Home Blog Page 2174

ಗ್ಯಾಂಬ್ಲಿಂಗ್ ನೆರಳು: ಪ್ಲೇಸ್ಟೋರ್‌ನಿಂದ ಪೇಟಿಎಂ ಉಚ್ಛಾಟಿಸಿದ ಗೂಗಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಗೂಗಲ್ ಪ್ಲೇಸ್ಟೋರ್‌ನಿಂದ ಪೇಟಿಎಂ ಆ್ಯಪ್ ಅನ್ನು ಗೂಗಲ್ ತೆಗೆದು ಹಾಕಿದೆ. ಆದರೆ ಪೇಟಿಎಂ-ಫಾರ್-ಬಿಸಿನೆಸ್, ಪೇಟಿಎಂ ಮಾಲ್, ಪೇಟಿಎಂ ಮನಿ ಆ್ಯಪ್‌ಗಳನ್ನು ತೆಗೆಯಲಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಪೇಟಿಎಂ, ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿದೆ.

ಗೂಗಲ್ ಕೂಡ ಖಚಿತ ಕಾರಣ ನೀಡಿಲ್ಲವಾದರೂ, ಅದರ ಬ್ಲಾಗ್‌ನಲ್ಲಿ, ‘ನಾವು ಕ್ಯಾಸಿನೊ ಅಥವಾ ಇತರ ಕಾನೂನುಬಾಹಿರ ಬೆಟ್ಟಿಂಗ್, ಜೂಜಿಗೆ ಆಸ್ಪದ ಮಾಡಿಕೊಡುವ  ಆ್ಯಪ್‌ಗಳನ್ನು ಬೆಂಬಲಿಸುವುದಿಲ್ಲ. ಯಾವುದಾದರೂ ಆ್ಯಪ್ ಅಂತಹ ಜೂಜಿನ ಸ್ಪೋರ್ಟಿಂಗ್ ವೆಬ್‌ಸೈಟ್‌ಗಳಿಗೆ ಲಿಂಕ್ ಕೊಡುತ್ತಿದ್ದರೆ ಅಂತವಕ್ಕೆ ಪ್ಲೇಸ್ಟೋರ್‌ನಲ್ಲಿ ಜಾಗವಿಲ್ಲ’ ಎಂದಿದೆ.

ಮತ್ತೆ ವಾಪಸ್ಸಾದ ಪೇಟಿಎಂ!

ಗೂಗಲ್ ಪ್ಲೇಸ್ಟೋರ್‌ನಿಂದ ಶುಕ್ರವಾರ ಹೊರ ಹಾಕಲ್ಪಟ್ಟಿದ್ದ ಪೇಟಿಎಂ ರಾತ್ರಿ ಹೊತ್ತಿಗೆ ಮತ್ತೆ ಪ್ಲೇಸ್ಟೋರ್‌ನಲ್ಲಿ ವಾಪಸ್ಸಾಗಿದೆ. ಪೇಟಿಎಂ ವಿವರಣೆ ಗೂಗಲ್‌ಗೆ ಸರಿ ಎನಿಸಿದ ಮೇಲೆ ಈ ಕ್ರಮ ತೆಗೆದುಕೊಂಡಿದೆ.

ಪೈಪ್ ಲೈನ್ ಒಡೆದು ನೀರು ಪೋಲು; ಬೆಳೆ ನಾಶದಿಂದ ರೈತ ಕಂಗಾಲು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ: ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗಿ, ಬೆಳೆ ನಾಶವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕನಕರಾಯನಗುಡ್ಡದ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಪೈಪ್ ಲೈನ್ ಒಡೆದ ಪರಿಣಾಮ, ಪಕ್ಕದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿ, ಅಲ್ಲಿ ಬೆಳೆದಿದ್ದ ಟೊಮೋಟೊ, ಬದನೆಕಾಯಿ ನೀರು ಪಾಲಾಗಿದೆ.

