Home Blog Page 290

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎನ್.ಎಚ್. ಕೋನರಡ್ಡಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪೋಲಿಯೋ ಮುಕ್ತ ಸಮಾಜ ರೂಪಿಸಲು ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು. ಈ ಮೂಲಕ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಪೋಲಿಯೋ ಮುಕ್ತ ಸಮಾಜ ರೂಪಿಸಲು ಶ್ರಮಿಸಬೇಕೆಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಅವರು ಭಾನುವಾರ ಬೆಳಿಗ್ಗೆ ಧಾರವಾಡ ನಗರದ ಮಹಾನಗರಪಾಲಿಕೆ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ದೇಶವನ್ನು ಪೋಲಿಯೋ ಮುಕ್ತವಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬ ಪೋಷಕರು ಪಡೆದುಕೊಳ್ಳಬೇಕು. ಐದು ವರ್ಷದೊಳಗಿನ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ವ್ಯವಸ್ಥಿತವಾಗಿ ಅಭಿಯಾನವನ್ನು ಸಂಘಟಿಸಲಾಗಿದೆ. ಜಿಲ್ಲೆಯ ಮೂಲೆ ಮೂಲೆಗೂ ಲಸಿಕೆ ತಲುಪಿಸುವ ಉದ್ದೇಶದಿಂದ ಒಟ್ಟು 891 ಪಲ್ಸ್ ಪೋಲಿಯೋ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಲಭ್ಯವಿದ್ದು, ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ ಎಂದು ತಿಳಿಸಿದರು.

ಪೋಲಿಯೋ ಎಂಬುದು ಮಾರಕ ಕಾಯಿಲೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವುದು ಅತ್ಯಗತ್ಯ. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಐದು ವರ್ಷದೊಳಗಿನ ಮಕ್ಕಳಿದ್ದರೆ ಅವರನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆತಂದು ಪೋಲಿಯೋ ಹನಿ ಹಾಕಿಸಿ. ಸರ್ಕಾರದ ಈ ಬೃಹತ್ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಈ ಬಾರಿಯ ಅಭಿಯಾನದಲ್ಲಿ ಕೇವಲ ಮೂರು ದಿನಗಳ ಅವಧಿಯಲ್ಲಿ ಒಟ್ಟು 2 ಲಕ್ಷದ 7 ಸಾವಿರ ಮಕ್ಕಳನ್ನು ತಲುಪಿ, ಪೋಲಿಯೋ ಲಸಿಕೆ ನೀಡುವ ಬೃಹತ್ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ತಲುಪಲು ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಮಗುವಿಗೂ ಲಸಿಕೆ ತಲುಪುವಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಅವರು ಹೇಳಿದರು.

ಹಿರಿಯ ಮಕ್ಕಳ ತಜ್ಞ ವೈದ್ಯ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಪೋಲಿಯೋ ಹರಡಲು ಯಾವುದೇ ವೈರಸ್ ಅಥವಾ ಅಧಿಕೃತ ಅನುಮತಿಯ ಅಗತ್ಯವಿಲ್ಲ. ಇದು ಪಕ್ಕದ ದೇಶಗಳಿಂದ ಅಥವಾ ರಾಜ್ಯಗಳಿಂದ ಅತ್ಯಂತ ವೇಗವಾಗಿ ಸಂಚರಿಸಬಲ್ಲದು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆಯ ರೇಖಾ ಬಾಡಗಿ ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ.ಎಚ್.ಓ ಅಧಿಕಾರಿ ಡಾ. ಸುಜಾತಾ ಹಸವೀಮಠ ವಂದಿಸಿದರು.

ವೇದಿಕೆಯಲ್ಲಿ ಮಹಾನಗರಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಸುರೇಶ ಬೇದ್ರೆ, ಆರೋಗ್ಯ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಡಾ. ಎಚ್.ಆರ್. ಪುಷ್ಪಾ, ರಾಜ್ಯ ನೋಡಲ್ ಅಧಿಕಾರಿ ಡಾ.ಉಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಮಹಾನಗರಪಾಲಿಕೆ ಧಾರವಾಡ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶ್ವಿನಿ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ. ಶಶಿಧರ ಕಳಸೂರಮಠ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ರೋಟರಿ ಕ್ಲಬ್ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು 2014ರಲ್ಲಿ ಭಾರತವನ್ನು ಅಧಿಕೃತವಾಗಿ ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿತು. ಸತತ ಮೂರು ವರ್ಷಗಳ ಕಾಲ ದೇಶದಲ್ಲಿ ಯಾವುದೇ ಹೊಸ ಪೋಲಿಯೋ ಪ್ರಕರಣಗಳು ವರದಿಯಾಗದ ಕಾರಣ, ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಅಧಿಕೃತವಾಗಿ ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿತು. ಆದರೂ ಅಪಾಯದ ಭೀತಿ ಮಾತ್ರ ಇನ್ನೂ ಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಹೇಳಿದರು.


ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪುರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದು, ಪುನಃ ನೇಮಿಸಿಕೊಳ್ಳಬೇಕು ಎಂದು ಗುತ್ತಿಗೆ ಕಾರ್ಮಿಕರು ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಗುತ್ತಿಗೆದಾರ ಪೌರಕಾರ್ಮಿಕರ ಪಾಲಕರಾದ ಕಮಲವ್ವ ನಂದೆಣ್ಣವರ ಹಾಗೂ ಯಲ್ಲಕ್ಕ ಗಡದವರ ಮಾತನಾಡಿ, ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ. ಮಾರ್ಚ್ನಿಂದ ಕಾರ್ಯ ನಿರ್ವಹಿಸುತ್ತಿದ್ದು, ಗುತ್ತಿಗೆದಾರ 2 ತಿಂಗಳ ಗೌರವಧನ ಕೊಟ್ಟು ಇನ್ನು ಎರಡು ತಿಂಗಳು ಗೌರವಧನ ಕೊಟ್ಟಿಲ್ಲ. 10 ಜನರಲ್ಲಿ 6 ಜನರನ್ನು ಪುನಃ ತೆಗೆದುಕೊಂಡಿದ್ದಾರೆ. ನಾಲ್ಕು ಜನರನ್ನು ಕೆಲಸದಿಂದ ತೆಗೆದುಹಾಕಿದ್ದು, ಹೋರಾಟ ಮಾಡಿದವರನ್ನು ಬಿಟ್ಟು ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೆ, ನಾಲ್ಕು ಜನರನ್ನು ಪುನಃ ಕೆಲಸಕ್ಕೆ ತೆಗೆದುಕೊಂಡರೆ ಮಾತ್ರ ಉಳಿದವರು ಕೆಲಸಕ್ಕೆ ಹಾಜರಾಗುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರೊಂದಿಗೆ ಮಾತನಾಡಿ, ಅವರಿಗೆ ತಿಳಿಹೇಳಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಸಂದರ್ಭದಲ್ಲಿ ನೀಲಪ್ಪ ಶಿರಹಟ್ಟಿ, ಕಲ್ಯಾಣಕುಮಾರ ಹಾದಿಮನಿ, ದುರ್ಗವ್ವ ಶಿರಹಟ್ಟಿ, ಮಲ್ಲವ್ವ ನಂದೆಣ್ಣವರ, ಹನುಮವ್ವ ಗಡದವರ, ದ್ಯಾಮಕ್ಕ ನಂದೆಣ್ಣವರ, ಕರಿಯವ್ವ ದೊಡ್ಡಮನಿ, ಪ್ರೇಮವ್ವ ಹಾದಿಮನಿ ಮತ್ತಿತರರು ಇದ್ದರು.

