Home Blog Page 27

ರೋಹಿತ್ ಡಾಬಾದಲ್ಲಿ ಮಧ್ಯರಾತ್ರಿ ಮದ್ಯದ ಪಾರ್ಟಿ: ಪೊಲೀಸರ ದಾಳಿ, ಡಾಬಾ ಮಾಲೀಕನ ವಿರುದ್ಧ ಕೇಸ್!

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದ ರೋಹಿತ್ ಡಾಬಾದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದ ಆರೋಪದ ಮೇರೆಗೆ ಗಜೇಂದ್ರಗಡ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಗಜೇಂದ್ರಗಡ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಸಂದೀಪ್ ಎಂ. ದೊಡ್ಡಮನಿ ಅವರಿಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ಸೋಮವಾರ ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಮುಶಿಗೇರಿ ಗ್ರಾಮದ ರೋಹಿತ್ ಡಾಬಾದ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸಾರ್ವಜನಿಕರಿಗೆ ಅನಧಿಕೃತವಾಗಿ ಮದ್ಯ ಸೇವನೆ ಮಾಡಲು ಅವಕಾಶ ನೀಡಲಾಗುತ್ತಿರುವುದು ಬೆಳಕಿಗೆ ಬಂದಿದೆ.

ಡಾಬಾದ ಮಾಲೀಕ ಕೃಷ್ಣಪ್ಪ ರಾಮಯ್ಯ ಮುಂಡಾಸ್ ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.102/2026 ಅಡಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32(3) ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಕ್ರಮ ಮದ್ಯ ಸೇವನೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು, ಡಾಬಾ ಹಾಗೂ ಹೋಟೆಲ್‌ಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಶುಭಾ ಪೂಂಜಾ ದಾಂಪತ್ಯ ಜೀವನದಲ್ಲಿ ಬಿರುಕು; 4 ವರ್ಷದಲ್ಲೇ ವಿಚ್ಛೇದನಕ್ಕೆ ಅರ್ಜಿ!

0

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ದಂಪತಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮದುವೆಯಾಗಿ ಕೇವಲ ನಾಲ್ಕು ವರ್ಷಗಳಲ್ಲೇ ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ಕಾನೂನು ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಕಳೆದ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದ ಈ ಜೋಡಿ 2022ರ ಜನವರಿ 5ರಂದು ತಮ್ಮ ಕುಟುಂಬದ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ಅಚಾನಕ್ ಆಗಿ ವಿಚ್ಛೇದನದ ನಿರ್ಧಾರಕ್ಕೆ ಬಂದಿರುವುದು ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟುಮಾಡಿದೆ.

ವಿಚ್ಛೇದನಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಈ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ, ಸುಮಂತ್ ಬಿಲ್ಲವ ಅವರು ವೈಯಕ್ತಿಕ ಕಾರಣಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ತಮ್ಮ ಖಾಸಗಿ ಜೀವನದ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರರಂಗದಲ್ಲಿ “ಮೊಗ್ಗಿನ ಮನಸ್ಸು”, “ಚಂಡ” ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ಹಾಗೂ “ಬಿಗ್ ಬಾಸ್ ಸೀಸನ್ 8”ರಲ್ಲಿ ಗಮನಸೆಳೆದಿದ್ದ ಶುಭಾ ಪೂಂಜಾ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ವಿಷಾದ ಮೂಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಕಾನೂನು ಪ್ರಕ್ರಿಯೆ ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆಯಲಿದ್ದು, ಮುಂದಿನ ವಿಚಾರಣೆಗೆ ದಂಪತಿ ಖುದ್ದಾಗಿ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 

ಸೌರವ್ ಗಂಗೂಲಿ VIP ಭದ್ರತೆಯಲ್ಲಿ ಬದಲಾವಣೆ: ಸರ್ಕಾರದಿಂದ ಮಹತ್ವದ ನಿರ್ಧಾರ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ಭಾರತೀಯ ಕ್ರಿಕೆಟ್ ದಂತಕಥೆ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.

