ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಾಂಗ್ರೆಸ್ ಲೀಡರ್ ಕವಿತಾ ರೆಡ್ಡಿ ನಟಿ ಸಂಯುಕ್ತ ಹೆಗಡೆ ಮೇಲೆ ನಡೆಸಿರುವ ನೈತಿಕ ಪೊಲೀಸ್ ಗಿರಿ ಸರಿಯಲ್ಲ. ಕವಿತಾ ರೆಡ್ಡಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಹೇಳಿದರು.
ಕೊಪ್ಪಳದಲ್ಲಿ ಆಯೋಗ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು.
ಬೆಂಗಳೂರಿನಲ್ಲಿ ನಟಿ ಸಂಯುಕ್ತ ಹೆಗಡೆ ಅವರು ಹೂಫ್ ಡಾನ್ಸ್ ಮಾಡುವಾಗ ಕಾಂಗ್ರೆಸ್ ಲೀಡರ್ ಕವಿತಾ ರೆಡ್ಡಿ ಆಕ್ಷೇಪಿಸಿ, ಕಿರಿಕಿರಿ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಜೊತೆಗೆ ಕವಿತಾ ರೆಡ್ಡಿ ಸಂಯುಕ್ತಾ ಮತ್ತವರ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಈಗಾಗಲೇ ಅಲ್ಲಿನ ಡಿಸಿಪಿ ಜೋಶಿ ಅವರಿಗೆ ಮಾತಾಡಿದ್ದೇನೆ. ನಟಿ ಸಂಯುಕ್ತರಿಗೂ ಕಾಲ್ ಮಾಡಿ ಮಾತನಾಡಿದ್ದೇನೆ. ಕವಿತಾ ರೆಡ್ಡಿ ಅವರಿಗೆ ನೊಟೀಸ್ ನೀಡಿ, ನಮ್ಮ ಕಚೇರಿಕೆ ಕರೆಸ್ತಿವಿ ಎಂದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಇವತ್ತು ಶುಕ್ರವಾರ ಮುಂಜಾನೆ ಗದಗಿನ ನಗರಸಭೆ ಕಚೇರಿಗೆ ಹೋದ ಸಿಬ್ಬಂದಿ ಮತ್ತು ನಾಗರಿಕರು ಕನ್‌ಫ್ಯೂಸ್ ಆಗುವಂತಹ ಘಟನೆಯೊಂದು ನಡೆಯಿತು. ನಗರಸಭೆ ಆಯುಕ್ತರ ಕುರ್ಚಿಯಲ್ಲಿ ಅದ್ಯಾರೋ ಅಪರಿಚಿತ ವ್ಯಕ್ತಿ ಕುಳಿತು ಬಿಟ್ಟಿದ್ದಾರೆ. ಸಿಬ್ಬಂದಿ, ನಾಗರಿಕರಿಗೇನೋ ಇದು ಆಶ್ಚರ್ಯದ ವಿಷಯ ಇರಬಹುದು. ಆದರೆ, ಪಟ್ಟಂತ ರಾತ್ರೋರಾತ್ರಿ ಈ ‘ಅನಾಮಧೇಯ’ರನ್ನು ಕರೆಸಿ ಮುಂಜಾನೆ ಹೊತ್ತಿಗೆ ಆಯುಕ್ತರ ಕುರ್ಚಿ ಮೇಲೆ ಕೂಡಿಸಿದ ಶಕ್ತಿ ಯಾವುದು ಎಂಬುದು ಗುಟ್ಟೇನೂ ಅಲ್ಲ.
ಆ ಶಕ್ತಿಯ ನೆರಳಿನಂತಿರುವ ಒಬ್ಬ ಲೋಕಲ್ ಬಿಜೆಪಿ ನಾಯಕನಿಗೆ ಮಾತ್ರ ಇದು ‘ಸಹಜ’ ವ್ಯವಹಾರ. ಇಲ್ಲಿ ಬಂದು ಆಯುಕ್ತರ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಸರ್ಕಾರದ ಶಿಷ್ಟಾಚಾರ ನಿಯಮಗಳನ್ನು ಪಾಲಿಸಿದ್ದಾರೆಯೆ? ಎಂಬ ಪ್ರಶ್ನೆ ಈಗ ನಗರಸಭೆ ಸಿಬ್ಬಂದಿ ಮತ್ತು ಜನರನ್ನು ಕಾಡತೊಡಗಿದೆ. ಅದಕ್ಕೂ ಉತ್ತರವಿದೆ. ಅವರೂ ಸರ್ಕಾರದ ಆದೇಶ ಹಿಡಿದುಕೊಂಡೇ ಬಂದು ಇಲ್ಲಿ ಕುಳಿತಿದ್ದಾರೆ. ನಿನ್ನೆ ಸೆಪ್ಟೆಂಬರ್ 10 ರಂದು ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ರಮೇಶ್ ಜಾಧವರು, ಈಗ ಗದಗ ನಗರಸಭೆ ಆಯುಕ್ತರು!
