Home Blog

ಸಾಹಿತಿ ಡಾ. ರಾಜೇಂದ್ರ ಗಡಾದರಿಗೆ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ, ಮಕ್ಕಳ ಸಾಹಿತಿ, ಸಂಶೋಧಕ, ಕವಿ, ಹಿರಿಯ ಲೇಖಕ ಡಾ. ರಾಜೇಂದ್ರ ಎಸ್. ಗಡಾದ ಅವರಿಗೆ ಬೆಂಗಳೂರಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನೀಡುವ 2025ನೇ ಸಾಲಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ ಸಂದಿದೆ.

ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕವಿ, ಸಾಹಿತಿ ಡಾ. ಸಿ. ಸೋಮಶೇಖರ್ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ. ರಾಜೇಂದ್ರ ಗಡಾದರಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಮಾಜಿ ಲೋಕಾಯುಕ್ತ ಡಾ. ಎನ್. ಸಂತೋಷ ಹೆಗಡೆಯವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಸಿ. ನಂಜಯ್ಯನಮಠ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ. ಎಸ್. ಮುತ್ತುರಾಜ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಶಂಕರ್ ಭಟ್, ಗಣೇಶರಾವ್ ಕೇಸರ್‌ಕರ್, ಮೀನಾ, ಅಥಣಿ ಮೋಟಗಿಮಠದ ಡಾ. ಪ್ರಭುಚನ್ನಬಸವ ಮಹಾಸ್ವಾಮಿಗಳು, ಚಪ್ಪಲಕಟ್ಟಿ ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ಅಧ್ಯಕ್ಷ, ಪತ್ರಕರ್ತ, ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ ಹಾಜರಿದ್ದರು.

ಪ್ರಶಸ್ತಿಗೆ ಭಾಜನರಾದ ಡಾ. ರಾಜೇಂದ್ರ ಗಡಾದರನ್ನು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಅಡವೀಂದ್ರ ಸ್ವಾಮಿಮಠದ ಶಿವಾನುಭವ ಸಮಿತಿ, ಕನ್ನಡ ಜಾಗೃತಿ ವೇದಿಕೆ, ಸಂಗಮ ಪ್ರಕಾಶನ ವೇದಿಕೆ ಮುಂತಾದ ಸಂಘಟನೆಗಳು ಅಭಿನಂದಿಸಿವೆ.

ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ; ಅಭಿನಂದನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಪರ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ಸರ್ಕಾರದಿಂದ ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಮಟ್ಟದ ಸಮಿತಿಗಳನ್ನು ಆಯ್ಕೆ ಮಾಡಲಾಗಿದೆ.

ಗದಗ ಜಿಲ್ಲೆಯಲ್ಲಿ ಒಟ್ಟು ಐದು ಜನರನ್ನು ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಹಿರಿಯರು, ಬಸವ ಅನುಯಾಯಿಗಳು ಹಾಗೂ ನಿವೃತ್ತ ಇಂಜಿನಿಯರಾದ ಅಶೋಕ ಬರಗುಂಡಿ, ಯುವ ಹೋರಾಟಗಾರ ಮುತ್ತು ಬಿಳೆಯಳ್ಳಿ, ಪಿ.ಪಿ.ಜಿ ಕಲಾ ಕಾಲೇಜಿನ ಪ್ರಾಚಾರ್ಯ ರಾಜಶೇಖರ ದಾನರಡ್ಡಿ, ಸಾಮಾಜಿಕ ಹೋರಾಟಗಾರ ಮುತ್ತಣ್ಣ ಹಾಳಕೇರಿ ಮುಂಡರಗಿ, ಮಹಿಳಾ ಹೋರಾಟಗಾರ್ತಿ ಲಾಡಮಾ ನದಾಫ್ ಗದಗ ಇವರನ್ನು ಆಯ್ಕೆ ಮಾಡಿರುವ ಸರ್ಕಾರಕ್ಕೆ ಹಾಗೂ ಸಮಿತಿಯ ಎಲ್ಲ ಸದಸ್ಯರಿಗೆ ಆನಂದ ಶಿಂಗಾಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕನ್ನಡ ಉಳಿವಿಗಾಗಿ, ಕನ್ನಡದ ಅಭಿವೃದ್ಧಿಗಾಗಿ ಸಮಿತಿಯ ಸದಸ್ಯರು ತಮ್ಮ ಸೇವೆಯನ್ನು ಮುಡಿಪಾಗಿಡಲಿ ಎಂದು ಗದಗ ಜಿಲ್ಲಾ ಛಲವಾದಿ ಮಹಾಸಭಾ ಆಶಿಸಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಿದ್ದನಗೌಡರ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025ನೇ ಸಾಲಿನ 70ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮುಳಗುಂದ ಪಟ್ಟಣದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ವೀರಪ್ಪ ದೇವಪ್ಪ ಸಿದ್ದನಗೌಡರ ಆಯ್ಕೆಯಾಗಿದ್ದಾರೆ.