ಹಿಂದಿನಿಂದ ನೀಡಲಾಗಿದ್ದ ಅತ್ಯುನ್ನತ ಮಟ್ಟದ Zʼ ಶ್ರೇಣಿಯ ಭದ್ರತೆಯನ್ನು ಇದೀಗ ಮರುಪರಿಶೀಲನೆಯ ನಂತರ Yʼ ಶ್ರೇಣಿಗೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ಭದ್ರತಾ ವಿಭಾಗವು ಇತ್ತೀಚೆಗೆ ನಡೆಸಿದ ಸಮಗ್ರ VIP ಭದ್ರತಾ ಮರುಮೌಲ್ಯಮಾಪನದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯ ಪ್ರಸ್ತುತ ಅಪಾಯ ಮಟ್ಟ, ಸಾರ್ವಜನಿಕ ಸ್ಥಿತಿ, ಅಧಿಕೃತ ಪಾತ್ರ ಹಾಗೂ ಇತ್ತೀಚಿನ ಬೆದರಿಕೆ ವರದಿಗಳನ್ನು ಆಧಾರವಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ 2023ರಲ್ಲಿ ಗಂಗೂಲಿ ಅವರ ಭದ್ರತೆಯನ್ನು Yʼ ಶ್ರೇಣಿಯಿಂದ Zʼ ಶ್ರೇಣಿಗೆ ಹೆಚ್ಚಿಸಲಾಗಿತ್ತು. ಆ ಸಮಯದಲ್ಲಿ ಅವರ ಸಾಮಾಜಿಕ ಸ್ಥಾನಮಾನ ಮತ್ತು ಸುರಕ್ಷತಾ ಅಗತ್ಯಗಳನ್ನು ಗಮನದಲ್ಲಿಟ್ಟು ಹೆಚ್ಚುವರಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. Z-ಕೇಟಗರಿಯಲ್ಲಿ ಸಾಮಾನ್ಯವಾಗಿ 20ಕ್ಕೂ ಹೆಚ್ಚು ಸಿಬ್ಬಂದಿ, ವಿಶೇಷ ಕಮಾಂಡೋಗಳು ಹಾಗೂ ಎಸ್ಕಾರ್ಟ್ ವಾಹನದ ವ್ಯವಸ್ಥೆ ಒಳಗೊಂಡಿರುತ್ತದೆ.

ಆದರೆ ಈಗ ನಡೆದ ಮರುಪರಿಶೀಲನೆಯ ನಂತರ, ಗಂಗೂಲಿ ಅವರಿಗೆ ಇನ್ನುಮುಂದೆ `Yʼ ಶ್ರೇಣಿಯ ಭದ್ರತೆ ಸಾಕು ಎಂದು ಭದ್ರತಾ ಮಂಡಳಿ ತೀರ್ಮಾನಿಸಿದೆ. ಈ ಶ್ರೇಣಿಯಲ್ಲಿ ಸಾಮಾನ್ಯವಾಗಿ ಸುಮಾರು 11 ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, 24 ಗಂಟೆಗಳ ವೈಯಕ್ತಿಕ ರಕ್ಷಣಾ ಅಧಿಕಾರಿಗಳು, ಸಶಸ್ತ್ರ ಪೊಲೀಸ್ ಸಿಬ್ಬಂದಿ ಮತ್ತು ಅಗತ್ಯವಿದ್ದರೆ ಒಂದು ಅಥವಾ ಎರಡು ಭದ್ರತಾ ವಾಹನಗಳ ವ್ಯವಸ್ಥೆ ಇರಲಿದೆ.

