Home Blog Page 247

ಅಧಿಕಾರಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಿ: ಎ.ಎ. ಕಂಬಾಳಿಮಠ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ ಶಿರಹಟ್ಟಿಯ ಬಿಇಓ ಕಚೇರಿಯಲ್ಲಿ ಲೋಕಾಯುಕ್ತರ ದಾಳಿ, ರೇಷ್ಮೆ ಇಲಾಖೆಯ ಅವಾಂತರ, ಮಧ್ಯವರ್ತಿಗಳಿಂದ ಬೆಳೆ ವಿಮೆಯಲ್ಲಿ ಸಾಕಷ್ಟು ವಿಷಯಗಳು ಚರ್ಚೆಗೆ ಗ್ರಾಸವಾಗುತ್ತಿದ್ದು, ಇದು ಒಳ್ಳೆಯ ಬೆಳೆವಣಿಗೆಯಲ್ಲ. ದಿನದಿಂದ ದಿನಕ್ಕೆ ತಾಲೂಕು ಸೂಕ್ಷ್ಮ ವಲಯವಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಶಿರಹಟ್ಟಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಹೇಳಿದರು.

ಅವರು ಮಂಗಳವಾರ ಶಿರಹಟ್ಟಿಯ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನು ಶಿರಹಟ್ಟಿ ತಾ.ಪಂ ಆಡಳಿತಾಧಿಕಾರಿಯಾಗಿರುವ ಸಂದರ್ಭದಲ್ಲಿ ತಾಲೂಕಿನಲ್ಲಿ ಇಂತಹ ಬೆಳವಣಿಗೆಗಳು ಆಗುತ್ತಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಆಯಾ ಇಲಾಖೆಯ ಅನುಷ್ಠಾನಾಧಿಕಾರಿಗಳು ಕೆಲಸ ಮಾಡಬೇಕು. ಪ್ರಗತಿ ಪರಿಶೀಲನೆಯಂತಹ ಸಭೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು. ಸಂಪೂರ್ಣ ಮಾಹಿತಿ ತಮಗೆ ಗೊತ್ತೇ ಇಲ್ಲದಿದ್ದರೆ ಸಭೆ ಹೇಗೆ ನಡೆಸಲು ಸಾಧ್ಯ? ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾನ್ಯ ಸಭೆಯಲ್ಲಿ ನಿಮ್ಮ ಇಲಾಖೆಗಳಲ್ಲಿ ಏನು ಕಾಮಗಾರಿಗಳು ಆಗಬೇಕು ಎನ್ನುವ ಬಗ್ಗೆ ಹಾಗೂ ಎಲ್ಲ ಬೇಕು-ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ವಿಸ್ತೃತ ಚರ್ಚೆ ಮಾಡಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ. ನೀವು ನೀಡಿದ ಕ್ರಿಯಾ ಯೋಜನೆಯನ್ನೇ ಮತ್ತೆ ಮತ್ತೆ ಬದಲಾಯಿಸುತ್ತಿರುವುದು ನಿಮ್ಮಲ್ಲಿ ಸ್ಪಷ್ಟತೆ ಇಲ್ಲವೇ ಎಂಬ ಪ್ರಶ್ನೆ ಮೂಡಿಸುತ್ತದೆ. ನೀವು ತಯಾರಿಸಿ ಅನುಮೋದನೆಗೆ ಸಲ್ಲಿಸಿದ ಕ್ರಿಯಾಯೋಜನೆ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳೇ ಪ್ರಸ್ತಾವನೆ ಮಾಡಬೇಕು ಎಂದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಅಂಕ ಗಳಿಸುತ್ತಾರಾದರೂ, ಮುಂದೆ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸುತ್ತಿರುವುದು ಸಾಮಾನ್ಯವಾಗಿದ್ದು, ಇದನ್ನು ಹೋಗಲಾಡಿಸುವುದಕ್ಕೆ ಶಾಲಾ-ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ, ಐಐಟಿ ಜೊತೆಗೆ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿಯ ಕೆಲಸಗಳ ಬಗ್ಗೆ ಈಗಿನಿಂದಲೇ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೆರೆ ರಾಜ್ಯಗಳಲ್ಲಿಯಂತೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಮುಖ್ಯವಾಹಿನಿಗೆ ಬರುವುದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕೆಂದು ಬಿಇಓ ಅವರಿಗೆ ಕಂಬಾಳಿಮಠ ಸೂಚಿಸಿದರು.

ಸನ್ಮಾರ್ಗ ಕಾಲೇಜು ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಹುಬ್ಬಳ್ಳಿಯ I.ಎಂ.ಒ.ಕೆ. ಮಹಾವಿದ್ಯಾಲಯದಲ್ಲಿ ಜರುಗಿದ ‘ಇಂಟರ್ ಕಾಲೇಜ್ ಫೆಸ್ಟ್ ವಿದ್ಯೋತ್ಸವ 2025’ರಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿ, ‘ರಿಧಮ್ ಎಕ್ಸ್ಪ್ರೆಸ್’ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿಯರಾದ ಅನಿತಾ ಚೌಧರಿ, ಶ್ರೇಯಾ ಶೆಟ್ಟಿ, ಝಿಕ್ರಾ ಸುಂಕದ, ಜವೇರಿಯಾ ಡಂಬಳ, ನೇಹಾ ಬರದ, ರಿಂಕು ಚೌಧರಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ. `QUIZ, ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ನೇಮಿಚಂದ ಗಜೇಂದ್ರಗಡ, ಸಾಹಿಲ್ ಜೈನ, ವರುಣ ಜರತ್‌ಖಾನಿ, ಚಿನ್ಮಯ ಅಕ್ಕಿ ಹಾಗೂ ಶ್ರೀನಿವಾಸ ತೆಗ್ಗಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಸ್ಟುಡೆಂಟ್ಸ್ ಎಜ್ಯುಕೇಷನ್ ಸೊಸೈಟಿಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಪ್ರೊ. ಸಂಗೀತಾ ಬೀಳಗಿ ಹಾಗೂ ಪ್ರೊ. ಎಸ್.ಎಸ್. ವಜ್ರಬಂಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಿವಮೂರ್ತಿ ಹೊಂಬಳಗಟ್ಟಿ, ಉಪಾಧ್ಯಕ್ಷರಾಗಿ ಲಕ್ಷ್ಮಣ ಎಚ್.ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ ಪಾಟೀಲ, ಕಾರ್ಯದರ್ಶಿಯಾಗಿ ವಿಜಯಕುಮಾರ ಸೊರಟೂರ, ಖಜಾಂಚಿಯಾಗಿ ಮಂಜುನಾಥ ಜಾಗಟಗೇರಿ ಆಯ್ಕೆಯಾಗಿದ್ದಾರೆ.

ತಾಲೂಕು ಕಾರ್ಯಕಾರಿಣಿ ಸದಸ್ಯರ ಮೂರು ಸ್ಥಾನಕ್ಕೆ ಕಾಶಿನಾಥ ಬಿಳಿಮಗ್ಗದ, ಸಿ.ಕೆ. ಗಣಪ್ಪನವರ, ಕವಿ ಬಂಕಾಪೂರ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಜಿಲ್ಲಾ ಖಜಾಂಚಿ ರಾಮಣ್ಣ ವಗ್ಗಿ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ವೆಂಕಟೇಶ ಇಮರಾಪೂರ, ಸಂತೋಷ ಕೊಣ್ಣೂರ ಕಾರ್ಯನಿರ್ವಹಿಸಿದರು.