ವೀರಪ್ಪ ಸಿದ್ದನಗೌಡರು 2016ರಲ್ಲಿ ಹೊಸ ದಿಗಂತ ಪತ್ರಿಕೆಯಿಂದ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಮುಳಗುಂದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರ ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಾಲೆಯ ಸಂಪೂರ್ಣ ಅಭಿವೃದ್ಧಿಯ ಹರಿಕಾರರಾಗಿದ್ದು, ಪತ್ರಿಕಾ ಧರ್ಮವನ್ನು ಉಸಿರಾಗಿಸಿಕೊಂಡು ತಮ್ಮ ಬರವಣಿಗೆ ಮೂಲಕ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾಕಷ್ಟು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಳಗುಂದ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಗುರುತಿಸಿ 2025ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 

ಹನುಮನ ಸ್ಮರಣೆಯಿಂದ ದೋಷಗಳು ದೂರ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹನುಮಾನ ಚಾಲೀಸಾ ಪಠಣದಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ನಿತ್ಯವೂ ಈ ಪಾಠವನ್ನು ಪಠಣೆ ಮಾಡುವುದರಿಂದ ಮನಸ್ಸಿನಲ್ಲಿನ ಭಯ ಇತ್ಯಾದಿಗಳು ದೂರವಾಗುತ್ತವೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಹನುಮಾನ ಚಾಲೀಸಾ ಪಠಣೆ ಮಾಡಬೇಕೆಂದು ಎ.ಜಿ. ಕುಲಕರ್ಣಿ ಹೇಳಿದರು.

ಪಟ್ಟಣದ ಜಕ್ಕಲಿ ಕ್ರಾಸ್‌ನಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ನರೇಗಲ್ಲ ಬ್ರಹ್ಮ ಸಮಾಜದಿಂದ ಆಚರಿಸಲಾದ ಹನುಮಾನ ಚಾಲೀಸಾ ಪಠಣೆಯ ನಂತರ ಅವರು ಮಾತನಾಡಿದರು.

ಹನುಮಂತ ಶಕ್ತಿ, ಯುಕ್ತಿಗೆ ಹೆಸರಾದ ದೇವರು. ನಂಬಿದವರನ್ನು ಹೇಗೆ ಪೊರೆಯಬೇಕು ಎಂಬುದನ್ನು ಅವನ ಚರಿತ್ರೆಯಿಂದ ನಾವು ತಿಳಿಯಬಹುದು. ಇಂತಹ ಸ್ವಾಮಿ ನಿಷ್ಠೆಯುಳ್ಳ ಹನುಮಂತನ ಪಠಣೆ ಮಾಡುವುದರಿಂದ ಸರ್ವ ದೋಷಗಳೂ ನಿವಾರಣೆಯಾಗುತ್ತವೆ ಎಂದು ಕುಲಕರ್ಣಿ ಹೇಳಿದರು.

ಶ್ರೀ ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮಾತನಾಡಿ, ಹನುಮಾನ ಚಾಲೀಸಾ ಪಠಣೆಯ ಸವಿರುಚಿಯನ್ನು ನಮಗೆ ಹತ್ತಿಸಿದವರು ಶ್ರೀಕ್ಷೇತ್ರ ಹೆಬ್ಬಳ್ಳಿಯ ಪರಮಪೂಜ್ಯ ಶ್ರೀ ದತ್ತಾವಧೂತ ಗುರುಗಳು. ನರೇಗಲ್ಲನ್ನೊಳಗೊಂಡಂತೆ ನಾಡಿನ ಹಲವಾರು ಕಡೆಗಳಲ್ಲಿ ಅವರು ಭಕ್ತರಿಂದ ಹನುಮಾನ ಚಾಲೀಸಾ ಹೇಳಿಸುತ್ತಿದ್ದಾರೆ. ನವೆಂಬರ್‌ನಲ್ಲಿ ಅವರು ಹುಬ್ಬಳ್ಳಿಯಲ್ಲಿ 100 ತಾಸುಗಳ ಹನುಮಾನ ಚಾಲೀಸಾ ಪಠಣೆಯನ್ನು ಇರಿಸಿಕೊಂಡಿದ್ದಾರೆ. ಅವರ ಅಣತಿಯಂತೆ ನರೇಗಲ್ಲದ ಸದ್ಭಕ್ತರು ಅಲ್ಲಿಗೆ ತೆರಳಿ, ಹನುಮಾನ ಚಾಲೀಸಾ ಪಠಣೆಯಲ್ಲಿ ಪಾಲ್ಗೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎಸ್.ಎಚ್. ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕಾಳೆ, ರಂಗಣ್ಣ ಕುಲಕರ್ಣಿ, ಎ.ಎ. ಕುಲಕರ್ಣಿ, ನಾಗೇಶ ಗ್ರಾಮಪುರೋಹಿತ, ನಾಗರಾಜ ನಾಡಿಗೇರ, ಆದರ್ಶ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಬಾಬು ಕಾಳೆ, ಪರಿಮಳಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಅರ್ಚನಾ ಕುಲಕರ್ಣಿ, ರೇಣುಕಾ ಗ್ರಾಮಪುರೋಹಿತ, ಭಾಗ್ಯಾಬಾಯಿ ಕಾಳೆ, ರೂಪಾ ಕುಲಕರ್ಣಿ, ಪ್ರತಿಕ್ಷಾ ಕುಲಕರ್ಣಿ, ಭಾರತಿಬಾಯಿ ಗ್ರಾಮಪುರೋಹಿತ, ನಿಖಿತಾ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ಅನಿತಾ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಜಯಶ್ರೀ ಗ್ರಾಮಪುರೋಹಿತ, ಶೋಭಾ ಸೂರಭಟ್ಟನವರ, ಪಲ್ಲವಿ ಗ್ರಾಮಪುರೋಹಿತ, ಅನುಪಮಾ ಗ್ರಾಮಪುರೋಹಿತ ಮುಂತಾದವರಿದ್ದರು.

