Home Blog Page 5

ಬಿಜೆಪಿ ನಾಯಕರು ಈಗ ಏನು ಮಾತಾಡ್ತಾರೆ?” – ಚಂದ್ರು ಲಮಾಣಿ ಲಂಚ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಟಾಂಗ್

0

ಬೆಂಗಳೂರು: ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರು, ಇದೀಗ ತಮ್ಮದೇ ಶಾಸಕ ಚಂದ್ರು ಲಮಾಣಿ ವಿರುದ್ಧದ ಲಂಚ ಪ್ರಕರಣದಲ್ಲಿ ಏನು ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನವರನ್ನೇಕೆ ಕೇಳ್ತೀರಾ? ಹೋಗಿ ಬಿಜೆಪಿಯವರನ್ನೇ ಕೇಳಿ” ಎಂದು ಪ್ರಶ್ನಿಸಿದರು. ನಿನ್ನೆ ಬಿಜೆಪಿ ನಾಯಕರು “ಮಾಹಿತಿ ಇಲ್ಲ, ತರಿಸಿಕೊಂಡು ನೋಡ್ತೀನಿ” ಎಂದು ಹೇಳಿದ್ದನ್ನು ಉಲ್ಲೇಖಿಸಿದ ಅವರು, “ಇವಾಗ 24 ಗಂಟೆ ಆಯ್ತಲ್ಲ, ಮಾತಾಡಲಿ” ಎಂದು ಸವಾಲು ಹಾಕಿದರು.

ಎಐ ಶೃಂಗಸಭೆ ಸಂದರ್ಭದಲ್ಲಿ ಕಾರ್ಯಕರ್ತರ ಪ್ರತಿಭಟನೆ ಕುರಿತು ಬಿಜೆಪಿ ನಾಯಕರು ತಕ್ಷಣ ಸುದ್ದಿಗೋಷ್ಠಿ ನಡೆಸಿದ್ದರು. “ದೆಹಲಿಯಿಂದ ಮಾಹಿತಿ ಬಂತು ಅಂತ ಹೇಳ್ತಾರೆ. ಇವಾಗ ಶಿರಹಟ್ಟಿಯಿಂದ ಮಾಹಿತಿ ಬರಲ್ವಾ?” ಎಂದು ವ್ಯಂಗ್ಯವಾಡಿದರು. “ರಾಹುಲ್ ಗಾಂಧಿ ಟೀಕಿಸಲು ದೆಹಲಿಯಿಂದ ಮಾಹಿತಿ ಬರುತ್ತದೆ, ಆದರೆ ತಮ್ಮದೇ ಶಾಸಕರ ಬಗ್ಗೆ ಯಾಕೆ ಇನ್ನೂ ಮಾಹಿತಿ ಬಂದಿಲ್ಲ?” ಎಂದು ಪ್ರಶ್ನಿಸಿದರು.

ವಿಜಯೇಂದ್ರ, ಅಶೋಕ್, ಛಲವಾದಿ ಅವರೇ ಸ್ಪಷ್ಟನೆ ನೀಡಲಿ ಎಂದು ಅವರು ಆಗ್ರಹಿಸಿದರು. “ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿ ಮಾಡಿದ್ರಲ್ಲ, ಈಗ ಯಾರಪ್ಪ ರಾಜೀನಾಮೆ ಕೊಡ್ತೀರಾ?” ಎಂದು ತೀವ್ರವಾಗಿ ಪ್ರಶ್ನಿಸಿದರು.

ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಹೇಳುವವರಿಗೆ “ಸ್ವಲ್ಪ ಕಾಮನ್‌ಸೆನ್ಸ್ ಇರಲಿ, ಇದು ಲೋಕಾಯುಕ್ತ ಟ್ರ್ಯಾಪ್” ಎಂದು ಖರ್ಗೆ ತಿರುಗೇಟು ನೀಡಿದರು. ಬಿಜೆಪಿ ನಾಯಕರು ಈ ಕುರಿತು ಸ್ಪಷ್ಟವಾಗಿ ಮಾತನಾಡಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.

