Home Blog Page 4

“ಮುಡಾ ಹಗರಣದಲ್ಲಿ ಹೊಸ ಟ್ವಿಸ್ಟ್: ಸ್ನೇಹಿಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

0

ಬೆಂಗಳೂರು : ನಗರದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ಪವಿತ್ರ ಎಂಬ ಮಹಿಳೆಯು ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿದ್ದು, ಈ ಮೂಲಕ ಮುಡಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ವಿಸ್ಟ್ ಸಿಕ್ಕಿದೆ.

ಪವಿತ್ರ ಕೊಟ್ಟ ದೂರಿನಲ್ಲಿ ಏನಿದೆ?

“ನನ್ನ ಮೇಲೆ ಬೆದರಿಕೆ ಹಾಕಲಾಗುತ್ತಿದ್ದು, ಪ್ರೊ. ಮೈಲಾರಪ್ಪ ವಿರುದ್ಧ ಕೊಟ್ಟಿರುವ ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ, ಪೊಲೀಸರವರು ಸ್ನೇಹಿಮಯಿ ಕೃಷ್ಣ ಅವರನ್ನು ಎ1 ಆರೋಪಿಯನ್ನಾಗಿ ದಾಖಲಿಸಿಕೊಂಡಿದ್ದಾರೆ.

ಸದ್ಯ ತನಿಖೆ ನಡೆಯುತ್ತಿದೆ. ಮುಡಾ ಹಗರಣದ ದೂರು ಸಂಬಂಧಿತ ಪ್ರಕರಣಗಳಲ್ಲಿ ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವಿನ ವಾದ-ವಿವಾದಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಈ ಪ್ರಕರಣ ಹೊಸ ತಿರುವು ತಂದುಕೊಟ್ಟಿದೆ.

ಈ ಮೂಲಕ ಮುಡಾ ಹಗರಣ ಸಂಬಂಧಿತ ಪ್ರಕರಣಗಳಲ್ಲಿ ಮುಂದಿನ ಹಂತದ ತನಿಖೆಗೂ ಮರುಬಲ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ!

0

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಮುಕುಲ್ ರಾಯ್ (71) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಾಜಿ ರೈಲ್ವೆ ಸಚಿವರಾಗಿದ್ದ ರಾಯ್, ಒಂದು ಸಮಯದಲ್ಲಿ ಮುಖ್ಯಮಂತ್ರಿಯರಾದ ಮಮತಾ ಬ್ಯಾನರ್ಜಿಯ ಆಪ್ತ ಸಹಾಯಕರಾಗಿದ್ದರು. ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 1:30ಕ್ಕೆ ಕೊನೆಯುಸಿರೆಳೆದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುಕುಲ್ ರಾಯ್ ಕೆಲವು ದಿನಗಳ ಹಿಂದೆ ಕೋಮಾದಲ್ಲಿದ್ದರು ಮತ್ತು ನೆನಪಿನ ಶಕ್ತಿ ಕಳೆದುಕೊಂಡಿದ್ದರು.

ಮಮತಾ ಬ್ಯಾನರ್ಜಿಯವರೊಂದಿಗೆ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಿಂದ ಆರಂಭಿಸಿಕೊಂಡ ರಾಜಕೀಯ ಜೀವನದಲ್ಲಿ, ರಾಯ್ ಪಕ್ಷದ ಎರಡನೇ ನಾಯಕನಾಗಿ ಪರಿಗಣಿತರಾದರು. 2017 ರಲ್ಲಿ ಬಿಜೆಪಿ ಸೇರ್ಪಡೆ ಹೊಂದಿ, 2019 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಪಕ್ಷದೊಳಗಿನ ಪ್ರಭಾವ ಕಡಿಮೆಯಾಗುವುದರ ನಂತರ ಅವರು ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿ ಮಮತಾ ಬ್ಯಾನರ್ಜಿಯವರ ಬಳಿಗೆ ಹಿಂದಿರುಗಿದರು.