ಹಮ್ಮಗಿ ಬ್ಯಾರೇಜ್ ನಿಂದ ಗದಗ ಬೆಟಗೇರಿ ಅವಳಿ ನಗರಕ್ಕೆ 24×7 ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದೆ.

ಇನ್ನು ವಿಷಯ ತಿಳಿದ ನಂತರ ಸ್ಥಳಕ್ಕೆ ಬಂದ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನೋಡಿ ಸುಮ್ಮನೆ ತೆರಳಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ದಿನಗಳಿಂದಲೂ ನೀರು ಪೋಲಾಗುತ್ತಿದ್ದರೂ ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಐಪಿಎಲ್: ಪಂಜಾಬ್ ತಂಡದಲ್ಲಿ ಐವರು, ರಾಜಸ್ತಾನ್ ರಾಯಲ್ಸ್ ನಲ್ಲಿ ಮೂವರು ಕನ್ನಡಿಗರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶನಿವಾರ ಸೆ. 19ರಿಂದ ಐಪಿಎಲ್-20-20 ಆರಂಭವಾಗಲಿದೆ. ರಾಜ್ಯ ತಂಡಗಳ ನಡುವೆ ನಡೆಯುವ ಸೈಯ್ಯದ ಮುಷ್ತಾಕ್ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡು ಸಲ ಚಾಂಪಿಯನ್ ಆಗಿರುವ ಕರ್ನಾಟಕ ತಂಡದ ಹಲವಾರು ಆಟಗಾರರು ಈಗ ಐಪಿಎಲ್-20-20 ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ತಂಡಗಳ ಪರ ಆಡಲಿದ್ದಾರೆ.

ಇಲ್ಲಿ ಎರಡು ತಂಡಗಳ ವಿಷಯ ನೋಡಿ. ಪಂಚಾಬ್ ಎಲೆವೆನ್ ತಂಡದಲ್ಲಿ ಐವರು ಕನ್ನಡಿಗರು! ತಂಡದ ಕೋಚ್ ಅನಿಲ್ ಕುಂಬ್ಳೆ, ಕ್ಯಾಪ್ಟನ್ ಕೆ.ಎಲ್. ರಾಹುಲ್ ಜೊತೆಗೆ ಭಾರತ ತಂಡದಲ್ಲಿ ಆಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರುಣ್ ನಾಯರ್, ಆಲ್‌ರೌಂಡರ್‌ಗಳಾದ ಕೆ. ಗೌತಮ್ ಮತ್ತು ಜೆ. ಸುಚಿತ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.

ರಾಜಸ್ತಾನ್ ರಾಯಲ್ಸ್ ನಲ್ಲಿ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಮತ್ತು ಗದಗಿನ ಹುಡುಗ ಅನಿರುದ್ಧ ಜೋಶಿ ಇದ್ದಾರೆ.

ಕೊರೊನಾ ಪಾಸಿಟಿವ್ ರಿಜಲ್ಟ್ ಬಂದಿದ್ದಕ್ಕೆ  ಆಸ್ಪತ್ರೆಯಲ್ಲೇ ವ್ಯಕ್ತಿ ಆತ್ಮಹತ್ಯೆ!

