Home Blog Page 6

ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟ ನಟ ರಿಷಬ್‌ ಶೆಟ್ಟಿ ದಂಪತಿ!

0

ಕೊಪ್ಪಳ: ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಭೇಟಿ ನೀಡಿ, ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹನುಮ ಜನ್ಮಸ್ಥಳವೆಂದು ಪುರಾಣ ಪ್ರಸಿದ್ಧಿಯಿರುವ ಅಂಜನಾದ್ರಿಯಲ್ಲಿ ತೆಲುಗು ಸಿನಿಮಾ ಜೈ ಹನುಮಾನ್ ಸಿನಿಮಾಗೆ  ಭಕ್ತಿಭಾವದಿಂದ ಮುಹೂರ್ತ ನೆರವೇರಿತು. ಬೆಳಗ್ಗೆ 11:50ರ ಶುಭ ಮುಹೂರ್ತದಲ್ಲಿ ಚಿತ್ರಾರಂಭಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಅರ್ಚಕರು, ಚಿತ್ರತಂಡದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಪಾತ್ರಕ್ಕಾಗಿ ಅವರು ವಿಶೇಷ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ಜೈ ಹನುಮಾನ್’ ಚಿತ್ರವನ್ನು ಖ್ಯಾತ ತೆಲುಗು ನಿರ್ದೇಶಕ ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದಾರೆ. ಪೌರಾಣಿಕ ಹಿನ್ನೆಲೆ ಹಾಗೂ ಆಧುನಿಕ ಕಥನಶೈಲಿಯ ಸಂಯೋಜನೆಯೊಂದಿಗೆ ಸಿನಿಮಾ ಮೂಡಿಬರಲಿದ್ದು, ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಆನೇಕಲ್‌| ರೋಗಿ ಕರೆತರಲು ತೆರಳಿದ್ದ ಆ್ಯಂಬುಲೆನ್ಸ್ ಅಡ್ಡಗಟ್ಟಿ ರಸ್ತೆ ರಂಪಾಟ; ಸಾರ್ವಜನಿಕರ ಆಕ್ರೋಶ

0

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ರೋಗಿಯನ್ನು ಕರೆತರಲು ತೆರಳುತ್ತಿದ್ದ ಆ್ಯಂಬುಲೆನ್ಸ್‌ನ್ನು ತಡೆದು ನಿಲ್ಲಿಸಿ ರಸ್ತೆ ರಂಪಾಟ ನಡೆಸಿರುವ ಘಟನೆ ವರದಿಯಾಗಿದೆ.

ಆನೇಕಲ್‌ನ ಅಲಯನ್ಸ್ ಕಾಲೇಜು ಮುಂಭಾಗ ಈ ಘಟನೆ ನಡೆದಿದ್ದು, ಕಾಲೇಜು ಎದುರಿನ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿಗೆ ಆ್ಯಂಬುಲೆನ್ಸ್ ಸ್ಪರ್ಶಿಸಿದೆ ಎಂಬ ಕಾರಣಕ್ಕೆ ಕಾರು ಚಾಲಕ ಹಾಗೂ ಕೆಲ ವಿದ್ಯಾರ್ಥಿಗಳು ಗಲಾಟೆ ಆರಂಭಿಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಆ್ಯಂಬುಲೆನ್ಸ್‌ನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಲಾಗಿದ್ದು, ಈ ವೇಳೆ ಆ್ಯಂಬುಲೆನ್ಸ್ ಚಾಲಕನಿಗೆ ಅಶ್ಲೀಲ ಪದಗಳಿಂದ ನಿಂದನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ರೋಗಿಗಳನ್ನು ಸಾಗಿಸುವ ತುರ್ತು ವಾಹನಕ್ಕೆ ಅಡ್ಡಿಪಡಿಸಿ, ಅದರ ಸಿಬ್ಬಂದಿಗೆ ಅವಾಚ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಮರೆತು ತುರ್ತು ಸೇವೆಗೆ ಅಡ್ಡಿ ಉಂಟುಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ಕೇಳಿಬಂದಿದೆ.

ಚಿಕ್ಕಮಗಳೂರು| ಮದವೇರಿದ ಕಾಡಾನೆಗೆ ಮಹಿಳೆ ಬಲಿ; ಗ್ರಾಮಸ್ಥರ ಆಕ್ರೋಶ!

0

ಚಿಕ್ಕಮಗಳೂರು: ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಮದವೇರಿದ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಇದೇ ಪ್ರದೇಶದಲ್ಲಿ ವಾರದ ಹಿಂದಷ್ಟೇ ಕಾರ್ಮಿಕನೊಬ್ಬನನ್ನು ಈ ಕಾಡಾನೆ ಬಲಿಪಡೆದಿತ್ತು. ಮೃತರನ್ನು ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಬೋರಮ್ಮ (33) ಎಂದು ಗುರುತಿಸಲಾಗಿದೆ. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಆನೆ ಮದವೇರಿರುವ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಆನೆ ದಾಳಿ ನಡೆಸಿ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಸಾಗಿಸಿದರೆ ಜನರಿಗೆ ವಿಷಯ ಗೊತ್ತಾಗುತ್ತದೆ ಎಂಬ ಕಾರಣದಿಂದ ಗೂಡ್ಸ್‌ ಆಟೋದಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲಿಂದ ಮೇಲೆ ಕಾಡಾನೆ ದಾಳಿಯಿಂದ ಸಾವುಗಳು ಸಂಭವಿಸುತ್ತಿದ್ದರೂ ಶಾಶ್ವತ ಪರಿಹಾರ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕಾಡಾನೆ ದಾಳಿಗೆ 9 ಮಂದಿ ಬಲಿಯಾಗಿದ್ದು, ಸತ್ತ ನಂತರದ ಪರಿಹಾರ ಮಾತ್ರ ಸಾಕಾಗದು—ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.

Gold Rate Today: ಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ; ಇಲ್ಲಿದೆ ಇಂದಿನ ದರಪಟ್ಟಿ!

0

ಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ ಆಗಿದ್ದು, ಗೋಲ್ಡ್ ಪ್ರಿಯರನ್ನು ಕಂಗಾಲಾಗುವಂತೆ ಮಾಡಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 22ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,928 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,600 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,946 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,928 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,600 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ; ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು!

0

ಬೆಳಗಾವಿ:- ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.

ಕಲ್ಮೇಶ್ ಕೋಟಿ (50) ಕೊಲೆಯಾದ ವ್ಯಕ್ತಿ. ಗ್ರಾಮದ ಸಮೀಪದ ಮೆಕ್ಕೆಜೋಳ ಗದ್ದೆಯಲ್ಲಿ ಶವ ಪತ್ತೆಯಾಗಿದೆ. ಮೃತ ಕಲ್ಮೇಶ್, ತುಮಕೂರಿನಲ್ಲಿ ಹೋಮ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದರು‌. ಸುಮಾರು ಹತ್ತು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಕೊಲೆ ತಡವಾಗಿ ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಕಲ್ಮೇಶ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು, ಬಳಿಕ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.

ಹತ್ತು ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ದೂರವಾಗಿದ್ದ ಕಾರಣ ತಮ್ಮ ವೃದ್ಧ ತಾಯಿಯೊಂದಿಗೆ ವಾಸವಿದ್ದರು. ಘಟನೆ ತಿಳಿದು ಪತ್ನಿ ಹಾಗೂ ಪುತ್ರ ಗ್ರಾಮಕ್ಕೆ ಆಗಮಿಸಿದ್ದಾರೆ. ಪ್ರಕರಣ ಸಂಬಂಧ ಎಸ್‌ಪಿ ರಾಮರಾಜನ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣಕಾಸು, ಆಸ್ತಿ ಹಾಗೂ ಮಹಿಳೆ ಸಂಬಂಧಿತ ವಿಚಾರಗಳಿಗೆ ಕೊಲೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಿತ್ತೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಟದ ಮಧ್ಯೆ ಆಕಸ್ಮಿಕ ದುರಂತ – ಲೂಡೋ ಕಾಯಿನ್ ನುಂಗಿ ಬಾಲಕಿ ಉಸಿರುಗಟ್ಟಿ ಸಾವು

