Home Blog Page 2759

ಕಸದ ತೊಟ್ಟಿಯಾದ ವಾರ್ಡ್; ಕಣ್ಮುಚ್ಚಿ ಕುಳಿತ ಗ್ರಾಪಂ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕು ಮಂಗಳೂರು ಗ್ರಾಮದ 1 ನೇ ವಾರ್ಡ‌ನಲ್ಲಿರುವ ಬಿ ರಾಚಯ್ಯ ನಗರ ಅಕ್ಷರಶಃ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ವಾರ್ಡ್‌ನಲ್ಲಿ ಕಸದ ರಾಶಿ ಬಿದ್ದರೂ ಗ್ರಾಪಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಬೀದಿ ದೀಪದ ಕಂಬಗಳಲ್ಲಿ ಬಲ್ಬ್‌ಗಳು ಬೆಳಕು ನೀಡದೇ, ಕತ್ತಲು ಆವರಿಸಿದೆ. ನೀರಿನ ಸೌಕರ್ಯವಿಲ್ಲ . ಚರಂಡಿಯ ಕಸವನ್ನು ತೆಗೆದರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ತೆಗೆದ ಸ್ಥಳದಲ್ಲೇ ಹಾಕುತ್ತಾರೆ.

ಇದರಿಂದಾಗಿ ರೋಗ ರುಜಿನಗಳು ಉಂಟಾಗುವ ಭಯ ಸುತ್ತಮುತ್ತಲಿನ ನಾಗರಿಕರಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಿಕೊಡಬೇಕು.

ಜನರು ಅನೇಕ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೂ ಒಂದು ಸಮಸ್ಯೆಯನ್ನು ಕೂಡ ಬಗೆಹರಿಸಿಲ್ಲ‌. ಇನ್ನು ಮುಂದೆ ಉದಾಸೀನ ಧೋರಣೆ ತಾಳಿದರೆ ಗ್ರಾಪಂ‌ಗೆ ಬೀಗ ಹಾಕುವುದು ಅನಿವಾರ್ಯವಾಗುತ್ತದೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾದಲ್ಲಿ‌ ನೀರಸ, ಗಂಗಾವತಿಯಲ್ಲಿ ತಕ್ಕಮಟ್ಟಿಗೆ ಯಶಸ್ವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಹಾಗೂ ಕನ್ನಡಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್‌ಗೆ ಕೊಪ್ಪಳ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಿನಿಂದ ಎಂದಿನಂತೆ ಜಿಲ್ಲೆ ಸಹಜ ಸ್ಥಿತಿಯಲ್ಲಿ ಇತ್ತು.

ಸುಮಾರು 30 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದರೂ ಪ್ರತಿಭಟನೆಯಲ್ಲಿ ಅಷ್ಟು ಸಂಖ್ಯೆಯ ಜನರು ಕಾಣದಿರುವುದರಿಂದ ಜಿಲ್ಲಾ ಕೇಂದ್ರದಲ್ಲಿ ಬಂದ್ ಬಿಸಿ ತಟ್ಟಲಿಲ್ಲ. ಅಶೋಕ ವೃತ್ತದಿಂದ ಕೇಂದ್ರೀಯ ಬಸ್ ನಿಲ್ದಾಣದವರೆಗೂ ಸರಕಾರದ ರೈತ ವಿರೋಧಿ ನೀತಿಯನ್ನು ವಿವರಿಸುತ್ತಲೇ ರಸ್ತೆಯ ಅಕ್ಕಪಕ್ಕದ ಅಂಗಡಿಕಾರರಿಗೆ ಬಂದ್ ಮಾಡುವಂತೆ ಮನವಿ ಮಾಡುತ್ತಿರುವುದು ಕಂಡು ಬಂತು.

