Home Blog Page 2185

ನಿವೃತ್ತ ಸೈನಿಕ ಸೇರಿ ಅಂತಾರಾಜ್ಯ ಕಳ್ಳರ ಬಂಧನ, 30 ಲಕ್ಷ ರೂ, 224 ಗ್ರಾಂ ಚಿನ್ನ ವಶ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಸುರತ್ಕಲ್: ತಿಂಗಳ ಹಿಂದೆ ಕಳ್ಳತನ ಮಾಡಿ, ಅಪಾರ ಹಣ ಮತ್ತು ಚಿನ್ನ ಹೊತ್ತೊಯ್ದ ಒಂದು ಅಂತರ್‌ರಾಜ್ಯ ಕಳ್ಳರ ತಂಡವನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕೇರಳ ಮತ್ತು ಕರ್ನಾಟಕ ಕರಾವಳಿಯ ವ್ಯಕ್ತಿಗಳು ಈ ತಂಡದ ಸದಸ್ಯರಾಗಿದ್ದಾರೆ.

ಸೇನೆಯಿಂದ ನಿವೃತ್ತರಾದ ಒಬ್ಬ ವ್ಯಕ್ತಿಯೂ ಈ ಸಂಚು ರೂಪಿಸುವುದರಲ್ಲಿ ಭಾಗಿಯಾಗಿದ್ದು ಆತನನ್ನೂ ಅರೆಸ್ಟ್ ಮಾಡಲಾಗಿದೆ.

ಬಂಧಿತರಿಂದ 30 ಲಕ್ಷ 85 ಸಾವಿರ 710 ರೂ., 224 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಉಳಿದ ಸಂಪತ್ತನ್ನು ಆರೋಪಿಗಳು ಖರ್ಚು ಮಾಡಿದ್ದಾರೆ.

ಆಗಸ್ಟ್ 17ರಂದು ಸುರತ್ಕಲ್ ಬಳಿಯ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ಮೆಂಟಿನ ನಿವಾಸಿ ವಿದ್ಯಾಪ್ರಭು ಎನ್ನುವವರ ಮನೆಯನ್ನು ಬಾಲ್ಕನಿ ಮೂಲಕ ಪ್ರವೇಶಿಸಿದ್ದ ಕಳ್ಳರು ಅಪಾರ ಹಣ ಮತ್ತು ಚಿನ್ನವನ್ನು ಕದ್ದಿದ್ದರು. ತನಿಖೆ ಆರಂಭಿಸಿದ್ದ ಸುರತ್ಕಲ್ ಪೊಲೀಸರು, ಸೆ. 15ರಂದು ಕೇರಳದ ತಿರುವನಂತಪುರಂನ ರಘು ಮತ್ತು ಅಮೇಶ್ ಎಂಬಿಬ್ಬರನ್ನು ಬಂಧಿಸಿದ್ದರು.

ಅದೇ ಅಪಾರ್ಟ್ಮೆಂಟಿನ ನಿವಾಸಿ, ಅಪಾರ್ಟ್ಮೆಂಟಿನ ಸೆಕ್ರೆಟರಿಯೂ ಆಗಿರುವ ಮತ್ತು ಸ್ಥಳೀಯ ಬಾರ್/ವೈನ್‌ಶಾಪ್‌ನಲ್ಲಿ ಮ್ಯಾನೇಜರ್ ಆಗಿರುವ ನವೀನ್ ಮತ್ತು ಬಾರ್‌ನಲ್ಲಿ ವೇಟರ್ ಆಗಿರುವ ಬೆಳ್ತಂಗಡಿಯ ಸಂತೋಷ್ ಈ ಕಳ್ಳತನದ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿತ್ತು. ಸದ್ಯ ಇವರಿಬ್ಬರನ್ನೂ ಬಂಧಿಸಲಾಗಿದ್ದು, ನವೀನ್ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದಾನೆ ಎನ್ನಲಾಗಿದೆ.

ಇನ್ನಿಬ್ಬರು ಕೇರಳ ಮೂಲದ ಆರೋಪಿಗಳಿಗಾಗಿ ಪೊಲೀಸರು ಶೊಧ ನಡೆಸಿದ್ದಾರೆ. ಕದ್ದ ಹಣದಲ್ಲಿ ಸಾಕಷ್ಟು ಹಣವನ್ನು ಆರೋಪಿಗಳು ಮಜಾ ಮಾಡಿ, ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಉಳಿದ ಹಣ, ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ವಾರಸುದಾರರಿಗೆ ನೀಡಿದ್ದಾರೆ.

