Home Blog Page 232

ರಾಜಕೀಯದಿಂದಲ್ಲ, ಚುನಾವಣೆಯಿಂದ ನಿವೃತ್ತಿ: ಸ್ಪರ್ಧಿಸದಿರಲು ಮೂರು ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

0

ಮಂಡ್ಯ: 2028ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ನಿರ್ಧಾರದ ಹಿಂದಿನ ಮೂರು ಪ್ರಮುಖ ಕಾರಣಗಳನ್ನು ಸ್ವತಃ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ರಾಜಕೀಯ ಕಲುಷಿತಗೊಂಡಿರುವುದು, ವಯಸ್ಸಿನ ಕಾರಣದಿಂದ ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗದಿರುವುದು ಹಾಗೂ ಹಣದ ಪ್ರಭಾವ ಹೆಚ್ಚಾಗಿರುವ ಚುನಾವಣೆಗಳೇ ಈ ತೀರ್ಮಾನದ ಪ್ರಮುಖ ಕಾರಣಗಳೆಂದು ಅವರು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಕೆ.ಆರ್.ಪೇಟೆ ಕೃಷ್ಣ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಸಿದ್ದರಾಮಯ್ಯ, ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರದ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

“2028ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದು ಜನರ ಕಷ್ಟ–ಸುಖಗಳಿಗೆ ಧ್ವನಿಯಾಗಿರುತ್ತೇನೆ. ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವಂತೆ ವರುಣ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಆದರೂ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇನೆ. ಈ ಹಿಂದೆ ಜನರೇ ನಮ್ಮನ್ನು ದುಡ್ಡು ಖರ್ಚು ಮಾಡಿ ಗೆಲ್ಲಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ವಯಸ್ಸು ಕೂಡ ತಮ್ಮ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಹೇಳಿರುವ ಸಿದ್ದರಾಮಯ್ಯ, “ಈಗ ನನಗೆ 79 ವರ್ಷ. ಸರ್ಕಾರದ ಅವಧಿ ಮುಗಿಯುವ ವೇಳೆಗೆ 81–82 ವರ್ಷವಾಗಿರುತ್ತದೆ. ಆಗ ಹಿಂದಿನಂತೆ ಆರೋಗ್ಯ ಹಾಗೂ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. 2028ಕ್ಕೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿವೆ. 1978ರಲ್ಲಿ ತಾಲೂಕು ಮಂಡಳಿ ಸದಸ್ಯನಾಗಿ ಆರಂಭವಾದ ನನ್ನ ರಾಜಕೀಯ ಪಯಣದಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ನನ್ನ ಸಿದ್ಧಾಂತಗಳಿಗೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ” ಎಂದು ಹೇಳಿದ್ದಾರೆ.

ಇಂದಿನ ರಾಜಕೀಯದಲ್ಲಿ ಹಣದ ಪ್ರಭಾವ ಹೆಚ್ಚಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. “ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅಭ್ಯರ್ಥಿಗಳೇ ಮತದಾರರಿಗೆ ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ. ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲಿಲ್ಲದಂತಾಗಿದೆ. ಇದೇ ಕಾರಣದಿಂದ ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಐದು ದಶಕಗಳ ಕಾಲ ರಾಜ್ಯದ ಜನರು ನನ್ನನ್ನು ತಮ್ಮ ಮನೆಯವನಂತೆ ಪ್ರೀತಿಸಿದ್ದಾರೆ. ಆ ಋಣ ತೀರಿಸಲು ಮುಂದಿನ ಜೀವನವನ್ನೂ ಜನಸೇವೆಗೆ ಮೀಸಲಿಡುತ್ತೇನೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ವಿವಾದಾತ್ಮಕ ಪೋಸ್ಟರ್‌: ಉಮರ್ ಖಾಲಿದ್ ಪರ ಘೋಷಣೆ ಪ್ರದರ್ಶಿಸಿದ ಯುವತಿ ವಿರುದ್ಧ ಕೇಸ್‌

ಬೆಂಗಳೂರು: 2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪರ ಪೋಸ್ಟರ್‌ ಪ್ರದರ್ಶಿಸಿದ್ದ ಯುವತಿ ವಿರುದ್ಧ ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ‘ಗಲಭೆ ಉದ್ದೇಶದಿಂದ ಪ್ರಚೋದನೆ’ ಆರೋಪದಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಯುವತಿ, ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಪರ ಘೋಷಣೆಗಳಿದ್ದ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಳು. ಅಲ್ಲದೆ, ‘Ukhad Le BLR Police’ ಎಂಬ ಬರಹವಿದ್ದ ಪೋಸ್ಟರ್‌ ಹಿಡಿದು ಬೆಂಗಳೂರು ಪೊಲೀಸರ ವಿರುದ್ಧವೂ ಆಕ್ಷೇಪಾರ್ಹ ಸಂದೇಶ ಪ್ರದರ್ಶಿಸಿದ್ದಳು.