ಆತ್ಮ ನಿರ್ಭರ ಭಾರತ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ದಂಡಿನರವರ ಕಾನೂನು ಮಹಾವಿದ್ಯಾಲಯದಲ್ಲಿ ಆತ್ಮ ನಿರ್ಭರ ಭಾರತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸಿಂಗೌಡರ್, ರಾಜು ಕುರಡಗಿ, ರವಿ ದಂಡಿನ, ವಿಜಯಲಕ್ಷ್ಮಿ ಮಾನ್ವಿ, ನಿರ್ಮಲಾ ಕೊಳ್ಳಿ, ಕವಿತಾ ಬಂಗಾರಿ, ಸ್ವಾತಿ ಅಕ್ಕಿ, ಪದ್ಮಿನಿ ಮುತ್ತಲದಿನ್ನಿ, ವಂದನಾ ವರ್ನೆಕರ್, ಅಶ್ವಿನಿ ಜಗತಾಪ್, ಶಾರದಾ ಸಜ್ಜನ್, ಶ್ವೇತಾ ದಂಡಿನ, ಅಕ್ಕಮ್ಮ ವಸ್ತ್ರದ, ಸುಮಂಗಲ ಕೊನೆಹೂಲ, ಶಿವಲೀಲಾ ಉಮಚಗಿ, ಕಮಲಾಕ್ಷಿ ತೆಕ್ಕಲ್ಕೋಟೆ, ಕಸ್ತೂರಿ ಕಮ್ಮಾರ್, ಪ್ರೀತಿ ಶಿವಪ್ಪನಮಠ, ರೇಖಾ ಗವಳಿ, ನಾಗರಾಜ ಕುಲಕರ್ಣಿ, ರಮೇಶ್ ಸಜ್ಜಗಾರ್, ಮಂಜುನಾಥ ಶಾಂತಗಿರಿ ಮುಂತಾದವರು ಉಪಸ್ಥಿತರಿದ್ದರು.

ಕ್ರಿಕೆಟ್​ಗೆ ವಿದಾಯ ಹೇಳಿದ ಕರ್ನಾಟಕದ ಸ್ಟಾರ್ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್!

0

2025ರ ವರ್ಷ ಅಂತ್ಯವಾಗುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಕ್ರಿಕೆಟ್‌ಗೆ ದೊಡ್ಡ ಆಘಾತ ಎದುರಾಗಿದೆ.

ರಾಜ್ಯದ ಖ್ಯಾತ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ (37) ಅವರು ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, 14 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಆಫ್‌ಸ್ಪಿನ್ನರ್ ಹಾಗೂ ಕೆಳಕ್ರಮಾಂಕದ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಗೌತಮ್ 2012ರಲ್ಲಿ ರಣಜಿ ಟ್ರೋಫಿಯಿಂದ ತಮ್ಮ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದರು. 2016-17ರ ರಣಜಿ ಟ್ರೋಫಿಯಲ್ಲಿ 27 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದ ಅವರು, ಅದೇ ಆವೃತ್ತಿಯಲ್ಲಿ ಅಸ್ಸಾಂ ವಿರುದ್ಧ ಚೊಚ್ಚಲ ಶತಕವೂ ಸಿಡಿಸಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ 320ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ ಗೌತಮ್ 2021ರ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಪರ ಏಕೈಕ ಏಕದಿನ ಪಂದ್ಯವನ್ನಾಡಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ಅವರು, ಐಪಿಎಲ್ 2021 ಹರಾಜಿನಲ್ಲಿ 9.25 ಕೋಟಿ ರೂ.ಗೆ ಮಾರಾಟವಾಗಿದ್ದ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರರಾಗಿದ್ದರು.

ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಪಂದ್ಯದಲ್ಲಿ 134 ರನ್ ಹಾಗೂ 8 ವಿಕೆಟ್‌ಗಳ ಅಪರೂಪದ ಸಾಧನೆಗೂ ಗೌತಮ್ ಹೆಸರುವಾಸಿಯಾಗಿದ್ದಾರೆ.