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೊರೋನಾ ಹಾವಳಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ‌. ಎಷ್ಟೋ ಜನ ಭಯಕ್ಕೆ ಪ್ರಾಣ ಬಿಡುತ್ತಿರುವ ಸಂಗತಿ ಗೊತ್ತಿರುವಂಥದ್ದೇ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ವ್ಯಕ್ತಿಯೊಬ್ಬ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಖಚಿತ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸರಿಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಕೆಮ್ಮಿನ ಸೌಂಡ್ ಆಧಾರದಲ್ಲಿ ಕೊವಿಡ್ ಪರೀಕ್ಷೆ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕೆಮ್ಮು, ಜ್ವರ ಬಂದ ಕೂಡಲೇ ಈಗ ಕೊವಿಡ್ ಭೀತಿ ಶುರುವಾಗುತ್ತದೆ. ಇಂತಹ ಲಕ್ಷಣಗಳಿದ್ದೂ ಕೊವಿಡ್ ಇರದಿರುವ ಸಾಧ್ಯತೆ ಹೆಚ್ಚು. ಆದರೂ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕಲ್ಲ?
ಅದನ್ನು ತಪ್ಪಿಸಲೆಂದೇ ವಾಧ್ವಾನಿ ಇನ್‌ಸ್ಟಿಟ್ಯೂಟ್ ಈಗ ಒಂದು ಉಪಕರಣ ಸಂಶೋಧಿಸಿದೆ. ಕೃತಕ ಬುದ್ಧಿಮತ್ತೆ ಬಳಸಿ ಈ ಉಪಕರಣ ಕೆಲಸ ಮಾಡುತ್ತದೆ.

ವ್ಯಕ್ತಿಯ ಕೆಮ್ಮಿನಿಂದ ಉಂಟಾಗುವ ಶಬ್ದದ ನಮೂನೆಗಳನ್ನು ಪರೀಕ್ಷಿಸಿ ಕೊವಿಡ್ ಇಲ್ಲದಿರುವುದನ್ನು ಖಚಿತ ಪಡಿಸುತ್ತದೆ. ಸಂಶಯಾತ್ಮಕವಾಗಿದ್ದರೆ ಆಗ ಪರೀಕ್ಷೆಗೆ ಹೋಗಬಹುದು.
ದೂರದ ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಒಮ್ಮೆಲೇ ಮಾಸ್ ಟೆಸ್ಟಿಂಗ್ ನಡೆಸಲು ಈ ಉಪಕರಣ ಉಪಕಾರಿ ಎನ್ನಲಾಗಿದೆ. ಸದ್ಯ ಕಂಪನಿ ಈ ಉಪಕರಣ ಬಳಸಿ ಬಿಹಾರ್ ಮತ್ತು ಒರಿಸ್ಸಾಗಳ ರಿಮೋಟ್ ಗ್ರಾಮಗಳಲ್ಲಿ ಕೊವಿಡ್ ಪರೀಕ್ಷೆ ನಡೆಸುತ್ತಿದೆ. 

ಮಲಗಿದ್ದ ವೇಳೆ ಗೋಡೆ ಕುಸಿತ: ದಂಪತಿ ಪಾರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶುಕ್ರವಾರ ಬೆಳಗಿನ ಜಾವ ಆ ದಂಪತಿ ಗಾಢ ನಿದ್ದೆಯಲ್ಲಿದ್ದರು. ಏಕಾಏಕಿ ಮನೆ ಗೋಡೆ ಕುಸಿದು ಬಿದ್ದಿತು. ಮಣ್ಣು-ಕಲ್ಲುಗಳ ನಡುವೆ ಸಿಕ್ಕ ಅವರನ್ನು ಜನ ಸೇರಿ ಸಾವಿನ ದವಡೆಯಿಂದ ಪಾರು ಮಾಡಿದರು.

ಗದಗ ತಾಲೂಕಿನ ಕಣವಿಯ ಕುರುಬರ ಓಣಿಯ ರೇವಣಸಿದ್ದೇಶ್ವರ ಗುಡಿ ಸಮೀಪ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬದುಕುಳಿದ ಗೂಳಪ್ಪ ಬಸಾಪೂರ(60) ಮತ್ತು ರೇಣವ್ವ ಗೂಳಪ್ಪ ಬಸಾಪೂರ(55) ದಂಪತಿಯನ್ನು ಜಿಮ್ಸ್ ಗೆ ಸೇರಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಪುಟ ಪುನಾರಚನೆಯೋ, ವಿಸ್ತರಣೆಯೋ? ರೇಸ್‌ನಲ್ಲಿ ಯಾರ‍್ಯಾರು?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇವತ್ತು ಶುಕ್ರವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ನಡೆಯಲಿದ್ದು, ಸಂಪುಟ ವಿಸ್ತರಣೆ ಮಾಡುವುದೋ ಅಥವಾ ಪುನಾರಚನೆ ಮಾಡುವುದೋ ಎಂಬುದು ನಿರ್ಧಾರವಾಗಲಿದೆ ಎನ್ನಲಾಗಿದೆ.

