Home Blog Page 2176

ಸ್ಮಶಾನ ರಸ್ತೆ ಅಭಿವೃದ್ಧಿಗೆ ಆಗ್ರಹ 

0

ವಿಜಯಸಾಕ್ಷಿ ಸುದ್ದಿ ನರೇಗಲ್ಲ
ಕುಡಒಕ್ಕಲಿಗೆ ಸಮುದಾಯದ ಸ್ಮಶಾನಕ್ಕೆ ಹೋಗುವ ರಸ್ತೆಯು, ಚರಂಡಿ ನೀರಿನಿಂದ ಹದಗೆಟ್ಟು ಸ್ಮಶಾನಕ್ಕೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಗುರುವಾರ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪ.ಪಂ ಕಾರ್ಯಾಲಯದ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಜರುಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪ.ಪಂ ಮುಖ್ಯಾಧಿಕಾರಿ, ಮಹೇಶ ನಿಡೇಶೇಶಿ, ಪಿಎಸ್‌ಐ ಬಸವರಾಜ ಕೊಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರನ್ನು ಸಮಾಧಾನಿಸಿ, ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಒಂದು ವಾರ ಸಮಯ ನೀಡಿ. ಈಗಾಗಲೇ ಈ ರಸ್ತೆ ಸುಧಾರಣೆ ಪಡಿಸುವುದಕ್ಕೆ ೧೪ನೇ ಯೋಜನೆಯಡಿಯಲ್ಲಿ 5 ಲಕ್ಷ 90 ಸಾವಿರ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಈಗ ವಿ.ಪ ಚುಣಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಜಿಲ್ಲಾ ಯೋಜನಾ ನಿರ್ದೇಶಕರೊಂದಿಗೆ ಮಾತನಾಡಿ, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಚುಣಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದ್ದಾರೆ. ಒಂದು ವಾರದೊಳಗೆ ರಸ್ತೆ ದುರಸ್ತಿಗೆ ಚಾಲನೆ ಮಾಡಿ 15 ದಿನದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಲಿಖಿತ ಭರವಸೆ ನೀಡಿದರು.
ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ೧೫ ದಿನಗಳಲ್ಲಿ ಈ ರಸ್ತೆ ದುರಸ್ತಿ ಕಾರ್ಯವಾಗಲಿಲ್ಲ ಅಂದರೆ, ಮತ್ತೆ ಪಟ್ಟಣದಲ್ಲಿ ಯಾವುದೇ ಸಮಾಜದ ವ್ಯಕ್ತಿಗಳು ಸತ್ತರೆ ಅವರ ಶವಗಳನ್ನು ನೇರವಾಗಿ ನಿಮ್ಮ ಕಾರ್ಯಾಲಯಕ್ಕೆ ತಂದು ಮಣ್ಣು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶೇಖಪ್ಪ ಲಕ್ಕನಗೌಡ್ರ, ಚಂದ್ರು ಹೊನವಾಡ, ಶಶಿಧರ ಓದಿಸೋಮಠ, ಬಾಳಪ್ಪ ಸೋಮಗೊಂಡ, ಶಿವಪ್ಪ ಧರ್ಮಾಯತ, ಶರಣಪ್ಪ ಗಂಗರಗೊಂಡ, ರಮೇಶ ಹತ್ತಿಕಟಗಿ, ಆನಂದ ಕಳಕೊಣ್ಣವರ, ವೀರೇಶ ಪಿಡಗೊಂಡ, ಶಶಿಧರ ಕಳಕೊಣ್ಣವರ, ಈರಪ್ಪ ಹತ್ತಿಕಟಗಿ, ಶರಣಪ್ಪ ಗಚ್ಚಿನ, ವಿಜಯ ಲಕ್ಕನಗೌಡ್ರ, ಮಾಂತೇಶ ಸೋಮಗೊಂಡ, ಎಂ.ಕೆ. ಗಂಗರಗೊಂಡ, ಕಳಕಪ್ಪ ಧರ್ಮಾಯತ, ಪ್ರಕಾಶ ಪಿಡಗೊಂಡ, ಯಲ್ಲಪ್ಪ ಜುಟ್ಲದ, ಕನ್ನಪ್ಪ ಪಿಡಗೊಂಡ ಸೇರಿದಂತೆ ಇತರರಿದ್ದರು.
 
 
 