ಭಾವಸಾರ ವ್ಹಿಜನ್ ಇಂಡಿಯಾದ ‘ಬೆಳ್ಳಿ ಹಬ್ಬ’ ಸಂಭ್ರಮಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿದ ಭಾವಸಾರ ವ್ಹಿಜನ್ ಇಂಡಿಯಾದ 25ನೇ ವರ್ಷದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಗದುಗಿನ ರಕ್ತ ತಪಾಸಕ ಡಾ. ದತ್ತಾತ್ರೇಯ ವೈಕುಂಠೆ ಅವರು ಅತ್ಯಧಿಕ ಉಚಿತ ರಕ್ತತಪಾಸಣಾ ಶಿಬಿರಗಳನ್ನು ಕೈಗೊಂಡಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಾವಸಾರ ವ್ಹಿಜನ್ ಇಂಡಿಯಾದ ಸಂಸ್ಥಾಪಕ ನಾರಾಯಣರಾವ್ ತಾತುಸ್ಕರ್ ಮಾತನಾಡಿ, ಗದುಗಿನ ಡಾ. ದತ್ತಾತ್ರೇಯ ವೈಕುಂಠೆ ಅವರು ಕಳೆದ 12 ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ವಿವಿಧೆಡೆ ಸುಮಾರು 400ಕ್ಕೂ ಹೆಚ್ಚು ಉಚಿತ ರಕ್ತತಪಾಸಣಾ ಶಿಬಿರ ನಡೆಸಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆ ಒಳಪಡಿಸಿದ್ದಲ್ಲದೆ, 65 ಸಲ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ ಎಂದರು.

ಇಂತಹ ಮಹನೀಯರು ನಮ್ಮ ಭಾವಸಾರ ವ್ಹಿಜನ್ ಮೂಲಕ ಉಚಿತ ರಕ್ತತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಬೆಂಗಳೂರಿನಲ್ಲಿ ನಡೆದ ವ್ಹಿಜನ್‌ನ ಬೆಳ್ಳಿ ಹಬ್ಬದ ಕಾರ್ಯಕ್ರಮದ ಸಂದರ್ಭದಲ್ಲೂ ಸಹ ಶಿಬಿರ ನಡೆಸಿ 120ಕ್ಕೂ ಹೆಚ್ಚು ಜನರಿಗೆ ಉಚಿತ ರಕ್ತ ತಪಾಸಣೆ, ರಕ್ತಗುಂಪು ಪರೀಕ್ಷೆ ನಡೆಸಿದ್ದು 2026ರಲ್ಲಿ ಸಿಕಂದರಾಬಾದ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲೂ ಸಹ ಈ ರೀತಿಯ ವಿಶೇಷ ಶಿಬಿರ ಜರುಗಿಸಲು ಏರ್ಪಾಡು ಮಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಿಜಯಲಕ್ಷ್ಮೀ ತ್ರಿಮಲ್ಲೆ ಅವರನ್ನೂ ಗೌರವಿಸಲಾಯಿತು. ವ್ಹಿಜನ್‌ನ ರಾಷ್ಟ್ರೀಯ ಅಧ್ಯಕ್ಷ ಜೆ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಯೋಗೇಶ ಸಾಕರೆ, ಚೇರಮನ್ ಗಜೇಂದ್ರನಾಥ ಮಾಳೋದೆ ಮುಂತಾದವರಿದ್ದರು.

ಮಲ್ಲಿಕಾರ್ಜುನ ಖಂಡಮ್ಮನವರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ನಿಮಿತ್ತ ಗದಗ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕಳಸಾಪೂರ ಗ್ರಾಮದ ಬಸವ ಕೇಂದ್ರದ ಕಾರ್ಯಾಧ್ಯಕ್ಷ, ಕನ್ನಡಾಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವ್ಹಿ.ಬಳ್ಳಾರಿ, ಹಿರಿಯ ಸಾಹಿತಿ ಚಂದ್ರಶೇಖರ ಎಸ್.ವಸ್ತ್ರದ ಉಪಸ್ಥಿತರಿದ್ದರು.

ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: 12 ವಿದ್ಯಾರ್ಥಿಗಳಿಗೆ ಗಾಯ, ತಪ್ಪಿದ ದುರಂತ!

0

ಉತ್ತರ ಕನ್ನಡ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ಬಳಿ ಶಿರಸಿಯಿಂದ ಯಾಣ ಕಡೆಗೆ ಹೋಗುತ್ತಿದ್ದ ಒಂದು ಕಾಲೇಜು ಬಸ್ ಪಲ್ಟಿಯಾಗಿದೆ.