ಪಾರ್ಶ್ವವಾಯುವಿನ ಲಕ್ಷಣಗಳನ್ನು ತಕ್ಷಣ ಗುರುತಿಸಿ: ಡಾ. ರಾಜೇಂದ್ರ ಸಿ. ಬಸರಿಗಿಡದ

0

`ವಿಶ್ವ ಪಾರ್ಶ್ವವಾಯು ದಿನ’ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಸಿ. ಬಸರಿಗಿಡದ
ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಪಾರ್ಶ್ವವಾಯುವಿನಿಂದ ಕುಟುಂಬ/ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ. ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡ ತಿಳಿಸಿದರು.

ಜಿಲ್ಲಾಡಳಿತ ಗದಗ, ಜಿಲ್ಲಾ ಪಂಚಾಯಿತಿ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜನರಲ್ ಮೆಡಿಸಿನ್ ಮುಖ್ಯಸ್ಥರಾದ ಡಾ. ಸಂಗಮೇಶ ಅಸೂಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಶ್ವ ಪಾರ್ಶ್ವವಾಯು ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾರ್ಶ್ವವಾಯು ಬಾಧಿತ ರೋಗಿಗಳು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು. ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊಸ ಕಟ್ಟಡ ಕೊಠಡಿ ಸಂಖ್ಯೆ: 105ರಲ್ಲಿ ಪ್ರತಿನಿತ್ಯ ಮೆದುಳು ಆರೋಗ್ಯ ಕ್ಲಿನಿಕ್‌ಗೆ ಭೇಟಿ ನೀಡಿ ಚಿಕಿತ್ಸೆ, ಮನೋಸಾಮಾಜಿಕ ಬೆಂಬಲ, ಫಿಜಿಯೋಥೆರಪಿ ಹಾಗೂ ಸ್ಪೀಚ್ ಥೆರಪಿ ಸೌಲಭ್ಯವನ್ನು ಪಡೆದು ಪಾರ್ಶ್ವವಾಯುವಿನಿಂದ ಗುಣಮುಖವಾಗಲು ತಿಳಿಸಿದರು.

ಶ್ವಾಸಕೋಶ ತಜ್ಞರಾದ ಡಾ. ಇರ್ಫಾನ್ ಎಮ್ ಮಾತನಾಡಿ, ಸಮಾಜದಲ್ಲಿ ಮೂಢ ನಂಬಿಕೆಗಳಿಂದ ಆಚರಣೆಯಲ್ಲಿರುವ ವಿವಿಧ ಚಿಕಿತ್ಸೆಗೆ ಒಳಗಾಗಿ ರೋಗವನ್ನು ಹೆಚ್ಚು ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡು ಪಾರ್ಶ್ವವಾಯುವಿನಿಂದ ಮುಕ್ತರಾಗಲು ತಿಳಿಸಿದರು.

ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎನ್.ಸಿ.ಡಿ ವಿಭಾಗದ ವೈದ್ಯಕೀಯ ಅಧಿಕಾರಿಗಳಾದ ಡಾ. ಅರ್ಪಿತಾ ಮಾತನಾಡಿ, ಗ್ರಾಮೀಣ ರೋಗಿಗಳು ಪ್ರಥಮ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿ, ಪಾರ್ಶ್ವವಾಯು ಕುರಿತು ಎಚ್ಚರಿಕೆಯಿಂದಿರಲು ತಿಳಿಸಿದರು.

ರವಿ ನಂದ್ಯಾಳ ಸ್ವಾಗತಿಸಿದರು. ರೋಣದ ಜಿಲ್ಲಾ ಸಂಯೋಜಕ ಪ್ರವೀಣ ಎಸ್ ನಿರೂಪಿಸಿದರು, ಕ್ಲಿನಿಕಲ್ ಸೈಕೋಲಜಿಸ್ಟ್ ರೇವಣಸಿದ್ದಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಎನ್.ಟಿ.ಸಿ.ಪಿ ಕಾರ್ಯಕ್ರಮದ ಆಪ್ತ ಸಮಾಲೋಚಕರಾದ ರೇಷ್ಮಾ ನದಾಫ್, ಎನ್.ಸಿ.ಡಿ ವಿಭಾಗದ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಸಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಮಾತನಾಡಿ, ವಿಶ್ವ ಪಾರ್ಶ್ವವಾಯು ದಿನ–2025ರ ಘೋಷವಾಕ್ಯ `ಪ್ರತಿ ನಿಮಿಷವೂ ಮುಖ್ಯ’ ಎಂಬುದರ ಕುರಿತು ಮಾತನಾಡಿ, ರೋಗಿಗಳಿಗೆ ಒಂದು ನಿಮಿಷವೂ ಸಹ ಬಂಗಾರದಂತಹ ಸಮಯವಾಗಿದ್ದು, ಸಮಯವನ್ನು ಕಳೆಯದೆ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವುದು ಅತೀ ಅವಶ್ಯಕ ಎಂದು ತಿಳಿಸಿದರು.

ಮಕಾನದಾರರಿಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ

0

ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರ ಪ್ರಕಾಶನದ ಮೂಲಕ ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡುವ ಜೊತೆಗೆ ಸಾಹಿತ್ಯ ಸಂಘಟನೆ, ಯುವ ಬರಹಗಾರರಿಗೆ ಉತ್ತೇಜನ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ವೋತ್ತಮ ಸೇವಾ ಪುರಸ್ಕೃತ ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಕವಿ ಮಕಾನದಾರ ಅವರ ಮೂರುವರೆ ದಶಕದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗದಗ ಜಿಲ್ಲಾಡಳಿತದ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸುಸಂದರ್ಭದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಗೌರವ ಸಮ್ಮಾನ ಜರುಗಲಿದೆ.

ಮಕಾನದಾರ ಅವರ ಅನೇಕ ಕೃತಿಗಳು ಕೊಂಕಣಿ, ಹಿಂದಿ, ತಮಿಳು, ತೆಲುಗು, ಬ್ಯಾರಿ, ಮಲಯಾಳಂ, ಇಂಗ್ಲಿಷ್, ದೇವನಾಗರಿ ಲಿಪಿ ಭಾಷೆಗಳಿಗೆ ಅನುವಾದಗೊಂಡಿದ್ದು, ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವವಿದ್ಯಾಲಯ, ಅಹಲ್ಯಾಬಾಯಿ ಹೋಳ್ಕರ್ ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಈ ಮೊದಲು ಕುವೆಂಪು ವಿಶ್ವವಿದ್ಯಾನಿಲಯಗಳ ಪಠ್ಯಗಳಲ್ಲಿ ಮಕಾನದಾರರ ಕವಿತೆ, ಗಜಲ್‌ಗಳು ಪಠ್ಯಪುಸ್ತಕಗಳಾಗಿವೆ.

ಸೂಫಿ ಸಾಹಿತ್ಯದ ಮೇರು ಕೃತಿ ವಿಶ್ವಭ್ರಾತೃತ್ವದ ಸೂಫಿ ದೂದ್ ಪೀರ, ಅಕ್ಕಡಿ ಸಾಲು, ಪ್ಯಾರಿ ಪದ್ಯ, ಮುತ್ತಿನ ತೆನೆ ಮುಂತಾದ ಮಹತ್ವದ ಸಂಕಲನಗಳು ವಿಶ್ವದ ಪ್ರತಿಷ್ಠಿತ ಗ್ರಂಥಾಲಯವಾದ ಅಮೇರಿಕಾದ ಕಾಂಗ್ರೆಸ್ ಆಫ್ ಲೈಬ್ರರಿಯ ವೆಬ್ ಲಿಂಕ್‌ನಲ್ಲಿ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿಲ್ಲೆಯಲ್ಲಿ ನ.3ರಿಂದ ಡಿ. 2ರವರೆಗೆ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನವನ್ನು ಜಿಲ್ಲೆಯಾದ್ಯಂತ ನವೆಂಬರ್ 3ರಿಂದ ಡಿಸೆಂಬರ್ 2ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಶುಕ್ರವಾರ ಜರುಗಿದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ರೈತರು, ಪಶುಪಾಲನೆ ಮಾಡುವವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೊಂದಿಗೆ ಸಹಕರಿಸಿ ತಮ್ಮಲ್ಲಿರುವ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ಜಾಗೃತಿ ಮೂಡಿಸಲು ತಿಳಿಸಿದರು.

ಕೇಂದ್ರ ಪುರಸ್ಕೃತ ಯೋಜನೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ನೀಡಿ, 2030ರ ಒಳಗಾಗಿ ರೋಗ ನಿರ್ಮೂಲನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ಜಾನುವಾರುಗಳ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ, ಜಾನುವಾರು ಉತ್ಪನ್ನಗಳ ರಫ್ತಿಗೆ ಅವಕಾಶ ಸಿಗುತ್ತದೆ. ಈ

ಮೂಲಕ ರೈತರ ಆದಾಯ ಹೆಚ್ಚಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ವಿವರಿಸಿದರು.
ನವೆಂಬರ್ 3ರಿಂದ ಡಿಸೆಂಬರ್ 2, 2025ರವರೆಗೆ 8ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸುಮಾರು 1,34,986 ದನ ಮತ್ತು 45,247 ಎಮ್ಮೆಗಳಿಗೆ ರೈತರ ಮನೆ ಬಾಗಿಲಲ್ಲೇ ಉಚಿತವಾಗಿ ಲಸಿಕೆಯನ್ನು ಅಭಿಯಾನದಲ್ಲಿ ಹಾಕುವುದಾಗಿ ಅವರು ತಿಳಿಸಿದರು.