ಶೆಟ್ಟಿಕೆರೆ ಕಾಯಕಲ್ಪಕ್ಕೆ ಮುಂದಾದ ಅರಣ್ಯ ಇಲಾಖೆ

0

ವಿಜಯಸಾಕ್ಷಿ ಸುದ್ದಿ ಗದಗ
ಕೆರೆಯಲ್ಲಿ ಸ್ವಚ್ಛಂದವಾಗಿ ಈಜುವ ಪಕ್ಷಿಗಳ ಬೇಟೆ, ಅಕ್ರಮ ಮರಳು ಸಾಗಾಟ ತಡೆಗಟ್ಟುವ ಹಾಗೂ ಶೆಟ್ಟಿಕೆರೆಗೆ ಕಾಯಕಲ್ಪ ನೀಡಲು ಅರಣ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಬಿದಿರು ಬೆಳೆಯುವ ಮೂಲಕ ಕೆರೆ ಸಂರಕ್ಷಣೆಗೆ ಇಲಾಖೆ ಮುಂದಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯನ್ನು ವಿದೇಶಿ ಪಕ್ಷಿಗಳ ವಿಹಾರಕ್ಕೆ ಅನುಕೂಲ ಆಗುವಂತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಿದಿರು ನೆಡಲು ಆರಂಭಿಸಿದ್ದಾರೆ. ಸುಮಾರು ೨೩೪ ಎಕರೆ ವಿಶಾಲವಾದ ಶೆಟ್ಟಿಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ೨೦ ಸಾವಿರಕ್ಕೂ ಅಧಿಕ ಬಿದಿರು ಸಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಕಪ್ಪತಗುಡ್ಡದ ನಡುವಿನ ಶೆಟ್ಟಿ ಕೆರೆ ಒತ್ತುವರಿಯಾದ ಜಾಗದಲ್ಲಿಯೂ ಬಿದಿರು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ.
ಪ್ರತಿವರ್ಷವೂ ಚಳಿಗಾಲದ ವೇಳೆ ಮಂಗೋಲಿಯ, ಸೈಬಿರಿಯ ಸಹಿತ ಹತ್ತಾರು ದೇಶಗಳಿಂದ ಬಾನಾಡಿಗಳು ಆಗಮಿಸುತ್ತವೆ. ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೀಸ್) ಪಕ್ಷಿಗಳು ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಲಸೆ ಬರುತ್ತವೆ. ಆದರೆ ಮಾಗಡಿ ಕೆರೆ ಸುತ್ತಮುತ್ತ ಕಲ್ಲು ಗಣಿಗಾರಿಕೆಯ ಕರ್ಕಶ ಶಬ್ದದಿಂದಾಗಿ ಪಕ್ಷಿಗಳು ವಿಮುಖವಾಗುತ್ತಿವೆ. ಅಲ್ಲಿಂದ ನೇರವಾಗಿ ಶೆಟ್ಟಿ ಕೆರೆಯತ್ತ ಮುಖ ಮಾಡುತ್ತಿರುವುದು ಹೊಸ ಪ್ರವಾಸಿತಾಣವಾಗಲು ಸಾಧ್ಯವಾಗಿದೆ.
ಶೆಟ್ಟಿಕೆರೆ ವಿದೇಶಿ ಬಾನಾಡಿಗಳನ್ನೇನೋ ಆಕರ್ಷಿಸುತ್ತಿದೆ. ಆದರೆ ಇಲ್ಲಿ ಪಕ್ಷಿಗಳ ಬೇಟೆಗೆ ದುಷ್ಕರ್ಮಿಗಳು ಹೊಂಚು ಹಾಕು ಕುಳಿತಿರುತ್ತಾರೆ. ಪಕ್ಷಿಬೇಟೆ ನಿಯಂತ್ರಣ, ಪಕ್ಷಿಗಳ ವಿಹಾರಕ್ಕೆ ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ. ಜೊತೆಗೆ ಅರಣ್ಯ ಮತ್ತು ಕೆರೆ ಒತ್ತುವರಿ ತಡೆಯಲು ಬಿದಿರು ಸಸಿಗಳನ್ನು ನೆಡುವಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಗದಗ ಜಿಲ್ಲೆ ಬರಗಾಲದಿಂದ ಕೂಡಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನಿರಂತರ ವರ್ಷಧಾರೆ ಸುರಿದಿದೆ. ಬಯಲುಸೀಮೆ ಮಲೆನಾಡಾಗಿ ಪರಿವರ್ತನೆಗೊಳ್ಳುತ್ತಿದೆ. ಬರಡು ಭೂಮಿಯಲ್ಲೂ ನೀರು ಜಿನುಗುತ್ತಿದ್ದು, ಕೆರೆಕಟ್ಟೆಗಳು ತುಂಬಿಹರಿಯುತ್ತಿವೆ. ಸದ್ಯ ಶೆಟ್ಟಿಕೆರೆ ಅದ್ಭುತ ಪ್ರವಾಸಿತಾಣವಾಗಿದೆ. ಶೆಟ್ಟಿಕೆರೆ ಸಮೀಪದ ಕುಂದ್ರಳ್ಳಿ, ಚನ್ನಪಟ್ಟಣ ಗ್ರಾಮಗಳ ಜಮೀನು ನೀರಾವರಿಗೆ ಒಳಪಟ್ಟಿವೆ. ಅಲ್ಲದೇ ಶೆಟ್ಟಿಕೆರೆ ಕಪ್ಪತಗುಡ್ಡ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಬರುತ್ತದೆ.
ಮಾಗಡಿ ಕೆರೆ ರೀತಿಯಲ್ಲಿಯೆ ಶೆಟ್ಟಿ ಕೆರೆ ಅಭಿವೃದ್ಧಿಯಾಗಬೇಕು. ಪ್ರತಿ ವರ್ಷ ನವೆಂಬರ್‌ನಿಂದ ಮಾರ್ಚ್‌ವರೆಗೆ ವಿದೇಶಿ ಹಕ್ಕಿಗಳು ಮಾಗಡಿ ಕೆರೆ ಜೊತೆಗೆ ಶೆಟ್ಟಿ ಕೆರೆಗೂ ಆಗಮಿಸುತ್ತವೆ. ವಿದೇಶಿ ಹಕ್ಕಿಗಳನ್ನು ಕೆಲವರು ಬೇಟೆಯಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆಯೂ ಜಾಗೃತಿ ವಹಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಮಾಗಡಿ ಕೆರೆ ಮಾದರಿಯಲ್ಲೆ ಶೆಟ್ಟಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಬಿದಿರು ಬೆಳೆಸುವ ಮೂಲಕ ಕೆರೆ ಮತ್ತು ಅರಣ್ಯ ಭೂಮಿ ಒತ್ತುವರಿ ತಡೆಯುವ ಜೊತೆಗೆ ಪರಿಸರ ರಕ್ಷಣೆಗೂ ಕೆಲಸ ಮಾಡಲಾಗುತ್ತಿದೆ.
– ಎ.ವಿ. ಸೂರ್ಯಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ

ಅಪಘಾತ ವಲಯ ಕಾಮಗಾರಿ ಪೂರ್ಣಗೊಳಿಸಿ

0

ವಿಜಯಸಾಕ್ಷಿ ಸುದ್ದಿ ಗದಗ:
ಅಪಘಾತ ತಡೆಗಟ್ಟಲು ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಸಂಭವಿಸಬಹುದಾದ ಜೀವಹಾನಿ ತಪ್ಪಿಸಬಹುದು. ಜಿಲ್ಲೆಯ ಅಪಘಾತ ವಲಯಗಳ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಗತಿಯಲ್ಲಿರುವ ನಗರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಬಸ್ ನಿಲ್ದಾಣದ ಹತ್ತಿರ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ರಾಧಾಕೃಷ್ಣ ನಗರದಿಂದ ಕೊಪ್ಪಳ ರಿಂಗ್ ರಸ್ತೆವರೆಗಿನ ಚತುಷ್ಪಥ ರಸ್ತೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೇ ರಸ್ತೆ ಮಧ್ಯೆ ಡಿವೈಡರ್ ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ರಸ್ತೆ ಡಾಂಬರೀಕರಣ ಅಥವಾ ಕಾಂಕ್ರಿಟೀಕರಣ ಮಾಡುವ ಸಂದರ್ಭದಲ್ಲಿ ಅವಶ್ಯಕತೆ ಇರುವಲ್ಲಿ ಮಾತ್ರ ಹಂಪ್ಸ್ ಹಾಕಬೇಕು. ಟ್ರಾಫಿಕ್ ನಿಯಮಗಳಿರುವ ಪ್ರತಿಫಲಿತ ಫಲಕಗಳನ್ನು ಅಳವಡಿಸಬೇಕು. ರಸ್ತೆ ಮೇಲೆ ಮಣ್ಣು ಗುಡ್ಡೆಗಳು ಇರದಂತೆ ಕ್ರಮ ಕೈಗೊಂಡು ರಸ್ತೆಯ ಮೇಲಿರುವ ಮಣ್ಣು ಸ್ವಚ್ಛಗೊಳಿಸಬೇಕು. ರಸ್ತೆಯಲ್ಲೆಲ್ಲ ಗುಂಡಿಗಳು ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಗುಂಡಿಗಳನ್ನು ಮುಚ್ಚುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದರು.
ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಾಹನ ನಿಲುಗಡೆ ಗುರುತಿಸಬೇಕು. ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಬೇಕು. ಇನ್ನುಳಿದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಸಂಚಾರ ದೀಪಗಳ ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಕೆಶಿಗೆ ಇನ್ನೂ ಬುದ್ಧಿ ಬಂದಿಲ್ಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ:
ಡಿಕೆಶಿಯನ್ನು ಬಗ್ಗಸ್ತಿರೋದು ಬಿಜೆಪಿಯಲ್ಲ, ಸಿಬಿಐ. ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ದಾಳಿ ನಡೆಸುತ್ತಿರುವುದು ಬಿಜೆಪಿಯಲ್ಲ, ಸಿಬಿಐ. ಇಷ್ಟಾದರೂ ಡಿಕೆಶಿಗೆ ಬುದ್ಧಿ ಬಂದಿಲ್ಲ ಎಂದು ಆರ್‌ಡಿಪಿಆರ್ ಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರು ಈ ಹಿಂದೆ ಹವಾಲಾ ದಂಧೆಯಲ್ಲಿ ತೊಡಗಿ ಸಿಕ್ಕಿಬಿದ್ದಿದ್ದರು. ಆದರೂ ಅವರಿಗೆ ಬುದ್ಧಿ ಬಂದಿಲ್ಲ. ಅಕ್ರಮ ಮುಂದುವರಿಸಿದ್ದಕ್ಕೆ ಸಿಬಿಐ ದಾಳಿಯಾಗಿದೆ ಎಂದು ಅವರು ಹೇಳಿದರು.
ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಗೆಲುವು ನಿಶ್ಚಿತ. ಎಂಎಲ್‌ಎ, ಎಂಪಿ ಉಪಚುನಾವಣೆಯಲ್ಲಿ ಗೆದ್ದಿದ್ದೇ ಇದಕ್ಕೆ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಮತ್ತಿತರರು ಇದ್ದರು.

ಶಿಶುಗಳಿಗೆ ತಗುಲದ ಸೋಂಕು; ಹೆರಿಗೆ ನಂತರ ತಾಯಂದಿರು ಗುಣಮುಖ

0

ಬಿಯಸ್ಕೆ.
ವಿಶೇಷ ವರದಿ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ವರ್ಷದ ಡಿಸೆಂಬರ್‌ನಿಂದ ಜಗತ್ತನ್ನೇ ಬಾಧಿಸುತ್ತಿರುವ ಕೊವಿಡ್-19 ಜನಜೀವನ ಅಸ್ತವ್ಯಸ್ತವಾಗುವಂತೆ ಈಗೀಗಷ್ಟೇ ಮೊದಲಿನ ಜಗತ್ತಿಗೆ ವ್ಯಾಪಾರ-ವಹೀವಾಟುಗಳು ತೆರೆದುಕೊಳ್ಳುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಗರ್ಭಿಣಿಯರಿಗೂ ಸೋಂಕು ಕಾಣಿಸಿಕೊಂಡಿದ್ದು ಆತಂಕದ ವಿಷಯವಾಗಿತ್ತು. ಸಮಾಧಾನದ ಸಂಗತಿ ಎಂದರೆ ಸೋಂಕು ಕಾಣಿಸಿಕೊಂಡು ಮರಣ ಹೊಂದಿದ ಗರ್ಭಿಣಿಯರ, ಬಾಣಂತಿಯರ ಸಂಖ್ಯೆ ಶೂನ್ಯವಾಗಿರುವುದು.

ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಕೊವಿಡ್-19 ಆಸ್ಪತ್ರೆಗಳಿದ್ದು, ಸೋಂಕು ಕಾಣಿಸಿಕೊಂಡರೆ ಈ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆರಂಭದಲ್ಲಿ ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಾಗ ಆಸ್ಪತ್ರೆ ಸಿಬ್ಬಂದಿ ವಿಚಲಿತರಾಗಿದ್ದು ಸತ್ಯ. ಆದರೆ ತಕ್ಷಣವೇ ಜೀವ ಉಳಿಸುವ ನಿಟ್ಟಿನಲ್ಲಿ ಕೊವಿಡ್-19 ಆಸ್ಪತ್ರೆಯ ಭಾಗವೊಂದರಲ್ಲೇ ಹೆರಿಗೆ ಕೋಣೆ ತೆರೆದು ತಾಯಿ-ಶಿಶು ಜೀವ ರಕ್ಷಿಸಿದ್ದಾರೆ.

ಕೊಪ್ಪಳದ ಕೊವಿಡ್-19 ಆಸ್ಪತ್ರೆಯಲ್ಲಿ ಏಪ್ರಿಲ್ ಆರಂಭದಿಂದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 136 ಜನ ಕೊವಿಡ್-19 ಸೋಂಕಿತ ಗರ್ಭಿಣಿಯರು ದಾಖಲಾಗಿದ್ದರು. ಇವರಲ್ಲಿ 77 ಜನರಿಗೆ ಹೆರಿಗೆಯಾಗಿದ್ದು ಎಲ್ಲ ಶಿಶುಗಳು ಕ್ಷೇಮವಾಗಿವೆ. ನಾಲ್ಕು ಶಿಶುಗಳಿಗೆ ಮೂರು ದಿನಗಳವರೆಗೆ ಸೋಂಕು ಕಾಣಿಸಿಕೊಂಡಿದ್ದು ನಿಜವಾದರೂ ಎದೆ ಹಾಲು ಕುಡಿಯುತ್ತಿದ್ದಂತೆ ಸೋಂಕು ಮಾಯವಾಗಿದೆ. 77 ಹೆರಿಗೆಯಲ್ಲಿ 43 ನಾರ್ಮಲ್ ಹೆರಿಗೆಯಾದರೆ 34 ಸಿಜೇರಿಯನ್ ಹೆರಿಗೆಗಳಾಗಿವೆ.

ಇನ್ನು ಗಂಗಾವತಿ ಕೊವಿಡ್-19 ಆಸ್ಪತ್ರೆಯಲ್ಲಿ ಮೇ ಆರಂಭದಿಂದ ಸೆಪ್ಟೆಂಬರ್ ಅಂತ್ಯದವರೆಗೆ 5 ಜನ ಸೋಂಕಿತ ಗರ್ಭಿಣಿಯರು ದಾಖಲಾಗಿದ್ದರು. 5 ಜನರ ಹೆರಿಗೆ ನಾರ್ಮಲ್ ಆಗಿದ್ದು ಶಿಶುಗಳು ಆರೋಗ್ಯವಾಗಿವೆ.