ಗಣಿತ ಕಬ್ಬಿಣದ ಕಡಲೆಯಲ್ಲ: ಆರ್.ಜಿ. ಭಾವನವರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಲ್ಲಿನ ಸ್ಕೂಲ್ ಚಂದನದಲ್ಲಿ ಸೋಮವಾರ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಆರ್.ಜಿ. ಭಾವನವರ, ಗಣಿತ ಸಿದ್ಧಾಂತಗಳು, ವಿಶ್ಲೇಷಣೆಗಳನ್ನು ಅರಿಯುವುದು ಸುಲಭ. ಅದರ ಜೊತೆಗೆ ದೈನಂದಿನ ಜೀವನಕ್ಕೆ ಗಣಿತದ ಮೂಲ ಕ್ರಿಯೆಗಳು ಆಧಾರವಾಗಿದೆ. ಗಣಿತದ ಆಳ-ಅಗಲಗಳನ್ನು ಅಳೆದು ತೂಗುವುದಕ್ಕೆ ಗಣಿತ ಶಾಸ್ತ್ರಜ್ಞರಿಂದ ಮಾತ್ರ ಸಾಧ್ಯ. ಗಣಿತ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದ್ದು, ಸೊನ್ನೆಯನ್ನು ಕಂಡುಹಿಡಿದ ಭಾರತೀಯರಿಂದಾಗಿ ಸಂಖ್ಯಾಶಾಸ್ತ್ರ ಇಷ್ಟು ವಿಸ್ತಾರವಾಗಿ ಬೆಳೆಯಲು ಮತ್ತು ಅದರ ಆಳಕ್ಕೆ ಇಳಿಯಲು ಸಾಧ್ಯವಾಗುತ್ತಿದೆ. ಗಣಿತ ಕಬ್ಬಿಣದ ಕಡಲೆಯಲ್ಲ, ಹೆಚ್ಚು ಸುಲಭವಾದ ವಿಷಯವಾಗಿದ್ದು, ಮಕ್ಕಳು ಆಸಕ್ತಿಯಿಂದ ಕಲಿಯಬಹುದಾಗಿದೆ ಎಂದು ಹೇಳಿದರು.

ಗಣಿತ ಶಿಕ್ಷಕಿಯರಾದ ಸಿಮರಿನ್ ಹಾಗೂ ಹೊನ್ನಮ್ಮ ಅವರು ಗಣಿತ ವಿಷಯವನ್ನು ಮನದಟ್ಟು ಮಾಡುವುದರೊಂದಿಗೆ ರಾಷ್ಟ್ರೀಯ ಗಣಿತ ದಿನದ ಮಹತ್ವ ಮತ್ತು ಆಚರಣೆಯ ವಿಶೇಷತೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಜರಿದ್ದರು.

ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆಗಳು ಪೂರಕ: ಅಶೋಕುಮಾರ ಬಾಗಮಾರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯದ ಜೊತೆಗೆ ಹೆಚ್ಚು ಕ್ರಿಯಾಶೀಲರಾಗಿರಲು ಅನುಕೂಲವಾಗುತ್ತದೆ ಎಂದು ಬಾಗಮಾರ ಸೇವಾ ಸಮಿತಿಯ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಅಧ್ಯಕ್ಷ ಅಶೋಕುಮಾರ ಬಾಗಮಾರ ಹೇಳಿದರು.

ಪಟ್ಟಣದ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಬೃಂದಾವನ ಎಂಟರ್‌ಪ್ರೈಸಸ್ ಹಾಗೂ ಗಜೇಂದ್ರಗಡ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ವೈಟ್ ಲೆದರ್ ಬಾಲ್ ಮುಕ್ತ ಪ್ರೀಮಿಯಂ ಕ್ರಿಕೆಟ್ ಲೀಗ್ ಉದ್ಘಾಟಿಸಿ ಮಾತನಾಡಿದರು.

ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೊರತಾಗಿ, ದುಶ್ಚಟಗಳಿಗೆ ಬಲಿಯಾಗಿ ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕ್ರೀಡೆಗಳಲ್ಲಿಯೇ ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲಾ ವಯೋಮಾನದವರೂ ಕ್ರಿಕೆಟ್ ಆಡುತ್ತಾರೆ. ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕೇ ಹೊರತು ಸಂಘರ್ಷದ ಮನೋಭಾವ ಇರಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಚ್. ಸೋಂಪುರ, ಶಿವು ಜಾಲಿಹಾಳ, ಖಾಜಾಹುಸೇನ್ ಸರಕಾವಸ್, ರಾಚಯ್ಯ ಕಪ್ಲಿಮಠ, ಸಂಗಯ್ಯ ಹಿರೇಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಕ್ರೀಡಾ ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಿಗೆ ಶುಭ ಹಾರೈಸಿ, ಕ್ರೀಡೆಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕೆಂದು ಕರೆ ನೀಡಲಾಯಿತು.

ರೇಲ್ವೇ ಕೆಳ ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಸಂಸದರಿಗೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಬ್ದುಲ್ ಕಲಾಂ ಶಾದಿ ಮಹಲ್ ಹತ್ತಿರದ ರೇಲ್ವೇ ಕೆಳ ಸೇತುವೆಯ ರಸ್ತೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಗದಗ-ಬೆಟಗೇರಿಯ ಸಾರ್ವಜನಿಕರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ರಸ್ತೆ ಸಂಚಾರದಿಂದ ತೊಂದರೆಗೆ ಒಳಗಾದ ಅವಳಿ ನಗರದ ಸಾರ್ವಜನಿಕರು ರವಿವಾರ ನಗರಕ್ಕೆ ಆಗಮಿಸಿದ್ದ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮಗಾದ ಸಮಸ್ಯೆಯನ್ನು ನಿವೇದಿಸಿಕೊಂಡರು.

ಗದಗ-ಬೆಟಗೇರಿ ಅವಳಿ ನಗರಕ್ಕೆ ಮೂರು ರೇಲ್ವೇ ಕೆಳಸೇತುವೆ ಇದ್ದು, ಮೂರೂ ಕೆಳಸೇತುವೆಗಳು ವಾಟರ್ ಬೇಸ್ ಸೇತುವೆಗಳಾಗಿವೆ. ಜನಸಂಖ್ಯೆ ಬೆಳೆಯುತ್ತಾ ಹೋದಂತೆ ಹಳೇ ಕೋರ್ಟ್ ಹಾಗೂ ಬಳ್ಳಾರಿ ಗೇಟ್ ಬಳಿಯ ಕೆಳಸೇತುವೆಗೆ ಡಾಂಬರ್ ರಸ್ತೆ ಮಾಡಿ ಸಂಚಾರಕ್ಕೆ ಅನುಕೂಲ ಒದಗಿಸಲಾಗಿದೆ.

ಅಬ್ದುಲ್ ಕಲಾಂ ಶಾದಿ ಮಹಲ್ ಹತ್ತಿರದ ಡಬಲ್ ಅಂಡರ್ ಪಾಸ್ ಸೇತುವೆ ಇದ್ದು, ಒಂದರಲ್ಲಿ ನೀರು ಇನ್ನೊಂದರಲ್ಲಿ ಸುಮಾರು 50 ವರ್ಷಗಳಿಂದ ಜನಸಂಚಾರ ಮಾಡುತ್ತ ಬಂದಿದ್ದಾರೆ. ಆದರೆ ಈಗ ಅದನ್ನು ತಿಂಗಳ ಹಿಂದೆ ರಾತ್ರೋರಾತ್ರಿ ಹಳಿ ಹಾಕಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.

ಈ ಕೆಳ ಸೇತುವೆಯಿಂದ 300 ಮೀಟರ್ ಅಂತರದಲ್ಲಿ 50 ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆಯಿದ್ದು, ಈ ಆಸ್ಪತ್ರೆಗೆ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಚಕ್ಕಡಿಗಳೊಂದಿಗೆ ರೈತರು ತಮ್ಮ ಜಮೀನುಗಳಿಗೆ ಹೋಗಲು, ಕೂಲಿಕಾರ್ಮಿಕರಿಗೆ ಸಂಚರಿಸಲು ಇದೇ ಮಾರ್ಗವನ್ನು ಬಹು ವರ್ಷಗಳಿಂದ ಅವಲಂಬಿಸಿದ್ದಾರೆ.

