Home Blog Page 235

IPL ವಿವಾದ ನಡುವೆಯೇ BCCI ಅಚ್ಚರಿ ನಿರ್ಧಾರ: 6 ಪಂದ್ಯಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ

0

ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್‌ಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿರುವ ನಡುವೆಯೇ, ಬಿಸಿಸಿಐ (BCCI) ಅಚ್ಚರಿಯ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತ ತಂಡವು ಏಕದಿನ ಹಾಗೂ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.

ಈ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇಂದು ಅಧಿಕೃತವಾಗಿ ಪ್ರಕಟಿಸಿದೆ. ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿರುವುದನ್ನು ಗಮನಿಸಿ ಪ್ರವಾಸಕ್ಕೆ ಮರುಅನುಮೋದನೆ ನೀಡಲಾಗಿದೆ.

ವೇಳಾಪಟ್ಟಿಯ ಪ್ರಕಾರ, ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯೊಂದಿಗೆ ಆರಂಭವಾಗಿ ಟಿ20 ಸರಣಿಯೊಂದಿಗೆ ಅಂತ್ಯಗೊಳ್ಳಲಿದೆ. ಉಭಯ ತಂಡಗಳು ಸೆಪ್ಟೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಲಿವೆ.

ಸರಣಿ ವೇಳಾಪಟ್ಟಿ

ಏಕದಿನ ಸರಣಿ:
▪️ ಮೊದಲ ಪಂದ್ಯ – ಸೆಪ್ಟೆಂಬರ್ 1
▪️ ಎರಡನೇ ಪಂದ್ಯ – ಸೆಪ್ಟೆಂಬರ್ 3
▪️ ಮೂರನೇ ಪಂದ್ಯ – ಸೆಪ್ಟೆಂಬರ್ 6

ಟಿ20 ಸರಣಿ:
▪️ ಮೊದಲ ಪಂದ್ಯ – ಸೆಪ್ಟೆಂಬರ್ 9
▪️ ಎರಡನೇ ಪಂದ್ಯ – ಸೆಪ್ಟೆಂಬರ್ 12
▪️ ಮೂರನೇ ಪಂದ್ಯ – ಸೆಪ್ಟೆಂಬರ್ 13

ಭಾರತ ತಂಡವು ಕೊನೆಯ ಬಾರಿ 2022–23ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು. ಆ ವೇಳೆ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೂ, ಬಾಂಗ್ಲಾದೇಶ ನೆಲದಲ್ಲಿ ಭಾರತ ಉತ್ತಮ ದಾಖಲೆಯನ್ನು ಹೊಂದಿದ್ದು, 25 ಪಂದ್ಯಗಳಲ್ಲಿ 18 ಗೆಲುವು ಸಾಧಿಸಿದೆ.

ಕೊಲೆ ಪ್ರಕರಣ ದಾಖಲಿಸಿ ಶಾಸಕರನ್ನು ಕೂಡಲೇ ಬಂಧಿಸಿ: ಆರ್.ಅಶೋಕ್ ಒತ್ತಾಯ

0

ಬೆಂಗಳೂರು: ಬಳ್ಳಾರಿಯಲ್ಲಿ ಗುಂಡು ಹಾರಿಸಿ ಒಬ್ಬರು ಮೃತಪಟ್ಟ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ಆ ಶಾಸಕರನ್ನು ಕೂಡಲೇ ಬಂಧಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಮಧ್ಯಾಹ್ನ ನೃಪತುಂಗ ರಸ್ತೆಯಲ್ಲಿರುವ ಪೆÇಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದರು. ಬಳಿಕ ಆರ್. ಅಶೋಕ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಗೊತ್ತಿಲ್ಲದೇ ಗುಂಡು ಹಾರಿದೆ; ಗೊತ್ತಿಲ್ಲದೇ ಸತ್ತಿದ್ದಾರೆ ಎಂದು ನಾಳೆ ಹೇಳಬಹುದು ಎಂದು ತಿಳಿಸಿದರು. ಇವರು ನಾಳೆ ಏನು ಹೇಳಬಹುದೆಂದು ಇವತ್ತೇ ಹೇಳಿದ್ದೇನೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು.
ಅವರು ಜನಾರ್ದನ ರೆಡ್ಡಿ ಮನೆ ಕಾಂಪೌಂಡಿಗೆ ಹೋಗಿ ಹೇಗೆ ಬ್ಯಾನರ್ ಕಟ್ಟಿದರು? ನಾವು ಪೊಲೀಸ್ ದೂರು ಕೊಟ್ಟಿದ್ದೇವೆ. ಆದರೂ ಎಫ್‍ಐಆರ್ ಆಗಿಲ್ಲ. ಅವರು ಕೊಟ್ಟ ದೂರಿಗೆ ಸಂಬಂಧಿಸಿ ಪಟಾಪಟ್ ಎಫ್‍ಐಆರ್ ಮಾಡಿದ್ದಾರೆ ಎಂದು ಟೀಕಿಸಿದರು.

ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಈ ನಿಯೋಗದಲ್ಲಿ ವಿಧಾನ ಪರಿಷತ್ತಿನ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕರಾದ ಸಿ.ಸಿ. ಪಾಟೀಲ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ತಿನ ಸದಸ್ಯ ಕೇಶವ ಪ್ರಸಾದ್, ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಸಪ್ತಗಿರಿ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಉಪಸ್ಥಿತರಿದ್ದರು

ಗೋವಾದಲ್ಲಿ ದುಡಿದ ಹಣದಲ್ಲಿ ಬೆಳೆದಿದ್ದ ಮೆಕ್ಕೆಜೋಳ ದುಷ್ಕರ್ಮಿಗಳ ಕೃತ್ಯಕ್ಕೆ ಭಸ್ಮ! ಮುಂಡರಗಿ ತಾಲೂಕಿನಲ್ಲಿ ಮನಕಲಕುವ ಘಟನೆ..!

0

ಗದಗ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ರೈತ ಕುಟುಂಬದ ಬದುಕು ಬೆಂಕಿಗೆ ಆಹುತಿಯಾದ ಮನಕಲಕುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಡಿಸೇಲ್ ಮತ್ತು ಪೆಟ್ರೋಲ್ ಸುರಿದು ಮೆಕ್ಕೆಜೋಳಕ್ಕೆ ರಾಶಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 60 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಅತ್ತಿಕಟ್ಟಿ ಗ್ರಾಮದ ಗಣೇಶ ಮತ್ತು ಗೋಪಿ ಚವ್ಹಾಣ ಸಹೋದರರು ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಗ್ರಾಮ ಹೊರವಲಯದಲ್ಲಿ ರಾಶಿ ಮಾಡಿ ಇಟ್ಟಿದ್ದರು. ಆದರೆ ರಾತ್ರೋರಾತ್ರಿ ನಾಲ್ವರು ದುಷ್ಕರ್ಮಿಗಳು ಬಂದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ, ಅಷ್ಟರಲ್ಲಿ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಗೆ ಆಹುತಿಯಾದ ಬೆಳೆ ನೋಡಿದ ರೈತ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಮಕ್ಕಳ ಸಮೇತ ಮೆಕ್ಕೆಜೋಳದ ರಾಶಿಯಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ತಕ್ಷಣವೇ ರೈತ ಕುಟುಂಬವನ್ನು ರಕ್ಷಿಸಿದ್ದಾರೆ.

