ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇನ್ನು ಮುಂದೆ ಎಟಿಎಂಗಳಿಗೆ ಹಣ ತೆಗೆಯಲು ಹೋದಾಗ ಜೊತೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕೂಡ ಇರಲಿ. ಆಗ ಮಾತ್ರ ನೀವು ದುಡ್ಡು ತೆಗೆಯಲು ಸಾಧ್ಯ. ಸೆಪ್ಟೆಂಬರ್ 18ರಿಂದ ಎಸ್‌ಬಿಐ ಈ ನಿಯಮವನ್ನು ಜಾರಿ ಮಾಡಿದೆ.
10 ಸಾವಿರ ರೂ.ಗಿಂತ ಹೆಚ್ಚಿನ ಹಣ ವಿತ್‌ಡ್ರಾ ಮಾಡಲು ಮೊಬೈಲ್ ನಂಬರ್ ದಾಖಲಿಸಬೇಕು. ನಂತರ ಮೊಬೈಲ್‌ಗೆ ಬರುವ ಒಟಿಪಿ ದಾಖಲಿಸಿದ ನಂತರವಷ್ಟೇ ಹಣ ತೆಗೆಯಬಹುದು. ಎಟಿಎಂ ಕುರಿತಂತೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಪ್ಪಿಸಲು ಈ ಕ್ರಮ ಜಾರಿಗೆ ತರುತ್ತಿರುವುದಾಗಿ ಬ್ಯಾಂಕ್ ಹೇಳಿದೆ. ಮುಂದಿನ ದಿನಗಳಲ್ಲಿ ಉಳಿದ ಬ್ಯಾಂಕ್‌ಗಳೂ ಈ ವಿಧಾನ ಅನುಸರಿಸಲಿವೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಕೊವಿಡ್ ದೃಢಪಟ್ಟಿದೆ. ತಮಗೆ ಕೊವಿಡ್ ತಗುಲಿದ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವರು, ‘ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೊವಿಡ್-19 ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು ನನಗೂ ಸಹ ಸೊಂಕು ದೃಢಪಟ್ಟಿದ್ದು, ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ. ಆರೋಗ್ಯದಿಂದಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ ಎಂದು ಅವರು ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ. ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೂ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅತ್ತ ಮೊನ್ನೆ ಸಂಸತ್‌ನಲ್ಲಿ ಪಾಲ್ಗೊಳ್ಳಲು ಬಂದ 25ಕ್ಕೂ ಹೆಚ್ಚು ಸಂಸದರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ವಿಶ್ವದ ಎತ್ತರ ಪ್ರದೇಶದಲ್ಲಿನ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎನ್ನಲಾಗಿರುವ ಅಟಲ್ ಸುರಂಗ ಹೆದ್ದಾರಿ ಉದ್ಘಾಟನೆಗೆ ಸಿದ್ಧವಾಗಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ದೇಶದ ಗಡಿಭಾಗದ ಲೇಹ್ ಪ್ರದೇಶಕ್ಕೆ ಸಂಪರ್ಕಿಸುವ ಈ ಹೆದ್ದಾರಿ ನಿರ್ಮಾಣವನ್ನು ಹತ್ತು ವರ್ಷಗಳ ಅವಧಿಯಲ್ಲಿ ಪೂರ್ತಿಗೊಳಿಸಲಾಗಿದೆ.
ಆರಂಭದಲ್ಲಿ 6 ವರ್ಷ ಅವಧಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಪ್ರತಿ 60 ಮೀ.ಗೆ ಸಿಸಿಟಿವಿಯನ್ನು, ಪ್ರತಿ 500 ಮೀ.ಗೆ ತುರ್ತು ನಿರ್ಗಮನ ದ್ವಾರವನ್ನು ನಿರ್ಮಿಸಲಾಗಿದೆ. ಸುರಂಗದಲ್ಲಿ ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಲಾಗಿದೆ.
