Home Blog Page 218

ಬಳ್ಳಾರಿ ಗಲಭೆ: ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ

0

ಬಳ್ಳಾರಿ: ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಕುಟುಂಬವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ರಾಜಶೇಖರ್ ಅವರ ಮನೆಗೆ ಆಗಮಿಸಿದ ಡಿಸಿಎಂ, ಮೃತರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಮೊನ್ನೆ ನಡೆದ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಈ ಘಟನೆ ನಡೆಯಬಾರದಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಕುಟುಂಬದ ಜೊತೆಗೆ ಪಕ್ಷವೂ ಇದೆ ಎಂಬ ಸಂದೇಶ ನೀಡಲು ಬಂದಿದ್ದೇನೆ” ಎಂದು ಹೇಳಿದರು.

ಮೃತರ ಕುಟುಂಬ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ವಿಚಾರ ಮಾಡಲಾಗುತ್ತದೆ. ಪ್ರಕ್ರಿಯೆಗಳನ್ನು ಪರಿಶೀಲಿಸಿ, ಕಾನೂನು ಚೌಕಟ್ಟಿನ ಅಡಿಯಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನ ಮಾಡಲಾಗುವುದು” ಎಂದು ಭರವಸೆ ನೀಡಿದರು. ಉಳಿದ ವಿಚಾರಗಳ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಕೂಡ ಉಪಸ್ಥಿತರಿದ್ದರು.

ಕರೂರು ಕಾಲ್ತುಳಿತ ಪ್ರಕರಣ: ನಟ–ರಾಜಕಾರಣಿ ವಿಜಯ್‌ಗೆ ಸಿಬಿಐ ನೋಟಿಸ್

0

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ನಡೆದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜಕಾರಣಿ ವಿಜಯ್ ಅವರಿಗೆ ಕೇಂದ್ರ ತನಿಖಾ ದಳ ನೋಟಿಸ್ ಜಾರಿ ಮಾಡಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಈ ಕಾಲ್ತುಳಿತ ದುರಂತದಲ್ಲಿ 41 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ವಿಚಾರಣೆಗೆ ಹಾಜರಾಗುವಂತೆ ವಿಜಯ್ ಅವರಿಗೆ ಸಿಬಿಐ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

2024ರ ಸೆಪ್ಟೆಂಬರ್ 27ರಂದು ಕರೂರಿನ ವೇಲುಸಾಮಿಪುರಂನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ವಿಜಯ್ ಅವರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅತಿಯಾದ ಜನಸಂದಣಿಯಿಂದ ಅವ್ಯವಸ್ಥೆ ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.

ಈ ಘಟನೆ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಕರಣವನ್ನು ನಂತರ ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿತ್ತು.

ತನಿಖೆಯ ಭಾಗವಾಗಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು ಚೆನ್ನೈನಲ್ಲಿರುವ ಟಿವಿಕೆ (TVK) ಕೇಂದ್ರ ಕಚೇರಿಗೆ ಭೇಟಿ ನೀಡಿ, ಕೆಲವು ದಾಖಲೆಗಳು ಹಾಗೂ ರ್ಯಾಲಿ ದಿನ ಸಂಚರಿಸಿದ ಬಸ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದ್ದು, ವಿಜಯ್ ಅವರ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ತೆರಿಗೆಯಲ್ಲೂ ಟಾಪರ್: ಕೊಡಗು ಜಿಲ್ಲೆಯಲ್ಲಿ ರಶ್ಮಿಕಾ ಮಂದಣ್ಣ ನಂಬರ್ ಒನ್

ಮಡಿಕೇರಿ: ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಹೆಮ್ಮೆಯ ನಟಿ ರಶ್ಮಿಕಾ ಮಂದಣ್ಣ ಇದೀಗ ಆದಾಯ ತೆರಿಗೆ ಪಾವತಿಯಲ್ಲಿ ದಾಖಲೆ ಬರೆದಿದ್ದಾರೆ. 2025–26ನೇ ಆರ್ಥಿಕ ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಅತಿ ಹೆಚ್ಚು Income Tax ಪಾವತಿಸಿದ ವ್ಯಕ್ತಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದಾರೆ.

ಕನ್ನಡ ಸಿನಿಮಾರಂಗದಿಂದ ಚಿತ್ರಜಗತ್ತಿಗೆ ಪ್ರವೇಶಿಸಿ, ನಂತರ ತೆಲುಗು ಹಾಗೂ ಬಾಲಿವುಡ್‌ನಲ್ಲೂ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ತಮ್ಮ ವೃತ್ತಿಪರ ವ್ಯವಹಾರಗಳನ್ನು ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ LLP ಮೂಲಕ ನಡೆಸುತ್ತಿದ್ದಾರೆ.