ಸರ್ಕಾರದ ಮೂಲಗಳ ಪ್ರಕಾರ, ಈ ನಿರ್ಧಾರವು ಯಾವುದೇ ನಿರ್ದಿಷ್ಟ ಬೆದರಿಕೆ ಹಿನ್ನೆಲೆಯಲ್ಲಿ ತೆಗೆದುಕೊಂಡದ್ದಲ್ಲ. ಬದಲಾಗಿ ರಾಜ್ಯಾದ್ಯಂತ VIP ಭದ್ರತಾ ವ್ಯವಸ್ಥೆಯನ್ನು ಪುನರ್‌ಸಂರಚಿಸುವ ಯೋಜನೆಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅನಗತ್ಯವಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದೇ, ನಿಜವಾದ ಅಪಾಯ ಮಟ್ಟಕ್ಕೆ ಅನುಗುಣವಾಗಿ ಭದ್ರತೆ ನೀಡುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬದಲಾವಣೆ ಜಾರಿಯಾದ ನಂತರವೂ ಗಂಗೂಲಿ ಅವರಿಗೆ ಮೂಲಭೂತ ಪೊಲೀಸ್ ರಕ್ಷಣೆಯನ್ನು ಮುಂದುವರಿಸಲಾಗುತ್ತದೆ. ಅವರ ಕೋಲ್ಕತ್ತಾದ ನಿವಾಸ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಾಮಾನ್ಯ ಭದ್ರತಾ ವ್ಯವಸ್ಥೆ ಇರಲಿದೆ ಎಂದು ತಿಳಿದುಬಂದಿದೆ.

 

ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗೆ ಕ್ಯಾಂಟರ್ ಡಿಕ್ಕಿ! ತಪ್ಪಿದ ಭಾರೀ ದುರಂತ

ನೆಲಮಂಗಲ: ಕುಣಿಗಲ್ ಬೈಪಾಸ್ ಬಳಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ.

ಆ್ಯಂಬುಲೆನ್ಸ್ ಹಾಸನ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಈ ಅಪಘಾತ ಸಂಭವಿಸಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ ಹಾಗೂ ಚಾಲಕ ಸೇರಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ತೀವ್ರತೆ ಗಮನಿಸಿದರೆ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದ ಬಳಿಕ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಯನ್ನು ಸುರಕ್ಷಿತವಾಗಿ ಬೇರೆ ವಾಹನಕ್ಕೆ ಸ್ಥಳಾಂತರಿಸಿ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಆ್ಯಂಬುಲೆನ್ಸ್ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಕ್ಯಾಂಟರ್‌ಗೂ ಅಲ್ಪ ಪ್ರಮಾಣದ ಹಾನಿಯಾಗಿದೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ! ಜೂ.9ರವರೆಗೆ ವರುಣನ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಜೂನ್ 9ರವರೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಭಾರಿ ಮಳೆಯ ಜೊತೆಗೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಹಾಗೂ ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಗುಡುಗು-ಮಿಂಚು ಹಾಗೂ ಕೆಲವೆಡೆ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ತಿಳಿಸಲಾಗಿದೆ. ಉತ್ತರ ಒಳನಾಡಿನ ಹಾವೇರಿ, ಬೆಳಗಾವಿ, ರಾಯಚೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹ ಮಳೆಯ ನಿರೀಕ್ಷೆ ಇದೆ.

ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ನಾಗರಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಇನ್ನು ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರು ಜಾಗೃತರಾಗಿರಲು ಸಲಹೆ ನೀಡಲಾಗಿದೆ.

ಕೋಲಾರದಲ್ಲಿ ದಾರುಣ ಘಟನೆ: ಚಿಕ್ಕ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕೋಲಾರ: ಪತಿಯ ಸಾವಿನ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಹತ್ಯೆ ಮಾಡಿದ ಮನಕಲುಕುವ ಘಟನೆ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಬುಜ್ಜಮ್ಮ (22) ತನ್ನ ಮಕ್ಕಳಾದ 3 ವರ್ಷದ ಸರಸ್ವತಿ ಹಾಗೂ 1 ವರ್ಷದ ಹೇಮಾಶ್ರೀಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಮೂಲಗಳ ಪ್ರಕಾರ, ದಂಪತಿ ಕಳೆದ ಒಂದು ವರ್ಷದಿಂದ ಆಲಂಗೂರಿನ ಮಾವಿನ ತೋಪಿನಲ್ಲಿ ಕೆಲಸ ಮಾಡುತ್ತಿದ್ದರು. 20 ದಿನಗಳ ಹಿಂದೆ ಪತಿ ಬಾಬು ಅಪಘಾತದಲ್ಲಿ ಮೃತಪಟ್ಟಿದ್ದು, ಇದರಿಂದ ಮಹಿಳೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಹೇಳಲಾಗಿದೆ.

ಘಟನೆ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮನೆಯಲ್ಲಿ ಹಾಲು ಉಕ್ಕುವುದು ಶುಭವೇ? ಎಣ್ಣೆ ಚೆಲ್ಲಿದರೆ ಅಶುಭವೇ? ಹಿಂದೂ ನಂಬಿಕೆಗಳ ಹಿಂದಿನ ಅರ್ಥ ಏನು?

ಮನೆಯಲ್ಲಿ ಕೆಲವೊಂದು ಆಕಸ್ಮಿಕ ಘಟನೆಗಳು ದಿನನಿತ್ಯದ ಜೀವನದಲ್ಲಿ ಸಾಮಾನ್ಯವಾಗಿದ್ದರೂ, ಹಿಂದೂ ಸಂಸ್ಕೃತಿಯ ನಂಬಿಕೆಗಳು ಮತ್ತು ವಾಸ್ತುಶಾಸ್ತ್ರದ ದೃಷ್ಟಿಯಿಂದ ಇವುಗಳಿಗೆ ವಿಶೇಷ ಶಕುನಾರ್ಥಗಳನ್ನು ನೀಡಲಾಗುತ್ತದೆ.

ವಿಶೇಷವಾಗಿ ಹಾಲು ಮತ್ತು ಎಣ್ಣೆ ಚೆಲ್ಲುವ ಘಟನೆಗಳನ್ನು ಮನೆಮಂದಿ ಬಹಳ ಗಂಭೀರವಾಗಿ ಪರಿಗಣಿಸುವುದು ಕಂಡುಬರುತ್ತಿದೆ.

ಹಾಲು ಪವಿತ್ರತೆ, ಶುದ್ಧತೆ ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶುಭದ್ರವ್ಯವೆಂದು ಪರಿಗಣಿಸಲಾಗುತ್ತದೆ. ಗೃಹಪ್ರವೇಶ, ಪೂಜೆ-ಪುನಸ್ಕಾರ ಸೇರಿದಂತೆ ಅನೇಕ ಶುಭ ಕಾರ್ಯಗಳಲ್ಲಿ ಹಾಲಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಮನೆಯಲ್ಲಿ ಹಾಲು ಆಕಸ್ಮಿಕವಾಗಿ ಉಕ್ಕುವುದು ಅಥವಾ ಚೆಲ್ಲುವುದು ಶುಭ ಸೂಚನೆ ಎಂದು ನಂಬಿಕೆ ಇದೆ. ಇದು ಮನೆಯಲ್ಲಿ ಸಮೃದ್ಧಿ ಹೆಚ್ಚಳವಾಗುವ ಸಂಕೇತ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ದೈವಾನುಗ್ರಹದ ವೃದ್ಧಿ ಹಾಗೂ ಉತ್ತಮ ಸುದ್ದಿಗಳ ಆಗಮನವನ್ನು ಸೂಚಿಸುತ್ತದೆ ಎಂಬ ನಂಬಿಕೆ ಮನೆಮಂದಿಯಲ್ಲಿದೆ. ಕೆಲವರು ಇದನ್ನು ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆ ಹೆಚ್ಚುವ ಸೂಚನೆಯಾಗಿಯೂ ಪರಿಗಣಿಸುತ್ತಾರೆ.

ಇದೇ ರೀತಿಯಲ್ಲಿ ಹಾಲು ಚಂದ್ರನ ಪ್ರತೀಕವಾಗಿದ್ದು, ಚಂದ್ರನ ಶೀತಲತೆ, ಶಾಂತಿ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಹಾಲು ಚೆಲ್ಲುವ ಘಟನೆ ಮನೆಗೆ ಧನಾತ್ಮಕ ಶಕ್ತಿ ಪ್ರವೇಶಿಸುತ್ತಿದೆ ಎಂಬ ನಂಬಿಕೆಯನ್ನೂ ಕೆಲವರು ಹೊಂದಿದ್ದಾರೆ. ಇದು ಕುಟುಂಬದ ಒಳಗಿನ ಒಗ್ಗಟ್ಟು ಹೆಚ್ಚುವುದು, ಆರ್ಥಿಕ ಸಮಸ್ಯೆಗಳು ಕಡಿಮೆಯಾಗುವುದು ಮತ್ತು ಹೊಸ ಅವಕಾಶಗಳು ಉದಯಿಸುವ ಸಂಕೇತವೆಂದು ಸಹ ವ್ಯಾಖ್ಯಾನಿಸಲಾಗುತ್ತದೆ.

ಇನ್ನೊಂದೆಡೆ ಎಣ್ಣೆ ಚೆಲ್ಲುವ ಘಟನೆಗೆ ವಿರುದ್ಧ ಅರ್ಥವನ್ನು ನೀಡಲಾಗುತ್ತದೆ. ಎಣ್ಣೆ ಸಾಮಾನ್ಯವಾಗಿ ಶನಿ ಗ್ರಹದ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಪದೇ ಪದೇ ಎಣ್ಣೆ ಜಾರಿ ಚೆಲ್ಲುವುದು ಅಥವಾ ಕೈಯಿಂದ ತಪ್ಪಿ ಬೀಳುವುದು ಅಶುಭ ಸೂಚನೆ ಎಂದು ಕೆಲವರು ನಂಬುತ್ತಾರೆ. ಇದು ಜೀವನದಲ್ಲಿ ಕೆಲವೊಂದು ಅಡೆತಡೆಗಳು, ಆರ್ಥಿಕ ಒತ್ತಡ, ಸಾಲಬಾಧೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಥವಾ ಕುಟುಂಬದೊಳಗಿನ ಮನಸ್ತಾಪಗಳನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆಯಲ್ಲಿ ಜಾಗೃತಿ ಅಗತ್ಯವಿದೆ ಎಂಬ ಸಂದೇಶವನ್ನೂ ಈ ನಂಬಿಕೆಗಳು ನೀಡುತ್ತವೆ.

ಹೀಗಿದ್ದರೂ ಇವುಗಳನ್ನು ಸಂಪೂರ್ಣವಾಗಿ ಭಯದಿಂದ ನೋಡದೆ, ಜೀವನದಲ್ಲಿ ಜಾಗೃತಿ ಮತ್ತು ಶಿಸ್ತು ಹೆಚ್ಚಿಸಲು ನೀಡುವ ಸೂಚನೆಗಳಾಗಿ ಕೆಲವರು ಪರಿಗಣಿಸುತ್ತಾರೆ. ಮನೆಯ ಸ್ವಚ್ಛತೆ, ಸರಿಯಾದ ನಿರ್ವಹಣೆ ಮತ್ತು ಮಾನಸಿಕ ಶಾಂತಿ ಕಾಪಾಡಿಕೊಳ್ಳುವುದು ಇಂತಹ ಘಟನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯವೂ ಇದೆ. ಜೊತೆಗೆ ಕುಟುಂಬದಲ್ಲಿ ಒಗ್ಗಟ್ಟು ಮತ್ತು ಧನಾತ್ಮಕ ವಾತಾವರಣವನ್ನು ಉಳಿಸಿಕೊಳ್ಳುವುದೇ ಮುಖ್ಯವೆಂದು ಹಿರಿಯರು ಹೇಳುತ್ತಾರೆ.