ರಾಜಕೀಯ ಚಾಣಕ್ಯತೆಗಾಗಿ “ಬಂಗಾಳದ ರಾಜಕೀಯ ಚಾಣಕ್ಯ” ಎಂದು ಗುರುತಿಸಲ್ಪಟ್ಟ ಮುಕುಲ್ ರಾಯ್, 1998 ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಲ್ಲಿನಿಂದ ರಾಷ್ಟ್ರ ಮಟ್ಟದ ಪ್ರಮುಖ ನಾಯಕನಾಗುವವರೆಗೆ ರಾಜಕೀಯ ಏರಿಳಿತವನ್ನು ಕಂಡುಬಂದಿದ್ದಾರೆ.

ಬೆಂಗಳೂರು: ಬಿಎಂಟಿಸಿ ಬಸ್ಸುಗಳು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಣೆ!

0

ಬೆಂಗಳೂರು: ನಗರದಲ್ಲಿ ಸಂಚರಿಸುತ್ತಿರುವ ಬಿಎಂಟಿಸಿ ಬಸ್ಸುಗಳು ಇನ್ಮುಂದೆ ಗ್ರಾಮಾಂತರ ಪ್ರದೇಶಗಳಿಗೂ ಸೇವೆ ವಿಸ್ತರಿಸುತ್ತವೆ.

ಈಗಾಗಲೇ ನಗರದಲ್ಲಿ 40 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ರಾಮನಗರ, ಕನಕಪುರ, ನೆಲಮಂಗಲ-ಹೊಸಕೋಟೆ, ದೇವನಹಳ್ಳಿ-ದೊಡ್ಡಬಳ್ಳಾಪುರ ಭಾಗಗಳಿಗೆ ಸಂಪರ್ಕ ಒದಗಿಸಲಿದೆ.

ಬಿಎಂಟಿಸಿ ಹೊಂದಿರುವ ಒಟ್ಟು 6,750 ಬಸ್ಸುಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳೂ ಸೇರಿವೆ. ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ ಬಸ್ಸುಗಳು ಒಟ್ಟು 13 ಲಕ್ಷ ಕಿಲೋಮೀಟರ್ ಸಂಚಾರ ಮಾಡುತ್ತವೆ. ಹೊಸ ವಿಸ್ತರಣೆ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಆಸ್ಪತ್ರೆಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕವಾಗಿ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‌ದಿಂದ ರಾಮನಗರ, ಬನಶಂಕರಿ ಬಸ್ ಸ್ಟ್ಯಾಂಡ್‌ದಿಂದ ಕನಕಪುರ, ಮೆಜಸ್ಟಿಕ್ ಕೆಂಪೇಗೌಡ ಬಸ್ ಸ್ಟ್ಯಾಂಡ್‌ದಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಸಂಚಾರ ಮಾಡಲಿವೆ.

ಹಾಸನ: ಮಕ್ಕಳ ನಿರ್ಲಕ್ಷ್ಯದಿಂದ ವೃದ್ಧ ದಂಪತಿ ಆತ್ಮಹತ್ಯೆ

0

ಹಾಸನ: ನಗರದ ಕರಿಗೌಡ ಕಾಲೊನಿಯಲ್ಲಿ ವೃದ್ಧ ದಂಪತಿ ಡೇನಿಯಲ್ ಮತ್ತು ಪತ್ನಿ ಮೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಹಾರೇಹೊಸೂರು ಗ್ರಾಮದ ಡೇನಿಯಲ್, ಐವತ್ತು ವರ್ಷಗಳ ಹಿಂದೆ ಮೇರಿಯನ್ನು ವಿವಾಹ ಮಾಡಿಕೊಂಡಿದ್ದು, ನೆಲ್ಸನ್ ಮತ್ತು ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಡೇನಿಯಲ್ ಕಷ್ಟಪಟ್ಟು ಕಾಫಿ ತೋಟ, ಮನೆ ಮತ್ತು ಆಸ್ತಿ ಮಾಡಿ ಮಕ್ಕಳಿಗೆ ಒಳ್ಳೆಯ ಜೀವನ ಒದಗಿಸಿದ್ದರೂ, ಇತ್ತೀಚಿನ ಕೆಲವು ವರ್ಷಗಳಿಂದ ಮಕ್ಕಳು ವಯೋವೃದ್ಧ ತಂದೆ-ತಾಯಿಯನ್ನು ನಿರ್ಲಕ್ಷಿಸಿದ್ದರು.