2022ರ ಆಗಸ್ಟ್‌ನಲ್ಲಿ ಆರಂಭಗೊಂಡ ಈ ಪ್ರೊಡಕ್ಷನ್ ಸಂಸ್ಥೆ ಇದೀಗ 2025–26ನೇ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದೆ. ಈ ಹಣಕಾಸು ವರ್ಷದ ಮೂರು ಹಂತಗಳ ತೆರಿಗೆ ಪಾವತಿ ಅವಧಿಯಲ್ಲೂ ರಶ್ಮಿಕಾ ಮಂದಣ್ಣ ನಿರಂತರವಾಗಿ ಮೊದಲ ಸ್ಥಾನದಲ್ಲಿರುವುದು ಗಮನಾರ್ಹವಾಗಿದೆ.

ಮಾರ್ಚ್‌ನಲ್ಲಿ ಹಣಕಾಸು ವರ್ಷ ಅಂತ್ಯವಾಗಲಿದ್ದು, ಅಲ್ಲಿಯವರೆಗೂ ಈ ಸ್ಥಾನವನ್ನು ರಶ್ಮಿಕಾ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ರಶ್ಮಿಕಾ ಮಂದಣ್ಣ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ತೆರಿಗೆ ಶಿಸ್ತು ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ವಿಕಸಿತ ಭಾರತದ ಬ್ರ್ಯಾಂಡ್ ಅಬಾಸಿಡರ್ ಆಗಿಯೂ ಗುರುತಿಸಲಾಗಿದೆ.

ಸಿದ್ದರಾಮಯ್ಯ ಅವರಿಗೆ ಆಲ್ ದ ಬೆಸ್ಟ್, ಗುಡ್ ಲಕ್: ಡಿಸಿಎಂ ಡಿ.ಕೆ.ಶಿವಕುಮಾರ್

0

ಬೆಂಗಳೂರು:“ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರ ನಿವಾಸ ಹಾಗೂ ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಪೂರ್ಣಾವಧಿಗೆ ನಾನೇ ಸಿಎಂ ಆಗಿ ಮುಂದುವರಿಯುವ ವಿಶ್ವಾಸವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಈ ರೀತಿ ಪ್ರತಿಕ್ರಿಯೆ ನೀಡಿದರು.

ಈ ಹೇಳಿಕೆಯಿಂದ ಮತ್ತೆ ಗೊಂದಲವಾಗುವುದಿಲ್ಲವೇ ಎಂದು ಕೇಳಿದಾಗ, “ನೀವುಗಳು (ಮಾಧ್ಯಮಗಳು) ಗೊಂದಲ ಮಾಡಿಕೊಳ್ಳುತ್ತಿದ್ದೀರಿ. ನಮಲ್ಲಿ ಯಾರಿಗೂ ಗೊಂದಲವಿಲ್ಲ” ಎಂದು ತಿಳಿಸಿದರು. ಸಿಎಂ ಅವರು ದಾಖಲೆ ನಿರ್ಮಿಸುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲಾ?

ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ? ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ,

“ಐಟಿ ಸೇರಿದಂತೆ ಇತರೇ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಹತ್ತಿರವೇ ಇದೆಯಲ್ಲವೇ? ಕುಮಾರಸ್ವಾಮಿ ಜೇಬಲ್ಲೇ ಇದ್ದಾವಲ್ಲ? ಪರಿಹಾರ ಹಣದ ಬಗ್ಗೆ ಜಮೀರ್ ಅವರ ಬಳಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು.

ಬಳ್ಳಾರಿ ಭೇಟಿಯ ಬಗ್ಗೆ ಕೇಳಿದಾಗ, “ನಮಗೆ ಈ ರಾಜ್ಯದಲ್ಲಿರುವ ಹಾಗೂ ಬಳ್ಳಾರಿಯಲ್ಲಿ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ಹೋಗಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ” ಎಂದರು.

ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್: ಗ್ಲ್ಯಾಮರ್‌ ಲುಕ್‌ನಲ್ಲಿ ಮಿಂಚಿಂಗ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಮತ್ತೆ ಭರ್ಜರಿ ಸದ್ದು ಮಾಡುತ್ತಿದೆ. ಈ ಬಾರಿ ಚಿತ್ರದ ಐದನೇ ನಾಯಕಿಯ ಲುಕ್ ಬಿಡುಗಡೆ ಆಗಿದ್ದು, ನಟಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲ್ಲಿಸಾ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ಬಿಡುಗಡೆ ಮಾಡಲಾದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈಗಾಗಲೇ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ನಯನತಾರಾ, ಹುಮಾ ಖುರೇಶಿ ಮತ್ತು ತಾರಾ ಸುತಾರಿಯಾ ಅವರ ಲುಕ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ರುಕ್ಮಿಣಿ ವಸಂತ್ ಅವರ ಪರಿಚಯದೊಂದಿಗೆ ಚಿತ್ರದ ಐದು ಪ್ರಮುಖ ನಾಯಕಿಯರ ಅನಾವರಣ ಸಂಪೂರ್ಣಗೊಂಡಿದೆ.

ಕಳೆದ ಒಂದು ತಿಂಗಳಿನಿಂದ ಒಂದೊಂದೇ ಪಾತ್ರಗಳ ಇಂಟ್ರೊಡಕ್ಷನ್ ಮೂಲಕ ಕುತೂಹಲ ಹೆಚ್ಚಿಸಿದ್ದ ಯಶ್ ತಂಡ, ಇದೀಗ ಅಭಿಮಾನಿಗಳಿಗೆ ಫುಲ್ ಅಪ್‌ಡೇಟ್ ನೀಡಿದೆ.

ಜನವರಿ 8ರಂದು ಯಶ್ ಹುಟ್ಟುಹಬ್ಬ ಇರುವುದರಿಂದ ಟಾಕ್ಸಿಕ್ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಟೀಸರ್‌ನಲ್ಲಿ ಐವರು ನಾಯಕಿಯರ ಲುಕ್ ಒಂದೇ ಸಲ ರಿವೀಲ್ ಆಗುವ ಸಾಧ್ಯತೆಯೂ ಇದೆ ಎಂದು ಸಿನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಅವಳಿ ಕರುಗಳಿಗೆ ಅದ್ಧೂರಿ ತೊಟ್ಟಿಲು ಶಾಸ್ತ್ರ: ರಾಮಗಿರಿ ಗ್ರಾಮದಲ್ಲಿ ಅಪರೂಪದ ಸಂಭ್ರಮ

0

ಗದಗ: ಸಾಮಾನ್ಯವಾಗಿ ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಅವಳಿ ಜವಳಿ ಆಕಳು ಕರುಗಳಿಗೆ ಕುಟುಂಬಸ್ಥರು ಅದ್ಧೂರಿಯಾಗಿ ತೊಟ್ಟಿಲು ಕಾರ್ಯ ನೆರವೇರಿಸಿ ಗಮನ ಸೆಳೆದಿದ್ದಾರೆ. ಈ ವಿಶಿಷ್ಟ ಸಂಭ್ರಮಕ್ಕೆ ನೂರಾರು ಗ್ರಾಮಸ್ಥರು ಸಾಕ್ಷಿಯಾದರು.

ಗ್ರಾಮದ ರೈತ ನಾಗರಾಜ್ ಮಡಿವಾಳರ ಮನೆಯಲ್ಲಿ ತೊಟ್ಟಿಲನ್ನು ತೆಂಗಿನ ಗರಿ, ತಳಿರು ತೋರಣ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು. ಮನೆಮಠದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸಂಪ್ರದಾಯದಂತೆ ಮುದ್ದಾದ ಕರುಗಳನ್ನು ತೊಟ್ಟಿಲಿಗೆ ಹಾಕಿ ನೆರೆದವರು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಮಠಾಧೀಶರೂ ಆಗಮಿಸಿ ಸಾಕ್ಷಿಯಾದರು.

ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹಾಗೂ ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಮಹಾಸ್ವಾಮೀಜಿ ಕರುಗಳ ಕಿವಿಯಲ್ಲಿ ಹೆಸರು ಹೇಳುವ ಮೂಲಕ ನಾಮಕರಣ ನೆರವೇರಿಸಿದರು. ಅವಳಿ ಕರುಗಳಿಗೆ ‘ಶಿವ’ ಮತ್ತು ‘ಬಸವ’ ಎಂದು ನಾಮಕರಣ ಮಾಡಲಾಯಿತು.