ಗುರುವಾರವೇ ದೆಹಲಿ ತಲುಪಿರುವ ಯಡಿಯೂರಪ್ಪ ಸಂಪುಟ ಪುನಾರಚನೆಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟು 8 ಜನರನ್ನು ಸೇರ್ಪಡೆ ಮಾಡಿಕೊಳ್ಳುವುದು ಅವರ ಉದ್ದೇಶ. ಇದಕ್ಕೆ ಹೈಕಮಾಂಡ್ ಒಪ್ಪದಿದ್ದರೆ ವಿಸ್ತರಣೆಗಾದರೂ ಅವಕಾಶ ಪಡೆಯುವುದು ಅವರ ಗುರಿ.
ಗುರುವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತ್ ಶಾ ಭೇಟಿ ಕಷ್ಟವಿದೆ. ಈಗ ಚಡ್ಡಾ ಮತ್ತು ರಾಜನಾಥ್ ಸಿಂಗ್ ಮೂಲಕವೇ ಅಮಿತ್ ಶಾರನ್ನು ಒಪ್ಪಿಸುವ ಲೆಕ್ಕದಲ್ಲಿ ಯಡಿಯೂರಪ್ಪ ಇದ್ದಾರೆ.

ಈಗಾಗಲೇ ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮತ್ತು ಎಚ್. ವಿಶ್ವನಾಥ್ ದೆಹಲಿಯಲ್ಲಿದ್ದಾರೆ. ಸದ್ಯ ಪರಿಷತ್ತಿನಿಂದ ಎಂಟಿಬಿ ನಾಗರಾಜ್, ಆರ್ ಶಂಕರ್, ಎಚ್ ವಿಶ್ವನಾಥ್, ವಿಧಾನಸಭೆಯಿಂದ ಉಮೇಶ ಕತ್ತಿ, ಎಸ್. ಅಂಗಾರ, ಜಿಎಚ್ ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮುಂತಾದವರು ಸಚಿವ ಸ್ಥಾನದ ಆಕಾಂಕ್ಷಿಗಳು.

ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಕಾಂಕ್ಷಿಯೇ. ಅಂದಂತೆ ಖಾಲಿ ಇರುವುದು ಐದೇ ಸ್ಥಾನಗಳು. ಪುನಾರಚನೆಯಾದರಷ್ಟೇ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ.
ಈ ಎಲ್ಲದರ ನಡುವೆ ವಿಸ್ತರಣೆ ಮತ್ತು ಪುನಾರಚನೆ ಎರಡೂ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಹೇಳಿದರೂ ಹೇಳಬಹುದು!

ಕೊವಿಡ್ ಬಾಧಿತ ಬಿಜೆಪಿ ಎಂ.ಪಿ ಅಶೋಕ್ ಗಸ್ತಿ ನಿಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಮೊದಲ ಸಲ ರಾಜ್ಯಸಭಾ ಎಂಪಿಯಾಗಿದ್ದ ರಾಜ್ಯದ ಬಿಜೆಪಿಯ ಅಶೋಕ್ ಗಸ್ತಿ  ಗುರುವಾರ ರಾತ್ರಿ 10.31ಕ್ಕೆ ನಿಧನರಾದರು ಎಂದು ನಗರದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಮನೀಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನವೇ ಗಸ್ತಿ ನಿಧನರಾದರು ಎಂದು ಸುದ್ದಿ ಹರಿದಾಡಿತ್ತು. ಸಚಿವ ಶ್ರೀರಾಮುಲುಈ ಕುರಿತಾಗಿ ಟ್ವೀಟ್ ಮಾಡಿದ ನಂತರ ಸಚಿವ ಜಗದೀಶ ಶೆಟ್ಟರ್ ಸೇರಿ ಹಲವರು ಇದೇ ಸಂದೇಶ ಹಾಕಿದ್ದರು. ಆದರೆ ಸಾಯಂಕಾಲ ಇದು ತಪ್ಪು ಮಾಹಿತಿ ಎಂದು ರಾಜ್ಯ ಬಿಜೆಪಿ ಆಸ್ಪತ್ರೆಯ ಮೂಲ ಉಲ್ಲೇಖಿಸಿ ಪ್ರಕಟಣೆ ನೀಡಿತ್ತು.

ಆದರೆ ಚಿಕಿತ್ಸೆ ಫಲಿಸದೇ ಗಸ್ತಿ ರಾತ್ರಿ 10.31ಕ್ಕೆ ನಿಧನರಾದ ಸಂಗತಿ ಖಚಿತಪಟ್ಟಿದೆ. ಕೊವಿಡ್ ಮತ್ತು ನ್ಯೂಮೊನಿಯಾ ಕಾರಣದಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದ ಕಾರಣದಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಕಲಾಪ ನಡೆಯದ ಕಾರಣ ಗಸ್ತಿ ಒಂದೂ ಕಲಾಪಕ್ಕೆ ಹಾಜರಾಗುವುದು ಸಾಧ್ಯವಾಗಲಿಲ್ಲ. ಈಗ ಕಲಾಪ ಆರಂಭಕ್ಕೂ ಮುನ್ನವೇ ಅವರು ಆಸ್ಪತ್ರೆ ಸೇರಿದ್ದರು.

ರಾಯಚೂರಿನ ಅಶೋಕ್ ಗಸ್ತಿಯವರು ಬಿಜೆಪಿ ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಪರಿಣಾಮ ಅವರನ್ನು ರಾಜ್ಯಸಭೆಗೆ ಬಿಜೆಪಿ ಕಳಿಸಿತ್ತು. ಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಗಸ್ತಿ ನಿಧನಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಹಲವಾರು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ; ಬೆಂಗಳೂರಿಗಿಂತ ಹುಬ್ಬಳ್ಳಿಯಲ್ಲಿ 240 ರೂ. ದುಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ  54,640 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,200 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,750 ರೂ.,24 ಕ್ಯಾರಟ್: 53,180 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,968 ರೂ., 24 ಕ್ಯಾರಟ್: 53,420 ರೂ.

ಈ ಐಪಿಎಲ್‌ನಲ್ಲಿ ಗದಗ ಹುಡುಗ ಅನಿರುದ್ಧ ಜೋಶಿ: ಬಿಗ್ ಶಾಟ್‌ಗಳಿಂದ ಗಮನ ಸೆಳೆದ ಯುವಕ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಈತ ಪಕ್ಕಾ ಟ್ಟೆಂಟಿ-20 ಪಂದ್ಯಗಳಿಗೆ ಹೇಳಿ ಮಾಡಿಸಿದ ಕ್ರಿಕೆಟರ್. ಬಲಗೈ ಬ್ಯಾಟ್ಸಮನ್ ಮತ್ತು ಎಡಗೈ ಆಫ್ ಬ್ರೇಕ್ ಬೌಲರ್ ಆಗಿರುವ ಈತ ಈಗಾಗಲೇ ಕೆಪಿಎಲ್‌ನಲ್ಲಿ, ಕರ್ನಾಟಕ ತಂಡದ ಒನ್‌ಡೇ ತಂಡದಲ್ಲಿ ತನ್ನ ಛಾಪು ಮೂಡಿಸಿದ್ದಾನೆ.
ಈತ  ಗದಗ ನಗರದ ಯುವಕ. ಅನಿರುದ್ಧ ಜೋಶಿ. ಈ ಸಲದ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡಲಿದ್ದಾನೆ. ಕಳೆದ ಸಲ ಬೆಂಗಳೂರು ರಾಯಲ್ಸ್ ತಂಡದಲ್ಲಿದ್ದನಾದರೂ ಆಡುವ 11ರಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಗದಗಿನ ಜಾನೋಪಂಥರ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಪಟ್ಟುಗಳನ್ನು ಕಲಿತ ಅನಿರುದ್ಧ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಗದಗ ಹೆಸರನ್ನು ಕಂಗೊಳಿಸಿದ ಸುನೀಲ್ ಜೋಶಿಯವರ ಅಣ್ಣನ ಮಗ. ಐಪಿಎಲ್ ಬಿಡ್ಡಿಂಗ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಈತನನ್ನು 20 ಲಕ್ಷ ರೂ. ಮುಖಬೆಲೆಗೆ ಖರೀದಿಸಿದೆ.

ಸದ್ಯದ ಭಾರತ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸುನಿಲ್ ಜೋಶಿಯವರ ಹಿರಿಯ ಸಹೋದರ ದಿ. ಅಶೋಕ ಜೋಶಿಯವರ ಪುತ್ರನಾಗಿರುವ ಅನಿರುದ್ಧ, ಕ್ರಿಕೆಟ್ ಕುಟುಂಬದಿಂದ ಬಂದಂತಹ ಯುವಕ. ತಂದೆ ಸಹ ಕ್ಲಬ್ ಮಟ್ಟದ ಆಟಗಾರರಾಗಿದ್ದರು.

ಶಾಲಾ ದಿನಗಳಿಂದ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದ ಅನಿರುದ್ಧ ಜೋಶಿ, ತನ್ನ ತಂದೆಯೇ ನನ್ನ ಗುರು ಎಂದು ಹೇಳಿದ್ದಾರೆ. ಪ್ರಾರಂಭದಲ್ಲಿ ಕ್ರಿಕೆಟ್ ಅಭ್ಯಾಸ, ತರಬೇತಿ ಹಾಗೂ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದು ಗದುಗಿನ ಹಳೆಯ ಕ್ಲಬ್‌ಗಳಲ್ಲೊಂದಾದ ಗದಗ ಸಿಟಿ ಕ್ರಿಕೆಟ್‌ರ್ಸ ಮೂಲಕ (ಈಗಿನ ಜಾನೋಪಂತರ್ ಕ್ರಿಕೆಟ ಅಕಾಡೆಮಿ) ಕ್ರಿಕೆಟ್ ಆರಂಭಿಸಿದ್ದ.

ಹಿರಿಯ ಆಟಗಾರ ಹಾಗೂ ತರಬೇತಿದಾರ ವೀರಣ್ಣ ಜಾನೋಪಂತರರ ನೇತೃತ್ವದ ಈ ಕ್ಲಬ್‌ನಲ್ಲಿ ಅನಿರುದ್ಧ ಜೋಶಿ ಪಳಗಿದ ನಂತರ ಲೀಗ್ ಮಟ್ಟದಲ್ಲಿ, ರಾಜ್ಯ ಅಂಡರ್-19 ತಂಡದಲ್ಲಿ ಮಿಂಚಿದ್ದ. ನಂತರ ಕೆಪಿಎಲ್‌ನಲ್ಲಿ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದು ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಒನ್ ಡೇ ಮತ್ತು ಟೆಂಟಿ-20 ಪಂದ್ಯಗಳಲ್ಲಿ ಗಮನ ಸೆಳೆದಿದ್ದ.

ಸೆ. 19ರಿಂದ ಶುರುವಾಗಲಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಈ ಯುವಕ ಯಶಸ್ಸು ಪಡೆದು ಗದಗಿನ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸೋಣ. 

error: Content is protected !!