Home Blog Page 27

ಡಿಕೆ ಸಿಎಂ: ಶಿರಹಟ್ಟಿಯಲ್ಲಿ ವಿಜಯೋತ್ಸವ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಡಿ.ಕೆ. ಶಿವಕುಮಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶಿರಹಟ್ಟಿಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ದಶಮನಿ, “ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಅವರ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ” ಎಂದು ಹೇಳಿದರು.

ಅಶ್ರಫ್ ಅಲಿ ಢಾಲಾಯತ, ಬಸವರಾಜ ಕಂಬಳಿ, ಈರಣ್ಣ ಕೋಟಿ, ಮಾಬುಸಾಬ ಟಪಾಲ, ಶೌಕತ್ ಅಲಿ ಮನಿಯಾರ, ಸಮದ ಢಾಲಾಯತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಲ ಮರುಪಾವತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

ವಿಜಯಸಾಕ್ಷಿ ಸುದ್ದಿ, ಗದಗ: ರೈತರ ಬೆಳೆ ಸಾಲ, ಕಿರು ವ್ಯಾಪಾರ ಸಾಲ ಸೇರಿದಂತೆ ವಿವಿಧ ಯೋಜನೆಗಳಡಿ ನೀಡಿದ ಸಾಲಗಳ ಮರುಪಾವತಿಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಬಳಗಾನೂರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗ್ರಾಹಕರು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರ ಜೊತೆಗೆ, ಶಾಖಾ ವ್ಯವಸ್ಥಾಪಕ ಅಶೋಕ ಬಾರಕೇರ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆ, ಸಮಯಪಾಲನೆ ಮತ್ತು ಗ್ರಾಹಕ ಸ್ನೇಹಿ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್. ಕಲ್ಮನಿ ಮಾತನಾಡಿ, “ಗ್ರಾಮೀಣ ಭಾಗದ ಜನರಿಗೆ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಬಳಗಾನೂರು ಶಾಖೆ ಜಿಲ್ಲೆಯಲ್ಲೇ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶೇಖರಯ್ಯ ನನ್ನಯ್ಯನಮಠ, ಪ್ರೊ. ವಿ.ಬಿ. ಕರಮುಡಿ, ಎಂ.ಎ. ಪಾಟೀಲ, ಸಂಗಪ್ಪ ಗೂಳರಡ್ಡಿ, ಅರ್ಜುನ್ ಸಾಲಿ, ನಿಂಗಪ್ಪ ಮಡಿವಾಳರ, ರಾಜು ಪಡೇಸೂರ, ಶರಣಪ್ಪ ಹೊಂಬಳ ಸೇರಿದಂತೆ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಸಿದ್ದಪ್ಪ ವಗ್ಗನವರ ಸ್ವಾಗತಿಸಿದರು. ಎಂ.ಆರ್. ಪಡೇಸೂರ ವಂದಿಸಿದರು.

ಜಮೀರ್‌ಗೆ ಡಿಸಿಎಂ ಪಟ್ಟ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ!

ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಮುಂಬರುವ ಸಚಿವ ಸಂಪುಟದಲ್ಲಿ ಸೂಕ್ತ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಎಚ್ಚರಿಕೆ ನೀಡಿದೆ.

ನಗರದಲ್ಲಿ ಬುಧವಾರ ನಡೆದ ತುರ್ತು ಖಂಡನಾ ಸಭೆಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, “ಜಮೀರ್ ಅಹ್ಮದ್ ಖಾನ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ಸಂಘಟನೆ ಹಾಗೂ ಚುನಾವಣಾ ಯಶಸ್ಸಿನಲ್ಲಿ ಅವರ ಕೊಡುಗೆ ಅನನ್ಯವಾಗಿದೆ” ಎಂದು ಹೇಳಿದರು.

“ಇತ್ತೀಚೆಗೆ ಕೆಲ ರಾಜಕೀಯ ವಿರೋಧಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಅವರ ಜನಪ್ರಿಯತೆಯನ್ನು ಸಹಿಸದೇ ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದ್ದಾರೆ. ಅವರ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಮತ್ತು ನಿರಾಧಾರ” ಎಂದು ಆರೋಪಿಸಿದರು.

“ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಅನಿವಾರ್ಯ. ಜೊತೆಗೆ ಉತ್ತರ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು” ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಜಾಫರ್ ಡಾಲಾಯತ್ ಮಾತನಾಡಿ, “ಸರ್ಕಾರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಗದಗ ಶಹರ ಅಧ್ಯಕ್ಷ ತಾಜುದ್ದೀನ್ ಪಾಪಣ್ಣನವರ್ ಮಾತನಾಡಿ, “ಯಾವುದೇ ರಾಜಕೀಯ ಪಿತೂರಿಗಳಿಗೆ ಮಣಿಯದೆ ಜಮೀರ್ ಅಹ್ಮದ್ ಖಾನ್ ಅವರಿಗೆ ಸೂಕ್ತ ಸ್ಥಾನಮಾನ ಘೋಷಿಸಬೇಕು” ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ರಿಯಾಜ್ ಅಹ್ಮದ್ ದೊಡ್ಡಮನಿ, ಕುತ್ಬುದ್ದೀನ್ ಶೇಖ್, ಭಾಷಾಸಾಬ್ ಖಾಜಿ, ರಫೀಕ್ ಈಟಿ, ನಿಜಾಮುದ್ದೀನ್ ಕಾಟಾಪುರ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಛಾಯಾಗ್ರಾಹಕರಿಗೆ ಕೆಪಿಎ ‘ಆಸರೆ’

ವಿಜಯಸಾಕ್ಷಿ ಸುದ್ದಿ, ಗದಗ: ಛಾಯಾಗ್ರಾಹಕರ ಸಾಮಾಜಿಕ ಭದ್ರತೆಗೆ ಮಹತ್ವದ ಹೆಜ್ಜೆಯಾಗಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ (ಕೆಪಿಎ) “ಆಸರೆ ಯೋಜನೆ”ಯನ್ನು ಜಾರಿಗೆ ತಂದಿದ್ದು, ನೋಂದಾಯಿತ ಛಾಯಾಗ್ರಾಹಕ ಆಕಸ್ಮಿಕವಾಗಿ ನಿಧನರಾದಲ್ಲಿ ಅವರ ಕುಟುಂಬಕ್ಕೆ ₹1 ಲಕ್ಷ ಆರ್ಥಿಕ ನೆರವು ನೀಡುವ ಘೋಷಣೆ ಮಾಡಲಾಗಿದೆ.

ನಗರದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಮಠದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಎ ಆಸರೆ ಯೋಜನೆಯ ಪೋಸ್ಟರ್‌ಗಳನ್ನು ಅನಾವರಣಗೊಳಿಸಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು. ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಛಾಯಾಗ್ರಾಹಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರ್‌ವಾಡೆ, ಮುಖ್ಯ ಕಾರ್ಯದರ್ಶಿ ಮಹದೇವಗೌಡ ಸಂಕನಗೌಡ್ರು, ಹಾಗೂ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆಪಿಎ) ನೂತನ ನಿರ್ದೇಶಕ ಮಂಜುನಾಥ ಎಸ್. ಲಕ್ಷಟ್ಟಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮಹದೇವಗೌಡ ಸಂಕನಗೌಡ್ರು, “ರಾಜ್ಯದಲ್ಲಿಯೇ ಮೊದಲ ಬಾರಿಗೆ ಛಾಯಾಗ್ರಾಹಕರಿಗಾಗಿ ಇಂತಹ ಆಸರೆ ಯೋಜನೆ ಜಾರಿಗೆ ತರಲಾಗಿದೆ. ಸ್ವಾಭಾವಿಕ ಮರಣ, ಅಪಘಾತ ಅಥವಾ ಅನಾರೋಗ್ಯದಿಂದ ಛಾಯಾಗ್ರಾಹಕ ಮೃತಪಟ್ಟರೆ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಎಲ್ಲ ಛಾಯಾಗ್ರಾಹಕರು ಜಾಗೃತರಾಗಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.

ಕೆಪಿಎ ನಿರ್ದೇಶಕ ಮಂಜುನಾಥ ಎಸ್. ಲಕ್ಷಟ್ಟಿ ಮಾತನಾಡಿ, “ಜೂನ್ 1ರಿಂದ ರಾಜ್ಯಾದ್ಯಂತ ಯೋಜನೆ ನೋಂದಣಿ ಆರಂಭಗೊಂಡಿದೆ. ನೋಂದಾಯಿತ ಸದಸ್ಯರು ಆಕಸ್ಮಿಕವಾಗಿ ನಿಧನರಾದಲ್ಲಿ ಅವರ ಕುಟುಂಬಕ್ಕೆ ₹1 ಲಕ್ಷ ನೆರವು ನೀಡಲಾಗುವುದು. ಗದಗ ಜಿಲ್ಲೆಯ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆಯಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಹಾಗೂ ತಾಲೂಕಿನ ಸಮಸ್ತ ಛಾಯಾಗ್ರಾಹಕರು ಉಪಸ್ಥಿತರಿದ್ದರು.

