Home Blog Page 3

ಸಂತೋಷ್‌ ಲಾಡ್‌ ನೇತೃತ್ವದಲ್ಲಿ ಕುಂದಗೋಳ ಟ್ರಕ್ ಟರ್ಮಿನಲ್ ಸಂಸ್ಥೆಯೊಂದಿಗೆ ಸಭೆ

ಬೆಂಗಳೂರು: ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಕುಂದಗೋಳ ಶಾಸಕ ಎಮ್.ಆರ್. ಪಾಟೀಲ್ ಅವರ ಉಪಸ್ಥಿತಿಯಲ್ಲಿ ಕುಂದಗೋಳ ಟ್ರಕ್ ಟರ್ಮಿನಲ್ ಸಂಸ್ಥೆಯ ಸಮಸ್ಯೆಗಳ ಕುರಿತು ಸಭೆ ಜರುಗಿತು. ಈ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ದೇವರಾಜ ಅರಸ್ ಟ್ರಕ್ ಟರ್ಮಿರ್ನಲ್ ಆಡಳಿತ ವರ್ಗದವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿರೇಮಠ ಶ್ರೀಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಗುರು ಪೂರ್ಣಿಮೆಗಿಂತ ಒಳ್ಳೆಯ ಮುಹೂರ್ತ ಇನ್ನೊಂದಿಲ್ಲ. ಇಂದು ನಮ್ಮಿಂದ ಅಕ್ಷರಾಭ್ಯಾಸದ ದೀಕ್ಷೆ ಪಡೆದ ಮಕ್ಕಳೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜಕ್ಕೆ ಉಪಯುಕ್ತವಾಗುವ ವ್ಯಕ್ತಿಗಳಾಗಲಿ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಗುರುಪೂರ್ಣಿಮೆಯ ನಿಮಿತ್ತ ಗುರುವಾರ ಶ್ರೀಮಠಕ್ಕೆ ಆಗಮಿಸಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ, ನೆರೆದ ತಾಯಂದಿರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ ನೀಡಿದರು.

ಇಂದು ವೇದವ್ಯಾಸರು ಜನಿಸಿದ ದಿನ. ಅತ್ಯಂತ ಜ್ಞಾನವಂತರಾಗಿದ್ದ ವೇದವ್ಯಾಸರು ಜನಿಸಿದ ಈ ಪೂರ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಿ, ಅವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಈ ದಿನವನ್ನು ಜನರು ತಮಗೆ ಅಕ್ಷರಾಭ್ಯಾಸ ನೀಡಿದ ಗುರುಗಳನ್ನು ನೆನಯುವ ದಿನವನ್ನಾಗಿಯೂ ಆಚರಿಸುತ್ತಾರೆ. ತಾಯಂದಿರು ನಾವು ಶ್ರೀಮಠದಲ್ಲಿದ್ದಾಗ ನಿಮ್ಮ ಮಕ್ಕಳನ್ನು ಯಾವಾಗ ಬೇಕಾದರೂ ಕರೆದುಕೊಂಡು ಬಂದು ಅಕ್ಷರಾಭ್ಯಾಸ ಮಾಡಿಸಿಕೊಂಡು ಹೋಗಬಹುದೆಂದರು.

ಈ ಸಂದರ್ಭದಲ್ಲಿ ಡಾ. ಆರ್.ಕೆ. ಗಚ್ಚಿನಮಠ, ಎಸ್.ಕೆ. ಪಾಟೀಲ, ಈಶ್ವರ ಬೆಟಗೇರಿ ಮುಂತಾದವರಿದ್ದರು.

ಹಡಪದ ಅಪ್ಪಣ್ಣನವರ ವಚನಗಳು ಸಮಾಜಕ್ಕೆ ಕನ್ನಡಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಡಪದ ಅಪ್ಪಣ್ಣನವರು 12ನೇ ಶತಮಾನದ ಶಿವಶರಣರಲ್ಲಿ ಅಗ್ರಗಣ್ಯರಾಗಿದ್ದು, ಅಣ್ಣ ಬಸವಣ್ಣನವರ ಬಾಲ್ಯ ಸ್ನೇಹಿತರಾಗಿದ್ದರು. ಬಸವಣ್ಣನವರ ಒಡನಾಡಿಯಾಗಿ, ಮಹಾಮನೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ರಚಿಸಿದ 250 ವಚನಗಳು ಸಮಾಜಕ್ಕೆ ಕನ್ನಡಿಯಂತಿವೆ ಎಂದು ಶಿಕ್ಷಕ ಎ.ಟಿ. ಮಳ್ಳಳ್ಳಿ ತಿಳಿಸಿದರು.

ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಆಚರಿಸಲಾದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಭಯ ಶಾಲೆಗಳ ಮುಖ್ಯೋಪಾಧ್ಯಾಯರಾದ ಎಸ್.ಎನ್. ಹೂಲಗೇರಿ, ಎಂ.ಬಿ. ಸಜ್ಜನರ ಹಾಗೂ ಶಿಕ್ಷಕ ವೃಂದದವರಾದ ಎಂ.ಎಸ್. ಅತ್ತಾರ, ಎಂ.ವಿ. ಬಿಂಗಿ, ಎಲ್.ಎನ್. ನಾಯಕ, ಎಸ್. ಶಿವಮೂರ್ತಿ, ಕೆ.ಸಿ. ಜೋಗಿ, ಎಸ್.ಬಿ. ಬೂದಿಹಾಳ, ಟಿ.ಬಿ ಆಡೂರ, ಆರ್.ಎಂ. ಸಿಳ್ಳಿನ, ಶಿಕ್ಷಕಿಯರಾದ ಎ.ಎಂ. ರಾಠೋಡ, ಆಯ್.ಜ್ಞಾನೇಶ್ವರಿ, ಆರ್.ಎಂ. ಗುಳಬಾಳ, ಎಸ್.ಎಫ್. ಧರ್ಮಾಯತ, ನವ್ಯ ಕೋಡಿಕೊಪ್ಪಮಠ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಶಾಂತಿಯುತ ಹೋರಾಟವೇ ನಮ್ಮ ಧ್ಯೇಯ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಯ ವಿಳಂಬದ ವಿರುದ್ಧ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅಸಹಕಾರ ಚಳುವಳಿಯ ಭಾಗವಾಗಿ, ಗದಗ ತಾಲೂಕು ಪಂಚಾಯತ್‌ನಲ್ಲಿ ಪ್ರತಿಭಟನೆ 5ನೇ ದಿನಕ್ಕೆ ಮುಂದುವರೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯ ನೇವಾಕ ಸಂಘದ ಜಿಲ್ಲಾ ಪ್ರತಿನಿಧಿ ಕಿರಣಕುಮಾರ ಎಸ್.ಎಚ್. ಮಾತನಾಡಿ, ಕಳೆದ ಐದು ದಿನಗಳಿಂದ ರಾಜ್ಯ ನರೇಗಾ ಕುಟುಂಬದ ಸದಸ್ಯರು ಒಗ್ಗಟ್ಟಿನಿಂದ ಅಹಕಾರ ಚಳುವಳಿ ನಡೆಸುತ್ತಿದ್ದೇವೆ. ಈ ಅಸಹಕಾರ ಚಳುವಳಿಯಿಂದ ವೇತನ ಪಾವತಿ ಪ್ರಕ್ರಿಯೆಯ ವೇಗ ಹೆಚ್ಚುತ್ತಿದೆ. ಆದರೂ ಕಡಿಮೆ ಮೊತ್ತದ ಫಂಡ್ ಟ್ರಾನ್ಸ್ಫರ್ ಆರ್ಡರ್ ರಚನೆಯ ಪ್ರಕ್ರಿಯೆ ಯಶಸ್ವಿಯಾಗಿದೆ. ವೇತನ ಪಾವತಿಗೆ ಸಂಬಂಧಿಸಿದ ಸೃಜನೆ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಕ್ರಮ ವಹಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ ಮಾತನಾಡಿ, ಕಳೆದ ಅರು ತಿಂಗಳಿಂದ 130ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ. ಈ ಅಸಹಕಾರ ಚಳುವಳಿಯಿಂದಾಗಿ ಸರ್ಕಾರದ ಗಮನ ಸೆಳೆಯಲಾಗಿದೆ. ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಗ್ರಾ.ಪಂ ಜನಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ರಾಜ್ಯ ಡಿಇಒ ಸಂಘದಂತಹ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಾವು ಒಗ್ಗಟ್ಟಾಗಿ ಮುಂದುವರಿಯುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಮಹೇಶ್ ಚಿತವಾಡಗಿ, ಬಸವರಾಜ ಮಣ್ಣಮನವರ, ಮೋಹನ ಹೊಂಬಳ, ಚಂದ್ರು ಹಳ್ಳಿ, ನವೀನ ಬಸರಿ, ಅಜಯ ಅಬ್ಬಿಗೇರಿ, ಮಂಜುನಾಥ ತಳವಾರ, ಮಂಜುನಾಥ ಕುಲಕರ್ಣಿ, ವಿರೇಶ ಪಟ್ಟಣಶೆಟ್ಟಿ, ಸಚಿನ ಭಂಡಾರಿ, ಪ್ರಶಾಂತ ಯಾವಗಲಮಠ, ತಾಲೂಕಿನ ಬಿ.ಎಫ್.ಟಿಗಳು ಹಾಜರಿದ್ದರು.

ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದೊಂದಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಆಳುವ ಎಲ್ಲ ಸರ್ಕಾರಗಳು ನಿರಂತರ ಪುನಶ್ಚೇತನಗೊಳಿಸುವ ಕಾರ್ಯ ಮಾಡುತ್ತಲೇ ಬಂದಿವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶುಕ್ರವಾರ ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿವೇಕ ಕೊಠಡಿ ಯೋಜನೆಯಡಿ 34.30 ಲಕ್ಷ ರೂಗಳಲ್ಲಿ 2 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳವಾಗಬೇಕು ಮತ್ತು ಶಿಕ್ಷಣದ ಗುಣಮಟ್ಟದ ಎತ್ತರಕ್ಕೇರಬೇಕಾದಲ್ಲಿ ಮೊದಲ ಆದ್ಯತೆಯಾಗಿ ಹೆಚ್ಚಿನ ಅನುದಾನ, ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯವಾಗಿದೆ. ಅದಕ್ಕೆ ತಕ್ಕಂತೆ ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು. ಪಾಲಕರೂ ಸಹ ಇಂಗ್ಲೀಷ್ ಮೀಡಿಯಂ ವ್ಯಾಮೋಹ ಬಿಟ್ಟು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದರು.

ಈ ವೇಳೆ ದೊಡ್ಡೂರ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಈಳಿಗೇರ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಂಜಣ್ಣ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯಕ, ಮಹಾಂತಗೌಡ ಭರಮಗೌಡ್ರ, ತುಕ್ಕಪ್ಪ ಪೂಜಾರ, ಸಕ್ರಪ್ಪ ಕಡೆಮನಿ, ಫಕ್ಕೀರಗೌಡ ಭರಮಗೌಡ್ರ, ಮಹಾಂತೇಶ ಹರಕುಣಿ, ಹನುಮಂತಪ್ಪ ಲಮಾಣಿ, ರಾಮಣ್ಣ ಲಮಾಣಿ, ಕಿರಣ ಲಮಾಣಿ, ಕುಮಾರ ಲಮಾಣಿ, ಮಹಾಂತೇಶ ಮತ್ತೂರು, ಶಿವಪ್ಪ ಅಕ್ಕೂರ, ಸುನೀಲ ಲಮಾಣಿ, ಡಾಕಪ್ಪ ಲಮಾಣಿ, ರವಿ ಭಜಕ್ಕನವರ, ಎಫ್.ಎಚ್. ತಿಮ್ಮಾಪುರ, ಮಹೇಶ ಅಥಣಿ, ಯು.ಜಿ. ಹುಚ್ಚಯ್ಯನಮಠ, ಫಕ್ಕೀರೇಶ ಕಟಗಿ, ಮುಖ್ಯೋಪಾಧ್ಯಾಯ ಬಿ.ಎನ್. ಗಾಯಕವಾಡ, ಶಿಕ್ಷಕರು ಇದ್ದರು.