ಪೋಸ್ಟರ್‌ಗಳು ಪೊಲೀಸರ ಗಮನಕ್ಕೆ ಬಂದ ತಕ್ಷಣ ಪರಿಸ್ಥಿತಿ ಉದ್ವಿಗ್ನವಾಗದಂತೆ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡರು. ಸ್ಥಳದಲ್ಲಿದ್ದ ಇತರ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು ಕೂಡ ಯುವತಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ಆಕೆಯನ್ನು ಪ್ರತಿಭಟನಾ ಸ್ಥಳದಿಂದ ಹೊರ ಕಳುಹಿಸಿದರು.

ಘಟನೆಗೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೋಸ್ಟರ್‌ಗಳ ಉದ್ದೇಶ, ಹಿನ್ನೆಲೆ ಹಾಗೂ ಇತರೆ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಆನೇಕಲ್‌ನಲ್ಲಿ ಭಾರೀ ಅಗ್ನಿ ಅವಘಡ: ಪಾರ್ಕಿಂಗ್ ಲಾಟ್‌ನಲ್ಲಿ ನಿಂತಿದ್ದ ನಾಲ್ಕು ಖಾಸಗಿ ಬಸ್‌ಗಳು ಭಸ್ಮ

ಬೆಂಗಳೂರು: ಆನೇಕಲ್ ತಾಲೂಕಿನ ಹಳೆ ಚಂದಾಪುರ ಸಮೀಪದ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಖಾಸಗಿ ಬಸ್‌ಗಳು ಏಕಾಏಕಿ ಬೆಂಕಿಗಾಹುತಿಯಾಗಿರುವ ಘಟನೆ ಶನಿವಾರ ನಡೆದಿದೆ. ಒಂದೇ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಉಳಿದ ಮೂರು ಬಸ್‌ಗಳಿಗೂ ವ್ಯಾಪಿಸಿ ನಾಲ್ಕೂ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಗ್ನಿ ಅವಘಡದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೊದಲಿಗೆ ಒಂದು ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಇತರ ಬಸ್‌ಗಳಿಗೂ ಹರಡಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ನಾಲ್ಕೂ ಬಸ್‌ಗಳು ಸಂಪೂರ್ಣ ಸುಟ್ಟು ಭಾರೀ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದೆ.

ಬಸ್‌ಗಳ ಮಾಲೀಕರ ವಿವರ ಇನ್ನೂ ಬಹಿರಂಗವಾಗಿಲ್ಲ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ತಾಂತ್ರಿಕ ದೋಷವೋ ಅಥವಾ ಬೇರೆ ಕಾರಣವೋ ಎಂಬ ಕುರಿತು ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ತನಿಖೆ ಮುಂದುವರಿಸಿದ್ದಾರೆ.

ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ ಆರೋಪ! ಬೆಳ್ಳಂದೂರಿನ ವೈದ್ಯ ಬಂಧನ

ಬೆಂಗಳೂರು: ಬಾಂಗ್ಲಾದೇಶಿ ಮೂಲದ ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬೆಂಗಳೂರಿನ ಬೆಳ್ಳಂದೂರಿನ ಸ್ಥಳೀಯ ವೈದ್ಯ ಡಾ. ನಾಗೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಯ ಪೌರತ್ವ ಪ್ರಶ್ನಿಸಿ ಜಗಳ ಆರಂಭಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ ಅವರಿಗೆ ಜಾಮೀನು ಮಂಜೂರಾಗಿದೆ.