ಸುಮಾರು 25 ರಿಂದ 30 ಲಕ್ಷ ರೂ. ಸಾಲ ಮಾಡಿಕೊಂಡು, ಗೋವಾದಲ್ಲಿ ದುಡಿದು ಹಣ ಸಂಗ್ರಹಿಸಿ ಈ ಬೆಳೆ ಬೆಳೆದಿದ್ದ ಸಹೋದರರ ಕನಸುಗಳು ಕ್ಷಣಾರ್ಧದಲ್ಲಿ ಭಸ್ಮವಾಗಿವೆ. ಘಟನೆಗೆ ಗ್ರಾಮಸ್ಥರು ಕಣ್ಣೀರಿಟ್ಟಿದ್ದು, ದುಷ್ಕರ್ಮಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ ಎರ್ರೀಸ್ವಾಮಿ ಹಾಗೂ ಪೊಲೀಸರು ಹಾಗೂ SOCO ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ದಡ ಸೇರಿಸಿದ ಅಂಬಿಗನನ್ನೇ ಮರೆತ ರಶ್ಮಿಕಾ? 9 ವರ್ಷಗಳ ಸಂಭ್ರಮದಲ್ಲಿ ‘ಕಿರಿಕ್ ಪಾರ್ಟಿ’ಗೂ ಜಾಗ ಇಲ್ಲ!

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕೆಲವೇ ದಿನಗಳಲ್ಲಿ ಸ್ಟಾರ್ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಸಿನಿ ಬದುಕಿಗೆ 9 ವರ್ಷಗಳು ಪೂರೈಸಿದ್ದಾರೆ. ಈ ಸಾಧನೆಯನ್ನು ಸಂಭ್ರಮಿಸುತ್ತಾ ಅವರು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಆ ಪತ್ರವೇ ಈಗ ವಿವಾದಕ್ಕೆ ಕಾರಣವಾಗಿದೆ.

ಒಂಭತ್ತು ವರ್ಷಗಳ ಸಿನಿ ಪಯಣದಲ್ಲಿ 26 ಸಿನಿಮಾಗಳಲ್ಲಿ ನಟಿಸಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ತಮ್ಮ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ಎಂಬ ಹೆಸರನ್ನೇ ಅವರು ಉಲ್ಲೇಖಿಸಿಲ್ಲ. ಅವಕಾಶ ಕೊಟ್ಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರನ್ನೂ ನೆನೆಸದೆ ಹೋದದ್ದು ಕನ್ನಡ ಸಿನಿ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.

ರಶ್ಮಿಕಾರ ಈ ವರಸೆ ಹೊಸದಲ್ಲ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಆದರೂ ಈ ವಿಶೇಷ ಸಂದರ್ಭದಲ್ಲಾದರೂ ಹತ್ತಿದ ಏಣಿಯನ್ನು ನೆನೆಯಬಹುದಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ದಡ ಸೇರಿಸಿದ ಅಂಬಿಗನನ್ನೇ ಮರೆತಂತೆ ಮೊದಲ ಚಿತ್ರದ ನೆನಪಿಲ್ಲದಿರುವುದು ಮತ್ತೆ ಟೀಕೆಗೆ ದಾರಿ ಮಾಡಿಕೊಟ್ಟಿದೆ.

ಈ ನಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಭಿಮಾನಿಗಳು ರಶ್ಮಿಕಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, “ಕನ್ನಡದಿಂದ ಬೆಳೆದು ಹೊರಗಿನ ಭಾಷೆಗಳಲ್ಲಿ ಹೆಸರು ಮಾಡಿದ ಬಳಿಕ ಕನ್ನಡವನ್ನೇ ಮರೆತಿದ್ದಾರೆ” ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. 9 ವರ್ಷದ ಸಂಭ್ರಮವೇ ಇದೀಗ ರಶ್ಮಿಕಾಗೆ ಮುಜುಗರವಾಗಿ ಪರಿಣಮಿಸಿದೆ.

ಮದುವೆ ಸಂಭ್ರಮದ ನಡುವೆ ಬಿಗ್ ನ್ಯೂಸ್: ವಿಜಯ್–ರಶ್ಮಿಕಾ ಸಿನಿಮಾ ಹಿಂದಿಗೆ ರಿಮೇಕ್

ಸೌತ್ ಸಿನಿರಂಗದ ಫೇವರಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದ ಸಿನಿಮಾ ಇದೀಗ ಬಾಲಿವುಡ್‌ನಲ್ಲಿ ಮರುಹುಟ್ಟು ಪಡೆಯಲು ಸಜ್ಜಾಗಿದೆ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕರಣ್ ಜೋಹರ್ ಈ ಚಿತ್ರವನ್ನು ಹಿಂದಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಆರು ವರ್ಷಗಳ ಬಳಿಕ ಈ ರಿಮೇಕ್ ಪ್ರಕ್ರಿಯೆ ಆರಂಭವಾಗಿದೆ.

‘ಗೀತಾ ಗೋವಿಂದಂ’ ಚಿತ್ರದ ಭರ್ಜರಿ ಯಶಸ್ಸಿನಿಂದ ವಿಜಯ್–ರಶ್ಮಿಕಾ ಜೋಡಿ ಸೌತ್ ಇಂಡಸ್ಟ್ರಿಯಲ್ಲೇ ದೊಡ್ಡ ಫ್ಯಾನ್‌ಬೇಸ್ ಸಂಪಾದಿಸಿತ್ತು. ನಂತರ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ಒಟ್ಟಾಗಿ ನಟಿಸಿ ಮತ್ತೊಮ್ಮೆ ತಮ್ಮ ಜೋಡಿ ಮ್ಯಾಜಿಕ್ ತೋರಿಸಿದ್ದರು. ಈಗ ಅವರ ಸಿನಿಮಾ ಹಿಂದಿಗೆ ಬರುತ್ತಿರುವುದು, ಉತ್ತರ ಭಾರತದ ಪ್ರೇಕ್ಷಕರಿಗೂ ಈ ಕಥೆಯನ್ನು ಪರಿಚಯಿಸುವ ಅವಕಾಶ ಕಲ್ಪಿಸಿದೆ.

ಸಿನಿಮಾ ಸುದ್ದಿಯ ಜೊತೆಗೆ, ಈ ಜೋಡಿಯ ವೈಯಕ್ತಿಕ ಜೀವನವೂ ಸದ್ದು ಮಾಡುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಈ ವರ್ಷ ಫೆಬ್ರವರಿ 26ರಂದು ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮದುವೆ ತಯಾರಿಗಳ ನಡುವೆ, ಅವರ ಸಿನಿಮಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಲ್ಲಿ ಡಬಲ್ ಖುಷಿ ತಂದಿದೆ.

ಸೌತ್‌ನಿಂದ ಬಾಲಿವುಡ್‌ಗೆ ಸಾಗುತ್ತಿರುವ ಈ ರಿಮೇಕ್ ಸಿನಿಮಾ ಯಾವ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ವಿಜಯ್–ರಶ್ಮಿಕಾ ಜೋಡಿ ಹೆಸರು ಮತ್ತು ಕರಣ್ ಜೋಹರ್ ನಿರ್ಮಾಣದ ಬೆಂಬಲ, ಈ ಚಿತ್ರಕ್ಕೆ ಈಗಾಗಲೇ ಬಿಗ್ ಹೈಪ್ ಸೃಷ್ಟಿಸಿದೆ.

ಪ್ರಭಾಸ್ ಎಫೆಕ್ಟ್! ‘ದಿ ರಾಜಾ ಸಾಬ್’ ನಿರ್ದೇಶಕ ಮಾರುತಿಗೆ 18 ಕೋಟಿ ಸಂಭಾವನೆ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭಾರತೀಯ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ‘ಬಾಹುಬಲಿ’ ನಂತರ ಅವರ ಸಂಭಾವನೆ 100 ಕೋಟಿ ರೂಪಾಯಿ ದಾಟಿದ್ದು, ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಪ್ರಭಾಸ್ ಸಿನಿಮಾಗಳಿಂದ ಲಾಭವಾಗುತ್ತಿರುವುದು ನಟರಿಗೆ ಮಾತ್ರವಲ್ಲ, ನಿರ್ದೇಶಕರು ಹಾಗೂ ತಂತ್ರಜ್ಞರಿಗೂ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ನಿರ್ದೇಶಕ ಮಾರುತಿ ಅವರಿಗೆ ಸಿಕ್ಕಿರುವ ಸಂಭಾವನೆ ಇದೀಗ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾಗೆ ಮಾರುತಿ 18 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದು ಅನುಭವೀ ಸ್ಟಾರ್ ನಿರ್ದೇಶಕರಿಗೂ ಸಿಗದ ಮಟ್ಟದ ಮೊತ್ತ ಎನ್ನಲಾಗಿದೆ.

