Home Blog Page 26

ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಕೊಡಬೇಕು: ಇಕ್ಬಾಲ್ ಹುಸೇನ್ ಒತ್ತಾಯ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ. ದೇವರಾಜ ಅರಸು ಅವರ ಬಳಿಕ ದಲಿತರು ಹಾಗೂ ಶೋಷಿತರ ಪರವಾಗಿ ಸಿದ್ದರಾಮಯ್ಯ ಅವರು ಮಹತ್ವದ ಸೇವೆ ಸಲ್ಲಿಸಿದ್ದಾರೆ. ಆದರೆ ಇದೇ ಅವಧಿಯಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಎರಡೂವರೆ ವರ್ಷಗಳ ಆಡಳಿತ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪಕ್ಷದ ನಿಷ್ಠಾವಂತ ಮತ್ತು ಶ್ರಮಪಟ್ಟು ಹೋರಾಟ ಮಾಡಿದ ನಾಯಕರಿಗೆ ಅವಕಾಶ ಸಿಗಬೇಕು ಎಂಬ ಅಭಿಪ್ರಾಯವನ್ನು ಹಲವು ಶಾಸಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

“ಒಬ್ಬ ನಿಷ್ಠಾವಂತ ಪಕ್ಷನಿಷ್ಠ ವ್ಯಕ್ತಿಯಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂಬ ಆಶಯದಿಂದ ನಾವು ಮಾತನಾಡುತ್ತಿದ್ದೇವೆ. ಅವರ ಹೋರಾಟ ಮತ್ತು ಶ್ರಮಕ್ಕೆ ನ್ಯಾಯ ಸಿಗಬೇಕು” ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಇದಲ್ಲದೆ, ಸುಮಾರು 80ರಿಂದ 90 ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಆಶಯ ಹೊಂದಿದ್ದಾರೆ ಎಂದು ತಿಳಿಸಿದ ಅವರು, ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿರುವುದಾದರೆ ಅದನ್ನು ಕಾರ್ಯರೂಪದಲ್ಲಿಯೂ ತೋರಿಸಬೇಕು ಎಂದು ಆಗ್ರಹಿಸಿದರು.

ತಾಯಿ, ಮಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಮೂರು ದಿನಗಳ ಹಿಂದೆಯೇ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಪ್ರಿಯಕರ

0

ಮಂಡ್ಯ: ದಳವಾಯಿ ಕೋಡಿಹಳ್ಳಿಯಲ್ಲಿ ನಡೆದ ತಾಯಿ–ಮಗಳು ಆತ್ಮಹತ್ಯೆ ಪ್ರಕರಣದ ಹಿನ್ನಲೆಯಲ್ಲಿ 72 ಗಂಟೆಗಳೊಳಗೆ ನಡೆದ ಘಟನೆಗಳ ಸರಣಿ ಬೆಚ್ಚಿ ಬೀಳಿಸುವಂತಿದೆ. ಈ ಪ್ರಕರಣದಲ್ಲಿ ಯುವತಿ ಪ್ರಿಯಾಂಕಳ ಪ್ರಿಯಕರ ಮುತ್ತುರಾಜ್ ಈಗಾಗಲೇ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಮುತ್ತುರಾಜ್ ವಿವಾಹಿತನಾಗಿದ್ದು, ಮೂರು ಮಕ್ಕಳ ತಂದೆಯೂ ಹೌದು. ಆದರೂ ಪ್ರಿಯಾಂಕಳೊಂದಿಗೆ ಪ್ರೀತಿ–ಪ್ರೇಮ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾದ ನಂತರ ಪ್ರಿಯಾಂಕಳ ತಂದೆ–ತಾಯಿ ಇಬ್ಬರಿಗೂ ತೀವ್ರವಾಗಿ ಬುದ್ದಿ ಹೇಳಿ, ಮಗಳ ಮದುವೆಗೆ ವರ ಹುಡುಕುವ ಪ್ರಯತ್ನ ಆರಂಭಿಸಿದ್ದರು.