ಒಟ್ಟಾರೆ ಜಿಲ್ಲೆಯಲ್ಲಿ 136 ಜನ ಕೋವಿಡ್-19 ಸೋಂಕಿತ ಗರ್ಭಿಣಿಯರು ದಾಖಲಾಗಿದ್ದು, 82 ಜನ ಸೋಂಕಿತ ಗರ್ಭಿಣಿಯರ ಹೆರಿಗೆಗಳಾಗಿವೆ. 48 ನಾರ್ಮಲ್ ಮತ್ತು 34 ಸಿಜೆರಿಯನ್ ಹೆರಿಗೆಗಳಾಗಿವೆ. ಹೆರಿಗೆಯ ನಂತರ ಬಾಣಂತಿಯರು ಸೋಂಕಿನಿಂದ ಗುಣಮುಖರಾಗಿದ್ದಾರೆ. 136 ಜನರ ಪೈಕಿ 54 ಜನ ಸೋಂಕಿತ ಗರ್ಭಿಣಿಯರು ಹೆರಿಗೆಗೂ ಮುನ್ನವೇ ಗುಣಮುಖರಾಗಿದ್ದು, ಆನಂತರ ಹತ್ತಿರದ ಆಸ್ಪತ್ರೆಗಳಲ್ಲಿ ಹೆರಿಗೆ ಆಗಿರಬಹುದು.

ಡಾ.ದಾನರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಕೊಪ್ಪಳ


ಕೊವಿಡ್-19 ಸೋಂಕು ಜಿಲ್ಲೆಯಲ್ಲಿ ಹಂತಹಂತವಾಗಿ ತಹಬದಿಗೆ ಬರುತ್ತಿದೆ. ಜಿಲ್ಲೆಯ ಗರ್ಭಿಣಿಯರಲ್ಲೂ ಸೋಂಕು ಕಾಣಿಸಿಕೊಂಡಿದ್ದು ಹೆರಿಗೆ ಸುಸೂತ್ರವಾಗಿದ್ದು ಸ‌ಂತೋಷದ ವಿಷಯ. ಈ ವಿಚಾರದಲ್ಲಿ ಸಾವು-ನೋವು ಸಂಭವಿಸಿಲ್ಲ.
-ಡಾ.ದಾನರಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ, ಕೊಪ್ಪಳ.

ಬೇವೂರು ಬ್ಯಾಂಕ್ ದರೋಡೆ ಪ್ರಕರಣ, ಇಬ್ಬರು ಅಂತಾರಾಜ್ಯ ಖದೀಮರ ಬಂಧನ; ಕೊಪ್ಪಳ ಎಸ್ಪಿ ಜಿ.ಸಂಗೀತಾಗೆ ಸೈಲೆಂಟ್ ಲೇಡಿ ಸಿಂಗಂ ಟೈಟಲ್!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ದರೋಡೆ ಪ್ರಕರಣ ಎಂದು ಕರೆಯಲ್ಪಟ್ಟಿದ್ದ ಬೇವೂರು ಬ್ಯಾಂಕ್ ರಾಬರಿ ಪ್ರಕರಣವನ್ನು ಕೊಪ್ಪಳ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.

ಕೊಪ್ಪಳದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಜಿ.ಸಂಗೀತಾ, ಬೇವೂರು ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ ಇಬ್ಬರು ಅಂತಾರಾಜ್ಯ ಖದೀಮರನ್ನು ಪತ್ತೆ ಹಚ್ಚಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಮಾಡಾ ತಾಲೂಕಿನ ಭಾವಿ ಗ್ರಾಮದ ಪ್ರಶಾಂತ ಅಲಿಯಾಸ್ ಗೋಟುದಾದಾ ಮೋರೆ (30) ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಸಿರಸ ತಾಲೂಕಿನ ಆಕಲೋಜ ಗ್ರಾಮದ ಹರಿದಾಸ ಅಲಿಯಾಸ್ ಹರ್ಷರಾಜ ಟೋಂಬ್ರೆ (35) ಎಂದು ಗುರುತಿಸಲಾಗಿದೆ.

ಬಂಧಿತರಿಂದ 13.81 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ದರೋಡೆ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ, ಮಾರುತಿ ಸ್ವಿಫ್ಟ್ ಕಾರು ಮತ್ತು ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಸೆಪ್ಟೆಂಬರ್ 23ರಂದು ಖದೀಮರ ತಂಡ ಬೇವೂರು ಬ್ಯಾಂಕ್‌ಗೆ ಕನ್ನ ಹಾಕಿದ್ದರು. ದರೋಡೆಗೂ ಮುನ್ನ ಬ್ಯಾಂಕ್‌‌ನ ಸಿಸಿ ಕ್ಯಾಮೆರಾ ಫೂಟೇಜ್ ಸಿಗದಂತೆ ಕನೆಕ್ಷನ್ ಕೇಬಲ್ ಕತ್ತರಿಸಿದ್ದರು. ಗ್ಯಾಸ್ ಕಟರ್ ಮಷಿನ್‌ನಿಂದ ಲಾಕರ್ ಕೊರೆದು, ಅಲ್ಲಿದ್ದ ಸುಮಾರು 1.46 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ್ದರು. ಈ ಕೃತ್ಯದಲ್ಲಿ ಮಹಾರಾಷ್ಟ್ರದ ನಾಲ್ವರಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಸಂತೋಷ್ ಎಂಬಾತ ಈ ಗ್ಯಾಂಗ್‌ನ ಪ್ರಮುಖ ರೂವಾರಿ.