ಮದುವೆ ಮುನ್ನಾ ದಿನ ಜೋಧ್‌ಪುರದಲ್ಲಿ ಇಬ್ಬರ ಸಹೋದರಿಯರ ಸಂಶಯಾಸ್ಪದ ಸಾವು

0

ಜೈಪುರ್: ಜೋಧ್‌ಪುರದ ಮನೈ ಗ್ರಾಮದಲ್ಲಿ ಮದುವೆಯ ಸಂಭ್ರಮವೇ ದ್ವಂದ್ವ ದುರಂತಕ್ಕೆ ತಿರುಗಿದೆ. ಶನಿವಾರ ಮದುವೆಯಾಗಬೇಕಿದ್ದ ಶೋಭಾ (25) ಮತ್ತು ವಿಮ್ಲಾ (23) ಶುಕ್ರವಾರ ರಾತ್ರಿ ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕುಟುಂಬದವರ ಪ್ರಕಾರ, ರಾತ್ರಿ ತಡವರೆಗೆ ಮದುವೆ ಸಿದ್ಧತೆಗಳು ನಡೆಯುತ್ತಿದವು. ಇದೇ ವೇಳೆ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ತಕ್ಷಣ ಕ್ರಮಕೈಗೊಂಡು ಅಂತ್ಯಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಶವಾಗಾರಕ್ಕೆ ರವಾನಿಸಿ, ವರದಿ ಬರುವವರೆಗೆ ಸಾವಿನ ನಿಖರ ಕಾರಣ ಕುರಿತು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ.

ವಿಷ ಸೇವನೆಯ ಶಂಕೆ ಇದ್ದರೂ, ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದ ಒಳಗಿನ ಒತ್ತಡವೇ? ವೈಯಕ್ತಿಕ ಕಾರಣವೇ? ಅಥವಾ ಇತರೆ ಅಂಶಗಳೇ? ಎಂಬ ಪ್ರಶ್ನೆಗಳು ತನಿಖೆಯಲ್ಲಿ ಪ್ರಮುಖವಾಗಿವೆ.

ಮದುವೆ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಮನೆ ಇದೀಗ ಶೋಕದಲ್ಲಿ ಮುಳುಗಿದ್ದು, ಪ್ರಕರಣದ ಪ್ರತಿಯೊಂದು ಬೆಳವಣಿಗೆಯ ಮೇಲೂ ಸ್ಥಳೀಯರು ಕಣ್ಣಿಟ್ಟಿದ್ದಾರೆ.

ರಾಯಚೂರು| ಬಡವರಿಗೆ ಸೇರಬೇಕಾದ ಔಷಧಿಗಳು ತಿಪ್ಪೆ ಪಾಲು; ಸರ್ಕಾರಿ ಮುದ್ರೆಯ ಸಿರಂಜ್‌ಗಳ ರಾಶಿ ಕಂಡು ದಂಗಾದ ಜನ!

0

ರಾಯಚೂರು :-ನಗರದಲ್ಲಿ ಬಡವರಿಗೆ ವಿತರಿಸಬೇಕಾದ ಔಷಧಿಗಳನ್ನು ರಸ್ತೆ ಬದಿ ತಿಪ್ಪೆಗೆ ಎಸೆದಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.