ಇದರಿಂದ ಕೋಪಗೊಂಡ ಮುತ್ತುರಾಜ್, ಪ್ರಿಯಾಂಕಳ ಮೇಲೆ ಒತ್ತಡ ತರುವ ಉದ್ದೇಶದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಆತ ಈಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರಿಯಕರನ ಆತ್ಮಹತ್ಯೆ ಯತ್ನದ ಸುದ್ದಿ ಕೇಳಿ ಮಾನಸಿಕವಾಗಿ ಕುಸಿದ ಪ್ರಿಯಾಂಕ, ಆತಂಕ ಮತ್ತು ಭಯದಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವನ್ನು ಕಂಡ ತಾಯಿ ಶಂಕುತಲಾ ದೇವಿ ಮನನೊಂದಿದ್ದು, ತಾಳಲಾರದೆ ಆಕೆಯೂ ಕೂಡ ನೇಣಿಗೆ ಶರಣಾಗಿದ್ದಾರೆ.

ಒಂದೇ ಕುಟುಂಬದಲ್ಲಿ ತಾಯಿ–ಮಗಳು ಜೀವ ಕಳೆದುಕೊಂಡ ಈ ಘಟನೆ, ಪ್ರೇಮ ಸಂಬಂಧಗಳಿಂದ ಉಂಟಾಗುವ ಮಾನಸಿಕ ಹಿಂಸೆ ಎಷ್ಟು ಭೀಕರವಾಗಬಹುದು ಎಂಬುದನ್ನು ತೋರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

19 ಲಕ್ಷ ಮೌಲ್ಯದ ಚಿನ್ನ–ನಗದು ಇರುವ ಟ್ರಾಲಿ ಬ್ಯಾಗ್ ಪತ್ತೆ: RPF ತ್ವರಿತ ಕಾರ್ಯಾಚರಣೆಗೆ ಶ್ಲಾಘನೆ

0

ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು ₹19 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹೊಂದಿದ್ದ ಟ್ರಾಲಿ ಬ್ಯಾಗ್‌ನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಪತ್ತೆಹಚ್ಚಿ ವಾರಸುದಾರರಿಗೆ ಸುರಕ್ಷಿತವಾಗಿ ವಾಪಸ್ ನೀಡಿದ್ದಾರೆ. RPF ಸಿಬ್ಬಂದಿಯ ತ್ವರಿತ, ಪ್ರಾಮಾಣಿಕ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಫೆಬ್ರವರಿ 08ರಂದು ರಾತ್ರಿ 08.35ರ ಸುಮಾರಿಗೆ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣವೇ ಅವರು ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು.

ದೂರು ಸ್ವೀಕರಿಸಿದ ಕೂಡಲೇ RPF ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿ, ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ವಾರಸುದಾರರಿಲ್ಲದೆ ಇದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಯಲಹಂಕ RPF ಪೋಸ್ಟ್‌ಗೆ ಕೊಂಡೊಯ್ಯಲಾಯಿತು.

ಬ್ಯಾಗ್ ಪರಿಶೀಲನೆ ವೇಳೆ ಅದರೊಳಗೆ ಸುಮಾರು 100 ಗ್ರಾಂ ಚಿನ್ನಾಭರಣಗಳು (ಸುಮಾರು ₹17 ಲಕ್ಷ ಮೌಲ್ಯ) ಹಾಗೂ ₹2 ಲಕ್ಷ ನಗದು ಇರುವುದು ದೃಢಪಟ್ಟಿದೆ. ಬಳಿಕ ರೈಲ್ ಮದದ್ ದೂರು, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರನ್ನು ಸಂಪರ್ಕಿಸಲಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಟ್ರಾಲಿ ಬ್ಯಾಗ್ ಅನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ.

ಕಳೆದುಕೊಂಡ ಅಮೂಲ್ಯ ವಸ್ತು ಮರಳಿ ಸಿಕ್ಕ ಬೆನ್ನಲ್ಲೇ ಪ್ರಯಾಣಿಕ ನಿಟ್ಟುಸಿರು ಬಿಟ್ಟಿದ್ದು, RPF ಸಿಬ್ಬಂದಿಯ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ತಕ್ಷಣ FIR ಇಲ್ಲ! ಡಿಜಿ–ಐಜಿಪಿ ಎಂಎ ಸಲೀಂ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿ

0

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾಂತ್ರಿಕವಾಗಿ ಎಫ್‌ಐಆರ್ ದಾಖಲಿಸುವುದು ಹಾಗೂ ಬಂಧನ ನಡೆಸುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಎಂಎ ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ ವಿರುದ್ಧ ಹೆಚ್ಚುತ್ತಿರುವ ಆರೋಪಗಳ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ನೀಡಿದ ಎರಡು ಪ್ರಮುಖ ತೀರ್ಪುಗಳ ಆಧಾರದಲ್ಲಿ ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೇ ನೇರವಾಗಿ ಪ್ರಕರಣ ದಾಖಲಿಸುವ ಪ್ರವೃತ್ತಿ ಕಂಡುಬಂದಿದ್ದರಿಂದ, ಅದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಡಿಜಿ–ಐಜಿಪಿ ಮಾರ್ಗಸೂಚಿಯ 8 ಪ್ರಮುಖ ಅಂಶಗಳು:

  • ದೂರುದಾರರ ಅರ್ಹತೆ ಪರಿಶೀಲನೆ: ಮಾನಹಾನಿ ಪ್ರಕರಣಗಳಲ್ಲಿ ದೂರುದಾರರು ‘ನೊಂದ ವ್ಯಕ್ತಿ’ ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳ ದೂರುಗಳನ್ನು (ಗಂಭೀರ ಅಪರಾಧ ಹೊರತುಪಡಿಸಿ) ಸ್ವೀಕರಿಸಬಾರದು.

  • ಪ್ರಾಥಮಿಕ ವಿಚಾರಣೆ ಕಡ್ಡಾಯ: ಎಫ್‌ಐಆರ್ ಮೊದಲು ಆರೋಪ ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಪರಿಶೀಲಿಸಬೇಕು.

  • ಹಿಂಸೆಗೆ ಪ್ರಚೋದನೆ ಇದ್ದರೆ ಮಾತ್ರ ಕೇಸ್: ದ್ವೇಷ, ದೇಶದ್ರೋಹ ಅಥವಾ ಸಾರ್ವಜನಿಕ ಅಶಾಂತಿ ಪ್ರಕರಣಗಳಲ್ಲಿ ಹಿಂಸೆಗೆ ಸ್ಪಷ್ಟ ಪ್ರಚೋದನೆ ಇದ್ದಾಗ ಮಾತ್ರ ಪ್ರಕರಣ ದಾಖಲಿಸಬೇಕು.

  • ರಾಜಕೀಯ ಟೀಕೆಗಳಿಗೆ ರಕ್ಷಣೆ: ಕಟುವಾದ ರಾಜಕೀಯ ಟೀಕೆಗಳಿಗೆ ಯಾಂತ್ರಿಕವಾಗಿ ಕೇಸ್ ಹಾಕಬಾರದು. ಸಂವಿಧಾನದ 19(1)(ಎ) ಅಡಿ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು.

  • ಮಾನಹಾನಿ ಅಸಂಜ್ಞೇಯ ಅಪರಾಧ: ಮಾನಹಾನಿಗೆ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸಬಾರದು. ದೂರುದಾರರನ್ನು ಮ್ಯಾಜಿಸ್ಟ್ರೇಟ್ ಬಳಿ ಹೋಗುವಂತೆ ಸೂಚಿಸಬೇಕು.

  • ಬಂಧನಕ್ಕೆ ನಿಯಂತ್ರಣ: ಅರ್ನೇಶ್ ಕುಮಾರ್ ತೀರ್ಪಿನಂತೆ ಅನಗತ್ಯ ಬಂಧನಕ್ಕೆ ಅವಕಾಶವಿಲ್ಲ.

  • ಕಾನೂನು ಸಲಹೆ ಕಡ್ಡಾಯ: ಸೂಕ್ಷ್ಮ ಮತ್ತು ರಾಜಕೀಯ ವಿಚಾರಗಳಲ್ಲಿ ಎಫ್‌ಐಆರ್ ಮೊದಲು ಸರ್ಕಾರಿ ಅಭಿಯೋಜಕರ ಸಲಹೆ ಪಡೆಯಬೇಕು.

  • ಸುಳ್ಳು/ರಾಜಕೀಯ ಪ್ರೇರಿತ ದೂರುಗಳ ಮುಕ್ತಾಯ: ದೂರು ದುರುದ್ದೇಶಪೂರಿತವೆಂದು ಕಂಡುಬಂದರೆ BNSS ಸೆಕ್ಷನ್ 176(1) ಅಡಿ ಪ್ರಕರಣ ಮುಕ್ತಾಯಗೊಳಿಸಬೇಕು.

ಈ ಮೂಲಕ ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೂ ಎಫ್‌ಐಆರ್ ದಾಖಲಿಸುವ ಪ್ರವೃತ್ತಿಗೆ ಡಿಜಿ–ಐಜಿಪಿ ಬ್ರೇಕ್ ಹಾಕಿದಂತಾಗಿದೆ.