ಈ ಹೆದ್ದಾರಿಯು ಮನಾಲಿ ಮತ್ತು ಲೇಹ್ ನಡುವಿನ ರಸ್ತೆದೂರವನ್ನು 47 ಕಿಮೀ ಕಡಿಮೆ ಮಾಡುತ್ತದೆ. ಇದರಿಂದ ಪ್ರಯಾಣದ ಅವಧಿ 4 ತಾಸು ತಗ್ಗಲಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಲಕ್ಷದ ಲೆಕ್ಕದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 10 ಜನರನ್ನು ರೋಣ ಪೊಲೀಸರು ಬಂಧಿಸಿ, ಸ್ಟೇಷನ್‌ಬೇಲ್ ಬಿಡುಗಡೆ ಮಾಡಿದ್ದಾರೆ. ಹೊಳೆ ಆಲೂರಿನ ಎಪಿಎಂಸಿ ಆವರಣದಲ್ಲಿ ಬಸವರಾಜ ಹನುಮಂತಪ್ಪ ಸಂಗಟಿಯವರ ದಲಾಲಿ ಅಂಗಡಿ ಮುಂದೆ ನಡೆಯುತ್ತಿದ್ದ ಇಸ್ಪೀಟು ಅಡ್ಡೆಯ ಮೇಲೆ ರೋಣ ಪಿಎಸ್‌ಐ ವಿನೋದ ಪೂಜಾರಿ ನೇತೃತ್ವದಲ್ಲಿ ರೋಣ ಪೊಲೀಸರು ದಾಳಿ ಮಾಡಿ 1 ಲಕ್ಷ 16 ಸಾವಿರ 870 ರೂ. ವಶಪಡಿಸಿಕೊಂಡಿದ್ದಾರೆ.
ಕೆ ಪಿ ಆ್ಯಕ್ಟ್ 87ರ ಕಲಂ ಅಡಿ ಕೇಸು ದಾಖಲಿಸಿದ್ದಾರೆ. ಪಕ್ಕದ ಜಿಲ್ಲೆಯವರು, ದೂರದೂರಿನವರು ಈ ‘ದೊಡ್ಡ ಆಟ’ದಲ್ಲಿ ಅತಿಥಿ ಆಟಗಾರರಾಗಿ ಪಾಲ್ಗೊಂಡಿದ್ದರು. ಸಿಕ್ಕಿರುವ ಮೊತ್ತ ನೋಡಿದರೆ ಇದು ‘ಫಂಡ್’ ಆಟವೇ ಇರಬಹುದು ಎನ್ನಲಾಗಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಲಬುರಗಿ: ರೈತನಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಹಾಯಕ ಕೃಷಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ. ಕೃಷಿ ಸಲಕರಣೆಗಳಿಗೆ ರಿಯಾಯತಿ ಬಿಲ್ ಪಾಸ್ ಮಾಡಿಕೊಡಲು 50 ಸಾವಿರ ರೂ. ಲಂಚ ಪಡೆಯುವಾಗ ಜೇವರ್ಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ರೆಡ್‌ಹ್ಯಾಂಡ್ ಆಗಿ ಸಿಕ್ಕುಬಿದ್ದಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಸುನೀಲ್ ಕುಮಾರ್ ಯರಗೋಳ್ ಎಸಿಬಿ ಬಲೆಗೆ ಬಿದ್ದವರು. ಕಲಬುರಗಿ ನಗರದ ಕನ್ನಡ ಭವನದ ಬಳಿ ರೈತರಿಂದ ಹಣ ಪಡೆಯುವಾಗಲೇ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಜೇವರ್ಗಿ ನಿವಾಸಿ ರೈತ ಶರಣಗೌಡ ಎನ್ನುವವರಿಗೆ ಸಬ್ಸಿಡಿ ಬಿಲ್ ಪಾಸ್ ಮಾಡಿಕೊಡಲು 1.5 ಲಕ್ಷ ರೂಪಾಯಿ ಲಂಚದ ಹಣಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದ. ಐವತ್ತು ಸಾವಿರ ರೂ. ಹಣ ಪಡೆಯುವಾಗ ಎಸಿಬಿ ಎಸ್‌ಪಿ ಮಹೇಶ್ ಮೇಘಣ್ಣವರ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಅಧಿಕಾರಿಯ ಕಲಬುರಗಿ ನಿವಾಸದ ಮೇಲೆ ರೇಡ್ ಮಾಡಿರುವ ಪೊಲೀಸರು 9 ಲಕ್ಷ ರೂಪಾಯಿ ನಗದು ಹಣ, ಅಪಾರ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆದಾಯ ಮೀರಿ ಖರೀದಿಸಿದ ಆಸ್ತಿಪಾಸ್ತಿ ದಾಖಲೆ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕಳೆದ 24 ತಾಸುಗಳ ಅವಧಿಯಲ್ಲಿ(ಮಂಗಳವಾರ ಮುಂಜಾನೆಯಿಂದ ಬುಧವಾರ ಮುಂಜಾನೆ) 90,123 ಹೊಸ ಕೊವಿಡ್ ಕೇಸುಗಳು ದಾಖಲಾಗಿದ್ದು, ದೈನಂದಿನ ಗರಿಷ್ಠ 1,290 ಕೊವಿಡ್ ಸಾವು ಸಂಭವಿಸಿವೆ. ದೇಶದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ ಅರ್ಧ ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬುಧವಾರ ಮುಂಜಾನೆ ತಿಳಿಸಿದೆ.
ಸದ್ಯ ಒಟ್ಟು ಸೋಂಕಿತರ ಸಂಖ್ಯೆ 50,20,360 ಇದ್ದು, ಇದರಲ್ಲಿ 9,95,933 ಸಕ್ರಿಯ ಕೇಸ್‌ಗಳಿವೆ. 39,42,361 ಜನರು ಗುಣಮುಖರಾಗಿದ್ದಾರೆ. ಕಳೆದ 20 ದಿನದಲ್ಲಿ 20 ಸಾವಿರಕ್ಕೂ ಹೆಚ್ಚು ಕೊವಿಡ್ ಸಾವು ಸಂಭವಿಸಿವೆ. ಆದರೆ ಒಟ್ಟು ಚೇತರಿಕೆ ಪ್ರಮಾಣ ಶೇ.78 ಇದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 55,040 ರೂ. ಇದೆ. ಮುಂಬೈನಲ್ಲಿ ಕನಿಷ್ಠ ೫೧,೪೬೦ ರೂ. ಇದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಡುಗೆ ಸಿಲಿಂಡರ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಕೆಲಕಾಲ ಆತಂಕ ಮನೆಮಾಡಿದ್ದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ 22ನೇ ವಾರ್ಡ್ ನ ರಫೀಕ್ ಬಾಗೇವಾಡಿ ಎನ್ನುವವರ ಮನೆಯಲ್ಲಿ ಸಿಲಿಂಡರ್ ಗೆ ಬೆಂಕಿ ಹತ್ತಿದ ಪರಿಣಾಮ, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮೂಲಭೂತ ಅಗತ್ಯಗಳನ್ನು ಕಲ್ಪಿಸಲು ಅಧಿಕಾರವಿದ್ದರೆ ಸುಲಭ ನಿಜ. ಹಾಗಂತ ಅಧಿಕಾರವಿಲ್ಲದೆಯೂ ಸಮಾಜ ಸುಧಾರಣೆಯ ಕೆಲಸಗಳನ್ನು ಮಾಡಬಹುದು. ಇಂತಹ ಕೆಲಸಗಳಿಗೆ ಹಣ ಕೊಡಲು ನೂರಾರು ಜನ ಸಿದ್ಧರಿದ್ದಾರೆ. ನಮ್ಮಂತವರು, ದಾನಿಗಳು ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಈಗ ನಾನೂ ಒಂದು ಸೇತುವೆ ತರಹ ಅಷ್ಟೇ’ ಎಂದರು ಬಿಜೆಪಿ ಯುವನಾಯಕ ಅನಿಲ್ ಮೆಣಸಿನಕಾಯಿ.