ಅಮಾನತ್ತು ಹಿಂಪಡೆಯುವವರೆಗೆ ರಾಜ್ಯಸಭಾ ಕಲಾಪ ಬಹಿಷ್ಕಾರ: ವಿಪಕ್ಷಗಳ ನಿರ್ಧಾರ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಎಂಟು ರಾಜ್ಯಸಭಾ ಸದಸ್ಯರ ಅಮಾನತ್ತನ್ನು ಹಿಂಪಡೆಯುವವರೆಗೆ ರಾಜ್ಯಸಭಾ ಕಲಾಪವನ್ನು ಬಹಿಷ್ಕರಿಸಲು ವಿಪಕ್ಷಗಳು ನಿರ್ಧರಿಸಿವೆ ಎಂದು ರಾಜ್ಯಸಭೆಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಮಂಗಳವಾರ ಶೂನ್ಯವೇಳೆಯ ನಂತರ ಮಾತನಾಡಿದ ಅವರು, ಇದಲ್ಲದೇ ಇನ್ನು ಎರಡು ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಪೋರೇಟ್ ಕಂಪನಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಉತ್ಪನ್ನ ಖರೀದಿಸುವಂತಿಲ್ಲ ಎಂಬ ನಿಯಮವನ್ನು ಮಾಡಬೇಕು. ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲು ಡಾ. ಸ್ವಾಮಿನಾಥನ್ ಆಯೋಗ ಸೂಚಿಸಿರುವ ಮಾರ್ಗಸೂಚಿ ಅನುಸರಿಸಬೇಕು. ಈ ಮೂರೂ ಬೇಡಿಕೆ ಈಡೇರುವವರೆಗೆ ರಾಜ್ಯಸಭಾ ಕಲಾಪ ಬಹಿಷ್ಕಾರ ಮಾಡಲು ವಿಪಕ್ಷಗಳು ನಿರ್ಧರಿಸಿವೆ ಎಂದು ಹೇಳಿದರು.

ಮಂಗಳವಾರ ಮುಂಜಾನೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಿಂಗ್ ಪ್ರತಿಭಟನಾ ನಿರತ ಎಂಟು ಸಂಸದರಿಗೆ ಚಹಾ ನೀಡಲು ಹೋದಾಗ ಅವರು ನಿರಾಕರಿಸಿದ್ದರು. ನಂತರ ಪ್ರಧನಿ ಮೋದಿ, ‘ತಮ್ಮನ್ನು ಅವಮಾನಿಸಿದವರಿಗೆ ಚಹಾ ನೀಡಿ ಉಪಚರಿಸಲು ಹೋದ ಹರಿವಂಶ್ ಅವರದ್ದು ವಿಶಾಲ ಹೃದಯ’ ಎಂದು ಹೊಗಳಿದ್ದರು. ಈ ನಡುವೆ ಭಾನುವಾರ ತಮಗೆ ಅವಮಾನವಾಗಿದ್ದನ್ನು ಪ್ರತಿಭಟಿಸಿ ಉಪ ಸಭಾಪತಿ ಹರಿವಂಶ್ ಸಿಂಗ್ ಕೂಡ ಒಂದು ದಿನದ ಉಪವಾಸ ವೃತದಲ್ಲಿದ್ದಾರೆ.

ತಾಜ್‌ಮಹಲ್ ಪುನರಾರಂಭ: ಮೊದಲ ಸಂದರ್ಶಕ ಯಾರು ಗೊತ್ತಾ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಲಾಕ್‌ಡೌನ್ ಮತ್ತು ಕೊವಿಡ್ ಬಿಕ್ಕಟ್ಟುಗಳ ಕಾರಣದಿಂದ ಹಲವು ತಿಂಗಳಿನಿಂದ ಪ್ರವಾಸಿಗರಿಗೆ ಮುಚ್ಚಲ್ಪಟ್ಟಿದ್ದ ತಾಜ್‌ಮಹಲ್ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ. ಕುತೂಹಲದ ವಿಷಯ ಎಂದರೆ, ಪುನರಾರಂಭದ ನಂತರ ಮೊದಲ ವಿಸಿಟರ್ ಚೀನಾದ ನಾಗರೀಕ ಎನ್ನುವುದು!

ಸೋಮವಾರ ಬೆಳಿಗ್ಗೆ 5.39ಕ್ಕೆ ಚೀನಾದ ಲಿಯಾಂಗ್ ಚಿಯಾಚೆಂಗ್ ಎಂಬ ವ್ಯಕ್ತಿಯ ಪ್ರವೇಶದೊಂದಿಗೆ ಮಾರ್ಚ್ ನಿಂದ ಬಂದ್ ಆಗಿದ್ದ ತಾಜ್‌ಮಹಲ್ ಮತ್ತೆ ಜನರಿಗೆ ತೆರೆದುಕೊಂಡಿದೆ. ಇದೇನೂ ವಿಶೇಷ ಸುದ್ದಿಯಲ್ಲವಾದರೂ, ಕೆಲವು ಗುಂಪುಗಳಿಗೆ ಇದು ಆಘಾತಕಾರಿ ಸುದ್ದಿಯೇ ಅನಿಸಬಹುದು!

ಸದ್ಯ ದಿನಕ್ಕೆ 5 ಸಾವಿರ ಜನರಿಗೆ ಮಾತ್ರ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ ಮೊದಲ ದಿನ ಶೇ.25ರಷ್ಟು ಟಿಕೆಟ್ ಮಾತ್ರ ಮಾರಾಟವಾಗಿದ್ದವು.

ಇಂದು ರಾಜಸ್ತಾನ್ ರಾಯಲ್ಸ್ ಮೊದಲ ಮ್ಯಾಚ್: ಗದಗ ಹುಡುಗ ಅನಿರುದ್ಧ ಜೋಶಿ ಆಡುವನೇ ಐಪಿಎಲ್ ಮ್ಯಾಚ್?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗದಗ ಮಣ್ಣಿನಲ್ಲಿ ಪ್ಯಾಡು, ಗ್ಲೌವ್ಸ್ ಹಾಕದೇ ಗಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದ್ದ ‘ನಮ್ಮೂರ ಹುಡುಗ’ ಅನಿರುದ್ಧ ಜೋಶಿ ಈಗ ಸಮುದ್ರದಾಚೆ ಹಾರಿದ್ದಾನೆ. ಅಲ್ಲಿ ಅರಬ್ಬರ ನಾಡಿನಲ್ಲಿ ಈ ಸಲ ಆಡುವ 11ರ ತಂಡದಲ್ಲಿ ನಮ್ಮೂರ ಹುಡುಗನಿಗೆ ಅವಕಾಶ ಸಿಗಲಿದೆಯೇ ಎಂದು ಗದಗ-ಧಾರವಾಡ ಮತ್ತು ಈ ಭಾಗದ ಕ್ರಿಕೆಟ್ ಪ್ರೇಮಿಗಳೆಲ್ಲ ಉತ್ಸಾಹದಿಂದ ಕಾದಿದ್ದಾರೆ.