ಡಿ.ಕೆ. ಶಿವಕುಮಾರ ಸಿಎಂ: ಗದಗದಲ್ಲಿ ಸಂಭ್ರಮಾಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ಜಿ. ಪರಮೇಶ್ವರ ಅವರಿಗೆ ಶುಭಾಶಯ ಕೋರಿ ಗದಗ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ನಗರಸಭೆ ಮುಂಭಾಗದಲ್ಲಿರುವ ವಾಯ್.ಎಚ್. ಪರಾಪೂರ ಫೈನಾನ್ಸ್ ಕಚೇರಿ ಎದುರು ಸಿಬ್ಬಂದಿ ಹಾಗೂ ಅಭಿಮಾನಿಗಳಿಂದ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ದಲಿತ ಸಮುದಾಯದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ ಪರ ಜಯಘೋಷಣೆಗಳು ಮೊಳಗಿದವು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ವಿನಾಯಕ ಪರಾಪೂರ, “ರಾಜ್ಯದ ಚುಕ್ಕಾಣೆಯನ್ನು ಡಿ.ಕೆ. ಶಿವಕುಮಾರ ಅವರು ಹಿಡಿದಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಉತ್ಸಾಹ ತಂದಿದೆ. ಪಕ್ಷ ಸಂಕಷ್ಟದಲ್ಲಿದ್ದ ಪ್ರತಿಯೊಂದು ಸಂದರ್ಭದಲ್ಲೂ ಅವರು ನಿಷ್ಠೆಯಿಂದ ಪಕ್ಷದ ಪರ ನಿಂತಿದ್ದರು. ಅವರ ಪರಿಶ್ರಮ ಹಾಗೂ ಪಕ್ಷನಿಷ್ಠೆಗೆ ಹೈಕಮಾಂಡ್ ಸೂಕ್ತ ಗೌರವ ನೀಡಿದೆ” ಎಂದು ಹೇಳಿದರು.

“ಈ ಹಿಂದೆ ಸಿದ್ದರಾಮಯ್ಯ ಅವರು ಜನಪರ ಯೋಜನೆಗಳ ಮೂಲಕ ಜನಮನ ಗೆದ್ದಿದ್ದರು. ಇದೀಗ ಆ ಆಡಳಿತ ಪರಂಪರೆಯನ್ನು ಮುಂದುವರಿಸುವ ದೊಡ್ಡ ಜವಾಬ್ದಾರಿ ಡಿ.ಕೆ. ಶಿವಕುಮಾರ ಮೇಲಿದೆ. ಒಬ್ಬ ರೈತನ ಮಗ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ಹೆಮ್ಮೆಯ ಸಂಗತಿ. ಬಡವರ ಪರ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅಭಿಪ್ರಾಯಪಟ್ಟರು.

ಪಂಚ ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆದಿದ್ದು, ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನೆರವಾಗಿವೆ. ಮೊದಲು ಟೀಕಿಸಿದ್ದವರೇ ಈಗ ಬೇರೆ ರಾಜ್ಯಗಳಲ್ಲಿ ಇದೇ ಮಾದರಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ವಿಶಾಲ ಗೋಶಲ್ಯನವರ, ಮಂಜುನಾಥ ಕೊರವರ, ಅರವಿಂದ ಗಾಗಡೆ, ಅಜಯ ಗೌಡರ, ಶ್ರೀನಿವಾಸ್ ಮುದರೆಡ್ಡಿ, ಸಿದ್ದಪ್ಪ ಗೋಶಲ್ಯನವರ, ಬಸಣ್ಣ ಹಾತಲಗೇರಿ, ಕೃಷ್ಣ ಹಡಪದ, ಬಸವರಾಜ, ಪವನ, ಸಿದ್ದಣ್ಣ ಗೋಶಲ್ಯನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡಿ.ಕೆ. ಶಿವಕುಮಾರ ಅವರು ಸಾಮಾನ್ಯ ಕಾರ್ಯಕರ್ತರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸುಮಾರು 45 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಅವರು ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಶ್ವಾಸವಿದೆ.