ಆಸ್ಪತ್ರೆಗೆ ಹೋಗುವ ಅಂಬ್ಯುಲೆನ್ಸ್, ಸ್ಕೂಲ್ ಬಸ್ ಹಾಗೂ ಲಘು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಪತ್ರದಲ್ಲಿ ವಿನಂತಿಸಿಕೊಟ್ಟರು.

ಈ ಸಂದರ್ಭದಲ್ಲಿ ಬಸವನಗುಡಿ ಬಡಾವಣೆಯ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಕಾರ್ಯದರ್ಶಿ ಹರೀಶ್ ಪೂಜಾರ, ಎಸ್.ಎನ್. ಟಕ್ಕೇದ, ವ್ಹಿ.ಎ. ಸೋನಾರ, ಶ್ರೀಧರ ಹಾಳಕೇರಿ, ಶಿವು ಹಿರೇಮನಿಪಾಟೀಲ, ಸತೀಶ್ ಪೂಜಾರ, ಬಸವರಾಜ ಚನ್ನಪ್ಪಗೌಡರ, ಫಕ್ಕೀರಪ್ಪ ನಾಲ್ವಾಡ, ಶೇಖಪ್ಪ ಹಡಪದ, ಬಸವರಾಜ ಜಲ್ಲಿ, ಸಿದ್ಧರಾಮಯ್ಯ ಮಾಕಾಪೂರ, ಶಿವಾನಂದ ಪತ್ತಾರ, ಹನಮಪ್ಪ ಹದ್ಲಿ, ಮಹಾದೇವಪ್ಪ ಚಿಕ್ಕಣ್ಣವರ, ವ್ಹಿ.ವ್ಹಿ. ಮಠದ, ಗೂಳಪ್ಪ ರೊಟ್ಟಿ, ಪ್ರಭುಗೌಡ ಬೂದೇಶ, ತೋಂಟದಾರ್ಯ ಬೂಸ್ತ, ಬೆಟಗೇರಿ ರೈತ ಸಂಘದ ಅಧ್ಯಕ್ಷ ಅಜ್ಜನಗೌಡ ಹಿರೇಮನಿಪಾಟೀಲ, ರಾಘವೇಂದ್ರ ಯಳವತ್ತಿ, ಮಹೇಶ ಕೋಟಿ ಮುಂತಾದವರಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಈ ಕುರಿತು ರೇಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

ಚಿತ್ರಕಲಾ ಶಿಕ್ಷಕರು ಇಲಾಖೆಯ ಆಸ್ತಿ: ಆರ್.ಎಸ್. ಬುರಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಯಲ್ಲಿ ಮಕ್ಕಳ ಕಲಿಕೆ ಮತ್ತು ಶಾಲಾ ವಾತಾವರಣವನ್ನು ನಿರ್ಮಿಸುವಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚಿತ್ರಕಲಾ ಶಿಕ್ಷಕರು ಇಲಾಖೆಯ ಆಸ್ತಿ ಎಂದು ಶಾಲಾ ಶಿಕ್ಷಣ ಇಲಾಖೆ (ಆಡಳಿತ)ಯ ಉಪನಿರ್ದೇಶಕ ಆರ್.ಎಸ್. ಬುರಡಿ ಅಭಿಪ್ರಾಯಪಟ್ಟರು.

2025-26ನೇ ಸಾಲಿನ ಜಿಲ್ಲಾಮಟ್ಟದ ಸಹಪಠ್ಯ ಚಟುವಟಿಕೆಯ ಸ್ಪರ್ಧೆಯ ಬಹುಮಾನವನ್ನು ವಿತರಿಸಿ ಮಾತನಾಡಿದ ಅವರು, ಚಿತ್ರಕಲೆಯಿಂದ ಸೃಜನಶೀಲತೆ, ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬಹುದು. ಚಿತ್ರಕಲೆ ಐತಿಹಾಸಿಕ ಮಹತ್ವ ಮತ್ತು ದಾಖಲೆಯನ್ನು ಸಾರುತ್ತದೆ. ಕಲಾವಿದ ಮಾನವ ಕುಲದ ಶಾಸನಕಾರ ಎಂದರು.

ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, ಇಲಾಖೆಯ ಸಹಪಠ್ಯ ಚಟುವಟಿಕೆಯ ಕಾರ್ಯಕ್ರಮಗಳು ಶಿಕ್ಷಕರ ಆತ್ಮವಿಶ್ವಾಸ ಹೆಚ್ಚಿಸಿ ಅವರ ಆಂತರ್ಯದಲ್ಲಿನ ಕಲೆಯನ್ನು ಹೊರತರುವಲ್ಲಿ ಸಹಕಾರಿಯಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚು ಸುಧಾರಿಸಲು ಸಾಧ್ಯವಾಗಿಸುತ್ತದೆ ಎಂದರು.

ವೃತ್ತಿ ಶಿಕ್ಷಣ ವಿಷಯ ವೀಕ್ಷಕರಾದ ಗೀತಾ ಕುಲಕರ್ಣಿ ಮಾತನಾಡಿ, ಸಹಪಠ್ಯ ಚಟುವಟಿಕೆ, ಸ್ಪರ್ಧೆಯಿಂದ ಶಿಕ್ಷಕರಲ್ಲಿ ಹೊಸದೊಂದು ಅನುಭವ ಹಾಗೂ ವಿಶೇಷತೆಯನ್ನು ಅಳವಡಿಸಿಕೊಳ್ಳುವಲ್ಲಿ ಸಹಾಯಕವಾಗಿದೆ ಎಂದರು.

ಚಿತ್ರಕಲೆ ಸ್ಪರ್ಧೆಯಲ್ಲಿ ಕಾಳಪ್ಪ ಬಡಿಗೇರ ಪ್ರಥಮ, ಪ್ರವೀಣ ಮನೋಹರ್ ಗಾಯಕರ ದ್ವಿತೀಯ, ನಾಗರಾಜ ಚಿತ್ರಗಾರ ಮತ್ತು ಜೆ.ಕೆ. ಭಾಗವಾನರ್ ತೃತೀಯ ಸ್ಥಾನ, ಟಿ.ಆರ್. ಬೇವಿನಮರದ ಮತ್ತು ಮಲ್ಲಿಕಾರ್ಜುನ ಮುಂಡರಗಿ ಸಮಾಧಾನಕರ ಬಹುಮಾನ ಪಡೆದರು.

ಬಿ.ಎಲ್. ಚವ್ಹಾಣ, ಬಸವರಾಜ ನೆಲಜೇರಿ, ಬಸವರಾಜ ಕುತ್ನಿ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು. ಶರಣಯ್ಯ ವಸ್ತ್ರದ ನಿರೂಪಿಸಿ ವಂದಿಸಿದರು.

ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ: ಪ್ರಭುಲಿಂಗ ದೇವರು

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಬ್ಬ ವಿದ್ಯಾರ್ಥಿಯ ಸುಂದರ ಬದುಕು ನಿರ್ಮಿಸುವಾತ ಗುರು. ವಿದ್ಯಾರ್ಥಿ ಜೀವನಕ್ಕೆ ರೂಪ ಕೊಟ್ಟ ಗುರುವನ್ನು ಎಂದೂ ಮರೆಯದಿರಿ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.

ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಂದು ಕಾರ್ಯಕ್ಕೂ ಗುರು ಬೇಕು. ಅದರಂತೆ ವಿದ್ಯಾರ್ಥಿ ಜೀವನಕ್ಕೆ ಗುರು ತುಂಬಾ ಅವಶ್ಯವಾಗಿದ್ದು, ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಸನ್ಮಾರ್ಗ ಪ್ರಾಪ್ತಿಯಾಗುವುದರ ಜೊತೆಯಲ್ಲಿ ಸಮಾಜವೂ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾಗ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ವಿದ್ಯಾರ್ಥಿ ಮಹೇಶ ಶಿರಹಟ್ಟಿ ಮಾತನಾಡಿ, 23 ವರ್ಷಗಳ ಹಿಂದೆ ನಾವು ಒಂದು ಮಣ್ಣಿನ ಮುದ್ದೆಯಂತಿದ್ದೆವು. ನಮಗೆ ರೂಪ ಕೊಟ್ಟು ಮೂರ್ತಿಯನ್ನಾಗಿ ರೂಪಿಸಿದವರು ಗುರುಗಳು. ಅವರ ಋಣವನ್ನು ಎಂದಿಗೂ ತೀರಿಸಲಾಗದು ಎಂದರು.

ಕಲಿಸಿದ ಗುರುಗಳನ್ನು ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾ ಭವನದವರೆಗೂ ವಿಶೇಷವಾಗಿ ಹೂವಿನ ಸುರಿಮಳೆಯೊಂದಿಗೆ ಗೌರವದಿಂದ ಬರಮಾಡಿಕೊಂಡರು. ಕಲಿಸಿದ ಗುರುಗಳನ್ನು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯವನ್ನು ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎಂ.ಡಿ. ಬಟ್ಟೂರ ವಹಿಸಿದ್ದರು. ಶಿಕ್ಷಣ ಪ್ರೇಮಿಗಳಾದ ಗೌರಮ್ಮ ಬಡ್ನಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಎಸ್.ಸಿ. ಚವಡಿ, ಬಿ.ಸಿ. ಬಡ್ನಿ, ಎಂ.ಎಂ. ಅದರಗುಂಚಿ, ಎಫ್.ಎಸ್. ಅಮೋಘಿಮಠ, ಎಸ್.ಸಿ. ಕುರ್ತಕೋಟಿ, ವಿಜಯ ನೀಲಗುಂದ, ಕಾಲೇಜಿನ ಪ್ರಾಚಾರ್ಯ ಎ.ಎಂ. ಅಂಗಡಿ, ಮುಖ್ಯೋಪಾಧ್ಯಾಯ ಇ.ಎಂ. ಗುಳೇದಗುಡ್ಡ, ಬಿ.ಜಿ. ಯಳವತ್ತಿ, ವಾಯ್.ಎಚ್. ಚಲವಾದಿ, ಚಂದ್ರಶೇಖರ ಎಸ್, ಎಸ್.ಎಫ್. ಮುದ್ದಿನಗೌಡ್ರ, ಆರ್.ಆರ್. ಪಟ್ಟಣ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಇದ್ದರು.

ಅಧ್ಯಕ್ಷತೆ ವಹಿಸಿದ್ದ ಎಂ.ಡಿ. ಬಟ್ಟೂರ ಮಾತನಾಡಿ, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಹಾದಿಯಲ್ಲಿ ಸಾಗಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಗುರುವಿನ ಮಾರ್ಗದರ್ಶನ ಬೇಕು. ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಲು ಗುರುವಿನ ಅನುಗ್ರಹ ಇರಬೇಕು ಎಂದರು.

ಶ್ರವಣ ಯಂತ್ರ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ 2025-26ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಗದೀಶ ಭಟ್ ಜೋಶಿ ಇವರಿಗೆ ಶ್ರವಣ ಸಾಧನ ಯಂತ್ರವನ್ನು ವಿತರಿಸಿದರು.

ನಂತರ ಮಾತನಾಡಿದ ಎಸ್.ವಿ. ಸಂಕನೂರ, ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಸೌಲಭ್ಯ ಹಾಗೂ ಯೋಜನೆಗಳನ್ನು ನೀಡುತ್ತಿದೆ. ಅವುಗಳನ್ನು ಅರ್ಹರು ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಲು ಮುಂದಾಗಬೇಕು. ಇಲಾಖಾಧಿಕಾರಿಗಳು ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹರಿಗೆ ಯೋಜನೆಗಳ ಲಾಭ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮಹಾಂತೇಶ್ ಕೆ ಮುಂತಾದವರು ಹಾಜರಿದ್ದರು.

error: Content is protected !!