ಕಳೆದ ವರ್ಷ 2019ರ ಐಪಿಎಲ್ 12ನೇ ಆವೃತ್ತಿಯಲ್ಲಿ ಅನಿರುದ್ಧ ಜೋಶಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಅನಿರುದ್ಧ ನಂತರದಲ್ಲಿ ಕರ್ನಾಟಕದ ಟ್ವೆಂಟಿ-20 ಮತ್ತು ಏಕದಿನ ತಂಡಗಳ ಪರ ಆಡಿ ಗಮನಾರ್ಹ ಸಾಧನೆ ಮಾಡಿದ್ದಾನೆ.

ಸತತ ಎರಡು ವರ್ಷ ಸಯೀದ್ ಮುಷ್ತಾಕ್ ಅಲಿ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆದ ಕರ್ನಾಟಕ ತಂಡದಲ್ಲಿದ್ದ ಅನಿರುದ್ಧ ಜೋಶಿ, ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದ. ಡೆತ್ ಓವರ್‌ಗಳಲ್ಲಿ ಭರ್ಜರಿ ಹೊಡೆತಗಳ ಆಟವಾಡಿ ಕೆಲವು ಕಠಿಣ ಗೆಲವುಗಳನ್ನು ತಂದು ಕೊಟ್ಟಿದ್ದ. ಹೀಗಾಗಿಯೇ ಈ ಸಲ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಆಯ್ಕೆ ಆಗಿದ್ದಾನೆ.

ಇಂದು ರಾಜಸ್ತಾನ್ ರಾಯಲ್ಸ್ ಮೊದಲ ಪಂದ್ಯ ಆಡಲಿದ್ದು, ಅನಿರುದ್ಧನಿಗೆ ಆಡುವ 11ರ ತಂಡದಲ್ಲಿ ಅವಕಾಶ ಸಿಗಲಿದೆ ಎಂದೇ ಕ್ರಿಕೆಟ್ ಪ್ರೇಮಿಗಳು ಆಶಾಭಾವನೆ ಇಟ್ಟುಕೊಂಡಿದ್ದಾರೆ.

        ಗದಗಿನಿಂದ ಜರ್ನಿ ಆರಂಭ

ಸಣ್ಣ ನಗರಗಳ ಎಲ್ಲ ಹುಡುಗರಂತೆ ಗಲ್ಲಿ ಕ್ರಿಕೆಟ್‌ನಲ್ಲಿ ಆಡುತ್ತ ಬೆಳೆದ ಅನಿರುದ್ಧ, ನಂತರ ಸ್ವತಃ ಕ್ರಿಕೆಟರ್ ಆಗಿದ್ದ ಅವರ ತಂದೆ ದಿ. ಅಶೋಕ್ ಜೋಶಿಯವರು ಸ್ಥಾಪಿಸಿದ್ದ ಗದಗ ಕ್ರಿಕೆಟ್ ಅಕಾಡೆಮಿಯಲ್ಲಿ ತಂದೆಯಿಂದ ತರಬೇತಿ ಪಡೆದ. ಮುಂದೆ ಚಿಕ್ಕಪ್ಪ ಸುನೀಲ್ ಜೋಶಿಯ ಮಾರ್ಗದರ್ಶನವೂ ಸಿಕ್ಕಿತು. ಅಶೋಕ್ ಜೋಶಿಯವರ ಅಕಾಡೆಮಿ ಕಾರ್ಯ ಸ್ಥಗಿತಗೊಳಿಸಿದ ನಂತರ, ಮುನ್ನಾ ಗುಳೇದಗುಡ್ಡ ಅವರ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗನಲ್ಲಿ ಕೋಚಿಂಗ್ ಪಡೆದ.

ಈ ಕ್ಲಬ್ ಪರವಾಗಿ ಕರ್ನಾಟಕ ಕ್ರಿಕೆಟ್ ಮಂಡಳಿ ನಡೆಸುತ್ತಿದ್ದ ಧಾರವಾಡ ವಲಯ ಲೀಗ್ ಪಂದ್ಯಗಳಲ್ಲಿ ಈ ಕ್ಲಬ್ ಪರವಾಗಿಯೇ ಆಡಿ ಮಿಂಚಿದ 2002ರಲ್ಲಿ ರಾಜ್ಯ ಅಂಡರ್-15 ತಂಡದ ಪರ ವಿವಿಧ ರಾಜ್ಯಗಳ ವಿರುದ್ಧ ಆಡಿದ. ನಂತರ ಅಂಡರ್-17, ಅಂಡರ್-19 ತಂಡಗಳಲ್ಲಿ ಸ್ಥಾನ ಗಿಟ್ಟಿಸಿ ಅದರಲ್ಲೂ ಸೈ ಅನಿಸಿಕೊಂಡ.

ಅನಿರುದ್ಧನಿಗೆ ದೊಡ್ಡ ಬ್ರೇಕ್ ನೀಡಿದ್ದು ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್). ಮೊದಲಿಗೆ ನಮ್ಮ ಶಿವಮೊಗ್ಗ ತಂಡದ ಪರ ಆಡಿ ತಾನೊಬ್ಬ ಟ್ವೆಂಟಿ-20 ಪರ್ಫೆಕ್ಟ್ ಪ್ಲೇಯರ್ ಎಂಬುದನ್ನು ಸಾಬೀತು ಪಡಿಸಿದ. ನಂತರದ ವರ್ಷಗಳಲ್ಲಿ ವಿವಿಧ ಕೆಪಿಎಲ್ ತಂಡಗಳಲ್ಲಿ ಅವಕಾಶ ಗಿಟ್ಟಿಸಿದ. ಅಷ್ಟರಲ್ಲಾಗಲೇ, ರಾಜ್ಯ ಕ್ರಿಕೆಟ್ ಆಯ್ಕೆದಾರರ ಗಮನ ಸೆಳೆದಿದ್ದ ಅನಿರುದ್ಧ ರಾಜ್ಯದ ಏಕದಿನ ಮತ್ತು ಟ್ವೆಂಟಿ-20 ತಂಡಗಳ ಖಾಯಂ ಸದಸ್ಯನಾದ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಸತತ ಎರಡು ವರ್ಷ ಚಾಂಪಿಯನ್ ಆಯಿತಲ್ಲ, ಆಗ ಪ್ರಮುಖ ಪಂದ್ಯಗಳಲ್ಲಿ ಅಂತಿಮ ಅಂದರೆ ಡೆತ್ ಓವರ್‌ಗಳಲ್ಲಿ ಅನಿರುದ್ಧ ‘ಗುಡ್ ಫಿನಿಶರ್’ ಎನಿಸಿ, ಗೆಲುವು ತಂದಿದ್ದ. ಈಗ ಈ ಹುಡುಗನಿಗೆ ಸೆ.22 ರಂದು ಆಡುವ ಅವಕಾಶ ಸಿಗಲಿ. ಗದಗ ಕೀರ್ತಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಬೆಳಗುವಂತಾಗಲಿ ಎಂದು ವಿಜಯಸಾಕ್ಷಿ ಹಾರೈಸುತ್ತದೆ.


      ಅವತ್ತಿನ ನಾಟ್‌ಔಟ್ 73

2018ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ತಾನದ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನು ಹತ್ತಿದ್ದ ಕರ್ನಾಟಕ ತಂಡ ಸಂಕಷ್ಟದಲ್ಲಿತ್ತು. ಆಗ ಕ್ರೀಸ್‌ಗೆ ಬಂದ ಅನಿರುದ್ಧ ಬಿರುಸಿನ ಹೊಡೆತಗಳ ಮೂಲಕ 73 ರನ್ ಗಳಿಸಿ ರಾಜ್ಯಕ್ಕೆ ಜಯ ತಂದಿದ್ದ. ಈ ಬಲಗೈ ಬ್ಯಾಟ್ಸಮನ್ ಮತ್ತು ಬಲಗೈ ಆಫ್‌ಬ್ರೇಕ್ ಬೌಲರ್ ಕ್ಷಿಪ್ರ ಮಾದರಿಯ ಕ್ರಿಕೆಟ್‌ಗೆ ಸರಿ ಹೊಂದುವ ಆಟಗಾರನಂತೂ ಹೌದು.

ರಾಜಸ್ತಾನ್ ರಾಯಲ್ಸ್ ತಂಡಕ್ಕೂ ಈಗ ಅನಿರುದ್ಧನಂತಹ ಆಲ್‌ರೌಂಡರ್ ಅಗತ್ಯ ಇರುವುದರಿಂದ ಈ ಸಲ ಆಡಲು ಅವಕಾಶ ಸಿಗಲಿದೆ. ಅವಕಾಶ ಸಿಕ್ಕರೆ ಅನಿರುದ್ಧ ಸದುಪಯೋಗ ಮಾಡಿಕೊಂಡು ಬೆಳೆಯುತ್ತಾನೆ.
   
ಮುನ್ನಾ ಗುಳೇದಗುಡ್ಡ, ಕ್ರಿಕೆಟ್ ಕೋಚ್,
     ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ

ಲಾರಿಗಳ ನಡುವೆ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ: ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ಮಪ್ಪಿರುವ ಘಟನೆ ತಾಲೂಕಿನ ನಾರಾಯಣಾಪುರದ ಬಳಿ ನಡೆದಿದೆ.