ಪೃಥ್ವಿ ಕೆ. ಪರಾಪೂರ, ಕಾಂಗ್ರೆಸ್ ಯುವ ಮುಖಂಡ

ಅಸುಂಡಿ ಅಂಜುಮನ್ ಕಮಿಟಿ ಅಧ್ಯಕ್ಷರಾಗಿ ಹಸನಸಾಬ ಓಲೇಕಾರ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಸುಂಡಿ ಗ್ರಾಮದಲ್ಲಿ ಸಮಸ್ತ ಮುಸ್ಲಿಂ ಬಾಂಧವರ ಸಮ್ಮುಖದಲ್ಲಿ ನೂತನ ಅಂಜುಮನ್ ಕಮಿಟಿ ಹಾಗೂ ಅಬ್ದುಲ್ ಕಲಾಂ ಶಾದಿ ಮಹಲ್ ಕಮಿಟಿಯ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಲ್ಲಸಮುದ್ರ ಗ್ರಾಮದ ಮುಫ್ತಿ ಅಬ್ದುಲ್ ಸಮದ ಅ. ಜಕಾತಿ ಅವರ ಉಪಸ್ಥಿತಿಯಲ್ಲಿ ಪಂಚರು ಹಾಗೂ ಗ್ರಾಮಸ್ಥರು ಸೇರಿಕೊಂಡು ಕಮಿಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ನೂತನ ಕಮಿಟಿಯ ಅಧ್ಯಕ್ಷರಾಗಿ ಹಸನಸಾಬ ತಾ. ಓಲೇಕಾರ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಕಾಸೀಮಸಾಬ ಹು. ಭಾವಿಕಟ್ಟಿ, ಗೌರವಾಧ್ಯಕ್ಷರಾಗಿ ಬಾಬುಸಾಬ ನದಾಫ್, ಕಾರ್ಯದರ್ಶಿಯಾಗಿ ಅಲ್ಲಾಭಕ್ಷಿ ಮಾ. ನದಾಫ್ ಹಾಗೂ ಖಜಾಂಚಿಯಾಗಿ ರಾಜೇಸಾಬ ದಾ. ಬೆಳ್ಳಿಕೊಪ್ಪ ಆಯ್ಕೆಯಾದರು.

ಸದಸ್ಯರಾಗಿ ಯತೀಮಸಾಬ ಗುಳಗುಂದಿ, ಹುಜೇಫಾ ಡಾಲಾಯತ, ರಫೀಕ್ ಅ. ನದಾಫ್, ಯಾಸೀನ್ ನ. ಭಾವಿಕಟ್ಟಿ, ರಫೀಕ್ ಶ. ಬಿಂಕದಕಟ್ಟಿ, ಇಸ್ಮಾಯಿಲ್ ಧಾರವಾಡ ಹಾಗೂ ಮಾಬುಸಾಬ ಹು. ಕಾಗದಗಾರ ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಗ್ರಾಮಾಭಿವೃದ್ಧಿ, ಸಮುದಾಯದ ಏಕತೆ ಹಾಗೂ ಶಾದಿ ಮಹಲ್‌ನ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ನೂತನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಬುಸಾಬ ಅ. ಡಾಲಾಯತ, ದೂದುಸಾಬ ಮ. ಜಮಾಲಖಾನವರ, ಹಸನಸಾಬ ರಾ. ನದಾಫ, ಗಫಾರಸಾಬ ರಾ. ಬೆಂತೂರ, ರಫೀಕ್ ಬುರಬುರೆ, ಬಬಲಿಸಾಬ ಕೊತಬಾಳ, ಶರೀಫಸಾಬ ಬಿಂಕದಕಟ್ಟಿ, ಮಕ್ತುಮಸಾಬ ಓಲೇಕಾರ, ತಾಜುದ್ದೀನ್ ಓಲೇಕಾರ, ಯೂಸುಫಸಾಬ ಧಾರವಾಡ, ಮಕ್ಬೂಲ್ ಗುಳಗುಂದಿ, ರಿಯಾಜ್ ಮುಲ್ಲಾನವರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕ: ಎಐಸಿಸಿ ಅಧಿಕೃತ ಆದೇಶ!

ಬೆಂಗಳೂರು: ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.

ನಿರ್ಗಮಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೇವೆ ಹಾಗೂ ಕೊಡುಗೆಗಳನ್ನು ಪಕ್ಷವು ಶ್ಲಾಘಿಸಿದೆ ಎಂದು ಎಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಪಕ್ಷ ಸ್ಮರಿಸಿದೆ.

ಇದಕ್ಕೂ ಮುನ್ನವೇ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಈ ಪಟ್ಟಿಯಲ್ಲಿ ಬಿ.ಕೆ. ಹರಿಪ್ರಸಾದ್, ಪಿ.ವಿ. ಮೋಹನ, ತಿಪ್ಪಣ್ಣ ಕಮಕನೂರು ಹಾಗೂ ಮಳವಳ್ಳಿ ಶಿವಣ್ಣ ಅವರಿಗೆ ಹೈಕಮಾಂಡ್ ಟಿಕೆಟ್ ಘೋಷಿಸಿದೆ. ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.

ಸಚಿವ ಸ್ಥಾನ ಸಿಕ್ಕರೂ ಒಂದೆಡೆ ಮನಸ್ಸಿನಲ್ಲಿ ನೋವಿದೆ: ಯತೀಂದ್ರ ಸಿದ್ದರಾಮಯ್ಯ!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ‘ಎ ಖಾತಾ’ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಡಿಕೆಶಿ, ರಾಜ್ಯದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ತಿಳಿಸಿದರು. ಈ ಯೋಜನೆಯಿಂದ ಬೇರೆ ಊರುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಇದೇ ವೇಳೆ ಬೆಂಗಳೂರಿಗೆ ಸೀಮಿತವಾಗಿದ್ದ ‘ಬಿ ಖಾತಾ’ದಿಂದ ‘ಎ ಖಾತಾ’ಗೆ ಪರಿವರ್ತನೆ ಮಾಡುವ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಅವರು ಘೋಷಿಸಿದರು. ಜನರಿಗೆ ಆಡಳಿತಾತ್ಮಕ ಸುಗಮತೆ ನೀಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.

“ಇದು ಶುಭ ಗಳಿಗೆ, ಶುಭ ಮುಹೂರ್ತ. ಸಂಜೆ 4.15ಕ್ಕೆ ಹೊಸ ಕೆಲಸ ಆರಂಭವಾಗಿದೆ. ಇವತ್ತು ಹೊಸ ದಿನ, ಹೊಸ ಅವಕಾಶಗಳ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುವುದು.

ಜನರು ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಹಿಂದಿನ ಕಾಲದಲ್ಲಿ ಟೀಕೆಗಳು ಬಂದಿದ್ದರೂ ನಾನು ನನ್ನ ರಾಜಕೀಯ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸುತ್ತೇನೆ. ಎಲ್ಲ ಸವಾಲುಗಳನ್ನು ಎದುರಿಸಿದ ಅನುಭವ ನನಗಿದೆ ಎಂದೂ ಅವರು ತಿಳಿಸಿದರು.

ತಿಹಾರ್ ಜೈಲಿಗೆ ಹೋಗಿ ಬಂದ ಅನುಭವವನ್ನು ಉಲ್ಲೇಖಿಸಿದ ಅವರು, ಜೀವನದಲ್ಲಿ ಅನೇಕ ಹೋರಾಟಗಳನ್ನು ಕಂಡಿದ್ದೇನೆ. ಈಗಿನ ಜವಾಬ್ದಾರಿ ರಾಜ್ಯದ ಜನರ ಆಶಯಗಳನ್ನು ಈಡೇರಿಸುವುದು ಎಂದು ಹೇಳಿದರು.

ಮುಂದೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ವೈಯಕ್ತಿಕವಾಗಿರುವುದಿಲ್ಲ, ಅದು ಸಂಪೂರ್ಣ ಸಚಿವ ಸಂಪುಟದ ಕಲೆಕ್ಟಿವ್ ನಿರ್ಧಾರವಾಗಿರುತ್ತದೆ. “ನಮ್ಮ ಸರ್ಕಾರ ಸರ್ವ ಜನಾಂಗದ ಶಾಂತಿಯ ತೋಟದಂತೆ ಕೆಲಸ ಮಾಡುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸ್ಥಾನ ಸಿಕ್ಕರೂ ಒಂದೆಡೆ ಮನಸ್ಸಿನಲ್ಲಿ ನೋವಿದೆ: ಯತೀಂದ್ರ ಸಿದ್ದರಾಮಯ್ಯ!

