Home Blog Page 27

ಜ. 29ರಿಂದ ಫೆಬ್ರವರಿ 1ರವರೆಗೆ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಗದಗ: ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಜ. 29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ನಡೆಯಲಿದೆ ಎಂದು ಸಂಸ್ಥೆಯ ಹುಬ್ಬಳ್ಳಿ ವಲಯದ ಅಧ್ಯಕ್ಷ ಗುರು ಅಂಗಡಿ ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ ನಡೆದಿರುವ ಮೂರು ಉದ್ಯಮ ಸಮ್ಮೇಳನಗಳು ದೊಡ್ಡ ಯಶಸ್ಸು ಕಂಡಿದ್ದು, ನೂರಾರು ಕೋಟಿ ವಹಿವಾಟು ನಡೆಸಿವೆ. ಈ ಹಿನ್ನೆಲೆಯಲ್ಲಿ 4ನೇ ವರ್ಷದ ಸಮ್ಮೇಳನವನ್ನು ನಾಲ್ಕು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ ಎಂದರು.

2023ರಲ್ಲಿ ಆರಂಭಗೊಂಡ ಸಮ್ಮೇಳನವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಆಗ 35 ಕೋಟಿ ರೂ ಮೊತ್ತದ ವ್ಯವಹಾರ ಒಡಂಬಡಿಕೆಗಳು ನಡೆದಿದ್ದವು. 2024ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ 64 ಕೋಟಿ ರೂ, 2025ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ 135 ಕೋಟಿ ರೂ ವ್ಯವಹಾರ ನಡೆದಿತ್ತು ಎಂದು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ನಾಲ್ಕನೇ ಸಮ್ಮೇಳನದಲ್ಲಿ 75 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ಪ್ರದೇಶದಲ್ಲಿನ ಅತಿದೊಡ್ಡ ಸಮುದಾಯ ನೇತೃತ್ವದ ಸಮ್ಮೇಳನ ಎಂಬ ದಾಖಲೆ ಬರೆಯಲಿದೆ ಎಂದರು.

ನಾಲ್ಕು ದಿನಗಳ ಸಮ್ಮೇಳನದಲ್ಲಿ ಉದ್ಯಮಿಗಳು, ಕೈಗಾರಿಕಾ ದಿಗ್ಗಜರು, ನೀತಿ ನಿರ್ಧಾರಕರು, ಸ್ಟಾರ್ಟ್ಅಪ್‌ಗಳು, ಎಂಎಸ್‌ಎಂಇಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. ಜ. 29ರಂದು ಸಂಜೆ 4.30ಕ್ಕೆ ಸಿದ್ಧಗಂಗಾ ಶ್ರೀಗಳು ಸಮ್ಮೇಳನ ಉದ್ಘಾಟಿಸುವರು. ಸಚಿವರಾದ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಫೆಬ್ರವರಿ 1ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಚಿಕ್ಕಮಗಳೂರಿನ ವಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಚಿವ ಡಾ. ಶರಣಪ್ರಕಾಶ್ ಪಾಟೀಲ, ವಿಜಯಾನಂದ ಕಾಶಪ್ಪನವರ, ಶಂಕರ್ ಬಿದರಿ, ಮುರುಗೇಶ ನಿರಾಣಿ, ರಾಣಿ ಸತೀಶ್, ಐಎಲ್‌ವೈಎಫ್ ಸಂಸ್ಥಾಪಕ ಟ್ರಸ್ಟಿ ನವೀನ್ ಕೆ.ಎಸ್. ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

87ರ ವಯಸ್ಸಿನಲ್ಲಿ ಏಕೈಕ ಪುತ್ರನನ್ನು ಕಳೆದುಕೊಂಡ ಖ್ಯಾತ ಗಾಯಕಿ ಎಸ್ ಜಾನಕಿ: ಮುರಳಿ ಕೃಷ್ಣ ಹಠಾತ್ ನಿಧನ

