Home Blog Page 258

ಡ್ರಗ್ ಮಾಫಿಯಾ ಹಿಡಿತದಲ್ಲಿ ಸರ್ಕಾರ: ಗದಗದಲ್ಲಿ ಬಸವರಾಜ್ ಬೊಮ್ಮಾಯಿ ಗಂಭೀರ ಆರೋಪ!

0

ಗದಗ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದಿನೇದಿನೇ ಬೇರೂರುತ್ತಿದ್ದು, ಇಂದಿನ ಸರ್ಕಾರವೇ ಡ್ರಗ್ ಮಾಫಿಯಾ ಕಂಟ್ರೋಲ್ಡ್ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಡ್ರಗ್ಸ್ ಬಳಕೆ ಅತಿ ಹೆಚ್ಚಾಗಿ ನಡೆಯುತ್ತಿದ್ದು, ಇದೇ ರೀತಿ ಮುಂದುವರೆದರೆ ರಾಜ್ಯ ಮತ್ತೊಂದು ‘ಉಡ್ತಾ ಪಂಜಾಬ್’ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಸಿದರು. ಈಗಾಗಲೇ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎನ್ನಲಾಗುತ್ತಿದ್ದರೂ, ವಾಸ್ತವದಲ್ಲಿ ಡ್ರಗ್ಸ್ ದಂಧೆಗೆ ಯಾವುದೇ ಭಯ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ದಾಖಲಿಸಿದ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಬೇಲ್ ಸಿಗುತ್ತಿರುವುದು ಕಾನೂನು ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ ಎಂದರು.

ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಈಗಾಗಲೇ ಸ್ಪೆಷಲ್ ಕಾನೂನುಗಳು ಇದ್ದರೂ ಅವುಗಳನ್ನು ಸರಿಯಾಗಿ ಜಾರಿಗೆ ತರುತ್ತಿಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು. 1988ರ ಕಾನೂನಿನ ಪ್ರಕಾರ ಕನಿಷ್ಠ ಒಂದು ವರ್ಷ ಬೇಲ್ ಸಿಗಬಾರದು ಎಂಬ ನಿಯಮ ಇದ್ದರೂ ಅದನ್ನೂ ಬಳಸುತ್ತಿಲ್ಲ. ಮಹಾರಾಷ್ಟ್ರದ ಪೊಲೀಸರು ಬಂದು ರಾಜ್ಯದಲ್ಲಿ ಡ್ರಗ್ಸ್ ರೇಡ್ ಮಾಡಬೇಕಾದ ಸ್ಥಿತಿ ಬಂದರೆ, ನಮ್ಮ ಪೊಲೀಸ್ ವ್ಯವಸ್ಥೆಯ ಸ್ಥಿತಿ ಏನು ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು. ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ ಎಂದು ಹೇಳಿದರು.

ಡ್ರಗ್ಸ್ ಮಾಫಿಯಾ ಎಲ್ಲ ಕಾಲೇಜುಗಳಲ್ಲೂ ವ್ಯಾಪಕವಾಗಿ ಹರಡಿದ್ದು, ಹಾವೇರಿ ಜಿಲ್ಲೆವರೆಗೂ ಜಾಲ ವಿಸ್ತರಿಸಿದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಡ್ರಗ್ಸ್ ಸುಲಭವಾಗಿ ಲಭ್ಯವಾಗುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು, ಡ್ರಗ್ಸ್ ದಂಧೆ ನಡೆಯುವ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹೊಸ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸ್ಕ್ವಾಡ್ ರಚಿಸಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ದ್ವೇಷ ಭಾಷಣದಂತಹ ಕಾನೂನುಗಳಿಗಿಂತ ಮೊದಲು ಡ್ರಗ್ಸ್ ಮಾಫಿಯಾ ವಿರುದ್ಧ ಉಗ್ರ ಮತ್ತು ಕಠಿಣ ಕಾನೂನು ತರಬೇಕೆಂದು ಆಗ್ರಹಿಸಿದರು.