ದಾವಣಗೆರೆಯ ಜೈನ್ ಪಿಯು ಕಾಲೇಜಿನ 20 ವಿದ್ಯಾರ್ಥಿನಿಯರು, 27 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರು ಈ ಬಸ್ಸಿನಲ್ಲಿ ಇದ್ದರು. ಈ ಘಟನೆ ಸಂದರ್ಭದಲ್ಲಿ 12 ವಿದ್ಯಾರ್ಥಿಗಳಿಗೆ ಸಣ್ಣ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಪಲ್ಟಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾರ್ಥಿಗಳು ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದ ನಂತರ ಯಾಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕೇರಳ ಜನರೊಂದಿಗೆ ಉತ್ತಮ ಬಾಂಧವ್ಯ ಇದೆ, ಬಿಜೆಪಿ ಹುಳಿ ಹಿಂಡಬಾರದು: ಡಿಸಿಎಂ ಡಿಕೆ ಶಿವಕುಮಾರ್

0

ಬೆಂಗಳೂರು: ಕರ್ನಾಟಕದ ಆಡಳಿತದಲ್ಲಿ ಕೇರಳ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಮಾತ್ರ ನಾನು ಮಾತನಾಡಿದ್ದೇನೆಯೇ ಹೊರತು ಕೇರಳಿಗರ ಬಗ್ಗೆ ಅಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಹೇಳಿಕೆಯನ್ನು ತಿರುಚಿ ಜನರ ದಾರಿ ತಪ್ಪಿಸುತ್ತಿರುವುದಾಗಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ಅವರು, ಕೇರಳ ಜನರು ಹಾಗೂ ತಮ್ಮ ನಡುವೆ ಉತ್ತಮ ಬಾಂಧವ್ಯವಿದ್ದು ಪರಸ್ಪರ ಗೌರವವಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ, ಇಂತಹ ಹುಳಿ ಹಿಂಡುವುದು ಬೇಡ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯದ ಅಭಿವೃದ್ಧಿ ಕುರಿತಾಗಿ ಮಾತನಾಡಿದ ಡಿಕೆಶಿ, ನೀರಾವರಿ ನಿಗಮಗಳ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸುಮಾರು 5 ಸಾವಿರ ಕೋಟಿ ರೂ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, ಯುಕೆಪಿ ಯೋಜನೆಯ ಭೂಸ್ವಾಧೀನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.  2026ರ ಹೊಸ ವರ್ಷದಲ್ಲೂ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವುದು, ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದು ಮತ್ತು ರೈತರ ಬದುಕು ಹಸನಾಗಿಸುವುದೇ ಕಾಂಗ್ರೆಸ್ ಸರ್ಕಾರದ ಗುರಿ ಎಂದು ಅವರು ಹೇಳಿದರು.

ವೈಕುಂಠ ಏಕಾದಶಿ ಹಿನ್ನೆಲೆ: ದೇವರ ಅವತಾರದಲ್ಲಿ ಮಿಂಚಿದ ಪುಟಾಣಿಗಳು

0

ಗದಗ: ವೈಕುಂಠ ಏಕಾದಶಿ ನಿಮಿತ್ತ ಗದಗ ನಗರದ ಗಂಗಾಪುರ ಪೇಟೆ ಓಣಿಯಲ್ಲಿ (ಅಂಜಲಿ ಕಬಾಡಿ, ಪಾಯಲ್ ಕಬಾಡಿ) ಶ್ರೀ ವೆಂಕಟೇಶ್ವರ ಲಕ್ಷ್ಮೀದೇವರ ಅವತಾರದಲ್ಲಿ ಪುಟ್ಟ ಮಕ್ಕಳು ಗಮನ ಸೆಳೆದರು. ಈ ಮಕ್ಕಳನ್ನು ನೋಡುತ್ತಿದ್ದರೆ ಭಕ್ತಿ ಭಾವನೆ ಮೂಡಿ ಬರುತ್ತದೆ. ಮಕ್ಕಳಿಗೆ ಇಂತಹ ದೇವರ ವೇಷ-ಭೂಷಣ ಹಾಕಿಸುವುದರಿಂದ ಮಕ್ಕಳಲ್ಲಿ ಸನಾತನ ಹಿಂದೂ ಧರ್ಮದ ಹಾಗೂ ದೇವರ ಬಗ್ಗೆ ಭಕ್ತಿ ಭಾವನೆ ಮೂಡುತ್ತದೆ. ಪ್ರತಿಯೊಬ್ಬರೂ ಮಕ್ಕಳನ್ನು ಈ ರೀತಿ ವೇಷ-ಭೂಷಣ ಹಾಕಿಸಿ ಹಿಂದೂ ಧರ್ಮದ ಸಂಸ್ಕಾರದ ಬಗ್ಗೆ ಅರಿವು ಮೂಡಿಸಿ ಎಂದು ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ವಿನಂತಿಸಿದ್ದಾರೆ.