ಗಂಟಲು ಸೋಂಕು, ಜ್ವರ–ಕೆಮ್ಮಿನಿಂದ ಅನಾರೋಗ್ಯ: ಎನ್‌ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು:

0

ಪುಣೆ: ಎನ್‌ಸಿಪಿ ನಾಯಕ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಅನಾರೋಗ್ಯದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಟಲು ಸಂಬಂಧಿತ ಸೋಂಕು, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಶರದ್ ಪವಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಾರಾಮತಿಯಲ್ಲಿರುವ ತಮ್ಮ ನಿವಾಸದಲ್ಲಿದ್ದಾಗಲೇ ಶರದ್ ಪವಾರ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಅವರನ್ನು ಪುಣೆಗೆ ಸ್ಥಳಾಂತರಿಸಲಾಯಿತು.

ಪ್ರಸ್ತುತ ಶರದ್ ಪವಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ತಂಡವು ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದು, ಅವರ ಪ್ರತಿಕ್ರಿಯೆ ಆಧರಿಸಿ ಮುಂದಿನ ಚಿಕಿತ್ಸಾ ಕ್ರಮ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಶರದ್ ಪವಾರ್ ಅವರ ಪುತ್ರಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಅಳಿಯ ಸದಾನಂದ ಸುಳೆ ಅವರು ಹಾಜರಿದ್ದು, ಕುಟುಂಬದವರು ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿದ್ದಾರೆ.

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಮುಂಬೈಯನ್ನು ಮಣಿಸಿದ ಕರ್ನಾಟಕ! ಸೆಮಿಫೈನಲ್‌ʼಗೆ ಲಗ್ಗೆ

0

ಮುಂಬೈ: ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ 2025–26ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ, ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಮುಂಬೈ ನೀಡಿದ್ದ 326 ರನ್‌ಗಳ ಗುರಿಯನ್ನು ಕರ್ನಾಟಕ ನಾಲ್ಕನೇ ದಿನದಾಟದ ಎರಡನೇ ಸೆಷನ್‌ನಲ್ಲಿ 6 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಮಹತ್ವದ ಗೆಲುವು ದಾಖಲಿಸಿದೆ.

ಕರ್ನಾಟಕದ ಈ ಐತಿಹಾಸಿಕ ಜಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದರು. ರಾಹುಲ್ 130 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅವರಿಗೆ ಸಾಥ್ ನೀಡಿದ ಆರ್. ಸ್ಮರಣ್ ಅಜೇಯ 83 ರನ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಕರ್ನಾಟಕದ ಕಟ್ಟುನಿಟ್ಟಿನ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಖಿಲ್ ಹೆರ್ವಾಡ್ಕರ್ 60 ರನ್ ಗಳಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗಮನಾರ್ಹ ಕೊಡುಗೆ ನೀಡಲಿಲ್ಲ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕವೂ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. ತಂಡದ ಪರ ಮಯಾಂಕ್ ಅಗರ್ವಾಲ್ 92 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿ ತಂಡಕ್ಕೆ ಆಧಾರ ಒದಗಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕರ್ನಾಟಕ 173 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕಕ್ಕೆ 53 ರನ್‌ಗಳ ಮುನ್ನಡೆ ಲಭಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ ಭರ್ಜರಿ ಪ್ರದರ್ಶನ ತೋರಿ 377 ರನ್‌ಗಳನ್ನು ಕಲೆಹಾಕಿತು. ಆಕಾಶ್ ಆನಂದ್ 70 ರನ್‌ಗಳ ಇನ್ನಿಂಗ್ಸ್ ಆಡಿದರೆ, ಇತರ ಆಟಗಾರರು ಸಹ ಉಪಯುಕ್ತ ಕೊಡುಗೆ ನೀಡಿದರು. ಇದರಿಂದ ಕರ್ನಾಟಕದ ಮುಂದಿಟ್ಟ ಗುರಿ 325 ರನ್‌ಗಳಾಗಿತ್ತು.