ಗುರುಗಳು ನಮ್ಮ ಜೀವನದ ಅವಿಭಾಜ್ಯ ಅಂಗ

0

ವಿಜಯಸಾಕ್ಷಿ ಸುದ್ದಿ, ಗದಗ: ಗುರುಪೂರ್ಣಿಮೆಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಮಹತ್ವವಿದೆ. ಗುರು ಎಂದರೆ ಅಂಧಕಾರ, ಅಜ್ಞಾನವನ್ನು ದೂರ ಮಾಡುವವರು ಎಂಬ ನಂಬಿಕೆ ಬಹುತೇಕರದ್ದು. ಗುರುಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ನಂಬಿಕೆಯಿಂದ ನಾವೆಲ್ಲ ಜೀವನ ನಡೆಸುತ್ತಿದ್ದೇವೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪ.ಪೂ ಕಲ್ಲಯ್ಯಜ್ಜನವರು ಹೇಳಿದರು.

ಅವರು ಗುರುವಾರ ಗದಗ ಜಿಲ್ಲಾ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯಿಂದ ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜೀವನದಲ್ಲಿ ಸರಿಯಾದ ಮಾರ್ಗ ತೋರಬಲ್ಲವನೇ ಗುರು. ಈ ಎರಡಕ್ಷರದಲ್ಲಿ ಗುರು-ಶಿಷ್ಯರ ಬಾಂಧವ್ಯವಿದೆ. ಮನುಷ್ಯನ ಸಾವಿರಾರು ತೊಂದರೆಗಳಿಗೆ ಸರಿಯಾದ ಮಾರ್ಗಗಳನ್ನು, ನ್ಯಾಯ-ನೀತಿ, ಧರ್ಮ-ಸಂಸ್ಕೃತಿಯ ಹಾದಿಯನ್ನು ತೋರಿ ಅವರನ್ನು ಸದ್ವಿಚಾರಿಗಳನ್ನಾಗಿ ಮಾಡುವವನೇ ಗುರುವಾಗಿದ್ದಾನೆ ಎಂದರು.

ಗದಗ ಜಿಲ್ಲಾ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಮನುಷ್ಯನ ಭವದ ತೊಂದರೆಗಳಿಗೆ ಸರಿಯಾದ ಬೋಧನೆಯ ಮೂಲಕ ಸೂಕ್ತವಾದ ದಾರಿಯನ್ನು ತೋರಿ, ಉತ್ತಮರನ್ನಾಗಿ ಮಾಡುವ ಕೆಲಸ ಗುರುವಿನಿಂದ ನಡೆಯುತ್ತದೆ ಎಂದರು.

ನಿರ್ಮಲಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಮಾಲೀಪಾಟೀಲ ಹಾಗೂ ಮಾಧುರಿ ಮಾಳೆಕೊಪ್ಪ ಪ್ರಾರ್ಥಿಸಿದರು. ಅಶ್ವಿನಿ ಮಾದಗುಂಡಿ ಸ್ವಾಗತಿಸಿದರು. ಚಂದ್ರಕಲಾ ಸ್ಥಾವರಮಠ ನಿರೂಪಿಸಿದರು. ಪ್ರಿಯಾಂಕಾ ಹಳ್ಳಿ ನಿರೂಪಿಸಿದರು. ವಿದ್ಯಾ ಶಿವನಗುತ್ತಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಧು ಕರಿಬಿಷ್ಠಿ, ರೇಖಾ ರೊಟ್ಟಿ, ಸುಷ್ಮೀತಾ ವೆರ್ಣಕರ, ಸುಗ್ಗಲಾ ಯಳಮಲಿ, ಶೋಭಾ ಹಿರೇಮಠ, ಶ್ರೀದೇವಿ ಮಹೇಂದ್ರಕರ, ಪದ್ಮಿನಿ ಮುಂತಾದವರು ಉಪಸ್ಥಿತರಿದ್ದರು.

ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಬಸ್ ನಿಲ್ದಾಣ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ಅವರು ಪಟ್ಟಣದಲ್ಲಿ ಶುಕ್ರವಾರ ಜರುಗಿದ ಪಂಚ ಗ್ಯಾರಂಟಿ ಯೋಜನೆಗಳ ಜನಸಂಪರ್ಕ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಹಲವಾರು ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಸಮರ್ಪಕ ವ್ಯವಸ್ಥೆಯಾಗಬೇಕು ಎಂದರು. ಇದೇ ವೇಳೆ ಶೌಚಾಲಯ ನಿರ್ವಹಣೆ ಮಾಡುವವರು ಪ್ರಯಾಣಿಕರಿಂದ 2 ರೂಗಳ ಬದಲು 10 ರೂ ಪಡೆಯುತ್ತಿರುವ ಕುರಿತು ಪ್ರಯಾಣಿಕರು ಆರೋಪಿಸಿದರು. ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರಲ್ಲದೆ, ಸಾರ್ವಜನಿಕರಿಂದ ದೂರುಗಳು ಬರದಂತೆ ನಿಲ್ದಾಣದಲ್ಲಿ ಸ್ವಚ್ಛತೆ, ಸೌಲಭ್ಯಗಳನ್ನು ನೀಡುವಂತೆ ತಿಳಿಸಿದರು.

ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ರಾಮಣ್ಣ ಲಮಾಣಿ (ಶಿಗ್ಲಿ ) ಗೀತಾ ಬೀರಣ್ಣವರ, ತಿಪ್ಪಣ್ಣ ಸಂಶಿ, ವಿಜಯ ಹಳ್ಳಿ, ಶಿವರಾಜಗೌಡ ಪಾಟೀಲ, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ದೇವರಾಜ, ಘಟಕ ವ್ಯವಸ್ಥಾಪಕಿ ಸವಿತಾ ಆದಿ ಸೇರಿದಂತೆ ಅನೇಕರು ಇದ್ದರು.

ದಾವಣಗೆರೆ: ಸಾಲದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ: ಪತ್ನಿಯ ಮೂಗು ಕಚ್ಚಿದ ಪತಿ!

0

ಶಿವಮೊಗ್ಗ: ಸಾಲದ ವಿಚಾರಕ್ಕೆ ಗಂಡ- ಹೆಂಡತಿಯ ನಡುವೆ ಜಗಳ ನಡೆದು ಪತಿಯೊರ್ವ ಪತ್ನಿಯ ಮೂಗನ್ನೇ ಹಲ್ಲಿನಿಂದ ಕಚ್ಚಿ ತುಂಡರಿಸಿದ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.

ಪತ್ನಿ ವಿದ್ಯಾ (30) ರ ಮೂಗಿನ ಮುಂಭಾಗ ಸಂಪೂರ್ಣ ತುಂಡಾಗಿದ್ದು, ವಿದ್ಯಾ ಅವರ ಪತಿ ವಿಜಯ್ ಈ ಕೃತ್ಯ ಎಸಗಿದ್ದಾನೆ. ಜುಲೈ 8ರಂದು ಮಧ್ಯಾಹ್ನ, ದಂಪತಿಗೆ ಸಾಲದ ಕಂತು ಕಟ್ಟುವ ವಿಚಾರವಾಗಿ ಗಲಾಟೆ ನಡೆದಿದ್ದು, ವಿಚಾರ ವಿಕೋಪಕ್ಕೆ ತಿರುಗಿ ಪತಿ ವಿಜಯ್ ಪತ್ನಿಗೆ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ.

ಗಲಾಟೆ ವೇಳೆ ಕೆಳಗೆ ಬಿದ್ದ ಪತ್ನಿ ವಿದ್ಯಾ ಅವರ ಮೂಗನ್ನೇ ವಿಜಯ್ ಹಲ್ಲಿನಿಂದ ಕಚ್ಚಿ ಕಡಿದು ಹಾಕಿದ್ದಾನೆ. ಗಾಯಗೊಂಡ ವಿದ್ಯಾಳನ್ನು ಸ್ಥಳೀಯರು ಕೂಡಲೇ ಚೆನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ಪ್ರಾಥಮಿಕವಾಗಿ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಮೆಡಿಕೋ ಲೀಗಲ್ ಕೇಸ್ ದಾಖಲಾಗಿದ್ದು, ಬಳಿಕ ಪತ್ನಿಯ ದೂರಿನ ಆಧಾರದಲ್ಲಿ ಚೆನ್ನಗಿರಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಎಫ್ಐಆರ್ ದಾಖಲಿಸಿರುವ ಚೆನ್ನಗಿರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶೂಟಿಂಗ್​ನಲ್ಲಿ ಭೀಕರ ಅನಾಹುತ: ಆಯ ತಪ್ಪಿ ರೋಪ್​ನಿಂದ ಕೆಳಗೆ ಬಿದ್ದ ನಟಿ ಶ್ರಾವ್ಯ ರಾವ್