ಮಕ್ಕಳ ನಿರ್ಲಕ್ಷ್ಯದಿಂದ ಬೇಸತ್ತ ದಂಪತಿ ಕೆಲವು ದಿನಗಳಿಂದ ವೃದ್ಧಾಶ್ರಮದಲ್ಲಿ ಉಳಿಯಲು ಪ್ರಯತ್ನಿಸಿದ್ದರು. ಆದರೆ ಮನಸ್ಸಿನ ತೀವ್ರ ಒತ್ತಡದಿಂದ ಅವರು, ಬಸ್ ಮೂಲಕ ಬಸ್ ಸ್ಟ್ಯಾಂಡ್‌ ಬಳಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡರು. ಮೃತ ದಂಪತಿಯನ್ನು ಗುರುತಿಸಿ ಮಕ್ಕಳಿಗೆ ಮಾಹಿತಿ ನೀಡಲಾಗಿತ್ತು, ಆದರೆ ಅವರು ಮೃತದೇಹಗಳನ್ನು ಕೊಂಡೊಯ್ಯಲು ಹಿಂದೇಟು ಹಾಕಿದ್ದರು. ಕಡೆಗೆ ಸಂಬಂಧಿಕರು ಹಾಗೂ ರೈಲ್ವೇ ಪೊಲೀಸರು ತರಾಟೆಗೆ ತೆಗೆದಕೊಂಡಿದ್ದರಿಂದ ಶವಾಗಾರದ ಬಳಿ ಬಂದು ಒಂದು ಹನಿ ಕಣ್ಣೀರು ಹಾಕದೆ ತಂದೆ ಮೇಲೆಯೇ ಆರೋಪಿಸಿದ್ದಾರೆ.

ತಂದೆ ಮದ್ಯ ಸೇವಿಸುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಆ ಕಾರಣದಿಂದ ಅವರೇ ಮನೆ ಬಿಟ್ಟು ಹೋಗಿದ್ದರು ಎಂದು ಆರೋಪ ಮಾಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಲಿಂಡರ್ ಸ್ಫೋಟ ದುರಂತದ ಬಳಿಕ ಎಚ್ಚರಿಕೆ – ಮೈಸೂರಿನಲ್ಲಿ ಹೀಲಿಯಂ ಬಲೂನ್ ಮಾರಾಟಕ್ಕೆ ಬ್ರೇಕ್

0

ಮೈಸೂರು: ಜನಸುರಕ್ಷತೆಯನ್ನು ಪ್ರಾಥಮಿಕವಾಗಿ ಪರಿಗಣಿಸಿ ಮೈಸೂರು ನಗರ ಪೊಲೀಸರು ಹೀಲಿಯಂ ಅನಿಲ ಬಳಸಿ ಬಲೂನ್ ತುಂಬುವುದು, ಮಾರಾಟ ಮತ್ತು ಸಂಗ್ರಹಣೆಗೆ ಸಂಪೂರ್ಣ ನಿಷೇಧ ಹೇರಿದ್ದಾರೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು BNSS-2023 ಸೆಕ್ಷನ್ 152 ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.

ಜನಸಂದಣಿ ಪ್ರದೇಶಗಳಲ್ಲಿ ಅನಧಿಕೃತ ಹಾಗೂ ಅಪ್ರಮಾಣಿತ ಅನಿಲ ಸಿಲಿಂಡರ್ ಬಳಕೆ ಭಾರೀ ಅಪಾಯಕ್ಕೆ ಕಾರಣವಾಗುತ್ತಿದೆ ಎಂಬ ಅಂಶ ತನಿಖೆಗಳಲ್ಲಿ ಬಹಿರಂಗವಾಗಿದೆ. ವಿಶೇಷವಾಗಿ ಹಬ್ಬ–ಜಾತ್ರೆ, ಪ್ರವಾಸಿ ತಾಣ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಯಂತ್ರಣವಿಲ್ಲದ ಬಳಕೆ ಅಪಘಾತದ ಸಾಧ್ಯತೆಯನ್ನು ಹೆಚ್ಚಿಸಿದೆ.