ಈ ಕರುಗಳಿಗೆ ಜನ್ಮ ನೀಡಿದ ಹಸುವಿಗೆ 15 ದಿನಗಳ ಹಿಂದೆಯೇ ಸೀಮಂತ ಕಾರ್ಯವನ್ನೂ ರೈತ ನಾಗರಾಜ್ ಮಡಿವಾಳ ನೆರವೇರಿಸಿದ್ದರು. ಇದೀಗ ಕರುಗಳಿಗೆ ತೊಟ್ಟಿಲು ಶಾಸ್ತ್ರವನ್ನು ಕೂಡ ಭರ್ಜರಿಯಾಗಿ ನಡೆಸಿ ಕುಟುಂಬಸ್ಥರು ಗ್ರಾಮಸ್ಥರ ಮೆಚ್ಚುಗೆ ಪಡೆದಿದ್ದಾರೆ. ನೂರಾರು ಜನರನ್ನು ಆಹ್ವಾನಿಸಿ ಸಂಭ್ರಮ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರು ಕರುಗಳಿಗೆ ಆರತಿ ಎತ್ತಿ ಸಂಭ್ರಮಿಸಿದರು. ಮಕ್ಕಳಿಗೇ ತೊಟ್ಟಿಲು ಶಾಸ್ತ್ರವನ್ನು ಸರಿಯಾಗಿ ಮಾಡದ ಈ ಕಾಲದಲ್ಲಿ, ಮನೆಯ ಕೊಟ್ಟಿಗೆಯಲ್ಲಿ ಹುಟ್ಟಿದ ಕರುಗಳನ್ನು ಈ ರೀತಿಯಾಗಿ ಸಂಭ್ರಮಿಸುವುದು ನಿಜಕ್ಕೂ ಮಾದರಿ ಕಾರ್ಯ ಎಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಗಂಡನಿಂದ ದೂರವಿದ್ದ ವಿವಾಹಿತ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ

0

ವಿಜಯನಗರ: ಹೊಸಪೇಟೆ ನಗರದಲ್ಲಿ ರಕ್ತಪಾತ ನಡೆದಿದ್ದು, ಗಂಡನಿಂದ ದೂರವಿದ್ದ ವಿವಾಹಿತ ಮಹಿಳೆಯೊಬ್ಬಳನ್ನು ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈಲ್ವೆ ಸ್ಟೇಷನ್ ರಸ್ತೆಯ ಚಾಪಲಗಡ್ಡ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ.

ಮನೆಯ ಮಹಡಿಯ ಮೇಲೆ 28 ವರ್ಷದ ಉಮಾ ಎಂಬ ಮಹಿಳೆಯನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಉಮಾ ಮದುವೆಯಾದ ಬಳಿಕ ಗಂಡ ರಘುಮೂರ್ತಿಯಿಂದ ಕಳೆದ ಆರು ವರ್ಷಗಳಿಂದ ದೂರವಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಮೃತ ಮಹಿಳೆಗೆ ಮೂರು ಮಂದಿ ಮಕ್ಕಳು ಇದ್ದು, ಈ ಕೊಲೆ ಪ್ರಕರಣ ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ಕೊಲೆ ಮಾಡಿದವರು ಯಾರು, ಯಾವ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ವಿಜಯನಗರ ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ್, ಹೊಸಪೇಟೆ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಈ ಸಂಬಂಧ ಹೊಸಪೇಟೆಯ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಕೋರ್ಟ್‌ನಲ್ಲಿ ಬಾಂಬ್ ಭೀತಿ: ಮಧ್ಯಾಹ್ನ ಬ್ಲಾಸ್ಟ್ ಎಚ್ಚರಿಕೆ- ತೀವ್ರ ತಪಾಸಣೆ

0

ಗದಗ: ಗದಗ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಸ್ಫೋಟ ಮಾಡುವುದಾಗಿ ಇ-ಮೇಲ್ ಮೂಲಕ ಬಂದ ಬೆದರಿಕೆ ನಗರವನ್ನೇ ಬೆಚ್ಚಿಬೀಳಿಸಿದೆ. ಮಹಮ್ಮದ್ ರಾಜಗುರು ಎಂಬ ಹೆಸರಿನಿಂದ ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ, ಮಧ್ಯಾಹ್ನದ ವೇಳೆಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಈ ಸಂದೇಶದ ಬೆನ್ನಲ್ಲೇ ನ್ಯಾಯಾಲಯದ ಸಿಬ್ಬಂದಿ ಹಾಗೂ ಹಾಜರಿದ್ದ ಜನರು ಭೀತಿಗೊಂಡು ಕಟ್ಟಡದಿಂದ ಹೊರಗೆ ಬಂದಿದ್ದಾರೆ. ತಕ್ಷಣವೇ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.