ಭಾನುವಾರ ನಗರದ ಹೆರಿಗೆ ಆಸ್ಪತ್ರೆಗೆ ಅತ್ಯಾಧುನಿಕ ಬಯೊ-ಪ್ಯೂರಿಫೈಯರ್ ಯಂತ್ರ ನೀಡುವ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸುರಕ್ಷತೆಗೆ ಸ್ಪಂದಿಸಿದ ಅನಿಲ್, ಈ ನಂತರದಲ್ಲಿ ಇನ್ನಷ್ಟು ಉತ್ಸಾಹ ಪಡೆದುಕೊಂಡಿದ್ದಾರೆ. ಒಟ್ಟು ಅವರ ಕನಸು, ಆಶಯ ಮತ್ತು ಯೋಜನೆಗಳ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.
ವಿಜಯಸಾಕ್ಷಿ: ಈ ಬಯೊ-ಪ್ಯೂರಿಫೈಯರ್ ಯಂತ್ರ ನೀಡುವ ಆಲೋಚನೆ ಹೊಳೆದಿದ್ದು ಹೇಗೆ? ಅನಿಲ್: ‘ಮನುಕುಲಕ್ಕಾಗಿ ಭಿಕ್ಷಾಟನೆ’ ಹಮ್ಮಿಕೊಂಡಾಗಲೇ ಕೊರೋನಾ ಕಾರಣಕ್ಕೆ ತೀವ್ರ ಆತಂಕದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ನೆರವಾಗುವ ಯೋಚನೆಯಿತ್ತು. ಬೆಂಗಳೂರಿನ ವೈದ್ಯ ಮಿತ್ರರು ಇಂತಹ ಒಂದು ಸದುಪಯೋಗಿ ಯಂತ್ರ ಆವಿಷ್ಕರಿಸಿದ ಕುರಿತು ಹೇಳಿದರು. ಸೆಪ್ಟೆಂಬರ್ ೧ ರಂದು ಯಂತ್ರ ತಯಾರಿಸಿದ ರೆಡಾರ್ಕ್ ಕಂಪನಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಯೊ-ಪ್ಯೂರಿಫೈಯರ್ ಯಂತ್ರವನ್ನು ಉಚಿತವಾಗಿ ನೀಡಿತ್ತು. ಈ ಯಂತ್ರದ ಉಪಯೋಗದ ಕುರಿತಾಗಿ ‘ದಿ ಹಿಂದೂ’ ಪ್ರಕಟಿಸಿದ ವಿವರ ಓದಿದ ನಂತರ ಕೂಡಲೇ ಸಕ್ರಿಯರಾದೆವು. ಇಲ್ಲಾಗಲೇ ವೈದ್ಯ ಸೇರಿದಂತೆ ಇಬ್ಬರು ಆರೋಗ್ಯ ಸಿಬ್ಬಂದಿ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದರು. ಜಿಲ್ಲೆಗೆ ಈ ಯಂತ್ರದ ತುರ್ತು ಅಗತ್ಯವಿದೆ ಎಂದು ಕಂಪನಿ ಜೊತೆ ಮಾತನಾಡಿ ಖರೀದಿಸಿದೆವು.
