Home Blog Page 223

ಜೈಲಿನಿಂದ ಬಂದು ಜೆಡಿಯು ಶಾಸಕನಾಗಿ ಅನಂತ್ ಸಿಂಗ್ ಪ್ರಮಾಣ ವಚನ: ಸಿಎಂ ನಿತೀಶ್ ಕುಮಾರ್ ಕಾಲಿಗೆ ಬಿದ್ದು ಆಶೀರ್ವಾದ

0

ಪಾಟ್ನಾ: ಕೋರ್ಟ್ ಅನುಮತಿಯೊಂದಿಗೆ ಜೈಲಿನಿಂದ ಹೊರಬಂದ ಜೆಡಿಯು ಮುಖಂಡ ಮೊಕಾಮಾ ಅನಂತ್ ಸಿಂಗ್ ಅವರು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನಂತ್ ಸಿಂಗ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ದುಲಾರ್ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್ ಸಿಂಗ್ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಮಾತ್ರ ಪಾಟ್ನಾ ಸಿವಿಲ್ ನ್ಯಾಯಾಲಯವು ಅವರಿಗೆ ತಾತ್ಕಾಲಿಕ ಅನುಮತಿ ನೀಡಿತ್ತು. ಜಾಮೀನು ಇನ್ನೂ ಅನುಮೋದನೆಯಾಗದ ಹಿನ್ನೆಲೆಯಲ್ಲಿ, ವಿಧಾನಸಭಾ ಕಲಾಪ ಮುಗಿದ ಕೂಡಲೇ ಅವರು ಮತ್ತೆ ಬೇವೂರ್ ಜೈಲಿಗೆ ಮರಳಬೇಕಾಗಿದೆ.

ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ, ಶಾಸಕರೊಬ್ಬರು ಸದನದಲ್ಲಿ ಭಾಗವಹಿಸುವುದನ್ನು 188ನೇ ವಿಧಿ ಕಡ್ಡಾಯಗೊಳಿಸಿದ್ದು, ಪ್ರಮಾಣ ವಚನ ಸ್ವೀಕರಿಸದೇ ಕಾರ್ಯನಿರ್ವಹಿಸುವುದನ್ನು 193ನೇ ವಿಧಿ ನಿಷೇಧಿಸುತ್ತದೆ. ಈ ಹಿನ್ನೆಲೆ, ಸಿಂಗ್ ಅವರಿಗೆ ಸದನದಲ್ಲಿ ಹಾಜರಾಗಲು ಕಾನೂನುಬದ್ಧ ಅವಕಾಶ ನೀಡಲಾಗಿತ್ತು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅನಂತ್ ಸಿಂಗ್ ಅವರು, “ನಾನು ನಿರಪರಾಧಿ. ನನಗೆ ನ್ಯಾಯ ಸಿಗುತ್ತದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನಸಭೆ ಆವರಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕಣ್ಗಾವಲು, ತ್ವರಿತ ಪ್ರತಿಕ್ರಿಯೆ ಪಡೆಗಳು ಹಾಗೂ ಬೆಂಗಾವಲು ವಾಹನಗಳನ್ನು ನಿಯೋಜಿಸಲಾಗಿತ್ತು.

ಬೆಂಬಲಿಗರ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಯಿತು.  ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅನಂತ್ ಸಿಂಗ್ ಅವರು ಆರ್ಜೆಡಿಯ ವೀಣಾ ದೇವಿ ಅವರನ್ನು 28,206 ಮತಗಳ ಅಂತರದಿಂದ ಸೋಲಿಸಿ ನಿರ್ಣಾಯಕ ಜಯ ಸಾಧಿಸಿದ್ದರು.

ಪತ್ನಿಯ ಮೇಲೆ ಪತಿ ಕ್ರೌರ್ಯ: ಕುಡಿತದ ಅಮಲಲ್ಲಿ ತಲೆ ಬೋಳಿಸಿ ಅವಮಾನ

0

ಬಾಗಲಕೋಟೆ: ಮಹಿಳೆಯರ ಮೇಲಿನ ಹಿಂಸಾಚಾರ ಮತ್ತೊಮ್ಮೆ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿರುವ ಘಟನೆ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಮದ್ಯಪಾನ ಮಾಡಿ ಮನೆಗೆ ಬಂದ ವ್ಯಕ್ತಿಯೊಬ್ಬ, ತನ್ನ ಪತ್ನಿಯ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ, ಆಕೆಯನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿರುವುದು ಬೆಳಕಿಗೆ ಬಂದಿದೆ.