ಅಭಿಯಾನ ಕಾರ್ಯಕ್ರಮಕ್ಕೆ ಬೇಕಾಗಿರುವ 1.9 ಲಕ್ಷ ಡೋಸ್ ಲಸಿಕೆ ಸರಬರಾಜಾಗಿದ್ದು, ಸಿರಿಂಜ್, ಪ್ರಚಾರ ಸಾಮಗ್ರಿ, ತುರ್ತು ಔಷಧ ಇತ್ಯಾದಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆಯ ನವಲಗುಂದ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಮೋಹನ ದ್ಯಾಬೇರಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಮಾತನಾಡಿ, ಅಭಿಯಾನದ ಯಶಸ್ವಿಗಾಗಿ ಎಲ್ಲ ಗ್ರಾಮ, ಪಟ್ಟಣಗಳನ್ನು ಸುಮಾರು 100 ಜಾನುವಾರುಗಳನ್ನು ಹೊಂದಿರುವ 1,779 ಬ್ಲಾಕ್‌ಗಳನ್ನಾಗಿ ವಿಂಗಡಿಸಿ, ಮೈಕ್ರೋಪ್ಲಾನ್ ಸಿದ್ಧಪಡಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿರುವ ಜಾನುವಾರು ಮಾಲೀಕರ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಲಸಿಕೆದಾರರ 110 ತಂಡಗಳನ್ನು ರಚಿಸಲಾಗಿದೆ. ಇಬ್ಬರು ಲಸಿಕೆದಾರರ ಒಂದು ತಂಡ ಪ್ರತಿ ದಿನ ಒಂದು ಬ್ಲಾಕ್‌ಗೆ ಭೇಟಿ ನೀಡಿ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು ಎಂದು ಸಭೆಯಲ್ಲಿ ವಿವರಿಸಿದರು.

ಭೋಗ-ಮೋಕ್ಷಗಳಿಗೆ ಧರ್ಮವೇ ಮೂಲ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ರಾಯಚೂರು: ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿ ತಲುಪಿಸಲು ಗುರು ಬೇಕು. ಜನರ ಮನೆ ಮನಗಳಲ್ಲಿ ಅಡಗಿರುವ ದುಷ್ಟ ದುರ್ಗುಣಗಳನ್ನು ನಾಶ ಮಾಡಿ ಸಭ್ಯತೆ, ಸಂಸ್ಕೃತಿ ಬೆಳೆಸುವುದೇ ಗುರು ಪೀಠಗಳ ಪರಮ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ ಲಿಂ. ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳವರ ಲಿಂಗೈಕ್ಯ ಸಾಮರಸ್ಯದ 25ನೇ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜನರ ಭೋಗ-ಮೋಕ್ಷಗಳಿಗೆ ಧರ್ಮವೇ ಮೂಲ. ಸಮರ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಪ್ರಗತಿಪರ ವಿಚಾರಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯವನ್ನರಿತು ಮನುಷ್ಯ ಬಾಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ಕಾಲ ಕಾಲಕ್ಕೆ ಭಾವೈಕ್ಯತೆಯ ಬೆಸುಗೆಯನ್ನುಂಟು ಮಾಡಿವೆ. ಕಾಯಕ ಮತ್ತು ದಾಸೋಹದ ಮೂಲಕ ಸಕಲರ ಹಿತವನ್ನು ಕಾಪಾಡಿದ ಧರ್ಮ ವೀರಶೈವ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವಿಶ್ವಬಂಧುತ್ವದ ಶಾಂತಿ ಸಾಮರಸ್ಯದ ಸಂದೇಶ ಸಕಲರಿಗೂ ದಾರಿದೀಪವಾಗಿದೆ ಎಂದರು.

ನೇತೃತ್ವ ವಹಿಸಿದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಅದನ್ನು ನಾಶ ಮಾಡುವ ಅಧಿಕಾರ ಯಾರಿಗೂ, ಯಾವ ಕಾಲಕ್ಕೂ ಇಲ್ಲ. ಪ್ರಾಪಂಚಿಕ ಸಂಬಂಧಗಳು ಶಿಥಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಬಾಂಧವ್ಯ ಯಾವತ್ತೂ ಗಟ್ಟಿಯಾಗಿ ಇರುವುದಾಗಿದೆ ಎಂದರು.

ಗಬ್ಬೂರು ಬೂದಿಬಸವ ಶಿವಾಚಾರ್ಯರು, ನೀಲುಗಲ್ ಪಂಚಾಕ್ಷರ ಶಿವಾಚಾರ್ಯರು, ರಾಯಚೂರು ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಸಿಂಧನೂರು ಸೋಮನಾಥ ಶಿವಾಚಾರ್ಯರು, ಕಡೇಚೂರು ಗುರುಮೂರ್ತಿ ಶಿವಾಚಾರ್ಯರು, ರಾಯಚೂರ ವೀರಸಂಗಮೇಶ್ವರ ಶಿವಾಚಾರ್ಯರು, ಛೇಗುಂಟಾ ಡಾ. ಕ್ಷೀರಲಿಂಗ ಶರಣರು, ಬಿಚ್ಚಾಲಿ ವೀರಭದ್ರ ಶಿವಾಚಾರ್ಯರು, ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು, ದೇವದುರ್ಗ ಕಪಿಲಸಿದ್ಧ ಶಿವಾಚಾರ್ಯರು, ಸುಲ್ತಾನಪುರ ವಿರೂಪಾಕ್ಷ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಶಾಸಕ ಡಾ. ಎಸ್. ಶಿವರಾಜ ಪಾಟೀಲ ಮಾತನಾಡಿದರು. ಶಾಸಕ ದದ್ದಲ ಬಸವನಗೌಡ, ದರೂರ ಬಸವನಗೌಡ, ರಾಮಣ್ಣ ಇರಟಗೇರಾ, ಡಾ. ನಿಜಗುಣ ಶಿವಯೋಗಪ್ಪ ಜವಳಿ, ಅಂತರಗಂಗಿ ವೀರಭದ್ರಪ್ಪ, ಎ.ಎಸ್. ಪಾಟೀಲ, ರಮೇಶ ಅಜಗರಣಿ, ಎಸ್.ಎಲ್. ಕೇಶವರೆಡ್ಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬಾಳೆಹೊನ್ನೂರು ಗುರುಕುಲ ಸಾಧಕರಿಂದ ವೇದಘೋಷ, ಅಮರಯ್ಯಸ್ವಾಮಿ ಹಿರೇಮಠ ರಾಜಲದಿನ್ನಿ ಇವರಿಂದ ಪ್ರಾರ್ಥನೆ, ನಿವೃತ್ತ ಪ್ರಾಧ್ಯಾಪಕ ಡಾ. ಚನ್ನಬಸವಸ್ವಾಮಿ ಅವರಿಂದ ಸ್ವಾಗತ ಜರುಗಿತು. ಡಾ. ವಿಜಯರಾಜೇಂದ್ರ ನಿರೂಪಿಸಿದರು. ಭಾಗ್ಯಲಕ್ಷ್ಮಿ ಗಣದಿನ್ನಿ ಹನುಮನಗೌಡ ಇವರಿಂದ ಪ್ರಸಾದ ಸೇವೆ ಜರುಗಿತು.

ಸಮಾರಂಭ ಉದ್ಘಾಟಿಸಿದ ರಾಯಚೂರ ಅ.ಭಾ.ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಭೂಪಾಲ ನಾಡಗೌಡ ಮಾತನಾಡಿ, ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮಪ್ರಜ್ಞೆ ಅವಶ್ಯಕ. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ ಎಂದರು.