ವಿಜಯಸಾಕ್ಷಿ: ಇಷ್ಟು ದೊಡ್ಡ ಮೊತ್ತದ ಯಂತ್ರ ಖರೀದಿ ಹೇಗೆ ಸಾಧ್ಯವಾಯಿತು? ಅನಿಲ್: ಇದರಲ್ಲಿ ನಾನು ಸೇತುವೆಯಷ್ಟೇ. ಜಿಲ್ಲೆಯ-ಹಲವಾರು ಸಹೃದಯರು ಧನ ಸಹಾಯ ಮಾಡಿದರು. ಕಾಂತಿಲಾಲ್ ಬನ್ಸಾಲಿ, ಎಂ ಎಂ ಹಿರೇಮಠ, ಸಂಗಮೇಶ ದುಂದೂರ, ಶಂಕ್ರಪ್ಪ ಇಂಡಿ, ಸಿದ್ದು ಪಲ್ಲೇದ, ಜಗನ್ನಾಥಸಾ ಭಾಂಡಗೆ, ಸಂಗಣ್ಣ ಬಂಗಾರಶೆಟ್ಟರ, ಪ್ರಶಾಂತ್ ನಾಯ್ಕರ್, ಮಹೇಶ್ ದಾಸರ, ರವಿ ಸಿದ್ಲಿಂಗ್, ಪ್ರಕಾಶ ಅಂಗಡಿ, ಸತೀಶ ಮುದಗಲ್ಲ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಆನಂದ ಸೇಠ್, ಈಶಣ್ಣ ಸೋಳಂಕಿ, ಈಶಣ್ಣ ಮುನವಳ್ಳಿ, ಮಂಜು ಮ್ಯಾಗೇರಿ, ಭದ್ರೇಶ್ ಕುಸ್ಲಾಪೂರ, ದ್ಯಾಮಣ್ಣ ನೀಲಗುಂದ, ಕಿಷನ್ ಮೆರವಾಡೆ ಹೇಳುತ್ತ ಹೋದರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ಸಹಕಾರದಿಂದ ಹಣ ಸೇರಿಸಿ ಯಂತ್ರ ಖರೀದಿಸಿದೆವು.
ವಿಜಯಸಾಕ್ಷಿ: ಈ ಯಂತ್ರ ಎಷ್ಟರ ಮಟ್ಟಿಗೆ ಪ್ರಯೋಜನಾಕಾರಿ? ಅನಿಲ್: ಈ ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈರಲ್ ಲೋಡ್ ಒಂದು ಗಂಭೀರ ಸಮಸ್ಯೆಯಾಗಿದೆ. ಗೋಡೆ, ನೆಲ, ಕಾಟ್ ಇತ್ಯಾದಿ ಭೌತಿಕ ವಸ್ತುಗಳನ್ನು ಸ್ಯಾನಿಟೈಸ್ ಮಾಡಬಹುದು. ಆದರೆ ವಾತಾವರಣದಲ್ಲಿರುವ ವೈರಲ್ ಲೋಡ್ ನಿಯಂತ್ರಿಸಲು ಅಸಾಧ್ಯ. ಈ ಯಂತ್ರ ಆರು ವಿಧದಲ್ಲಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದು ವೈರಸ್, ಬ್ಯಾಕ್ಟಿರಿಯಾ, ಫಂಗಸ್‌ಗಳನ್ನು ನಾಶ ಮಾಡಿ ಶುದ್ಧ ಆಮ್ಲಜನಕವನ್ನು ಹೊರಸೂಸುತ್ತದೆ. ಇದರಿಂದ ಐಸಿಯು, ವಾರ್ಡ್, ಆಪರೇಷನ್ ಥಿಯೇಟರ್‌ಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿ ಸೋಂಕಿನ ಆತಂಕವಿಲ್ಲದೇ ಕೆಲಸ ಮಾಡಬಹುದು. ಹಲವಾರು ವೈದ್ಯ ಸಿಬ್ಬಂದಿ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.