ಬೆಂಗಳೂರು: ಒಂದೆಡೆ ಮಂತ್ರಿ ಆಗಿರೋದು ಖುಷಿ ತಂದಿದೆ. ಇನ್ನೊಂದೆಡೆ ತಂದೆ ಅವಧಿ ಪೂರೈಸಿದ್ದಕ್ಕೆ ದುಃಖವಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಒಂದು ಕಡೆ ನನಗೆ ಸಚಿವನಾಗಿ ಜವಾಬ್ದಾರಿ ಸಿಕ್ಕಿರುವುದು ಸಂತೋಷ ತಂದಿದೆ. ಆದರೆ ಇನ್ನೊಂದೆಡೆ ಅಷ್ಟೇ ದುಃಖವೂ ಇದೆ” ಎಂದು ಹೇಳಿದರು.

ನನ್ನ ತಂದೆ ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರೈಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅದು ಸಾಧ್ಯವಾಗದೇ ಇರುವುದು ವೈಯಕ್ತಿಕವಾಗಿ ತೀವ್ರ ದುಃಖ ತಂದಿದೆ. ಅವರ ಸ್ಥಾನಕ್ಕೆ ನನಗೆ ಸಚಿವ ಸ್ಥಾನ ನೀಡಲಾಗಿದೆ ಎಂದರು.

ಇಂದು ನಡೆದ ಮೊದಲ ಸಚಿವ ಸಂಪುಟ ಸಭೆ ಯಶಸ್ವಿಯಾಗಿ ನಡೆದಿದೆ. ಆದರೆ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳನ್ನು ಸಭೆಯಿಂದ ಹೊರಗಡೆ ಅಧಿಕೃತವಾಗಿ ಹೇಳಲು ನಿಯಮಗಳ ಕಾರಣದಿಂದ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಸಿಎಂ ಹಾಗೂ ಡಿಸಿಎಂ ಅವರೇ ವಿವರ ನೀಡಲಿದ್ದಾರೆ ಎಂದು ಹೇಳಿದರು.

ತಮಗೆ ನೀಡಲಾಗುವ ಖಾತೆಯ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಪಕ್ಷದ ವರಿಷ್ಠರು ಯಾವ ಖಾತೆ ನೀಡಿದರೂ ಅದನ್ನು ಜವಾಬ್ದಾರಿಯಿಂದ ನಿರ್ವಹಿಸುವೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಂಪೂರ್ಣವಾಗಿ ಪಕ್ಷದ ಹಿರಿಯ ನಾಯಕರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

“ಅಸಾಧ್ಯವಾದುದು ಏನೂ ಇಲ್ಲ”: ರಾಜ್ಯದ ಜನತೆಗೆ ಮಹತ್ವದ ಕರೆ ಕೊಟ್ಟ CM ಡಿ.ಕೆ. ಶಿವಕುಮಾರ್!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲಿಯೂ ಧೈರ್ಯ ತುಂಬಿ ಬೆನ್ನಿಗೆ ನಿಂತಿರುವ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ನಾನು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಈ ಕ್ಷಣದಲ್ಲಿ ನನ್ನ ಮೇಲೆ ತೋರಿದ ಅಪಾರ ಪ್ರೀತಿ ಮತ್ತು ವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದು ಸಿಎಂ ಡಿಕೆಶಿ ಭಾವುಕರಾಗಿ ಹೇಳಿದ್ದಾರೆ.

ಮುಖ್ಯಮಂತ್ರಿಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಂದಿರುವುದು ಕೇವಲ ಅಧಿಕಾರವಲ್ಲ, ಅದು ಕನ್ನಡಿಗರ ಕನಸುಗಳನ್ನು ಸಾಕಾರಗೊಳಿಸುವ ಪವಿತ್ರ ಕರ್ತವ್ಯವಾಗಿದೆ. ಈ ಅವಕಾಶ ನೀಡಿದ ಹಿರಿಯ ನಾಯಕರು, ಮಾರ್ಗದರ್ಶಕರು ಹಾಗೂ ಸದಾ ಬೆನ್ನಿಗೆ ನಿಂತಿರುವ ಪ್ರತಿಯೊಬ್ಬರಿಗೂ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದಿನ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಹೊಸ ಚಿಂತನೆಗಳು ಮತ್ತು ನವೀನ ಆಲೋಚನೆಗಳೊಂದಿಗೆ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಮಗ್ರ ಅಭಿವೃದ್ಧಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವು ಎಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಭವಿಷ್ಯದ ಪೀಳಿಗೆ ಹೆಮ್ಮೆಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ನಿರ್ಮಿಸುವುದೇ ನಮ್ಮ ಗುರಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

error: Content is protected !!