ನಾಲ್ಕನೇ ದಿನ ಗುರಿ ಬೆನ್ನಟ್ಟಿದ ಕರ್ನಾಟಕ, ಕೆಎಲ್ ರಾಹುಲ್ ಅವರ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕದ ನೆರವಿನಿಂದ ಆತ್ಮವಿಶ್ವಾಸದ ಆಟವಾಡಿತು. 147 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ ಶತಕ ಪೂರೈಸಿದ ರಾಹುಲ್, ನಂತರವೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡವನ್ನು 250 ರನ್‌ಗಳ ಗಡಿ ದಾಟಿಸಿದರು. ಸ್ಮರಣ್ 123 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 83 ರನ್‌ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ವಿದ್ಯಾದರ್ ಪಾಟೀಲ್ ಅಜೇಯ 31 ರನ್‌ಗಳ ಸಹಾಯದಿಂದ ಕರ್ನಾಟಕವನ್ನು ಸೆಮಿಫೈನಲ್‌ಗೆ ಕರೆದೊಯ್ದರು.

ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

0

ಬೆಂಗಳೂರು: “ಕಳೆದ 12 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಖಾಲಿ ಟ್ರಂಕ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ಹಿಡಿದಿರುವುದು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿರುಗೇಟು ನೀಡಿದ್ದಾರೆ.ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ಅವರು ಮೆಟ್ರೋ ನಿಲ್ದಾಣ ಬಳಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಮೆಟ್ರೋ ದರ ಏರಿಕೆ ಬಗ್ಗೆ ಅವರು ಮಾತನಾಡುವುದೇನೆ ಇದ್ದರೂ ಅದು ಪ್ರಧಾನಮಂತ್ರಿಗಳ ಮುಂದೆ ಮಾತನಾಡಲಿ.

ಮೆಟ್ರೋ ನಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಿರುವವರು ಯಾರು? ತೇಜಸ್ವಿ ಸೂರ್ಯ ಅವರು ಮೆಟ್ರೋ ನಮ್ಮ ಕೊಡುಗೆ ರಾಜ್ಯ ಸರ್ಕಾರದ್ದಲ್ಲ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಮೆಟ್ರೋ ಕೇಂದ್ರ ಸರ್ಕಾರದ ಸಮಿತಿ ಕೈಯಲ್ಲಿದೆ. ಆ ಸಮಿತಿ ತೀರ್ಮಾನದಂತೆ ಮೆಟ್ರೋ ದರ ಏರಿಕೆ ಮಾಡಲಾಗುತ್ತದೆ. ದರ ಏರಿಕೆ ಆಗಬಾರದು ಎಂಬುದೂ ನಮ್ಮ ಇಚ್ಛೆ. ತೇಜಸ್ವಿ ಸೂರ್ಯ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಅವರು ತೀರ್ಮಾನ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ” ಎಂದು ಸುರೇಶ್ ಅವರು ವಾಗ್ದಾಳಿ ನಡೆಸಿದರು.

“ಅವರು ಖಾಲಿ ಟ್ರಂಕ್ ಹಿಡಿದಿರುವುದು, ಕರ್ನಾಟಕದ 4.5- 5 ಲಕ್ಷ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿಕೊಂಡು ಹೋಗುತ್ತಿರುವುದನ್ನು ತೋರಿಸಲು. ಕೇಂದ್ರ ಸರ್ಕಾರ ಕಳೆದ 12 ವರ್ಷಗಳಿಂದ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಪಟ್ಟಿ ಹೇಳಲಿ. ಬೆಂಗಳೂರಿಗೆ ಅವರ ಕೊಡುಗೆ ಖಾಲಿ ಡಬ್ಬ ಎಂದು ತೇಜಸ್ವಿ ಸೂರ್ಯ ತೋರಿಸುತ್ತಿರುವುದನ್ನು ಮಾಧ್ಯಮಗಳು ಚೆನ್ನಾಗಿ ತೋರಿಸಿ” ಎಂದು ಕಿಡಿಕಾರಿದರು.

ದರ ಏರಿಕೆಗೆ ಕಾರಣ ಯಾರು? ಎಂದು ಕೇಳಿದಾಗ, “ರಾಜ್ಯ ಸರ್ಕಾರದ ಪಾತ್ರ ಇದೆ. ದರ ಇಳಿಕೆ ಬಗ್ಗೆ ಕೇಂದ್ರದ ಸಮಿತಿ ಮುಂದೆ ಪ್ರಸ್ತಾವನೆ ನೀಡಲಾಗಿದೆ. ಕೇಂದ್ರ ಸಮಿತಿಯ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದ ಮೇರೆಗೆ ಈ ತೀರ್ಮಾನ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರು ತಮ್ಮ ಬದ್ಧತೆಯನ್ನು ಕೇಂದ್ರ ಸರ್ಕಾರದ ಮುಂದೆ ಪ್ರದರ್ಶಿಸಲಿ” ಎಂದು ತಿಳಿಸಿದರು.