ಬೆಳ್ಳಂದೂರು ವ್ಯಾಪ್ತಿಯ ಸಾಯಿ ಕ್ಲಿನಿಕ್‌ನ ವೈದ್ಯರಾಗಿರುವ ಡಾ. ನಾಗೇಂದ್ರ ವಿರುದ್ಧ ನಸ್ರೀನಾ ಬಿಲಾಲ್ (23) ದೂರು ದಾಖಲಿಸಿದ್ದಾರೆ. ವೈಟ್‌ಫೀಲ್ಡ್ ಸಮೀಪದ ಬೆಟ್ಟದಾಸಪುರದಲ್ಲಿ ವಾಸಿಸುತ್ತಿರುವ ನಸ್ರೀನಾ ಬಿಲಾಲ್ ಹಾಗೂ ಅವರ ಪತಿ ಮಹಮ್ಮದ್ ಬಿಲಾಲ್ ಬಾಂಗ್ಲಾದೇಶ ಮೂಲದವರಾಗಿದ್ದಾರೆ.

ದೂರಿನ ಪ್ರಕಾರ, ದಂಪತಿಯ ಪೌರತ್ವವನ್ನು ಪ್ರಶ್ನಿಸಿ ವೈದ್ಯ ನಾಗೇಂದ್ರ ವಾಗ್ವಾದ ಆರಂಭಿಸಿದ್ದು, ಮಾತಿನ ಚಕಮಕಿಯ ವೇಳೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಡಾ. ನಾಗೇಂದ್ರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ಬಳಿಕ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ತನಿಖಾಧಿಕಾರಿಗಳು, ಪ್ರದೇಶದಲ್ಲಿ ಅಕ್ರಮ ವಲಸಿಗರ ಬಗ್ಗೆ ಉಂಟಾದ ಭಾವೋದ್ವೇಗದಿಂದ ವೈದ್ಯರು ಈ ರೀತಿ ವರ್ತಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆದರೆ ಯಾರ ಮೇಲಾದರೂ ಹಲ್ಲೆ ನಡೆಸುವುದು ಕಾನೂನುಬಾಹಿರವಾಗಿದ್ದು, ಅನುಮಾನ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು, ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ದೂರು ನೀಡಿರುವ ದಂಪತಿಯ ದಾಖಲೆಗಳು ಹಾಗೂ ಅವರ ಹಿನ್ನೆಲೆಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಸಮಾಜ ಸೇವೆಯ ಮುಖವಾಡದ ಹಿಂದೆ ಡ್ರಗ್ಸ್ ಜಾಲ? ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾಗೆ ಸಿಸಿಬಿ ಹುಡುಕಾಟ

0

ಮಂಗಳೂರು: ಸಮಾಜ ಸೇವೆಯ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ‘ಹೀರೋ’ ಎಂಬ ಇಮೇಜ್ ಕಟ್ಟಿಕೊಂಡಿದ್ದ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ (Jaleel Baba) ವಿರುದ್ಧ ಭಾರೀ ಡ್ರಗ್ಸ್ ಜಾಲದ ಆರೋಪ ಕೇಳಿಬಂದಿದೆ. ₹5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಆರೋಪಿ ಆಂಬುಲೆನ್ಸ್ ಸಮೇತ ಪರಾರಿಯಾಗಿದ್ದು, ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಬೆಳ್ತಂಗಡಿ ಭಾಗದಲ್ಲಿ ಆಂಬುಲೆನ್ಸ್ ಸೇವೆಯ ಮೂಲಕ ಸಮಾಜ ಸೇವಕನಂತೆ ಗುರುತಿಸಿಕೊಂಡಿದ್ದ ಜಲೀಲ್ ಬಾಬಾ, ಅದೇ ಆಂಬುಲೆನ್ಸ್‌ನ್ನು ಮಾದಕ ವಸ್ತು ಸಾಗಾಣಿಕೆಗೆ ಬಳಸುತ್ತಿದ್ದ ಎನ್ನುವ ಗಂಭೀರ ಆರೋಪ ತನಿಖೆಯಲ್ಲಿ ಹೊರಬಿದ್ದಿದೆ.

ಇತ್ತೀಚೆಗೆ ಮಂಗಳೂರು ಪೊಲೀಸರು ಬಾಗಲಕೋಟೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ₹5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಈ ಡ್ರಗ್ಸ್ ಜಾಲದಲ್ಲಿ ಜಲೀಲ್ ಬಾಬಾ ಹೆಸರು ಬಹಿರಂಗವಾಗಿದೆ.

