Home Blog Page 2190

ಕೊಪ್ಪಳ; ಕಲ್ಯಾಣ ಕರ್ನಾಟಕ ಉತ್ಸವ-ಸಚಿವ ಬಿ.ಸಿ.ಪಾಟೀಲರಿಂದ ಧ್ವಜಾರೋಹಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ 73ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಪೋಲಿಸ್ , ಡಿಆರ್, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ , ಸೇವಾದಳದ ತುಕಡಿಗಳು ಭಾಗಿಯಾಗಿ ನಡೆಸಿಕೊಟ್ಟ ಪಥ ಸಂಚಲನ ಆಕರ್ಷಕವಾಗಿತ್ತು.

ಆಸನಗಳು ಖಾಲಿ ಖಾಲಿ….

ಕೊವಿಡ್-19 ಹಿನ್ನೆಲೆಯಲ್ಲಿ ಇನ್ನೂ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಪಾಲ್ಗೊಂಡಿರಲಿಲ್ಲ. ಹಾಗಾಗಿ ಮೈದಾನದ ಸುತ್ತ ಮುತ್ತಲಿನ ಗ್ಯಾಲರಿ ಮತ್ತು ಮುಂಭಾಗದ ಆಸನಗಳು ಬಹುತೇಕ ಖಾಲಿ ಖಾಲಿಯಾಗಿದ್ದವು.

ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಜಿ.ಸಂಗೀತಾ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು.

ಗುರುವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಗಿಂತ 1,980 ದುಬಾರಿ, ದೆಹಲಿಗಿಂತ 1,420 ರೂ ಸಸ್ತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,980 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,580 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 49,100 ರೂ., 24 ಕ್ಯಾರಟ್: 53,560 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,886 ರೂ., 24 ಕ್ಯಾರಟ್: 53,330 ರೂ.

ಠಾಣೆಯಲ್ಲಿ ಗಲಾಟೆ ಮಾಡಿ ಗಾಯ ಮಾಡಿಕೊಂಡ: ಠಾಣೆ ಎದುರೇ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ತಿಕ್ಕಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಒಂಗೊಳೆ (ಆಂಧ್ರ): ಪೊಲೀಸ್ ಠಾಣೆಯ ಎದುರೇ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ರಕಾಶಂ ಜಿಲ್ಲೆಯ ಒಂಗೊಳೆ ಪಟ್ಟಣದಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ.

ಕ್ರಿಮಿನಲ್ ಹಿನ್ನೆಲೆಯ ಈ ವ್ಯಕ್ತಿ ಬುಧವಾರ ತಾಲೂಕು ಠಾಣೆಗೆ ಬಂದವನೇ, ಅಲ್ಲಿರುವ ಗಾಜುಗಳನ್ನು ಒಡೆದು ಗಾಯ ಮಾಡಿಕೊಂಡ. ಆತನನ್ನು ಆಸ್ಪತ್ರೆಗೆ ಸೇರಿಸಲು ಕರೆಸಿದ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿ ತಿಕ್ಕಲುತನ ಮೆರೆದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಅಂಬ್ಯುಲೆನ್ಸ್ ಏರಿದ ನಂತರ ಅಲ್ಲಿದ್ದ ಹತ್ತಿಗೆ ಬೆಂಕಿ ಹಾಕಿದ. ಧಗ್ಗನೆ ಅಂಬ್ಯುಲೆನ್ಸ್ ಹೊತ್ತಿ ಉರಿಯತೊಡಗಿತು. ‘ನಾನು ಇಲ್ಲೇ ಸಂತೋಷದಿಂದ ಸಾಯುವೆ, ಕೆಳಗೆ ಬರಲ್ಲ’ ಎಂದು ಕಿರುಚತೊಡಗಿದ. ಪೊಲೀಸರು ಹರಸಾಹಸ ಮಾಡಿ ಹೊರಗೆ ಎಳೆ ತಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜೈಲಿಗೆ ಅಟ್ಟಲಾಗಿದೆ.
ಅಂಬ್ಯುಲೆನ್ಸ್ ಚಾಲಕ ಮತ್ತು ಆರೋಗ್ಯ ಸಿಬ್ಬಂದಿಯೋರ್ವ ತಕ್ಷಣಕ್ಕೆ ಜಿಗಿದು ಅಪಾಯದಿಂದ ಪಾರಾದರು.