ಎಲ್‌ಬಿಎಸ್ ನಗರ ಸ್ಮಶಾನ ಜಾಗದ ಸಮೀಪದ ತಿಪ್ಪೆಗುಂಡಿಯಲ್ಲಿ ಅವಧಿ ಮುಗಿಯದೇ ಇರುವ ಕೆಮ್ಮು–ಕಫ ಸೇರಿದಂತೆ ವಿವಿಧ ಕಾಯಿಲೆಗಳ ಔಷಧಿಗಳು ಹಾಗೂ ಸರ್ಕಾರದ ಮುದ್ರೆ ಇರುವ ಸಿರಂಜ್‌ಗಳು ಪತ್ತೆಯಾಗಿದ್ದು, ಜನ ಓಡಾಡುವ ಪ್ರದೇಶದಲ್ಲೇ ಇಷ್ಟು ಪ್ರಮಾಣದ ಔಷಧಿಗಳನ್ನು ಯಾರು, ಏಕೆ ಬಿಸಾಡಿದರು ಎಂಬುದು ತೀವ್ರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳು ಅವುಗಳನ್ನು ಸೇವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಡಿ.ಎಚ್‌.ಓ ಹಾಗೂ ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖಾಸಗಿ ಔಷಧಿಗಳ ಕುರಿತು ಡ್ರಗ್ ಕಂಟ್ರೋಲರ್ ತನಿಖೆ ನಡೆಸಲಿದ್ದಾರೆ. ಸರ್ಕಾರಿ ಮುದ್ರೆ ಇರುವ ಸಿರಂಜ್‌ಗಳ ಬಗ್ಗೆ ಈಗಾಗಲೇ ತನಿಖೆಗೆ ಸೂಚಿಸಲಾಗಿದೆ ಎಂದು ಡಿ.ಎಚ್‌.ಓ ಡಾ. ಸುರೇಂದ್ರಬಾಬು ಸ್ಪಷ್ಟಪಡಿಸಿದ್ದಾರೆ.

ವಿಜಯಪುರ| ಸಚಿವ ಶಿವಾನಂದ ಪಾಟೀಲ್‌ಗೆ ಮಾತೃ ವಿಯೋಗ

0

ವಿಜಯಪುರ:- ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜ್ಯ ಸಚಿವ ಶಿವಾನಂದ ಪಾಟೀಲ್‌ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ್‌ ಅವರು ಇಂದು ನಸುಕಿನಜಾವ ನಿಧರಾಗಿದ್ದಾರೆ.

ಮೃತ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ್‌ ಅವರು ಮಕ್ಕಳಾದ ಮಹಾದೇವಿ ಪಾಟೀಲ, ಶಿವಶರಣಗೌಡ ಪಾಟೀಲ, ಶಿವಾನಂದ ಪಾಟೀಲ ಹಾಗೂ ವಿಜುಗೌಡ ಪಾಟೀಲ ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆ ಇಂದು ಸಂಜೆ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ತೋಟದಲ್ಲಿ ನೆರವೇರಿದೆ. ಗಂಗಾಬಾಯಿ ಸಿದ್ದರಾಮಪ್ಪ ಪಾಟೀಲ್ ಅವರ ನಿಧನಕ್ಕೆ ರಾಜಕೀಯ ಗಣ್ಯರು ಸೇರಿ ಹಲವು ಕ್ಷೇತ್ರದ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಲೋಕಾಯುಕ್ತ ಟ್ರ್ಯಾಪ್‌ನಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಸಿಕ್ಕಿಬಿದ್ದರಾ? ಆಡಿಯೋ, ಹಣ ಹಸ್ತಾಂತರ, ಫಿನಾಲ್ಫ್ತಲೇನ್ ಟೆಸ್ಟ್ ಬಹಿರಂಗ

0

ಗದಗ: ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ನಡೆದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ತನಿಖಾ ಹಂತದಲ್ಲಿ ಹೊರಬರುತ್ತಿರುವ ಪ್ರತಿಯೊಂದು ಅಂಶವೂ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.

ಜುಲೈ ತಿಂಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಮಂಜೂರಾಗಿದ್ದು, ಗುತ್ತಿಗೆದಾರ ವಿಜಯರಾಜ್ ಅವರಿಗೆ ಕೆಲಸ ಒದಗಿತ್ತು. ನಂತರ ನಡೆದ ಭೂಮಿ ಪೂಜೆ ವೇಳೆ ಹಣದ ಮಾತುಕತೆ ನಡೆದಿರುವ ಶಂಕೆ ತನಿಖೆಯಲ್ಲಿ ಎದುರಾಗಿದೆ. ಪೂಜೆ ನಡೆದ ದಿನವೇ ಹಣ ನೀಡುವ ಕುರಿತು ಮಾತು ನಡೆದಿತ್ತೇ ಎಂಬ ಅನುಮಾನವೂ ಮೂಡಿದೆ.