ಅಧಿಕಾರ ಸ್ವೀಕಾರದ ಬಳಿಕ ಮೊದಲ ಭೇಟಿ: ಅಜ್ಜಯ್ಯನ ಆಶೀರ್ವಾದ ಪಡೆದ ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಆಧ್ಯಾತ್ಮಿಕ ಶರಣಾರ್ಥಿಯಾಗಿ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಸಿಎಂ ಡಿಕೆಶಿ ಅವರು ಅಜ್ಜಯ್ಯ ಅವರೊಂದಿಗೆ ಸುಮಾರು 2 ಗಂಟೆ 15 ನಿಮಿಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಮುಂದಿನ ಆಡಳಿತ ಕ್ರಮಗಳು, ರಾಜ್ಯದ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿರುವುದು ತಿಳಿದುಬಂದಿದೆ. ನಂತರ ಅವರು ಅಜ್ಜಯ್ಯನ ಆಶೀರ್ವಾದ ಪಡೆದು ಮಠದಿಂದ ನಿರ್ಗಮಿಸಿದರು.

ಇದಕ್ಕೂ ಮುನ್ನವೇ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸಮಾರಂಭದ ವೇದಿಕೆಯಲ್ಲಿ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದರು. ಅಧಿಕಾರ ಸ್ವೀಕರಿಸುವ ಮುನ್ನವೇ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದ ಅವರು, ಬಳಿಕ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದರು.

ತಳಮಟ್ಟದ ಹೋರಾಟದಿಂದ ಪಕ್ಷವನ್ನು ಕಟ್ಟಿದ “ಕನಕಪುರ ಬಂಡೆ” ಎಂದೇ ಪರಿಚಿತರಾಗಿರುವ ಡಿಕೆ ಶಿವಕುಮಾರ್ ಅವರು ಇದೀಗ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಅವರ ಈ ಆಧ್ಯಾತ್ಮಿಕ ಭೇಟಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಮಕ್ಕಳಿಗೆ ಆಸ್ತಿ ಬೇಡ, ಶಿಕ್ಷಣವೇ ದೊಡ್ಡ ಸಂಪತ್ತು!

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನದಲ್ಲಿ ಬಾಲ್ಯವೇ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ಪಡೆಯುವ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ನಗರದ ರಂಗನವಾಡಿಯ ಸರ್ಕಾರಿ ಶಾಲೆ ನಂ.11ನಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕ-ಶಿಕ್ಷಕರ ಮಹಾಸಭೆ-2026-27 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಅವರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು” ಎಂದು ಕರೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿಂದ ದ್ವಿಭಾಷಾ ಶಿಕ್ಷಣ ನೀಡಲಾಗುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕ ಮುರಳಿ ಸೋಲ್ಲಾಪೂರ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಮಕ್ಕಳೊಂದಿಗೆ ಆತ್ಮೀಯ ಬಾಂಧವ್ಯವಿದ್ದು, ಶಿಕ್ಷಕರು ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬೋಧಿಸುತ್ತಾರೆ. ಪೌಷ್ಠಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಎಂ.ಆರ್. ಕರಮುಡಿ ಮಾತನಾಡಿ, ಶಾಲೆಯು ಸಮುದಾಯದ ಕೇಂದ್ರಬಿಂದುವಾಗಿದ್ದು, ಪಾಲಕರು ಶಾಲೆಯೊಂದಿಗೆ ನಿರಂತರ ಸಂಪರ್ಕ ಹೊಂದಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಭಾರತಿ ಕುಲಕರ್ಣಿ ಸ್ವಾಗತಿಸಿದರು. ಆರ್.ಬಿ. ಹೊಸಮನಿ ಪ್ರಾರ್ಥಿಸಿದರು. ಎಂ.ವೈ. ಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ನೌರಿನ್ ಜಾಲಿಹಾಳ ವಂದಿಸಿದರು.

ಮಹಾಪೋಷಕರ ಸಭೆಯಲ್ಲಿ ವಹೀದಾ ನರೇಗಲ್ಲ, ಸುರೇಖಾ ಹಡಪದ, ತೈಷಿನ್‌ಭಾನು ಧಾರವಾಡ, ಹನುಮವ್ವ ವಾಲ್ಮೀಕಿ, ಸೈನಜ್ ಕೊಪ್ಪಳ, ಮಂಗಳಾ ಹಿರೇಮಠ, ದಿಲ್‌ಶಾದ್ ಮುಲ್ಲಾ, ಖೈರುನ್‌ಭೀ ಸರಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಶಾಲಾ ಮಕ್ಕಳಿಗೆ ಹೂವು ನೀಡಿ, ಆರತಿ ಬೆಳಗಿ, ಸಿಹಿ ಹಂಚುವ ಮೂಲಕ ಹಬ್ಬದ ವಾತಾವರಣದಲ್ಲಿ ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

“ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು.”
ಕವಿತಾ ದಂಡಿನ

ನೀರು ಇಲ್ಲ, ಬಿಲ್ ಯಾಕೆ?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಲವು ತಿಂಗಳಿಂದ ಸಮರ್ಪಕ ಕುಡಿಯುವ ನೀರು ಸರಬರಾಜಾಗದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, “ಪಟ್ಟಣದ ಹಲವು ವಾರ್ಡ್‌ಗಳಿಗೆ ತಿಂಗಳಿನಿಂದ ನೀರು ಸರಬರಾಜಾಗಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೇಜವಾಬ್ದಾರಿಯುತ ಉತ್ತರ ನೀಡುತ್ತಿದ್ದಾರೆ. ನೀರು ಕೊಡಲು ಆಗದಿದ್ದರೆ ಜನರಿಂದ ಬಿಲ್ ಏಕೆ ವಸೂಲಿ ಮಾಡುತ್ತಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರು ಹಾಗೂ ಬೋರ್‌ವೆಲ್ ನೀರಿನ ಕೊರತೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಎದುರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುಮಾರು ಒಂದು ಗಂಟೆ ಕಾಲ ನಡೆದ ಪ್ರತಿಭಟನೆಯ ಬಳಿಕ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಹಾಗೂ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಲೋಕೇಶ ಸುತಾರ, ಗೌರವಾಧ್ಯಕ್ಷ ಪ್ರವೀಣ ಗಾಣಗೇರ, ಬಸವರಾಜ ಮಲ್ಲೂರ, ಅರುಣ ಮೆಕ್ಕಿ, ಗಂಗಾಧರ ಕರ್ಜಕಣ್ಣವರ, ಗಂಗಾಧರ ಕೊಂಚಿಗೇರಿಮಠ, ಮಂಜುನಾಥ ಕೊಡಳ್ಳಿ, ಫಕ್ಕೀರೇಶ ಅಣ್ಣಿಗೇರಿ, ಚನ್ನಬಸಯ್ಯ ಗಡ್ಡದೇವರಮಠ, ಶಂಕರಗೌಡ ಪಾಟೀಲ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ಹುಲಿಗೆಮ್ಮ ಮೇವುಂಡಿ, ಜಯಮ್ಮ ತುಪ್ಪದ, ಲಕ್ಷ್ಮಕ್ಕ ಪಶುಪತಿಹಾಳ, ರೇಷ್ಮಾ ಜಾದವ, ಸಾವಕ್ಕ ಮಳ್ಳೋಳ್ಳಿ, ಕೆಂಚಮ್ಮ ಶೇರಸೂರಿ, ರತ್ನವ್ವ ವಗ್ಗರ, ರಜಿಯಾ ಮಕಾನದಾರ, ರೇಣಕ್ಕ ಮಲ್ಲೂರ, ಲಕ್ಷ್ಮವ್ವ ಗದ್ದಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

“ನೀರು ಸರಬರಾಜು ಮಾಡದಿದ್ದರೆ ಜನರು ನೀರಿನ ಬಿಲ್ ಕಟ್ಟುವುದಿಲ್ಲ. ಮೊದಲು ನೀರು ಬಿಡಿ, ನಂತರ ಬಿಲ್ ಕೇಳಿ.”
ಬಸವರಾಜ ಹೊಗೆಸೊಪ್ಪಿನ

ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ

error: Content is protected !!