ಇಲ್ಲಿವರೆಗೆ ಆಯುಕ್ತರಾಗಿದ್ದ ಮನ್ಸೂರ್ ಅಲಿಯವರಿಗೆ ಯಾವ ಹುದ್ದೆ ನೀಡಲಾಗಿದೆ? ಅವರಿಗೆ ವರ್ಗಾವಣೆಯ ಆದೇಶ ನೀಡಲಾಗಿದೆಯೆ ಎಂಬ ಪ್ರಶ್ನೆಗಳು ಎದ್ದಿದ್ದು, ಇದು ಅಂಧಾದುಂಧಿ ಟ್ರಾನ್ಸ್‌ಫರ್ ದಂಧೆಯನ್ನು ಬಯಲು ಮಾಡುತ್ತಿದೆ.
ಈ ಗುದುಮುರಗಿ ಜುಲೈನಲ್ಲೇ ಶುರುವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಹುದ್ದೆ ಮಟ್ಟದ ಅಧಿಕಾರಿ, ವಿಜಯಪುರ ಕಾರ್ಪೋರೇಷನ್ ನ ಕಂದಾಯ ಇಲಾಖೆ ಅಧಿಕಾರಿ ರಮೇಶ್ ಜಾಧವ್ ಅವರನ್ನು ಇಲ್ಲಿನ ನಗರಸಭೆ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಆಗ ಈ ಬಗ್ಗೆ ಸಾರ್ವಜನಿಕರಿಂದ ತಕರಾರು ಬಂದ ಕೂಡಲೇ ತಾತ್ಕಾಲಿಕವಾಗಿ ಅದನ್ನು ತಡೆ ಹಿಡಿಯಲಾಗಿತ್ತು. ಆದರೆ ಈ ವರ್ಗಾವಣೆ ಮಾಡಿಸಿ ಚೊಲೊತನ್ಯಂಗ ರೊಕ್ಕ ಮಾಡಿದ್ದ (ಬಕೆಟ್ ಹಿಡಿದಿದ್ದ ಎಂದು ಓದಿಕೊಳ್ಳಬಹುದು) ಸ್ಥಳೀಯ ಬಿಜೆಪಿ ಮುಖಂಡನೊಬ್ಬನಿಗೆ ಇದು ಕಸಿವಿಸಿ ಉಂಟು ಮಾಡಿತ್ತು.
ಆಗ ಸಾಮಾಜಿಕ ಜಾಲತಾಣದಲ್ಲಿ, ‘ವರ್ಗಾವಣೆ ರದ್ದು’ ಎಂಬ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ‘ ತಾತ್ಕಾಲಿಕ ’ ಎಂದಿದ್ದರು. ಅಂದರೆ ವರ್ಗಾವಣೆ ತಡೆ ಆಗಿದ್ದು ಸಚಿವರಿಗೆ ಇಷ್ಟ ವಿರಲಿಲ್ಲ.
ಈಗ ರಮೇಶ ಜಾಧವ್ ಆಯುಕ್ತರಾಗಿರುವುದನ್ನು ನೋಡಿದರೆ, ಸಚಿವರು ತಮ್ಮ ಕಮಿಟ್‌ಮೆಂಟ್ ಪಾಲಿಸಿದ್ದಾರೆ. ಬಕೆಟ್ ಹಿಡಿದರು ಎನ್ನಲಾದ ಸ್ಥಳೀಯ ಬಿಜೆಪಿ ಮುಖಂಡ ಖುಷ್ ಖುಷಿಯಲ್ಲಿದ್ದಾರೆ. ಇದೆಲ್ಲ ಹಾಳಾಗಲಿ, ಪ್ರವಾಹ, ಅತಿವೃಷ್ಟಿ ಪರಿಹಾರಕ್ಕೆ ಒಂದೂ ರೂಪಾಯಿಯನ್ನೂ ರಾಜ್ಯ ಸರ್ಕಾರದಿಂದ ತರಲಾಗದ ಸಚಿವರು ಗುರುವಾರ ಆಯುಕ್ತರ ನೇಮಕಾತಿ ಆದೇಶ ಹೊರಬೀಳಲು ತುಂಬ ‘ಬೆವರು’ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ನಿನ್ನೆಯಷ್ಟೇ ‘ಕೊವಿಡ್ ಕೇರ್ ಸೆಂಟರ್ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸಿ’ ಎಂದು ಹೇಳಿದ್ದರು, ಆದರೆ ಜಿಮ್ಸ್ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ಗುರುವಾರ-ಶುಕ್ರವಾರ ಇಡೀ ರಾತ್ರಿ ಕತ್ತಲಲ್ಲಿ ಮುಳುಗಿತ್ತು.