ಜನರ ಬೇಡಿಕೆಗನುಸಾರ ಅಭಿವೃದ್ಧಿ ಯೋಜನೆಗಳನ್ನು ತಯಾರಿಸಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಜನರ ಬೇಡಿಕೆಗನುಸಾರವಾಗಿ ಯೋಜನೆಗಳನ್ನು ತಯಾರಿಸಬೇಕು. ಈ ಯೋಜನೆಗಳು ಗ್ರಾಮ ಮಟ್ಟದಿಂದ ರಾಜ್ಯದ ಯೋಜನೆಗಳಿಗೆ ಸೇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಯೋಜನಾ ಸಮಿತಿಯು ಅತ್ಯಂತ ಮಹತ್ವದ ಸಮಿತಿಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಜಿಲ್ಲಾ ಯೋಜನಾ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಚಿವರು, ಜಿಲ್ಲೆಯ ಗ್ರಾಮಗಳಲ್ಲಿನ ವರದಿಗಳನ್ನು ಆಧರಿಸಿದ ಯೋಜನೆಗಳು ಮೇಲ್ಮಟ್ಟದವರೆಗೆ ಸಿದ್ಧಪಡಿಸಿದ ಯೋಜನೆಗಳ ವರದಿಯು ರಾಜ್ಯಕ್ಕೆ ಮುನ್ನುಡಿಯಾಗಬೇಕು. ಗ್ರಾಮ ಸಭೆಗಳಲ್ಲಿ, ವಾರ್ಡ್ ಸಭೆಗಳಲ್ಲಿ ಚರ್ಚಿಸಿರುವ ವಿಷಯಗಳನ್ನು ಸಮಿತಿಯ ಗಮನಕ್ಕೆ ತರಬೇಕು. ಕೆಳಮಟ್ಟದಿಂದ ಯೋಜನೆಗಳ ತಯಾರಿಕೆ, ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಯೋಜನೆ ಸಿದ್ಧಪಡಿಸಲು ಪ್ರಯೋಗ ಪ್ರಾರಂಭಿಸಿದ್ದು ಗದಗ ಜಿಲ್ಲೆಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಸಮಗ್ರ ಅಭಿವೃದ್ಧಿ ಸೂಚ್ಯಂಕಗಳ ವಿವರಗಳನ್ನು ಮಂಡಿಸಿದರು. ಕೆಲವು ಪರಿಷ್ಕರಣೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸರ್ಕಾರಕ್ಕೆ ಕರಡು ಪ್ರಸ್ತಾವನೆಯನ್ನು ನವೆಂಬರ್ 15ರೊಳಗೆ ಸಲ್ಲಿಸಲು ಸೂಚನೆಯಿದ್ದು, ನವೆಂಬರ್ 14ರಂದು ಇನ್ನೊಂದು ಸಭೆಯನ್ನು ಕರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ವಿಜಯಕುಮಾರ ಶಿವಪ್ಪ ನೀಲಗುಂದ, ಬೆಟಗೇರಿ ರಾಜೇಸಾಬ ಮೌಲಾಸಾಬ, ಪರವೀನಬಾನೂ ಅಬ್ದುಲಮುನಾಫ್ ಮುಲ್ಲಾ, ರಾಜೇಶ್ವರಿ ಶಂಕರಗೌಡ ವೀರನಗೌಡ್ರ, ಮಲ್ಲಯ್ಯ ಗುರುಬಸಪ್ಪನಮಠ, ರಾಚಯ್ಯ ಬಸಯ್ಯ ಮಾಲಗಿತ್ತಿಮಠ, ಚಂದ್ರಶೇಖರಗೌಡ ಪರ್ವತಗೌಡ ಕರಿಸೋಮನಗೌಡ, ಕೃಷ್ಣಾ ಪರಾಪೂರ, ದಾಬಲಸಾಬ ಬಾಡಿನ, ಬರಕತ್ ಅಲಿ ಮುಲ್ಲಾ, ಜೈನುಲಾಬ್ದೀನ್ ರಹಮಾನಸಾಬ ನಮಾಜಿ, ಮಾನ್ವಿ ವಿನಾಯಕ ಶಿವಪ್ಪ, ರಾಜೇಸಾಬ ಅಮೀನಸಾಬ ಸಾಂಗ್ಲಿಕರ್, ವೆಂಕಟೇಶ ಕರಿಯಪ್ಪ ಮುದುಗಲ್ಲ, ಮಾಧೂಸಾ ತೇಜೋಸಾ ಮೇರವಾಡೆ, ಸುರೇಶ ಕಟ್ಟಿಮನಿ, ತಾಲೂಕು ಯೋಜನಾ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ ಯಲ್ಲಪ್ಪ ಹೊಸಮನಿ, ರಾಜಶೇಖರ ಮಾಲಗಿತ್ತಿ, ಪ್ರೇಮವ್ವ ಮಾನಪ್ಪ ಲಮಾಣಿ, ಶಿವಲೀಲಾ ದೇವಪ್ಪ ಬಂಡಿಹಾಳ, ಶೋಭಾ ಮುಳ್ಳೂರ, ಬಸಮ್ಮ ಸ್ಥಾವರಮಠ, ವಿಜಯಲಕ್ಷ್ಮಿ ಧರ್ಮಣ್ಣ ಲಮಾಣಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು.

ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ ಮಾತನಾಡಿ, ಗ್ರಾ.ಪಂ, ತಾ.ಪಂ ಕ್ರಿಯಾ ಯೋಜನೆಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆ, ಕಾಮಗಾರಿಗಳ ಸಂಖ್ಯೆ ಹಾಗೂ ಬೇಕಾಗುವ ಅನುದಾನದ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಸಲಹೆ ನೀಡಿದರು.

“ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಎಷ್ಟು ಶಾಲಾ ಶೌಚಾಲಯಗಳು ಬೇಕಾಗುತ್ತವೆ ಎಂಬ ವರದಿ ಸಿದ್ಧಪಡಿಸಬೇಕು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು. ಜಿಲ್ಲಾ ಯೋಜನಾ ಸಮಿತಿಯ ಪಟ್ಟಿ ರಾಜ್ಯಕ್ಕೆ ಮಾದರಿಯಾಗಬೇಕು”

ಎಚ್.ಕೆ. ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವರು.

ಇಂತಹ ಯಜ್ಞದಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ: ಸಿ.ಸಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ತ್ರಿಕೂಟೇಶ್ವರ ದೇವಸ್ಥಾನದಿಂದ ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದವರೆಗೆ ನೂರಾರು ನಾಗಾಸಾಧುಗಳ ನೇತೃತ್ವದಲ್ಲಿ 9 ಅಗ್ನಿಕುಂಡ ಅತಿರುದ್ರ ಮಹಾಯಜ್ಞ, ಕಿರಿಯ ಕುಂಭಮೇಳ ನಡೆಯಲಿದೆ. ನಮ್ಮ ಜೀವಿತಾವಧಿಯಲ್ಲಿ ಇಂತಹ ಯಜ್ಞದಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಸಿ.ಸಿ. ಪಾಟೀಲ ಹೇಳಿದರು.