0

ಮಂಗಳೂರು: ನಿರಪರಾಧ ಬಾಲ್ಯದಲ್ಲಿ ನಡೆದ ಕ್ಷಣಿಕ ತಪ್ಪು ಜೀವಪಾಯಕ್ಕೆ ಕಾರಣವಾದ ಹೃದಯವಿದ್ರಾವಕ ಘಟನೆ ಉಳ್ಳಾಲದ ಕೊಲ್ಯ ಗ್ರಾಮದಲ್ಲಿ ನಡೆದಿದೆ. ಲೂಡೋ ಆಟ ಆಡುತ್ತಿದ್ದ 8 ವರ್ಷದ ಬಾಲಕಿ ಪ್ಲಾಸ್ಟಿಕ್ ಕಾಯಿನ್ ನುಂಗಿ ಮೃತಪಟ್ಟಿದ್ದಾಳೆ.

ಕೇರಳದ ಕಾಸರಗೋಡು ಜಿಲ್ಲೆಯ ಮಧೂರು ಮೂಲದ ರಾಜೇಶ್ ಗಟ್ಟಿ ಹಾಗೂ ರಾಜೇಶ್ವರಿ ದಂಪತಿಯ ಪುತ್ರಿ ತನುಷ್ಕ ದುರ್ಮರಣಕ್ಕೀಡಾದ ಬಾಲಕಿ. ಸಹೋದರ ಸಹೋದರಿಯೊಂದಿಗೆ ಆಟವಾಡುತ್ತಿದ್ದ ವೇಳೆ ಶಂಕು ಆಕಾರದ ಕಾಯಿನ್‌ನ್ನು ನುಂಗಿದ್ದು, ಗಂಟಲಲ್ಲಿ ಸಿಲುಕಿಕೊಂಡ ಕಾರಣ ಉಸಿರಾಟ ಸ್ಥಗಿತಗೊಂಡಿತ್ತು.

ಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಾಲಕಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

ಈ ದುರ್ಘಟನೆ ಮಕ್ಕಳ ಆಟಿಕೆಗಳ ಬಳಕೆಯಲ್ಲಿ ಪೋಷಕರು ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ.

ಬೇರೆಯವರ ಮೇಲೆ ಆರೋಪ ಮಾಡುವ ಬಿಜೆಪಿ, ಈಗ ತನ್ನದೇ ಶಾಸಕ ಸಿಲುಕಿದ್ದಾರೆ”: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲಂಚದ ಆರೋಪದಲ್ಲಿ ಲೋಕಾಯುಕ್ತರ ಬಳಿ ಸಿಲುಕಿರುವ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇತರರ ಮೇಲೆ ಲಂಚದ ಆರೋಪ ಮಾಡುತ್ತಿದ್ದ ಬಿಜೆಪಿಯವರೇ ಈಗ ಆರೋಪದಲ್ಲಿ ಸಿಲುಕಿರುವುದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು. ಬೇರೆ ಪಕ್ಷದ ನಾಯಕರ ವಿರುದ್ಧ ಸುಲಭವಾಗಿ ಆರೋಪ ಮಾಡುವ ಬಿಜೆಪಿ, ಈಗ ತಮ್ಮದೇ ಶಾಸಕ ಲಂಚದ ಆರೋಪ ಎದುರಿಸುತ್ತಿರುವುದು ರಾಜಕೀಯವಾಗಿ ಮಹತ್ವದ ಸಂಗತಿ ಎಂದು ಅವರು ಟೀಕಿಸಿದರು.

ಲೋಕಾಯುಕ್ತ ತನಿಖೆ ನಡೆಯಲಿ, ಸತ್ಯ ಹೊರಬರಲಿ. ತನಿಖೆಯ ಮೂಲಕ ಎಲ್ಲಾ ವಿಚಾರಗಳು ಬಹಿರಂಗವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ನಾಯಕತ್ವದ ಮೇಲೆ ವಿರೋಧ ಪಕ್ಷಗಳು ಒತ್ತಡ ಹೆಚ್ಚಿಸುವ ಸಾಧ್ಯತೆ ಕಂಡುಬರುತ್ತಿದೆ.

 

ಲಾರಿ-ದ್ವಿಚಕ್ರ ವಾಹನದ ನಡುವೆ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

0

ಬೆಂಗಳೂರು ಗ್ರಾಮಾಂತರ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ
ಹೊಸಕೋಟೆ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಮಲ್ಲಮ್ಮಕ್ಕನಪುರ ಗೇಟ್ ಬಳಿ ಈ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದೆ.

ಮೃತ ವ್ಯಕ್ತಿಯು ಆಂಧ್ರ ಮೂಲದವನು ಎನ್ನಲಾಗಿದ್ದು, ಪೋಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೊಸಕೋಟೆ ಸಂಚಾರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಹುಣಸೆಹಳ್ಳಿ ಕಾಫಿ ತೋಟದಲ್ಲಿ 7 ದಿನಗಳಲ್ಲಿ 2 ಜೀವ ಬಲಿ: ಕೊನೆಗೂ ಸೆರೆ ಸಿಕ್ತು ಒಂಟಿ ಸಲಗ

0

ಚಿಕ್ಕಮಗಳೂರು: ಜಿಲ್ಲೆಯ ಹುಣಸೆಹಳ್ಳಿ ಗ್ರಾಮ ಮತ್ತೊಮ್ಮೆ ಕಾಡಾನೆ ದಾಳಿಯಿಂದ ನಲುಗಿದೆ. ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಕಾರ್ಮಿಕ ಮಹಿಳೆ ಬೋರಮ್ಮ (34) ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಇದೇ ತೋಟದಲ್ಲಿ 7 ದಿನಗಳ ಹಿಂದೆ ಹಾವೇರಿ ಮೂಲದ 50 ವರ್ಷದ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಒಂದೇ ತೋಟದಲ್ಲಿ ವಾರದೊಳಗೆ 2 ಜೀವ ಕಳೆದುಹೋಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸಿದೆ.

ಮಾಹಿತಿಯಂತೆ, ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ತೀವ್ರ ಗಾಯಗೊಂಡ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಮುಂಚಿತವಾಗಿ ತೋಟಗಳಿಗೆ ತೆರಳಬಾರದು ಎಂದು ಎಚ್ಚರಿಕೆ ನೀಡಿದ್ದರೂ, ಬದುಕಿನ ಹೋರಾಟ ಕಾರ್ಮಿಕರನ್ನು ಅಪಾಯದ ಮಧ್ಯೆ ನಿಲ್ಲಿಸಿದೆ.

ಘಟನೆ ಬಳಿಕ ವೇಗವಾಗಿ ಕಾರ್ಯಾಚರಣೆ ಕೈಗೊಳ್ಳಲಾಯಿತು. 7 ಕುಮ್ಕಿ ಆನೆಗಳು ಹಾಗೂ 75 ಸಿಬ್ಬಂದಿಗಳ ತಂಡ ದಾಳಿ ನಡೆಸಿದ ಆನೆಯನ್ನು ಸಮೀಪದ ಕಾಫಿ ತೋಟದಲ್ಲೇ ಪತ್ತೆಹಚ್ಚಿತು. ಅರವಳಿಕೆ ಚುಚ್ಚುಮದ್ದು ನೀಡಿ ನಿತ್ರಾಣಗೊಳಿಸಿ, ಬಳಿಕ ಕುಮ್ಕಿಗಳ ನೆರವಿನಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಯಿತು.