ಸಂಗೀತ ಲೋಕದ ಕೋಗಿಲೆ ಎಂದು ಕರೆಸಿಕೊಳ್ಳುವ ಹಿರಿಯ ಗಾಯಕಿ ಎಸ್ ಜಾನಕಿ ಅವರ ಜೀವನದಲ್ಲಿ ಇಂದು ಆಘಾತಕಾರಿ ದುಃಖದ ದಿನ. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ಇಂದು (ಜನವರಿ 22) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 65 ವರ್ಷ ವಯಸ್ಸಿನ ಮುರಳಿ ಕೃಷ್ಣ ಅವರ ಅಕಾಲಿಕ ಮರಣ ಅಭಿಮಾನಿಗಳು ಮತ್ತು ಕಲಾ ಲೋಕವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ಎಸ್ ಜಾನಕಿ ಅವರ ಹೆಸರು ಸಂಗೀತದೊಂದಿಗೆ ಅನಿವಾರ್ಯವಾಗಿ ಜೋಡಿಸಿಕೊಂಡಿರುವಂತೆ, ಅವರ ಪುತ್ರ ಮುರಳಿ ಕೃಷ್ಣ ಕೂಡ ಕಲೆಯೊಂದಿಗೆ ಆಳವಾದ ನಂಟು ಹೊಂದಿದ್ದರು. ಅವರು ಅತ್ಯುತ್ತಮ ಭರತನಾಟ್ಯ ಕಲಾವಿದರಾಗಿದ್ದು, ಹಲವು ಶೋಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಕೆಲವು ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಫಿ ಮಾಡಿ ತಮ್ಮದೇ ಆದ ಗುರುತು ಮೂಡಿಸಿದ್ದರು.

ಭರತನಾಟ್ಯ ಮತ್ತು ಕುಚುಪುಡಿ ಪ್ರವೀಣೆಯಾಗಿದ್ದ ಉಮಾ ಅವರನ್ನು ವಿವಾಹವಾಗಿದ್ದ ಮುರಳಿ ಕೃಷ್ಣ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಆದರೆ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯದೆ, ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದರು. ಕೆಲ ಕಾಲ ಮೈಸೂರಿನಲ್ಲಿ ವಾಸವಿದ್ದ ಮುರಳಿ ಕೃಷ್ಣ, ಈಗ ಹರಿದಾಡುತ್ತಿರುವ ಸುದ್ದಿಯಂತೆ ತಾಯಿಯ ಮನೆಯಾದ ಹೈದರಾಬಾದ್‌ನಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಾಯಕರು, ಸಂಗೀತ ನಿರ್ದೇಶಕರು ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. “ಜಾನಕಿ ಅಮ್ಮನಿಗೆ ಈ ದುಃಖವನ್ನು ತಾಳುವ ಶಕ್ತಿ ನೀಡಲಿ” ಎಂದು ಹಲವರು ಪ್ರಾರ್ಥಿಸಿದ್ದಾರೆ.

87 ವರ್ಷದ ಎಸ್ ಜಾನಕಿ ಅವರು ಈ ವಯಸ್ಸಿನಲ್ಲಿ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡಿರುವುದು ದೇಶದ ಸಂಗೀತ ಲೋಕವನ್ನೇ ನೋವಿನಲ್ಲಿ ಮುಳುಗಿಸಿದೆ. ಮುರಳಿ ಕೃಷ್ಣ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ರಾಜೀವ್ ಗೌಡ ವಿರುದ್ಧ FIR ರದ್ದತಿಗೆ ಕೋರ್ಟ್ ನಕಾರ – ಶಿಡ್ಲಘಟ್ಟ ಪೌರಾಡಳಿತ ಪ್ರಕರಣ ತನಿಖೆಗೆ ಗ್ರೀನ್ ಸಿಗ್ನಲ್

0

ಬೆಂಗಳೂರು: ಶಿಡ್ಲಘಟ್ಟ ಪೌರಾಡಳಿತದ ಮಹಿಳಾ ಅಧಿಕಾರಿಗೆ ಬೆದರಿಕೆ ನೀಡಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ದಾಖಲಾಗಿದ್ದ FIR ರದ್ದತಿಗೆ ನ್ಯಾಯಾಲಯವು ನಕಾರ ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಎರಡನೇ ಅಪರ ಸತ್ರ ನ್ಯಾಯಾಲಯ ವಿಚಾರಣೆಗೆ ಹಸಿರು ಸೂಚನೆ ನೀಡಿದ್ದು, FIRಗಳ ತನಿಖೆ ಮುಂದುವರಿಯಲಿದೆ.

2 FIRಗಳು ರದ್ದತಿಗಾಗಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೋರ್ಟ್ ವಜಾ ಮಾಡುವುದಕ್ಕೆ ನಿರಾಕರಿಸಿದೆ. ನ್ಯಾ. ನಾಗಪ್ರಸನ್ನ ಪೀಠ ಈ ಆದೇಶ ಹೊರಡಿಸಿದ್ದು, ಪ್ರಕರಣ ದಾಖಲಾದ ದಿನದಿಂದ ರಾಜೀವ್ ಗೌಡ ನಾಪತ್ತೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡಿದೆ.

ಈ ಕ್ರಮದಿಂದ ಕಾನೂನು ಪ್ರಕ್ರಿಯೆ ಗಂಭೀರವಾಗಿದ್ದು, ನ್ಯಾಯಾಂಗವು ಅಧಿಕಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಕರ್ತವ್ಯವನ್ನು ರಕ್ಷಿಸುವ ಮಹತ್ವವನ್ನು ಒತ್ತಿ ತೋರಿಸಿದೆ. ಮುಂದಿನ ತನಿಖೆ ಮತ್ತು ನ್ಯಾಯ ಪ್ರಕ್ರಿಯೆ ರಾಜಕೀಯ ಮುಖಂಡರ ಹೋರಾಟದ ಮೇಲಿನ ಕಾನೂನಾತ್ಮಕ ಪ್ರಭಾವವನ್ನು ನಿರ್ಧರಿಸುವ ಪ್ರಮುಖ ಸಿಗ್ನಲ್ ಆಗಲಿದೆ.

ಬಿಗ್‌ಬಾಸ್‌ ವಿಜೇತ ಗಿಲ್ಲಿಗೆ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 12ನೇ ಆವೃತ್ತಿಯ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟರಾಜ್ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವೈಯಕ್ತಿಕವಾಗಿ ಅಭಿನಂದನೆ ಪಡೆದಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಈ ಸಮಾರಂಭದಲ್ಲಿ ಸಚಿವ ಬೈರತಿ ಬಸವರಾಜ್ ಮತ್ತು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು.

ಮಂಡ್ಯದ ಮಳವಳ್ಳಿಯ ದಡದಪುರ ಗ್ರಾಮ ಮೂಲದ ಗಿಲ್ಲಿ, ತಮ್ಮ ನೈಜ ವ್ಯಕ್ತಿತ್ವ, ಬಿಗ್‌ಬಾಸ್ ಮನೆಯಲ್ಲಿನ ಶ್ರೇಷ್ಠ ಪ್ರದರ್ಶನ ಮತ್ತು ನಿರ್ಧಾರಾತ್ಮಕ ಕೌಶಲ್ಯದ ಮೂಲಕ ಬಹುಮತ ಪಡೆದು ಸ್ಪರ್ಧೆಯನ್ನು ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರು ರನ್ನರ್‌ಅಪ್ ಆಗಿ ಸ್ಪರ್ಧೆಯನ್ನು ಮುಗಿಸಿದ್ದಾರೆ.

ಇದು ಕೇವಲ ಮನರಂಜನೆಯಲ್ಲ, ರಾಜ್ಯದ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಗೌರವ ದೊರಕುವುದರಿಂದ ಗಿಲ್ಲಿಯ ಸಾಧನೆಯ ಮಹತ್ವವನ್ನು ಮತ್ತಷ್ಟು ಒತ್ತಿ ತೋರಿಸುತ್ತದೆ. ಸ್ಪರ್ಧೆಯ ಜಯವು ಯುವಜನತೆಗೆ ಸಕ್ರಿಯ, ಶ್ರಮಪರ, ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.

ಮಲೆ ಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಮುಂದುವರಿದ ಚಿರತೆ ಅಟ್ಟಹಾಸ : ಭಕ್ತರ ಸುರಕ್ಷತೆಗೆ ಗಸ್ತು ಹೆಚ್ಚಳ, ಪಾದಯಾತ್ರೆಗೆ ಸಮಯ ನಿಗದಿ ಚಿಂತನೆ

0

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ತಾಳು ಬೆಟ್ಟದಲ್ಲಿ ಪಾದಯಾತ್ರಿಗೆ ಚಿರತೆ ದಾಳಿಯಿಂದ ಸಾವಾದ ಘಟನೆ ನಂತರವೂ ಚಿರತೆ ಚಟುವಟಿಕೆ ನಿಂತಿಲ್ಲ. ಬುಧವಾರ ರಾತ್ರಿ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.