ನಗರದ ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾಂತ ಸಹದೇವಾನಂದ ಗಿರಿಜೀ ಮಹಾರಾಜರು ನೇತೃತ್ವ ವಹಿಸಿಕೊಳ್ಳಲಿದ್ದು, 5 ಸಾವಿರ ಮಹಿಳೆಯರು ಕುಂಭಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಂಬತ್ತು ಅಗ್ನಿಕುಂಡಗಳಲ್ಲಿ ಯಜ್ಞ, ಯಾಗ ನಡೆಯಲಿದೆ. ಹಿಮಾಲಯದಲ್ಲಿ ತಪಸ್ಸು ಮಾಡಿದ ನೂರು ನಾಗಾಸಾಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಹಾನ್ ತಪಸ್ವಿ ನಾಗಾಸಾಧುಗಳನ್ನು ನೋಡುವ ಸೌಭಾಗ್ಯ, ಅವರ ತಪಸ್ಸಿನ ಫಲ ಗದಗ ಹಾಗೂ ಸುತ್ತಮುತ್ತಲಿನ ಜನತೆಗೆ ಸಿಗಲಿದೆ. ಉತ್ತರ ಭಾರತದಲ್ಲಿ ಸಿಗುವ ಸಾವಿರ ಧಾನ್ಯ, ದೇಶ-ವಿದೇಶಗಳ 900 ನದಿಗಳ ನೀರು, 200 ವೈದಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 18ರಂದು ಬೃಹತ್ ಧರ್ಮಸಭೆ ನಡೆಯಲಿದೆ. ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕೆ 3 ಕೋಟಿಗೂ ಅಧಿಕ ಮೊತ್ತ ವೆಚ್ಚವಾಗಲಿದೆ. ಹಲವಾರು ದಾನಿಗಳು ಕಾರ್ಯಕ್ರಮ ಯಶಸ್ವಿಗೆ ಸಹಾಯ-ಸಹಕಾರ ನೀಡಿದ್ದಾರೆ. ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ಪ್ರಯೋಜನ ಗದಗ-ಬೆಟಗೇರಿ ನಗರದ ಜನತೆಗೆಷ್ಟೇ ಅಲ್ಲದೆ ರಾಜ್ಯದ ಜನತೆಗೆ ಆಗಲಿ ಎಂಬುದು ನಮ್ಮ ಆಶಯ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಾಗಾಸಾಧುಗಳ ಹಾಗೂ ಸಂತರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಜಕಾರಣ ಹೊರತುಪಡಿಸಿ ಎಲ್ಲ ಸಮಾಜದ ಜನರು ಭಾಗವಹಿಸಲಿದ್ದಾರೆ. ಪಕ್ಷದ ಚಿನ್ಹೆಯನ್ನು ಹೊರಗಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಸನಾತನ ಧರ್ಮದ ಜಾಗೃತಿ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಯಜ್ಞದರ್ಶನ ಪಡೆಯುವ ದಂಪತಿಗಳು ಶುದ್ಧ ಮಡಿಯಿಂದ ಬರಬೇಕು. ಯಜ್ಞಕುಂಡದಲ್ಲಿ ಮೊದಲ ದಿನ ಭಾಗವಹಿಸುವವರು ಸಾತ್ವಿಕ ಆಹಾರ ಸೇವಿಸಿ ಸತತ ಏಳು ದಿನ ಭಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ರವಿ ದಂಡಿನ್, ರಾಜು ಕುರಡಗಿ, ಪ್ರಶಾಂತ್ ನಾಯ್ಕರ್, ರವಿ ಗುಂಜೀಕರ, ಬಸವರಾಜ ಬಿಂಗಿ, ಬಿ.ಬಿ. ಅಸೂಟಿ, ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ ಮುಂತಾದವರು ಉಪಸ್ಥಿತರಿದ್ದರು.

ನಗರದಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೈಸೂರಿನ ರಾಜ ಮನೆತನದ ಅರಸ ಯದುವೀರ ಕೃಷ್ಣದತ್ತ ಒಡೆಯರು ಆಗಮಿಸಲಿದ್ದಾರೆ. ಸಮಿತಿಯಿಂದ ಈಗಾಗಲೇ ಅವರಿಗೆ ಆಮಂತ್ರಣ ನೀಡಿದ್ದು, ಅತೀ ಶೀಘ್ರದಲ್ಲಿ ಭಾಗವಹಿಸುವ ದಿನಾಂಕ ತಿಳಿಸಲಿದ್ದಾರೆ.

ಕಿರಣ್ ಭೂಮಾ,
ಸಮಿತಿಯ ಅಧ್ಯಕ್ಷರು.

error: Content is protected !!