ಪೂಜೆ ಬಳಿಕ ಗುತ್ತಿಗೆದಾರರಿಂದ ಫೋನ್ ಕರೆಗಳಿಗೆ ಪ್ರತಿಕ್ರಿಯೆ ಸಿಗದೇ, ಪಿಎಗಳ ಮೂಲಕ ಸಂಪರ್ಕ ಸಾಧಿಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಕೆಲವು ದಿನಗಳ ಮೌನದ ನಂತರ ಒಂದೂವರೆ ತಿಂಗಳ ಬಳಿಕ ನಡೆದ ಮುಖಾಮುಖಿ ಮಾತುಕತೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಲೋಕಾಯುಕ್ತರ ವಶದಲ್ಲಿರುವ ಆಡಿಯೋದಲ್ಲಿ ಗಂಭೀರ ಶೈಲಿಯ ಮಾತುಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.

“ಬ್ಲ್ಯಾಕ್ ಮಾಡಿ ಫ್ರೀಯಾಗಿ ಮಾಡ್ಕೊಳ್ಳಬೇಕು ಅಂದ್ಕೊಂಡಿಯಾ?”
“ನಿನ್ನ ನಡಾ ಮುರಿಸ್ತೀನಿ”
“ಎಚ್.ಕೆ. ಪಾಟೀಲ್ ಬಳಿ ನಡೆದಂತೆ ನನ್ನ ಬಳಿ ನಡೆಯಲ್ಲ” ಎಂಬ ಉಲ್ಲೇಖಗಳು ಕೇಳಿಬಂದಿರುವುದಾಗಿ ಮೂಲಗಳು ತಿಳಿಸಿವೆ. ಈ ಆಡಿಯೋ ಈಗ ಎಫ್‌ಎಸ್‌ಎಲ್ ಪರಿಶೀಲನೆಗೆ ಕಳುಹಿಸಲಾಗಿದೆ. ವಾಯ್ಸ್ ಸ್ಯಾಂಪಲ್ ಮ್ಯಾಚ್ ಆದರೆ ಪ್ರಕರಣ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.

ಲೋಕಾಯುಕ್ತ ಮೂಲಗಳ ಪ್ರಕಾರ, ಹಣ ಹಸ್ತಾಂತರ ಪ್ರಕ್ರಿಯೆ ಲೇಯರ್ ಬೈ ಲೇಯರ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಶಾಸಕರಿಂದ ಸರ್ಕಾರಿ ಪಿಎ ಮಂಜುನಾಥ್‌ಗೆ ಖರ್ಚು ಭಾಗ ಆದರೆ ವಿಚಾರಣೆ ವೇಳೆ ಶಾಸಕ “ನಾನು ಕಮಿಷನ್ ಕೇಳಿಲ್ಲ” ಮತ್ತು “ಹಣ ಮುಟ್ಟಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ತೆರಳಲು ಸಜ್ಜಾಗಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೈ ತೊಳೆಯುವ ಫಿನಾಲ್ಫ್ತಲೇನ್ ಪರೀಕ್ಷೆಯಲ್ಲಿ ಪಿಂಕ್ ಬಣ್ಣ ಕಂಡುಬಂದಿದೆ ಎಂಬ ಮಾಹಿತಿ ತನಿಖಾ ವಲಯದಲ್ಲಿ ಹರಿದಾಡುತ್ತಿದೆ. ಇದು ಹಣ ಸ್ಪರ್ಶದ ಪ್ರಾಥಮಿಕ ಸೂಚನೆ ಎಂದು ಹೇಳಲಾಗಿದೆ.

ವಿಚಾರಣೆ ವೇಳೆ “ನಾ ಯಾಮಾರಿದ್ದೇನೆ” ಎಂದು ಅಧಿಕಾರಿಯೊಬ್ಬರ ಬಳಿ ಗೋಳು ತೋಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದ್ದರೂ, ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.