ಚಿರತೆ ರಸ್ತೆ ತಡೆಗೋಡೆ ಮೇಲೆ ಕುಳಿತುಕೊಂಡಿರುವುದು ಹಾಗೂ ರಸ್ತೆಯ ಪಕ್ಕದಲ್ಲಿ ಹೊಂಚು ಹಾಕುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತ ತಕ್ಷಣವೇ ಎಚ್ಚರಿಕೆ ಕ್ರಮ ಕೈಗೊಂಡಿದೆ. ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಬೋನು ಅಳವಡಿಕೆ, ಡ್ರೋನ್ ಮೂಲಕ ನಿಗಾವಹಣೆ ಹಾಗೂ ವಿಶೇಷ ಕಾರ್ಯಪಡೆ ನಿಯೋಜನೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸ್ಥಳದಲ್ಲಿ ಗಸ್ತು ತೀವ್ರಗೊಳಿಸಲಾಗಿದೆ.

ಸ್ಥಳೀಯ ಶಾಸಕ ಮಂಜುನಾಥ್ ಮಾತನಾಡಿ, “ಭಕ್ತರ ಸುರಕ್ಷತೆ ನಮ್ಮ ಹೊಣೆ. ಪ್ರತೀ ಜೀವವೂ ಅಮೂಲ್ಯ. ಶನಿವಾರ ಶಿವರಾತ್ರಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡುವ ಚಿಂತನೆ ಇದೆ. ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ಎರಡಕ್ಕೂ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾರ್ ಮಾಲೀಕನ ಹತ್ಯೆ: 4 ಆರೋಪಿಗಳ ಬಂಧನ

0

ಚಿಕ್ಕಮಗಳೂರು: ನಗರದ ಬಾರ್ ಮಾಲೀಕನನ್ನು ನಿರ್ದಯವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಲ್ಕತ್ತಾ ಮೂಲದ ರುದ್ರ, ಆಂಧ್ರ ಪ್ರದೇಶದ ಅದೋನಿಯ ವೀರ ಶೇಖರ್, ತುಮಕೂರಿನ ವಿನಿ ಹಾಗೂ ಸ್ಥಳೀಯ ನಿವಾಸಿ ಹನುಮಂತ ಎಂದು ಗುರುತಿಸಲಾಗಿದೆ. ಈ ನಾಲ್ವರೂ ಜ.20ರಂದು ನಗರದ ಬಾರ್ ಒಂದರ ಮಾಲೀಕರಾದ ತೇಜಸ್ವಿ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು.

ಹಲ್ಲೆಯ ಬಳಿಕ ಪ್ರಜ್ಞೆ ತಪ್ಪಿದ ತೇಜಸ್ವಿಯನ್ನು ಆರೋಪಿಗಳು ಸುಮಾರು ಒಂದು ಕಿಲೋ ಮೀಟರ್ ದೂರದ ಬಯಲಲ್ಲಿ ಎಸೆದು ಪರಾರಿಯಾಗಿದ್ದರು. ಜ.21ರಂದು ಬೆಳಗ್ಗೆ ಆಟೋ ಚಾಲಕರೊಬ್ಬರು ಅವರನ್ನು ಕಂಡು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಾವೇ ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ದೇಶ ಕಾಯುವ ಯೋಧರು, ಚಿಕ್ಕ ಮಕ್ಕಳಿಂದ ಹಿಡಿದು ಎಲ್ರೂ ಪ್ರೀತಿ ಕೊಟ್ಟು, ಸಪೋರ್ಟ್ ಮಾಡಿದ್ದೀರಿ: ಗಿಲ್ಲಿ ನಟ

ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅಭಿಮಾನಿಗಳ ಅಪಾರ ಪ್ರೀತಿಯಿಂದ ತುಂಬಿ ಹೋಗಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಿಂದ ಬಂದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ಅವರು, “ನಾನು ಬಿಗ್‌ಬಾಸ್ ಮನೆಯಲ್ಲಿದ್ದಾಗ ಹೊರಗೆ ಇಷ್ಟು ದೊಡ್ಡ ಮಟ್ಟದ ಸಪೋರ್ಟ್ ಸಿಗುತ್ತಿದೆ ಎಂಬುದನ್ನು ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಈಗ ಹೊರಗೆ ಬಂದು ನೋಡಿದ ಮೇಲೆ ಮನಸ್ಸು ತುಂಬಾ ಖುಷಿಯಾಗಿದೆ. ನಿಜಕ್ಕೂ ನಂಬೋದಕ್ಕೆ ಆಗುತ್ತಿಲ್ಲ” ಎಂದು ಹೇಳಿದ್ದಾರೆ.

ಅಭಿಮಾನಿಗಳ ಪ್ರೀತಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ವಿವರಿಸಿದ ಗಿಲ್ಲಿ ನಟ, ದೇಶ ಕಾಯುವ ಯೋಧರು ಕೂಡ ತಮ್ಮ ಪರವಾಗಿ ವಿಡಿಯೋ ಮಾಡಿ ಹರಸಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಸೇರಿದಂತೆ ಇತರೆ ರಾಜ್ಯದವರು ಮತ್ತು ವಿದೇಶದಲ್ಲಿರುವವರು ಸಹ ಬೆಂಬಲಿಸಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ರೈತರು ಹಸುಗಳ ಮೇಲೆ ತಮ್ಮ ಚಿತ್ರ ಬಿಡಿಸಿ ಪೋಸ್ಟ್ ಮಾಡಿದ್ದಾರೆ. ಆಟೋ ಚಾಲಕರು ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಲವರು ತಮಗೆ ಪರಿಚಯವೂ ಇಲ್ಲದೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಮರೆಯಲಾರೆ ಎಂದು ಹೇಳಿದ ಅವರು, ಎಲ್ಲಾ ಮೀಡಿಯಾಗಳಿಗೂ ಧನ್ಯವಾದ ಹೇಳಿದ್ದಾರೆ. “ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಟ್ರೋಲ್ ವಿಡಿಯೋ ಕೂಡ ನೋಡಿಲ್ಲ. ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ, ಅದನ್ನು ನಾನು ಜೀವಮಾನಪೂರ್ತಿ ಉಳಿಸಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ: ರಿತ್ತಿ ಕುಟುಂಬಕ್ಕೆ ಸೈಟ್, ಉಚಿತ ಶಿಕ್ಷಣ, ಉದ್ಯೋಗ – ಲಕ್ಕುಂಡಿ ಗ್ರಾಪಂ ಮಹತ್ವದ ನಿರ್ಧಾರ

0

ಗದಗ: ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯತ್ ಮಾನವೀಯ ಸ್ಪಂದನೆ ನೀಡಿದೆ. ಸರ್ಕಾರಕ್ಕೆ ನಿಧಿಯನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ 30×40 ನಿವೇಶನ ನೀಡುವ ನಿರ್ಧಾರವನ್ನು ಗ್ರಾಪಂ ಕೈಗೊಂಡಿದೆ.

ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಚಪ್ಪ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಕುರಿತು ಅಧಿಕೃತ ಠರಾವು ಅಂಗೀಕರಿಸಲಾಯಿತು. ಬಡ ಕುಟುಂಬಕ್ಕೆ ನಿವೇಶನ ಹಾಗೂ ಮನೆ ದೊರಕಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ವರದಿಗಳು ಪ್ರಕಟವಾಗುತ್ತಿದ್ದವು. ಆ ವರದಿಗಳ ಫಲವಾಗಿ ಇದೀಗ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ಈ ವೇಳೆ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಗೆ ಗ್ರಾಮ ಪಂಚಾಯತಿಯಿಂದ ಸೈಟ್ ಗಿಫ್ಟ್ ನೀಡಲಾಗಿದೆ ಎಂಬ ವಿಚಾರ ಕುಟುಂಬದಲ್ಲಿ ಅಪಾರ ಸಂತೋಷ ಮೂಡಿಸಿದೆ. ಪ್ರಜ್ವಲ್ ಹಾಗೂ ಅವರ ತಾಯಿ ಕಸ್ತೂರೆವ್ವ ರಿತ್ತಿ ಅವರು ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ವಿಶೇಷವಾಗಿ, ಜನವರಿ 26ರಂದು ಕುಟುಂಬಕ್ಕೆ ಅಧಿಕೃತವಾಗಿ ಜಾಗದ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚಾಯತಿ ಮೂಲಗಳು ತಿಳಿಸಿವೆ.

ಈ ಪ್ರಕರಣವನ್ನು ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಕುಟುಂಬದ ಭವಿಷ್ಯ ಭದ್ರತೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ತಿಳಿಸಿದೆ. ಮುಂದೆ ಸಚಿವರು ಹಾಗೂ ಶಾಸಕರ ಅನುದಾನದಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ಕೂಡ ನೀಡಲಾಗಿದೆ.

ಇನ್ನಷ್ಟು ಆಶ್ವಾಸಕ ಬೆಳವಣಿಗೆಯಾಗಿ, ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡುವುದಾಗಿ ಹಾಗೂ ತಾಯಿ ಗಂಗಮ್ಮ ಅವರಿಗೆ ಉದ್ಯೋಗ ಕಲ್ಪಿಸುವುದಾಗಿ ಪಂಚಾಯತ್ ಭರವಸೆ ನೀಡಿದೆ. ಈ ಕ್ರಮ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ.

ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಯನ್ನು ಮಕ್ಕಳಿಗೆ ಮಾದರಿಯಾಗಿ ತೋರಿಸುವ ಉದ್ದೇಶದಿಂದ, ಗ್ರಾಮ ಪಂಚಾಯತ್ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮದ ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರಜ್ವಲ್ ರಿತ್ತಿ ಅವರ ಫೋಟೋ ಅಳವಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಪ್ರಜ್ವಲ್ ರಿತ್ತಿ ಅವರ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ನಡೆ ಮಕ್ಕಳಲ್ಲಿ ಸದುಪಯೋಗಕಾರಿ ಮೌಲ್ಯಗಳನ್ನು ಬೆಳೆಸಲಿದೆ ಎಂಬ ನಂಬಿಕೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. “ಈ ಫೋಟೋ ನೋಡಿ ಮಕ್ಕಳಲ್ಲೂ ಪ್ರಾಮಾಣಿಕತೆ ಬೆಳೆಸಲಿ” ಎಂಬ ಉದ್ದೇಶವೇ ಈ ನಿರ್ಧಾರದ ಮೂಲ ಕಾರಣ ಎಂದು ಗ್ರಾಮ ಪಂಚಾಯತ್ ಸದಸ್ಯರು ಹೇಳಿದ್ದಾರೆ.

 

ಆಡೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 48 ಗಂಟೆಗಳಲ್ಲಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಖಾಕಿ ಪಡೆ

0

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದ ಸುಮಾರು 14 ಲಕ್ಷ ರೂ ಮೌಲ್ಯದ ಮನೆ ಕಳ್ಳತನ ಪ್ರಕರಣವನ್ನು ಆಡೂರು ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಸೋಮಾಪುರ ಗ್ರಾಮದ ನಿವಾಸಿ 32 ವರ್ಷದ ಶರಣಪ್ಪ ದೊಡ್ಡಬಸಪ್ಪ ಮುದಿಯಪ್ಪನವರ ಎಂದು ಗುರುತಿಸಲಾಗಿದೆ. ಜ.19ರಂದು ಸೋಮವಾರ ರಾತ್ರಿ ಬಸವರಾಜ ಗೂಳಪ್ಪ ಪೂಜಾರ ಎಂಬುವವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಆರೋಪಿಯು, ಟ್ರಜರಿಯ ಬಾಗಿಲನ್ನು ಮುರಿದು, ಅದರಲ್ಲಿ ಇರಿಸಿದ್ದ 111.5 ಗ್ರಾಂ ಬಂಗಾರದ ಆಭರಣ ಮತ್ತು 310 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ, ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣನವರ ಅವರ ಮಾರ್ಗದರ್ಶನದಲ್ಲಿ, ಆಡೂರು ಪಿಎಸ್‌ಐ ಶರಣಪ್ಪ ಹಂಡ್ರಗಲ್ ಮತ್ತು ಪೊಲೀಸ್ ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ ಚಿನ್ನದ ಸರ, ಉಂಗುರಗಳು, ಜುಮುಕಿ, ಹ್ಯಾಂಗಿಂಗ್ಸ್ ಸೇರಿದಂತೆ ಒಟ್ಟು ಸುಮಾರು ₹13,69,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಂಟಿಸಿ ಬಸ್​​​​​​​​ನಲ್ಲಿ 6 ರೂ. ಬದಲು 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ

ಬೆಂಗಳೂರು: ಮೊಬೈಲ್ ಫೋನ್‌ನಲ್ಲಿ ಕೇವಲ ಒಂದು ಸಣ್ಣ ತಪ್ಪು, ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು 6 ರೂಪಾಯಿ ಟಿಕೆಟ್‌ಗೆ 60,000 ರೂಪಾಯಿ ಫೋನ್ ಪೇ ಮಾಡಿರುವ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಜ.14ರಂದು ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಸಮಯ, ಕೆಲಸದ ಒತ್ತಡ ಅಥವಾ ಕೈ ತಪ್ಪಿನಿಂದಾಗಿ ಪ್ರಯಾಣಿಕರು 6 ರೂ ಪಾವತಿಸಬೇಕಾದಲ್ಲಿ 60,000 ರೂ ಫೋನ್ ಪೇ ಮಾಡಿದ್ದಾರೆ. ಈ ಮೊತ್ತ ಕಂಡು ಬಸ್ ಕಂಡಕ್ಟರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ತಕ್ಷಣವೇ ತಮ್ಮ ತಪ್ಪನ್ನು ಕಂಡಕ್ಟರ್ ಗಮನಕ್ಕೆ ತಂದಿದ್ದಾರೆ. ನಂತರ ಬಸ್ ನಿರ್ವಾಹಕ ತನ್ನ ಖಾತೆ ಪರಿಶೀಲಿಸಿದಾಗ 62,316 ರೂ ಹಣ ಜಮಾ ಆಗಿರುವುದು ದೃಢಪಟ್ಟಿದೆ. ಈ ಹಣವನ್ನು ತಕ್ಷಣ ಮರಳಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದ ನಿರ್ವಾಹಕ, ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಡಿಪೋ ಮ್ಯಾನೇಜರ್‌ನ ಸಂಪರ್ಕ ಸಂಖ್ಯೆಯನ್ನು ಪ್ರಯಾಣಿಕರಿಗೆ ನೀಡಿದ್ದಾರೆ.

ಹಣ ವಾಪಸ್ ಪಡೆಯಲು ಡಿಪೋಗೆ ಭೇಟಿ ನೀಡಿ ಪರಿಶೀಲನೆ ಬಳಿಕ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು, ಇವತ್ತು ಅಥವಾ ನಾಳೆಯೊಳಗೆ ಹಣ ವಾಪಸ್ ಸಿಗಲಿದೆ ಎಂಬ ಭರವಸೆ ನೀಡಲಾಗಿದೆ. ಆದರೆ ಇನ್ನೂ ಹಣ ಪಾವತಿ ಆಗಿಲ್ಲ.

ಈ ಘಟನೆ ಡಿಜಿಟಲ್ ಪಾವತಿ ಮಾಡುವಾಗ ಎಷ್ಟು ಎಚ್ಚರ ಅಗತ್ಯವಿದೆ ಎಂಬುದಕ್ಕೆ ದೊಡ್ಡ ಪಾಠವಾಗಿದೆ. ಹಣ ಕಳುಹಿಸುವ ಮೊದಲು ಅಮೌಂಟ್ ಅನ್ನು ಎರಡು ಬಾರಿ ಪರಿಶೀಲಿಸಬೇಕು. ವಿಶೇಷವಾಗಿ ಬಸ್‌ನಲ್ಲಿ, ಜನದಟ್ಟಣೆಯಲ್ಲಿ ಅಥವಾ ಚಲನೆಯಲ್ಲಿರುವ ವೇಳೆ ಪಾವತಿ ಮಾಡುವಾಗ ಹೆಚ್ಚು ಜಾಗ್ರತೆ ಅಗತ್ಯವಾಗಿದೆ.

error: Content is protected !!