ತಾಲೂಕಿನ ಮಲ್ಲಸಮುದ್ರ ಹತ್ತಿರದ ಮೊರಾರ್ಜಿ ವಸತಿ ಶಾಲೆಯಲ್ಲಿ ಸೋಂಕಿತರು ಇಡೀ ರಾತ್ರಿ ಪರದಾಡಿದ್ದಾರೆ. ವಿದ್ಯುತ್ ಇಲ್ಲದೇ ಫ್ಯಾನ್ ಬಂದ್ ಆದ ಕಾರಣ ಸೊಳ್ಳೆ ಕಾಟದಿಂದ ಸೋಂಕಿತರು ನಿದ್ದೆಗೆಟ್ಟಿದ್ದಾರೆ. ಮಹಿಳಾ ರೋಗಿಗಳು ಆತಂಕದಲ್ಲಿ ಮುದುಡಿಕೊಂಡು ಕಾಲ ತಳ್ಳಿದ್ದಾರೆ.
ನೂರಾರು ಸೋಂಕಿತರು ಇರುವ ಈ ಕೇಂದ್ರದಲ್ಲಿ ಕತ್ತಲಲ್ಲಿ ಶೌಚಾಲಯಕ್ಕೆ ಹೋಗಲೂ ಆಗದೇ, ಹೋದರೂ ಶೌಚಾಲಯ ಸರಿಯಾಗಿ ಸಿಗದೇ ಸೋಂಕಿತರು ನರಕಯಾತನೆ ಅನುಭವಿಸಿದ್ದಾರೆ. ಕತ್ತಲಲ್ಲಿ ಔಷಧಿ ತೆಗೆದುಕೊಳ್ಳಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ರಾತ್ರಿಯೆಲ್ಲ ಜಾಗರಣೆಯಲ್ಲೇ ಕಳೆದ ಜನರು ಆರೋಗ್ಯ ಇಲಾಖೆ ಮೇಲೆ ಹಿಡಿಶಾಪ ಹಾಕಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸಿನಿಮಾದಲ್ಲಿರೋರು ರೋಲ್ ಮಾಡೆಲ್ ಆಗಿರಬೇಕು. ನಾನು ಅಧಿಕಾರಿಯಾಗಿ, ಸಿನಿಮಾದವನಾಗಿ ಕೆಲಸ ಮಾಡಿ ಈಗ ರಾಜಕೀಯದಲ್ಲಿದ್ದೇನೆ. ಮುತ್ತಾತನ ಕಾಲದಿಂದಲೂ ನಮ್ಮದು ಕೃಷಿ ಕುಟುಂಬ. ರೈತರಿಗಾಗಿ ಜೈಲುವಾಸವನ್ನೂ ಅನುಭವಿಸಿದ್ದೇನೆ. ಈ ಎಲ್ಲ ಅನುಭವಗಳ ಮೇಲೆ ಕೃಷಿ ಖಾತೆ ನಿಭಾಯಿಸುತ್ತಿದ್ದೇನೆ. ಚಂದ್ರಶೇಖರ ಕೋಡಿಹಳ್ಳಿ ಅವರ ಬಗ್ಗೆ ಅಪಾರ ಗೌರವ ಇತ್ತು. ಅವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರನ್ನು ಕರೆದುಕೊಂಡು ಬಂದು ಕೃಷಿ ಮಂತ್ರಿ ಮಾಡಿದರೆ ಮಾಧ್ಯಮಗಳಿಗೆ ಫೋಸ್ ಕೊಡ್ತಾರೆ ಎಂಬ ಹೇಳಿಕೆ ಹಾಗೂ ಕೃಷಿ ಪದವಿ ಸೀಟ್ ಮಾರಾಟದ ಹೇಳಿಕೆಯನ್ನು ಕೋಡಿಹಳ್ಳಿ ಚಂದ್ರಶೇಖರ ಪರಾಮರ್ಶೆ ಮಾಡಿಕೊಳ್ಳಲಿ. ಇಷ್ಟೊಂದು ಕೀಳುಮಟ್ಟದಲ್ಲಿ ಅವರು ಮಾತನಾಡಿರುವುದು ಸರಿಯಲ್ಲ ಎಂದರು.