ಎಫ್‌ಎಸ್‌ಎಲ್ ವರದಿ ಈ ಪ್ರಕರಣದ ಪ್ರಮುಖ ತಿರುವಾಗಲಿದೆ. ವಾಯ್ಸ್ ಮ್ಯಾಚಿಂಗ್ ದೃಢವಾದರೆ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಗಂಭೀರ ಕ್ರಮಗಳ ಸಾಧ್ಯತೆ ಇದೆ. ಜಾಮೀನು, ಬಂಧನ, ಚಾರ್ಜ್‌ಶೀಟ್ ಎಲ್ಲವೂ ಫರೆನ್ಸಿಕ್ ದೃಢೀಕರಣದ ಮೇಲೆ ಅವಲಂಬಿತವಾಗಿದೆ.

ರಾಜಕೀಯವಾಗಿ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಲ್ಲಿ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಮುಂದಿನ ವಿಧಾನಸಭಾ ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ವರದಿ ನಿರೀಕ್ಷೆಯಲ್ಲಿದೆ.

 

ನೆಲಮಂಗಲ: ಪರ್ಫ್ಯೂಮ್ ಗೋಡೌನ್‍ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

0

ನೆಲಮಂಗಲ: ಮಾಕಳಿ ಸಮೀಪದ ಪರ್ಫ್ಯೂಮ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡ ಭಾರೀ ನಷ್ಟಕ್ಕೆ ಕಾರಣವಾಗಿದೆ. ನೆಲಮಂಗಲ ರಸ್ತೆಯಲ್ಲಿರುವ ಈ ಗೋದಾಮು ಕೆಲವೇ ನಿಮಿಷಗಳಲ್ಲಿ ಧಗಧಗ ಹೊತ್ತಿ ಉರಿದಿದೆ.

ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿದ್ದು, ಭಯಾನಕ ಶಬ್ದಗಳಿಂದ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ಗೋದಾಮಿನೊಳಗಿದ್ದ 40 ಸಿಬ್ಬಂದಿ ತಕ್ಷಣ ಸ್ಥಳ ತೊರೆದು ಓಡಿ ಪಾರಾಗಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಆದರೆ ಬೆಂಕಿ ಪಕ್ಕದಲ್ಲಿದ್ದ ಎಸಿ ಗೋಡೌನ್‌ಗೆ ವ್ಯಾಪಿಸಿ, ಅಲ್ಲಿದ್ದ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅಗ್ನಿ ಅವಘಡದ ಮೂಲ ಕಾರಣ ಪತ್ತೆಗೆ ಪರಿಶೀಲನೆ ಆರಂಭಗೊಂಡಿದ್ದು, ಹಾನಿಯ ಪ್ರಮಾಣದ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಕಾಲೇಜ್ ಹಾಸ್ಟೆಲ್‌ನಲ್ಲಿ ಓವರ್‌ ಡೋಸ್‌ ಇಂಜೆಕ್ಷನ್ ಚುಚ್ಚಿಕೊಂಡು ವೈದ್ಯ ವಿದ್ಯಾರ್ಥಿ ಸೂಸೈಡ್!

0

ದಾವಣಗೆರೆ:- ದಾವಣಗೆರೆ ನಗರದ ಖಾಸಗಿ ವೈದ್ಯಕೀಯ ಕಾಲೇಜ್ ಹಾಸ್ಟೆಲ್‌ನಲ್ಲಿ ಓವರ್‌ ಡೋಸ್‌ ಇಂಜೆಕ್ಷನ್ ಚುಚ್ಚಿಕೊಂಡು ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.

ಸಿದ್ಧಾರ್ಥ ತ್ರಯಂಬಕೆ (30) ಆತ್ಮಹತ್ಯೆಗೆ ಶರಣಾದ ವೈದ್ಯ ವಿದ್ಯಾರ್ಥಿ. ಇವರು ಮಹಾರಾಷ್ಟ್ರ ಸತಾರ್ ಜಿಲ್ಲೆಯ ಕರಾಡ್ ಮೂಲದ ವರು ಎನ್ನಲಾಗಿದೆ. ಅವರು ದಾವಣಗೆರೆ ಖಾಸಗಿ ಮೆಡಿಕಲ್ ಕಾಲೇಜ್‌ನಲ್ಲಿ ಡರ್ಮಾಟಾಲಾಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ಅವರು ಹಾನಿಕಾರಕ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ರೂಮ್ ಲಾಕ್ ಆದ ಹಿನ್ನೆಲೆ ಸಂಶಯಗೊಂಡ ವಿದ್ಯಾರ್ಥಿಗಳು ಕೊಠಡಿ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ವಿದ್ಯಾರ್ಥಿಯ ಪಾಲಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪರಪ್ಪನ ಅಗ್ರಹಾರ ಪಾಲಾದ ಶಾಸಕ ಚಂದ್ರು ಲಮಾಣಿ; ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ!

0

ಬೆಂಗಳೂರು:- ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವ ವೇಳೆ ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ಯಲಹಂಕ ಜುಡಿಷಿಯಲ್ ಲೇಔಟ್‌ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಲೋಕಾಯುಕ್ತ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಲಯದ ಆದೇಶದಂತೆ ಶಾಸಕ ಚಂದ್ರು ಲಮಾಣಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ. ಇದೇ ಪ್ರಕರಣದಲ್ಲಿ ಸರ್ಕಾರಿ ಪಿಎ ಮಂಜುನಾಥ್ ಹಾಗೂ ಸಂಬಂಧಿ ಗುರು ಲಮಾಣಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಡಿಯೋವನ್ನು ಎಫ್‌ಎಸ್‌ಎಲ್ ವರದಿಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.

ಕಮಿಷನ್ ಕುರಿತು ಮಾತುಕತೆ ನಡೆಸಿದ ಆಡಿಯೋ ಸೇರಿದಂತೆ ಹಲವು ಮಹತ್ವದ ದಾಖಲೆಗಳು ತನಿಖಾಧಿಕಾರಿಗಳ ಕೈಗೆ ಸಿಕ್ಕಿವೆ. ಜುಲೈನಲ್ಲಿ ಮಂಜೂರಾಗಿದ್ದ ಟೆಂಡರ್ ಕಾಮಗಾರಿಗೆ ಒಂದೂವರೆ ತಿಂಗಳ ಹಿಂದೆ ಶಾಸಕರು ಚಾಲನೆ ನೀಡಿದ್ದರು. ಪೂಜೆ ದಿನವೇ ಹಣ ನೀಡುವ ಬಗ್ಗೆ ಮಾತುಕತೆ ನಡೆದಿದ್ದು, ಬಳಿಕ ಗುತ್ತಿಗೆದಾರ ವಿಜಯರಾಜ್ ಕರೆಗಳಿಗೆ ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಒಂದೂವರೆ ತಿಂಗಳ ನಂತರ ಗುತ್ತಿಗೆದಾರ ಶಾಸಕರನ್ನು ಭೇಟಿಯಾದಾಗ ಜೋರಾಗಿ ಮಾತಾಡಿರುವ ಹಾಗೂ ಬೆದರಿಕೆಯ ಧ್ವನಿಯ ಆಡಿಯೋವೂ ಲೋಕಾಯುಕ್ತಕ್ಕೆ ಲಭ್ಯವಾಗಿದೆ.

ವಿಚಾರಣೆ ವೇಳೆ ಶಾಸಕ ಚಂದ್ರು ಲಮಾಣಿ ತಾನು ಕಮಿಷನ್ ಪಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಹಣವನ್ನು ಪಿಎ ಗುರು ಪಡೆದಿದ್ದು, ಅದರಲ್ಲಿ ಒಂದು ಭಾಗವನ್ನು ಖರ್ಚಿಗಾಗಿ ಸರ್ಕಾರಿ ಪಿಎ ಮಂಜುನಾಥ್‌ಗೆ ನೀಡಿದ್ದಾನೆ ಎನ್ನಲಾಗಿದೆ. ಈ ನಡುವೆ ಆಸ್ಪತ್ರೆಗೆ ತೆರಳಲು ಸಿದ್ಧರಾಗಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೈ ತೊಳೆದಾಗ ಪಿಂಕ್ ಬಣ್ಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ಮತ್ತು ಪಿಎಗಳು ಬಂಧನಕ್ಕೊಳಗಾಗಿದ್ದಾರೆ.

ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟ ನಟ ರಿಷಬ್‌ ಶೆಟ್ಟಿ ದಂಪತಿ!

0

ಕೊಪ್ಪಳ: ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಭೇಟಿ ನೀಡಿ, ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹನುಮ ಜನ್ಮಸ್ಥಳವೆಂದು ಪುರಾಣ ಪ್ರಸಿದ್ಧಿಯಿರುವ ಅಂಜನಾದ್ರಿಯಲ್ಲಿ ತೆಲುಗು ಸಿನಿಮಾ ಜೈ ಹನುಮಾನ್ ಸಿನಿಮಾಗೆ  ಭಕ್ತಿಭಾವದಿಂದ ಮುಹೂರ್ತ ನೆರವೇರಿತು. ಬೆಳಗ್ಗೆ 11:50ರ ಶುಭ ಮುಹೂರ್ತದಲ್ಲಿ ಚಿತ್ರಾರಂಭಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಅರ್ಚಕರು, ಚಿತ್ರತಂಡದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಪಾತ್ರಕ್ಕಾಗಿ ಅವರು ವಿಶೇಷ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ಜೈ ಹನುಮಾನ್’ ಚಿತ್ರವನ್ನು ಖ್ಯಾತ ತೆಲುಗು ನಿರ್ದೇಶಕ ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದಾರೆ. ಪೌರಾಣಿಕ ಹಿನ್ನೆಲೆ ಹಾಗೂ ಆಧುನಿಕ ಕಥನಶೈಲಿಯ ಸಂಯೋಜನೆಯೊಂದಿಗೆ ಸಿನಿಮಾ ಮೂಡಿಬರಲಿದ್ದು, ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಆನೇಕಲ್‌| ರೋಗಿ ಕರೆತರಲು ತೆರಳಿದ್ದ ಆ್ಯಂಬುಲೆನ್ಸ್ ಅಡ್ಡಗಟ್ಟಿ ರಸ್ತೆ ರಂಪಾಟ; ಸಾರ್ವಜನಿಕರ ಆಕ್ರೋಶ

0

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ರೋಗಿಯನ್ನು ಕರೆತರಲು ತೆರಳುತ್ತಿದ್ದ ಆ್ಯಂಬುಲೆನ್ಸ್‌ನ್ನು ತಡೆದು ನಿಲ್ಲಿಸಿ ರಸ್ತೆ ರಂಪಾಟ ನಡೆಸಿರುವ ಘಟನೆ ವರದಿಯಾಗಿದೆ.

ಆನೇಕಲ್‌ನ ಅಲಯನ್ಸ್ ಕಾಲೇಜು ಮುಂಭಾಗ ಈ ಘಟನೆ ನಡೆದಿದ್ದು, ಕಾಲೇಜು ಎದುರಿನ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿಗೆ ಆ್ಯಂಬುಲೆನ್ಸ್ ಸ್ಪರ್ಶಿಸಿದೆ ಎಂಬ ಕಾರಣಕ್ಕೆ ಕಾರು ಚಾಲಕ ಹಾಗೂ ಕೆಲ ವಿದ್ಯಾರ್ಥಿಗಳು ಗಲಾಟೆ ಆರಂಭಿಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಆ್ಯಂಬುಲೆನ್ಸ್‌ನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಲಾಗಿದ್ದು, ಈ ವೇಳೆ ಆ್ಯಂಬುಲೆನ್ಸ್ ಚಾಲಕನಿಗೆ ಅಶ್ಲೀಲ ಪದಗಳಿಂದ ನಿಂದನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ರೋಗಿಗಳನ್ನು ಸಾಗಿಸುವ ತುರ್ತು ವಾಹನಕ್ಕೆ ಅಡ್ಡಿಪಡಿಸಿ, ಅದರ ಸಿಬ್ಬಂದಿಗೆ ಅವಾಚ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಮರೆತು ತುರ್ತು ಸೇವೆಗೆ ಅಡ್ಡಿ ಉಂಟುಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ಕೇಳಿಬಂದಿದೆ.

error: Content is protected !!