ಉಮೇಶ್ ಕೊಟ್ಟಲಗಿ ಎಂಬಾತನೇ ಈ ಅಮಾನವೀಯ ಕೃತ್ಯ ನಡೆಸಿದ ಆರೋಪಿಯಾಗಿದ್ದು, ಪತ್ನಿಗೆ ಕಬ್ಬು ಕಡಿಯುವ ಕೊಯ್ತಾ ತೋರಿಸಿ ಬೆದರಿಕೆ ಹಾಕಿದ ಬಳಿಕ, ಆಕೆಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯ ದೂರಿನ ಮೇರೆಗೆ ಸಾವಳಗಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಹಿಳೆಯರ ಗೌರವ ಹಾಗೂ ಭದ್ರತೆಗೆ ಧಕ್ಕೆಯಾಗುವ ಇಂತಹ ಘಟನೆಗಳನ್ನು ಕಠಿಣವಾಗಿ ನಿಗ್ರಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಂಜೇಶ್ವರದಲ್ಲಿ ಎರಡು ಸಾವು, ಬೀದರ್‌ನಲ್ಲಿ ವಕೀಲನ ಮೇಲೆ ಚಾಕು ದಾಳಿ: ರಾಜ್ಯದ ವಿವಿಧೆಡೆ ಹಿಂಸಾಚಾರ

0

ಮಂಗಳೂರು: ಕೌಟುಂಬಿಕ ಕಲಹ ಮತ್ತು ಕ್ಷುಲ್ಲಕ ಕಾರಣಗಳು ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಭೀಕರ ಹಿಂಸಾಚಾರಕ್ಕೆ ಕಾರಣವಾಗಿರುವ ಘಟನೆಗಳು ವರದಿಯಾಗಿವೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಬೀದರ್ ಜಿಲ್ಲೆಯಲ್ಲಿ ವಕೀಲನ ಮೇಲೆ ಚಾಕು ದಾಳಿ ನಡೆದಿದೆ.

ಮಂಜೇಶ್ವರ ತಾಲೂಕಿನ ತೂಮಿನಾಡಿನಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಜುಮೈಲ (18) ಮತ್ತು ಶೇಕುಂಞ (55) ಮೃತರಾಗಿದ್ದಾರೆ. ಆರೋಪಿ ಉಮರ್ ಫಾರೂಕ್ ಅನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಫಾರೂಕ್ ಹಾಗೂ ಪತ್ನಿ ತಾಹಿರ ನಡುವೆ ಕಲಹ ನಡೆಯುತ್ತಿದ್ದು, ವಿಚ್ಛೇದನದ ಹಂತಕ್ಕೂ ವಿಚಾರ ತಲುಪಿತ್ತು. ಇದೇ ವೇಳೆ ಆಸ್ತಿ ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಈ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಬಾವ ಶೇಕುಂಞ ನಡುವೆ ಜಗಳ ಆರಂಭವಾಗಿದ್ದು, ಜಗಳ ಬಿಡಿಸಲು ಹೋದ ಜುಮೈಲಗೆ ಕತ್ತಿ ತಗುಲಿ ಆಕೆ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ಶೇಕುಂಞ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿದೇಶದಿಂದ ಕೆಲ ತಿಂಗಳ ಹಿಂದಷ್ಟೇ ಮರಳಿದ್ದ ಫಾರೂಕ್ ಮಾದಕ ವ್ಯಸನಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನೊಂದು ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ವಕೀಲನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬೆನ್ ಚಿಂಚೊಳ್ಳಿ ನಿವಾಸಿ 26 ವರ್ಷದ ಅನಿಲ್ ಕುಮಾರ್ ಗಾಯಗೊಂಡಿದ್ದು, ಹಂದಿ ಸಾಕಾಣಿಕೆ ವಿಚಾರವಾಗಿ ನಡೆದ ಜಗಳ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಘಟನೆ ಸಂಬಂಧ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಗಾಯಗೊಂಡ ಅನಿಲ್ ಕುಮಾರ್‌ಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜೊತೆಗೆ ನೋಟ್ ಬುಕ್ ಉಚಿತ!