ಮೈಸೂರು ಮೂಲದ 55 ವರ್ಷದ ಮಂಜುನಾಥ್ ಹಾಗೂ ರೋಣ ತಾಲೂಕಿನ ಮೆಣಸಗಿ ಗ್ರಾಮದ 40 ವರ್ಷದ ಮೋಹನ್ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಗದಗನಿಂದ ಕುಷ್ಟಗಿಗೆ ಹಾಗೂ ಬೇರೆಡೆಯಿಂದ ಗದಗ ಕಡೆಗೆ ಬರಿತ್ತಿದ್ದ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಂ-ಕೇರ್ಸ್ ನಿಧಿಗೆ ನವೋದಯ ಶಾಲೆ ಕೋಟಾದಲ್ಲಿ ನೀಡಿದ್ದು ದೇಣಿಗೆಯೋ, ವಸೂಲಿಯೋ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಸಾವಿರಾರು ಕೋಟಿ ರೂ.ಗಳನ್ನು ಪಿಎಂ-ಕೇರ‍್ಸ್ ನಿಧಿಗೆ ದೇಣಿಗೆ ನೀಡಿದ್ದು ಈಗ ಹಳೆಯ ವಿಷಯ. ಈಗ ಆರ್‌ಟಿಐ ಮೂಲಕ ಹೊರ ಬಂದ ಹೊಸ ಸತ್ಯ ಏನೆಂದರೆ ದೇಶದ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಹಳ್ಳಿ ಮಕ್ಕಳಿಗಾಗಿ ಇರುವ ನವೋದಯ ಶಾಲೆಗಳು ಪಿಎಂ-ಕೇರ‍್ಸ್ಗೆ 21.81 ಕೋಟಿ ರೂ. ದೇಣಿಗೆ ನೀಡಿವೆ.

ಇದು ದೇಣಿಗೆಯೋ ಅಥವಾ ಅಧಿಕಾರ ಬಳಸಿ ಒತ್ತಾಯದಿಂದ ನಡೆಸಿದ ವಸೂಲಿಯೋ ಎಂಬ ಪ್ರಶ್ನೆ ಎದ್ದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈ ಹಿಂದೆ ಆಗಸ್ಟ್ 19ರಂದು ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಪ್ರಕಾರ, 38 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು 2,105 ಕೋಟಿ ರೂ. ದೇಣಿಗೆ ನೀಡಿವೆ. ಸಾಮಾಜಿಕ ಜವಾಬ್ದಾರಿ ನಿಧಿಯ ಹಣವನ್ನು ಈ ಕಂಪನಿಗಳು ಪಿಎಂ-ಕೇರ‍್ಸ್ಗೆ ನೀಡಿದ್ದವು. ಈ ಕಂಪನಿಗಳಿಗೂ ದೇಣಿಗೆ ನೀಡಲೇಬೇಕೆಂಬ ಮೌಖಿಕ ಆದೇಶವಿತ್ತು ಎನ್ನಲಾಗಿದೆ.

ಪಿಎಂ-ಕೇರ‍್ಸ್ ನಿಧಿಯ ವಿವರಗಳನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತ ಬಂದಿದೆ. ಹೀಗಾಗಿ ಸ್ವತ: ಇಂಡಿಯನ್ ಎಕ್ಸ್ ಪ್ರೆಸ್ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಆರ್‌ಟಿಐ ಸಲ್ಲಿಸಿ ಈ ಮಾಹಿತಿ ಪಡೆದಿತ್ತು. ಈಗ ನವೋದಯ ಸೇರಿದಂತೆ ಇತರ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಪ್ರಕಾರ, ಈ ಸಂಸ್ಥೆಗಳಿಂದ 21.81 ಕೋಟಿ. ರೂ ದೇಣಿಗೆ ಹರಿದು ಬಂದಿದೆ.

ಯಾವುದೇ ನಿಧಿ ಇರಲಿ, ಅದಕ್ಕೆ ಸ್ವ ಇಚ್ಛೆಯಿಂದ ಬಂದ ದೇಣಿಗೆ ಮಾತ್ರ ಸ್ವೀಕರಿಸಬೇಕು. ಆದರೆ ಸಾರ್ವಜನಿಕರಿಗೇ ಸೇರಿದ ಕಂಪನಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ದೇಣಿಗೆ ಪಡೆಯುವುದು ವಿಚಿತ್ರವಾಗಿದೆ ಅಲ್ಲವೆ?

ಅಮಾನತ್ತಾದ ಸಂಸದರಿಂದ ಸಂಸತ್ ಲಾನ್‌ನಲ್ಲಿ ಅಹೋರಾತ್ರಿ ಧರಣಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೋಮವಾರ ರಾಜ್ಯಸಭೆಯಲ್ಲಿ ವಾರ ಕಾಲ ಅಮಾನತ್ತಾದ 8 ಸಂಸದರು ಸಂಸತ್ ಆವರಣದ ಹುಲ್ಲುಹಾಸಿನಲ್ಲಿ ತಮ್ಮ ಪ್ರತಿಭಟನೆಯನ್ನು ಇನ್ನೂ ಮುಂದುವರೆಸಿದ್ದಾರೆ.

ಮಂಗಳವಾರ ಮುಂಜಾನೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಂಸದರ ಬಳಿ ಹೋಗಿ ಚಹಾ ಸೇವಿಸಲು ಕೋರಿದರು. ಉಪ ಸಭಾಪತಿಯವರ ‘ಟೀ-ಪಾರ್ಟಿ’ ನಿರಾಕರಿಸಿದ ಎಂಟೂ ಸಂಸದರು ಅವರನ್ನು ‘ರೈತ ವಿರೋಧಿ’ ಎಂದು ಟೀಕಿಸಿದರು.

ಭಾನುವಾರ 2 ಕೃಷಿ ಮಸೂದೆಗಳನ್ನು ಭೌತಿಕ ಮತದಾನದ ಬದಲು ಧ್ವನಿಮತಕ್ಕೆ ಹಾಕಿದ್ದನ್ನು ವಿರೋಧಿಸಿ ವಿಪಕ್ಷ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ, ಗದ್ದಲ ನಡೆಸಿದ್ದರು. ಸೋಮವಾರ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು 8 ವಿಪಕ್ಷ ಸಂಸದರನ್ನು 7 ದಿನದವರೆಗೆ ಕಲಾಪದಿಂದ ಅಮಾನತ್ತು ಮಾಡಿದ್ದರು.