ಚಾರ್ಜರ್ ವೈರ್ ಬಿಗಿದು ಪತಿ ಕೊಂದ ಆರೋಪ: ವಕೀಲೆ ಪತ್ನಿಗೆ ಜೀವಾವಧಿ ಶಿಕ್ಷೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಲ್ಕೊತ್ತ: ಪತಿಯನ್ನು ಮೊಬೈಲ್ ಚಾರ್ಜರ್ ವೈರ್‌ನಿಂದ ಬಿಗಿದು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ ಪತ್ನಿಗೆ ಬುಧವಾರ ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ತ್ವರಿತ ನ್ಯಾಯಾಲಯವು 1 ವರ್ಷ ಜೈಲುಶಿಕ್ಷೆ, ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.

ಆನಂದಿತಾ ಪಾಲ್ ಮತ್ತು ರಜತ್ ಡೇ ದಂಪತಿ ಇಬ್ಬರೂ ವಕೀಲರು. 2018ರ ನವಂಬರ್ 24-25ರ ನಡುರಾತ್ರಿ ಪತಿ ರಜತ್ ಡೇ ಅವರ ಕೊರಳಿಗೆ ಮೊಬೈಲ್ ಚಾರ್ಜರ್ ವೈರ್ ಬಿಗಿದು ಪತ್ನಿ ಆನಂದಿತಾ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದರು. ದಂಪತಿ ನಡುವೆ ವೈಮನಸ್ಸು ಮೂಡಿತ್ತು ಎಂದು ಹೇಳಲಾಗಿದೆ.

‘ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ಕೊನೆವರೆಗೂ ಇದರ ವಿರುದ್ಧ ಹೋರಾಡುತ್ತೇನೆ’ ಎಂದು ಆನಂದಿತಾ ಹೇಳಿದ್ದಾರೆ. ಆನಂದಿತಾಗೆ ಮೂರು ವರ್ಷದ ಮಗುವಿದೆ.  

ಕೊವಿಡ್ ರೋಗಿಗಳನ್ನು ಭೇಟಿ ಮಾಡಿದ ಡಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ಕೊವಿಡ್-೧೯ ರೋಗಿಗಳಿಗೆ  ನೀಡುತ್ತಿರುವ ಚಿಕಿತ್ಸೆಯ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿ, ನಂತರ ಪಿಪಿ ಕಿಟ್ ಧರಿಸಿ ಸ್ವತಃ ತಾವೇ ಖುದ್ದಾಗಿ ಕೊವಿಡ್ ರೋಗಿಗಳ ವಾರ್ಡಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುವುದರ ಜೊತೆಗೆ ಅಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ. ವೈಜನಾಥ ಇಟಗಿ, ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಕಬ್ಬರಗಿ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಎಮ್ಮೆಗಳ ಕಳ್ಳಸಾಗಣೆ: ಮೂವರ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರೈತರೊಬ್ಬರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಎಮ್ಮೆಗಳನ್ನು ಕದ್ದು ಸಾಗಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಗಂಗಾವತಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾನುವಾರು ವ್ಯಾಪಾರಿ ಅಮರ ಭಗತ್‌ಸಿಂಗ್ ನಗರದ ಹುಸೇನಸಾಬ ಖಲಂದರ್, ಜಂಗರಮರ ಕಲ್ಗುಡಿ ಗ್ರಾಮದ ಖಾಸಗಿ ವಾಹನಗಳ ಚಾಲಕ ರಿಜ್ವಾನ್ ಭಾಷಾಸಾಬ್, ಕೂಲಿ ಕಾರ್ಮಿಕ ದಾವೂದ್ ಲಾಲ್‌ಸಾಬ್ ಬಂಧಿತ ಆರೋಪಿಗಳು.

ಜಾನುವಾರುಗಳ ಮಾಲೀಕ ನೀಡಿದ ದೂರಿನ ಹಿನ್ನೆಲೆ, ಸುಳಿವೊಂದನ್ನು ಹಿಡಿದು ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಆ. 31ರ ಮಧ್ಯರಾತ್ರಿ ಜಾನುವಾರುಗಳನ್ನು ಕಳ್ಳತನ ಮಾಡಿ ಬಳ್ಳಾರಿಗೆ ಸಾಗಿಸಿದ್ದಾರೆ. ಅಲ್ಲಿ ವಧಾ ಗೃಹಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಎರಡುವರೆ ಸಾವಿರ ಜನಸಂಖ್ಯೆ: 30 ಮದ್ಯದ ಅಂಗಡಿಗಳು!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೇವಲ ಎರಡುವರೆ ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ಇದರಿಂದ ಕಲಿಯುಗದ ಕುಡುಕರ ಗ್ರಾಮ ಎಂಬ ಕಳಂಕ ಇದಕ್ಕೆ ಎದುರಾಗಿದ್ದು, ಈ ಬಗ್ಗೆ ಅಕ್ರಮ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಗಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಬೈಪಾಸ್‌ನಲ್ಲಿರುವ ಅಬಕಾರಿ ಇಲಾಖೆಗೆ ಮಂಗಳವಾರದಂದು ಭೇಟಿ ನೀಡಿದ ಗ್ರಾಮಸ್ಥರು, ಗ್ರಾಮದಲ್ಲಿರುವ ಅನಧಿಕೃತ ಮದ್ಯದಂಗಡಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಯುವಕರು, ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಗ್ರಾಮದಲ್ಲಿರುವ ಒಂದು ಅಂಗಡಿಯಿಂದ ಕೆಲ ರಾಜಕೀಯ ಪ್ರೇರಿತ ವ್ಯಕ್ತಿಗಳು ಸುತ್ತಲಿನ ಹತ್ತಾರು ಗ್ರಾಮಗಳಿಗೆ ಅನಧಿಕೃತವಾಗಿ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ನಕಲಿ ಮದ್ಯ ಸರಬರಾಜಿನ ಆತಂಕ ಇದ್ದು, ಕೂಡಲೇ ಜನರ ಆರೋಗ್ಯ ಮತ್ತು ಗ್ರಾಮದ ಸ್ವಾಸ್ಥ್ಯ ಕಾಪಾಡುವ ಉದ್ದೇಶಕ್ಕೆ ಅಕ್ರಮ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಎಟಿಎಂಗೆ ಹೋದಾಗ ಮೊಬೈಲ್ ಜೊತೆಗಿರಲಿ: ಸೆ.18 ರಿಂದ ಹೊಸ ರೂಲ್ಸ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇನ್ನು ಮುಂದೆ ಎಟಿಎಂಗಳಿಗೆ ಹಣ ತೆಗೆಯಲು ಹೋದಾಗ ಜೊತೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕೂಡ ಇರಲಿ. ಆಗ ಮಾತ್ರ ನೀವು ದುಡ್ಡು ತೆಗೆಯಲು ಸಾಧ್ಯ. ಸೆಪ್ಟೆಂಬರ್ 18ರಿಂದ ಎಸ್‌ಬಿಐ ಈ ನಿಯಮವನ್ನು ಜಾರಿ ಮಾಡಿದೆ.