ಡ್ರಗ್ಸ್ ಚಟುವಟಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಶತಸಿದ್ಧ. ಗಾಂಜಾ ಬೆಳೆಯುವುದು, ಅಷ್ಟೇ ಏಕೆ ತಂಬಾಕು ಬೆಳೆಯುವುದೂ ಸಹ ನನ್ನ ಪ್ರಕಾರ ತಪ್ಪು. ಚಿತ್ರರಂಗದಲ್ಲಿ ಇರುವವರು ಗಾಜಿನ ಮನೆಯಲ್ಲಿ ಇರುತ್ತೇವೆ. ನಟರು ರೋಲ್ ಮಾಡಲ್ ಆಗಿರಬೇಕು. ಎಲ್ಲರೂ ಪವಿತ್ರರು ಎಂದು ಹೇಳಲು ಆಗೋದಿಲ್ಲ. ರಾಜಕಾರಣಿಗಳು ಇರಬಹುದು, ಚಿತ್ರನಟರು ಇರಬಹುದು ತಪ್ಪು ಮಾಡಿದ್ದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಭೂ ಸುಧಾರಣೆ ಕಾಯ್ದೆಯಿಂದ ಸಾಕಷ್ಟು ಒಳ್ಳೆಯ ಉಪಯೋಗವೂ ಆಗಿದೆ. ಊ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಬೇಕು. ವರ್ಷದಲ್ಲಿ ಸುಮಾರು ನೂರು ದಿನ ಅಧಿವೇಶನ ನಡೆದು ಚರ್ಚೆಯಾಗಬೇಕು ಎಂಬ ಆಸೆ ನಮಗೂ ಇದೆ. ಆದರೆ ಕೋವಿಡ್-19 ಕಾರಣದಿಂದ ಕರೆಯಲಾಗಿಲ್ಲ. ಎಲ್ಲವನ್ನು ವಿರೋಧಿಸುವುದೇ ವಿರೋಧ ಪಕ್ಷದ ಕೆಲಸ. ಅವರ ಕೆಲಸವನ್ನು ಅವರು ಮಾಡ್ತಿದಾರೆ ಎಂದು ಅಭಿಪ್ರಾಯಪಟ್ಟರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮಂಡ್ಯ: ದೇವಸ್ಥಾನವೊಂದರ ಕಾಣಿಕೆ ಹುಂಡಿ ಮತ್ತು ದೇವಸ್ಥಾನದ ಇತರ ಅಮೂಲ್ಯ ವಸ್ತುಗಳನ್ನು ಕದಿಯಲು ಬಂದ ಗುಂಪೊಂದು ದೇವಸ್ಥಾನದಲ್ಲಿ ಮಲಗಿದ್ದ ಮೂವರು ಕಾವಲುಗಾರರನ್ನು ಕೊಂದಿದೆ ಎನ್ನಲಾದ ಪ್ರಕರಣ ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯದ ಗುತ್ತಲಿನ ಅರ್ಕೇಶ್ವರ ದೇವಾಲಯದಲ್ಲಿ ಮಲಗಿದ್ದ ಮೂವರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕಾಶ(34), ಆನಂದ(33) ಹಾಗೂ ಗಣಪತಿ (35) ಕೊಲೆಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಈ ಮೂವರು ದೇವಾಲಯದ ಕಾವಲುಗಾರಾಗಿ ಕೆಲಸ ಮಾಡುತ್ತಿದ್ದರು. ಈ ತ್ರಿವಳಿ ಕೊಲೆ ಸೇರಿದಂತೆ ಕಳೆದ ಒಂದು ವಾರದಲ್ಲಿ ಮಂಡ್ಯದಲ್ಲಿ ಒಟ್ಟು ಐದು ಜನರ ಕೊಲೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ದೇವಸ್ಥಾನದ ಹುಂಡಿಯನ್ನು ಅನತಿ ದೂರದಲ್ಲಿ ಬಿಸಾಡಲಾಗಿದೆ. ಹೀಗಾಗಿ ಹುಂಡಿ ಕಳ್ಳತನಕ್ಕೆ ಮೂವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೇವಾಲಯದಲ್ಲಿ ಕಳ್ಳತನ ನಡೆಸುವ ತಂಡದಿಂದ ವ್ಯವಸ್ಥಿತವಾಗಿ ದುಷ್ಕೃತ್ಯ ನಡೆದಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಡಿವೈಎಸ್ಪಿ ನವೀನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.