ಮೆಟ್ರೋ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ನೀಡದಿರುವುದಕ್ಕೆ ದರ ಏರಿಕೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೆಟ್ರೋ ಯೋಜನೆಗಳಿಗೆ 10% ಹಣ ನೀಡುತ್ತದೆ. ರಾಜ್ಯ ಸರ್ಕಾರ 10% ಹಣದ ಜೊತೆಗೆ ಯೋಜನೆ ಜಾರಿಗೆ ಅಗತ್ಯವಿರುವ ಭೂಸ್ವಾಧೀನ ಪರಿಹಾರ ಮೊತ್ತವನ್ನು ಭರಿಸಬೇಕು. ಇದರಿಂದ ರಾಜ್ಯ ಸರ್ಕಾರದ ಪಾಲು ಸುಮಾರು 17%ರಷ್ಟು ಇರುತ್ತದೆ. ಉಳಿದ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುವುದು. ಅದರ ಹೊರೆ ಪ್ರಯಾಣಿಕರ ಮೇಲೆ ಬೀಳುತ್ತದೆ. ಸಮಯ ಸಿಕ್ಕಾಗ ಮೆಟ್ರೋ ನಮ್ಮದು ಎಂದು ಶೋ ಕೊಟ್ಟು, ಈಗ ಖಾಲಿ ಡಬ್ಬ ತೋರುತ್ತಿದ್ದಾರೆ” ಎಂದು ಹರಿಹಾಯ್ದರು

ಕೊರೋನಾದಿಂದ ಟ್ರಾವೆಲ್ಸ್ ಲಾಸ್: ಮಾಸ್ಕ್ ಧರಿಸಿ ಮನೆಗಳ್ಳತನಕ್ಕಿಳಿದ ಆರೋಪಿ ಅರೆಸ್ಟ್!

0

ಬೆಂಗಳೂರು: ಕೊರೋನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ರಾಜಾ ಬಂಧಿತ ಆರೋಪಿಯಾಗಿದ್ದು, ದಾವಣಗೆರೆ ಭಾಗದಲ್ಲಿ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ರಾಜಾ,

ಕೊರೋನಾ ಸಮಯದಲ್ಲಿ ಭಾರೀ ನಷ್ಟ ಅನುಭವಿಸಿದ್ದ. ಜೀವನ ಸಾಗಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆ ಮಾಸ್ಕ್ ಧರಿಸಿ ಕಳ್ಳತನ ಮಾಡಲು ಆರಂಭಿಸಿದ್ದ. ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಈತನ ವಿರುದ್ಧ ಈಗಾಗಲೇ 18 ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಸದ್ಯ ಬಂಧಿತನಿಂದ ಸುಮಾರು 1.84 ಕೋಟಿ ರೂ. ಮೌಲ್ಯದ 1.25 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧನದ ಬಳಿಕ ಬೆಂಗಳೂರಿನ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೈಯಪ್ಪನಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಪಂದ್ಯಗಳಿಗೆ ಅವಕಾಶ: ಬುಧವಾರ ಅಧಿಕಾರಿಗಳ ಸಭೆ ಬಳಿಕ ತೀರ್ಮಾನ – ಸಚಿವ ಜಿ.ಪರಮೇಶ್ವರ್