‘ಸರ್ಕಾರಿ ಶಾಲೆ ದತ್ತು ಪಡೆಯಲಿದ್ದೇವೆ’
ವಿಜಯಸಾಕ್ಷಿ: ಮತ್ತೆ ಮುಂದಿನ ಕಾರ್ಯಕ್ರಮ? ಅನಿಲ್: ಈಗ ತುರ್ತಾಗಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗಾಗಿ ಕೆಲಸ ಮಾಡಲೇಬೇಕಿದೆ. ಶಾಲೆಗಳು ಆರಂಭವಾಗುವ ಮುಂಚೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಸುವ, ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೂ ನೆರವು ನೀಡಲು ಜಿಲ್ಲೆಯಲ್ಲದೇ ಬೆಂಗಳೂರಿನ ಮಿತ್ರರು ಮುಂದೆ ಬಂದಿದ್ದಾರೆ. ಶಾಲೆಗಳನ್ನು ದತ್ತು ಪಡೆಯುವ ವಿಚಾರವೂ ಈಗ ಚರ್ಚೆಯಲ್ಲಿದೆ. ಧನಸಹಾಯ ನೀಡುವವರಿಗೆ ಕೊರತೆಯಿಲ್ಲ, ತಳಮಟ್ಟದಲ್ಲಿ ಯೋಜನೆ ಕಾರ್ಯಗತ ಮಾಡಲು ನಮ್ಮಂತಹ ಯುವಕರ ಅಗತ್ಯವಿದೆ. ನಮ್ಮ ಸರ್ಕಾರಿ ಶಾಲೆಗಳ ವಾತಾವರಣ ಖಾಸಗಿ ಶಾಲೆಗಳ ಮಟ್ಟಕ್ಕೆ ಏರಬೇಕು ಎಂಬುದೇ ನಮ್ಮ ಆಶಯ. ಮನುಕುಲಕ್ಕಾಗಿ ಭಿಕ್ಷೆ ಕಾರ್ಯಕ್ರಮದಲ್ಲಿ ಸಾಕಷ್ಟು ದವಸಧಾನ್ಯ ನೀಡಿದ ನಮ್ಮ ರೈತರ ಮಕ್ಕಳು ಯಾವ ಆತಂಕವೂ ಇಲ್ಲದೇ ಶಾಲೆ ಕಲಿಯುವಂತಾಗಬೇಕು.
ಇನ್ನೊಂದು ಪ್ಯೂರಿಫೈಯರ್ ನೀಡಲು ತಯಾರಿ
ವಿಜಯಸಾಕ್ಷಿ: ಒಂದು ಪ್ಯೂರಿಫೈಯರ್ ಯಂತ್ರ ಸಾಕಾಗುವುದೆ? ಅನಿಲ್: ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈ ಯಂತ್ರದ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸುತ್ತಿದೆ. ಆದರೆ ಈಗ ದಾನಿಗಳು ಮುಂದೆ ಬಂದಿದ್ದು ಜಿಮ್ಸ್ ಕೊವಿಡ್ ಐಸಿಯು ವಾರ್ಡಿಗೆ ಇನ್ನೊಂದು ಪ್ಯೂರಿಫೈರ್ ನೀಡಲು ತಯಾರಿ ನಡೆಸಿದ್ದೇವೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್-19 ಕಬಂಧಬಾಹು ಕೊಪ್ಪಳ ಜಿಲ್ಲೆಯಲ್ಲೂ ದಿನೇ ದಿನೇ ದೊಡ್ಡದಾಗುತ್ತಲೇ ಇದೆ. ಈಗಾಗಲೇ ವೈರಸ್‍ನ್ನು ನಿಯಂತ್ರಿಸುವ, ಹತೋಟಿಗೆ ತರುವ ಬಗೆ ಮತ್ತು ಕ್ರಮಗಳ ಕುರಿತು ಜಿಲ್ಲಾಡಳಿತ ಸಾಕಷ್ಟು ಜಾಗೃತಿ ಮೂಡಿಸಿದೆ. ಆದರೂ ಜನರು ಮನೆಯಿಂದ ಹೊರಬರುವಾಗ ಮಾಸ್ಕ್ ಇಲ್ಲದೇ ರಿಸ್ಕ್ ತೆಗೆದುಕೊಳ್ಳುವುದನ್ನು ಜಿಲ್ಲಾಡಳಿತ ಗಮನಿಸಿದೆ.