ಮಾರುತಿ ಇದುವರೆಗೂ ಸಾಧಾರಣ ಯಶಸ್ಸು ಕಂಡ ಕೆಲವು ಸಿನಿಮಾಗಳನ್ನು ಮಾತ್ರ ನಿರ್ದೇಶಿಸಿದ್ದಾರೆ. ದೊಡ್ಡ ಹಿಟ್, ಬಿಗ್ ಬಜೆಟ್ ಅಥವಾ ಟಾಪ್ ಸ್ಟಾರ್ ಸಿನಿಮಾಗಳ ಅನುಭವ ಇಲ್ಲದಿದ್ದರೂ, ಪ್ರಭಾಸ್ ಅವರು ಮಾರುತಿ ಹೇಳಿದ ಕಥೆಗೆ ಮಾರು ಹೋಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಎರಡು ವರ್ಷಕ್ಕೂ ಹೆಚ್ಚು ಕಾಲ್‌ಶೀಟ್ ನೀಡಿರುವುದು ಈ ನಂಬಿಕೆಯ ಸಾಕ್ಷಿ.

ಸಂದರ್ಶನವೊಂದರಲ್ಲಿ ಮಾತನಾಡಿದ ಮಾರುತಿ, ‘ಈ ಸಿನಿಮಾಗೆ ನನ್ನ ಜೀವನದ ಮೂರು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಆ ಮೂರು ವರ್ಷಗಳ ಶ್ರಮಕ್ಕೆ 18 ಕೋಟಿ ಸಂಭಾವನೆ ನೀಡಿದ್ದಾರೆ. ಇದಕ್ಕೆ ನೇರ ಕಾರಣ ಪ್ರಭಾಸ್ ಅವರೇ’ ಎಂದು ಹೇಳಿದ್ದಾರೆ. ಈ ಮೊತ್ತದಲ್ಲಿ ನಾಲ್ಕು ಅಥವಾ ಐದು ಸಣ್ಣ ಬಜೆಟ್ ಸಿನಿಮಾಗಳನ್ನು ನಿರ್ಮಿಸಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ.

ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಿಗೆ ಭಾರಿ ಸಂಭಾವನೆ ನೀಡುವ ಸಂಸ್ಕೃತಿ ಈಗಾಗಲೇ ಇದೆ. ರಾಜಮೌಳಿ ಅವರಿಗೆ ನಟರಿಗಿಂತಲೂ ಹೆಚ್ಚಿನ ಸಂಭಾವನೆ ಸಿಗುತ್ತಿದೆ. ‘ವಾರಣಾಸಿ’ ಸಿನಿಮಾಕ್ಕೆ ಬೋಯಪಾಟಿ ಶ್ರೀನು ಅವರಿಗೆ 10 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.

‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾಗಿದ್ದು, ಪ್ರಭಾಸ್ ಮೊದಲ ಬಾರಿಗೆ ಈ ಜಾನರ್‌ನಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಳವಿಕಾ ಮೋಹನನ್, ರಿಧಿ ಕುಮಾರ್ ಮತ್ತು ನಿಧಿ ಅಗರ್ವಾಲ್ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.