10 ಸಾವಿರ ರೂ.ಗಿಂತ ಹೆಚ್ಚಿನ ಹಣ ವಿತ್‌ಡ್ರಾ ಮಾಡಲು ಮೊಬೈಲ್ ನಂಬರ್ ದಾಖಲಿಸಬೇಕು. ನಂತರ ಮೊಬೈಲ್‌ಗೆ ಬರುವ ಒಟಿಪಿ ದಾಖಲಿಸಿದ ನಂತರವಷ್ಟೇ ಹಣ ತೆಗೆಯಬಹುದು.
ಎಟಿಎಂ ಕುರಿತಂತೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಪ್ಪಿಸಲು ಈ ಕ್ರಮ ಜಾರಿಗೆ ತರುತ್ತಿರುವುದಾಗಿ ಬ್ಯಾಂಕ್ ಹೇಳಿದೆ. ಮುಂದಿನ ದಿನಗಳಲ್ಲಿ ಉಳಿದ ಬ್ಯಾಂಕ್‌ಗಳೂ ಈ ವಿಧಾನ ಅನುಸರಿಸಲಿವೆ.

ಗೃಹ ಸಚಿವ ಬೊಮ್ಮಾಯಿಗೆ ಕೊವಿಡ್ ದೃಢ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಕೊವಿಡ್ ದೃಢಪಟ್ಟಿದೆ.  ತಮಗೆ ಕೊವಿಡ್ ತಗುಲಿದ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವರು, ‘ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೊವಿಡ್-19 ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು ನನಗೂ ಸಹ ಸೊಂಕು ದೃಢಪಟ್ಟಿದ್ದು, ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ. ಆರೋಗ್ಯದಿಂದಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ’ ಎಂದು ಹೇಳಿದ್ದಾರೆ.

ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ ಎಂದು ಅವರು ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ.
ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೂ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅತ್ತ ಮೊನ್ನೆ ಸಂಸತ್‌ನಲ್ಲಿ ಪಾಲ್ಗೊಳ್ಳಲು ಬಂದ 25ಕ್ಕೂ ಹೆಚ್ಚು ಸಂಸದರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.

9 ಕಿಮೀ ಉದ್ದದ ಸುರಂಗ ಮಾರ್ಗ: ಅಟಲ್ ಟನೆಲ್ ಉದ್ಘಾಟನೆಗೆ ಸಿದ್ಧ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ವಿಶ್ವದ ಎತ್ತರ ಪ್ರದೇಶದಲ್ಲಿನ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎನ್ನಲಾಗಿರುವ ಅಟಲ್ ಸುರಂಗ ಹೆದ್ದಾರಿ ಉದ್ಘಾಟನೆಗೆ ಸಿದ್ಧವಾಗಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ದೇಶದ ಗಡಿಭಾಗದ ಲೇಹ್ ಪ್ರದೇಶಕ್ಕೆ ಸಂಪರ್ಕಿಸುವ ಈ ಹೆದ್ದಾರಿ ನಿರ್ಮಾಣವನ್ನು ಹತ್ತು ವರ್ಷಗಳ ಅವಧಿಯಲ್ಲಿ ಪೂರ್ತಿಗೊಳಿಸಲಾಗಿದೆ.

ಆರಂಭದಲ್ಲಿ 6 ವರ್ಷ ಅವಧಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಪ್ರತಿ 60 ಮೀ.ಗೆ ಸಿಸಿಟಿವಿಯನ್ನು, ಪ್ರತಿ 500 ಮೀ.ಗೆ ತುರ್ತು ನಿರ್ಗಮನ ದ್ವಾರವನ್ನು ನಿರ್ಮಿಸಲಾಗಿದೆ. ಸುರಂಗದಲ್ಲಿ ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಲಾಗಿದೆ.

ಈ ಹೆದ್ದಾರಿಯು ಮನಾಲಿ ಮತ್ತು ಲೇಹ್ ನಡುವಿನ ರಸ್ತೆದೂರವನ್ನು 47 ಕಿಮೀ ಕಡಿಮೆ ಮಾಡುತ್ತದೆ. ಇದರಿಂದ ಪ್ರಯಾಣದ ಅವಧಿ 4 ತಾಸು ತಗ್ಗಲಿದೆ.

error: Content is protected !!