ಪ್ರಕರಣದಲ್ಲಿ ಮೂವರು ಬಂಧನವಾಗುತ್ತಿದ್ದಂತೆಯೇ ಜಲೀಲ್ ಬಾಬಾ ಆಂಬುಲೆನ್ಸ್ ಸಮೇತ ನಾಪತ್ತೆಯಾಗಿದ್ದು, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಆತನ ಸುಳಿವು ಪತ್ತೆಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಸ್ತುತ ಸಿಸಿಬಿ ಪೊಲೀಸರು ಜಲೀಲ್ ಬಾಬಾ ಪತ್ತೆಗೆ ಬಲೆ ಬೀಸಿದ್ದು, ಡ್ರಗ್ಸ್ ಜಾಲದ ಸಂಪರ್ಕಗಳ ಬಗ್ಗೆಯೂ ತೀವ್ರ ತನಿಖೆ ಮುಂದುವರಿಸಿದ್ದಾರೆ.

ಜಮಖಂಡಿ ಕಾರು ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್! ‘ಇದು ಬಾಂಬ್ ಬ್ಲಾಸ್ಟ್ ಅಲ್ಲ’ ಎಂದ ಎಸ್‌ಪಿ

0

ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇದು ಬಾಂಬ್ ಸ್ಫೋಟವಲ್ಲ, ಕಾರಿನ ತಾಂತ್ರಿಕ ದೋಷ ಅಥವಾ ಬ್ಯಾಟರಿ ಸಮಸ್ಯೆಯಿಂದ ಸಂಭವಿಸಿರಬಹುದಾದ ಘಟನೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಂಭವಿಸಿದ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಸ್ಫೋಟ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಪಿ ಸಿದ್ಧಾರ್ಥ ಗೋಯಲ್, ಸದ್ಯದ ತನಿಖೆಯಲ್ಲಿ ಯಾವುದೇ ಸ್ಫೋಟಕ ಬಳಸಿರುವ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು, ಕಾರಿನೊಳಗೆ ಬಾಂಬ್ ಇರಿಸಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ. ಕಾರಿನ ಬ್ಯಾಟರಿ ಅಥವಾ ಇತರ ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿರಬಹುದೇ ಎಂಬ ನಿಟ್ಟಿನಲ್ಲಿ ತಜ್ಞರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸ್ಫೋಟದ ತೀವ್ರತೆ ಸುಮಾರು 50ರಿಂದ 60 ಮೀಟರ್ ವ್ಯಾಪ್ತಿಯಷ್ಟೇ ಕಂಡುಬಂದಿದೆ. ಬಾಂಬ್ ಸ್ಫೋಟವಾಗಿದ್ದರೆ ಹಾನಿಯ ಪ್ರಮಾಣ ಮತ್ತಷ್ಟು ಭೀಕರವಾಗಿರುತ್ತಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.

ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಒಬ್ಬ ವ್ಯಕ್ತಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ತಾಂತ್ರಿಕ ಪರಿಶೀಲನೆ ಮತ್ತು ತಜ್ಞರ ಅಂತಿಮ ವರದಿ ಬಂದ ಬಳಿಕವೇ ಸ್ಫೋಟಕ್ಕೆ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ (ಜು. 25) ರಾತ್ರಿ ಸುಮಾರು 10.45ಕ್ಕೆ ಹಿಪ್ಪರಗಿ ಗ್ರಾಮದ ಯುವರಾಜ ವೈನ್ ಶಾಪ್ ಎದುರು ನಿಲ್ಲಿಸಿದ್ದ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಏಕಾಏಕಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದ್ದು, ಅದರ ಬಿಡಿಭಾಗಗಳು ಸುತ್ತಮುತ್ತ ಚದುರಿಬಿದ್ದಿದ್ದವು.

ಈ ಕಾರು ಎಂ.ಜಿ. ತೋರಗಲ್ ಅವರ ಹೆಸರಿನಲ್ಲಿದ್ದು, ವೈನ್ ಶಾಪ್ ಮ್ಯಾನೇಜರ್ ಹನುಮಂತ ಸಂಗೊಂಡ ಬಳಸುತ್ತಿದ್ದರು. ಹೊಸ ಕಾರಾಗಿದ್ದ ಕಾರಣ ಯಾರೋ ಬಾಂಬ್ ಇರಿಸಿರಬಹುದೆಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಆ ಅನುಮಾನಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.

ಕೇಂದ್ರ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಹ್ಲಾದ್‌ ಜೋಶಿ

0

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಉಂಟಾದ ಬೆಳವಣಿಗೆಗಳ ಬಳಿಕ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿದೆ.