ಹಾಗಾಗಿ ಕಳೆದ ಒಂದು ವಾರದಿಂದ ಬುದ್ಧಿ ಕಲಿಯದ ಜನರಿಗೆ ಜಿಲ್ಲಾಡಳಿತ ದಂಡ ಪ್ರಯೋಗಕ್ಕೆ ಮುಂದಾಗಿದೆ. ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುವವರಿಗೆ ಕೊಪ್ಪಳ ಜಿಲ್ಲೆಯಲ್ಲಿ ದಂಡ ಗ್ಯಾರೆಂಟಿ. ಅಷ್ಟೇ ಏಕೆ ಹೊಟೇಲ್, ಪಾರ್ಕ್, ಸಂತೆ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಹರಟೆ ಹೊಡೆಯುವವರಿಗೂ ದಂಡ ಕಟ್ಟಿಟ್ಟ ಬುತ್ತಿ.
ಜಿಲ್ಲಾಡಳಿತದ ಈ ದಂಡ ಪ್ರಯೋಗ ಕೆಲ ಪೊಲೀಸರಿಗೆ ದಂಡಿಸುವ ಕ್ರಮವಾಗಿ ಪರಿಣಮಿಸಿದೆ. ಹೀಗೆಂದ ಮಾತ್ರಕ್ಕೆ ಪೊಲೀಸರು ದಂಡದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದರ್ಥವಲ್ಲ. ಕಳೆದ ಸುಮಾರು 6 ತಿಂಗಳಿನಿಂದ ದಬ್ಬಾಳಿಕೆಯಿಂದ ಬಹುತೇಕ ದೂರವಿದ್ದ ಪೊಲೀಸರಿಗೆ ದಂಡ ಪ್ರಯೋಗದ ಕೆಲಸದ ದರ್ಪದ ಅಸ್ತ್ರವಾಗಿರುವುದಂತು ಸತ್ಯ.
ಗಾಡಿ ನಿಲ್ಲಿಸಿ ಕೀ ಕಿತ್ತುಕೊಳ್ಳುತ್ತಾರೆ
ದಂಡ ಪ್ರಯೋಗದ ಕೆಲಸದಲ್ಲಿ ಪೊಲೀಸರ ಜೊತೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸಹ ಕೈ ಜೋಡಿಸಿದ್ದಾರೆ. ಕೊಪ್ಪಳದ ಜೆಪಿ ಮಾರುಕಟ್ಟೆ, ಗಂಜ್ ಸರ್ಕಲ್, ಅಶೋಕ ಸರ್ಕಲ್ ಸೇರಿದಂತೆ ಬೆಳಗಿನಿಂದ ಸಂಜೆವರೆಗೆ ಮಾಸ್ಕ್ ಇಲ್ಲದ ಮುಖಗಳ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣು ಬೀಳುತ್ತಲೇ ಇರುತ್ತದೆ. ವಾಹನ ಸವಾರರು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದರೆ ಗಾಡಿಯನ್ನು ಅಡ್ಡಗಟ್ಟುತ್ತಾರೆ. ಜೊತೆಗೆ ಮೊದಲು ವಾಹನದ ಕೀ ಕಿತ್ತುಕೊಳ್ಳುತ್ತಾರೆ. ದಂಡ ಕಟ್ಟಿ ಕೀ ಪಡೆಯಿರಿ, ಇಲ್ಲವೇ ಕ್ವಾರಂಟೈನ್ ಕೇಂದ್ರಕ್ಕೆ ನಡೆಯಿರಿ ಎಂದು ದಬಾಯಿಸುವುದಲ್ಲದೇ ಥೇಟ್ ಜನರನ್ನು ಪಶುಗಳಂತೆ ಕಾಣುತ್ತಾರೆ. ಈ ಸಂಬಂಧ ನಿತ್ಯ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಇದ್ದದ್ದೇ. ಸಾರ್ವಜನಿಕರು ಕಾನೂನು ಪ್ರಕಾರ ಕೀ ಕಿತ್ತುಕೊಳ್ಳುವ ಹಾಗಿಲ್ಲ ಎಂದರೆ ಮಾಸ್ಕ್ ಇಲ್ಲದ್ದಕ್ಕೆ ದಂಡದ ಜೊತೆಗೆ ಮತ್ತೇ ಮತ್ತೊಂದೆರಡು ಮೂರು ಪ್ರಕರಣ ಸೇರಿಸಿ ಜೇಬಿಗೆ ತೂತು ಗ್ಯಾರಂಟಿ. ಇಲ್ಲವಾದರೆ ಹತ್ತಿ ಜೀಪ್, ನಡೆಯಿರಿ ಕ್ವಾರಂಟೈನ್‍ಗೆ ಎಂಬ ದರ್ಪ.