ಬಸ್ ನಿಲ್ದಾಣದ ವ್ಯವಸ್ಥಾಪಕರಿಗೂ ಬಸ್ ಸಂಚಾರ ಸ್ಥಗಿತಗೊಳಿಸಲು ರೈತ ಸಂಘಟನೆಯ ಮುಖಂಡರು ಮನವಿ ಮಾಡಿದರು. ನಂತರ ಬಸ್ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಯಲಬುರ್ಗಾದಲ್ಲಿ‌ ಕಿತ್ತೂರು ಚನ್ನಮ್ಮ ಸರ್ಕಲ್‌ನಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಬಳಿಕ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜಾಥಾ ಮುನ್ನಡೆಯುತ್ತಿದ್ದಂತೆ ಅಂಗಡಿ ಮುಂಗಟ್ಟುಗಳು ಆರಂಭಗೊಂಡವು. ವಾಹನ ಸಂಚಾರ ಎಂದಿನಂತಿತ್ತು.

ಕುಷ್ಟಗಿಯಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಿನಿಂದ ಮಧ್ಯಾಹ್ನದವರೆಗೆ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಕ್ರಮೇಣ ವ್ಯಾಪಾರ ವಹೀವಾಟು ಸಹಜ ಸ್ಥಿತಿಗೆ ಬಂತು. ಕಾರ್ಗಿಲ್ ವೃತ್ತದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಜಾಥಾ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ ಕಚೇರಿ ತಲುಪಿ ತಹಶೀಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ಭಾಗದಲ್ಲಿ ಕರ್ನಾಟಕ ಬಂದ್‌ ಬಹುತೇಕ ಯಶಸ್ವಿಯಾಗಿದೆ ಎನ್ನಬಹುದು. ಗಂಗಾವತಿಯ ಕೃಷ್ಣದೇವರಾಯ ವೃತ್ತದಲ್ಲಿ ಜಮಾವಣೆಗೊಂಡ ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಸರಕಾರದ ಧೋರಣೆ ಖಂಡಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ನನಗೆ ಕೊರೋನಾ ಪಾಸಿಟಿವ್ ಆಗಿದೆ; ಟ್ವೀಟ್ ಮೂಲಕ ಮಾಹಿತಿ ತಿಳಿಸಿದ ಶಾಸಕ ಎಚ್ ಕೆ ಪಾಟೀಲ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಾಂಗ್ರೆಸ್‌ ನ ಹಿರಿಯ ಮುಖಂಡ ಹಾಗೂ ಗದಗನ ಶಾಸಕ ಎಚ್ ಕೆ ಪಾಟೀಲ್ ಅವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ‌.

ಈ ಬಗ್ಗೆ ತಮ್ಮ ಟ್ವಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಶಾಸಕ ಎಚ್ ಕೆ ಪಾಟೀಲ್‌, ನನಗೆ ಪಾಸಿಟಿವ್ ದೃಢವಾಗಿದ್ದು, ಮನೆಯಲ್ಲೇ 10 ದಿನಗಳ ಕಾಲ ಚಿಕಿತ್ಸೆಯೊಂದಿಗೆ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕದಲ್ಲಿ ಇರುವವರು ಟೆಸ್ಟ್ ಮಾಡಿಸಿಕೊಳ್ಳಿ ಅಂತಾ ಸೂಚನೆ ನೀಡಿದ್ದಾರೆ‌.

ಕೊರೋನಾ ಲಕ್ಷಣಗಳು ಇದ್ದರೂ ಯಾವುದೇ ತೊಂದರೆ ಇಲ್ಲ. ಬೇಗ ಗುಣಮುಖವಾಗುವ ಭರವಸೆ ಇದೆ ಅಂತ ಎಚ್ ಕೆ ಪಾಟೀಲ್ ಆಶಾ ಭಾವನೆ ವ್ಯಕ್ತಪಡಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಎಚ್ ಕೆ ಪಾಟೀಲ್ ನೇಮಕ ಗೊಂಡಿದ್ದರು. ಕಳೆದ ವಾರ ಅಲ್ಲಿನ‌ ಕಾಂಗ್ರೆಸ್ ನಾಯಕರ ಜೊತೆ ಸಭೆಯಲ್ಲಿಯೂ ಭಾಗಿಯಾಗಿದ್ದರು.

ಬಂದ್ ಗೆ ಬೆಂಬಲ ನೀಡಿದ ಗಜೇಂದ್ರಗಡ; ಬಿಕೋ ಎನ್ನುತ್ತಿವೆ ರಸ್ತೆಗಳು, ಪ್ರತಿಭಟನಾಕಾರರ ಬೈಕ್ ರ‌್ಯಾಲಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಆಚರಿಸಲಾಗುತ್ತಿರುವ ಕರ್ನಾಟಕ ಬಂದ್ ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಕ್ಯಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರ ಸ್ಥಬ್ದವಾಗಿದ್ದ ಪರಿಣಾಮ,ಪಟ್ಟಣದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಜನರಿಂದ ಗಿಜಿಗುಡುತ್ತಿದ್ದ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸ್ಥಬ್ದವಾಗಿತ್ತು, ಮಾರುವವರು ಕೊಳ್ಳುವವರು ಇಲ್ಲದೆ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಖಾಲಿಯಾಗಿತ್ತು.

ಇನ್ನುಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸುವ ಮೂಲಕ ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಕೇಂದ್ರ ಸರ್ಕಾರದ ನಡೆಗೆ ಹೋರಾಟಗಾರರ ಆಕ್ರೋಶ; ಬಾಯಿ ಬಡಿದುಕೊಂಡು, ಅರೆಬೆತ್ತಲೆ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮುದ್ರಣ ಕಾಶಿ‌ ಗದಗನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಯಕರ್ನಾಟಕ ಸಂಘಟನೆ‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮುಳಗುಂದ ನಾಕಾದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಸದಸ್ಯರು, ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.

ಇನ್ನು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಹಿತಕರ ಘಟನೆಗಳು ನಡೆಯದಂತೆ, ಮುಂಜಾಗ್ರತಾ ಕ್ರಮವಾಗಿ,
ಮುಳಗುಂದ ನಾಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಟೈರ್ ಗೆ ಬೆಂಕಿ ಹಚ್ಚಲು ಕರವೇ ಕಾರ್ಯಕರ್ತರ ಯತ್ನ; ಪೊಲೀಸರ ಜೊತೆ ವಾಗ್ವಾದ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.

ಪ್ರತಿಭಟನಾನಿರತ ಕರವೇ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಪೊಲೀಸರು ಅವಕಾಶ ನೀಡದ್ದಕ್ಕೆ, ಪೊಲೀಸರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ನಗರದ ಮುಳಗುಂದ ನಾಕಾದಲ್ಲಿ ಈ ಘಟನೆ ನಡೆದಿದ್ದು, ಟೈರ್ ಗೆ ಬೆಂಕಿ ಹಚ್ಚಿದ್ರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು. ಪೊಲೀಸರ ಈ ನಡೆಗೆ ಕುಪಿತಗೊಂದ ಕರವೇ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

ನಿಮ್ಮ ಕೆಲಸ ನೀವು ಮಾಡಿ ನಮ್ಮ ಕೆಲಸ ನಾವು ಮಾಡ್ತೀವಿ ಎಂದ ಕಾರ್ಯಕರ್ತರು, ಸರ್ಕಾರದ ಕೈಗೊಂಬೆ ಆಗಿ ಕೆಲಸ ಬೇಡ ಅಂತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಪ್ಪಲಿ, ಶೂಗೆ ಬೆಂಕಿ; ಕರವೇ ಕಾರ್ಯಕರ್ತರ ವಿನೂತನ‌ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಟೈರ್ ಗೆ ಬೆಂಕಿ ಹಚ್ಚುವುದು, ಮರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವುದನ್ನು ನಾವು ಕೇಳಿದ್ದೀವಿ. ಆದರೆ ಇಲ್ಲಿ ಚಪ್ಪಲಿ ಶೂಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಘಟನೆ ನಡೆದಿದೆ.