ಡಿಸೆಂಬರ್ 25 2025ರಂದು ಮೈಸೂರು ಅರಮನೆ ಸಮೀಪ ನಡೆದ ಸಿಲಿಂಡರ್ ಸ್ಫೋಟದಲ್ಲಿ 3 ಮಂದಿ ಸಾವನ್ನಪ್ಪಿದ ಘಟನೆ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಬಲೂನ್ ಮಾರಾಟಗಾರ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮಂಜುಳಾ ಹಾಗೂ ಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಆದೇಶದ ಪ್ರಕಾರ:

  • ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಬಲೂನ್ ಸಂಪೂರ್ಣ ನಿಷೇಧ

  • ಸುರಕ್ಷತಾ ಪ್ರಮಾಣಪತ್ರವಿಲ್ಲದೆ ಸಿಲಿಂಡರ್ ಬಳಕೆ ಮಾಡಿದರೆ ಕಾನೂನು ಕ್ರಮ

  • ವೈದ್ಯಕೀಯ ಮತ್ತು ವೈಜ್ಞಾನಿಕ ಬಳಕೆಗಳಿಗೆ ಮಾತ್ರ ವಿನಾಯಿತಿ

  • ಅನುಮತಿಯಿಲ್ಲದೆ ಸಭೆ–ಸಮಾರಂಭಗಳಲ್ಲಿ ಬಳಕೆ ಅಕ್ರಮ

ಉಲ್ಲಂಘನೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಾರ್ವಜನಿಕರು ಮತ್ತು ಆಯೋಜಕರು ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಅನುಮತಿಯಿಲ್ಲದೆ ಹೀಲಿಯಂ ಬಳಕೆ ಮಾಡಿಸಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಅಸಲಿ ಬದಲು ನಕಲಿ ಚಿನ್ನ ಇಟ್ಟು ಎಸ್ಕೇಪ್‌ ಆದ ಖದೀಮ: ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಬಯಲು

0

ನೆಲಮಂಗಲ: ನಾಗಸಂದ್ರದ ಪೂರನ್ ಜ್ಯುವೆಲರ್ಸ್‌ನಲ್ಲಿ ನಡೆದ ಗೋಲ್ಡ್ ಸ್ವಾಪ್ ಕಳ್ಳತನ ಪ್ರಕರಣ ಚಿನ್ನ ವ್ಯಾಪಾರಿಗಳಿಗೆ ಎಚ್ಚರಿಕೆಯ ಘಂಟೆ ಆಗಿದೆ. ಗ್ರಾಹಕನಂತೆ ಬಂದಿದ್ದ ಕಳ್ಳ, ಉಂಗುರ ತೂಕ ತೋರಿಸುವ ನೆಪದಲ್ಲಿ ಸಿಬ್ಬಂದಿಯ ಗಮನ ಹರಿಸಿ, ಸುಮಾರು 3 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣವನ್ನು ನಕಲಿ ಉಂಗುರದಿಂದ ಬದಲಿಸಿ ಪರಾರಿಯಾಗಿದ್ದಾನೆ.

ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕಳ್ಳತನ ಯತ್ನ ವಿಫಲವಾಗಿದೆ. ಕಾರಿನಲ್ಲಿ ಬಂದಿದ್ದ ಐವರು ಆರೋಪಿಗಳು ಮನೆಯ ಲಾಕ್ ಮುರಿಯಲು ಡ್ರ್ಯಾಗರ್ ಸೇರಿದಂತೆ ಉಪಕರಣಗಳನ್ನು ಬಳಸಲು ಮುಂದಾಗಿದ್ದರು. ಮನೆ ಮಾಲೀಕ ಸಂತೋಷ್ ಸಿಸಿಟಿವಿ ಅಲರ್ಟ್ ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಮೂವರು ಪರಾರಿಯಾಗಿದ್ದಾರೆ. ಒಬ್ಬನನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದಲ್ಲಿರುವ ಷಷ್ಠಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲೂ ಖದೀಮರು ಬೀಗ ಮುರಿದು ಗೋಲಕ ಒಡೆದು ಹಣ ಕಳವು ಮಾಡಿದ್ದಾರೆ. ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದೇ ದಿನ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ; ಬಾಗಲಕೋಟೆ ಬೆನ್ನಲ್ಲೇ ಕಲಬುರ್ಗಿಯಲ್ಲೂ ಗಲಾಟೆ, ಗದ್ದಲ!