ಕೊವಿಡ್-19 ನಿಯಂತ್ರಣದ ಹೆಸರಿನಲ್ಲಿ ಅಧಿಕಾರಿಗಳ ದರ್ಪ ಬೇಕಿಲ್ಲ. ಹಾಗಂತ ಸಾರ್ವಜನಿಕರು ಸಹ ಜಿಲ್ಲಾಡಳಿತದ ಈ ಕ್ರಮ ಯಾರ ಸಲುವಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರಕಾರದ ಸದ್ಯದ ನಿಯಮಾವಳಿ ಪ್ರಕಾರ ಮಾಸ್ಕ್ ಬಳಕೆ ಕಡ್ಡಾಯ. ಎಲ್ಲರೂ ಅದನ್ನು ಪಾಲಿಸಬೇಕು. ಪೊಲೀಸರು ಸಹ ಮನುಷ್ಯರೇ. ಮನುಷ್ಯರ ಜೊತೆ ಮನುಷ್ಯರಂತೆ ವರ್ತಿಸಲಿ ಎಂಬುದಷ್ಟೇ ನಮ್ಮ ಆಶಯ.
ಮಾಸ್ಕ್ ಜೊತೆಗಿತ್ತು. ಮಾರ್ಕೆಟ್‍ಗೆ ಬೈಕ್ ಮೇಲೆ ಹೋಗುವಾಗ ಫೋನ್ ಬಂದಿದ್ದಕ್ಕೆ ಗಾಡಿ ಪಕ್ಕಕ್ಕೆ ನಿಲ್ಲಿಸಿ ಮಾಸ್ಕ್ ತೆಗೆದು ಮಾತನಾಡಿದೆ. ಆನಂತರ ಮಾರುಕಟ್ಟೆಗೆ ಹೋಗಬೇಕಾದ ಜೇಬಿನಲ್ಲಿದ್ದ ಮಾಸ್ಕ್ ಹಾಕುವುದನ್ನು ಮರೆತುಬಿಟ್ಟೆ. ಅದಕ್ಕೆ ದಂಡ ಹಾಕುವುದಾದರೆ ಹಾಕಲಿ. ದಂಡ ಕಟ್ಟಲೂ ಸಿದ್ಧವಿದ್ದರೂ ಏಕಾಏಕಿ ನಾವೇನೋ ಮಹಾಪರಾಧ ಮಾಡಿದ್ದೇವೆಯೇನೋ ಎಂಬಂತೆ ಗಾಡಿ ಕೀ ಕಿತ್ತುಕೊಳ್ಳುವುದು ಸರಿಯಲ್ಲ. ಜೊತೆಗೆ ದಂಡ ಕಟ್ಟಿದ ಮೇಲೆ ಕೀ ಮರಳಿಸಲು ಪೊಲೀಸರು, ಅಧಿಕಾರಿಗಳು ಸತಾಯಿಸ್ತಾರೆ.
-ಸಿದ್ಧಲಿಂಗೇಶ್, ಕೊಪ್ಪಳ.
ದಂಡ ಹಾಕುತ್ತಿರುವುದು ಜನರು ಮಾಸ್ಕ್ ಹಾಕುವುದನ್ನು ಮರೆಯದಿರಲಿ ಎಂಬುದಕ್ಕೆ. ಆದರೆ ಸಾರ್ವಜನಿಕರ ವಾಹನಗಳ ಕೀ ಕಿತ್ತುಕೊಳ್ಳುವುದು ಸರಿಯಲ್ಲ. ಆ ರೀತಿ ಮಾಡದಿರುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು.