Home Blog Page 29

‌ಕರೂರ್ ಕಾಲ್ತುಳಿತ ಪ್ರಕರಣ: CBI ಮುಂದೆ ಮೂರನೇ ಬಾರಿ ವಿಚಾರಣೆಗೆ ಹಾಜರಾದ ವಿಜಯ್‌! 

ನವದೆಹಲಿ: ತಮಿಳುನಾಡಿನ ಕರೂರ್‌ನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ವಿಜಯ್ ಅವರು ಸಿಬಿಐ ಮುಂದೆ ಮೂರನೇ ಸುತ್ತಿನ ವಿಚಾರಣೆಗೆ ಹಾಜರಾದರು. 2025ರ ಸೆಪ್ಟೆಂಬರ್ 27ರಂದು ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ವಿಜಯ್ ನಡೆಸಿದ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು.

ಈ ಪ್ರಕರಣದ ತನಿಖೆಯನ್ನು ‌CBI ಕೈಗೊಂಡಿದೆ.  ವಿಜಯ್ ರ್ಯಾಲಿಯಲ್ಲಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 10,000 ಜನರಿಗೆ ಮಾತ್ರ ಸಾಮರ್ಥ್ಯವಿದ್ದ ಸ್ಥಳದಲ್ಲಿ ಸುಮಾರು 27,000 ಮಂದಿ ಜಮಾಯಿಸಿದ್ದರೆಂದು ತಿಳಿದುಬಂದಿದೆ.

ಅಲ್ಲದೆ ಕಾರ್ಯಕ್ರಮ ಸ್ಥಳದಲ್ಲಿ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಮಾಡಲಾಗಿರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಘಟನೆ ನಡೆದ ಸುಮಾರು ಒಂದು ತಿಂಗಳ ಬಳಿಕ, ಸ್ವತಂತ್ರ ತನಿಖೆ ಕೋರಿ ಟಿವಿಕೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ವಿಜಯ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಕರೂರ್ ಕಾರ್ಯಕ್ರಮವನ್ನು ಯಾರು ಆಯೋಜಿಸಿದರು, ಕುಡಿಯುವ ನೀರು, ನೈರ್ಮಲ್ಯ ಮತ್ತು ಭದ್ರತೆಯ ವ್ಯವಸ್ಥೆಗಳ ಬಗ್ಗೆ ಅವರಿಗೆ ಪೂರ್ವ ಮಾಹಿತಿ ಇದೆಯೇ, ಅವರು ಕಾರ್ಯಕ್ರಮ ಸ್ಥಳಕ್ಕೆ ತಡವಾಗಿ ಏಕೆ ಬಂದರು ಹಾಗೂ ಜನಸಂದಣಿಯನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಯಿತು ಎಂಬ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಗೂಡ್ಸ್ ಆಟೋ ಪಲ್ಟಿ: 13 ಮಂದಿಗೆ ಗಾಯ

0

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಗೂಡ್ಸ್ ಆಟೋ ಪಲ್ಟಿಯಾದ ಪರಿಣಾಮ 13 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಯಳಂದೂರು ಪಟ್ಟಣದ ಸಮೀಪದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ 13 ಮಂದಿ ಗೂಡ್ಸ್ ಆಟೋದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಯಳಂದೂರು ಸಮೀಪ ಅಡ್ಡ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಗೆ ಪಲ್ಟಿಯಾಗಿದೆ.

ಅಪಘಾತದಲ್ಲಿ ಗಾಯಗೊಂಡ 13 ಮಂದಿಯಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆ ಸಿಮ್ಸ್‌ಗೆ ರವಾನಿಸಲಾಗಿದೆ. ಉಳಿದವರಿಗೆ ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಯಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಘೋರ ದುರಂತ: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆ!

0

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆಯಾಗಿರುವ ಘಟನೆ ಯಲಹಂಕದಲ್ಲಿ ನಡೆದಿದೆ. ಶೃತಿ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿವಾಹಿತೆಯಾಗಿದ್ದು,

ಗಂಡ ಪವನ್ ಕಲ್ಯಾಣ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪವನ್ ಕಲ್ಯಾಣ್ ಕುಟುಂಬದವರಿಂದ ನಿರಂತರ ವರದಕ್ಷಿಣೆ ಕಿರುಕುಳ ಎಂದು ಶೃತಿ ಕುಟುಂಬಸ್ಥರು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಿನ್ನೆಲೆ ಶೃತಿ ಹಾಗೂ ಪತಿ ಕುಟುಂಬಸ್ಥರ ನಡುವೆ ಕಲಹ ಉಂಟಾಗುತ್ತಿತ್ತು.

ಈ ಹಿಂದೆ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೆ ಮತ್ತೆ ಕಿರುಕುಳ ನೀಡಿ ಹಿಂಸೆ ನೀಡುತ್ತಿದ್ದರು. ಈ ಹಿನ್ನೆಲೆ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರು–ಲಾರಿ ನಡುವೆ ಭೀಕರ ಅಪಘಾತ: ಮೂವರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಸಾವು! ಇಬ್ಬರಿಗೆ ಗಂಭೀರ ಗಾಯ

0

ಚಿತ್ರದುರ್ಗ: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಬಳಿ ಸಂಭವಿಸಿದೆ.

ಮೃತರನ್ನು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್, ಅಂಬರೀಶ್ ಮತ್ತು ಸಚಿನ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 150ಎರ ಹೆಗ್ಗೆರೆ ಭಾಗದಲ್ಲಿ ಈ ದುರ್ಘಟನೆ ನಡೆದಿದೆ.

ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿಎಸ್ಐ ಈಶ್ವರ್ ಹಾಗೂ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ಮಹಾಂತೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿಯ ಪ್ರಕಾರ, ಎಲ್ಲರೂ ಬೆಂಗಳೂರಿನಿಂದ ಬಳ್ಳಾರಿಗೆ ಸ್ನೇಹಿತನ ಮದುವೆಗೆ ತೆರಳುತ್ತಿದ್ದ ವೇಳೆ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಘಟನೆ ಬಗ್ಗೆ ಮಾಹಿತಿ ತಿಳಿದು ಐಮಂಗಲ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇಂದು ಕೇರಳ, ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ ಚುನಾವಣಾ ವೇಳಾಪಟ್ಟಿ ಘೋಷಣೆ!?

0

ನವದೆಹಲಿ: ಭಾರತ ಚುನಾವಣಾ ಆಯೋಗವು ಇಂದು (ಮಾರ್ಚ್ 15) ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಕುರಿತು ಚುನಾವಣಾ ಆಯೋಗವು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದೆ.

ಈ ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಮತದಾನ ನಡೆಯುವ ನಿರೀಕ್ಷೆಯಿದ್ದು, ಮೇ ತಿಂಗಳ ಆರಂಭದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಏಕೆಂದರೆ ಆ ವೇಳೆಗೆ ಹಲವು ರಾಜ್ಯಗಳ ವಿಧಾನಸಭೆಗಳ ಅವಧಿ ಮುಕ್ತಾಯಗೊಳ್ಳಲಿದೆ.

ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವುದು, ಚುನಾವಣಾ ಸಿದ್ಧತೆಯನ್ನು ಪರಿಶೀಲಿಸುವುದು ಹಾಗೂ ಭದ್ರತಾ ವ್ಯವಸ್ಥೆಗಳನ್ನು ನಿರ್ಧರಿಸುವುದು ಸೇರಿದಂತೆ ಪ್ರಮುಖ ಸಿದ್ಧತೆಗಳನ್ನು ಚುನಾವಣಾ ಆಯೋಗ ಈಗಾಗಲೇ ಪೂರ್ಣಗೊಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಸುಗಮ ಮತದಾನಕ್ಕಾಗಿ ಕೇಂದ್ರ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ನಿರೀಕ್ಷೆಯಿದೆ.

ಚುನಾವಣಾ ದಿನಾಂಕಗಳನ್ನು ಘೋಷಿಸಿದ ಬಳಿಕ ಮಾದರಿ ನೀತಿ ಸಂಹಿತೆ ರಾಜ್ಯಗಳಾದ್ಯಂತ ತಕ್ಷಣದಿಂದ ಜಾರಿಗೆ ಬರಲಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳ ಅವಧಿ ಮೇ ಮತ್ತು ಜೂನ್ ನಡುವೆ ಮುಕ್ತಾಯಗೊಳ್ಳಲಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7ರಂದು, ತಮಿಳುನಾಡು ಮೇ 10ರಂದು, ಅಸ್ಸಾಂ ಮೇ 20ರಂದು, ಕೇರಳ ಮೇ 23ರಂದು ಮತ್ತು ಪುದುಚೇರಿ ವಿಧಾನಸಭೆಯ ಅವಧಿ ಜೂನ್ 15ರಂದು ಮುಕ್ತಾಯಗೊಳ್ಳಲಿದೆ.

ಸಾಮಾನ್ಯವಾಗಿ ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವ್ಯಾಪ್ತಿ ಹಾಗೂ ಭದ್ರತಾ ಕಾರಣಗಳಿಂದ ಬಹು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ ಎರಡನೇ ವಾರದಲ್ಲಿ ನಡೆಯುವ ನಿರೀಕ್ಷೆಯಿದೆ.

Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್.!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಅನುಷ್ಕಾ ಶೆಟ್ಟಿ ಪರ್ಸನಲ್ ಲೈಫ್ ಬಗ್ಗೆ ಅಭಿಮಾನಿಗಳಲ್ಲಿ ಯಾವಾಗಲೂ ಕುತೂಹಲವಿರುತ್ತದೆ. ಅವರ ಮದುವೆ ಕುರಿತು ಆಗಾಗ್ಗೆ ಗಾಸಿಪ್‌ಗಳು ಹರಿದಾಡುತ್ತಲೇ ಇವೆ. ಇದೀಗ ಮತ್ತೆ ಅವರ ವಿವಾಹದ ಸುದ್ದಿ ಮುನ್ನೆಲೆಗೆ ಬಂದಿದೆ.

ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿವೆ. ವಿಶೇಷವೆಂದರೆ, ಈ ಬಾರಿ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ನಟನ ಹೆಸರಿಲ್ಲ. ಬದಲಿಗೆ ಕನ್ನಡಿಗ ಉದ್ಯಮಿಯೊಬ್ಬರ ಹೆಸರು ಕೇಳಿಬರುತ್ತಿರುವುದು ಗಮನ ಸೆಳೆಯುತ್ತಿದೆ.

ಇದೇನು ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ಅವರ ಮದುವೆ ಕುರಿತು ಸುದ್ದಿ ಕೇಳಿಬರುತ್ತಿರುವುದಲ್ಲ. ಕಳೆದ ಹಲವು ವರ್ಷಗಳಿಂದಲೂ ಅವರ ಹೆಸರು ಟಾಲಿವುಡ್ ನಟ ಪ್ರಭಾಸ್ ಜೊತೆ ತಳುಕು ಹಾಕಿಕೊಳ್ಳುತ್ತಲೇ ಇತ್ತು. ಹಲವು ಸಿನಿಮಾಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿದ ಅಭಿಮಾನಿಗಳು ಇವರು ನಿಜ ಜೀವನದಲ್ಲೂ ಒಂದಾಗಲಿ ಎಂದು ಹಾರೈಸಿದ್ದರು.

ಆದರೆ ಈ ಬಾರಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಈ ಮದುವೆ ಅನುಷ್ಕಾ ಅವರ ಕುಟುಂಬದ ಆಶಯದಂತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅನುಷ್ಕಾ ಶೆಟ್ಟಿ ಅಥವಾ ಅವರ ಕುಟುಂಬದವರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಅನುಷ್ಕಾ ಶೆಟ್ಟಿ ಯಾವಾಗಲೂ ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿ ಇಡಲು ಇಷ್ಟಪಡುವ ನಟಿಯಾಗಿದ್ದು, ಈ ಹಿಂದೆಯೂ ಅವರ ಮದುವೆ ಕುರಿತು ಹಲವು ಗಾಸಿಪ್‌ಗಳು ಹರಿದಾಡಿದ್ದವು. ಅವೆಲ್ಲವೂ ವದಂತಿಗಳಾಗಿಯೇ ಉಳಿದಿದ್ದವು. ಆದರೆ ಈ ಬಾರಿ ಅವರ ಮದುವೆ ಫಿಕ್ಸ್ ಎನ್ನುವ ಮಾತುಗಳು ಕೇಳಿಬರುತ್ತಿರುವುದು ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಮೂಡಿಸಿದೆ.

ಕಾಡಾನೆಗಳ ಹಿಂಡು ಬೀಡು ಬಿಟ್ಟ ಹಿನ್ನೆಲೆ: ಪಟ್ಲ ಬೆಟ್ಟಕ್ಕೆ ತಾತ್ಕಾಲಿಕ ಪ್ರವಾಸ ನಿಷೇಧ!

ಹಾಸನ: ಕಳೆದ ಎರಡು ದಿನಗಳಿಂದ ಹಾಸನ ಜಿಲ್ಲೆ, ಸಕಲೇಶಪುರತಾಲೂಕಿನ ಪಟ್ಲ ಬೆಟ್ಟದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಈ ಬೆಟ್ಟಕ್ಕೆ ಪ್ರವೇಶ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಯಸಳೂರು ವಲಯ ಅರಣ್ಯಾಧಿಕಾರಿ ಹಿರೇಮಠ್ ಈ ಆದೇಶ ಹೊರಡಿಸಿದ್ದಾರೆ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಪಟ್ಲ ಬೆಟ್ಟದಲ್ಲಿ ಹಿಂದೆಯೂ ಕಾಡಾನೆಗಳು ವಾಸಿಸುತ್ತಿದ್ದವು. ಆದರೆ ಟ್ರಕ್ಕಿಂಗ್, ವಾಹನಗಳ ಶಬ್ದ ಮತ್ತು ಜನಸಂದಣಿ ಹೆಚ್ಚಳದಿಂದ ಗಜಪಡೆಗಳು ಬೇರೆಡೆಗೆ ಸ್ಥಳಾಂತರವಾಗಿದ್ದರು. ಕಳೆದ ಬಾರಿ ಇದೇ ಕಾರಣಕ್ಕೆ ಅರಣ್ಯ ಇಲಾಖೆ ಟ್ರಕ್ಕಿಂಗ್ ನಿಷೇಧಿಸಿ, ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ಹೋಗದಂತೆ ಟ್ರಂಚ್ ಮಾಡಿತ್ತು.

ಈ ಮೂಲಕ, ವಾಹನಗಳ ಶಬ್ದ ಕಡಿಮೆಯಾದ ಪರಿಣಾಮ, ಇದೀಗ ಹತ್ತಕ್ಕೂ ಹೆಚ್ಚು ಕಾಡಾನೆಗಳು ಬೆಟ್ಟಕ್ಕೆ ವಾಪಸ್ ಬಂದಿದ್ದು, ಪ್ರವಾಸಿಗರ ಸುರಕ್ಷತೆಗೆ ತಾತ್ಕಾಲಿಕ ನಿಷೇಧ ಕ್ರಮ ಕೈಗೊಳ್ಳಲಾಗಿದೆ. ಬೆಟ್ಟ ಹತ್ತುವ ಕಾಡಾನೆಗಳ ದೃಶ್ಯವು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಹಿಡಿಯಲಾಗಿದೆ.

ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಹಾವು ಕಡಿತ: ಸಿಸಿಟಿವಿಯಲ್ಲಿ ಸೆರೆ, ವಿಡಿಯೋ ವೈರಲ್!

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಹಾವು ಕಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

https://www.facebook.com/share/v/1J5VwTAzR6/

ಮಾರ್ಚ್ 8ರ ರಾತ್ರಿ ಈ ಘಟನೆ ನಡೆದಿದ್ದು, ಯಲ್ಲಮ್ಮ ಎಂಬ ವೃದ್ಧೆ ಬೇಸಿಗೆಯ ಹಿನ್ನೆಲೆ ಮನೆಯ ಹೊರಾಂಗಣದಲ್ಲಿ ಮಲಗಿದ್ದರು. ಈ ವೇಳೆ ಕಪ್ಪೆಯನ್ನು ಅಟ್ಟಾಡಿಸಿಕೊಂಡು ಬಂದ ಹಾವು ಹಾಸಿಗೆಯೊಳಗೆ ನುಗ್ಗಿ ಯಲ್ಲಮ್ಮ ಅವರಿಗೆ ಕಚ್ಚಿದೆ.

ಈ ಘಟನೆ ಸಮೀಪದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾವು ಕಚ್ಚುತ್ತಿದ್ದಂತೆಯೇ ಯಲ್ಲಮ್ಮ ಥಟ್ಟನೆ ಎದ್ದು ಕುಳಿತುಕೊಂಡು ಹಾವನ್ನು ಹೊಡೆಯಲು ಯತ್ನಿಸಿರುವುದು ದೃಶ್ಯದಲ್ಲಿ ಕಾಣಿಸುತ್ತದೆ.

ಹಾವು ಕಡಿತದಿಂದ ಅಸ್ವಸ್ಥಗೊಂಡ ಯಲ್ಲಮ್ಮ ಅವರನ್ನು ತಕ್ಷಣವೇ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್ ಕೊರತೆ ಇಲ್ಲ: ಮಧು ಬಂಗಾರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್‌ಗಳಿಗೆ ಯಾವುದೇ ಕೊರತೆ ಇಲ್ಲ, ಎಲ್ಲೆಡೆ ಅವು ಲಭ್ಯವಿವೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದ ಗೋಪಾಲಗೌಡ ಬಡಾವಣೆಯ ನೇತಾಜಿ ವೃತ್ತದಿಂದ ಆಲ್ಕೊಳ ವೃತ್ತದವರೆಗಿನ 100 ಅಡಿ ರಸ್ತೆಗೆ ದಿವಂಗತ ಎಸ್. ಬಂಗಾರಪ್ಪ ಅವರ ಹೆಸರಿನ ನಾಮಫಲಕವನ್ನು ಉದ್ಘಾಟಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಗ್ಯಾಸ್ ಸಮಸ್ಯೆ ಕುರಿತು ಸದನದಲ್ಲಿ ಚರ್ಚೆ ನಡೆದಿದೆ. ಇದು ಅತ್ಯವಶ್ಯಕ ವಸ್ತುವಾಗಿರುವುದರಿಂದ ಇದರ ಪೂರೈಕೆ ಕುರಿತು ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.

ಸದ್ಯ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಕೆಲವೊಮ್ಮೆ ಆತಂಕದಿಂದ ಜನರು ಒಟ್ಟಾಗಿ ಖರೀದಿಗೆ ಮುಗಿಬಿದ್ದಾಗ ತಾತ್ಕಾಲಿಕ ಕೊರತೆ ಉಂಟಾಗುತ್ತದೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆ ಸಾಮಾನ್ಯವಾಗಿದೆ ಎಂದು ತಿಳಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿ.ಕೆ. ಶಿವಕುಮಾರ್

ಬಾಗಲಕೋಟೆ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ಅಣೆಕಟ್ಟಿನ ನೀರು ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರ ಪ್ರದೇಶದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಾಜ್ಯದ ಸಂಸದರ ಜತೆ ದೆಹಲಿಯ ಕರ್ನಾಟಕ ಭವನದಲ್ಲಿ ಬರುವ ಮಂಗಳವಾರ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಂಧ್ರ ಪ್ರದೇಶದವರು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದು,

ಈ ವಿಚಾರವಾಗಿ ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ. ನ್ಯಾಯಾಧೀಕರಣ ಆದೇಶದ ಪ್ರಕಾರ ನಮ್ಮ ಪಾಲಿನ ನೀರಿನ ಬಳಕೆಗೆ ಯೋಜನೆ ಮಾಡುತ್ತಿದ್ದು, ಈಗಾಗಲೇ 26 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಆರಂಭಿಸಿದ್ದೇವೆ” ಎಂದು ಡಿಸಿಎಂ ಅವರು ವಿವರಿಸಿದರು.

“ನಾವು ಈಗಲೇ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುತ್ತಿಲ್ಲ. 2010 ರಲ್ಲಿ ಆಗಿರುವ ಆದೇಶದ ಅನುಸಾರ ನಮ್ಮ ಪಾಲಿನ ನೀರು ಬಳಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಆಂಧ್ರ ಪ್ರದೇಶ ಸರ್ಕಾರ ತಗಾದೆ ತೆಗೆದಿದೆ. ಇದರ ಜತೆಗೆ, ತುಂಗಭದ್ರಾ ಅಣೆಕಟ್ಟೆಯಿಂದ ನಮಗೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು,

ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆಂಧ್ರ ಸರಕಾರ ನಮಗೆ ಸಹಕಾರ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸಂಸದರ ಜತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ನಾನು, ಸಚಿವರಾದ ಹೆಚ್.ಕೆ ಪಾಟೀಲ್, ಎಂ.ಬಿ. ಪಾಟೀಲ್, ಬೋಸರಾಜು ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.

error: Content is protected !!