0

ಕಲಬುರ್ಗಿ:- ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಗಲಾಟೆ ಮಾಸುವ ಮುನ್ನವೇ, ನಿನ್ನೆ ಕಲಬುರಗಿ ಜಿಲ್ಲೆಯಲ್ಲೂ ಅದೇ ರೀತಿಯ ಉದ್ವಿಗ್ನ ಘಟನೆ ನಡೆದಿದೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ತೀವ್ರ ಗಲಾಟೆ ನಡೆದಿದ್ದು, ಗ್ರಾಮವನ್ನೇ ಉದ್ವಿಗ್ನತೆಯ ವಾತಾವರಣ ಆವರಿಸಿದೆ.

ರಾವೂರ್ ಗ್ರಾಮದ ಗಣೇಶ ಕಟ್ಟೆ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಡಿಜೆ ಸೌಂಡ್‌ಗೆ ಹಿಂದೂ ಕಾರ್ಯಕರ್ತರು ನೃತ್ಯ ಮಾಡುತ್ತಿದ್ದರು. ಈ ವೇಳೆ ಸೌಂಡ್ ಕಡಿಮೆ ಮಾಡುವಂತೆ ಹೇಳಿದ ಮಾತಿನಿಂದ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಕಲ್ಲು ಹಾಗೂ ಕಟ್ಟಿಗೆಗಳಿಂದ ಹೊಡೆದಾಟಕ್ಕೆ ತಿರುಗಿದೆ. ಈ ಗಲಾಟೆಯಲ್ಲಿ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಘಟನೆ ವೇಳೆ ಕಲ್ಲು ತೂರಾಟ ನಡೆದಿರುವುದು ಹಾಗೂ ಮನೆಯ ಮಾಳಿಗೆಯ ಮೇಲೆ ಬಾಲಕನೊಬ್ಬ ಕಲ್ಲು ಹಿಡಿದು ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಎರಡೂ ಸಮುದಾಯಗಳಿಂದ ದೂರು–ಪ್ರತಿದೂರುಗಳು ದಾಖಲಾಗದ ಕಾರಣ, ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್‌ಎಸ್ 126 ಕಾಯ್ದೆಯಡಿ ಎರಡು ಸಮುದಾಯಗಳಿಗೆ ಸೇರಿದ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಶಿವಾಜಿ ಜಯಂತ್ಯೋತ್ಸವ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ. ದೂರುಗಳು ದಾಖಲಾಗದ ಹಿನ್ನಲೆಯಲ್ಲಿ ವಾಡಿ ಪೊಲೀಸ್ ಠಾಣೆಯಿಂದ ಸುಮೋಟೋವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಉಗ್ರರು ಅಡಗಿದ್ದ ಮನೆಯನ್ನೇ ಸ್ಫೋಟಿಸಿದ ಸೇನೆ: ಮೋಸ್ಟ್‌ ವಾಂಟೆಡ್‌ ಸೈಫುಲ್ಲ ಸೇರಿ ಇಬ್ಬರ ಹತ್ಯೆ

0

ಶ್ರೀನಗರ: ಕಿಶ್ತ್ವಾರ್ ಜಿಲ್ಲೆಯ ಚಟ್ರೂ ಬೆಲ್ಟ್‌ನಲ್ಲಿ ನಡೆದ ಭಾರೀ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 2 ಭಯೋತ್ಪಾದಕರನ್ನು ಹೊಡೆದುರುಳಿಸಿದ್ದು, ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲ ಕೂಡ ಹತರಾಗಿದ್ದಾನೆ.

ಗುಪ್ತಚರ ಮಾಹಿತಿ ಆಧರಿಸಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಸಂಯುಕ್ತ ಕಾರ್ಯಾಚರಣೆ ಕೈಗೊಂಡಿದ್ದರು. ಬೆಟ್ಟದ ತಪ್ಪಲಿನಲ್ಲಿದ್ದ ಮಣ್ಣಿನ ಮನೆಯಲ್ಲಿ ಉಗ್ರರು ಅಡಗಿಕೊಂಡಿದ್ದರು. ಭದ್ರತಾ ಪಡೆಗಳು ಸಮೀಪಿಸುತ್ತಿದ್ದಂತೆ ಉಗ್ರರು ಮೊದಲು ಗುಂಡು ಹಾರಿಸಿದ್ದು, ಬಳಿಕ ತೀವ್ರ ಗುಂಡಿನ ಚಕಮಕಿ ನಡೆದಿದೆ.