0

ಬೆಂಗಳೂರು: ಕರ್ನಾಟಕದ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಿದ್ಯಾ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆಗೆ ನೋಟ್‌ಬುಕ್‌ಗಳನ್ನು ಸಹ ಉಚಿತವಾಗಿ ವಿತರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

2026–27ನೇ ಶೈಕ್ಷಣಿಕ ಸಾಲಿನಲ್ಲಿ 1ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡಲು ಅನುಮೋದನೆ ನೀಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಶುಭಮಂಗಳಾ ಅವರು ಆದೇಶ ಹೊರಡಿಸಿದ್ದಾರೆ. ಇದರಿಂದ ಸುಮಾರು 61 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.

ಈ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ 1ರಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕದ ಜೊತೆಗೆ ನೋಟ್‌ಬುಕ್ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ 1ರಿಂದ 10ನೇ ತರಗತಿಯವರೆಗೆ ಪಠ್ಯಪುಸ್ತಕ ಮಾತ್ರ ನೀಡಲಾಗುತ್ತಿದ್ದು, ನೋಟ್‌ಬುಕ್‌ಗಳನ್ನು ಪೋಷಕರು ಖರೀದಿಸಬೇಕಾಗಿತ್ತು. ಇದೀಗ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ನೀಡಲಾಗುತ್ತಿರುವುದರಿಂದ ಪೋಷಕರ ಆರ್ಥಿಕ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ 1ರಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ವಿತರಿಸಲು ಶಿಕ್ಷಣ ಇಲಾಖೆ ಸರ್ಕಾರಕ್ಕೆ 30 ಕೋಟಿ 83 ಲಕ್ಷ 25 ಸಾವಿರ ರೂ. ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು, ಶಾಲಾ ಶಿಕ್ಷಣ ಇಲಾಖೆಗೆ 290.46 ಕೋಟಿ ರೂ. ಅನುದಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಪಠ್ಯಪುಸ್ತಕಗಳ ಕಾಗದ ಮತ್ತು ಮುದ್ರಣ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು, ಹೆಚ್ಚುವರಿ ಪುಸ್ತಕಗಳಿಗೆ ಸುಳ್ಳು ಬೇಡಿಕೆ ಸಲ್ಲಿಸಿ ಸರ್ಕಾರದ ಹಣ ದುರುಪಯೋಗ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದಲ್ಲದೆ, ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ದ್ವಿಭಾಷಾ ಬಾಲ ಚೇತನ ಚಟುವಟಿಕೆ ಪುಸ್ತಕಗಳು, 4ರಿಂದ 9ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳು, ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕಗಳು ಹಾಗೂ 1ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ವಿತರಿಸಲು ಸೂಚಿಸಲಾಗಿದೆ.

ಕೆಟಿಪಿಪಿ ಕಾಯ್ದೆ–1999ರ ನಿಯಮಗಳಂತೆ ಪಾರದರ್ಶಕ ಟೆಂಡರ್ ಮೂಲಕ ಕರ್ನಾಟಕ ಪುಸ್ತಕ ಸಂಘದ ಮೂಲಕ ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಒಟ್ಟು 264.62 ಕೋಟಿ ರೂ. ವೆಚ್ಚದಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಪುಸ್ತಕ ವಿತರಣೆಗೆ ಅನುಮೋದನೆ ನೀಡಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕದಡಿ ಹೊಸ ಕಾರ್ಯಕ್ರಮಗಳಿಗೆ 25.841 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪುವಂತೆ ಎಸ್‌ಎಟಿಎಸ್ ಮೂಲಕ ಶಾಲೆಗಳಿಂದ ಬೇಡಿಕೆಯ ಮಾಹಿತಿಯನ್ನು ಪಡೆದು ಎಲ್ಲಾ ವಿವರಗಳನ್ನು ದಾಖಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಮೋದಿ–ಟ್ರಂಪ್ ಒಪ್ಪಂದ ಭಾರತ–ಅಮೆರಿಕ ಸಹಕಾರಕ್ಕೆ ಐತಿಹಾಸಿಕ ಮೈಲುಗಲ್ಲು: ಬೊಮ್ಮಾಯಿ