ಹೌದು ಗದಗ ನಗರದ ಮುಳಗುಂದ ನಾಕಾ ಈ ಬಗೆಯ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಟೈರ್ ಗೆ ಬೆಂಕಿ ಹಚ್ಚಲು ಅವಕಾಶ ನೀಡದ ಪೊಲೀಸರ ಕ್ರಮಕ್ಕೆ ವಿರುದ್ಧವಾಗಿ ಕರವೇ ಕಾರ್ಯಕರ್ತರು ಈ ಬಗೆಯ ಪ್ರತಿಭಟನೆ ಮಾಡಿದ್ದಾರೆ.

ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು, ತಾವು ಹಾಕಿಕೊಂಡಿದ್ದ ಚಪ್ಪಲಿ ಹಾಗೂ ಶೂ ಗೆ ಬೆಂಕಿ ಹೆಚ್ಚಿ, ಸುಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಮ್ಸಿ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡಲು ಒತ್ತಾಯಿಸಿದರು.

ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳ ಸಾಥ್; ಪ್ರಯಾಣಿಕರ ಪರದಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಗದಗನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಬಂದ್ ಗೆ 10 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಜಯಕರ್ನಾಟಕ, ಕರವೇ ನಾರಾಯಣಗೌಡ ಬಣ ಹಾಗೂ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಗದಗನ‌ ಕೇಂದ್ರ ಬಸ್ ನಿಲ್ದಾಣದಲ್ಲಿ ಬೇರೆ ಸ್ಥಳಗಳಿಗೆ ತಲುಪಬೇಕಾದ ಪ್ರಯಾಣಿಕರು ಪರದಾಡಿದರು.

ಶಾಂತಿ ಭಂಗ ಮಾಡಿದರೆ ಕ್ರಮ; ಎಸ್ಪಿ ಯತೀಶ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸೆ.28 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಬಂದ್ ವೇಳೆ ಶಾಂತಿ ಭಂಗ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದರು.
ಇಲ್ಲಿನ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ ಸಂಬಂಧಿಸಿದಂತೆ ಪ್ರತಿಭಟನೆಗೆ ಮುಂದಾಗಿರುವ ಸಂಘಟನೆಗಳ ಮುಖಂಡರ ಸಭೆ ನಡೆಸಲಾಗಿದೆ. ಸಂಘಟಕರಿಗೆ ಸುಪ್ರಿಂಕೋರ್ಟ ಗೈಡ್ ಲೈನ್ಸ್ ಮಾಹಿತಿ ಜೊತೆಗೆ ಕಾನೂನು ಪಾಲನೆ ಮಾಡುವಂತೆ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.
ಬಂದ್ ವೇಳೆ ದೈನಂದಿನ ಕೆಲಸದಲ್ಲಿ ನಿರತರಾದವರಿಗೆ ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯಿಸಬಾರದು. ಒಂದು ವೇಳೆ ಬಲವಂತ ಮಾಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಂದ್ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶನಿವಾರ 45 ಜನರಿಗೆ ಸೋಂಕು; 95 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 26 ರಂದು 45 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

45 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8802 ಕ್ಕೇರಿದೆ. ಶನಿವಾರ 95 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7935 ಜನ ಗುಣಮುಖರಾಗಿದ್ದಾರೆ. 739 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಶನಿವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಇದುವರೆಗೂ ಜಿಲ್ಲೆಯಲ್ಲಿ 128 ಜನ ಕೊವಿಡ್ ಗೆ ಮೃತಪಟ್ಟಿದ್ದಾರೆ.

ತಾಲೂಕುವಾರು ಒಟ್ಟು ಸೋಂಕಿತರ ವಿವರ: ಗದಗ-22, ಮುಂಡರಗಿ-05, ನರಗುಂದ-01, ರೋಣ-09, ಶಿರಹಟ್ಟಿ-04, ಹೊರಜಿಲ್ಲೆಯ ಪ್ರಕರಣಗಳು-04.

error: Content is protected !!