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ಪಂದ್ಯಗಳಿಗೆ ಅವಕಾಶ ನೀಡುವ ಕುರಿತು ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಅದರ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಐಪಿಎಲ್ ಕ್ರಿಕೆಟ್ ಪಂದ್ಯಗಳ ಆಯೋಜನೆ ಸಂಬಂಧ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ನಿಯೋಗವು ಬುಧವಾರ ಸದಾಶಿವನಗರದಲ್ಲಿರುವ ಗೃಹ ಸಚಿವರ ನಿವಾಸದಲ್ಲಿ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, “ಪಂದ್ಯಗಳಿಗೆ ಅವಕಾಶ ನೀಡುವ ಬಗ್ಗೆ ಬುಧವಾರ ಅಧಿಕಾರಿಗಳ ಸಭೆ ಕರೆದಿದ್ದೇವೆ. ಅಲ್ಲಿ ಈ ವಿಷಯವನ್ನು ವಿವರವಾಗಿ ಚರ್ಚಿಸಲಾಗುತ್ತದೆ. ನಮ್ಮ ಶಿಫಾರಸುಗಳನ್ನು ಎಷ್ಟರಮಟ್ಟಿಗೆ ಪಾಲಿಸಲಾಗಿದೆ ಎಂಬುದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಂಗಳೂರಿನಲ್ಲಿ ಪಂದ್ಯ ನಡೆಯಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕಾಲ್ತುಳಿತದಂತಹ ಘಟನೆಗಳು ಮರುಕಳಿಸಬಾರದು. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರ ಮಾಡುತ್ತೇವೆ” ಎಂದು ಹೇಳಿದರು.

ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸರ್ಕಾರದ ಮಟ್ಟದಲ್ಲಿಯೂ ಜಿಬಿಎ ಹಾಗೂ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯೂ ಹಲವು ಶಿಫಾರಸುಗಳನ್ನು ನೀಡಿದೆ ಎಂದರು.

“ಐಪಿಎಲ್ ಪಂದ್ಯಗಳು ಸಮೀಪಿಸುತ್ತಿದ್ದು, ಸರ್ಕಾರದ ಕಡೆಯಿಂದ ಅನುಮತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿಸಿದವರಿಗೆ ಯಾವ ರೀತಿಯ ಸೂಚನೆ ನೀಡಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೂ ಚರ್ಚಿಸಲಾಗುವುದು” ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಮದುವೆ ಮಾತುಕತೆ ನಡುವೆಯೇ ಕೆನಡಾದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕನ್ನಡಿಗ

0

ನೆಲಮಂಗಲ: ಕೆನಡಾದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನ್ನಡಿಗ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ನೆಲಮಂಗಲ ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ (37) ಅವರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡಗಟ್ಟಿ ಹತ್ತಾರು ಬಾರಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದ ಚಂದನ್, ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲೂ ಸಾರುತ್ತಿದ್ದ ಚಂದನ್, ಸ್ನೇಹವಂತ ಮತ್ತು ಶಾಂತ ಸ್ವಭಾವದ ವ್ಯಕ್ತಿ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ತಿಳಿಸಿದ್ದಾರೆ.

ಘಟನೆ ಕುರಿತು ನಿನ್ನೆ ಟೊರೊಂಟೋ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಹತ್ಯೆಯ ಹಿನ್ನೆಲೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಾವುದೇ ವೈಷಮ್ಯ, ಬೆದರಿಕೆ ಅಥವಾ ಅಪರಾಧ ಹಿನ್ನೆಲೆ ಬಗ್ಗೆ ಕುಟುಂಬಕ್ಕೆ ಮಾಹಿತಿ ಇಲ್ಲ.

ಮೃತನ ತಂದೆ ನಂದ ಕುಮಾರ್ ಅವರ ನೋವಿನ ಮಾತುಗಳು ಹೃದಯವನ್ನೇ ಹಿಂಡುತ್ತವೆ.
“ಮಗನಿಗೆ ಹುಡುಗಿಯನ್ನು ನೋಡುತ್ತಿದ್ದೆವು. ಭಾರತಕ್ಕೆ ಬರ್ತೀನಿ ಅಂತ ಹೇಳಿದ್ದ. ಈಗ ಈ ದುಃಖ… ಮಗನ ಶವವನ್ನಾದರೂ ನಮ್ಮ ಮನೆಗೆ ತಂದು ಕೊಡಿ” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಟುಂಬಸ್ಥರು ಯಾವುದೇ ಮಾಹಿತಿ ಇಲ್ಲದೆ ಪರದಾಡುತ್ತಿದ್ದು, ಕೆನಡಾದಿಂದ ಮೃತದೇಹವನ್ನು ಭಾರತಕ್ಕೆ ತರಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಗೊಂದಲದಲ್ಲಿದ್ದಾರೆ. ವಿದೇಶದಲ್ಲಿ ಕನ್ನಡಿಗರ ಸುರಕ್ಷತೆ ಪ್ರಶ್ನೆಯಾಗಿ ಮತ್ತೆ ಎದ್ದಿರುವ ಈ ಪ್ರಕರಣದ ಬಗ್ಗೆ ಕೆನಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!