ಎಸ್ಪಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ನ್ಯಾಯಾಲಯ ಆವರಣವನ್ನು ಸಂಪೂರ್ಣವಾಗಿ ಸೀಲ್ ಮಾಡಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆಯೇ ಎಂಬುದರ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಯುತ್ತಿದೆ.

ಇ-ಮೇಲ್ ಬಂದ ಮೂಲ, ಕಳುಹಿಸಿದ ವ್ಯಕ್ತಿಯ ಗುರುತು ಹಾಗೂ ಉದ್ದೇಶ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಕೈಗೊಂಡಿದ್ದಾರೆ. ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

ಬ್ಯಾನರ್ ಗಲಾಟೆ ಹಿಂದೆ ದೊಣ್ಣೆ ರಾಜಕಾರಣ? ಜನಾರ್ದನ ರೆಡ್ಡಿ ಮನೆ ಆವರಣದಲ್ಲಿ ದೊಣ್ಣೆಗಳ ರಾಶಿ ಪತ್ತೆ

0

ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಪ್ರಕರಣದಲ್ಲಿ ರಾಜಕೀಯ ಹಿಂಸಾಚಾರದ ಮತ್ತೊಂದು ಮುಖ ಬಹಿರಂಗವಾಗಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಆವರಣದಲ್ಲಿ 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ಗಲಾಟೆಯ ವೇಳೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು. ಇದೀಗ ರೆಡ್ಡಿ ಮನೆ ಆವರಣದಲ್ಲೇ ದೊಣ್ಣೆಗಳ ರಾಶಿ ಪತ್ತೆಯಾಗಿರುವುದು, ಹಲ್ಲೆಗೆ ಪೂರ್ವಸಿದ್ಧತೆ ನಡೆದಿತ್ತೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಘಟನೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಮಾತ್ರವಲ್ಲದೆ, ಜನಾರ್ದನ ರೆಡ್ಡಿ ಪರ ಬೆಂಬಲಿಗರಿಂದಲೂ ಹಲ್ಲೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಾಂಗ್ರೆಸ್ ಕಾರ್ಯಕರ್ತರು ಕಲ್ಲೆಸೆದರೆ, ಬಿಜೆಪಿ ಬೆಂಬಲಿಗರು ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

ಪತ್ತೆಯಾದ ದೊಣ್ಣೆಗಳ ಮೂಲ, ಬಳಕೆಯ ಉದ್ದೇಶ ಹಾಗೂ ಯಾರ ನಿರ್ದೇಶನದ ಮೇರೆಗೆ ಅವುಗಳನ್ನು ಸಂಗ್ರಹಿಸಲಾಗಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ಸದ್ದು ಮಾಡುವ ಸಾಧ್ಯತೆ ಇದೆ.

ಪ್ರೀತಿ ವಿಚಾರದಲ್ಲಿ ಯುವಕನ ಕಿರಿಕ್: ಮನನೊಂದು ಬಾಲಕಿ ನೇಣಿಗೆ ಶರಣು

0

ಬೆಂಗಳೂರು ಉತ್ತರ: ಪ್ರೀತಿ ವಿಚಾರದಲ್ಲಿ ಯುವಕನ ಕಿರುಕುಳಕ್ಕೆ ಬೇಸತ್ತು 17 ವರ್ಷದ ಬಾಲಕಿ ನೇಣಿಗೆ ಶರಣಾದ ಘಟನೆ ನೆಲಮಂಗಲ ತಾಲೂಕಿನ ಅಂಚೇಪಾಳ್ಯ ಪ್ರಕೃತಿ ಲೇಔಟ್‌ನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ತೇಜಸ್ವಿನಿ (17) ಎಂದು ಗುರುತಿಸಲಾಗಿದ್ದು, ಪ್ರೀತಿಸುವ ವಿಷಯದಲ್ಲಿ ನಡೆದ ಕಿರುಕುಳದಿಂದ ತೀವ್ರ ಮನಸ್ತಾಪಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿ ಅನುಭವಿಸುತ್ತಿದ್ದ ಮಾನಸಿಕ ಒತ್ತಡವೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಘಟನೆ ನಡೆದ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಗಾರಕ್ಕೆ ಕಳುಹಿಸಲಾಗಿದೆ.

ಬಾಲಕಿಯ ಪೋಷಕರು, ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಕಾರಣವೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

error: Content is protected !!