ಸರ್ಕಾರದ ನಡೆಯ ವಿರುದ್ಧ ಎಸ್.ಡಿ.ಪಿ.ಐ ಕಿಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜಧಾನಿ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿಯಲ್ಲಿ ಬುಲ್ಡೋಜರ್‌ಗಳ ಮೂಲಕ ಏಕಾಏಕಿ ಬಡವರ ನೂರಾರು ಮನೆಗಳನ್ನು ಧ್ವಂಸಗೊಳಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಸೋಮವಾರ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗದಗ ವಿಧಾನಸಭಾ ಕ್ಷೇತ್ರ ವತಿಯಿಂದ ಕಾಂಗ್ರೆಸ್ ಸರ್ಕಾರದ ಅಮಾನವೀಯ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಆಸಿಫ್ ಮುಳುಗುಂದ್ ಹಾಗೂ ಕಾರ್ಯದರ್ಶಿ ಸಮೀರ್ ಕೊಟ್ಟೂರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಬಲವಂತವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಾಯಕರು, ಬಡವರ ಮನೆಗಳನ್ನು ಧ್ವಂಸಗೊಳಿಸುವುದು ಅಭಿವೃದ್ಧಿಯಲ್ಲ. ಇದು ಸಂವಿಧಾನ ವಿರೋಧಿ ಹಾಗೂ ಮಾನವೀಯತೆಗೆ ವಿರುದ್ಧವಾದ ನಡೆ. ಪರ್ಯಾಯ ವ್ಯವಸ್ಥೆ, ಪುನರ್ವಸತಿ ಮತ್ತು ಪರಿಹಾರ ನೀಡದೇ ಮನೆಗಳನ್ನು ಒಡೆದುಹಾಕಿರುವುದು ಸರ್ಕಾರದ ನಿರ್ಲಕ್ಷ್ಯ ಹಾಗೂ ಜನವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಧ್ವಂಸಗೊಳಿಸಲಾದ ಎಲ್ಲಾ ಕುಟುಂಬಗಳಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕು, ಸಮರ್ಪಕ ಪರಿಹಾರ ನೀಡಬೇಕು ಮತ್ತು ಇಂತಹ ಅನ್ಯಾಯಕರ ಕ್ರಮಗಳನ್ನು ಸರ್ಕಾರ ಮುಂದುವರೆಸಬಾರದು ಎಂದು ಆಗ್ರಹಿಸಿದರಲ್ಲದೆ, ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಉನ್ನತಿ ಗ್ರಾಮೀಣ ಜನರ ಆಶಾಕಿರಣ: ಸಿ.ಆರ್. ಮುಂಡರಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಜನರ ಕೌಶಲ್ಯ ಗುರುತಿಸಿ, ಜೀವನೋಪಾಯಕ್ಕೆ ಅಗತ್ಯವಾದ ತರಬೇತಿ ನೀಡಲು ಉನ್ನತಿ ಯೋಜನೆ ಮಹತ್ತರ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.

ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಎಸ್‌ಬಿಐ- ಎಎಸ್‌ಎಫ್-ಆರ್ ಸೆಟಿ ಹುಲಕೋಟಿ ಇವುಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 60 ದಿನಗಳಿಗೂ ಹೆಚ್ಚು ಅಕುಶಲ ದಿನಗಳನ್ನು ಪೂರೈಸಿದವರಿಗಾಗಿ ಹಮ್ಮಿಕೊಂಡ 30 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಮಾತನಾಡಿ, ಉನ್ನತಿ ಯೋಜನೆಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಮಿಕರ ಕೌಶಲ್ಯದ ನೆಲೆಯನ್ನು ನವೀಕರಿಸಿ, ಅವರ ಜೀವನೋಪಾಯ ಸುಧಾರಿಸುವ ಮಹತ್ತರ ಕಾರ್ಯ ಈ ತರಬೇತಿಯ ಆಶಯವಾಗಿದೆ ಎಂದರು.

ಲೀಡ್ ಬ್ಯಾಂಕ್ ಜಿಲ್ಲಾ ಮ್ಯಾನೇಜರ್ ಸಂತೋಷ ಎಂ.ವಿ ಮಾತನಾಡಿ, ಅಂಕ ಪಟ್ಟಿಯನ್ನು ನೋಡಿ ಉದ್ಯೋಗ ನೀಡುವ ಕಾಲ ಇದಲ್ಲ. ಇಂದಿನ ಆಧುನಿಕ ಕಾಲದಲ್ಲಿ ಯಾವುದೇ ಕೆಲಸ ಸಣ್ಣದು ಸಹ ಅಲ್ಲ. ಮಾಡುವ ಕೆಲಸದಲ್ಲಿ ನೈಪುಣ್ಯತೆ ಇದ್ದು, ಅದರಲ್ಲಿ ಉತ್ತಮ ಕೌಶಲ್ಯವಂತರಾಗಿದ್ದರೆ ಕೆಲಸ ನೀಡಲು ಅನೇಕ ಸಂಘ-ಸಂಸ್ಥೆಗಳು ಮುಂದೆ ಬರುತ್ತವೆ. ಕೌಶಲ್ಯ ಉಳ್ಳವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಬ್ಯಾಂಕ್‌ಗಳು ಸನ್ನದ್ಧವಾಗಿವೆ. ದೇಶದ ಪ್ರಗತಿಗೆ ಕೌಶಲ್ಯ ಹೊಂದಿದ ಯುವ ಜನರ ಅಗತ್ಯವಿದೆ. ಸರ್ಕಾರದ ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೌಶಲ್ಯ ಪಡೆದು ಉತ್ತಮ ಸಾಧನೆ ಮಾಡಿದ ಹಲವು ಜನರು ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿ, ನೂರಾರು ಜನರಿಗೆ ಉದ್ಯೋಗ ನೀಡಿ ನೌಕರರ ಆರ್ಥಿಕ ಸ್ಥಿತಿ ವೃದ್ಧಿಸಿದ್ದಾರೆ ಎಂದು ತಿಳಿಸಿದರು.

ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣ ಕುಮಾರ ಎಸ್.ಎಚ್ ಮತ್ತು ಎನ್‌ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕ ರಘುನಾಥಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಬಸನಗೌಡ್ರ, ಅನಿಲಕುಮಾರ ಕೆ, ಸಹನಾ ಕೋಟೆಕಲ್ಲ, ಮಲ್ಲಮ್ಮ ರಡ್ಡೆರ, ರೇಣುಕಾ ಪಲ್ಲೆದ, ನೀಲಾ ಸಂಗನಾಳ ಇತರರಿದ್ದರು. ಹುಲಕೋಟಿ ಆರ್-ಸೆಟಿ ತರಬೇತುದಾರ ನವೀನ ಹಿರೇಗೌಡ್ರ ನಿರೂಪಿಸಿ, ವಂದಿಸಿದರು.

ಜೀವನದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಉಚಿತ ಊಟ, ವಸತಿ ಹಾಗೂ ಸಹಾಯಧನ ನೀಡುವ ಮೂಲಕ ಕೌಶಲ್ಯ ಮತ್ತು ಜ್ಞಾನ ಹೆಚ್ಚಿಸಲು ಉನ್ನತಿ ತರಬೇತಿ ಕಾರ್ಯಕ್ರಮ ರೂಪಿಸಿರುವುದು ಗ್ರಾಮೀಣ ಜನರಿಗೆ ಆಶಾಕಿರಣವಾಗಿದೆ ಎಂದು ಸಿ.ಆರ್. ಮುಂಡರಗಿ ಅಭಿಪ್ರಾಯಪಟ್ಟರು.

error: Content is protected !!