ಸಿಂಪಲ್ ಸುನಿ ನಿರ್ದೇಶನದ ಸಿನಿಮಾವೊಂದರ ಶೂಟಿಂಗ್‌ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು.  ಹಾಡಿನ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಅವಘಡವೊಂದು ಸಂಭವಿಸಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಾಯಕಿ ಶ್ರಾವ್ಯ ರಾವ್‌ ಆಯತಪ್ಪಿ ಕೆಳಗೆ ಬಿದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ಶೂಟಿಂಗ್ ವೇಳೆ ಈ ದುರಂತ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹೊಸ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಸಾಂಗ್ ಶೂಟಿಂಗ್ ವೇಳೆ ಹಗ್ಗದ ಮೇಲೆ ನೇತಾಡುತ್ತಿದ್ದ ನಟಿ ಶ್ರಾವ್ಯ ರಾವ್ ಮೇಲಿಂದ ಆಯಾ ತಪ್ಪಿ ಬಿದ್ದಿದ್ದಾರೆ. ಕೆಳಗೆ ಬೆಡ್ ಹಾಕಿದ್ದರಿಂದ ಬಚಾವ್ ಆಗಿದ್ದಾರೆ.

ಅಂದ ಹಾಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಪುತ್ರಿಯಾಗಿರುವ ಶ್ರಾವ್‌ ರಾವ್‌ ತಮ್ಮ ಹೆಸರನ್ನು ಸಾತ್ವಿಕಾ ಎಂದು ಬದಲಾಯಿಸಿಕೊಂಡಿದ್ದಾರೆ. ಸದ್ಯ ಸಾತ್ವಿಕಾ ಸಿಂಪಲ್‌ ಸುನಿ ನಿರ್ದೇಶನದ ಹೊಸ ಸಿನಿಮಾದ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದಾರೆ.

ಕಿರುತೆರೆ ನಟಿ ಶ್ರುತಿಗೆ ಚಾಕು ಇರಿದು ಕೊಲೆಗೆ ಯತ್ನ: ಪತಿ ಬಂಧನ

ಕನ್ನಡ ಕಿರುತೆರೆಯ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದ ನಟಿ ಮೇಲೆ ಪತಿಯೇ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್​ನಲ್ಲಿ ನಡೆದಿದೆ.

ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ಶ್ರುತಿ ಮೇಲೆ ಪತಿಯೇ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಶ್ರುತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿ ಅಮರೇಶ್ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಜುಲೈ​ 4ರಂದು ನಟಿ ಶ್ರುತಿ ಮೇಲೆ ಹಲ್ಲೆ ನಡೆದಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ.  20 ವರ್ಷದ ಹಿಂದೆ ಅಮರೇಶ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದ ನಟಿ ಶ್ರುತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹನುಮಂತ ನಗರದಲ್ಲಿ ಲೀಸ್​ಗೆ ಮನೆ ಪಡೆದು ವಾಸವಿದ್ದರು. ಆದರೆ ಇತ್ತೀಚೆಗೆ ಶ್ರುತಿ ಹಾಗೂ ಅಮರೇಶ್‌ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಶ್ರುತಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಅಮರೇಶ್‌ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ. ಇದರಿಂದ ಬೇಸತ್ತಿದ್ದ ಶ್ರುತಿ ಕಳೆದ ಏಪ್ರಿಲ್​ನಲ್ಲಿ ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಇದರ ಜೊತೆಗೆ ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತಂತೆ.

ಈ ಬಗ್ಗೆ ನಟಿ ಶ್ರುತಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರಂತೆ. ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂಧಾನ ಮಾಡಿ ಒಂದಾಗಿದ್ದಾರೆ. ರಾಜಿ ಸಂದಾನದ ಬಳಿಕ ಶ್ರುತಿ ಗಂಡನೊಂದಿಗೆ ಮನೆಗೆ ವಾಪಸ್‌ ಆಗಿದ್ದಾಳೆ. ಆದರೆ ಮನೆಗೆ ಬಂದ ಮರುದಿನವೇ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ.ಈ ವೇಳೆ ಶ್ರುತಿಗೆ ಅಮರೇಶ್ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಪೆಪ್ಪರ್ ಸ್ಪ್ರೇ ಹೊಡೆದು ಪತಿ ಹಲ್ಲೆ ಮಾಡಿದ್ದಾನೆ.

error: Content is protected !!