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ ಬಳಿಕ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶಿಫಾರಸಿನ ಮೇರೆಗೆ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ರಾಷ್ಟ್ರಪತಿ ಭವನ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿತ್ತು.

ಅದರಂತೆ ಭಾನುವಾರ (ಜು. 26) ಪ್ರಹ್ಲಾದ್ ಜೋಶಿ ಅವರು ಕೇಂದ್ರ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಸದ್ಯ ಅವರು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದು, ಇನ್ನುಮುಂದೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆಯನ್ನೂ ನಿಭಾಯಿಸಲಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿತ್ತು. ಈ ಬೆಳವಣಿಗೆಗಳ ನಡುವೆ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯಕ್ಕೆ ಹೊಸ ಆಡಳಿತಾತ್ಮಕ ವ್ಯವಸ್ಥೆ ಕಲ್ಪಿಸಿದೆ.

2028ಕ್ಕೆ ಸ್ಪರ್ಧೆ ಇಲ್ಲ! ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ

0

ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡುವ ಮೂಲಕ ಐದು ದಶಕಗಳ ಸುದೀರ್ಘ ರಾಜಕೀಯ ಪಯಣಕ್ಕೆ ಚುನಾವಣಾ ಮಟ್ಟದಲ್ಲಿ ತೆರೆ ಎಳೆಯುವ ಸಂದೇಶ ರವಾನಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ದಿ. ಕೆ. ಆರ್. ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಭಿಮಾನಿಗಳು ಇನ್ನೂ 10 ವರ್ಷಗಳ ಕಾಲ ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿರಬೇಕು ಎಂದು ಮನವಿ ಮಾಡಿದರೂ, ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದಾರೆ.

ಇದಕ್ಕೂ ಮೊದಲು ಮೇ 28ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ರಾಹುಲ್ ಗಾಂಧಿ ಅವರ ಸಂದೇಶಕ್ಕೆ ಗೌರವ ನೀಡಿ ಅಧಿಕಾರ ತ್ಯಜಿಸಿದ್ದರು. ಅದರೊಂದಿಗೆ ಅವರ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಅಂತ್ಯಗೊಂಡಿತ್ತು.

ಮೈಸೂರು ಭಾಗದ ರಾಜಕೀಯ ನೆಲೆಯಿಂದ ಹೊರಹೊಮ್ಮಿದ ಸಿದ್ದರಾಮಯ್ಯ, ಹೋರಾಟದ ರಾಜಕಾರಣದ ಮೂಲಕ ರಾಜ್ಯದ ಪ್ರಮುಖ ನಾಯಕರಾಗಿ ಬೆಳೆದವರು. ಹಿಂದುಳಿದ ವರ್ಗಗಳ ರಾಜಕೀಯ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಪ್ರತೀಕವಾಗಿ ಅವರು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ.

ದೇವರಾಜ ಅರಸು ರೂಪಿಸಿದ್ದ ಸಾಮಾಜಿಕ ಸಮೀಕರಣದ ರಾಜಕಾರಣವನ್ನು ಮತ್ತಷ್ಟು ಬಲಪಡಿಸಿ, ಅದನ್ನು ಸಾಮಾಜಿಕ ನ್ಯಾಯದ ಚಳವಳಿಯನ್ನಾಗಿ ರೂಪಿಸಿದ ನಾಯಕರಲ್ಲಿ ಸಿದ್ದರಾಮಯ್ಯ ಪ್ರಮುಖರು. ಅಧಿಕಾರಕ್ಕಿಂತ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಿದ ನಾಯಕ ಎಂಬ ಹೆಗ್ಗಳಿಕೆಯನ್ನು ಅವರು ಸಂಪಾದಿಸಿದ್ದಾರೆ.

2028ರ ಚುನಾವಣೆಗೆ ಸ್ಪರ್ಧಿಸದಿರುವ ಅವರ ಘೋಷಣೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಭಾವುಕ ವಾತಾವರಣ ಸೃಷ್ಟಿಸಿದ್ದು, ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಗ್ರಾಹಕರ ಜೇಬಿಗೆ ಮತ್ತೊಂದು ಹೊರೆ? ಬೇಕರಿ ಉತ್ಪನ್ನಗಳ ಬೆಲೆ ಶೀಘ್ರದಲ್ಲೇ ಏರಿಕೆ!

