾರ್ಯಕರ್ತರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿದ ತಹಸೀಲ್ದಾರ್ ಅಶೋಕ ಕಲಘಟಗಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರವನ್ನು ರವಾನಿಸಲಾಗುವುದು ಎಂದರು.
ಪುರಸಭೆ ಸದಸ್ಯ ರೂಪ್ಲೇಶ ರಾಠೋಡ, ವೇದಿಕೆಯ ಅಧ್ಯಕ್ಷ ಉಮೇಶ ರಾಠೋಡ, ಮುಖಂಡರಾದ ಈಶಪ್ಪ ರಾಠೋಡ, ಪ್ರಶಾಂತ ರಾಠೋಡ, ಬಾಲು ರಾಠೋಡ, ಮಾರುತಿ ಅಜ್ಮೀರ, ಮಾರುತಿ ರಾಠೋಡ, ಮುತ್ತು ರಾಠೋಡ ಸೇರಿ ಇತರರು ಇದ್ದರು.
 

ಕೃಷಿ ಸವಲತ್ತುಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯ: ಚನ್ನಪ್ಪ

ವಿಜಯಸಾಕ್ಷಿ ಸುದ್ದಿ ನರಗುಂದ
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಜಿ.ಪಿ.ಎಸ್ ಆಧಾರಿತ ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಗುರುವಾರ ತಾಲೂಕಿನ ರೈತರ ಜಮೀನುಗಳಿಗೆ ತೆರಳಿ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಮೊಬೈಲ್ ಆಪ್ ಮತ್ತು ಖಾಸಗಿ ಪಿಆರ್‌ಒಗಳ ಮೊಬೈಲ್ ಆಪ್ ಮುಖಾಂತರ ನಡೆಸಿರುವ ಸಮೀಕ್ಷೆ ಮುಗಿಯುವ ಹಂತಕ್ಕೆ ಬಂದಿದೆ. ಕೃಷಿಗೆ ಸಂಬಂಧಿಸಿದ ಯಾವುದೇ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿರುತ್ತದೆ ಈ ಕುರಿತು ರೈತರಲ್ಲಿ ಅರಿವನ್ನು ಮೂಡಿಸಲಾಗಿದೆ ಎಂದರು.
ರೈತರು ತಮ್ಮ ಜಮೀನಿನ ಬೆಳೆಗಳ ಮಾಹಿತಿ, ಅಂಕಿ ಅಂಶಗಳನ್ನು ಸಮೀಕ್ಷೆಯಲ್ಲಿ ಸರಿಯಾಗಿ ನಮೂದಿಸಲಾಗಿದೆಯೇ? ಎಂಬುದನ್ನು ಪರಿಶೀಲಿಸಲು ಬೆಳೆದರ್ಶಕ 2020 ಆಪ್‌ನ್ನು ಬಿಡುಗಡೆ ಮಾಡಲಾಗಿದೆ. ರೈತ ಬಾಂಧವರು ಬೆಳೆ ವಿವರ, ವಿಸ್ತೀರ್ಣದ ಮಾಹಿತಿ, ಜಿ.ಪಿ.ಎಸ್, ಫೋಟೊ, ಸಮೀಕ್ಷೆ ಮಾಡಿದವರ ಹೆಸರು & ಮೊಬೈಲ್ ಸಂಖ್ಯೆ, ಮೇಲ್ವಿಚಾರಕರ ಅಂಗೀಕಾರ ಎಲ್ಲ ಮಾಹಿತಿಗಳನ್ನು ಪ್ರಸ್ತುತ ಆಪ್ ಮುಖಾಂತರ ಪಡೆಯಬಹುದಾಗಿದೆ.
ಒಂದು ವೇಳೆ ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ತಕ್ಷಣವೇ ಆಪ್ ಮುಖಾಂತರ ಆಕ್ಷೇಪಣೆಗೆ ಸಲ್ಲಿಸಬಹುದು. ನಂತರ ಮೇಲ್ವಿಚಾರಕರು ರೈತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸುತ್ತಾರೆ.
ರೈತರು ತಮ್ಮ ಆಕ್ಷೇಪಣೆ ಸಲ್ಲಿಸಲು ಅ.15 ಕೊನೆಯ ದಿನಾಂಕವಾಗಿದ್ದು, ಅದರ ನಂತರ ಆಕ್ಷೇಪಣೆ ಸಲ್ಲಿಸಲು ಪ್ರಸ್ತುತ ಆಪ್‌ನಲ್ಲ್ಲಿ ಅವಕಾಶವಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
 

ಬಿಜೆಪಿಯಿಂದ ಜನರಿಗೆ ಮಾರಕ ಮಸೂದೆಗಳ ಜಾರಿ

0

ವಿಜಯಸಾಕ್ಷಿ ಸುದ್ದಿ ನರಗುಂದ
ಬಿಜೆಪಿ ಜಾರಿಗೆ ತಂದಿರುವ ಮೂರು ಮಸೂದೆಗಳನ್ನು ವಿರೋಧಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಘಟಕದಿಂಧ ರೈತರು ಹಾಗೂ ಸಾರ್ವಜನಿಕರಿಗಾಗಿ ಸಹಿ ಸಂಗ್ರಹಣಾ ಅಭಿಯಾನವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಆರ್. ಯಾವಗಲ್, ಗಾಂಧಿ ಮತ್ತು ಇತರ ಗಣ್ಯರ ಆದರ್ಶಗಳನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸುಮಾರು 70 ವರ್ಷಗಳ ಕಾಲ ಈ ದೇಶದಲ್ಲಿ ಆಡಳಿತ ನಡೆಸಿ ರೈತರ ಮತ್ತು ದೀನ ದಲಿತರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಪಟ್ಟಿದೆ. ಆದರೆ, ಈಗಿನ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಭೂ ಮಸೂದೆ ಹಾಗೂ ಕಾರ್ಮಿಕ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಮೂರು ಮಸೂದೆಗಳು ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿವೆ ಎಂದು ಸಾರ್ವಜನಿಕರಿಂದಲೇ ಸಹಿ ಮಾಡಿಸಿ ಕೆಪಿಸಿಸಿಗೆ ಕಳುಹಿಸಿ ಕೊಡಲಾಗುವುದು. ನಂತರ ಕೆಪಿಸಿಸಿಯಿಂದ ಎಐಸಿಸಿಗೆ ಮಾಹಿತಿ ರವಾನೆಗೊಂಡ ನಂತರ ರಾಷ್ಟ್ರಪತಿಗೆ ಸಂಪೂರ್ಣ ವರದಿ ನೀಡಲಾಗುವುದು. ಇದು ರಾಜ್ಯದೆಲ್ಲೆಡೆ ರುಜು ಅಭಿಯಾನ ಸದ್ಯ ಚಾಲನೆಯಲ್ಲಿದೆ. ಅ.31ರವರೆಗೆ ಸಾರ್ವಜನಿಕರಿಂದ ಸಹಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಹೊಳೆಆಲೂರ ಮಂಡಳದ ಅಧ್ಯಕ್ಷ ಮಲ್ಲಣ್ಣ ಕೊಳೇರಿ ಮಾತನಾಡಿ, ರೈತರಿಗೆ ಅತೀ ಮಹತ್ವವಾಗಿರುವ ಮೂರು ಮಸೂದೆಗಳ ವಿಧೇಯಕವನ್ನು ತಿದ್ದುಪಡಿ ಮಾಡಿ ರೈತರನ್ನು ಆಕ್ಟೋಪಸ್‌ನಂತೆ ಸೆಳೆದು ತೊಂದರೆನೀಡುವ ಬಿಜೆಪಿ ಸರ್ಕಾರದ ಆಡಳಿತದಿಂದ ರೈತರು ಬೇಸತ್ತಿದ್ದಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಫಕ್ರುದ್ದೀನ್ ಚಿಕ್ಕಮಣ್ಣೂರ, ವಿಜಯಕುಮಾರ ತೋಟರ, ವಿ.ಎನ್. ಕೊಳ್ಳಿಯವರ, ಎಸ್.ಡಿ. ಕೊಳ್ಳಿಯವರ, ಪ್ರವೀಣ ಯಾವಲ್, ವಿವೇಕ ಯಾವಗಲ್, ಪ್ರಕಾಶಗೌಡ ತಿರಕನಗೌಡ್ರ, ರಾಮಕೃಷ್ಣ ಗೊಂಬೆ, ದ್ಯಾಮಣ್ಣ ಕಾಡಪ್ಪನವರ, ವಿಠಲ ಶಿಂಧೆ, ರಾಘವೇಂದ್ರ ನಲವಡೆ, ಉಮಾ ದ್ಯಾವನೂರ, ಕೃಷ್ಣಪ್ಪ ಜೋಗಣ್ಣವರ ಮತ್ತಿತರರಿದ್ದರು.

ನೀರಾವರಿ ಯೋಜನೆಗಳ ಸಮಗ್ರ ಮಾಹಿತಿಗಾಗಿ ಗಣತಿ

0

ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ
ಎಲ್ಲ ವಿಧದ ನೀರಾವರಿ ಯೋಜನೆಗಳ ಸಮಗ್ರ ಮಾಹಿತಿಯನ್ನು ಹೊಂದುವ ಉದ್ದೇಶದಿಂದ ಸಣ್ಣ ನೀರಾವರಿ ಗಣತಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆಯಿಂದ 6ನೇ ಸಣ್ಣ ನೀರಾವರಿ ಮತ್ತು ನೀರಿನಾಸರೆಗಳ ಗಣತಿ ಕುರಿತು ಗುರುವಾರ ನಡೆದ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಣ್ಣ ನೀರಾವರಿ ವಿವಿಧ ಯೋಜನೆಗಳನ್ನು ಸಂಪೂರ್ಣವಾಗಿ ಗಣತಿ ಮಾಡುವುದು, ಯೋಜನೆಳನುಸಾರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ನೀರಾವರಿ ಕ್ಷೇತ್ರದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ಜಲ ಸಂಪನ್ಮೂಲ ಸಚಿವಾಲಯದಿಂದ ಸದರಿ ಅಧಿಕ ಅಂಕಶಗಳನ್ನು ವಿವಿಧ ಆಯಾಮಗಳಲ್ಲಿ ಉಪಯುಕ್ತ ಆಗುವುದರ ಜೊತೆಗೆ ಗಣತಿ ಮಾಹಿತಿಯಿಂದ ಅಂತರ್ಜಲ ಪ್ರಮಾಣವನ್ನು ಅಂದಾಜಿಸಲು ಸಹಾಯಕವಾಗಲಿದೆ.
ಎ.ಎ.ಕಂಬಾಳಿಮಠ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ.

ಸಹಾಯಕ ಸಾಂಕಿಖ್ಯ ಅಧಿಕಾರಿ ಟಿ.ಎಸ್.ಬೆಳ್ಳಟ್ಟಿ ಮಾತನಾಡಿ, ಸಣ್ಣ ನೀರಾವರಿ ಯೋಜನೆಗಳ ಗಣತಿಯಲ್ಲಿ ಅಂರ್ತಜಲ ಯೋಜನೆಗಳು ಹಾಗೂ ಮೇಲ್ಮೈಜಲ ಯೋಜನೆಗಳೆಂದು ಎರಡು ಮುಖ್ಯ ವಿಧಗಳಾಗಿ ವಿಂಗಡಿಸಲಾಗಿದೆ. ಅಂರ್ತಜಲದಲ್ಲಿ ಅಗೆದ ಬಾವಿಗಳು, ಆಳವಲ್ಲದ ಕೊಳವೆಬಾವಿಗಳು, ಮಧ್ಯಮ ಕೊಳವೆ ಬಾವಿ ಹಾಗೂ ಆಳದ ಕೊಳವೆ ಬಾವಿಗಳು ಎಂದು ವರ್ಗಿಕರಿಸಲಾಗಿದ್ದರೆ ಇತ್ತ ಮೇಲ್ಮೈಜಲ ಯೋಜನೆಯಲ್ಲಿ ಹರಿಯುವ ನೀರಾವರಿ ಯೋಜನೆಗಳು ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ 2 ಸಾವಿರ ಹೆಕ್ಟೇರವರೆಗೆ ಅಚ್ಚುಕಟ್ಟುಗಳ ಯೋಜನೆಗಳು ಸಣ್ಣ ನೀರಾವರಿ ಯೋಜನೆಗಳನ್ನು ಪರಿಗಣಿಸಲಾಗಿದೆ ಎಂದರು.
ಉಪತಹಸೀಲ್ದಾರ್ ವೀರಣ್ಣ ಅಗಡತ್ತಿ, ಸಣ್ಣ ನೀರಾವರಿ ಇಲಾಖೆಯ ಎಂ.ಜಿ.ಸಂತೋಜಿ, ಗಣಪತಿಸಿಂಗ್, ಕಂದಾಯ ನೀರಿಕ್ಷಕ ಜಿ.ಬಿ.ಆನಂದಪ್ಪನವರ ಸೇರಿ 13 ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿದ್ದರು.
 

ಸ್ಮಶಾನ ರಸ್ತೆ ಅಭಿವೃದ್ಧಿಗೆ ಆಗ್ರಹ 

0

ವಿಜಯಸಾಕ್ಷಿ ಸುದ್ದಿ ನರೇಗಲ್ಲ
ಕುಡಒಕ್ಕಲಿಗೆ ಸಮುದಾಯದ ಸ್ಮಶಾನಕ್ಕೆ ಹೋಗುವ ರಸ್ತೆಯು, ಚರಂಡಿ ನೀರಿನಿಂದ ಹದಗೆಟ್ಟು ಸ್ಮಶಾನಕ್ಕೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಗುರುವಾರ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪ.ಪಂ ಕಾರ್ಯಾಲಯದ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಜರುಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪ.ಪಂ ಮುಖ್ಯಾಧಿಕಾರಿ, ಮಹೇಶ ನಿಡೇಶೇಶಿ, ಪಿಎಸ್‌ಐ ಬಸವರಾಜ ಕೊಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರನ್ನು ಸಮಾಧಾನಿಸಿ, ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಒಂದು ವಾರ ಸಮಯ ನೀಡಿ. ಈಗಾಗಲೇ ಈ ರಸ್ತೆ ಸುಧಾರಣೆ ಪಡಿಸುವುದಕ್ಕೆ ೧೪ನೇ ಯೋಜನೆಯಡಿಯಲ್ಲಿ 5 ಲಕ್ಷ 90 ಸಾವಿರ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಈಗ ವಿ.ಪ ಚುಣಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಜಿಲ್ಲಾ ಯೋಜನಾ ನಿರ್ದೇಶಕರೊಂದಿಗೆ ಮಾತನಾಡಿ, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಚುಣಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದ್ದಾರೆ. ಒಂದು ವಾರದೊಳಗೆ ರಸ್ತೆ ದುರಸ್ತಿಗೆ ಚಾಲನೆ ಮಾಡಿ 15 ದಿನದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಲಿಖಿತ ಭರವಸೆ ನೀಡಿದರು.
ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ೧೫ ದಿನಗಳಲ್ಲಿ ಈ ರಸ್ತೆ ದುರಸ್ತಿ ಕಾರ್ಯವಾಗಲಿಲ್ಲ ಅಂದರೆ, ಮತ್ತೆ ಪಟ್ಟಣದಲ್ಲಿ ಯಾವುದೇ ಸಮಾಜದ ವ್ಯಕ್ತಿಗಳು ಸತ್ತರೆ ಅವರ ಶವಗಳನ್ನು ನೇರವಾಗಿ ನಿಮ್ಮ ಕಾರ್ಯಾಲಯಕ್ಕೆ ತಂದು ಮಣ್ಣು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶೇಖಪ್ಪ ಲಕ್ಕನಗೌಡ್ರ, ಚಂದ್ರು ಹೊನವಾಡ, ಶಶಿಧರ ಓದಿಸೋಮಠ, ಬಾಳಪ್ಪ ಸೋಮಗೊಂಡ, ಶಿವಪ್ಪ ಧರ್ಮಾಯತ, ಶರಣಪ್ಪ ಗಂಗರಗೊಂಡ, ರಮೇಶ ಹತ್ತಿಕಟಗಿ, ಆನಂದ ಕಳಕೊಣ್ಣವರ, ವೀರೇಶ ಪಿಡಗೊಂಡ, ಶಶಿಧರ ಕಳಕೊಣ್ಣವರ, ಈರಪ್ಪ ಹತ್ತಿಕಟಗಿ, ಶರಣಪ್ಪ ಗಚ್ಚಿನ, ವಿಜಯ ಲಕ್ಕನಗೌಡ್ರ, ಮಾಂತೇಶ ಸೋಮಗೊಂಡ, ಎಂ.ಕೆ. ಗಂಗರಗೊಂಡ, ಕಳಕಪ್ಪ ಧರ್ಮಾಯತ, ಪ್ರಕಾಶ ಪಿಡಗೊಂಡ, ಯಲ್ಲಪ್ಪ ಜುಟ್ಲದ, ಕನ್ನಪ್ಪ ಪಿಡಗೊಂಡ ಸೇರಿದಂತೆ ಇತರರಿದ್ದರು.
 
 
 

error: Content is protected !!