ಪ್ರತಿದಾಳಿಯಲ್ಲಿ ಭದ್ರತಾ ಪಡೆಗಳು ಮನೆಯನ್ನು ಸ್ಫೋಟಗೊಳಿಸಿ ಉಗ್ರರನ್ನು ನಿಷ್ಕ್ರಿಯಗೊಳಿಸಿವೆ. ಘಟನಾ ಸ್ಥಳದಿಂದ 2 ಎಕೆ-47 ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ಮಾಹಿತಿ ನೀಡಿದೆ.

“ಆಪರೇಷನ್ ಟ್ರಾಶಿ-I” ಹೆಸರಿನ ಈ ಕಾರ್ಯಾಚರಣೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಸಂಪೂರ್ಣ ನಿರ್ಮೂಲಗೊಳಿಸುವ ಉದ್ದೇಶದಿಂದ ಮುಂದುವರಿದಿದೆ.

ಜನವರಿಯಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮರಾಗಿದ್ದ ಹಿನ್ನೆಲೆ, ಇತ್ತೀಚಿನ ಕಾರ್ಯಾಚರಣೆ ತಂತ್ರಾತ್ಮಕವಾಗಿ ಮಹತ್ವ ಪಡೆದಿದೆ. ಕಿಶ್ತ್ವಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಹಾಜರಾತಿ ಇನ್ನಷ್ಟು ಬಲಪಡಿಸಲಾಗಿದೆ.

ಬಿಜೆಪಿ ನಾಯಕರು ಈಗ ಏನು ಮಾತಾಡ್ತಾರೆ?” – ಚಂದ್ರು ಲಮಾಣಿ ಲಂಚ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಟಾಂಗ್

0

ಬೆಂಗಳೂರು: ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರು, ಇದೀಗ ತಮ್ಮದೇ ಶಾಸಕ ಚಂದ್ರು ಲಮಾಣಿ ವಿರುದ್ಧದ ಲಂಚ ಪ್ರಕರಣದಲ್ಲಿ ಏನು ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನವರನ್ನೇಕೆ ಕೇಳ್ತೀರಾ? ಹೋಗಿ ಬಿಜೆಪಿಯವರನ್ನೇ ಕೇಳಿ” ಎಂದು ಪ್ರಶ್ನಿಸಿದರು. ನಿನ್ನೆ ಬಿಜೆಪಿ ನಾಯಕರು “ಮಾಹಿತಿ ಇಲ್ಲ, ತರಿಸಿಕೊಂಡು ನೋಡ್ತೀನಿ” ಎಂದು ಹೇಳಿದ್ದನ್ನು ಉಲ್ಲೇಖಿಸಿದ ಅವರು, “ಇವಾಗ 24 ಗಂಟೆ ಆಯ್ತಲ್ಲ, ಮಾತಾಡಲಿ” ಎಂದು ಸವಾಲು ಹಾಕಿದರು.

ಎಐ ಶೃಂಗಸಭೆ ಸಂದರ್ಭದಲ್ಲಿ ಕಾರ್ಯಕರ್ತರ ಪ್ರತಿಭಟನೆ ಕುರಿತು ಬಿಜೆಪಿ ನಾಯಕರು ತಕ್ಷಣ ಸುದ್ದಿಗೋಷ್ಠಿ ನಡೆಸಿದ್ದರು. “ದೆಹಲಿಯಿಂದ ಮಾಹಿತಿ ಬಂತು ಅಂತ ಹೇಳ್ತಾರೆ. ಇವಾಗ ಶಿರಹಟ್ಟಿಯಿಂದ ಮಾಹಿತಿ ಬರಲ್ವಾ?” ಎಂದು ವ್ಯಂಗ್ಯವಾಡಿದರು. “ರಾಹುಲ್ ಗಾಂಧಿ ಟೀಕಿಸಲು ದೆಹಲಿಯಿಂದ ಮಾಹಿತಿ ಬರುತ್ತದೆ, ಆದರೆ ತಮ್ಮದೇ ಶಾಸಕರ ಬಗ್ಗೆ ಯಾಕೆ ಇನ್ನೂ ಮಾಹಿತಿ ಬಂದಿಲ್ಲ?” ಎಂದು ಪ್ರಶ್ನಿಸಿದರು.

ವಿಜಯೇಂದ್ರ, ಅಶೋಕ್, ಛಲವಾದಿ ಅವರೇ ಸ್ಪಷ್ಟನೆ ನೀಡಲಿ ಎಂದು ಅವರು ಆಗ್ರಹಿಸಿದರು. “ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿ ಮಾಡಿದ್ರಲ್ಲ, ಈಗ ಯಾರಪ್ಪ ರಾಜೀನಾಮೆ ಕೊಡ್ತೀರಾ?” ಎಂದು ತೀವ್ರವಾಗಿ ಪ್ರಶ್ನಿಸಿದರು.

ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಹೇಳುವವರಿಗೆ “ಸ್ವಲ್ಪ ಕಾಮನ್‌ಸೆನ್ಸ್ ಇರಲಿ, ಇದು ಲೋಕಾಯುಕ್ತ ಟ್ರ್ಯಾಪ್” ಎಂದು ಖರ್ಗೆ ತಿರುಗೇಟು ನೀಡಿದರು. ಬಿಜೆಪಿ ನಾಯಕರು ಈ ಕುರಿತು ಸ್ಪಷ್ಟವಾಗಿ ಮಾತನಾಡಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.

ಮದುವೆ ಮುನ್ನಾ ದಿನ ಜೋಧ್‌ಪುರದಲ್ಲಿ ಇಬ್ಬರ ಸಹೋದರಿಯರ ಸಂಶಯಾಸ್ಪದ ಸಾವು

0

ಜೈಪುರ್: ಜೋಧ್‌ಪುರದ ಮನೈ ಗ್ರಾಮದಲ್ಲಿ ಮದುವೆಯ ಸಂಭ್ರಮವೇ ದ್ವಂದ್ವ ದುರಂತಕ್ಕೆ ತಿರುಗಿದೆ. ಶನಿವಾರ ಮದುವೆಯಾಗಬೇಕಿದ್ದ ಶೋಭಾ (25) ಮತ್ತು ವಿಮ್ಲಾ (23) ಶುಕ್ರವಾರ ರಾತ್ರಿ ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕುಟುಂಬದವರ ಪ್ರಕಾರ, ರಾತ್ರಿ ತಡವರೆಗೆ ಮದುವೆ ಸಿದ್ಧತೆಗಳು ನಡೆಯುತ್ತಿದವು. ಇದೇ ವೇಳೆ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ತಕ್ಷಣ ಕ್ರಮಕೈಗೊಂಡು ಅಂತ್ಯಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಶವಾಗಾರಕ್ಕೆ ರವಾನಿಸಿ, ವರದಿ ಬರುವವರೆಗೆ ಸಾವಿನ ನಿಖರ ಕಾರಣ ಕುರಿತು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ.

ವಿಷ ಸೇವನೆಯ ಶಂಕೆ ಇದ್ದರೂ, ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದ ಒಳಗಿನ ಒತ್ತಡವೇ? ವೈಯಕ್ತಿಕ ಕಾರಣವೇ? ಅಥವಾ ಇತರೆ ಅಂಶಗಳೇ? ಎಂಬ ಪ್ರಶ್ನೆಗಳು ತನಿಖೆಯಲ್ಲಿ ಪ್ರಮುಖವಾಗಿವೆ.

ಮದುವೆ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಮನೆ ಇದೀಗ ಶೋಕದಲ್ಲಿ ಮುಳುಗಿದ್ದು, ಪ್ರಕರಣದ ಪ್ರತಿಯೊಂದು ಬೆಳವಣಿಗೆಯ ಮೇಲೂ ಸ್ಥಳೀಯರು ಕಣ್ಣಿಟ್ಟಿದ್ದಾರೆ.

error: Content is protected !!