ಇದರಿಂದ ಪರಿಸ್ಥಿತಿ ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ಬಂದರೂ, ಗ್ರಾಮಸ್ಥರ ಆಕ್ರೋಶ ಉಗ್ರವಾಗಿದೆ. ಕಡಬಗೆರೆ ಗ್ರಾಮದಲ್ಲಿ ಮೃತದೇಹ ಸಾಗಿಸುತ್ತಿದ್ದ ವಾಹನವನ್ನು ತಡೆದು ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸಮರ್ಪಕ ಪರಿಹಾರ ಮತ್ತು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಡಾನೆ-ಮಾನವ ಸಂಘರ್ಷ ದಿನೇದಿನೇ ತೀವ್ರವಾಗುತ್ತಿರುವ ಹಿನ್ನೆಲೆ, ಅರಣ್ಯ ಇಲಾಖೆಯ ಕ್ರಮಗಳು ಮತ್ತು ಸರ್ಕಾರದ ನಿಲುವು ಇದೀಗ ಪ್ರಶ್ನಾರ್ಥಕವಾಗಿದೆ.

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್!? ಸುಳಿವು ಕೊಟ್ಟ ಸಿಎಂ ಸಿದ್ದರಾಮಯ್ಯ!

0

ಬೆಂಗಳೂರು:- ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.

ಮೊಬೈಲ್ ಬ್ಯಾನ್​ ವಿಚಾರವಾಗಿ ಮುಖ್ಯಮಂತ್ರಿಗಳು ವಿಸಿಗಳಿಂದಲೂ ಅಭಿಪ್ರಾಯ ಕೇಳಿದ್ದು, ಪ್ರಸ್ತಾಪಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಿಂದಲೂ ಒಪ್ಪಿಗೆ ಸಿಕ್ಕಿದೆ. ಸೋಷಿಯಲ್​ ಮೀಡಿಯಾಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಆರೋಪ ಹಿನ್ನೆಲೆ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ ಇದೆ ಎನ್ನಲಾಗಿದೆ.

ಇದಲ್ಲದೆ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳನ್ನು ಮಾದಕವಸ್ತು ಮುಕ್ತಗೊಳಿಸಲು ಸಿಎಂ ಸೂಚಿಸಿದ್ದು, ವಿದ್ಯಾರ್ಥಿ ಚುನಾವಣೆಗಳ ಪುನರಾರಂಭದ ಕುರಿತೂ ಚರ್ಚೆ ನಡೆಸಿದ್ದಾರೆ. ಡ್ರಗ್ಸ್​​ ಒಂದು ಪಿಡುಗಾಗಿದ್ದು, ವಿಶ್ವವಿದ್ಯಾಲಯಗಳ ಕಾಂಪಸ್​​ಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ವಿಸಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸ್ಟೂಡೆಂಟ್ ಎಲೆಕ್ಷನ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಕಾಲದಲ್ಲಿ ಚುನಾವಣೆ ಇತ್ತು, ನಾವು ಅಲ್ಲಿಂದಲೇ ಬಂದಿರುವುದು. ಹೀಗಾಗಿ ಷರತ್ತುಗಳನ್ನು ‌ಹಾಕಿ ಚುನಾವಣೆಗೆ ಅವಕಾಶ ಕೊಡಲು ಚಿಂತನೆ ಇದೆ. ಚುನಾವಣೆ ಆಗದಿದ್ರೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆಯೋದು? ಭಾರತದಲ್ಲಿ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಎಂದ ಸಿಎಂ, ಈ ಬಗ್ಗೆ ಸಲಹೆ ಕೊಡುವಂತೆ ವಿಸಿಗಳಿಗೆ ಸೂಚಿಸಿದ್ದಾರೆ.

error: Content is protected !!