ರೈತರ ಗೊಬ್ಬರ, ಬೀಜ ಕಳ್ಳತನಕ್ಕೂ, ಡ್ರಗ್ಸ್ ದಂಧೆಗೂ, ಕಳ್ಳಭಟ್ಟಿಗೂ ಬಿಗಿ ಕಾನೂನು ಇಲ್ಲದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಸಾಕ್ಷಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಸರ್ಕಾರ ತನ್ನ ಒಳಜಗಳ ಮತ್ತು ಕಚ್ಚಾಟದಲ್ಲಿ ತೊಡಗಿರುವುದರಿಂದ ಡ್ರಗ್ಸ್ ಮಾಫಿಯಾಗಳು ನಿರ್ಬಂಧವಿಲ್ಲದೆ ತಮ್ಮ ಅಕ್ರಮ ಚಟುವಟಿಕೆ ನಡೆಸುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಕರ್ನಾಟಕವೇ ‘ಉಡ್ತಾ ಕರ್ನಾಟಕ’ ಆಗುತ್ತದೆ ಎಂದು ಅವರು ಗಂಭೀರ ಎಚ್ಚರಿಕೆ ನೀಡಿದರು.

ಕಾರವಾರ ತೀರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಬ್‌ಮೆರಿನ್ ಯಾನ!

0

ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ಉತ್ತರ ಕನ್ನಡದ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ವಾಗ್ಶೀರ್ ಸಬ್‌ಮೆರಿನ್‌ನಲ್ಲಿ ಪ್ರಯಾಣ ನಡೆಸಿದರು.

ಈ ಮೂಲಕ ಸಬ್‌ಮೆರಿನ್‌ನಲ್ಲಿ ಪ್ರಯಾಣಿಸಿದ ಭಾರತದ 2ನೇ ರಾಷ್ಟ್ರಪತಿ ಎಂಬ ದಾಖಲೆಯೂ ದಾಖಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಯನ್ನು ಕದಂಬ ನೌಕಾನೆಲೆಗೆ ಬರಮಾಡಿಕೊಂಡರು. ಕಾರವಾರದ ನೌಕಾನೆಲೆ ಫೇಸ್-2 ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿ ಯುದ್ಧ ಹಡಗುಗಳು ಮತ್ತು ಸಬ್‌ಮೆರಿನ್ ನಿಲ್ದಾಣಗಳೊಂದಿಗೆ ರಿಪೇರಿ ಯಾರ್ಡ್ ಕೂಡ ನಿರ್ಮಾಣವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸಬ್‌ಮೆರಿನ್‌ನಲ್ಲಿ ಸುಮಾರು ಒಂದು ಗಂಟೆಯ ಐತಿಹಾಸಿಕ ಪ್ರಯಾಣ ನಡೆಸಿದರು. ಈ ಸಂದರ್ಭದಲ್ಲಿ ರಿಯಲ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಚೀಫ್ ಆಫ್ ನೇವಲ್ ಸ್ಟಾಫ್, ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ಇತರ ಹಿರಿಯ ನೌಕಾ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವು!

0

ಬೆಂಗಳೂರು:- ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ರಸ್ತೆಬದಿ ನಡೆದುಕೊಂಡು ಹೋಗ್ತಿದ್ದ ಪಾದಚಾರಿಗೆ ಸಿಮೆಂಟ್ ಮಿಕ್ಸರ್ ಲಾರಿ ಗುದ್ದಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ನಾರಾಯಣಸ್ವಾಮಿ ಮೃತ ದುರ್ದೈವಿ. ಇವರು ಸಿಂಗೇನ ಅಗ್ರಹಾರ ನಿವಾಸಿ ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರು 7 ಗಂಟೆ ಸುಮಾರಿಗೆ ಮೃತ ವ್ಯಕ್ತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ವ್ಯಕ್ತಿಗೆ ಗುದ್ದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತವಾದರೂ ಲಾರಿಯನ್ನು ನಿಲ್ಲಿಸದೇ ಚಾಲಕ ಹಾಗೆ ತೆರಳಿದ್ದಾನೆ. ಅಪಘಾತದ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಪೊಲೀಸರ ದಾಳಿ; ಬೆಂಗಳೂರಿನಲ್ಲಿ 3 ಡ್ರಗ್ ಫ್ಯಾಕ್ಟರಿ ಪತ್ತೆ!

0

ಬೆಂಗಳೂರು: ಮಹಾರಾಷ್ಟ್ರ ಪೊಲೀಸ್‌ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಡ್ರಗ್ ತಯಾರಿಕಾ ಘಟಕಗಳನ್ನು ಪತ್ತೆಹಚ್ಚಿದ್ದಾರೆ.

ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್‌ ನಡೆಸುತ್ತಿದ್ದ ಈ ಫ್ಯಾಕ್ಟರಿಗಳಲ್ಲಿ 55.88 ಕೆಜಿ ಮೌಲ್ಯದ ಡ್ರಗ್ ವಶಕ್ಕೆ ಪಡೆದಿದ್ದಾರೆ. ಮುಂಬೈನಲ್ಲಿ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರು ಅಬ್ದುಲ್ ಖಾದಿರ್ ಶೇಕ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕರ್ನಾಟಕ ಲಿಂಕ್ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಡ್ರಗ್ ಮಾಫಿಯಾ ತಂಡ ನಗರದಲ್ಲಿ ಡ್ರಗ್ ತಯಾರಿಸಿ ಬೇರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಿತ್ತು. ಅಲ್ಲದೇ ಅಪಾರ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಿತ್ತು. ಸದ್ಯ ಬೆಂಗಳೂರು ಪೊಲೀಸರು ಮಹಾರಾಷ್ಟ್ರ ಪೊಲೀಸರ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಪ್ರೀತಿ–ಮದುವೆ ನೆಪದಲ್ಲಿ ಯುವತಿಯರಿಂದ ಲಕ್ಷಾಂತರ ರೂ. ವಂಚನೆ: ಯುವಕ ಅರೆಸ್ಟ್!

0

ಬೆಂಗಳೂರು: ಪ್ರೀತಿ–ಪ್ರೇಮ–ಮದುವೆ ಹೆಸರಿನಲ್ಲಿ ಯುವತಿಯರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದೆ. ಮೂಲತಃ ಹರಿಯಾಣ ರಾಜ್ಯದವನಾದ ಈತ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ. ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಐಷಾರಾಮಿ ಜೀವನಶೈಲಿಯಿಂದ ಯುವತಿಯರ ಮನಗೆದ್ದ ಶುಭಾಂಶು, ಪ್ರೀತಿ ಹಾಗೂ ಮದುವೆ ಭರವಸೆ ನೀಡಿ ಹಣ ಪಡೆದು ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ.

ವಂಚನೆಯ ಸತ್ಯ ಬೆಳಕಿಗೆ ಬಂದ ಬಳಿಕ ಹಲವು ಯುವತಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆರೋಪಿ ಮೊದಲು ಬಾಲಕಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿ, ಆಕೆಯ ಮೂಲಕ ಕುಟುಂಬದ ವಿಶ್ವಾಸ ಗಳಿಸಿ ಮನೆಮಗನಂತೆ ವರ್ತಿಸಿದ್ದ. ನಂತರ ಆಕೆಯ ಸಹೋದರಿಯನ್ನು ಪ್ರೀತಿ ಬಲೆಗೆ ಬೀಳಿಸಿ ಖಾಸಗಿ ಫ್ಲಾಟ್‌ನಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸವಾಗಿದ್ದ. ಈ ಅವಧಿಯಲ್ಲಿ ಯುವತಿಯ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ನಡುವೆ ಶುಭಾಂಶುಗೆ ಈಗಾಗಲೇ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ವಿಚ್ಛೇದನ ಪಡೆಯುವುದಾಗಿ ನೆಪ ಹೇಳಿ ಮತ್ತಷ್ಟು ಹಣ ಪಡೆದು, ಯುವತಿಗೆ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಹಾಸನ| ಭೀಕರ ಅಪಘಾತ: ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್‌, 20ಕ್ಕೂ ಹೆಚ್ಚು ಮಂದಿಗೆ ಗಾಯ!

0

ಹಾಸನ: ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಬಸ್ ಚಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೈಪಾಸ್‌ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಸಂಭವಿಸಿದ ಈ ಅಪಘಾತದ ವೇಳೆ ಖಾಸಗಿ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಗಾಯಗೊಂಡವರ ಪೈಕಿ 13 ಮಂದಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಗಾಯಾಳುಗಳನ್ನು ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು–ಹಾಸನ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋಕ್ಸೊ ಕೇಸ್ ಖುಲಾಸೆ ಬೆನ್ನಲ್ಲೇ ಮುರುಘಾಶ್ರೀ ವಿರುದ್ಧ ಮತ್ತೊಂದು ಆರೋಪ!

0

ಚಿತ್ರದುರ್ಗ:- ಇತ್ತೀಚೆಗೆ ಪೋಕ್ಸೋ ಕೇಸ್ ಖುಲಾಸೆ ಗೊಂಡು ನಿರಾಳರಾಗಿರುವ ಮುರುಘಾಶ್ರೀ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಚಿತ್ರದುರ್ಗದಲ್ಲಿ ಮುರುಘಾಶ್ರೀ ಅವರು, ಮಠದ ಆಸ್ತಿಗಳನ್ನು ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮುರುಘಾಶ್ರೀ ಪೋಕ್ಸೊ ಪ್ರಕರಣದ ಆರೋಪಿಯಾಗಿದ್ದಾಗ ಸುಪ್ರಿಂ ಕೋರ್ಟ್ ಮಠದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ನಿಷೇಧಿಸಿದ್ದರೂ, 2025 ಅಕ್ಟೋಬರ್ 6ರಂದು 2 ಕೋಟಿ ಮೌಲ್ಯದ ನಾಲ್ಕು ನಿವೇಶನಗಳನ್ನು ಮಂಜುನಾಥ್ ಅವರಿಗೆ ಮಾರಾಟ ಮಾಡಲಾಗಿದೆ ಎಂದು ಭಕ್ತರು ದೂರು ನೀಡಿದ್ದಾರೆ.

ಮಠದ ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್ ಈ ದೂರು ಬಂದ ನಂತರ ಕಾನೂನು ತಜ್ಞರಿಂದ ಪರಿಶೀಲನೆ ನಡೆಸಿ, ಅಕ್ರಮ ಮಾರಾಟ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಾರ್ಷಿಕೋತ್ಸವ ಕೇವಲ ಮನೋರಂಜನೆ ಅಲ್ಲ: ಭೂಷಣ್ ಶಹಾ

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ವಾರ್ಷಿಕೋತ್ಸವ ಕೇವಲ ಮನೋರಂಜನೆ ಅಲ್ಲ. ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವರ್ಷವಿಡೀ ಕೈಗೊಂಡ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ರಂಗದಲ್ಲಿ ತೋರಿದ ಸಾಧನೆಯನ್ನು ಮೆಲಕು ಹಾಕುವ ವೇದಿಕೆ. ಶಿಕ್ಷಕರು ಕೇವಲ ಪಾಠ ಮಾಡಲು ಸೀಮಿತರಾಗಿರದೇ ಮಗುವಿನ ಸರ್ವತೋಮುಖ ಏಳಿಗೆ ಹಾಗೂ ವೃತ್ತಿಪರ ಕೌಶಲಗಳ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದ್ದಾರೆ ಎಂದು ವಿಮಲ್ ರೆಸಾರ್ಟ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಭೂಷಣ್ ಶಹಾ ಅಭಿಪ್ರಾಯಪಟ್ಟರು.

ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ 40ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

2024–2025ರ ಶೈಕ್ಷಣಿಕ ವರ್ಷದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಠ್ಯ-ಸಹಪಠ್ಯ ಚಟುವಟಿಕೆಯಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಪಂಡಿತ ಪುಟ್ಟರಾಜ ಮ್ಯೂಸಿಕ್ ಕ್ಲಬ್ ತಂಡದವರಾದ ವೆಂಕಟೇಶ ಕುಲಕರ್ಣಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶ್ರೇಯಾ ಜಮಾದಾರ ಅತಿಥಿಗಳನ್ನು ಪರಿಚಯಿಸಿದರು. ಮುಸ್ಕಾನ ತಂಬೋಟಿ ಪುಷ್ಪಾರ್ಪಣೆ ನಡೆಸಿಕೊಟ್ಟರು. ಇ.ಎಲ್.ಸಿ ಮುಖ್ಯಸ್ಥರಾದ ಮಲ್ಲಿಕಾ ಆರ್. ಅವರು 2025-26ನೇ ಸಾಲಿನ ಶಾಲಾ ವರದಿಯನ್ನು ಓದಿದರು.

ವಿದ್ಯಾರ್ಥಿಗಳಾದ ಸುರೇನ್ ರಾಗಾಪುರ, ಭೂಮಿಕಾ ಹೊಂಬಳ, ಸುಮಿತ್ ಸೊರಟೂರ, ಸಾನಿಕಾ ಭಗವತಿ, ಅಮೃತಗೌಡ ಗೌಡರ್, ಮಹಾಲಕ್ಷ್ಮಿ ಕುಂದಗೋಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಯುಕೆಜಿಯ ತನ್ವಿ ಅಂಗಡಿ ಸ್ವಾಗತಿಸಿದಳು. ಶಿವಂ ಬಾರಕೇರ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಆರೋನ್‌ಝೇವಿಯರ್ ದಂಡಾವತಿ, ಐಶ್ವರ್ಯ ಹುಲಗೂರ್ ನಿರೂಪಿಸಿದರೆ, 2ನೇ ತರಗತಿ ವಿದ್ಯಾರ್ಥಿನಿ ಪರೀನಾಜ್ ಬೇಗಂಪಲ್ಲೆ ವಂದಿಸಿದಳು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಎಸ್. ರವಿ, ಪ್ಲೇ ಹೋಮ್ ಮುಖ್ಯಸ್ಥರಾದ ಗಂಗಾ, ಇ.ಎಲ್.ಸಿ ಮುಖ್ಯಸ್ಥರಾದ ಮಲ್ಲಿಕಾ ಆರ್, ನಿರ್ದೇಶಕರಾದ ವಿನಾಯಕ ಆರ್, ಆಡಳಿತ ಮಂಡಳಿಯ ಸದಸ್ಯರಾದ ಗಾಯಿತ್ರಿ ವಿ, ಪ್ರಾಚಾರ್ಯರಾದ ವಿ.ಎಂ. ಅಡ್ನೂರ್, ಉಪ ಪ್ರಾಚಾರ್ಯರಾದ ಪಿ.ಜಿ. ಬ್ಯಾಳಿ, ಪಾಲಕರು, ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲೆಯ ನಿರ್ದೇಶಕರಾದ ವಿನಾಯಕ ಆರ್ ಮಾತನಾಡಿ, ಪಾಲಕರಾದವರು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಪಾಲಕರು ಮಕ್ಕಳಿಗೆ ಮಾದರಿಯಾಗಿದ್ದು, ಮಕ್ಕಳಿಗೆ ಜವಾಬ್ದಾರಿಯ ಕೆಲಸಗಳನ್ನು ನೀಡುತ್ತಾ ಕರ್ತವ್ಯಗಳನ್ನು ನಿರ್ವಹಿಸುವ ಗುಣಗಳನ್ನು ಬೆಳೆಸಬೇಕು. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಜೀವನಕ್ಕಾಗಿ ಕಲಿಕೆ ಎಂಬ ಮೌಲ್ಯಗಳನ್ನು ಬೆಳೆಸುತ್ತೇವೆ. ಹಾಗೆಯೇ ಮನೆಯಲ್ಲಿ ಪಾಲಕರು ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ: ಬಿ.ಆರ್. ದೇವರೆಡ್ಡಿ 

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳು ಶೈಕ್ಷಣಿಕವಾಗಿ ಮಕ್ಕಳಲ್ಲಿಯ ಕಲಾ ಸಂಪತ್ತು ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ. ಮಗು ಯಾವುದಾದರೊಂದು ಪ್ರತಿಭೆಯನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ಅವುಗಳ ವಿಕಾಸಕ್ಕೆ ಈ ವೇದಿಕೆಗಳು ಸೂಕ್ತವಾಗಿವೆ. ಆ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಶಿಕ್ಷಕರ ಕಾರ್ಯ ಬೆಲೆಯುಳ್ಳದ್ದಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ದೇವರೆಡ್ಡಿ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯಿತಿ ಗದಗ, ತಾಲೂಕು ಪಂಚಾಯಿತಿ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ಗದಗ ಹಾಗೂ ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಾವಿ ಸಹಯೋಗದಲ್ಲಿ ಬೆಳಧಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ.ರಾ.ಪ್ರಾ.ಶಾ.ಶಿ ಸಂಘದ ಗದಗ ಜಿಲ್ಲಾಧ್ಯಕ್ಷ ವಿ.ಎಮ್. ಹಿರೇಮಠ ಮಾತನಾಡಿ, ಪ್ರಸ್ತುತ ಶಿಕ್ಷಕರು ಹಲವು ಸವಾಲುಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಿಂದ ಕ್ಲಸ್ಟರ್‌ನ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಡಯಟ್‌ನ ಹಿರಿಯ ಉಪನ್ಯಾಸಕ ಕೊಟ್ರೇಶ ವಿಭೂತಿ, ಶಿಕ್ಷಣ ಸಂಯೋಜಕರಾದ ವ್ಹಿ.ಸಿ. ನರೇಗಲ್ಲಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರಿ ಪ್ರಧಾನ ಗುರುಗಳಾದ ಸುರೇಶ ದೊಡ್ಡಮನಿ ಸ್ವಾಗತಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಕನಕಪ್ಪ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಕ್ಷರ ದಾಸೋಹ ಗದಗ ಗ್ರಾಮೀಣ ವಲಯ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಉಪಸ್ಥಿತರಿದ್ದರು. ಶಿಕ್ಷಕರಾದ ವ್ಹಿ.ಎಸ್. ಹೊಸಳ್ಳಿ ಮತ್ತು ಅನ್ನಪೂರ್ಣ ಯಾಳವಾರವರನ್ನು ಸನ್ಮಾನಿಸಲಾಯಿತು.

ಸಹ ಶಿಕ್ಷಕರಾದ ಶಂಭುಗೌಡ ತಮ್ಮನಗೌಡರ ಪಾರಿತೋಷಕ ವಿತರಣೆಯ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ನಾಗಾವಿ ಗ್ರಾ.ಪಂ ಅಧ್ಯಕ್ಷ ಮುತ್ತಣ್ಣ ಶಿಗ್ಲಿ, ಶಶಿಧರ ಲಕ್ಷ್ಯಕೊಪ್ಪ, ಬಿ.ಬಿ. ಹಡಪದ, ಶಿವಾನಂದ ತಳವಾರ, ಮೋಹನ ಮೆಣಸಿನಕಾಯಿ, ಶಾಲಾ ಎಸ್.ಡಿ.ಎಮ್.ಸಿ ಸದಸ್ಯರಾದ ಪ್ರೇಮಾ ಮರಡ್ಡಿ, ಗೀತಾ ಕುಷ್ಟರೆಡ್ಡಿ, ಗಂಗಮ್ಮ ಛಲವಾದಿ, ಮಹಾದೇವಿ ಪಾಟೀಲ, ಸುಧಾ ಹಿಡ್ಕಿಮಠ್, ಶ್ರೀಮತಿ ಗೊರವರ, ಗ್ರಾ.ಪಂ ಸದಸ್ಯರಾದ ಹಜರತಸಾಬ್ ನದಾಫ್ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಮೋಹನ ಗೊಂದಿ ನಿರೂಪಿಸಿದರು. ಬಿ.ಆರ್.ಪಿ ಎಚ್.ಡಿ. ಕುರಿ ವಂದಿಸಿದರು.

ಗದಗ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ ಮಾತನಾಡಿ, ಗ್ರಾಮದ ಗುರು-ಹಿರಿಯರು ಶಾಲೆಗಳಲ್ಲಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಸದಾ ಬೆನ್ನೆಲುಬಾಗಿರುತ್ತಾರೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳು ಮಕ್ಕಳ ವಿಶೇಷ ಪ್ರತಿಭೆಯನ್ನು ಸಾಕಾರಗೊಳಿಸಲು ಸೂಕ್ತವಾದ ವೇದಿಕೆಯಾಗಿದೆ. ಎಲ್ಲ ಮಕ್ಕಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.

ಕೆ.ಎಚ್. ಪಾಟೀಲರ ಕನಸು ನನಸಾಗಿದೆ: ಡಾ. ನಾಗನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಯಶಸ್ವಿ ಕಿಡ್ನಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕೆ.ಎಚ್. ಪಾಟೀಲರ ಕನಸು ನನಸು ಮಾಡಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ ಹಳ್ಳಿ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಸ್ಥಳಾಂತರಿಸಿ ಯಶಸ್ವಿಯಾಗಿದ್ದೇವೆ. ಕೆ.ಎಚ್. ಪಾಟೀಲ ಆಸ್ಪತ್ರೆಯ ಯುವ ತಜ್ಞ ವೈದ್ಯರ ತಂಡದ ಸಹಕಾರದಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಡಾ. ನಾಗನೂರ ಹೇಳಿದರು.

ಹುಲಕೋಟಿಯ ಹೊರ ವಲಯದಲ್ಲಿರುವ ಕೆ.ಎಚ್. ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಮೊದಲ ಕಿಡ್ನಿ ಟ್ರಾನ್ಸ್‌ಫರ್ ಮಾಡುವಾಗ ಸ್ವಲ್ಪ ಚಿಂತೆ ಕಾಡುತ್ತಿತ್ತು. ಆದರೆ, ಈಗ ಯಶಸ್ವಿಯಾಗಿ ಮಾಡಲಾಗುತ್ತಿದೆ. ಕಿಡ್ನಿ ದಾನಿಗಳನ್ನು ಮೂರು ದಿನಕ್ಕೆ ಹಾಗೂ ಕಿಡ್ನಿ ಕಸಿ ಚಿಕಿತ್ಸೆಗೊಳಗಾದವರನ್ನು 5 ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಡಾ. ದೀಪಕ್ ಮತ್ತು ಡಾ. ನಿಯಾಜ್ ಸೇರಿದಂತೆ ಹಲವು ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಮೂಲೆ-ಮೂಲೆಗಳಿಂದ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದು ಸಂತೃಪ್ತರಾಗುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಾ. ದೀಪಕ್ ಕುರ್ಹಟ್ಟಿ, ಡಾ. ಭುವನೇಶ್ ಎನ್, ಡಾ. ಪವನ್ ಕೋಳಿವಾಡ್, ಡಾ. ನಿಯಾಜ್ ಅಹ್ಮದ್, ಡಾ. ವಿಶಾಲ್ ಕೆ, ಡಾ. ವಂದನಾ ಸೇರಿದಂತೆ ತಂಡದವರು ಉಪಸ್ಥಿತರಿದ್ದರು.

ಡಾ. ಅವಿನಾಶ್ ಓದುಗೌಡ್ರ ಮಾತನಾಡಿ, ದೇಶದಲ್ಲೇ ಮೊದಲ ಬಾರಿ ಗ್ರಾಮೀಣ ಭಾಗಕ್ಕೆ ಕಿಡ್ನಿ ಸ್ಥಳಾಂತರಿಸಿದ್ದೇವೆ. ಇದಕ್ಕೆ ಕೆ.ಎಚ್. ಪಾಟೀಲ ಹಾಗೂ ಡಿ.ಆರ್. ಪಾಟೀಲರ ಸಹಕಾರ ಬಹಳಷ್ಟಿದೆ. ಹಲವಾರು ಆಸ್ಪತ್ರೆಗಳಲ್ಲಿ ಸಾವಿರಾರು ಕಿಡ್ನಿ ಟ್ರಾನ್ಸ್‌ಫರ್ ಮಾಡುತ್ತಾರೆ. ಆದರೆ, ನಾವು ಮೂಲಸೌಲಭ್ಯವಿಲ್ಲದ ಹಳ್ಳಿ ಭಾಗಕ್ಕೆ ಸ್ಥಳಾಂತರಿಸಿದ್ದಕ್ಕೆ ಹೆಮ್ಮೆಯಾಗಿದೆ. ಸಾವಿನ ನಂತರವೂ ದೇಹದ ಭಾಗಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರತಿ ದಿನ ಕಿಡ್ನಿ ವೈಫಲ್ಯದಿಂದ ಭಾರತದಲ್ಲಿ ಕನಿಷ್ಠ 20 ಜನ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನ ಸಂಖ್ಯೆ ಕಡಿಮೆ ಆಗಬೇಕಿದೆ ಎಂದರು.

error: Content is protected !!