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಡುವೆ ನಡೆದ ಒಪ್ಪಂದವು ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಹಕಾರ ಸಂಬಂಧ ವೃದ್ಧಿಗೆ ಮಹತ್ವದ ಮೈಲುಗಲ್ಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ಮತ್ತು ದೃಢ ನಾಯಕತ್ವವು ವಿಶ್ವಮಟ್ಟದಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಯಶಸ್ವಿಯಾಗಿ ಕಾಪಾಡುತ್ತಿದೆ ಎಂದು ಶ್ಲಾಘಿಸಿದ್ದಾರೆ. ಪ್ರಧಾನಿಯವರ ನಾಯಕತ್ವದ ಸಾಮರ್ಥ್ಯದಿಂದ ಭಾರತಕ್ಕೆ ಅನುಕೂಲಕರವಾದ ಜಾಗತಿಕ ಅವಕಾಶಗಳನ್ನು ಬಳಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾದ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಈ ಮಹತ್ವದ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಇದೇ ವೇಳೆ, ಭಾರತ–ಅಮೆರಿಕ ನಡುವಿನ ಈ ಒಪ್ಪಂದವು ದೇಶದ ರೈತರು, ಸಣ್ಣ ಕೈಗಾರಿಕೆಗಳು, ನವೋದ್ಯಮಿಗಳು ಹಾಗೂ ಕೌಶಲ್ಯ ಹೊಂದಿರುವ ಕಾರ್ಮಿಕರಿಗೆ ವಿಶ್ವಮಟ್ಟದಲ್ಲಿ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾಗವಹಿಸಲು ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ರನ್ ವೇಯಲ್ಲಿ ಬೀದಿ ನಾಯಿಗಳ ಓಡಾಟ, ತಪ್ಪಿದ ಭಾರೀ ಅನಾಹುತ

0

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪದ ಘಟನೆ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಟರ್ಮಿನಲ್–2ರ ಹೊಸ ರನ್‌ವೇಯಲ್ಲಿ ಎರಡು ಬೀದಿ ನಾಯಿಗಳು ಓಡಾಡಿರುವುದು ಕೆಲಕಾಲ ಆತಂಕಕ್ಕೆ ಕಾರಣವಾಯಿತು.

ರನ್‌ವೇ ಪ್ರದೇಶದಲ್ಲಿ ನಾಯಿಗಳು ಸುತ್ತಾಡುವುದಷ್ಟೇ ಅಲ್ಲದೆ, ನಿಲ್ಲಿಸಿದ್ದ ವಿಮಾನಗಳ ಬಳಿಗೂ ತೆರಳಿರುವುದು ಕಂಡುಬಂದಿದೆ. ಈ ವೇಳೆ ರನ್‌ವೇಯಲ್ಲಿ ವಿಮಾನಗಳ ಸಂಚಾರ ಇರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.

ಘಟನೆ ಗಮನಿಸಿದ ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಹರಸಾಹಸಪಟ್ಟು ಬೀದಿ ನಾಯಿಗಳನ್ನು ಸೆರೆ ಹಿಡಿದರು. ಈ ಘಟನೆಯಿಂದ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಂಗಡಿ ಬಳಿ ಕುಳಿತಿದ್ದ ವೃದ್ಧನ ಮೇಲೆ ಹರಿದ ಬೊಲೆರೋ ಗೂಡ್ಸ್ ವಾಹನ: ಕಾಲಿಗೆ ಗಂಭೀರ ಗಾಯ

0

ದೊಡ್ಡಬಳ್ಳಾಪುರ: ಅಂಗಡಿ ಬಳಿ ಕುಳಿತಿದ್ದ ವೃದ್ದನ ಮೇಲೆ ಬೊಲೆರೋ ಗೂಡ್ಸ್ ವಾಹನ ಹರಿದು ಕಾಲಿಗೆ ಬಾರೀ ಪೆಟ್ಟಾಗಿರುವ ಘಟನೆ ದೊಡ್ಡಬಳ್ಳಾಪುರದ ಸಕ್ಕರೆ ಗೊಲ್ಲಹಳ್ಳಿ ಬಳಿ ನಡೆದಿದೆ.

ನರಸಹನುಮಯ್ಯ(70) ಅಪಘಾತಕ್ಕೀಡಾದ ವೃದ್ಧನಾಗಿದ್ದು, ಟೀ ಕುಡಿಯಲು ಅಂಗಡಿ ಬಳಿ ಕುಳಿತಿದ್ದ ವೇಳೆ, ವೇಗವಾಗಿ ಬಂದ ಬೊಲೆರೋ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ವೃದ್ಧನಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ನರಸಹನುಮಯ್ಯ ಅವರ ಕಾಲಿಗೆ ಭಾರೀ ಪೆಟ್ಟಾಗಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೈಋತ್ಯ ರೈಲ್ವೆಗೆ 7,748 ಕೋಟಿ ರೂ. ಅನುದಾನ; 2009–14ಕ್ಕಿಂತ 9 ಪಟ್ಟು ಹೆಚ್ಚಳ: ಅಶ್ವಿನಿ ವೈಷ್ಣವ್

0

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ 7,748 ಕೋಟಿ ರೂ. ಅನುದಾನ ನೀಡಲಾಗಿದೆ. ಇದು 2009–14ರ ಅವಧಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚಿನ ಅನುದಾನವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2009–14ರ ಅವಧಿಯಲ್ಲಿ ನೈಋತ್ಯ ರೈಲ್ವೆಗೆ ಕೇವಲ 835 ಕೋಟಿ ರೂ. ಅನುದಾನ ನೀಡಲಾಗಿತ್ತು. 2025–26ರ ಸಾಲಿಗೆ 7,564 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಬಾರಿ ಕಳೆದ ಸಾಲಿನ ಹೋಲಿಕೆಯಲ್ಲಿ ಶೇ. 2.37ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.

ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು–ಚೆನ್ನೈ ಮತ್ತು ಬೆಂಗಳೂರು–ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ಮಹತ್ವದ ಬದಲಾವಣೆ ತರುವ ಯೋಜನೆಗಳಾಗಿವೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಹೆಚ್ಚುವರಿ ಮಹಾಪ್ರಬಂಧಕ (ಎಜಿಎಂ) ಪಿ. ಅನಂತ್ ಅವರು 2026–27ರ ರೈಲ್ವೆ ಬಜೆಟ್‌ನ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.

ಅಕ್ರಮ ಸಂಬಂಧದ ಆರೋಪವೇ ಕೊಲೆಗೆ ಕಾರಣ: ಉತ್ತರ ಕನ್ನಡದಲ್ಲಿ ಗುರೂಜಿ ಸೇರಿ 7 ಜನರ ಬಂಧನ

0

ಉತ್ತರ ಕನ್ನಡ: ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಅಕ್ರಮ ಸಂಬಂಧದ ಆರೋಪದಿಂದ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಗುರುಜಿ ಜೊತೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ನಡೆಸಿದ ಹಲ್ಲೆಯಲ್ಲಿ ವಸಂತ್ ನಾಯ್ಕ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ.

ಪೊಲೀಸ್ ಮಾಹಿತಿಯಂತೆ, ಸುಚಿತ್ರಾ ಎಂಬ ಮಹಿಳೆ ಶಿವಮೊಗ್ಗ ಮೂಲದ ಕಮಲಾಕರ ಭಟ್ ಗುರೂಜಿ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಸುಚಿತ್ರಾ ಪುತ್ರಿಗೆ ತಿಳಿದು, ಆಕೆ ತಂದೆ ಮಹೇಶ್ ನಾಯ್ಕಗೆ ಮಾಹಿತಿ ನೀಡಿದ್ದಾಳೆ. ಬಳಿಕ ಮಹೇಶ್ ನಾಯ್ಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಈ ದೂರುದಿಂದ ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ ಚೌಡಪ್ಪ ನಾಯ್ಕ್ ಹಾಗೂ ಸಹಚರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಮಹೇಶ್ ನಾಯ್ಕ, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರವಾಗಿ ಗಾಯಗೊಂಡರು. ವಸಂತ್ ನಾಯ್ಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಗುರೂಜಿ ಕಮಲಾಕರ ಭಟ್ ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಮತ್ತು ಸಿದ್ದಾಪುರದಲ್ಲಿ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ಸುಚಿತ್ರಾ (ಎ1), ಲೋಕನಾಥ ಚೌಡಪ್ಪ ನಾಯ್ಕ್ (ಎ2), ಇತರ ಸಹಚರರು (ಎ3) ಮತ್ತು ಗುರೂಜಿ ಕಮಲಾಕರ ಭಟ್ (ಎ4) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಅಕ್ರಮ ಸಂಬಂಧ, ಕುಟುಂಬ ಕಲಹ ಮತ್ತು ಪ್ರತೀಕಾರ ಈ ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಗದಗ|ಪೋಡಿ ಮಾಡಲು ಲಂಚ: ಲೋಕಾಯುಕ್ತರಿಂದ ಇಬ್ಬರ ಬಂಧನ

0

ಗದಗ: ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಮಾಡಬೇಕಾದ ಜಮೀನು ಸಂಬಂಧಿತ ಕೆಲಸಕ್ಕೆ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಆರೋಪದಲ್ಲಿ ಗದಗ ಜಿಲ್ಲಾ ಲೋಕಾಯುಕ್ತ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಹರ್ಲಾಪುರ ಗ್ರಾಮದ ನಿವಾಸಿ ಗಣೇಶ ಅಂದಪ್ಪ ಮುಂಡರಗಿ ಅವರು, ಒಂದು ತಿಂಗಳ ಹಿಂದೆ ಹರ್ಲಾಪುರದಲ್ಲಿ 6 ಗುಂಟೆ ಜಮೀನನ್ನು ಖರೀದಿಸಿದ್ದು, ಅದು ಮೂಲ ಮಾಲೀಕರೊಂದಿಗೆ ಜಂಟಿ ಉತಾರವಾಗಿದ್ದು, ಪೋಡಿ ಮಾಡಬೇಕಾದ ಅಗತ್ಯವಿತ್ತು. ಈ ಸಂಬಂಧ ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಗದಗ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಎರಡು ಬಾರಿ ಭೇಟಿ ನೀಡಿದ್ದರು.

ಆದರೆ, ಅಲ್ಲಿ ಅರ್ಜಿ ವಿಚಾರಣೆ ಮಾಡುತ್ತಿದ್ದ ಮೋಜಣಿ ಡಾಟಾ ಎಂಟ್ರಿ ಆಪರೇಟರ್ ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು ಮೊದಲಿಗೆ 3,000 ರೂ ಹಾಗೂ ನಂತರ 2,500 ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಚಿತವಾಗಿ ನಡೆಯಬೇಕಾದ ಸರಕಾರಿ ಕೆಲಸಕ್ಕೆ ಲಂಚ ಕೇಳಿ ಪದೇಪದೇ ಅಲೆದಾಡಿಸಿದ್ದ ಹಿನ್ನೆಲೆಯಲ್ಲಿ ಫಿರ್ಯಾದಿದಾರರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು.

ಈ ದೂರಿನ ಮೇರೆಗೆ, ದಿನಾಂಕ 03-02-2026 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಫಿರ್ಯಾದಿದಾರರು ಕಚೇರಿಗೆ ತೆರಳಿ ತಮ್ಮ ಕೆಲಸದ ಕುರಿತು ವಿಚಾರಿಸಿದಾಗ, ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು 2,500 ರೂ ಹಣ ಕೇಳಿದ್ದು, ಅವರ ಸೂಚನೆಯಂತೆ ಕಚೇರಿಯ ಹೊರಗುತ್ತಿಗೆ ಸಿಬ್ಬಂದಿ ನಾಗೇಶ ಗಣಪ ಬಡಿಗೇರ (ಸಾ: ಹರ್ಲಾಪುರ) ಅವರು ಲಂಚದ ಹಣವನ್ನು ಸ್ವೀಕರಿಸಿದ್ದಾರೆ. ಈ ವೇಳೆ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಈ ಕಾರ್ಯಾಚರಣೆ ಲೋಕಾಯುಕ್ತ ಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ (ಧಾರವಾಡ) ಹಾಗೂ ಡಿವೈಎಸ್ಪಿ ವಿಜಯ ಬಿರಾದಾರ ಅವರ ಮಾರ್ಗದರ್ಶನದಲ್ಲಿ, ಗದಗ ಲೋಕಾಯುಕ್ತ ಠಾಣೆಯ ಇನ್ಸಪೆಕ್ಟರ್ ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಹಸನ್, ಗಾರ್ಗಿ, ಬಾರಡ್ಡಿ, ಡಿಡಗೂರು, ಸಂಗನಾಳ, ಜವಳಿ, ಅಂಬಿಗೇರ, ಹಿರೇಮಠ, ನೈನಾಪುರ ಇದ್ದರು.

ಇದಲ್ಲದೆ, ಯಾವುದೇ ಸರಕಾರಿ ಕಚೇರಿಯಲ್ಲಿ ಸರಕಾರಿ ಕೆಲಸಕ್ಕಾಗಿ ಲಂಚ ಅಥವಾ ಇತರೆ ಅಕ್ರಮ ಬೇಡಿಕೆ ಇಟ್ಟಲ್ಲಿ, ಸಾರ್ವಜನಿಕರು ಧೈರ್ಯವಾಗಿ ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡುವಂತೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.

error: Content is protected !!