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಇದೀಗ ಬೇಕರಿ ಉದ್ಯಮದ ಮೇಲೂ ಬಿದ್ದಿದೆ.

ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳು, ಅಡುಗೆ ಎಣ್ಣೆ, ಮೈದಾ, ಸಕ್ಕರೆ ಸೇರಿದಂತೆ ಬೇಕರಿ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಹೆಚ್ಚಳವಾಗಿದೆ.

ಇದರ ಜೊತೆಗೆ ವಿದ್ಯುತ್ ದರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ವೆಚ್ಚ, ಕಾರ್ಮಿಕರ ವೇತನ, ಸಾರಿಗೆ ಹಾಗೂ ಅಂಗಡಿ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಬೇಕರಿ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಳೆಯ ದರದಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲಾಭವಿರಲಿ, ಮೂಲ ವೆಚ್ಚ ಭರಿಸುವುದೂ ಕಷ್ಟವಾಗುತ್ತಿದೆ ಎಂದು ಬೇಕರಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಉತ್ಪನ್ನಗಳ ದರ ಹೆಚ್ಚಳದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ವಿಶೇಷವಾಗಿ ತುಪ್ಪ ಬಳಸಿ ತಯಾರಿಸುವ ಮೈಸೂರು ಪಾಕ್, ತುಪ್ಪದ ಲಡ್ಡು, ಬಾದೂಷಾ, ಕಾಜು ಸ್ವೀಟ್ಸ್, ಡ್ರೈಫ್ರೂಟ್ ಐಟಂಗಳು ಹಾಗೂ ಪ್ರೀಮಿಯಂ ಕೇಕ್‌ಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಗುಣಮಟ್ಟದ ತುಪ್ಪ ಬಳಸುವ ಬೇಕರಿಗಳಿಗೆ ಇದರ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಬೇಕರಿ ಮಾಲೀಕರು ತಿಳಿಸಿದ್ದಾರೆ. ಕೋವಿಡ್ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಬೇಕರಿ ಉದ್ಯಮಕ್ಕೆ ಇದೀಗ ಕಚ್ಚಾ ವಸ್ತುಗಳ ದರ ಏರಿಕೆ ಮತ್ತೊಂದು ಹೊಡೆತ ನೀಡಿದೆ.

ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದ ಹಲವು ಬೇಕರಿಗಳು ಇದುವರೆಗೆ ದರ ಹೆಚ್ಚಳ ಮಾಡದೆ ನಷ್ಟದಲ್ಲೇ ವ್ಯಾಪಾರ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಅಸೋಸಿಯೇಷನ್ ಶೀಘ್ರದಲ್ಲೇ ಸಭೆ ನಡೆಸಿ ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಭೆಯಲ್ಲಿ ಜಿಲ್ಲಾ ಬೇಕರಿ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳೊಂದಿಗೆ ಚರ್ಚಿಸಿ ಹೊಸ ದರ ನಿಗದಿ ಮಾಡುವ ನಿರೀಕ್ಷೆಯಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೇಕರಿ ಉತ್ಪನ್ನಗಳ ಬೆಲೆಯಲ್ಲಿ ಪ್ರತಿ ವಸ್ತುವಿಗೆ ₹3 ರಿಂದ ₹5ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ದರ ಏರಿಕೆ ಜಾರಿಯಾದರೆ ಪ್ರೀಮಿಯಂ ಸ್ವೀಟ್ಸ್ ಹಾಗೂ ತುಪ್ಪ ಆಧಾರಿತ ಉತ್ಪನ್ನಗಳ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದರ ಪರಿಣಾಮ ಸಾಮಾನ್ಯ ಗ್ರಾಹಕರ ಜೇಬಿನ ಮೇಲೂ ಬೀಳಲಿದೆ.

 

Gold Rate Today: ವಾರಾಂತ್ಯದಲ್ಲಿ ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆಯೂ ಹೆಚ್ಚಳ!

ನವದೆಹಲಿ: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಶುಕ್ರವಾರ ಒಂದೇ ದಿನ ₹270 ಕುಸಿದಿದ್ದ ಚಿನ್ನದ ದರ, ವಾರಾಂತ್ಯದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳಿದೆ.

ಇಂದು ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹55 ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ 100 ಗ್ರಾಂಗೆ ₹5 ಹೆಚ್ಚಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,493 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,285 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,870 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ 

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,493 ರೂ
    • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,285 ರೂ
    • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ.