Home Blog Page 258

ರಾಜ್ಯದ ಸಮಸ್ಯೆ ಬಿಟ್ಟು ಜಿರಳೆ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ: ರಾಹುಲ್ ಗಾಂಧಿ ವಿರುದ್ಧ ಆರ್. ಅಶೋಕ್ ಕಿಡಿ

ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆ ಸಂಘಟನೆ ದೇಶದ್ರೋಹಿ ಸಂಘಟನೆಯಾಗಿದ್ದು, ಅದರ ಮುಖ್ಯಸ್ಥ ಅಭಿಜಿತ್ ದೀಪ್ಕೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲ ನೀಡಿರುವುದನ್ನು ಟೀಕಿಸಿದರು.

“ರಾಹುಲ್ ಗಾಂಧಿ ಜಿರಳೆ ಪ್ರತಿಭಟನೆಗೆ ಹೋಗುತ್ತಾರೆ. ಆದರೆ ರಾಜ್ಯದ ರೈತರ ಸಮಸ್ಯೆ, ಬರ ಪರಿಸ್ಥಿತಿ ಹಾಗೂ ಜನರ ಸಂಕಷ್ಟಗಳ ಬಗ್ಗೆ ಮಾತನಾಡಲು ಅವರಿಗೆ ಸಮಯವಿಲ್ಲ” ಎಂದು ಅಶೋಕ್ ಲೇವಡಿ ಮಾಡಿದರು.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕೃಷಿ ಸಚಿವರು ಹಾಗೂ ತೋಟಗಾರಿಕೆ ಸಚಿವರಿಲ್ಲ. ಬರ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸುವವರು ಯಾರು? ಅಧಿಕಾರಿಗಳನ್ನು ನಂಬುವ ಪರಿಸ್ಥಿತಿ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸುತ್ತಿದೆ. ಆದರೆ ಮೊದಲು ರಾಜ್ಯ ಸರ್ಕಾರವೇ ಬರವನ್ನು ವಿಪತ್ತು ಎಂದು ಘೋಷಿಸಿಲ್ಲ. ಕೇಂದ್ರ ಸರ್ಕಾರ ಹೇಗೆ ಕ್ರಮ ಕೈಗೊಳ್ಳುತ್ತದೆ ಎಂದು ಅಶೋಕ್ ಹೇಳಿದರು.

“ರೋಮ್ ಹೊತ್ತಿ ಉರಿಯುತ್ತಿದ್ದಾಗ ಯಾರೋ ಪಿಟೀಲು ಬಾರಿಸುತ್ತಿದ್ದಂತೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕುಳಿತಿದ್ದಾರೆ. ಈಗ ಎಲ್ಲರಿಗೂ ದೆಹಲಿ ರಾಜಕೀಯವೇ ಬೇಕಾಗಿದೆ” ಎಂದು ಟೀಕಿಸಿದರು.

ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಅಶೋಕ್, “ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಅವರು ಮೊದಲು ಕಲಬುರಗಿಯಿಂದ ಜನರು ಗುಳೆ ಹೋಗುತ್ತಿರುವುದಕ್ಕೆ ಲೆಕ್ಕ ನೀಡಲಿ” ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ, ತಾಂಡಾಗಳು ಖಾಲಿಯಾಗುತ್ತಿವೆ. ಈ ಸಮಸ್ಯೆಗಳ ಬಗ್ಗೆ ಸರ್ಕಾರ ಮೊದಲು ಗಮನ ಹರಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದರು.

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಅನಂತನಾಗ್ ಗುಂಡಿನ ದಾಳಿಯಲ್ಲಿ ಪೊಲೀಸ್ ಹೆಡ್ ʼಕಾನ್ಸ್ಟೇಬಲ್ ಹುತಾತ್ಮ

ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಹೆಚ್ಚಾಗಿದ್ದು, ಅನಂತನಾಗ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ.

ಬುಧವಾರ ಮಧ್ಯಾಹ್ನ ಅನಂತನಾಗ್ ಜಿಲ್ಲೆಯ ಲಾಲ್ ಚೌಕ್ ಪ್ರದೇಶದಲ್ಲಿ ಉಗ್ರರು ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮಧ್ಯಾಹ್ನ ಸುಮಾರು 12.30ರ ವೇಳೆಗೆ ನಡೆದ ಈ ದಾಳಿಯಲ್ಲಿ 35 ವರ್ಷದ ಹೆಡ್ ಕಾನ್ಸ್ಟೇಬಲ್ ಆಶಿಕ್ ಹುಸೇನ್ ಕುರೇಷಿ ಗಂಭೀರವಾಗಿ ಗಾಯಗೊಂಡಿದ್ದರು.

ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ ಆಶಿಕ್ ಹುಸೇನ್ ಕುರೇಷಿ ಅವರನ್ನು ತಕ್ಷಣವೇ ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆ ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು, ದಾಳಿ ನಡೆಸಿ ಪರಾರಿಯಾಗಿರುವ ಉಗ್ರರ ಪತ್ತೆಗಾಗಿ ಇಡೀ ಪ್ರದೇಶವನ್ನು ಸುತ್ತುವರಿದಿವೆ. ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಉಗ್ರರ ಚಟುವಟಿಕೆಗಳ ಮೇಲೆ ಭದ್ರತಾ ಪಡೆಗಳು ತೀವ್ರ ನಿಗಾ ಇರಿಸಿವೆ.

ರಾಯಚೂರಿನಲ್ಲಿ ನಿಲ್ಲದ ಬೀದಿ ನಾಯಿಗಳ ರಕ್ತಪಾತ: 3 ವರ್ಷದ ಬಾಲಕಿ ಮೇಲೆ ದಾಳಿ

0

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು, ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಹಾಗೂ ನಾಲ್ಕು ವರ್ಷದ ಬಾಲಕ ಜೀವಕ್ಕಾಗಿ ಹೋರಾಡುತ್ತಿರುವ ಘಟನೆಗಳ ಬೆನ್ನಲ್ಲೇ ಇದೀಗ ಮಾನ್ವಿಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿ ಕ್ರೂರವಾಗಿ ದಾಳಿ ನಡೆಸಿದೆ. ಇದೇ ವೇಳೆ ರಾಯಚೂರು ನಗರದ ಮಾರುಕಟ್ಟೆಯಲ್ಲೂ ವ್ಯಕ್ತಿಯೊಬ್ಬರು ನಾಯಿ ಕಡಿತಕ್ಕೊಳಗಾಗಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಮಾನ್ವಿ ಪಟ್ಟಣದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಇನಾಯಾ ಮೇಲೆ ಏಕಾಏಕಿ ಬೀದಿ ನಾಯಿಯೊಂದು ಎರಗಿ ಮುಖ, ಕಣ್ಣಿನ ಭಾಗ ಹಾಗೂ ಎದೆಗೆ ತೀವ್ರವಾಗಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಮಗುವಿನ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ನಾಯಿಯನ್ನು ಓಡಿಸಿದ್ದು, ಇನ್ನೂ ಕೆಲ ಕ್ಷಣ ತಡವಾಗಿದ್ದರೆ ಅನಾಹುತ ಸಂಭವಿಸುತ್ತಿತ್ತು ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಮಾನ್ವಿ ಪುರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ಹಾವಳಿ ಬಗ್ಗೆ ಪದೇಪದೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಇದರ ನಡುವೆ ರಾಯಚೂರು ನಗರದ ಸದರಬಜಾರ್ ರಸ್ತೆಯಲ್ಲೂ ಬೀದಿ ನಾಯಿಯೊಂದು ಮಾರುಕಟ್ಟೆಗೆ ಬಂದಿದ್ದ ಸತ್ಯಪ್ಪ (40) ಎಂಬುವರ ಮೇಲೆ ದಾಳಿ ನಡೆಸಿ ಕಚ್ಚಿದೆ. ಪತ್ನಿಯೊಂದಿಗೆ ಬೈಕ್ ನಿಲ್ಲಿಸುತ್ತಿದ್ದ ವೇಳೆ ನಡೆದ ದಾಳಿಯಲ್ಲಿ ಗಾಯಗೊಂಡ ಸತ್ಯಪ್ಪ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯಿಂದ ಜನರು ರಸ್ತೆಯಲ್ಲಿ ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಪೌರಾಡಳಿತವನ್ನು ಒತ್ತಾಯಿಸಿದ್ದಾರೆ.

ನೀಟ್ ಅಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದ ಡಾ.ಜಿ. ಪರಮೇಶ್ವರ್

ಚಿಕ್ಕಬಳ್ಳಾಪುರ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತೀವ್ರ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸದ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿದ್ದ ‘ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ’ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಕಿಡಿಕಾರಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವವರನ್ನೇ ಬಂಧಿಸುವುದು ಯಾವ ರೀತಿಯ ಆಡಳಿತ ಎಂದು ಅವರು ಪ್ರಶ್ನಿಸಿದರು.

ದೇಶದ ಪ್ರತಿಯೊಬ್ಬ ಯುವಕ-ಯುವತಿಗೂ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನ ನೀಡಿದೆ. ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂಬುದನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲೇ ಸ್ಪಷ್ಟಪಡಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ರಾಜ್ಯದಲ್ಲಿ ಈ ಹಿಂದೆ ಸಿಇಟಿ (CET) ಪರೀಕ್ಷೆಯನ್ನು ರಾಜ್ಯ ಸರ್ಕಾರವೇ ಯಶಸ್ವಿಯಾಗಿ ನಡೆಸುತ್ತಿತ್ತು. ತಾವು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿಯೂ ಯಾವುದೇ ಗೊಂದಲವಿಲ್ಲದೆ ಪರೀಕ್ಷೆಗಳು ನಡೆದಿದ್ದವು. ಬಳಿಕ ಕೇಂದ್ರ ಸರ್ಕಾರ ಸಿಇಟಿ ಬದಲಿಗೆ ನೀಟ್ ಪರೀಕ್ಷೆಯನ್ನು ಜಾರಿಗೆ ತಂದಿತು. ಆರಂಭದಲ್ಲಿ ವಿರೋಧ ವ್ಯಕ್ತವಾದರೂ ವಿದ್ಯಾರ್ಥಿಗಳು ಅದನ್ನು ಒಪ್ಪಿಕೊಂಡರು. ಆದರೆ ಈಗ ಪದೇಪದೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಗೊಳಿಸಿದೆ ಎಂದು ಅವರು ಆರೋಪಿಸಿದರು.

ನೀಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಬೇಕು ಎಂದು ಡಿಸಿಎಂ ಪರಮೇಶ್ವರ್ ಆಗ್ರಹಿಸಿದರು.

‘ಜನ ನಾಯಗನ್’ ಲೀಕ್ ರಹಸ್ಯ ಬಯಲು: ಫ್ರೀಲ್ಯಾನ್ಸ್ ಸಿಬ್ಬಂದಿಯೊಬ್ಬನಿಂದ ನಡೆದ ಪ್ರಮಾದ ಎಂದ ನಿರ್ದೇಶಕ ವಿನೋದ್

ಚೆನ್ನೈ: ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಬಿಡುಗಡೆಯ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದ ಪ್ರಕರಣದ ಹಿಂದಿನ ರಹಸ್ಯವನ್ನು ನಿರ್ದೇಶಕ ಎಚ್. ವಿನೋದ್ ಬಹಿರಂಗಪಡಿಸಿದ್ದಾರೆ. ಸಿನಿಮಾ ಸೋರಿಕೆಯ ಹಿಂದೆ ಯಾವುದೇ ರಾಜಕೀಯ ಅಥವಾ ಪ್ರಚಾರ ತಂತ್ರ ಇರಲಿಲ್ಲ; ಎಡಿಟಿಂಗ್ ರೂಂನಲ್ಲಿದ್ದ ಫ್ರೀಲ್ಯಾನ್ಸ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಅವರು ತಿಳಿಸಿದ್ದಾರೆ.

ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಸೆನ್ಸಾರ್ ವಿಳಂಬ, ಕಾನೂನು ಹೋರಾಟ ಹಾಗೂ ಎಚ್‌ಡಿ ಪ್ರಿಂಟ್ ಲೀಕ್‌ನಿಂದ ಭಾರೀ ಹಿನ್ನಡೆ ಅನುಭವಿಸಿತ್ತು. ಈ ನಡುವೆ ವಿಜಯ್ ಅವರೇ ಸಿನಿಮಾ ಲೀಕ್ ಮಾಡಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ ವಿನೋದ್, “ವಿಜಯ್ ಅವರ ಯಶಸ್ಸಿಗೆ ಸಿನಿಮಾ ಲೀಕ್ ಅಗತ್ಯವಿರಲಿಲ್ಲ. ಅವರಿಗೆ ಪ್ರೇಕ್ಷಕರ ಬೆಂಬಲವೇ ಸಾಕು” ಎಂದು ಆರೋಪಗಳನ್ನು ತಳ್ಳಿಹಾಕಿದರು.

ಲೀಕ್ ಆದ ದೃಶ್ಯಗಳಲ್ಲಿ ಎಡಿಟಿಂಗ್ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಎಡಿಟಿಂಗ್ ತಂಡದ ಎಲ್ಲ ಸದಸ್ಯರ ವಿಚಾರಣೆ ನಡೆಸಲಾಗಿತ್ತು. ಗೂಗಲ್ ಡ್ರೈವ್ ಮೂಲಕ ಯಾವುದೇ ಫೈಲ್ ವರ್ಗಾವಣೆಯಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗಿತ್ತು.

ಕೊನೆಗೆ ಫ್ರೀಲ್ಯಾನ್ಸ್ ಸಿಬ್ಬಂದಿಯೊಬ್ಬ ಎಡಿಟಿಂಗ್ ರೂಂನಿಂದ ದೃಶ್ಯಗಳನ್ನು ಕಾಪಿ ಮಾಡಿಕೊಂಡು ತನ್ನ ಸ್ನೇಹಿತರೊಂದಿಗೆ ವೀಕ್ಷಿಸಿದ್ದಾನೆ. ಅಲ್ಲಿಂದಲೇ ಸಿನಿಮಾ ಅನಧಿಕೃತವಾಗಿ ಹರಡಿ ಆನ್‌ಲೈನ್‌ಗೆ ಅಪ್‌ಲೋಡ್ ಆಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

“ನಾನು ಭೇಟಿಯಾದಾಗ ಆತ ಅಳುತ್ತಾ ಕ್ಷಮೆ ಕೇಳಿದ. ಆದರೆ ಆತನೇ ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೋ ಅಥವಾ ಇನ್ನಾರಾದರೂ ಇದರ ಹಿಂದೆ ಇದ್ದಾರೋ ಎಂಬುದು ಇನ್ನೂ ನಿಗೂಢವಾಗಿದೆ,” ಎಂದು ವಿನೋದ್ ತಿಳಿಸಿದ್ದಾರೆ.

ಎಲ್ಲ ವಿವಾದಗಳನ್ನು ಹಿಂದಿಕ್ಕಿರುವ ‘ಜನ ನಾಯಗನ್’ ಚಿತ್ರ ಜುಲೈ 23ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ವಿಜಯ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜೈಲಿನಲ್ಲಿರುವ ದರ್ಶನ್‌ ಭೇಟಿಯಾದ ರಕ್ಷಿತಾ, ವಿಜಯಲಕ್ಷ್ಮಿ: ಗೆಳೆಯನ ಸ್ಥಿತಿ ನೋಡಿ ಭಾವುಕರಾದ ನಟಿ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಆಗಮಿಸಿದರು. ಇಬ್ಬರೂ ಪ್ರತ್ಯೇಕವಾಗಿ ಜೈಲಿಗೆ ಪ್ರವೇಶಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದರ್ಶನ್ ಅವರೊಂದಿಗೆ ಚರ್ಚೆ ನಡೆಸಿದರು.

ಜೈಲಿನಲ್ಲಿರುವ ದರ್ಶನ್ ಅವರ ಸ್ಥಿತಿಯನ್ನು ಕಂಡು ರಕ್ಷಿತಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಆಪ್ತ ಸ್ನೇಹಿತನ ಸಂಕಷ್ಟದಿಂದ ಮನನೊಂದ ಅವರು, ಭೇಟಿ ಮುಗಿಸಿ ಹೊರಬರುವಾಗಲೂ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.

ಮಾಧ್ಯಮಗಳು ಪ್ರಶ್ನಿಸಿದಾಗ “ದರ್ಶನ್ ಚೆನ್ನಾಗಿದ್ದಾರೆ” ಎಂದು ಮಾತ್ರ ಹೇಳಿದ ರಕ್ಷಿತಾ, ವಿಜಯಲಕ್ಷ್ಮಿಯೊಂದಿಗೆ ಅಲ್ಲಿಂದ ತೆರಳಿದರು.

ಇನ್ನೊಂದೆಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಆವರೆಗೆ ದರ್ಶನ್‌ಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅವರು ಮುಂದಿನ ವರ್ಷ ಮೇ 15ರವರೆಗೆ ಜೈಲಿನಲ್ಲೇ ಉಳಿಯಬೇಕಾಗಿದೆ.

‘ಫ್ಲಾಪ್ ಸಾಂಗಿದು… ಅಭಿಯಾನ ನಿಲ್ಲಿಸಿ’! ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಹಂಸಲೇಖ ಬ್ರೇಕ್

ಬೆಂಗಳೂರು: ಪದ್ಮ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ನೀಡುವಂತೆ ತಮ್ಮ ಪರವಾಗಿ ಆರಂಭವಾಗಿದ್ದ ಅಭಿಯಾನವನ್ನು ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ತಿರಸ್ಕರಿಸಿದ್ದಾರೆ. ಪ್ರಶಸ್ತಿಗಿಂತ ಕನ್ನಡದ ಹಕ್ಕು ಮತ್ತು ಭಾಷೆಯ ಅಸ್ತಿತ್ವಕ್ಕಾಗಿ ನಡೆಯುವ ಹೋರಾಟಗಳೇ ಮುಖ್ಯ ಎಂದು ಹೇಳುವ ಮೂಲಕ ಅಭಿಯಾನವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ನಟ ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಹಂಸಲೇಖ, “ಇದಕ್ಕೆ ನನ್ನ ಒಪ್ಪಿಗೆ ಇಲ್ಲ. ಇದು ಅಭಿಮಾನದ ದುಡುಕು, ಪ್ರೀತಿಯ ತೊಂದರೆ. ಸೀನ್‌, ಟ್ಯೂನ್‌, ಲಿರಿಕ್ಸ್‌ ಯಾವುದಕ್ಕೂ ಹೊಂದದ ಫ್ಲಾಪ್ ಸಾಂಗಿದು. ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ನೇರವಾಗಿ ತಿಳಿಸಿದ್ದಾರೆ.

ಪ್ರಶಸ್ತಿಗಳಿಗಾಗಿ ಪ್ರಚಾರ ನಡೆಸುವುದಕ್ಕಿಂತ ಕನ್ನಡ ಭಾಷೆಯ ಹಕ್ಕು, ಗೌರವ ಮತ್ತು ಉಳಿವಿಗಾಗಿ ಜನರನ್ನು ಒಗ್ಗೂಡಿಸುವ ಅಭಿಯಾನಗಳು ಅಗತ್ಯವೆಂದು ಅವರು ಒತ್ತಿ ಹೇಳಿದ್ದಾರೆ.

ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಂಗೀತ ಮತ್ತು ಸಾಹಿತ್ಯದ ಮೂಲಕ ಅಳಿಸಲಾಗದ ಛಾಪು ಮೂಡಿಸಿರುವ ಹಂಸಲೇಖ ಸಾವಿರಾರು ಜನಪ್ರಿಯ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೂ ಸಂಗೀತ ನೀಡಿದ್ದರೂ, ಅವರಿಗೆ ಇನ್ನೂ ಯಾವುದೇ ಕೇಂದ್ರ ನಾಗರಿಕ ಪ್ರಶಸ್ತಿ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಅಭಿಯಾನಕ್ಕೆ ಇದೀಗ ಸ್ವತಃ ಹಂಸಲೇಖ ಅವರೇ ತೆರೆ ಎಳೆದಿದ್ದಾರೆ.

ಸಿಎಂ ಆದ ಬಳಿಕ ಬದಲಾದ ‘ಜನ ನಾಯಗನ್’! ವಿಜಯ್ ಚಿತ್ರದ ಟೈಟಲ್ ಕಾರ್ಡ್‌ನಿಂದ ಹೊಸ ದೃಶ್ಯಗಳವರೆಗೆ ಭಾರೀ ಬದಲಾವಣೆ

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಮುನ್ನವೇ ಭಾರೀ ಬದಲಾವಣೆಗಳಿಗೆ ಒಳಗಾಗಿದೆ. ಸುಮಾರು ಏಳು ತಿಂಗಳ ವಿಳಂಬದ ಬಳಿಕ ಜುಲೈ 23ರಂದು ತೆರೆಕಾಣಲಿರುವ ಚಿತ್ರದ ಅಂತಿಮ ಆವೃತ್ತಿಯಲ್ಲಿ ವಿಜಯ್ ಅವರ ರಾಜಕೀಯ ಯಶಸ್ಸಿಗೆ ತಕ್ಕಂತೆ ಹಲವು ಹೊಸ ದೃಶ್ಯಗಳು ಹಾಗೂ ಟೈಟಲ್ ಬದಲಾವಣೆಗಳನ್ನು ಸೇರಿಸಲಾಗಿದೆ.

ಜನವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಚಿತ್ರ ಸೆನ್ಸಾರ್ ಪ್ರಮಾಣಪತ್ರದ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ವಿಜಯ್ ರಾಜಕೀಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ತಮಿಳುನಾಡಿನ ಮುಖ್ಯಮಂತ್ರಿ ಆದ ಬಳಿಕ ಚಿತ್ರತಂಡ ಸಿನಿಮಾ ಅಂತಿಮ ಕಟ್‌ನಲ್ಲಿ ಹಲವು ಬದಲಾವಣೆಗಳನ್ನು ಕೈಗೊಂಡಿದೆ.

ಈ ಬಾರಿ ಚಿತ್ರದ ಆರಂಭದಲ್ಲೇ ‘ದಳಪತಿ ವಿಜಯ್’ ಬದಲಾಗಿ ‘ಮಾನ್ಯ ತಮಿಳುನಾಡು ಮುಖ್ಯಮಂತ್ರಿ’ ಎಂಬ ಹೊಸ ಟೈಟಲ್ ಕಾರ್ಡ್ ಕಾಣಿಸಿಕೊಳ್ಳಲಿದೆ. ಅಲ್ಲದೆ ವಿಜಯ್ ಅವರ ರಾಜಕೀಯ ಇಮೇಜ್ ಪ್ರತಿಬಿಂಬಿಸುವ ದೃಶ್ಯಗಳು, ಕೈಬೀಸುವ ಸಿಗ್ನೇಚರ್ ಶಾಟ್ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳನ್ನು ಹೊಸದಾಗಿ ಸೇರಿಸಲಾಗಿದೆ.

ಸಿಬಿಎಫ್‌ಸಿ ನಿರ್ದೇಶನದಂತೆ ಸುಮಾರು 20 ಸೆಕೆಂಡ್ ದೃಶ್ಯಗಳನ್ನು ಕತ್ತರಿಸಿ, 10 ಸೆಕೆಂಡ್ ಹೊಸ ದೃಶ್ಯಗಳನ್ನು ಸೇರಿಸಲಾಗಿದ್ದು, ಧಾರ್ಮಿಕ ಉಲ್ಲೇಖಗಳಿರುವ ಕೆಲವು ಪದಗಳನ್ನು ಮ್ಯೂಟ್ ಮಾಡಲಾಗಿದೆ.

ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

‘ಐಸಿಯು, ಸರ್ಜರಿ, ಚಾಂಪಿಯನ್ ಕೂಡ ಸೋಲುತ್ತಾನೆ’… ಅಮಿತಾಭ್ ಬಚ್ಚನ್ ನಿಗೂಢ ಪೋಸ್ಟ್‌ಗೆ ಅಭಿಮಾನಿಗಳಲ್ಲಿ ಆತಂಕ

ಮುಂಬೈ: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಹಂಚಿಕೊಂಡಿರುವ ನಿಗೂಢ ಬ್ಲಾಗ್ ಮತ್ತು ಎಕ್ಸ್ ಪೋಸ್ಟ್‌ಗಳು ಅವರ ಆರೋಗ್ಯದ ಬಗ್ಗೆ ಹೊಸ ಅನುಮಾನಗಳಿಗೆ ಕಾರಣವಾಗಿವೆ. ಶಸ್ತ್ರಚಿಕಿತ್ಸೆ, ಐಸಿಯು ಹಾಗೂ ಚೇತರಿಕೆಯ ಕಠಿಣ ಹಂತಗಳ ಬಗ್ಗೆ ಬರೆದಿರುವ ಬರಹಗಳು ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಬ್ಲಾಗ್‌ನಲ್ಲಿ ಆಸ್ಪತ್ರೆಯಲ್ಲಿನ ಅನುಭವವನ್ನು ವಿವರಿಸಿರುವ ಅಮಿತಾಭ್, ಶಸ್ತ್ರಚಿಕಿತ್ಸೆಯ ಬಳಿಕ ಮನೆಗೆ ಮರಳುವ ಅವಧಿಯು ದೈಹಿಕ ಮತ್ತು ಮಾನಸಿಕವಾಗಿ ಅತ್ಯಂತ ಸವಾಲಿನದ್ದು ಎಂದು ಹೇಳಿದ್ದಾರೆ. ಆದರೆ ಈ ಅನುಭವ ತಮ್ಮದೇ ಆರೋಗ್ಯದ ಕುರಿತದ್ದೇ ಎಂಬುದನ್ನು ಅವರು ಎಲ್ಲಿಯೂ ಸ್ಪಷ್ಟಪಡಿಸಿಲ್ಲ.”ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕದ ದಿನಗಳು ಜೀವನದ ಅತ್ಯಂತ ಕಷ್ಟದ ಹಂತ. ಚಾಂಪಿಯನ್‌ಗಳೂ ಕೆಲವೊಮ್ಮೆ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಧೈರ್ಯದಿಂದ ಹೋರಾಡುವವರೇ ಕೊನೆಗೂ ಗೆಲ್ಲುತ್ತಾರೆ” ಎಂದು ಅವರು ಬರೆದಿದ್ದಾರೆ.

ಇದರ ಬೆನ್ನಲ್ಲೇ ಎಕ್ಸ್‌ನಲ್ಲಿ “The game is over… but the work goes on” (ಆಟ ಮುಗಿದಿದೆ, ಆದರೆ ಕೆಲಸ ಇನ್ನೂ ಮುಂದುವರಿಯುತ್ತಿದೆ) ಎಂದು ಪೋಸ್ಟ್ ಮಾಡಿರುವುದು ಮತ್ತಷ್ಟು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಕೂಡ ಅಮಿತಾಭ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿಗಳು ಹರಡಿದ್ದರೂ, ಅದು ಸಾಮಾನ್ಯ ಆರೋಗ್ಯ ತಪಾಸಣೆ ಮಾತ್ರ ಎಂದು ಬಳಿಕ ಸ್ಪಷ್ಟವಾಗಿತ್ತು. ಸದ್ಯ ಅವರು ‘ಕೌನ್ ಬನೇಗಾ ಕರೋಡ್‌ಪತಿ’ ಹೊಸ ಸೀಸನ್ ಹಾಗೂ ‘ಕಲ್ಕಿ 2898 ಎಡಿ’ ಸೀಕ್ವೆಲ್‌ಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇನ್ನೂ ಹೊರಬಂದಿಲ್ಲ.

ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಲುಕಿದ ವಾರ್ನರ್: ತಪ್ಪೊಪ್ಪಿಕೊಂಡ ಮಾಜಿ ಆಸೀಸ್ ಆಟಗಾರನಿಗೆ 9 ತಿಂಗಳ ಜೈಲು ಶಿಕ್ಷೆ!?

0

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ (ಡ್ರಿಂಕ್ ಅಂಡ್ ಡ್ರೈವ್) ಪ್ರಕರಣದಲ್ಲಿ ಬಂಧನಕ್ಕೊಳಗಾದ ವಾರ್ನರ್, ಸಿಡ್ನಿ ನ್ಯಾಯಾಲಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಅವರಿಗೆ ಆಸ್ಟ್ರೇಲಿಯಾ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯ ವಿರಾಮದ ವೇಳೆ ತವರಿಗೆ ಮರಳಿದ್ದ ವಾರ್ನರ್, ಸಿಡ್ನಿಯ ಮರೂಬ್ರಾ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಸಮಯ ಕಳೆದ ಬಳಿಕ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ.

ಪರೀಕ್ಷೆಯಲ್ಲಿ ವಾರ್ನರ್ ಅವರ ರಕ್ತದಲ್ಲಿ 0.104 ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದ್ದು, ಇದು ಆಸ್ಟ್ರೇಲಿಯಾದಲ್ಲಿ ಅನುಮತಿಸಲಾದ 0.05 ಮಿತಿಗಿಂತ ಹೆಚ್ಚಾಗಿತ್ತು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ವಾರ್ನರ್ ಪರ ವಕೀಲ ಬೊಬ್ಬಿ ಹಿಲ್ ನ್ಯಾಯಾಲಯಕ್ಕೆ ಹಾಜರಾಗಿ, ತಮ್ಮ ಕಕ್ಷಿದಾರರ ಪರವಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸ್ನೇಹಿತರ ಮನೆಯಲ್ಲಿ ವೈನ್ ಸೇವಿಸಿದ ಬಳಿಕ ಟ್ಯಾಕ್ಸಿ ಮೂಲಕ ಮನೆಗೆ ತೆರಳುವ ಬದಲು ಸ್ವತಃ ಕಾರು ಚಲಾಯಿಸಿದ್ದು ದೊಡ್ಡ ತಪ್ಪಾಗಿದೆ ಎಂಬ ಅರಿವು ವಾರ್ನರ್ ಅವರಿಗೆ ಉಂಟಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದ ಶಿಕ್ಷೆಯನ್ನು ಆಗಸ್ಟ್ 18ರಂದು ಸಿಡ್ನಿ ನ್ಯಾಯಾಲಯ ಪ್ರಕಟಿಸಲಿದೆ. ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ, ಪ್ರಕರಣದ ಗಂಭೀರತೆಯನ್ನು ಆಧರಿಸಿ ಜೈಲು ಶಿಕ್ಷೆ, ಚಾಲನಾ ಪರವಾನಗಿ ಅಮಾನತು ಹಾಗೂ ದಂಡ ಸೇರಿದಂತೆ ವಿವಿಧ ಶಿಕ್ಷೆಗಳನ್ನು ವಿಧಿಸುವ ಅವಕಾಶವಿದೆ.

ಕೆಲವು ವರದಿಗಳ ಪ್ರಕಾರ, ಅವರಿಗೆ ಕನಿಷ್ಠ 9 ತಿಂಗಳ ಜೈಲು ಶಿಕ್ಷೆ, 6 ತಿಂಗಳ ಕಾಲ ಚಾಲನಾ ಪರವಾನಗಿ ಅಮಾನತು ಹಾಗೂ ಸುಮಾರು ₹1.20 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಆದರೆ ಅಂತಿಮ ತೀರ್ಪು ನ್ಯಾಯಾಲಯದ ನಿರ್ಧಾರವನ್ನು ಅವಲಂಬಿಸಿರುತ್ತದೆ.

ಡೇವಿಡ್ ವಾರ್ನರ್ ಈಗಾಗಲೇ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಅಮಾನತು ಮತ್ತು ನಿಷೇಧ ಸೇರಿದಂತೆ ಹಲವು ಶಿಕ್ಷೆಗಳನ್ನು ಎದುರಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರೂ, ಹೆಚ್ಚು ಕಾಲ ಮುಂದುವರಿಯದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪ್ರಸ್ತುತ ಅವರು ವಿವಿಧ ಫ್ರಾಂಚೈಸಿ ಹಾಗೂ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಆಡುತ್ತಿದ್ದಾರೆ.

ಈ ಹೊಸ ಪ್ರಕರಣವು ವಾರ್ನರ್ ಅವರ ಲೀಗ್ ಕ್ರಿಕೆಟ್ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂಬರುವ ಬಿಗ್ ಬ್ಯಾಷ್ ಲೀಗ್ (BBL) ಟೂರ್ನಿಯಲ್ಲಿ ಸಿಡ್ನಿ ಥಂಡರ್ ತಂಡದೊಂದಿಗೆ ಅವರ ಭವಿಷ್ಯದ ಕುರಿತು ಪ್ರಶ್ನೆಗಳು ಮೂಡಿದ್ದು, ನಾಯಕತ್ವ ಸೇರಿದಂತೆ ತಂಡದಲ್ಲಿನ ಸ್ಥಾನಕ್ಕೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.