ಮರ್ಯಾದಾ ಹತ್ಯೆ ವಿರುದ್ಧ ಲಿಂಗಾಯತ ಸಂಘಟನೆಗಳ ಆತ್ಮಪರಿಶೀಲನೆ: ಗದಗದಲ್ಲಿ ‘ಪ್ರಾಯಶ್ಚಿತ ದಿನ’ ಆಚರಣೆ

0

ಗದಗ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಮರ್ಯಾದಾ ಹತ್ಯೆ ಪ್ರಕರಣವನ್ನು ಖಂಡಿಸಿ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ವಿವಿಧ ಲಿಂಗಾಯತ, ಪ್ರಗತಿಪರ, ಮಹಿಳಾ ಹಾಗೂ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ, ಈ ಘಟನೆಯನ್ನು ಲಿಂಗಾಯತ ಪರಂಪರೆಯ ಮೇಲಿನ ಕಳಂಕ ಎಂದು ಕರೆದವು. ಪ್ರತಿಭಟನೆಯಲ್ಲಿ ಡಿ.ಆರ್. ಪಾಟೀಲ್, ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ, ಸಮಾಜದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಹಿಂಸೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೆಳ ಜಾತಿಯ ಯುವಕನನ್ನು ಮದುವೆಯಾದ ಒಂದೇ ಕಾರಣಕ್ಕೆ ಗರ್ಭಿಣಿ ಮಾನ್ಯ ಪಾಟೀಲ್ ಅವರನ್ನು ಹತ್ಯೆ ಮಾಡಿರುವುದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಲಿಂಗಾಯತ ಧರ್ಮದಲ್ಲಿ ಜಾತಿಯೇ ಇಲ್ಲ ಎಂಬ ಬಸವ ತತ್ವವನ್ನು ಮರೆತ ಪರಿಣಾಮವೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಈಗಾಗಲೇ ಗೃಹ ಸಚಿವರು, ಶಾಸಕರು ಹಾಗೂ ಹಲವು ನಾಯಕರು ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಆದರೆ ಕೇವಲ ಸಾಂತ್ವಾನ ಸಾಲದು. ಮರ್ಯಾದಾ ಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ವಿಶೇಷ ಕಾನೂನು ರೂಪಿಸಿ ತಕ್ಷಣ ಜಾರಿಗೆ ತರಬೇಕು ಎಂದು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಯಿತು.

ಕಲಬುರಗಿ ಸೆಂಟ್ರಲ್ ಜೈಲಲ್ಲಿ ಕೈದಿಗಳ ‘ಬಿಂದಾಸ್ ಲೈಫ್’: ವಿಡಿಯೋ ವೈರಲ್ ಬೆನ್ನಲ್ಲೇ ನಾಲ್ವರು ವಿರುದ್ಧ ಎಫ್‌ಐಆರ್

0

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಜೈಲನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡು ಜೂಜಾಟ, ಸಿಗರೇಟ್ ಮತ್ತು ಡ್ರಿಂಕ್ಸ್ ಮಾಡಿರುವ shocking ಪ್ರಕರಣ ಹೊರಬಿದ್ದಿದೆ. ಕೈದಿಗಳ ‘ಬಿಂದಾಸ್ ಲೈಫ್’ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾಲ್ವರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಕೈದಿಗಳು ಇಸ್ಪೀಟ್ ಆಟ ಆಡುತ್ತಾ, ಸಿಗರೇಟ್ ಸೇದುತ್ತಾ ಮದ್ಯ ಸೇವಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿ ನಾಲ್ವರು ಕೈದಿಗಳು ಜೈಲು ನಿಯಮಗಳನ್ನು ಧಿಕ್ಕರಿಸಿರುವುದು ಸ್ಪಷ್ಟವಾಗಿದೆ.

ವೈರಲ್ ವಿಡಿಯೋ ಪ್ರಕರಣದ ಬೆನ್ನಲ್ಲೇ ಜೈಲು ಅಧೀಕ್ಷಕಿ ಅನೀತಾ ಫರ್ತಾಬಾದ್ ಅವರು ನಾಲ್ವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ತನಿಖೆಗೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕ ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.

ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿರುವ ಆನಂದ್ ರೆಡ್ಡಿ ಅವರು ಜೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದು, ಜೈಲು ಸಿಬ್ಬಂದಿಯ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ.

ಇನ್ನೂ ಪ್ರಕರಣದ ಗಂಭೀರತೆಯನ್ನು ಗಮನಿಸಿ ಜನವರಿ 3ರಂದು ಡಿಜಿಪಿ ಅಲೋಕ್ ಕುಮಾರ್ ಸ್ವತಃ ಕಲಬುರಗಿ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ. ಈ ಪ್ರಕರಣ ರಾಜ್ಯದ ಜೈಲು ವ್ಯವಸ್ಥೆಯ ಭದ್ರತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಗೋವಾಕ್ಕೆ ನ್ಯೂ ಇಯರ್ ಪಾರ್ಟಿಗೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು!

0

ಹಾಸನ: ನ್ಯೂ ಇಯರ್ ಪಾರ್ಟಿಗಾಗಿ ಗೋವಾಕ್ಕೆ ತೆರಳಿದ್ದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ರಕ್ಷಿತ್ (26) ಎಂದು ಗುರುತಿಸಲಾಗಿದೆ.

ಡಿ.31 ರಂದು ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ ಮತ್ತು ಪ್ರವೀಣ್ ಜೊತೆ ರಕ್ಷಿತ್ ಗೋವಾಗೆ ತೆರಳಿದ್ದರು. ಅದೇ ದಿನ ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಆಚರಿಸಿದ್ದರು. ಜ.1 ರಂದು ಬೆಳಿಗ್ಗೆ ತಿಂಡಿ ಮುಗಿಸಿ ಗೋವಾದಲ್ಲಿ ತಿರುಗಾಡುತ್ತಿರುವ ವೇಳೆ ರಕ್ಷಿತ್ಗೆ ದಿಢೀರ್ ಹೃದಯಾಘಾತ ಸಂಭವಿಸಿದೆ.

ಕೂಡಲೇ ಜೊತೆಯಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ರಕ್ಷಿತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗೋವಾದಿಂದ ಮೃತದೇಹವನ್ನು ಸ್ವಗ್ರಾಮ ಹೊಸಳ್ಳಿಗೆ ತರಲಾಗಿದ್ದು, ಈ ಸುದ್ದಿ ತಿಳಿದ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 ಗುಂಡಿನ ದಾಳಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ: ರಾಜಶೇಖರ್ ಮೃತದೇಹ ನಿವಾಸಕ್ಕೆ ರವಾನೆ

0

ಬಳ್ಳಾರಿ: ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ಗುಂಡು ತಗುಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪಾರ್ಥಿವ ಶರೀರವನ್ನು ಇಂದು ಹುಸೇನ್ ನಗರದಲ್ಲಿನ ಅವರ ನಿವಾಸಕ್ಕೆ ಆಂಬ್ಯುಲೆನ್ಸ್ ಮೂಲಕ ತರಲಾಯಿತು.

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಿಂದ ಮೃತದೇಹವನ್ನು ಮನೆಗೆ ಕರೆತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತ ರಾಜಶೇಖರ್ ರನ್ನು ನೋಡಲು ಜನಸಾಗರವೇ ಹರಿದು ಬಂದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದು, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರೊಂದಿಗೆ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಸಕರು ಕುಟುಂಬಕ್ಕೆ ಧೈರ್ಯ ತುಂಬಿದರು.

ಇದಕ್ಕೂ ಮೊದಲು, ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡದ ಉಪಸ್ಥಿತಿಯಲ್ಲಿ ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್  ಕೂಡ ಆಸ್ಪತ್ರೆಗೆ ಭೇಟಿ ನೀಡಿದರು.

error: Content is protected !!