ಸಂತೋಷ್ ಹಾಗೂ ಮತ್ತೊಬ್ಬನ ಪತ್ತೆಗೆ ಜಾಲ ಬೀಸಲಾಗಿದೆ. ಜೊತೆಗೆ ಉತ್ತರ ಪ್ರದೇಶದ 6 ಜನರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಶೀಘ್ರದಲ್ಲೇ ಬಲೆಗೆ ಬೀಳಲಿದ್ದಾರೆ ಎಂದು ಎಸ್ಪಿ ಜಿ.ಸಂಗೀತಾ ತಿಳಿಸಿದರು.


ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ
ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಹಾಗೂ ವಸ್ತುಗಳ ಪತ್ತೆಗೆ ಎಸ್ಪಿ ಜಿ.ಸಂಗೀತಾ, ಗಂಗಾವತಿ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಯಲಬುರ್ಗಾ ಸಿಪಿಐ ಎಂ‌.ನಾಗಿರೆಡ್ಡಿ ನೇತೃತ್ವದಲ್ಲಿ ಕೊಪ್ಪಳ ಡಿಎಸ್‌ಆರ್‌ಬಿ ಘಟಕದ ಪಿಐ ಶಿವರಾಜ ಇಂಗಳೆ, ಕುಕನೂರು ಪಿಎಸ್ಐ ವೆಂಕಟೇಶ ಎನ್., ಕೊಪ್ಪಳ ಡಿಎಸ್ಆರ್‌ಬಿ ಘಟಕದ ಪಿಎಸ್ಐ ಅಮರೇಶ ಹುಬ್ಬಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ವೆಂಕಟೇಶ, ಸಣ್ಣವೀರಣ್ಣ, ಅಶೋಕ, ತಾರಾಸಿಂಗ್, ಕೊಟೇಶ್, ದೇವೇಂದ್ರಪ್ಪ, ರವಿ ರಾಠೋಡ್, ವಿಶ್ವನಾಥ, ಶರಣಪ್ಪ, ಮಹಾಂತಗೌಡ, ರವಿಶಂಕರ ಹಾಗೂ ತಾಂತ್ರಿಕ ವಿಭಾಗದ ಪ್ರಸಾದ ಅವರು ಶ್ರಮಿಸಿದ್ದರು. ಈ ತಂಡಕ್ಕೆ ಎಸ್ಪಿ.ಜಿ.ಸಂಗೀತಾ ಬಹುಮಾನ ಘೋಷಣೆ ಮಾಡಿದರು.


ಸೈಲೆಂಟ್ ಲೇಡಿ ಸಿಂಗಂ!!
ಕೊಪ್ಪಳ ಎಸ್ಪಿ ಜಿ.ಸಂಗೀತಾ, ಜಿಲ್ಲೆಗೆ ಬಂದಾಗಿನಿಂದ ಮಾತು ತುಂಬಾನೇ ಕಮ್ಮಿ. ಆದರೆ ಕೆಲಸದ ವಿಷಯದಲ್ಲಿ ಫಿಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡು ಸೈಲೆಂಟ್ ಲೇಡಿ ಸಿಂಗಂ ಎನಿಸಿಕೊಂಡಿದ್ದಾರೆ. ಮಾಧ್ಯಮ ಮಿತ್ರರೊಂದಿಗೂ ಅವರು ಮಿತಭಾಷಿ. ಬ್ಯಾಂಕ್ ದರೋಡೆ ಪ್ರಕರಣವನ್ನು ಘಟನೆ ನಡೆದು‌ ಕೇವಲ 13 ದಿನಗಳಲ್ಲಿ ಪತ್ತೆ ಹಚ್ಚಿರುವ ಸಾಧನೆ ಶ್ಲಾಘಿಸಿ, ಅವರ ಕಾರ್ಯವೈಖರಿಯನ್ನು ಕಂಡ ಸಾರ್ವಜನಿಕರು ಅಭಿಮಾನಪೂರ್ವಕವಾಗಿ ಎಸ್ಪಿ ಸಂಗೀತಾ ಅವರಿಗೆ ಸೈಲೆಂಟ್ ಲೇಡಿ ಸಿಂಗಂ ಎಂಬ ಟೈಟಲ್‌ನಿಂದ ಕರೆಯುತ್ತಿದ್ದಾರೆ.

ಈಜಲು ಹೋದ ಯುವಕ ನೀರುಪಾಲು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಳಗಾವಿ: ನದಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಜಿಲ್ಲೆಯ, ಗೋಕಾಕ ತಾಲೂಕಿನ ಚಿಗಡೊಳ್ಳಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಯುವಕ ರುದ್ರಪ್ಪ ವಕ್ಕುಂದ (19) ನೀರು ಪಾಲಾಗಿದ್ದಾನೆ. ರಕ್ಷಣಾ ತಂಡಗಳು ಯುವಕನ ಶೋಧ ಕಾರ್ಯ ನಡೆಸುತ್ತಿವೆ.

ಎನಡಿಆರ್ ಎಫ್ , ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮರಳುಗಾರಿಕೆ ದೋಣಿ ಮುಳುಗಡೆ; 7 ಜನರ ರಕ್ಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಉತ್ತರ ಕನ್ನಡ: ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ಕುಮಟಾ ತಾಲೂಕಿನ ಮಾನೀರ್ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಈ ಅವಘಡ ಸಂಭವಿಸಿದ್ದು ದೋಣಿಯಲ್ಲಿದ್ದ 7 ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೀವಗಿಯ ನಿತ್ಯ ಅಂಬಿಗ ಎನ್ನುವವರಿಗೆ ಸೇರಿದ ದೋಣಿ ಇದಾಗಿದ್ದು ಬೆಳಿಗ್ಗೆ ಮರಳುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯ ಮೇಲೆ ಭಾರ ಹೆಚ್ಚಾದ ಪರಿಣಾಮ ನದಿಯಲ್ಲಿ ಮಗುಚಿದ್ದು ಸಮೀಪದಲ್ಲಿದ್ದ ದೋಣಿಯವರು ನೀರಲ್ಲಿ ಬಿದ್ದವರನ್ನು ರಕ್ಷಣೆ ಮಾಡಿದ್ದಾರೆ.

ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ ಗೋವಾ; ಕೆಂಡಾಮಂಡಲವಾದ ಮಹದಾಯಿ ಹೋರಾಟಗಾರರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟವು ಮೂರು ದಶಕಗಳ ದಾಹ ನೀಗಿಸುವ ಭರವಸೆ ಮೂಡಿಸಿತ್ತು. ಈ ನಡುವೆ ಗೋವಾ ಸರಕಾರ ಏಕಾಏಕಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಕರ್ನಾಟಕ ಸರಕಾರದ ವಿರುದ್ಧ ನ್ಯಾಯ್ಯಾಂಗ ನಿಂದನೆ ಆರೋಪ ಮಾಡಿ ಅರ್ಜಿ ಸಲ್ಲಿಸಿದೆ. ಇದರಿಂದ ಹೋರಾಟದ ಶಕ್ತಿಕೇಂದ್ರವಾಗಿದ್ದ ಗದಗನಲ್ಲಿ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಳಸಾ ಬಂಡೂರಿ ಯೋಜನೆಯು ಸಾವಿರಾರು ರೈತರ ಹೋರಾಟದ ಶ್ರಮಕ್ಕೆ ಸಿಕ್ಕ ಗೆಲುವಾಗಿತ್ತು.
ಕಳಸಾ ನಾಲೆ ಯೋಜನೆ ಆರಂಭಿಸಲು ಕ್ಷಣಗಣನೆ ಎಣಿಸುತ್ತಿರುವ ಸಂದರ್ಭದಲ್ಲೇ ಗೋವಾ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದೆ. ಗೋವಾ ಸರಕಾರ ಮತ್ತೆ ತನ್ನ ಮೂಗು ತೂರಿಸಲು ಮುಂದಾಗಿದೆ. ನ್ಯಾಯ್ಯಾಂಗ ನಿಂದನೆ ಆರೋಪ ಮಾಡಿ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅರ್ಜಿ ಸಲ್ಲಿಸಿರುವುದು ರಾಜ್ಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಕಳಸಾ ಯೋಜನೆ ಇನ್ನೇನು ಬಗೆಹರಿಯಿತು. ಉತ್ತರ ಕರ್ನಾಟಕದ ಜನರ ನೀರಿನ ದಾಹ ನೀಗಿತು ಎಂದು ಭಾವಿಸಿದ್ದೆವು. ಮಲಪ್ರಭಾ ನದಿ ನಿರಂತರವಾಗಿ ತುಂಬಿ ಹರಿದು ಈ ಭಾಗದಲ್ಲಿ ಸದಾ ಹಸಿರಿನಿಂದ ನಳನಳಿಸುತ್ತದೆ ಎಂದುಕೊಂಡವರಿಗೆ ಈಗ ಗೋವಾ ಆಘಾತ ನೀಡಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯೆ ಪ್ರವೇಶಿಸಿ ಈ ಭಾಗದ ಜನರಿಗೆ ನ್ಯಾಯ ಒದಗಿಸಬೇಕು ಎನ್ನುವುದು ರೈತರ ಆಗ್ರಹ.

ಈಗಾಗಲೇ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರ ಅಧಿಸೂಚನೆ ಹೊರಡಿಸಲು 2020ರ ಫೆಬ್ರವರಿ 2ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಫೆ.27ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಮಹದಾಯಿ ನದಿ ತಿರುವು ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಈಗ ಮತ್ತೆ ಗೋವಾ ಸರ್ಕಾರ ತಕರಾರು ತೆಗೆದು ಸುಪ್ರೀಂ ಮೇಟ್ಟಿಲೇರಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು. ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ ಇದೇ ರೀತಿ ರಾಜಕೀಯ ಮುನ್ನೆಲೆಗೆ ಬಂದರೆ ಮತ್ತೆ ಕ್ರಾಂತಿಗೆ ಸಿದ್ಧ. ವಿಜಯ ಕುಲಕರ್ಣಿ, ಮಹದಾಯಿ ಹೋರಾಟಗಾರ

ಗೋವಾ ಮುಖ್ಯಮಂತ್ರಿಯಿಂದ ನ್ಯಾಯಾಂಗ ನಿಂದನೆ ಸಲ್ಲಿಸಿದ್ದು ಹಾಸ್ಯಾಸ್ಪದವಾಗಿದೆ. ಕುಡಿಯುವ ನೀರಿಗೆ ಯಾರ ಅನುಮತಿಯ ಅಗತ್ಯವಿಲ್ಲ. ಸಮಸ್ಯೆಯನ್ನು ಜೀವಂತ ಇಡಬೇಕೆನ್ನುವುದು ಬಿಜೆಪಿ ಭಾವಿಸಿರುವಂತಿದೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಮತ್ತೆ ಅದೇ ರಾಜಕೀಯ ಮುಂದುವರಿದಿದೆ. ಅರ್ಜಿ ವಿಚಾರಣೆ ಹಂತದಲ್ಲಿ ಇದ್ದಾಗ ನೀರು ತಿರುಗಿಸಿ ನ್ಯಾಯಾಂಗ ನಿಂದನೆಯ ಆರೋಪ ಮಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ನಡೆ ರಾಜಕೀಯ ದುರುದ್ದೇಶದಿಂದ ಕೂಡಿದೆ. -ಚಂದ್ರು ಚೌಹಾಣ್, ಹೋರಾಟಗಾರ.

ಆಯೋಗದ ನಿರ್ದೇಶನದೊಂದಿಗೆ ಕೊರೋನಾ ನಿಯಮ ಪಾಲಿಸಿ; ಸುಂದರೇಶ್ ಬಾಬು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ;
ಪಶ್ಚಿಮ ಪದವೀಧರರ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳ ಜೊತೆಗೆ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಚುನಾವಣೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.


ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪಶ್ಚಿಮ ಪದವೀಧರರ ಚುನಾವಣೆ-2020 ರ ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಐದಕ್ಕಿಂತ ಹೆಚ್ಚು ಜನರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳದಂತೆ ಕ್ರಮ ವಹಿಸಿಬೇಕು. ಹೆಚ್ಚಿನ ಜನರು ಒಂದೆಡೆ ಸೇರಲು ಅವಕಾಶ ಇಲ್ಲದಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನ ಮತ್ತು ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದರು.


ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಚುನಾವಣಾ ಕೆಲಸ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸ್ವೀಪ್ ಸಮಿತಿ ಮತದಾರರಲ್ಲಿ ಕೊವಿಡ್ ತಡೆಗಟ್ಟುವುದರೊಂದಿಗೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು.


ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ವಿಚಾರ ಪ್ರಕಟಿಸಬೇಕಿದ್ದಲ್ಲಿ ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಿದೆ. ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದಲ್ಲಿ ಸೂಕ್ತ ಕ್ರಮ ವಹಿಸಿಲಾಗುವುದು ಎಂದು ಅವರು ತಿಳಿಸಿದರು.


ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ. ಮಾತನಾಡಿ, ಚುನವಣಾ ಕರ್ತವ್ಯದ ಸಂದರ್ಭದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕಲ್ಲದೇ, ಇನ್ನುಳಿದ ಚುನಾವಣೆಗಳಂತೆ ಪದವೀಧರ ಕ್ಷೇತ್ರಗಳ ಚುನಾವಣೆಗಳು ಅಷ್ಟೇ ಮಹತ್ವದ್ದಾಗಿವೆ. ಜಿಲ್ಲೆಯ ಎಲ್ಲ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಪ್ರಿಂಟರ‍್ಸ್ ಮಾಲೀಕರ ಸಭೆ ಕರೆದು ಚುನಾವಣೆಗೆ ಸಂಬಂಧಿಸಿದ ಕರಪತ್ರ/ಭಿತ್ತಿಪತ್ರ, ಬ್ಯಾನರ‍್ಸ್ ಮುದ್ರಣಕ್ಕೂ ಮುನ್ನ ಅವುಗಳ ಪ್ರತಿಗಳನ್ನು ನೀಡುವಂತೆ ಸೂಚಿಸಬೇಕು. ದೇವಸ್ಥಾನಗಳಲ್ಲಿ ಚುನಾವಣಾ ಸಭೆ ಸೇರದಂತೆ ಕ್ರಮ ಕೈಗೊಳ್ಳಬೇಕು. ವಿಡಿಯೋ ವಿಚಕ್ಷಣಾ ದಳ ಸಭೆ ನಡೆಯುವ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಸೂಚಿಸಿದರು.


ಎಸ್ಪಿ ಯತೀಶ್ ಎನ್. ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧದ ದೂರಿನಲ್ಲಿ ಸ್ಪಷ್ಟತೆ ಇರಬೇಕು. ಅಭ್ಯರ್ಥಿಗಳು 50,000 ರೂ.ಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದು ಕಂಡು ಬಂದರೆ ಹಣ ಜಪ್ತಿ ಮಾಡಲಾಗುವುದು ಎಂದರು. ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತರಬೇತಿಯಲ್ಲಿ ಇದ್ದರು.

error: Content is protected !!