ಈ ಸಂಸದರು ಕಲಾಪ ತೊರೆಯಲು ನಿರಾಕರಿಸಿದಾಗ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.
ನಂತರ ಈ ಸಂಸದರು ಸಂಸತ್ ಆವರಣದ ಹುಲ್ಲುಹಾಸಿನನಲ್ಲಿ ‘ರೈತ ವಿರೋಧಿ ಸರ್ಕಾರ’ ಎಂಬ ಪ್ಲೆಕಾರ್ಡ್ ಹಿಡಿದು ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದು, ರಾತ್ರಿಯಿಡಿ ಲಾನ್‌ನಲ್ಲೇ ಕಳೆದಿದ್ದಾರೆ.

ಮಂಗಳವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ದೆಹಲಿಯಲ್ಲಿ ಗರಿಷ್ಠ 54,760, ಮುಂಬೈಯಲ್ಲಿ ಕನಿಷ್ಠ 51,300 ರೂ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,760 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,950 ರೂ., 24 ಕ್ಯಾರಟ್: 53,400 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,831 ರೂ., 24 ಕ್ಯಾರಟ್:53,270 ರೂ.

ಹೆಲ್ಮೆಟ್ ಹಾಕದಿದ್ದರೆ ದಂಡ: ತಪ್ಪಿಸಿಕೊಳ್ಳಿ ತಲೆದಂಡ! ಜಿಲ್ಲಾ ಪೊಲೀಸರ ಕಟ್ಟುನಿಟ್ಟಿನ ಕ್ರಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸೋಮವಾರದಿಂದ ಪೊಲೀಸರು ದ್ವಿಚಕ್ರ ವಾಹನ ಸವಾರರ ತಲೆ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಉದ್ದೇಶ ಸವಾರರನ್ನು ಟಾರ್ಗೆಟ್ ಮಾಡುವುದಲ್ಲ, ಬದಲಿಗೆ ನಿಮ್ಮ ತಲೆ ಕಾಯ್ದು ನಿಮ್ಮ ಜೀವ ರಕ್ಷಣೆ ಮಾಡುವುದೇ ಆಗಿದೆ.

ಲಾಕ್‌ಡೌನ್ ನಂತರ ಹೆಚ್ಚುತ್ತಿರುವ ಬೈಕ್ ಅಪಘಾತಗಳು ಮತ್ತು ಸಾವುಗಳ ಪ್ರಮಾಣವನ್ನು ಅಧ್ಯಯನ ಮಾಡಿಯೇ ಜಿಲ್ಲಾ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಕಳವಳದ ವಿಷಯ ಏನೆಂದರೆ, ಹೆಲ್ಮೆಟ್ ವಿಷಯದಲ್ಲಿ ಯುವಕರ ಉಡಾಫೆ, ನಿರ್ಲಕ್ಷ್ಯತನ ಮತ್ತು ಮೊಂಡಾಟ ಎಂದಿನಿಂದಲೂ ಹಾಗೇ ಇದೆ. ಇದಕ್ಕೆ ಸೋಮವಾರ ಹೆಲ್ಮೆಟ್ ಧರಿಸದೇ ಸಿಕ್ಕಿಬಿದ್ದವರ ಸಂಖ್ಯೆಯನ್ನೇ ನೀಡಬಹುದು.

ಸೆಪ್ಟೆಂಬರ್ 17ರಿಂದಲೇ ಪೊಲೀಸರು ಜಾಗೃತಿ ಮೂಡಿಸುತ್ತ ಬಂದಿದ್ದರು. ಸೆ. 21ರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯ, ಇಲ್ಲದಿದ್ದರೆ ದಂಡ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಆದರೆ, ಸೋಮವಾರ ಆಗಿದ್ದೇನು? ನಗರದಲ್ಲಿ 207 ಹೆಲ್ಮೆಟ್ ಧರಿಸದ ಪ್ರಕರಣ ದಾಖಲಾಗಿದ್ದು, 1 ಲಕ್ಷ 3 ಸಾವಿರದ 500 ರೂ. ದಂಡ ವಸೂಲಿ ಮಾಡಲಾಗಿದೆ. ಪೊಲೀಸರು ಇರುವ ವೃತ್ತಗಳನ್ನು ತಪ್ಪಿಸಿ ಸವಾರಿ ಮಾಡಿದವರ ಸಂಖ್ಯೆ ಇನ್ನೂ ಹೆಚ್ಚಿದೆ.

    ಯಾಕಿಷ್ಟು ಬೇಜವಾಬ್ದಾರಿತನ?

ಬೈಕ್ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದರೆ ಉಳಿಯುವುದೇ ಅಪರೂಪ. ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದರೆ ವೈದ್ಯರು ಸರಿಪಡಿಸಬಹುದು. ಕೆಲವೊಮ್ಮೆ ಸಣ್ಣಪುಟ್ಟ ನೋವು ಹಾಗೇ ಉಳಿಯಬಹುದು. ಆದರೆ ತಲೆ ಹಾಗಲ್ಲ, ಅದು ತುಂಬ ಸೂಕ್ಷ್ಮ ಭಾಗ. ಮನುಷ್ಯನ ಅಸ್ತಿತ್ವದ ಪ್ರಧಾನ ಕುರುಹು ಆಗಿರುವ ಮೆದುಳನ್ನು ಸಂರಕ್ಷಿಸಿರುವ ಜಾಗ ತಲೆ. ಆ ತಲೆಯನ್ನೇ ನಾವು ಸಂರಕ್ಷಿಸಿಕೊಳ್ಳದಿದ್ದರೆ ಹೇಗೆ?

ಬೈಕ್ ಅಪಘಾತದಲ್ಲಿ ಬಿದ್ದಾಗ, ಗಟ್ಟಿಯಾದ ಭೌತಿಕ ವಸ್ತು ಅಂದರೆ ಕಲ್ಲು, ಟಾರ್ ರಸ್ತೆ, ರಸ್ತೆ ವಿಭಜಕ, ಎದುರಿನ ವಾಹನದ ಭಾಗ, ವಿದ್ಯುತ್ ಕಂಬಗಳಿಗೆ ತಲೆ ಬಡಿದಾಗ ಅದು ನೇರವಾಗಿ ಮೆದುಳಿಗೇ ಹೊಡೆತ ಕೊಡುತ್ತದೆ. ಬಿದ್ದ ವ್ಯಕ್ತಿಯ ತಲೆಯ ಚಲನೆ ನಿಂತರೂ, ಒಳಗೆ ಮೆದುಳು ಚಲಿಸುತ್ತ ಬುರುಡೆಗೆ ಡಿಕ್ಕಿ ಹೊಡೆಯುತ್ತದೆ, ತಿರುಗಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಇನ್ನೊಂದು ಬದಿಯ ಬುರುಡೆಗೆ ಬಡಿಯುತ್ತದೆ.

ಮೆದುಳು ಮೆತ್ತಗಿರಹುದು, ಆದರೆ ಬುರುಡೆ ಕಲ್ಲಿನಂತಿರುತ್ತದೆ. ಈ ಎರಡು ಹೊಡೆತಗಳನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಮೆದುಳಿಗೆ ಇಲ್ಲ. ಮೆದುಳು ನಿಷ್ಕ್ರಿಯವಾದರೆ ಅಲ್ಲಿಗೆ ಮನುಷ್ಯನ ಅಸ್ತಿತ್ವವೂ ಕೊನೆಯಾದಂತೆಯೇ.

ಹಾಗಾಗಿ ಅಪಘಾತದಲ್ಲಿ ತಲೆ ರಕ್ಷಿಸಿಕೊಳ್ಳುವುದು ಎಂದರೆ ಅದು ಜೀವ-ಪ್ರಾಣವನ್ನು ಕಾಪಾಡಿಕೊಂಡಂತೆ, ನಿಮ್ಮ ಭೌತಿಕ ಅಸ್ತಿತ್ವವನ್ನು ಜೋಪಾನವಾಗಿ ಕಾಯ್ದುಕೊಂಡಂತೆ. ಇದಕ್ಕಿರುವ ಒಂದೇ ಮಾರ್ಗ ನಿಮ್ಮ ತಲೆ ಕಾಯ್ದುಕೊಳ್ಳಿ. ಅದಕ್ಕಿರುವ ಒಂದೇ ಮಾರ್ಗ ಹೆಲ್ಮೆಟ್ ಧರಿಸುವುದೊಂದೇ ಆಗಿದೆ. ಹೆಲ್ಮೆಟ್ ಧರಿಸಿ, ನಿಮ್ಮ ತಲೆಯೊಂದಿಗೆ ಜೀವವನ್ನೂ ಕಾಪಾಡಿಕೊಳ್ಳಿ.

ಇಲಾಖೆ ನಡೆಸಿದ ಅಧ್ಯಯನ ಮತ್ತು ವಿಶ್ಲೇಷಣೆ ಪ್ರಕಾರ, ಜಿಲ್ಲೆಯಲ್ಲಿ ಲಾಕ್‌ಡೌನ್ ನಂತರ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಿದೆ. ದಿನಕ್ಕೆ ಸರಾಸರಿ ಎರಡು ಸಾವು ಸಂಭವಿಸುತ್ತವೆ. ಹೀಗಾಗಿ ಈಗ ಕಟ್ಟುನಿಟ್ಟಾಗಿ ಹೆಲ್ಮೆಟ್ ಕಡ್ಡಾಯ ಮಾಡುತ್ತಿದ್ದೇವೆ. ಸದ್ಯ ಅವಳಿ ನಗರದಲ್ಲಿ ಮಾತ್ರ ಜಾರಿ ಮಾಡಿದ್ದು, ಜಿಲ್ಲೆಯಾದ್ಯಂತ ವಿಸ್ತರಿಸುತ್ತೇವೆ. ಬರುವ ದಿನಗಳಲ್ಲಿ ಡಿಎಲ್, ವಾಹನ ವಿಮೆ ಇತ್ಯಾದಿ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಯುವಕರು ಹೆಲ್ಮೆಟ್ ಧರಿಸುವುದರ ಮೂಲಕ ತಮ್ಮ ಜೀವದ ಬಗ್ಗೆ ಕಾಳಜಿ ವಹಿಸಲಿ.

-ಎನ್. ಯತೀಶ್, ಎಸ್ಪಿ

    ಖಡಕ್ ಕಮಲಮ್ಮ ಆನ್ ಡ್ಯೂಟಿ

ಸಂಚಾರ ಪೊಲೀಸ್ ವಿಭಾಗದ ಪಿಎಸ್‌ಐ ಕಮಲಮ್ಮ ದೊಡ್ಡಮನಿಯವರಿಗೆ ಬೈಕ್ ಸವಾರರ ಹೇರ್‌ ಸ್ಟೈಲ್ ಕಾಣಬಾರದು. ಅವರಿಗೇನೂ ನಿಮ್ಮ ಮೇಲೆ ಹೊಟ್ಟೆಕಿಚ್ಚಿಲ್ಲ. ಗಂಡನಿಗೇ ದಂಡ ಹಾಕಿದ ಖಡಕ್ ಅಧಿಕಾರಿ ಕಮಲಮ್ಮ. ನಿಮ್ಮ ಜೀವ ಉಳಿಸಲು ಅವರು ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ದಂಡದ ಜೊತೆ ಬುದ್ಧಿವಾದವೂ ಪಕ್ಕಾ. ಕಮಲಮ್ಮ ದಂಡ ಹಾಕ್ತಾರಂತ ಸ್ಪೀಡ್ ಆಗಿ ತಪ್ಪಿಸಿಕೊಳ್ಳಲು ಮುಂದಾಗಬೇಡಿ. ಇದೆಲ್ಲ ಏಕೆ, ಸುಮ್ನೆ ಹೆಲ್ಮೆಟ್ ಹಾಕಿ. ಇದು ನಿಮ್ಮ ವಿಜಯಸಾಕ್ಷಿ ಕಳಕಳಿ.

ಜಿಲ್ಲೆಯಲ್ಲಿ 81 ಜನರಿಗೆ ಸೋಂಕು; 112 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಸೋಮವಾರ ದಿ 21 ರಂದು 81 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

81 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8447 ಕ್ಕೇರಿದೆ. ಇಂದು 112 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7478 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 846 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 123 ಜನರು ಮೃತಪಟ್ಟಿದ್ದಾರೆ.

ಗದಗ-51, ಮುಂಡರಗಿ-11, ನರಗುಂದ-02, ರೋಣ-14, ಶಿರಹಟ್ಟಿ-03 ಸೇರಿದಂತೆ 81 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೆಂಕಟೇಶ ಟಾಕೀಸ್ ಹತ್ತಿರ, ಅಬ್ಬಿಗೇರಿ ಕಾಂಪೌಂಡ್, ಬಸಪ್ಪ ನಗರ, ಗಂಜಿ ಬಸವೇಶ್ವರ ವೃತ್ತ, ಕಳಸಾಪುರ ರಸ್ತೆ, ಹನುಮಾನ ನಗರ, ಡಿ.ಸಿ.ಆಫೀಸ ಹಿಂದುಗಡೆ, ಭರಮಗೌಡ ದೇವಸ್ಥಾನದ ಹತ್ತಿರ, ವಿಶ್ವೇಶ್ವರಯ್ಯ ನಗರ, ಜರ್ಮನ ಆಸ್ಪತ್ರೆ ಹತ್ತಿರ, ಹೊಸಮಠ ಆಸ್ಪತ್ರೆ ಹತ್ತಿರ, ಮುಳಗುಂದನಾಕಾ, ಅಂಬೇಡ್ಕರ ನಗರ, ಗಾಂಧಿ ನಗರ, ಜೆ.ಟಿ.ಮಠ ರಸ್ತೆ, ವೀರಭದ್ರೇಶ್ವರ ದೇವಸ್ಥಾನ ಹತ್ತಿರ, ಹೆಲ್ತ್ ಕ್ಯಾಂಪ್, ಹುಡ್ಕೋ ಕಾಲೋನಿ, ಕೆ.ಸಿ.ರಾಣಿ ರಸ್ತೆ,

ಗದಗ ತಾಲೂಕಿನ ನರಸಾಪುರ, ಮುಳಗುಂದ, ಯಲಿಶಿರುಂಜ, ಹೊಂಬಳ, ಹುಲಕೋಟಿ, ಬಿಂಕದಕಟ್ಟಿ, ಹರ್ಲಾಪುರ, ಶ್ಯಾಗೋಟಿ, ಹಾತಲಗೇರಿ, ಎಲ್.ಆಯಿ.ಸಿ ಆಫೀಸ ಹತ್ತಿರ, ಶಿರುಂಜ,

ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಕಲಕೇರಿ, ಬೂದಿಹಾಳ, ಬಾಗೇವಾಡಿ, ಡಂಬಳ

ನರಗುಂದ ಪಟ್ಟಣದ ಟಿ.ಎಲ್.ಎಚ್. ನರಗುಂದ ತಾಲೂಕಿನ ತಡಹಾಳ,

ರೋಣ ತಾಲೂಕಿನ ಸವಡಿ, ಬಿದರಳ್ಳಿ, ಇಟಗಿ, ಮಲ್ಲಾಪುರ, ಮಾಡಲಗೇರಿ, ಹೊಳೆಆಲೂರ, ನರೇಗಲ್,

ಗಜೇಂದ್ರಗಡ ಪಟ್ಟಣದ ಕೆ.ವಿ.ಜಿ.ಬ್ಯಾಂಕ್ ಹತ್ತಿರ, ಕೆಳಗಲ್ ಪೇಟ, ಪೊಲೀಸ್ ಠಾಣೆ,

ಶಿರಹಟ್ಟಿ ತಾಲೂಕಿನ ಹೆಬ್ಬಾಳ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣ,

error: Content is protected !!