ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಾಡಿನ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಕನ್ನಡದ ಇತಿಹಾಸ, ಸಂಸ್ಕೃತಿ ಮತ್ತು ಅಸ್ಮಿತೆಯ ಸಂಕೇತದ ಜೊತೆಗೆ, ಕನ್ನಡಿಗರ ಏಕತೆಯ ಶಕ್ತಿಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯೋತ್ತರ ಮೈಸೂರು ರಾಜ್ಯವು ಏಕೀಕರಣವಾದರೂ ಕರ್ನಾಟಕ ಎಂಬ ಹೆಸರು ನಾಮಕರಣವಾಗಲಿ ಎನ್ನುವ ಕೂಗು ಗದಗ ಸೇರಿದಂತೆ ಹಲವೆಡೆ ಪಸರಿಸಿತು. ಕರ್ನಾಟಕ ನಾಮಕರಣವಾಗಲು ಹಲವಾರು ಘಟನಾವಳಿಗಳು ಜರುಗಿದವು. ಇದಕ್ಕೆ ಪೂರಕವಾಗಿ ಗದುಗಿನ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಡಿಸೆಂಬರ್ 1961ರ 27, 28 ಮತ್ತು 29ರಂದು ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲರ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ವಿಧಾನ ಪರಿಷತ್ತಿನಲ್ಲಿ ಕೃಷಿ ಸಚಿವ ಕೆ.ಎಚ್. ಪಾಟೀಲ ರಾಜ್ಯಕ್ಕೆ ಕರ್ನಾಟಕ ನಾಮಕರಣ ಠರಾವು ಮಂಡಿಸಿದರು. ಸರ್ವಾನುಮತದಿಂದ ಠರಾವು ಪಾಸಾಗಿ 1973 ನವೆಂಬರ್ 01ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಯಿತು ಎಂದು ಹೇಳಿದರು.
ಗದುಗಿನಲ್ಲಿ 1973ರ ನವೆಂಬರ್ 2ರಂದು ಗದುಗಿನ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣಗಳಾಗಿವೆ. ಅಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವದ ಘಟನೆಗಳನ್ನು ಮರುಸೃಷ್ಟಿಸಿ, ಕರ್ನಾಟಕ ಸಂಭ್ರಮ-50ರ ಸಂಭ್ರಮಾಚರಣೆಯನ್ನು 2023ರ ನವೆಂಬರ್ 01, 02 ಮತ್ತು 03ರಂದು ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ ಜರುಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಪ್ರಸೀದ್, ವಿ.ಪ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವ ಸಂಪುಟದ 20ಕ್ಕೂ ಹೆಚ್ಚು ಸಚಿವರು ಹಾಗೂ ಶಾಸಕರು ಕರ್ನಾಟಕ ಸಂಭ್ರಮ-50ರ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದರು.
ಗದುಗಿನ ವೀರನಾರಾಯಣ-ತ್ರಿಕೂಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ಡಂಬಳದ ದೊಡ್ಡ ಬಸವೇಶ್ವರ ದೇವಾಲಯ, ಸೂಡಿಯ ಜೋಡು ಕಳಸದ ದೇವಾಲಯ, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳ ಶಿಲ್ಪಕಲೆ ಮೈ-ಮನಗಳನ್ನು ಮುದಗೊಳಿಸುತ್ತದೆ. ಭಾರತ ರತ್ನ ಪಂಡಿತ ಭೀಮಸೇನ ಜೋಶಿ, ಪಂ. ಪುಟ್ಟರಾಜ ಗವಾಯಿಗಳವರ ಆಶ್ರಮದ ಸಂಗೀತ ನಿನಾದ ನಮ್ಮಲ್ಲಿ ಧನ್ಯತಾ ಭಾವವನ್ನು ಜಾಗೃತಗೊಳಿಸುತ್ತದೆ. ಗದಗಿನ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೇರಿಸಿದ 1ನೇ ನಾಗವರ್ಮ, ಶಾಸನ ಕವಿ ಮಲ್ಲ, ದುರ್ಗಸಿಂಹ, ನಯಸೇನ, ಚಾಮರಸ, ಕುಮಾರವ್ಯಾಸ, ಶ್ರೀಧರಾಚಾರ್ಯ, ಆದಯ್ಯ, ಬಾಲಲೀಲಾ ಮಹಾಂತ ಶಿವಯೋಗಿಗಳು, ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಹಿಂದೂಸ್ಥಾನಿ ಗಾಯಕ ಪಂ. ಭೀಮಸೇನ ಜೋಶಿ, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಕಲಚೇತನರ ಬಾಳಿನ ಬೆಳಕಾದ ಡಾ. ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕರನ್ನು ಸ್ಮರಿಸೋಣ ಎಂದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟಿಗ ಸುನೀಲ ಜೋಶಿ, ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ, ಹಾಕಿ ಪಟುಗಳಾದ ಭೀನೂ ಭಾಟ್, ರಾಜು ಬಾಗಡೆ, ಹರೀಶ ಮುಟಗಾರ, ಇತ್ತೀಚೆಗೆ ಸ್ಪ್ರಿಂಗ್ ಕ್ರೀಡೆಯಲ್ಲಿ ಏಷ್ಯಾ ಮಟ್ಟದಲ್ಲಿ ಕಂಚಿನ ಪದಕ ಪಡೆದ ಮುಂಡರಗಿ ತಾಲೂಕಿನ ಮುರುಡಿ ತಾಂಡೆಯ ರಮೇಶ ಬೂದಿಹಾಳ ಹೀಗೆ ಅನೇಕ ಸಾಧಕರು ಗದಗಿನ ಹೆಮ್ಮೆಯಾಗಿದ್ದಾರೆ. ಇಂದು ನಮ್ಮ ರಾಜ್ಯವು ಶಿಕ್ಷಣದಲ್ಲಿ, ತಂತ್ರಜ್ಞಾನದಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಕನ್ನಡ ನಾಡು ಸಮೃದ್ಧವಾಗಲಿ, ಕನ್ನಡ ಭಾಷೆ ವಿಶ್ವದ ನಾನಾ ಮೂಲೆಗಳಲ್ಲಿ ಕಂಗೊಳಿಸಲಿ, ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಲಿ, ಕರ್ನಾಟಕವು ವಿಶ್ವಕ್ಕೆ ಮಾದರಿ ರಾಜ್ಯವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಶಿಸಿದರು.
“ನಮ್ಮ ಕನ್ನಡ ನಾಡು ಹಲವು ಜನಾಂಗಗಳು, ಸಂಸ್ಕೃತಿಗಳು, ಧರ್ಮಗಳು, ಪಂಥಗಳು ಒಂದಾಗಿ ಬದುಕುತ್ತಿರುವ ಸೌಹಾರ್ದದ ನೆಲ. ಈ ನಾಡಿನ ಹೃದಯದಲ್ಲಿ ಸಮಾನತೆ, ಸಹಭಾವ, ಸಹಬಾಳ್ವೆ, ಭ್ರಾತೃತ್ವ ಭಾವನೆ ತುಂಬಿದೆ. ಶರಣರ ವಚನ, ದಾಸರ ಭಕ್ತಿ ಗೀತೆಗಳಿಂದ, ದ.ರಾ. ಬೇಂದ್ರೆ, ಕುವೆಂಪು ವಿಶ್ವ ಮಾನವ ಸಂದೇಶದಿಂದ ನಮ್ಮ ನಾಡು ಒಂದು ವಿಶಾಲ ಚಿಂತನೆಯ ಬೀಡಾಗಿದೆ. ಕನ್ನಡ ನಾಡು, ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿಯೂ ಅಪರಿಮಿತ ಸಾಧನೆಗೈದಿದ್ದಾರೆ”
ಎಚ್.ಕೆ. ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವರು.